3

ಕಾಂಗ್ರೆಸ್‌, ಸೋನಿಯಾ ಮತ್ತು ಕಾಶ್ಮೀರ

ರಾಮಚಂದ್ರ ಗುಹಾ
Published:
Updated:
ಕಾಂಗ್ರೆಸ್‌, ಸೋನಿಯಾ ಮತ್ತು ಕಾಶ್ಮೀರ

‘ಕಾಂಗ್ರೆಸ್ ಪಕ್ಷಕ್ಕೆ ಅರವತ್ತು ವರ್ಷ ಅಧಿಕಾರ ನೀಡಿದ್ದೀರಿ, ನಮಗೆ ಕೇವಲ ಅರವತ್ತು ತಿಂಗಳು ಕೊಡಿ ಸಾಕು’ ಎಂದು 2014ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಮತದಾರರಿಗೆ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರ ಬೆಂಬಲಿಗರು ಕೂಡ ಇದನ್ನೇ ಹೇಳಿದರು, ಆದರೆ ಅವರು ಬಳಸಿದ ಭಾಷೆ ಇನ್ನೂ ಶಕ್ತಿಶಾಲಿಯಾಗಿತ್ತು.ಅರವತ್ತು ವರ್ಷಗಳ ಕಾಂಗ್ರೆಸ್ (ದುರಾ) ಆಡಳಿತವೇ ಭಾರತದ ಬಹುದೊಡ್ಡ ಸಮಸ್ಯೆ ಎಂದು ಅವರು ಸಾರಿದ್ದರು. ಸಹಜವಾಗಿಯೇ ಕಾಂಗ್ರೆಸ್ ಅದಕ್ಕೆ ತಿರುಗೇಟು ನೀಡಿತು. ತಮ್ಮ ಅಧಿಕಾರದ ವರ್ಷಗಳು ಅಥವಾ ದಶಕಗಳು ಭಾರತಕ್ಕೆ ಅತ್ಯುತ್ತಮವಾಗಿ ಪರಿಣಮಿಸಿವೆ ಎಂದು ಆ ಪಕ್ಷದವರು ವಾದಿಸಿದರು.

1947ರ ಸ್ವಾತಂತ್ರ್ಯಾನಂತರ ಎಲವೂ ಎಡವಟ್ಟಾದ ಒಂದು ಪ್ರದೇಶ ಕಾಶ್ಮೀರ ಕಣಿವೆ. ಈ ಸ್ಥಳ ಯಾವಾಗಲೂ ಪ್ರಕ್ಷುಬ್ಧವಾಗಿಯೇ ಇತ್ತು; ಕಾಶ್ಮೀರವು ಭಾರತ ಗಣರಾಜ್ಯದ ಭಾಗವಾದದ್ದು ಅಲ್ಲಿನ ಕೆಲವರಿಗೆ ಇಷ್ಟ ಆಗಿಲ್ಲ. ಕೆಲವು ಸಂದರ್ಭಗಳಲ್ಲಿ  ಬಹುಸಂಖ್ಯಾತ ಕಾಶ್ಮೀರಿಗಳಲ್ಲಿಯೂ ಇದೇ ಭಾವನೆ ಮೂಡಿದೆ. ಕಣಿವೆಯಲ್ಲಿ ಮತ್ತೆ ಅತೃಪ್ತಿ ಹೊಗೆಯಾಡುತ್ತಿದೆ.

2014ರ ಭೀಕರ ಪ್ರವಾಹ ಸಂತ್ರಸ್ತರಿಗೆ ನೀಡಲಾದ ಅತ್ಯಲ್ಪ ಪರಿಹಾರದ ಬಗ್ಗೆ ಅಲ್ಲಿನ ಜನರಲ್ಲಿ ಭಾರಿ ಅಸಮಾಧಾನ ಇದೆ. ಕಣಿವೆಯಲ್ಲಿ ದನದ ಮಾಂಸ ನಿಷೇಧಿಸುವ ಪ್ರಸ್ತಾವವನ್ನು ಅಲ್ಲಿನ ಜನ (ಸರಿಯಾಗಿಯೇ) ವಿರೋಧಿಸಿದ್ದಾರೆ. ಪಿಡಿಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವಾಗ ನೀಡಿದ್ದ ಭರವಸೆಯನ್ನು ಬಿಜೆಪಿ ಉಲ್ಲಂಘಿಸಿದೆ (ಮುಫ್ತಿ ಮೊಹಮ್ಮದ್ ಸಯೀದ್ ನಿಧನದ ನಂತರ ಹೊಸ ಸರ್ಕಾರ ರಚನೆಗೆ ಅಷ್ಟೊಂದು ದೀರ್ಘ ಸಮಯ ಬೇಕಾದದ್ದು ಇದೇ ಕಾರಣಕ್ಕೆ).ನಾನು ಈ ಅಂಕಣ ಬರೆಯುತ್ತಿರುವ ಹೊತ್ತಲ್ಲಿ ಅಲ್ಲಿ ಮತ್ತೊಂದು ಹೊಸ ವಿವಾದ ಭುಗಿಲೆದ್ದಿದೆ. ಶ್ರೀನಗರದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಎನ್‍ಐಟಿ) ಕಾಶ್ಮೀರಿ ಮತ್ತು ಕಾಶ್ಮೀರದ ಹೊರಗಿನ ವಿದ್ಯಾರ್ಥಿಗಳ ನಡುವೆ ನಡೆದ ಸಂಘರ್ಷ ಇದಕ್ಕೆ ಕಾರಣ. ಕಾಶ್ಮೀರೇತರ ವಿದ್ಯಾರ್ಥಿಗಳ ಜತೆ ಪೊಲೀಸರು ಒರಟಾಗಿ ವರ್ತಿಸಿದ್ದಾರೆ ಎಂಬಂತೆ ಕಾಣುತ್ತಿದೆ.

ಆದರೆ ಅದಕ್ಕೆ ಅವರ (ವಿದ್ಯಾರ್ಥಿಗಳ) ಬೆಂಬಲಿಗರು ಸೂಚಿಸಿದ ಪರಿಹಾರ ಸಮಸ್ಯೆಗಿಂತಲೂ ಕೆಟ್ಟದಾಗಿರುವಂತೆ ತೋರುತ್ತಿದೆ. ಕಾಲೇಜು ಕ್ಯಾಂಪಸ್‌ನಲ್ಲಿ ಸಾವಿರಕ್ಕೂ ಹೆಚ್ಚು ಅರೆ ಸೇನಾ ಪಡೆ ಯೋಧರನ್ನು ನಿಯೋಜಿಸಿದ್ದು ಖಚಿತವಾಗಿಯೂ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಂತೆ. ಕಾಶ್ಮೀರದ ಶೈಕ್ಷಣಿಕ ಸಂಸ್ಥೆಗಳು ಸಶಸ್ತ್ರ ಸೇನಾ ನೆಲೆಗಳಾಗಿ ಪರಿವರ್ತಿತವಾದರೆ ಕಣಿವೆಯಲ್ಲಿ ಘನತೆಯಿಂದ ಕೂಡಿದ ಶಾಂತಿ ಮೂಡುವ ವಿಷಯದಲ್ಲಿ ಯಾವ ಭರವಸೆ ಇದೆ?ಕಳೆದ ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಕಾಶ್ಮೀರ ಅಥವಾ ಕಾಶ್ಮೀರಿಗಳನ್ನು ವಿವೇಕ ಅಥವಾ ಸಹಾನುಭೂತಿಯಿಂದ ನೋಡಿಲ್ಲ. ದೀರ್ಘಾವಧಿ ದೃಷ್ಟಿಕೋನದಿಂದ ನೋಡುವುದಾದರೆ, ಕಣಿವೆಯ ಜನರು ಭಾವನಾತ್ಮಕವಾಗಿ ಒಂದಾಗುವಂತೆ ನೋಡಿಕೊಳ್ಳುವಲ್ಲಿ ಭಾರತ ವಿಫಲವಾಗಿರುವುದರಲ್ಲಿ ಕಾಂಗ್ರೆಸ್‌ನ ಜವಾಬ್ದಾರಿಯೇ ಹೆಚ್ಚು.

ಶೇಕ್ ಅಬ್ದುಲ್ಲಾ ಅವರನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಜವಾಹರಲಾಲ್ ನೆಹರೂ ಜೈಲಲ್ಲಿಟ್ಟರು. 1964ರಲ್ಲಿ ಅಬ್ದುಲ್ಲಾ ಅವರನ್ನು ನೆಹರೂ ಬಿಡುಗಡೆ ಮಾಡಿದರು. ಆದರೆ ಕಾಶ್ಮೀರಿಗಳು ತಮ್ಮ ನಾಯಕ ಎಂದು ಒಪ್ಪಿಕೊಂಡ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತೆ ಬಂಧನದಲ್ಲಿರಿಸಿದರು. ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡುವಂತೆ 1966ರಲ್ಲಿ ಇಂದಿರಾ ಗಾಂಧಿ ಅವರನ್ನು ಜಯಪ್ರಕಾಶ್ ನಾರಾಯಣ್ ಒತ್ತಾಯಿಸಿದರು.1967ರ ಚುನಾವಣೆಯಲ್ಲಿ ಕೊನೆಗೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶ್ವಾಸಾರ್ಹ ಸರ್ಕಾರ ದೊರೆಯಲಿ ಎಂಬುದು ಜಯಪ್ರಕಾಶ್ ನಾರಾಯಣ್ ಅವರ ಅಪೇಕ್ಷೆಯಾಗಿತ್ತು. ಆದರೆ ಈ ಬೇಡಿಕೆಗೆ ಇಂದಿರಾ ಗಾಂಧಿ ಕಿವಿಗೊಡಲಿಲ್ಲ. ಹಲವು ವರ್ಷಗಳ ನಂತರ ವೃದ್ಧ ಮತ್ತು ನಿಶ್ಶಕ್ತರಾಗಿದ್ದ, ಭಾರತ ಸರ್ಕಾರದ ಅಡಿಯಾಳಾಗಿ ಇರುವ ಇಚ್ಛೆ ಇದ್ದ ಅಬ್ದುಲ್ಲಾ ಅವರನ್ನು ಇಂದಿರಾ ಗಾಂಧಿ ಬಿಡುಗಡೆ ಮಾಡಿದರು.1982ರಲ್ಲಿ ಶೇಕ್ ಅಬ್ದುಲ್ಲಾ ನಿಧನರಾದ ನಂತರ ಮಗ ಫಾರೂಕ್ ಆ ಸ್ಥಾನಕ್ಕೆ ಬಂದರು. ನಂತರದ ವರ್ಷ ಫಾರೂಕ್ ಅಬ್ದುಲ್ಲಾ ಅವರು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ್ದರಿಂದ ಸಿಟ್ಟಾದ ಇಂದಿರಾ ಗಾಂಧಿ, ನ್ಯಾಷನಲ್ ಕಾನ್ಫರೆನ್ಸ್‌ನಲ್ಲಿ ಒಡಕು ಉಂಟಾಗುವಂತೆ ನೋಡಿಕೊಂಡರು. ಫಾರೂಕ್ ಸ್ಥಾನಕ್ಕೆ ತಾವು ಹೇಳಿದಂತೆ ಕೇಳುವ ಅವರ ಭಾವ ಬರುವಂತೆ ಮಾಡಿದರು. ನಂತರ ಇಂದಿರಾ ಗಾಂಧಿ ಅವರ ಹತ್ಯೆಯಾಯಿತು.ಪ್ರಧಾನಿಯಾಗಿ ಅವರ ಮಗ ರಾಜೀವ್ ಗಾಂಧಿ ಅಧಿಕಾರಕ್ಕೆ ಬಂದರು. 1987ರಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ರಾಜೀವ್ ಅವರ ಸರ್ಕಾರ ವ್ಯಾಪಕ ಅಕ್ರಮಗಳನ್ನು ಎಸಗಿತು. ಇದು ಕಾಶ್ಮೀರಿಗಳಲ್ಲಿ ಸಾಮೂಹಿಕ ಸಿಟ್ಟು ಉಂಟಾಗುವಂತೆ ಮಾಡಿತಲ್ಲದೆ, ಸ್ವಲ್ಪ ನಂತರ ಆರಂಭಗೊಂಡ ಬಂಡಾಯ ಚಟುವಟಿಕೆಗಳಿಗೂ ಕಾರಣವಾಯಿತು.ನೆಹರೂ, ಇಂದಿರಾ ಮತ್ತು ರಾಜೀವ್‌ ಅವರ ತ್ಯಾಗವನ್ನು ಗೌರವಿಸುವುದಕ್ಕಾಗಿ ಮಾತ್ರ ತಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ಸೋನಿಯಾ ಗಾಂಧಿ ಒಮ್ಮೆ ಹೇಳಿದ್ದರು. ಕಾಶ್ಮೀರ ವಿಷಯಕ್ಕೆ ಸಂಬಂಧಿಸಿ ಸೋನಿಯಾ ಅವರು ಈ ಮೂವರನ್ನು ಖಂಡಿತವಾಗಿಯೂ ಅನುಸರಿಸಿದ್ದಾರೆ. ಕಾಶ್ಮೀರ ಮತ್ತು ಕಾಶ್ಮೀರಿಗಳಲ್ಲಿ ಭಾರತದಿಂದ ತಾವು ಪ್ರತ್ಯೇಕ ಎಂಬ ಭಾವನೆ ಉಂಟಾಗುವ ರೀತಿಯಲ್ಲಿ ಕೈಗೊಳ್ಳಲಾದ ಕೆಲವು ನಿರ್ಧಾರಗಳಿಗೆ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಕೂಡ ಹೊಣೆಗಾರರು. ಅವುಗಳಲ್ಲಿ ನಾಲ್ಕು ನಿರ್ಧಾರಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ:1. 2003ರ ಏಪ್ರಿಲ್‌ನಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಶ್ರೀನಗರಕ್ಕೆ ಭೇಟಿ ನೀಡಿದರು. ದಶಕಕ್ಕೂ ಹೆಚ್ಚಿನ ಅವಧಿಯ ನಂತರ ಪ್ರಧಾನಿ ಶ್ರೀನಗರಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿ ಪಿಡಿಪಿ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು.ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಮೂಲಕ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆದರೆ ಸಣ್ಣತನ ಮತ್ತು ಪಕ್ಷಪಾತದ ನಿಲುವು ಪ್ರದರ್ಶಿಸಿದ ರಾಜ್ಯ ಕಾಂಗ್ರೆಸ್ ಸಚಿವರು ಪ್ರಧಾನಿ ಭಾಷಣವನ್ನು ಬಹಿಷ್ಕರಿಸಿದರು (ದೆಹಲಿಯಿಂದ ಹೈಕಮಾಂಡ್‌ ಈ ಸೂಚನೆ ನೀಡಿತ್ತು ಎಂಬುದು ಬಹುತೇಕ ಖಚಿತ). ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮನಸ್ಥಿತಿಯಿಂದ ಪ್ರಧಾನಿ ಅಲ್ಲಿಗೆ ಭೇಟಿ ನೀಡಿದ್ದರು.ಕಾಶ್ಮೀರ ಸಮಸ್ಯೆಗೆ ಮಾನವೀಯ ನೆಲೆಯ ಯಾವುದೇ ಪರಿಹಾರವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ವಾಜಪೇಯಿ ಹೇಳಿದರು. ಅವು ನಿಜಕ್ಕೂ ಭರವಸೆದಾಯಕ ದಿನಗಳಾಗಿದ್ದವು. ಭಯೋತ್ಪಾದನಾ ಕೃತ್ಯಗಳು ಕಡಿಮೆಯಾಗಿದ್ದವು ಮತ್ತು ಪ್ರವಾಸೋದ್ಯಮ ಚಿಗುರೊಡೆಯಲು ಆರಂಭಿಸಿತ್ತು. ವಿರೋಧ ಪಕ್ಷ ಪ್ರಧಾನಿ ಬೆನ್ನಿಗೆ ನಿಲ್ಲಬೇಕಾಗಿದ್ದ ಅತ್ಯಗತ್ಯ ಸಂದರ್ಭ ಅದಾಗಿತ್ತು. ಆದರೆ ವಿರೋಧ ಪಕ್ಷ ಅವರನ್ನು ಬಹಿಷ್ಕರಿಸಿತು.2. ಮುಫ್ತಿ ಮೊಹಮ್ಮದ್‌ ಸಯೀದ್‌ ಸಾಕಷ್ಟು ಮಟ್ಟಿಗೆ ದಕ್ಷ ಮುಖ್ಯಮಂತ್ರಿಯಾಗಿದ್ದರು; ಕಾಶ್ಮೀರಿಗಳ ಪಕ್ಷವೇ ಅಧಿಕಾರದಲ್ಲಿತ್ತು ಮತ್ತು ಕಣಿವೆಯಲ್ಲಿ ಬಹುಮಟ್ಟಿಗೆ ಶಾಂತಿ ನೆಲೆಸಿತ್ತು. ಪರಿಸ್ಥಿತಿ ಆಶಾದಾಯಕವಾಗಿತ್ತು. ಸೋನಿಯಾ ಗಾಂಧಿ ಅವರಿಗೆ ವಿವೇಕ ಮತ್ತು ಇಚ್ಛಾಶಕ್ತಿ ಇದ್ದಿದ್ದರೆ ಅಥವಾ ಅವರಿಗೆ ಉತ್ತಮ ಸಲಹೆಗಳು ಲಭ್ಯವಾಗಿದ್ದಿದ್ದರೆ ಮುಫ್ತಿ ಅವರನ್ನು ಆರು ವರ್ಷಗಳ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡಬಹುದಿತ್ತು.ಆದರೆ 2006ರಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ಒತ್ತಡ ಹೇರಲಾಯಿತು. ಮುಫ್ತಿ ಕೆಳಗಿಳಿದರು. ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಗುಲಾಂ ನಬಿ ಆಜಾದ್‌ ಮುಖ್ಯಮಂತ್ರಿಯಾದರು. ಸಾಮಾನ್ಯ ಜ್ಞಾನ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ಪಕ್ಷ ರಾಜಕಾರಣದ ಸಣ್ಣತನ ಮೇಲುಗೈ ಪಡೆಯಿತು.3. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. 2009ರಲ್ಲಿ ಯುಪಿಎಗೆ ಮತ್ತೆ ಜನಾದೇಶ ದೊರೆಯಿತು. ಅದರ ನಂತರದ ವರ್ಷ ಕಾಶ್ಮೀರಕ್ಕೆ ಸಂಧಾನಕಾರರೊಬ್ಬರನ್ನು ನೇಮಿಸುವ ನಿರ್ಧಾರ ಕೈಗೊಳ್ಳಲಾಯಿತು.  2008ರಲ್ಲಿ ಕಾಶ್ಮೀರದಲ್ಲಿ ಪ್ರತಿಭಟನೆ ತೀವ್ರಗೊಂಡಿತ್ತು. ಯುವಕರು ಕಲ್ಲು ತೂರಾಟ ನಡೆಸಿದ ಹಲವು ಪ್ರಕರಣಗಳು ನಡೆದಿದ್ದವು.ಕಾಶ್ಮೀರಿಗಳ ಜತೆ ಮಾತುಕತೆ ನಡೆಸುವುದಕ್ಕೆ ಸ್ವತಂತ್ರ ವ್ಯಕ್ತಿ ಅಥವಾ ಸಮಿತಿಯನ್ನು ನೇಮಿಸುವ ನಿರ್ಧಾರ ಸರಿಯಾಗಿಯೇ ಇತ್ತು. ಮಾಜಿ ಹೈಕಮಿಷನರ್  ಮತ್ತು ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರನ್ನು ಸಂಧಾನಕಾರರನ್ನಾಗಿ ನೇಮಿಸುವಂತೆ ಪ್ರಧಾನಿ ಮತ್ತು ಗೃಹ ಸಚಿವರಿಬ್ಬರಿಗೂ ಸಲಹೆ ನೀಡಲಾಗಿತ್ತು.ಸಂಘರ್ಷಪೀಡಿತ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡಿದ ಅನುಭವ ಗೋಪಾಲಕೃಷ್ಣ ಗಾಂಧಿ ಅವರಿಗೆ  ಇತ್ತು. ಜತೆಗೆ ಅವರು ಚೆನ್ನಾಗಿ ಉರ್ದು ಮಾತನಾಡುತ್ತಾರೆ. ಆಧುನಿಕ ಭಾರತದ ಇತಿಹಾಸದ ಬಗ್ಗೆ ಗಾಢವಾದ ತಿಳಿವಳಿಕೆ ಹೊಂದಿದ್ದ ಅವರು ಸಂಧಾನಕಾರರಾಗಿ ಕೆಲಸ ಮಾಡಲು ಅತ್ಯುತ್ತಮ ವ್ಯಕ್ತಿಯಾಗಿದ್ದರು. ‘ಹುರಿಯತ್‌ ಮುಖಂಡರು ಕೂಡ ಗೋಪಾಲಕೃಷ್ಣ ಗಾಂಧಿ ಜತೆ ಮಾತುಕತೆ ನಡೆಸಲು ಮುಂದೆ ಬರುತ್ತಿದ್ದರು’ ಎಂದು ಕಾಶ್ಮೀರವನ್ನು ಚೆನ್ನಾಗಿ ಬಲ್ಲ ಮಾಜಿ ಗೃಹ ಕಾರ್ಯದರ್ಶಿಯೊಬ್ಬರು ನನ್ನಲ್ಲಿ ಹೇಳಿದ್ದರು.ಆದರೆ ಅವರ ಬದಲಿಗೆ, ಮೂರು ಜನ ಸಂಧಾನಕಾರರ ತಂಡವನ್ನು ನೇಮಿಸಲಾಯಿತು. ಈ ಮೂರೂ ಜನರ ಸಂಘರ್ಷ ಪರಿಹಾರ ಸಾಮರ್ಥ್ಯ ಗೋಪಾಲಕೃಷ್ಣ ಗಾಂಧಿ ಅವರಿಗೆ ಸರಿಸಾಟಿಯಾದುದಾಗಿರಲಿಲ್ಲ. ಈ ತಂಡವನ್ನು ಭೇಟಿಯಾಗಲು ಹುರಿಯತ್‌ ಮುಖಂಡರು ನಿರಾಕರಿಸಿದರು. ಹಾಗಾಗಿ ಈ ಪ್ರಯತ್ನಕ್ಕೆ ಬಿಕ್ಕಟ್ಟು ಎದುರಾಯಿತು.

ಸೋನಿಯಾ ಗಾಂಧಿ ಅವರ ಮಗ ಆಗಷ್ಟೇ ರಾಜಕೀಯದಲ್ಲಿ ಮೊದಲ ಹೆಜ್ಜೆಗಳನ್ನು ಇರಿಸುತ್ತಿದ್ದರು. ಹಾಗಾಗಿ ತಮ್ಮ ಕುಟುಂಬಕ್ಕೆ ಸೇರಿಲ್ಲದ, ಆದರೆ ಮಹಾತ್ಮ ಗಾಂಧಿ ಕುಟುಂಬಕ್ಕೆ ಸೇರಿದ ‘ಗಾಂಧಿ’ ಒಬ್ಬರಿಗೆ ಮಹತ್ವ ನೀಡುವ ಮನಸ್ಸು ಸೋನಿಯಾ ಅವರಿಗೆ ಇರಲಿಲ್ಲ ಎಂಬ ವದಂತಿ ಆಗ ಹಬ್ಬಿತ್ತು. ಕಾರಣ ಏನೇ ಇರಲಿ, ವಿಶ್ವಾಸಾರ್ಹ ಸಂಧಾನಕಾರರನ್ನು ನೇಮಿಸಲು ಸಾಧ್ಯವಾಗದ ಕಾರಣಕ್ಕೆ ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಮತ್ತೊಂದು ಪ್ರಯತ್ನಕ್ಕೂ ಹಿನ್ನಡೆಯಾಯಿತು.4. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು 2012ರಲ್ಲಿ ಮತ್ತು ನಂತರ 2013ರಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಸೀಮಿತಗೊಳಿಸುವ ಮತ್ತು ಹಂತ ಹಂತವಾಗಿ ಹಿಂತೆಗೆಯುವ ಪ್ರಸ್ತಾವವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದರು. ಈ ಕಾಯ್ದೆ ಸೇನೆಗೆ ಸಂಪೂರ್ಣ ರಕ್ಷಣೆ ಒದಗಿಸುತ್ತದೆ ಎಂಬುದು ಇದಕ್ಕೆ ಕಾರಣ. ಕಾಶ್ಮೀರದಲ್ಲಿ ಈ ಕಾಯ್ದೆಗೆ ಭಾರಿ ಪ್ರತಿರೋಧ ಇದೆ (ಗಡಿ ರಾಜ್ಯಗಳಾದ ಮಣಿಪುರ ಮತ್ತು ನಾಗಾಲ್ಯಾಂಡ್‌ನ ಜನರೂ ಇದನ್ನು ವಿರೋಧಿಸುತ್ತಿದ್ದಾರೆ).ಕನಿಷ್ಠ ಪಕ್ಷ, ಗಡಿಯಿಂದ ದೂರ ಇರುವ ಜಿಲ್ಲೆಗಳಲ್ಲಾದರೂ ಉಗ್ರವಾದ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒಮರ್ ಅಬ್ದುಲ್ಲಾ ವಿನಂತಿಸಿದ್ದರು. ಇದರಿಂದ ಈ ಪ್ರದೇಶ ನಾಗರಿಕ ನಿಯಂತ್ರಣಕ್ಕೆ ಬರುತ್ತದೆ ಮತ್ತು ಅಲ್ಲಿನ ಸಾಮಾನ್ಯ ಜನರು ಮುಕ್ತವಾಗಿ ಉಸಿರಾಡಬಹುದಿತ್ತು. ಆದರೆ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಈ ವಿಶ್ವಾಸ ವೃದ್ಧಿ ಕ್ರಮಕ್ಕೆ ಮುಂದಾಗದೆ ತೀರಾ ಜಿಗುಟುತನ ಪ್ರದರ್ಶಿಸಿತು.ಸೇನೆಯ ವಿಚಾರದಲ್ಲಿ ದೃಢ ನಿರ್ಧಾರ ಕೈಗೊಳ್ಳಲು ಕೇಂದ್ರ ಬಯಸಲಿಲ್ಲ. ಕಣಿವೆಗೆ ಸಂಬಂಧಿಸಿದ ನೀತಿಗಳನ್ನು, ಕೇಂದ್ರದ ಧೋರಣೆಗಳನ್ನು ನಿರ್ಧರಿಸುವುದು ಚುನಾಯಿತ ಪ್ರತಿನಿಧಿಗಳಲ್ಲ ಬದಲಿಗೆ ಭದ್ರತಾ ಪಡೆಗಳು ಎಂಬ ಹೆಚ್ಚಿನ ಕಾಶ್ಮೀರಿಗಳ ಮನಸ್ಸಲ್ಲಿದ್ದ ಭಾವನೆಯನ್ನು ಇದು ಇನ್ನಷ್ಟು ಗಟ್ಟಿಗೊಳಿಸಿತು.‘ಕಾಶ್ಮೀರ ಸಮಸ್ಯೆ’ ಇಷ್ಟೊಂದು ದೀರ್ಘ ಕಾಲ ಉಳಿಯಲು ಹಲವು ಕಾರಣಗಳಿವೆ. ಪಾಕಿಸ್ತಾನ ಸರ್ಕಾರ ಅಥವಾ ಸೇನೆಯ ಕರಾಳಹಸ್ತ ಅದರಲ್ಲಿ ಒಂದು. ಕಾಶ್ಮೀರದ ಸಮನ್ವಯದ ಹಾದಿಯ, ಇಸ್ಲಾಂ ಧರ್ಮವನ್ನು ಆಕ್ರಮಿಸುವ ಮೂಲಭೂತವಾದಿ ವಹಾಬಿಗಳ ಪ್ರಯತ್ನ ಇನ್ನೊಂದು ಕಾರಣ.ಪಂಡಿತರನ್ನು ಅಲ್ಲಿಂದ ಹೊರದಬ್ಬಿದ್ದು ಮೂರನೇ ಕಾರಣ. ಕಣಿವೆಯಿಂದ ಹೊರಗೆ ಇರುವ ಜನರಿಗೆ ಕಾಶ್ಮೀರಿಗಳ ನೋವಿನ ಬಗ್ಗೆ ಇರುವ ಅಸಡ್ಡೆ ನಾಲ್ಕನೇ ಕಾರಣ. ಭಾರತೀಯ ಸೇನೆ ಮತ್ತು ಅರೆ ಸೇನಾ ಪಡೆಗಳು ನಡೆಸುವ ಮಾನವ ಹಕ್ಕು ಉಲ್ಲಂಘನೆಗಳು, ಕಾಂಗ್ರೆಸ್ ಪಕ್ಷದ ತಪ್ಪುಗಳು ಮತ್ತು ಅಪರಾಧಗಳು ಐದು ಮತ್ತು ಆರನೇ ಕಾರಣಗಳು.ಕಾಶ್ಮೀರಿಗಳ ಅಸಮಾಧಾನ ಆಳವಾಗಿ ಬೇರು ಬಿಟ್ಟಿದೆ ಎಂಬುದನ್ನು ಆರ್‍ಎಸ್‍ಎಸ್ ಮತ್ತು ನರೇಂದ್ರ ಮೋದಿ ಅವರು ಗುರುತಿಸುತ್ತಿಲ್ಲ ಎಂಬುದು ಆಶ್ಚರ್ಯದ ವಿಷಯವೇನೂ ಅಲ್ಲ. ಬಹುತ್ವ, ಧಾರ್ಮಿಕ ಅಥವಾ ಸಾಂಸ್ಕೃತಿಕ ಅಥವಾ ಬೌದ್ಧಿಕ ಯಾವುದೇ ಆಗಿರಲಿ, ಅದು ಹಿಂದುತ್ವಕ್ಕೆ ವಿರುದ್ಧವಾದುದಾಗಿದೆ. ಆದರೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಹಿಷ್ಣುತೆ ಮತ್ತು ಬಹುತ್ವಗಳು ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಮಿಳಿತವಾಗಿದ್ದ ಅಂಶಗಳಾಗಿದ್ದವು.ಅತಿ ಶ್ರೇಷ್ಠ ಕಾಂಗ್ರೆಸಿಗ ಮಹಾತ್ಮ ಗಾಂಧಿ ಈ ಮೌಲ್ಯ ಮತ್ತು  ಆದರ್ಶಗಳನ್ನು ಎತ್ತಿಹಿಡಿದಿದ್ದರು. ಇದೇ ಅಂಶಗಳನ್ನು ಸಂವಿಧಾನ ರಚನಾ ಸಮಿತಿಯು ಸಂವಿಧಾನದಲ್ಲಿ ಒಡಮೂಡಿಸಿದೆ. ಈ ಸಮಿತಿಯಲ್ಲಿ ಇದ್ದವರಲ್ಲಿ ಹೆಚ್ಚಿನವರು ಕಾಂಗ್ರೆಸಿಗರಾಗಿದ್ದರು. ಆದರೆ ಕಾಶ್ಮೀರಕ್ಕೆ ಸಂಬಂಧಿಸಿ, ಈ ಮೌಲ್ಯಗಳು ಮತ್ತು ಆದರ್ಶಗಳನ್ನು ಕಾಂಗ್ರೆಸ್ ನಾಯಕರಾದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಇವರು ಯಾರಿಗೂ ಕಡಿಮೆ ಇಲ್ಲದಂತೆ ಸೋನಿಯಾ ಗಾಂಧಿ ಅವರು ತಪ್ಪಾಗಿ ಅನ್ವಯಿಸಿರುವುದು ಮಾತ್ರ ದೊಡ್ಡ ದುರಂತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry