7

ಡಿಜಿಟಲ್ ಯುಗದ ಮಾಧ್ಯಮ ಧರ್ಮ

ಎನ್.ಎ.ಎಂ. ಇಸ್ಮಾಯಿಲ್
Published:
Updated:

ಇಂಟೆಲ್ ಮತ್ತು ಫೇರ್‌ಚೈಲ್ಡ್ ಸೆಮಿಕಂಡಕ್ಟರ್ ಎಂಬ ಎರಡು ಕಂಪೆನಿಗಳ ಸಹ ಸಂಸ್ಥಾಪಕ ಗೋರ್ಡನ್ ಇ. ಮೂರ್ 1965ರಲ್ಲಿ ಪ್ರಕಟಿಸಿದ ವಿದ್ವತ್ ಪ್ರಬಂಧದಲ್ಲಿ ಮಂಡಿಸಿದ ಸಿದ್ಧಾಂತವನ್ನು ‘ಮೂರ್‍ಸ್ ಲಾ’ ಅಥವಾ ಮೂರ್‌ನ ಸಿದ್ಧಾಂತ ಎಂದು ಕರೆಯುತ್ತಾರೆ. ಇದರ ಪ್ರಕಾರ ಪ್ರತೀ ಎರಡು ವರ್ಷಗಳಿಗೊಮ್ಮೆ ಐ.ಸಿ. ಎಂದು ಗುರುತಿಸಲಾಗುವ ಇಂಟೆಗ್ರಿಟೆಡ್ ಸರ್ಕ್ಯೂಟ್‌ನಲ್ಲಿರುವ ಟ್ರಾನ್ಸ್‌ಸಿಸ್ಟರ್‌ಗಳ ಪ್ರಮಾಣ ದ್ವಿಗುಣಗೊಳ್ಳುತ್ತದೆ. ಅಂದರೆ ಕಂಪ್ಯೂಟರ್ ಅಥವಾ ಅದೇ ವಂಶಕ್ಕೆ ಸೇರಿರುವ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಇತ್ಯಾದಿಗಳಲ್ಲಿ ಬಳಸಲಾಗುವ ಪ್ರೊಸೆಸರ್‌ಗಳ ಶಕ್ತಿ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಕಳೆದ ಐವತ್ತು ವರ್ಷಗಳಲ್ಲಿ ಈ ಸಿದ್ಧಾಂತದಂತೆಯೇ ಕಂಪ್ಯೂಟರ್‌ಗಳು ಮತ್ತು ಒಟ್ಟಾರೆ ಸೆಮಿಕಂಡಕ್ಟರ್ ಉದ್ಯಮ ಬೆಳೆಯುತ್ತಾ ಹೋಗಿದೆ.ಇದೇ ತತ್ವವನ್ನು ‘ಮಾಹಿತಿ ಸೋರಿಕೆ’ಯ ವಿಚಾರಕ್ಕೂ ಅನ್ವಯಿಸಿ ಅರ್ಥ ಮಾಡಿಕೊಳ್ಳಬಹುದು ಅನ್ನಿಸುತ್ತದೆ. ಡ್ಯಾನಿಯಲ್ ಎಲ್ಸ್‌ಬರ್ಗ್ ವಿಯಟ್ನಾಂ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಪ್ರಭುತ್ವ ಕೈಗೊಂಡ ನಿರ್ಧಾರಗಳ ಕುರಿತ 7000 ಪುಟಗಳ ದಾಖಲೆಯನ್ನು ಪತ್ರಿಕೆಗಳಿಗೆ ಕೊಟ್ಟಾಗ ಅದೊಂದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು. ವಿಯಟ್ನಾಂ ಯುದ್ಧಕ್ಕೆ ಸಂಬಂಧಿಸಿದಂತೆ ಪೆಂಟಗಾನ್ ನಡೆಸಿದ ಅಧ್ಯಯನ ವರದಿ ಸೋರಿಕೆಯಾಗಿ ಪತ್ರಿಕೆಗಳಲ್ಲಿ ವರದಿಯಾದಾಗ ‘ಪೆಂಟಗಾನ್ ಪೇಪರ್ಸ್’ ಎಂಬ ಹೆಸರು ಪಡೆದಿತ್ತು. ಈ 7000 ಪುಟಗಳನ್ನು ಇಂದಿನ ಎಲೆಕ್ಟ್ರಾನಿಕ್ ದಾಖಲೆಗಳ ಗಾತ್ರದಲ್ಲಿ ಲೆಕ್ಕ ಹಾಕಿದರೆ ಕೆಲವು ಮೆಗಾಬೈಟ್‌ಗಳಷ್ಟಾಗಬಹುದು. ಇದಾದ 39 ವರ್ಷಗಳ ಬಳಿಕ ವಿಕಿಲೀಕ್ಸ್ ಬಿಡುಗಡೆ ಮಾಡಿದ ಕೇಬಲ್‌ ಗೇಟ್‌ನಲ್ಲಿದ್ದ ದಾಖಲೆಗಳ ಪ್ರಮಾಣ  1.73 ಗಿಗಾಬೈಟ್‌ಗಳು. ಪೆಂಟಗಾನ್ ಪೇಪರ್ಸ್‌ನ ಪ್ರಮಾಣದ ನೂರಾರು ಪಟ್ಟು ದೊಡ್ಡ ದಾಖಲೆ ಇದು. ಈಗ ಸುದ್ದಿ ಮಾಡುತ್ತಿರುವ ‘ಪನಾಮ ಪೇಪರ್ಸ್‌’ನ ಪ್ರಮಾಣವನ್ನು ಈ ಹಿಂದೆ ಸಂಭವಿಸಿದ ಯಾವುದೇ ‘ಸೋರಿಕೆ’ಗಳಿಗೆ ಹೋಲಿಸಲು ಸಾಧ್ಯವಿಲ್ಲ. ಈ ದಾಖಲೆಗಳ ಪ್ರಮಾಣ 2.6 ಟೆರಾ ಬೈಟ್‌ಗಳಷ್ಟಿದೆ.ಟೆರಾಬೈಟ್ ಎಂದರೆ ನಮಗೆ ತಕ್ಷಣಕ್ಕೆ ನೆನಪಾಗುವುದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಂಗೈ ಅಗಲದ ಹಾರ್ಡ್‌ಡಿಸ್ಕ್‌ಗಳು. ಪನಾಮ ಪೇಪರ್ಸ್‌ನ ಅಷ್ಟೂ ದಾಖಲೆಗಳನ್ನು ಇಂಥದ್ದೊಂದು ಹಾರ್ಡ್ ಡಿಸ್ಕ್‌ನಲ್ಲಿ ತುಂಬಿಸಿಬಿಡಬಹುದು. ಇದರ ನಿಜವಾದ ಗಾತ್ರವೆಷ್ಟೆಂದು ಅರ್ಥವಾಗಬೇಕಾದರೆ ಈ ದಾಖಲೆಗಳನ್ನು ಮುದ್ರಿಸುವುದಕ್ಕೆ ಹೊರಡಬೇಕು. ಒಂದು ಪುಟಕ್ಕೆ ಸುಮಾರು 2000 ಅಕ್ಷರಗಳಂತೆ ಮುದ್ರಿಸ ಹೊರಟರೆ ‘ಪನಾಮ ಪೇಪರ್ಸ್’ಗಳ ಪ್ರಮಾಣ 65 ಕೋಟಿ ಪುಟಗಳಷ್ಟಾಗುತ್ತದೆ. ಡ್ಯಾನಿಯಲ್ ಎಲ್ಸ್‌ಬರ್ಗ್ ‘ಪೆಂಟಗಾನ್ ಪೇಪರ್‌’ಗಳನ್ನು ಫೋಟೋಕಾಪಿ ಮಾಡಿದಂತೆ ಇವುಗಳನ್ನು ಮುದ್ರಿಸಲು ಹೊರಟರೆ ಅದನ್ನು ಮುಗಿಸುವುದಕ್ಕೆ ಸಾಮಾನ್ಯ ಲೇಸರ್ ಪ್ರಿಂಟರ್‌ಗೆ 41 ವರ್ಷಗಳೇ ಬೇಕಾಗುತ್ತದೆ. ಅದೂ ಪ್ರಿಂಟರ್ ದಿನದ 24 ಗಂಟೆಯೂ ಒಂದು ಕ್ಷಣವೂ ಬಿಡುವಿಲ್ಲದೆ ಕೆಲಸ ಮಾಡಿರಷ್ಟೇ ಸಾಧ್ಯ. ಈ ಪುಟಗಳನ್ನು ಒಂದರ ಮೇಲೊಂದರಂತೆ ಪೇರಿಸುತ್ತಾ ಹೋದರೆ ಅದರ ಎತ್ತರ 66 ಕಿಲೋಮೀಟರ್‌ಗಳಾಗುತ್ತದೆ.

ಭಾರತದಲ್ಲಿ ಸಾಮಾನ್ಯವಾಗಿ ದೊರೆಯುವ ಬ್ರಾಡ್‌ಬ್ಯಾಂಡ್ ವೇಗ ಸರಾಸರಿ ಒಂದು ಸೆಕೆಂಡ್‌ಗೆ ಒಂದು ಮೆಗಾಬೈಟ್‌ನಷ್ಟಿರುತ್ತದೆ. ಈ ವೇಗದಲ್ಲಿ ಈ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ 242 ದಿನಗಳು ಬೇಕಾಗುತ್ತವೆ. ದಿನದ 24 ಗಂಟೆಯೂ ಇಂಟರ್ನೆಟ್ ಸರಿಯಾಗಿದ್ದರೆ!ಪೆಂಟಗಾನ್ ಪೇಪರ್ಸ್‌ನಿಂದ ಪನಾಮ ಪೇಪರ್ಸ್‌ ತನಕದ ಇತಿಹಾಸವೂ ಒಂದು ರೀತಿಯಲ್ಲಿ ‘ಮೂರ್‌ನ ತತ್ವ’ವನ್ನೇ ಹೇಳುತ್ತಿವೆ. ಕೆಲವೇ ಸಾವಿರ ಪುಟಗಳಷ್ಟಿದ್ದ ಸೋರಿಕೆಯ ಪ್ರಮಾಣ ಈಗ ಕೋಟ್ಯಂತರ ಪುಟಗಳಿಗೆ ಏರಿದೆ. ಪೆಂಟಗಾನ್‌ ದಾಖಲೆಗಳನ್ನು ನ್ಯೂಯಾರ್ಕ್ ಟೈಮ್ಸ್‌ನ ಪತ್ರಕರ್ತರಿಗೆ ವಿಶ್ಲೇಷಿಸಲು ಸಾಧ್ಯವಾಗಿತ್ತು. ಆದರೆ ಪನಾಮ ದಾಖಲೆಗಳು ಮೊದಲು ದೊರೆತದ್ದು ಜರ್ಮನಿಯ ಸಿದ್‌ಡೊಯಿಶ್ ಝೈತುಂಗ್ (Süddeutsche Zeitung) ಎಂಬ ಪತ್ರಿಕೆಗೆ. ಈ ದಾಖಲೆಗಳಲ್ಲಿ ಒಳಗೊಂಡಿದ್ದ ಮಾಹಿತಿಯ ಸಂಕೀರ್ಣ ಸ್ವರೂಪ ಮತ್ತು ಅಗಾಧತೆಯನ್ನು ಪರಿಗಣಿಸಿ ಇವುಗಳ ವಿಶ್ಲೇಷಣೆಯ ಜವಾಬ್ದಾರಿಯನ್ನು ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟಕ್ಕೆ (ಐಸಿಐಜೆ) ಒಪ್ಪಿಸಿತು. ಪರಿಣಾಮವಾಗಿ 80 ದೇಶಗಳ 100 ಮಾಧ್ಯಮ ಸಂಸ್ಥೆಗಳ 400 ಮಂದಿ ಪತ್ರಕರ್ತರು ಇವುಗಳನ್ನು ವಿಶ್ಲೇಷಿಸಲು ಪ್ರಯತ್ನಿಸಿದರು. ಈ ವಿಶ್ಲೇಷಣೆಯಲ್ಲಿ ದೊರೆತ ಮಾಹಿತಿ ಬಹಳ ದೊಡ್ಡದೇನೂ ಅಲ್ಲ. ಪ್ರಖ್ಯಾತರ ಹಣಕಾಸು ವಹಿವಾಟುಗಳಷ್ಟೇ ಬಯಲಾಗಿವೆ. ಈ ದಾಖಲೆಗಳ ಸಂಪೂರ್ಣ ವಿಶ್ಲೇಷಣೆ ಇನ್ನೂ ಏನೇನನ್ನು ಹೊರತರಲಿದೆ ಎಂಬುದನ್ನು ಕಾದು ನೋಡಬೇಕಷ್ಟೇ.ಪೆಂಟಗಾನ್ ಪೇಪರ್ಸ್‌ ಬಯಲಾದದ್ದು ಯಾರ ಮೂಲಕ ಎಂಬುದು ಎಲ್ಲರಿಗೂ ಗೊತ್ತಿತ್ತು. ವಿಕೀಲೀಕ್ಸ್‌ನ ವಿಚಾರಕ್ಕೆ ಬಂದರೆ ಜ್ಯೂಲಿಯನ್ ಅಸ್ಸಾಂಜ್ ನಮ್ಮ ಕಣ್ಣೆದುರಿಗಿರುವ ವ್ಯಕ್ತಿ. ಎಡ್ವರ್ಡ್ ಸ್ನೋಡೆನ್ ಕಥೆ ಕೂಡಾ ಹೀಗೆಯೇ ಇದೆ. ಆದರೆ ಪನಾಮ ಪೇಪರ್ಸ್‌ನ ವಿಚಾರದಲ್ಲಿ ಸದ್ಯಕ್ಕೆ ಗೊತ್ತಿರುವುದು ಜರ್ಮನ್ ಪತ್ರಿಕೆಯ ಹೆಸರು ಮಾತ್ರ. ಪನಾಮದಲ್ಲಿರುವ ಮೊಸ್ಸಾಕ್ ಫೊನ್ಸೆಕಾ ಎಂಬ ಕಾನೂನು ಸೇವೆಗಳನ್ನು ಒದಗಿಸುವ ಸಂಸ್ಥೆಯಿಂದ ಸೋರಿಕೆಯಾಗಿರುವ ‘ಪನಾಮ ಪೇಪರ್ಸ್’ ಹಿಂದೆ ಇರುವವರು ಯಾರು ಎಂಬುದು ಮುಂದೊಂದು ದಿನ ತಿಳಿಯಬಹುದು. ಅಥವಾ ತಿಳಿಯದೆಯೇ ಇರಬಹುದು. ಏಕೆಂದರೆ ಡಿಜಿಟಲ್ ಯುಗದ ಸೋರಿಕೆಗಳ ಸ್ವರೂಪವೇ ಅಂಥದ್ದು. ಎರಡು ಟೆರಾಬೈಟ್‌ಗಳಿಗೂ ಅಧಿಕವಿರುವ ದಾಖಲೆಗಳನ್ನು ಮೊಸ್ಸಾಕ್ ಫೊನ್ಸೆಕಾದಂಥ ಸಂಸ್ಥೆಯಿಂದ ಸೋರಿಕೆ ಮಾಡುವುದು ಸುಲಭದ ವಿಚಾರವೇನೂ ಅಲ್ಲ. ಈ ಸಂಸ್ಥೆಯ ಸೇವೆ ಪಡೆಯುವವರಲ್ಲಿ ಇರುವುದು ಕೇವಲ ಪ್ರಖ್ಯಾತ ಶ್ರೀಮಂತರಷ್ಟೇ ಅಲ್ಲ. ರಾಜಕಾರಣಿಗಳಿದ್ದಾರೆ. ಮಾಫಿಯಾ ದೊರೆಗಳೂ ಇದ್ದಾರೆ. ಇವರೆಲ್ಲರೂ ಈ ಸಂಸ್ಥೆಯನ್ನು ನಂಬಿದ್ದೇ ಅದರ ‘ರಹಸ್ಯ ಕಾಪಾಡುವ’ ಸಾಮರ್ಥ್ಯಕ್ಕೆ ಎಂಬುದನ್ನಿಲ್ಲಿ ಮರೆಯಲು ಸಾಧ್ಯವಿಲ್ಲ.ಡಿಜಿಟಲ್ ತಂತ್ರಜ್ಞಾನವನ್ನು ಮೊದಲು ಬಳಸಿಕೊಂಡದ್ದು ಪ್ರಭುತ್ವ. ಆರಂಭದ ಹಂತದಲ್ಲಿ ಇದು ಸೇನೆಗೆ ಸೀಮಿತವಾಗಿತ್ತು. ಈ ತಂತ್ರಜ್ಞಾನ ಸಾಮಾನ್ಯರ ಬಳಕೆಗೆ ಸಿಕ್ಕಾಗ ಇದರ ದೊಡ್ಡ ಲಾಭ ಪಡೆದದ್ದು ಮತ್ತು ಈಗಲೂ ಪಡೆಯುತ್ತಿರುವುದು ಉದ್ಯಮಗಳು. ಒಂದರ್ಥದಲ್ಲಿ 21ನೇ ಶತಮಾನದ ಕೈಗಾರಿಕಾ ಕ್ರಾಂತಿಗೆ ಅಥವಾ ಜ್ಞಾನಾಧಾರಿತ ಕೈಗಾರಿಕಾ ಕ್ರಾಂತಿಗೆ ಕಾರಣವಾದದ್ದೂ ಇದೇ ತಂತ್ರಜ್ಞಾನ. ಈ ನಡುವೆ ಮತ್ತೊಂದು ಬೆಳವಣಿಗೆಯೂ ಸಂಭವಿಸಿತು. ಈ ತಂತ್ರಜ್ಞಾನದ ಮೂಲಕ ಒದಗಿಬಂದ ಸಂವಹನ ಸಾಧ್ಯತೆಗಳು ಮಾಧ್ಯಮದ ಸ್ವರೂಪವನ್ನೇ ಬದಲಾಯಿಸಿತು. ಒಬ್ಬ ಸಾಮಾನ್ಯನೂ ಕೂಡಾ ಮಾಧ್ಯಮವಾಗಿಬಿಡುವ ಅದ್ಭುತ ಸಾಧ್ಯತೆಯೊಂದು ತೆರೆದುಕೊಂಡಿತು. ಆದರೆ ಅಷ್ಟೇ ಬೇಗ ಪ್ರಭುತ್ವ ಕೂಡಾ ಎಚ್ಚೆತ್ತುಕೊಂಡಿತು.

ಐಬಿಎಂನ ತಂತ್ರಜ್ಞಾನವನ್ನು ಬಳಸಿಕೊಂಡು ಹಿಟ್ಲರ್ ತನ್ನ ನರಮೇಧವನ್ನು ಯೋಜಿಸಿದಂತೆ 21ನೇ ಶತಮಾನದ ಪ್ರಭುತ್ವ ತನ್ನೆಲ್ಲ ಪ್ರಜೆಗಳ ಮಾಹಿತಿಯನ್ನೂ ತನ್ನ ಬೆರಳ ತುದಿಯಲ್ಲೇ ಇಟ್ಟುಕೊಳ್ಳುವ ಪ್ರಯತ್ನ ಆರಂಭಿಸಿತು. ಎಲ್ಲಾ ಪ್ರಜಾಸತ್ತಾತ್ಮಕ ವ್ಯವಸ್ಥೆಗಳೂ ಪಾರದರ್ಶಕತೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾ ಅದಕ್ಕೆ ಅಗತ್ಯವಿರುವ ಸಂಕೀರ್ಣ ಕಾನೂನುಗಳನ್ನು ರೂಪಿಸುತ್ತಲೇ ಜನಸಾಮಾನ್ಯರ ಸಕಲ ಮಾಹಿತಿಯನ್ನೂ ತಮ್ಮ ದತ್ತಸಂಚಯಗಳಲ್ಲಿ ಸಂಗ್ರಹಿಸಲಾರಂಭಿಸಿದವು. ಶ್ರೀಸಾಮಾನ್ಯನ ಬದುಕು ಸಂಪೂರ್ಣ ಪಾರದರ್ಶಕವಾಗುವ ಕ್ರಿಯೆಯಲ್ಲಿ ಪ್ರಭುತ್ವ ಹೆಚ್ಚು ಹೆಚ್ಚು ಅಪಾರದರ್ಶಕವಾಯಿತು.

ಈ ಪ್ರಕ್ರಿಯೆಯಲ್ಲಿ ಒಂದು ಸಮತೋಲನವನ್ನು ತಂದದ್ದೂ  ಡಿಜಿಟಲ್ ತಂತ್ರಜ್ಞಾನವೇ. 2010ರ ವಿಕಿಲೀಕ್ಸ್‌ನ 1.7 ಗಿಗಾಬೈಟ್ ದಾಖಲೆಗಳು ಅಮೆರಿಕದ ರಾಜತಂತ್ರದೊಳಗಿನ ಕುತಂತ್ರಗಳನ್ನು ಬಯಲು ಮಾಡಿತು. 2013ರಲ್ಲಿ ಐಸಿಐಜೆಯ ನೇತೃತ್ವದಲ್ಲಿ ಬಯಲಾದ 260 ಗಿಗಾಬೈಟ್‌ನಷ್ಟಿದ್ದ ಆಫ್‌ಶೋರ್ ಲೀಕ್‌ಗಳು ತೆರಿಗೆ ವಂಚನೆಯ ಹಗರಣಗಳನ್ನು ಹೊರ ತಂದಿತು. 2014ರ ಲಕ್ಸಂಬರ್ಗ್ ಲೀಕ್ ಕೂಡಾ ಉಳ್ಳವರ ತೆರಿಗೆ ವಂಚನೆಯ ಕಥೆಯನ್ನೇ ಬಿಚ್ಚಿಟ್ಟಿತು. 2015ರ ಸ್ವಿಸ್ ಲೀಕ್‌ನ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಇವೆಲ್ಲವುಗಳಿಂತ ಬಹುಪಾಲು ದೊಡ್ಡದಿರುವ ಪನಾಮ ದಾಖಲೆಗಳೂ ತೆರಿಗೆ ವಂಚನೆಯ ಕಥನದ ಬೃಹತ್ ಸ್ವರೂಪವನ್ನು ಬಯಲು ಮಾಡುತ್ತಿದೆ. ಇದರ ಅರ್ಥವಿಷ್ಟೇ. ಡಿಜಿಟಲ್ ಯುಗದಲ್ಲಿ ಎಲ್ಲವೂ ಯಾವತ್ತೂ ರಹಸ್ಯವಾಗಿ ಉಳಿಯಲು ಸಾಧ್ಯವಿಲ್ಲ. ಜನಸಾಮಾನ್ಯರ ಖರೀದಿಯ ಆಸಕ್ತಿಗಳನ್ನು ಇಂಟರ್ನೆಟ್ ದೈತ್ಯರು ಸಂಗ್ರಹಿಸುವಂತೆ, ಅವರ ಪತ್ರವ್ಯವಹಾರವನ್ನು ಸರ್ಕಾರ ಇಣುಕಿ ನೋಡುವಂತೆಯೇ ಜನಸಾಮಾನ್ಯರನ್ನು ಪ್ರತಿನಿಧಿಸುವ ಹ್ಯಾಕ್ಟಿವಿಸ್ಟ್‌ಗಳು ಪ್ರಭುತ್ವಗಳನ್ನೂ ವಾಣಿಜ್ಯ ಸಂಸ್ಥೆಗಳ ರಹಸ್ಯವನ್ನು ಜನಸಾಮಾನ್ಯರೆದುರು ತೆರೆದಿಡಬಹುದು ಎಂಬುದನ್ನು ಈ ಸೋರಿಕೆಗಳು ಹೇಳುತ್ತಿವೆ.

ಇಷ್ಟಾದರೂ ಈ ಸೋರಿಕೆಯ ವಿಚಾರ ಅಷ್ಟೊಂದು ಸರಳವಲ್ಲ. ಇಲ್ಲಿ ಗುರಿ ಮತ್ತು ಮಾರ್ಗದ ದ್ವಂದ್ವ ಇದ್ದೇ ಇದೆ. ಈ ಬಗೆಯ ಸೋರಿಕೆಗಳಿಗೆ ಬಳಕೆಯಾಗುವುದು ಜನಸಾಮಾನ್ಯರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವವರು ಬಳಸುವಂಥ ತಂತ್ರವೇ. ಇಲ್ಲಿರುವ ನೈತಿಕ ಸಮಸ್ಯೆಯನ್ನು ಬದಿಗಿಟ್ಟು ನೋಡಿದರೂ ಕೆಲವು ಸಮಸ್ಯೆಗಳಿವೆ. ಈ ಬಗೆಯ ಸೋರಿಕೆಗಳಲ್ಲಿ ಬಯಲಾಗುವುದು ಕೇವಲ ಭ್ರಷ್ಟರ ನಿಜ ಮುಖಗಳಷ್ಟೇ ಅಲ್ಲ. ಕಾನೂನು ಬದ್ಧವಾಗಿ ವ್ಯವಹರಿಸಿದವರ ಮುಖಕ್ಕೆ ಮಸಿಬಳಿಯುವ ಕೆಲಸವೂ ನಡೆದುಬಿಡುತ್ತದೆ. ಡಿಜಿಟಲ್ ಯುಗದಲ್ಲಿ ವಿಶ್ವಾಸಾರ್ಹ ಮಾಧ್ಯಮಗಳ ಅಗತ್ಯ ಹೆಚ್ಚಾಗುತ್ತಿರುವುದೂ ಇದೇ ಕಾರಣಕ್ಕೆ.‘ಪನಾಮ ಪೇಪರ್’ಗಳು ದೊರೆತಾಗ ಡಿಜಿಟಲ್ ಯುಗದ ಧರ್ಮದಂತೆ ಎಲ್ಲವನ್ನೂ ಒಂದೆಡೆ ಸಂಗ್ರಹಿಸಿ ಎಲ್ಲರೂ ನೋಡುವಂಥ ವ್ಯವಸ್ಥೆ ಮಾಡುವುದೇನೂ ‘ಸಿದ್‌ಡೊಯಿಶ್ ಝೈತುಂಗ್‌’ನ ಸಂಪಾದಕ ವರ್ಗಕ್ಕೆ ಕಷ್ಟವಿರಲಿಲ್ಲ. ಆದರೆ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮವೊಂದು ನಿರ್ವಹಿಸಬೇಕಾದ ಪಾತ್ರವೇನೂ ಎಂಬುದನ್ನು ಅರಿತು ಮುಂದಿನ ಹೆಜ್ಜೆ ಇಟ್ಟರು. ಐಸಿಐಜೆಯ ಮೂಲಕ ಹಲವು ದೇಶಗಳ ಹಲವು ಮಾಧ್ಯಮ ಸಂಸ್ಥೆಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡು ಅದರ ವಿಶ್ಲೇಷಣೆ ಆರಂಭಿಸಿದರು. ಇದು ಹೊಸ ಕಾಲದ ಮಾಧ್ಯಮ ಲೋಕಕ್ಕೆ ಹಿಡಿದಿರುವ ‘ಸುದ್ದಿ ಸ್ಫೋಟ’ದ ಗೀಳಿಗೆ ಹೊರತಾದ ಗುಣ. ಹಾಗೆಯೇ ಇದು ಜನರು ಕೇಳುವುದನ್ನು ಕೊಡುವುದರ ಬದಲಿಗೆ ಜನರಿಗೆ ಬೇಕಿರುವುದನ್ನು ನೀಡುವ ಸಂಪಾದಕೀಯ ನಿರ್ಧಾರ. ಬಹುಶಃ ಇದು ಡಿಜಿಟಲ್ ಮಾಧ್ಯಮ ಯುಗಕ್ಕೆ ಅಗತ್ಯವಾಗಿ ಬೇಕಿರುವ ಮಾಧ್ಯಮ ಧರ್ಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry