7

ಮರ್ಯಾದೆಗೇಡು ಹತ್ಯೆ ನಾಗರಿಕ ಸಮಾಜಕ್ಕೆ ಸವಾಲು

Published:
Updated:
ಮರ್ಯಾದೆಗೇಡು ಹತ್ಯೆ ನಾಗರಿಕ ಸಮಾಜಕ್ಕೆ ಸವಾಲು

ಈ ತಿಂಗಳು ಕೇವಲ 15 ದಿನಗಳ ಅಂತರದಲ್ಲಿ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಇಬ್ಬರು ಯುವತಿಯರು ಮರ್ಯಾದೆಗೇಡು ಹತ್ಯೆಗಳಿಗೀಡಾಗಿದ್ದಾರೆ. 2011ರಲ್ಲಿ ಮಂಡ್ಯ ಜಿಲ್ಲೆಯ ಅಂಬಲಪಾಡಿಯ ಸುವರ್ಣಳ ಮರ್ಯಾದೆಗೇಡು ಹತ್ಯೆಯ ನಂತರ ರಾಜ್ಯದಲ್ಲಿ ಇದುವರೆಗೆ 10 ಮರ್ಯಾದೆಗೇಡು ಹತ್ಯೆಗಳು ನಡೆದಿವೆ.ಅಭಿವೃದ್ಧಿಯ ಮಾನದಂಡಗಳಲ್ಲಿ ಮುಂದುವರಿದ ರಾಜ್ಯ ಎನಿಸಿಕೊಂಡಿರುವ ಕರ್ನಾಟಕದಲ್ಲೂ ಮರ್ಯಾದೆಗೇಡು ಹತ್ಯೆ ಪಿಡುಗು ಪಸರಿಸುತ್ತಿದೆಯೇ ಎಂಬಂತಹ ಶಂಕೆಯನ್ನು ಈ ಅಂಕಿಅಂಶಗಳು ಹುಟ್ಟುಹಾಕುತ್ತವೆ.ಮರ್ಯಾದೆಗೇಡು ಹತ್ಯೆ ಎಂಬುದು ದೂರದ ಉತ್ತರ ಭಾರತದಲ್ಲಿ ಚಾಲ್ತಿಯಲ್ಲಿರುವ ಪಿಡುಗು. ದಕ್ಷಿಣ ಭಾರತದಲ್ಲಿ ಇಂತಹ ಹಿಂಸಾಚಾರಗಳು ನಡೆಯುವುದಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿದ್ದ ನಂಬಿಕೆ. ಆದರೆ ತಮಿಳುನಾಡು ಹಾಗೂ ಕರ್ನಾಟಕಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಘಟನೆಗಳು ಈ ನಂಬಿಕೆಯನ್ನು ಸುಳ್ಳುಮಾಡುತ್ತಿವೆ.ಮರ್ಯಾದೆಗೇಡು ಹತ್ಯೆ ಎಂಬುದು ಉತ್ತರ ಭಾರತದಲ್ಲಿ ನಡೆಯುವ ವಿದ್ಯಮಾನ ಎಂದು ಸ್ವತಃ  ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು)  ಅಧ್ಯಯನವೂ ಸಾರಿತ್ತು. ರಾಷ್ಟ್ರೀಯ ಮಹಿಳಾ ಆಯೋಗಕ್ಕಾಗಿ ‘ಶಕ್ತಿ ವಾಹಿನಿ’ ಎಂಬ ಎನ್‌ಜಿಓ ಈ ಅಧ್ಯಯನ ನಡೆಸಿತ್ತು. ಈ ಅಧ್ಯಯನದಲ್ಲಿ 560 ಪ್ರಕರಣಗಳನ್ನು ದಾಖಲಿಸಲಾಗಿತ್ತು.560 ಪ್ರಕರಣಗಳ ಪೈಕಿ ಶೇ 88.93 ಪ್ರಕರಣಗಳಲ್ಲಿ ಅಪರಾಧ ಎಸಗಿದವರು ಹುಡುಗಿಯ ಕುಟುಂಬದವರು ಎಂಬುದು ವ್ಯಕ್ತವಾಗಿದೆ ಎಂದು  2010ರ ಆಗಸ್ಟ್ 9ರಂದು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಆಗಿನ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಕೃಷ್ಣಾ ತೀರಥ್ ತಿಳಿಸಿದ್ದರು.ಆದರೆ ಈಗ ಪರಿಸ್ಥಿತಿ ಬದಲಾಗಿದೆ.  ದಕ್ಷಿಣ ರಾಜ್ಯಗಳೂ ಮರ್ಯಾದೆಗೇಡು ಹತ್ಯೆಗಳಿಗೆ ನೆಲೆಯಾಗುತ್ತಿವೆ.  ದಲಿತಕೋಮಿಗೆ ಸೇರಿದ ಎಂಜಿನಿಯರಿಂಗ್ ವಿದ್ಯಾರ್ಥಿ ವಿ. ಶಂಕರ್‌ನನ್ನು ತಮಿಳುನಾಡಿನ  ತಿರುಪ್ಪುರ್ ಜಿಲ್ಲೆಯ ಉಧುಮಲಪೇಟ್‌ನಲ್ಲಿ  ಸಾರ್ವಜನಿಕವಾಗಿ ಎಲ್ಲರೆದುರೇ ಕಳೆದ ಮಾರ್ಚ್ ತಿಂಗಳಲ್ಲಿ ಹತ್ಯೆ ಮಾಡಲಾಯಿತು. ಎಂಟು ತಿಂಗಳ ಹಿಂದಷ್ಟೇ  ಆತ  ತೇವರ್ ಸಮುದಾಯಕ್ಕೆ ಸೇರಿದ ಕೌಸಲ್ಯಾಳನ್ನು  ವಿವಾಹವಾಗಿದ್ದುದು ಈ ಹತ್ಯೆಗೆ ಕಾರಣ.ಈ ಹತ್ಯೆ  ನಡೆದ ಕೆಲವೇ ವಾರಗಳಲ್ಲಿ ಮಂಡ್ಯ ಬಳಿಯ ತಿಮ್ಮನಹೊಸೂರು ಗ್ರಾಮದ ಮೋನಿಕಾ ಮರ್ಯಾದೆಗೇಡು ಹತ್ಯೆ ಪ್ರಕರಣ ವರದಿಯಾಯಿತು.  ಮತ್ತೆ ಏಪ್ರಿಲ್ 11ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಚಂದ್ರವಾಡಿಯಲ್ಲಿ ಮಧುಕುಮಾರಿಯ ಹತ್ಯೆ ಪ್ರಕರಣ ಬೆಳಕಿಗೆ ಬಂತು.ಲಿಂಗ, ಜಾತಿ, ಧರ್ಮಕ್ಕೆ ಸಂಬಂಧಿಸಿದಂತೆ ನಮ್ಮ ಸಮಾಜದಲ್ಲಿರುವ ಎಲ್ಲಾ ಕೆಡುಕುಗಳೂ ಈ ಆಧುನಿಕೋತ್ತರ ಕಾಲದಲ್ಲಿ ಮತ್ತಷ್ಟು ಆಳವಾಗುತ್ತಿವೆ ಎಂಬುದಕ್ಕೆ ಈ ಘಟನೆಗಳು ಸಾಕ್ಷಿ. ಹಿಂಸೆಯ ಹಳೆಯ ಮಾದರಿಗಳು ಮತ್ತಷ್ಟು ಬಲಪಡೆದು ಹಿಂಸೆಯ ಹೊಸ ಮಾದರಿಗಳು ಹುಟ್ಟಿಕೊಳ್ಳುತ್ತಿವೆ ಎಂಬುದು ವಿಪರ್ಯಾಸ.ಈ ಪ್ರಕ್ರಿಯೆಯಲ್ಲಿ ಹೆಣ್ಣುಮಕ್ಕಳ ಅಪಮೌಲ್ಯೀಕರಣ ಹೆಚ್ಚಾಗುತ್ತಿದೆ. ಜಾತಿ ಪ್ರತಿಷ್ಠೆ ಹಾಗೂ ಪಿತೃಪ್ರಧಾನ ದೃಷ್ಟಿಕೋನಗಳ ವಿಷವರ್ತುಲದಲ್ಲಿ ಮಹಿಳೆಯರು ಹಾಗೂ ಸಾಮಾಜಿಕವಾಗಿ ದಮನಕ್ಕೊಳಗಾದ ಜಾತಿಯ ಜನರು ಬಲಿಪಶುಗಳಾಗುತ್ತಿದ್ದಾರೆ. ಹಿನ್ನಡೆಯ ದೃಷ್ಟಿಕೋನ ಸಮಾಜದ ಮುಖ್ಯವಾಹಿನಿಯಲ್ಲಿ ಆಕ್ರಮಣಕಾರಿಯಾಗಿ ತಲೆ ಎತ್ತುತ್ತಿರುವ ಈ ಬಗೆ ಆತಂಕಕಾರಿ.ಹೀಗಿದ್ದೂ ಈ ಮರ್ಯಾದೆಗೇಡು ಹತ್ಯೆ ಅಪರಾಧಕ್ಕೆ ಸರಿಯಾದ ವಿವರಣೆ ಇಲ್ಲ. ಅಪರಾಧದ ವಿವಿಧ ಆಯಾಮಗಳ ಬಗ್ಗೆ ಕಾನೂನಿನ ಗುರುತಿಸುವಿಕೆ ಇಲ್ಲ.  ದಂಪತಿಗೆ ಶಾಸನಾತ್ಮಕವಾಗಿ ರಕ್ಷಣೆ ಇಲ್ಲ. ಜೊತೆಗೆ ಇಂತಹ  ಅಪರಾಧಗಳ ತಡೆಗೆ ಕ್ರಮವೂ ಇಲ್ಲ. ಶಿಕ್ಷೆಯೂ ಇಲ್ಲ ಎನ್ನುವಂತಹ ಸ್ಥಿತಿ ಇದೆ.ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ  ಕೇಂದ್ರ ಸರ್ಕಾರದ ನಿಲುವು, ಈ ವಿಚಾರದ ಬಗ್ಗೆ ಸ್ಪಷ್ಟವಿತ್ತು.  ಆಗ ಭಾರತದಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ ಎಂಬುದು  ವಿಶ್ವಸಂಸ್ಥೆ ವಿಶೇಷ ವರದಿಯಲ್ಲಿ ಉಲ್ಲೇಖವಾಗಿತ್ತು. ಆದರೆ  ಬಿಜೆಪಿ ಸಂಸತ್ ಸದಸ್ಯ ಎಸ್.ಎಸ್. ಅಹ್ಲುವಾಲಿಯಾ ಇದನ್ನು ಅಲ್ಲಗಳೆದಿದ್ದರು. 2002ರಲ್ಲಿ ವಿಶ್ವಸಂಸ್ಥೆಯ ಸಾಮಾಜಿಕ, ಮಾನವೀಯ ಹಾಗೂ ಸಾಂಸ್ಕೃತಿಕ ಸಮಿತಿಯಲ್ಲಿ ಭಾರತೀಯ ಪ್ರತಿನಿಧಿಯಾಗಿ ಮಾತನಾಡಿದ್ದ ಅವರು ಈ ಸ್ಪಷ್ಟನೆ ನೀಡಿದ್ದರು. ಅಲ್ಲದೆ ಮರ್ಯಾದೆಗೇಡು ಹತ್ಯೆಯಂತಹ ಅಪರಾಧಗಳು ಪಾಕಿಸ್ತಾನ ಮತ್ತಿತರ ಇಸ್ಲಾಮಿಕ್ ರಾಷ್ಟ್ರಗಳಲ್ಲಷ್ಟೇ  ನಡೆಯುತ್ತವೆ ಎಂಬಂತಹ ವಾದವನ್ನೂ  ಆಗ ಮಂಡಿಸಲಾಗುತ್ತಿತ್ತು. ಮರ್ಯಾದೆಗೇಡು ಹತ್ಯೆಯೇ ಇಲ್ಲ ಎಂಬಂಥ ನಿರಾಕರಣೆಯ ವಾದ ಅದು.ಕೊಲೆಯನ್ನು ಶಿಕ್ಷಾರ್ಹ ಅಪರಾಧವಾಗಿ ಭಾರತೀಯ ಕಾನೂನು ಪರಿಗಣಿಸುತ್ತದೆ. ಆದರೆ ಕೊಲೆ ಹಾಗೂ ಮರ್ಯಾದೆಗೇಡು ಹತ್ಯೆ ಮಧ್ಯೆ ಯಾವುದೇ ವ್ಯತ್ಯಾಸವನ್ನು ಈ ಕಾನೂನು ಗುರುತಿಸುವುದಿಲ್ಲ.   ಹೀಗಾಗಿ  ಭಾರತೀಯ ದಂಡ ಸಂಹಿತೆ (ಐಪಿಸಿ), ಭಾರತೀಯ ಸಾಕ್ಷ್ಯ ಕಾಯಿದೆ ಹಾಗೂ ವಿಶೇಷ ವಿವಾಹಗಳ ಕಾಯಿದೆಗೆ ಶೀಘ್ರ ತಿದ್ದುಪಡಿ ತರಬೇಕೆಂಬ ಬಗ್ಗೆ  ಆಗಿನ ಕೇಂದ್ರ ಗೃಹ ಸಚಿವ  ಪಿ. ಚಿದಂಬರಂ ಅವರು ಕೇಂದ್ರ ಸಂಪುಟ ಸಭೆಯಲ್ಲಿ ಮಾಡಿದ ಮನವಿಗೆ ಒಮ್ಮತ ಮೂಡಲಿಲ್ಲ.ಹೀಗಾಗಿ, ಕಾನೂನಿನಲ್ಲಿ ಬದಲಾವಣೆಗಳನ್ನು ಸೂಚಿಸಲು ಸಚಿವರ ತಂಡವೊಂದನ್ನು (ಜಿಓಎಂ) 2010ರಲ್ಲಿ ಕೇಂದ್ರ ಸರ್ಕಾರ ರಚಿಸಿತ್ತು.  ರಾಜ್ಯಗಳ ಜೊತೆ ಸಮಾಲೋಚಿಸಲೂ ನಿರ್ಧರಿಸಲಾಗಿತ್ತು. ಮರ್ಯಾದೆಗೇಡು ಹತ್ಯೆಗಳ ಬಗ್ಗೆ ತಮ್ಮ ಬಳಿ ಅಂಕಿಅಂಶಗಳೇ ಇಲ್ಲ ಎಂದು ಅನೇಕ ರಾಜ್ಯಗಳು ಜಿಓಎಂ ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ ಹರಿಯಾಣದ ಆಗಿನ ಮುಖ್ಯಮಂತ್ರಿ  ಭೂಪೀಂದರ್ ಹೂಡಾ ಅವರು ಹೊಸ ಕಾನೂನಿನ ಅಗತ್ಯವೇ ಇಲ್ಲ ಎಂದು ವಾದಿಸಿದ್ದರು.ಈ ಮಧ್ಯೆ 2010ರ ಆಗಸ್ಟ್‌ನಲ್ಲಿ  ಮಹಿಳಾ ಸಂಘಟನೆಗಳು ಹಾಗೂ ವ್ಯಕ್ತಿಗಳ ಜೊತೆ ಸಮಾಲೋಚನೆ ನಡೆಸಿ ‘ಮರ್ಯಾದೆ ಹಾಗೂ ಪರಂಪರೆ ಹೆಸರಲ್ಲಿ ಅಪರಾಧಗಳ ತಡೆ ಮಸೂದೆ’ಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ  ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ದಂಪತಿಯ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಮರ್ಯಾದೆಗೇಡು ಅಪರಾಧಗಳನ್ನು ಈ ಮಸೂದೆ ವಿವರಿಸುತ್ತದೆ.ಈ ಮಸೂದೆಗೆ ರಾಷ್ಟ್ರೀಯ ಮಹಿಳಾ ಆಯೋಗವೂ ಬೆಂಬಲ ವ್ಯಕ್ತಪಡಿಸಿತ್ತು. ಆಗ ಗಿರಿಜಾ ವ್ಯಾಸ್ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದರು. ಇಂತಹದೇ ಹೆಸರಿನ ಮಸೂದೆಯನ್ನು ರಾಷ್ಟ್ರೀಯ ಮಹಿಳಾ ಆಯೋಗವೂ ಸರ್ಕಾರಕ್ಕೆ ಸಲ್ಲಿಸಿತ್ತು.ಮಹಿಳಾ ಆಯೋಗ ಹಾಗೂ ಮಹಿಳಾ ಸಂಘಟನೆಗಳ ಈ ಎಲ್ಲಾ ಪ್ರಯತ್ನಗಳ ನಡುವೆಯೂ  ಸಚಿವರ ತಂಡವಾಗಲೀ (ಜಿಓಎಂ) ಪ್ರಧಾನಿಯಾಗಲೀ ಈ ವಿಷಯವನ್ನು ಮುಂದಕ್ಕೆ ಒಯ್ಯಲಾಗಲಿಲ್ಲ. 2012ರ ಆಗಸ್ಟ್‌ನಲ್ಲಿ  ಭಾರತದ ಕಾನೂನು ಆಯೋಗ ತನ್ನ 242ನೇ ವರದಿಯಲ್ಲಿ ಈ ಮಸೂದೆಯ ತನ್ನದೇ ಆವೃತ್ತಿ ಪ್ರಕಟಿಸಿತು. ರಾಜ್ಯಗಳ ಅಭಿಪ್ರಾಯಗಳನ್ನು ಆಹ್ವಾನಿಸಿತು. ಅಕ್ರಮವಾಗಿ ಗುಂಪುಗೂಡುವಿಕೆ (ವೈವಾಹಿಕ ಸಂಬಂಧದ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ) ನಿಷೇಧ ಮಸೂದೆ– 2011 ಹೆಸರಿನ ಈ ಮಸೂದೆಯಲ್ಲಿ,  ಸ್ವಯಂ ಆಯ್ಕೆಯ ವಿವಾಹ ತಡೆಗೆ ಜಾತಿ ಪಂಚಾಯಿತಿಗಳು ಕರೆಯುವಂತಹ ಅಕ್ರಮ ಸಮಾವೇಶಗಳ ಬಗ್ಗೆ ಆದ್ಯತೆ ನೀಡಲಾಗಿದೆ.ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಬೃಂದಾ ಕಾರಟ್ ಅವರು ವಿವರಿಸಿರುವ ಪ್ರಕಾರ,  ಮರ್ಯಾದೆಗೇಡು ಹತ್ಯೆ ಕಾನೂನು ವಿಚಾರದ ಬಗ್ಗೆ  ಜನವಾದಿ ಅಖಿಲ ಭಾರತ ಮಟ್ಟದ ನಿಯೋಗ, ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ಅವರನ್ನು ಭೇಟಿಯಾಗಿತ್ತು. ಆದರೆ ಈ ಕಾನೂನಿನ ಅವಶ್ಯಕತೆ ಕುರಿತಂತೆಯೇ ಸಚಿವರಲ್ಲಿ  ಅನುಮಾನ ಇತ್ತು.ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ  ನಂತೆ ಈ ಕಾನೂನೂ  ದುರ್ಬಳಕೆ ಆಗಬಹುದೆಂಬ ಅನುಮಾನ ಸಚಿವರಿಂದ ವ್ಯಕ್ತವಾಗಿತ್ತು.  ನಂತರ 2015ರ  ಆಗಸ್ಟ್‌ನಲ್ಲಿ ಅವರ ಸಚಿವಾಲಯ ಕಳಿಸಿದ ಪತ್ರದ ಪ್ರಕಾರ,  ಕಾನೂನು ಆಯೋಗದ ಶಿಫಾರಸುಗಳ ಬಗ್ಗೆ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆಗಳಿಗಾಗಿ ಕೇಂದ್ರ ಸರ್ಕಾರ ಇನ್ನೂ ಕಾಯುತ್ತಿದೆ.ಆದರೆ ಮರ್ಯಾದೆಗೇಡು ಹತ್ಯೆ ವಿರುದ್ಧ  ಸುಪ್ರೀಂಕೋರ್ಟ್ ಅನೇಕ ಬಾರಿ ನಿರ್ದೇಶನಗಳನ್ನು ನೀಡಿದೆ ಎಂಬುದನ್ನು ಗಮನಿಸಬೇಕು. ಬೆದರಿಕೆಯನ್ನು ಒಡ್ಡುವವರು ಹಾಗೂ ದಂಪತಿ ವಿರುದ್ಧ ಬೆದರಿಕೆಯನ್ನು ಕಾರ್ಯಗತಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ 2006ರಲ್ಲಿ ನಿರ್ದೇಶಿಸಿದೆ, ಇಂತಹ ಹತ್ಯೆಗಳಲ್ಲಿ ಯಾವ ಗೌರವವೂ ಇಲ್ಲ.ಕ್ರೂರ ಹಾಗೂ ಊಳಿಗಮಾನ್ಯ ಮನಸ್ಥಿತಿ ಹೊಂದಿದ ವ್ಯಕ್ತಿಗಳು ನಡೆಸುವ ನಾಚಿಕೆಗೇಡಿನ ಹತ್ಯೆಗಳಿವು. ಇದಕ್ಕೆ ಕಠಿಣ ಶಿಕ್ಷೆಯಾಗಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಜೊತೆಗೆ ಮರ್ಯಾದೆಗೇಡು ಹತ್ಯೆಗಳನ್ನು ಅಪರೂಪದಲ್ಲಿ ಅಪರೂಪದ ಅಪರಾಧಗಳ ವರ್ಗಕ್ಕೆ 2011ರ ಮೇ ತಿಂಗಳಲ್ಲಿ ನೀಡಿದ ನಿರ್ದೇಶನದಲ್ಲಿ ಸುಪ್ರೀಂ ಕೋರ್ಟ್ ಸೇರಿಸಿತ್ತು. ಇಂತಹ ಅಪರಾಧಕ್ಕೆ ಮರಣದಂಡನೆ ನೀಡಬೇಕು ಎಂಬಂತಹ ತೀವ್ರ ಅಭಿಪ್ರಾಯವನ್ನೂ  ಸರ್ವೋಚ್ಚ ನ್ಯಾಯಾಲಯ ವ್ಯಕ್ತಪಡಿಸಿತ್ತು.ನಿಜ. ಮರ್ಯಾದೆಗೇಡು ಹತ್ಯೆ ನಿರ್ವಹಣೆಗಾಗಿ ಪ್ರತ್ಯೇಕ ಕಾನೂನು ಅಗತ್ಯವಿದೆ. ಆದರೆ ಅಂತಹ ಕಾನೂನು ರಚನೆಯಾಗುವುದು ಸಾಧ್ಯವಾಗುತ್ತಿಲ್ಲ ಎಂದರೆ ಅದಕ್ಕೆ ಮತ ಬ್ಯಾಂಕ್ ರಾಜಕಾರಣವೇ ಕಾರಣವಾಗಿರುತ್ತದೆ.2013ರ ಜೂನ್‌ನಿಂದ ತಮಿಳುನಾಡು 80 ಯುವಕ ಯುವತಿಯರ ಹತ್ಯೆಗಳನ್ನು ಕಂಡಿದೆ. ಜಾತಿ ಸಂಪ್ರದಾಯಗಳಿಗೆ ಬದ್ಧರಾಗದೆ ತಮ್ಮದೇ ಸಂಗಾತಿಗಳನ್ನು ಹುಡುಕಿಕೊಂಡವರು ಇವರು. ಆದರೆ ಒಂದೇ ಒಂದು ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ. ಸತ್ತ ಹೆಚ್ಚಿನವರು ಹೆಣ್ಣುಮಕ್ಕಳೇ. ಸಾರ್ವಜನಿಕವಾಗಿ ಹತ್ಯೆ ಮಾಡಲಾಗಿದೆ ಅಥವಾ ದಲಿತ ಪುರುಷನನ್ನು ಪ್ರೀತಿಸಿ ಮದುವೆಯಾಗುವ ಸಾಹಸ ಮಾಡಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಸೃಷ್ಟಿಸಲಾಗಿದೆ.ಶಿಕ್ಷೆಯಾಗದೇ ಇರುವುದಕ್ಕೆ ಕಾರಣ ಹಿಂಸೆ ಎಸಗುವ ಕುಟುಂಬದವರು ಆಡಳಿತ ಹಾಗೂ ಪೊಲೀಸರ ಸಹಕಾರದೊಂದಿಗೆ ಅದನ್ನು ಮುಚ್ಚಿ ಹಾಕುತ್ತಾರೆ. ಎಐಎಡಿಎಂಕೆ ಹಾಗೂ ಡಿಎಂಕೆ ಎರಡೂ ಪ್ರಧಾನ ಪಕ್ಷಗಳು ಈ ವಿಚಾರದ ಬಗ್ಗೆ ಮೌನವಾಗಿವೆ. ವಣ್ಣಿಯಾರ್ ಹಾಗೂ ದಲಿತರ ಮಧ್ಯದ ಪ್ರೇಮ ವ್ಯವಹಾರಗಳ ಹಿನ್ನೆಲೆಯಲ್ಲಿ  ದಲಿತರ ವಿರುದ್ಧ ವಣ್ಣಿಯಾರ್ ಮೂಲದ ರಾಜಕೀಯ ಪಕ್ಷವಾಗಿರುವ ಪಟ್ಟಾಳಿ ಮಕ್ಕಳ ಕಚ್ಚಿ (ಪಿಎಂಕೆ) ಕಾರ್ಯಕರ್ತರು ಎದ್ದು ನಿಂತಿರುವುದು ಸ್ಪಷ್ಟ. ಎಂಡಿಎಂಕೆಯ  ಸಂಸ್ಥಾಪಕ ವೈಕೊ ಮಾತ್ರ ಇಂತಹ ಆಚರಣೆಗಳು ನಿಲ್ಲಬೇಕೆಂದು ಕರೆ ನೀಡಿದ್ದಾರೆ.ದ್ರಾವಿಡ ಚಳವಳಿಗೆ ಹೆಸರಾದ ರಾಜ್ಯದಲ್ಲೇ ಜಾತಿವಾದದ ಬೇರುಗಳು ಗಟ್ಟಿಯಾಗುತ್ತಿರುವ ವಿಪರ್ಯಾಸ ಇದು. ಬ್ರಾಹ್ಮಣ ವಿರೋಧಿ ಹೋರಾಟದ ಮೌಲ್ಯಗಳು  ಬಹಿರಂಗವಾಗಿ ಬ್ರಾಹ್ಮಣ ವಿರೋಧಿಯಾಗಿ ಆಂತರ್ಯದಲ್ಲಿ ದಲಿತ ವಿರೋಧಿಯಾಗಿದ್ದವು ಎಂಬುದು ಒಂದು ವ್ಯಾಖ್ಯಾನ. ಅಬ್ರಾಹ್ಮಣ ಮಧ್ಯಮ ಮಟ್ಟದ ಜಾತಿಗಳು ಬಲವಾಗಿ ಬೆಳೆದಾಗ ಅವೂ ಕೂಡ ಊಳಿಗಮಾನ್ಯ, ಶ್ರೇಣೀಕೃತ ವ್ಯವಸ್ಥೆಯ ಮೌಲ್ಯಗಳನ್ನು ಬೆಳೆಸಿಕೊಂಡು ದಲಿತರ ವಿರುದ್ಧ ತಾರತಮ್ಯ ಮುಂದುವರಿಸಿದವು ಎಂಬುದು ದುರಂತ.ಇಷ್ಟೆಲ್ಲಾ ಬೆಳವಣಿಗೆಗಳು ಆಗುತ್ತಿದ್ದರೂ ರಾಜ್ಯ ಸರ್ಕಾರ ಅಲ್ಲಗಳೆಯುತ್ತಲೇ ಇದೆ. ಮರ್ಯಾದೆಗೇಡು ಹತ್ಯೆ ಕುರಿತ ಕಾನೂನು ಆಯೋಗದ ವರದಿಗೆ ತನ್ನ ಸಲಹೆಗಳನ್ನು  ತಮಿಳುನಾಡು ಸರ್ಕಾರ ಈವರೆಗೆ ಕಳುಹಿಸಿಲ್ಲ.  ಇಂತಹ ಜಾತಿಯ ಸ್ಪರ್ಧೆ, ಜಾತಿ ಪುರುಷರ ಪ್ರತಿಪಾದನೆಗಳ ನಡುವೆ ಹೆಣ್ಣು  ಕಳೆದು ಹೋಗುತ್ತಿದ್ದಾಳೆ.ಕರ್ನಾಟಕದಲ್ಲೂ ಮರ್ಯಾದೆಗೇಡು ಹತ್ಯೆಗಳ ಬಗ್ಗೆ  ರಾಜಕೀಯ ನಾಯಕರು ಮೌನವಾಗಿದ್ದಾರೆ. ಮಹಿಳೆಯರ ಸಾಮಾಜಿಕ ಸ್ಥಾನಮಾನ ಸುಧಾರಿಸುವಂತಹ ಹಿಂದೂ ಕೋಡ್ ಬಿಲ್‌ಗೆ ನೆಹರೂ ಸಂಪುಟದಿಂದ ಬೆಂಬಲ ದೊರೆಯದಿದ್ದಾಗ 1951ರಲ್ಲಿ ಅಂಬೇಡ್ಕರ್ ಅವರು ತಮ್ಮ  ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ 125ನೇ ಜಯಂತ್ಯುತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಅಂಬೇಡ್ಕರ್ ಆಶಯಗಳು ನಮಗೆ ನೆನಪಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry