7

ವರ್ತಮಾನ ಮತ್ತು ಗತಕಾಲದ ‘ಬರ’ ನೆನಪು

Published:
Updated:
ವರ್ತಮಾನ ಮತ್ತು ಗತಕಾಲದ ‘ಬರ’ ನೆನಪು

ಅದು 1972 ರ ಬರ...

ವಲಿ ಅಹಮ್ಮದ್‌ ಖಾನ್‌ ಬೀದರ್‌ ತಾಲ್ಲೂಕಿನ ಯರನಳ್ಳಿಯವರು. ಇವರ ತಂದೆ ಯಾಸೀನ್‌ ಸಾಬ್‌ ಉಪಜೀವನಕ್ಕಾಗಿ ಒಂಟೆಗಳನ್ನು ಇಟ್ಟುಕೊಂಡಿದ್ದರು. ಆಗ ಸರಕು ಸಾಗಣೆಗೆ ಒಂಟೆಗಳು ಬಳಕೆಯಾಗುತ್ತಿದ್ದವು. ದಸವ ಧಾನ್ಯವನ್ನು ಒಂಟೆಗಳ ಮೇಲೆ ಮಾರುಕಟ್ಟೆಗೆ ಸಾಗಿಸುತ್ತಿದ್ದರು. ಇದರಿಂದ ಬರುವ ಆದಾಯದಿಂದ ಕುಟುಂಬವನ್ನು ಸಾಕುತ್ತಿದ್ದರು.ಬರದಿಂದ ಒಂಟೆಗಳಿಗೆ ಕೆಲಸ ಇಲ್ಲದಂತಾಯಿತು. ಊಟಕ್ಕೂ ಪರದಾಟ. ವಲಿ ಸಹೋದರರು ಆಹಾರಕ್ಕಾಗಿ ಕೂಲಿ ಮಾಡಿದರು. ಕೂಲಿಗೆ ಪ್ರತಿಯಾಗಿ ಅಮೆರಿಕಾದಿಂದ ತರಿಸಿದ ‘ಕೆಂಪುಜೋಳ’ವನ್ನು ಕೊಡಲಾಗುತ್ತಿತ್ತು. ಆಗ ಬದುಕು ಸವಾಲಾಗಿತ್ತು. ಕೂಲಿ ಕಾರ್ಮಿಕರಿಗೆ ಸರ್ಕಾರ ಕಲ್ಲು ಒಡೆಯುವ, ಬಾವಿ ಹೂಳೆತ್ತುವ ಕೆಲಸ ನೀಡಿತ್ತು.ಕಾರ್ಮಿಕರು ಒಡೆದ ಕಲ್ಲಗಳನ್ನು ರಸ್ತೆ ಹಾಗೂ ಒಡ್ಡುಗಳ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು. ಸ್ಥಿತಿವಂತರು ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡಿ ದಿನ ದೂಡುತ್ತಿದ್ದರು. ಆಗ ಹಣ ಕೊಟ್ಟರೂ ಆಹಾರಧಾನ್ಯ ಸಿಗದಂಥ ಸ್ಥಿತಿ. ಈಗ ‘ನೀರು ದಾನ’ ಮಾಡುವಂತೆ ಆಗ ‘ಗಂಜಿ ದಾನ’ ಮಾಡಲಾಗುತ್ತಿತ್ತು.ಮೇವು ಹಾಗೂ ನೀರಿನ ಸಮಸ್ಯೆಯಿಂದಾಗಿ ಜಾನುವಾರುಗಳನ್ನು ಬದುಕಿಸಿಕೊಳ್ಳಲು ರೈತರು ಸಾಕಷ್ಟು ಹೆಣಗಾಡಿದರು. ದಾರಿ ಕಾಣದವರು ತಮ್ಮ ‘ವಿಳಾಸ’ವನ್ನು ಬರೆದು ಅವುಗಳ ಕೊರಳಿಗೆ ತೂಗುಹಾಕಿ ಬಯಲಿಗೆ ಅಟ್ಟುತ್ತಿದ್ದರು. ಕರುಣಾಮಯಿ ಜಮೀನ್ದಾರರು ಅವುಗಳನ್ನು ಇಟ್ಟುಕೊಂಡು ಸಾಕುತ್ತಿದ್ದರು. ಮಳೆ ಬಿದ್ದ ಮೇಲೆ ಅವುಗಳ ಮಾಲೀಕರಿಗೆ ತಲುಪಿಸುತ್ತಿದ್ದರು!‘ನಮ್ಮಪ್ಪ ನಮ್ಮ ಹೊಟ್ಟೆ ತುಂಬಿಸಲು ಕೇವಲ ಒಂದು ಸೇರು ಅಕ್ಕಿಗಾಗಿ ಮನೆಯಲ್ಲಿದ್ದ ಎಮ್ಮೆ ಕರುಗಳನ್ನು ಮಾರಾಟ ಮಾಡಿದ್ದರು’ ಎಂದು ಕಲಬುರ್ಗಿ ಜಿಲ್ಲೆ ವಾಡಿಯ ಹಣಮಂತ ಮುಷ್ಟಿಗೇರ ನೆನಪಿಸಿಕೊಳ್ಳುತ್ತಾರೆ.ಜನರು ಬದುಕುವುದೇ ಕಷ್ಟವಾಗಿತ್ತು. ಊರುಗಳು ಖಾಲಿಯಾಗತೊಡಗಿದವು. ಆಗಷ್ಟೇ ಆರಂಭವಾಗಿದ್ದ ವಾಡಿ–ಸೊಲ್ಲಾಪುರ ಪ್ಯಾಸೆಂಜರ್‌ ರೈಲುಗಾಡಿ ಸದಾ ತುಂಬಿ ತುಳುಕಾಡುತ್ತಿತ್ತು. ಇದನ್ನು ‘ಬರಗಾಲ’ ಎಂದು ಜನರು ಕರೆಯುತ್ತಿದ್ದರು. ಗುಳೆ ಹೋಗುವವರು ತಮ್ಮೊಂದಿಗೆ ಮೇಕೆ, ಕುರಿ, ಕೋಳಿಗಳನ್ನೂ ತೆಗೆದುಕೊಂಡು ಹೋಗುತ್ತಿದ್ದರು. ಏಕೆಂದರೆ ಅವುಗಳನ್ನು ಮಾರಿ ಒಂದಿಷ್ಟು ದಿನವನ್ನು ದೂಡುವುದು ಅವರ ಉದ್ದೇಶ.ಗುಳೆ ಹೋಗುವವರು ‘ಬರಗಾಲ’ದಲ್ಲಿ ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದರು. ಯಾರೂ ಟಿಕೆಟ್‌ ತೆಗೆದುಕೊಳ್ಳುತ್ತಿರಲಿಲ್ಲ. ರೈಲ್ವೆ ಇಲಾಖೆಗೂ ಬರದ ದಾರುಣ ಸ್ಥಿತಿಯ ಅರಿವಿತ್ತು.‘ಬರಗಾಲ ಹೋತನ್ರಿ?’. ‘ಬರಗಾಲ ಬರಬೇಕ್ರಿ, ನಾ ಅದಕ್ಕ ಕಾಯಾತೀನಿ’. ‘ಎದರಾಗ ಬಂದ್ರಿ’. ‘ಬರಗಾಲದಾಗ ಬಂದೀನಿ’. –ಹೀಗೆ ಈ ಭಾಗದ ಜನರು ರೈಲು ನಿಲ್ದಾಣದಲ್ಲಿ ಸಂಭಾಷಿಸುವುದು ಮಾಮೂಲಿಯಾಗಿತ್ತು.ಬೀದರ್‌ ಜಿಲ್ಲೆ ಬಸವಕಲ್ಯಾಣದಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣಗೊಂಡ ತ್ರಿಪುರಾಂತ ಕೆರೆ ಇದೆ. ಅದು ಸಂಪೂರ್ಣ ಒಣಗಿತ್ತು. ಅಲ್ಲಿ ಬರ ಪರಿಹಾರ ಕಾಮಗಾರಿ ನಡೆಯುತ್ತಿತ್ತು. ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಬರ ವೀಕ್ಷಣೆಗಾಗಿ ಅಲ್ಲಿಗೆ  ಬರುವುದು ನಿಗದಿ ಆಗಿತ್ತು. ಆ ಕೆರೆಯಲ್ಲಿ ಹೆಲಿಪ್ಯಾಡ್‌ ನಿರ್ಮಾಣ ಮಾಡಲಾಯಿತು.ಇಂದಿರಾಗಾಂಧಿ ಅವರಿದ್ದ ಹೆಲಿಕ್ಯಾಪ್ಟರ್‌ ಕೆರೆಯಲ್ಲಿ ಇಳಿಯಿತು. ‘ಇಂದಿರಾಗಾಂಧಿ ಅವರು ಬರ ಕಾಮಗಾರಿ ವೀಕ್ಷಿಸಲು ಆಗಮಿಸಿದಾಗ ಅವರನ್ನು ನೋಡಲು ಜನರು ಅಲ್ಲಿ ಜಮಾಯಿಸಿದ್ದರು’ ಎಂದು ತಾಲ್ಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷೆಯಾಗಿದ್ದ ಅನ್ನಪೂರ್ಣಾಬಾಯಿ ರಗಟೆ ಹೇಳುತ್ತಾರೆ.ಇದು 1992 ರ ಬರ...

ಕಲಬುರ್ಗಿಗೆ ಕುಡಿಯುವ ನೀರು ಪೂರೈಸುತ್ತಿದ್ದ ಬೋಸಗಾ ಕೆರೆ ಬರಿದಾಗಿತ್ತು. ನಗರದಲ್ಲಿ ಹನಿ ನೀರಿಗೂ ತತ್ವಾರ. ಪಾಲಿಕೆ ಕೈ ಚೆಲ್ಲಿತು. ಜನರ ಆಕ್ರೋಶ ಹೆಚ್ಚಾಯಿತು. ಪಾಲಿಕೆಯು ಜನಪ್ರತಿನಿಧಿಗಳ ಸಭೆ ಕರೆಯಿತು. ಸಭೆಯಲ್ಲಿ ಯಾರೋ ಒಬ್ಬರು ‘ರೈಲಿನ ಮೂಲಕ ನೀರು ತರಿಸಬಹುದು’ ಎಂದು ಸಲಹೆ ನೀಡಿದರು.ಅದು ಎಲ್ಲರಿಗೂ ಸರಿ ಅನಿಸಿತು. ರೈಲ್ವೆ ಸಚಿವ ಸಿ.ಕೆ.ಜಾಫರ್‌ ಷರೀಫ್‌ ಅವರ ಗಮನಕ್ಕೆ ತರಲಾಯಿತು. ಅವರು ಮಂತ್ರಾಲಯದ ತುಂಗಾಭದ್ರ ನದಿಯಿಂದ ಉಚಿತವಾಗಿ ನೀರು ತರಿಸಲು ವ್ಯವಸ್ಥೆ ಮಾಡಿದರು.‘ವ್ಯಾಗನ್‌ಗಳನ್ನು ಹೊತ್ತ ರೈಲು ಮಧ್ಯರಾತ್ರಿ ಕಲಬುರ್ಗಿ ರೈಲು ನಿಲ್ದಾಣಕ್ಕೆ ಬರುತ್ತಿತ್ತು. ಇಷ್ಟರಲ್ಲಿ ಟ್ಯಾಂಕರ್‌ಗಳ ಸಾಲು ಅಲ್ಲಿರುತ್ತಿತ್ತು. ನೀರು ತುಂಬಿಸಿಕೊಂಡ ಟ್ಯಾಂಕರ್‌ಗಳು ಆಂಬುಲೆನ್ಸ್ ರೀತಿ ಸೈರನ್‌ ಹಾಕಿಕೊಂಡು ವೇಗವಾಗಿ ಸಾಗಿ ಕೆರೆಗೆ ನೀರು ತುಂಬಿಸುತ್ತಿದ್ದವು. ಇದು ಎರಡು ತಿಂಗಳ ಕಾಲ ನಡೆಯಿತು’ ಎಂದು ಅಂದು ಮೇಯರ್‌ ಆಗಿದ್ದ ಬಸವರಾಜ ಯಾಲಕ್ಕಿ ಅವರು ನೆನಪು ಮಾಡಿಕೊಳ್ಳುತ್ತಾರೆ.ಸಂವೇದನಾಶೀಲ ಪತ್ರಕರ್ತರಾದ ಪಿ. ಸಾಯಿನಾಥ್‌ ಅವರು ‘ಇತ್ತೀಚಿನ ಭಾರತ’ದಲ್ಲಿ ಬರ ಅಂದ್ರೆ ಯಾರು, ಯಾರಿಗೆ ಇಷ್ಟ ಎನ್ನುವುದನ್ನು ನಿದರ್ಶನಗಳ ಸಹಿತ ನಿರೂಪಿಸಿದ್ದಾರೆ. ಆದರೆ, ಹಿಂದೆ ಬರದ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡುವ ಜನರು ಇದ್ದರು. ಪ್ರತಿ ಪೈಸೆಯೂ ಉದ್ದೇಶಿತ ಕಾರ್ಯಕ್ಕೆ ಖರ್ಚಾಗುತ್ತಿತ್ತು. ಪ್ರಾಮಾಣಿಕತೆ ಈಗಿನಷ್ಟು ತುಟ್ಟಿಯಾಗಿರಲಿಲ್ಲ.ವರ್ತಮಾನದ ಬರ...

ಅನ್ನ, ಆಹಾರಕ್ಕೆ ತೊಂದರೆ ಇಲ್ಲ. ಆದರೆ, ಜೀವಜಲದ್ದೇ ದೊಡ್ಡ ಚಿಂತೆ. ಕೊಡ ನೀರಿಗಾಗಿ ಅಲೆದಾಡಬೇಕು. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ರೈತರು ಅವುಗಳನ್ನು ಸಾಕಲೂ ಆಗದೆ, ಕಸಾಯಿಖಾನೆಗೆ ಮಾರಾಟ ಮಾಡಲೂ ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.1942 ರಲ್ಲಿಯೂ ಭೀಕರ ಬರ ಬಂದಿತ್ತು. ಜನರಿಗೆ ಗಂಜಿಗೂ ಗತಿ ಇರಲಿಲ್ಲ. ಆಗ ರಾಯಚೂರಿನ ಪುಂಡಲೀಕಪ್ಪನವರ ನೇತೃತ್ವದಲ್ಲಿ ಕೆಲವು ಹೋರಾಟಗಾರರು ಹೈದರಾಬಾದ್‌ ನಿಜಾಮರ ಬಳಿಗೆ  ಹೋದವರು–‘ಮಳೆ ಇಲ್ಲ, ಬೆಳೆ ಇಲ್ಲ. ಜೋಳ ಇಲ್ಲ. ಹೊಟ್ಟೆಗೆ ಏನು ಮಾಡಬೇಕು?’ ಎಂದು ಕೇಳಿದರು. ಆಗ ನಿಜಾಮ ‘ಅದಕ್ಕಾಗಿ ಏಕೆ ಅಳುತ್ತೀರಿ. ಜೋಳ ಇಲ್ಲದಿದ್ದರೆ ಏನಂತ, ಗೋಧಿ ರೊಟ್ಟಿ ತಿನ್ನಿ. ಎಣ್ಣೆ ಇಲ್ಲದಿದ್ದರೆ ತುಪ್ಪ ತಿನ್ನಿ’ ಎಂದಿದ್ದರಂತೆ!ಈ ಪ್ರಸಂಗ ರಾಮಣ್ಣ ಅವಳೆ ಅವರು ಬರೆದಿರುವ ‘ಸ್ವಾತಂತ್ರ್ಯ ಸೇನಾನಿ ಪುಂಡಲೀಕಪ್ಪ ಜ್ಞಾನಮೋಠೆ’ ಪುಸ್ತಕದಲ್ಲಿ ಉಲ್ಲೇಖವಿದೆ. ರಾಜಪ್ರಭುತ್ವದ ಕಾಲದಲ್ಲಿ ಪ್ರಜೆಗಳು ‘ಎಲ್ಲವೂ ನಮ್ಮ ಕರ್ಮ, ಅನುಭವಿಸಲೇಬೇಕು’ ಎಂದುಕೊಂಡು ಸುಮ್ಮನಾಗುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಕರ್ತವ್ಯಗಳ ಬಗ್ಗೆ ಜಾಣ ಮರೆವು ತೋರಿಸಿದರೂ ಹಕ್ಕುಗಳ ಬಗೆಗೆ ಜಾಗೃತರಾಗಿದ್ದಾರೆ.ವರ್ತಮಾನಕ್ಕೆ ಗತಕಾಲವನ್ನು ಬೆಸೆಯಬೇಕು. ಏಕೆಂದರೆ ಗತಕಾಲ ತಿಳಿಯದವರು ವರ್ತಮಾನದ ತಲ್ಲಣಗಳ ಬಗೆಗೆ ಆತಂಕಗೊಳ್ಳುವುದಿಲ್ಲ. ಹಳೆಯ ನೋವು, ಭಯಾನಕ ನೆನಪು, ಅವಮಾನ ಎಲ್ಲವೂ ತಮಾಷೆಯಂತೆ, ಹೆಚ್ಚೆಂದರೆ ಉತ್ಪ್ರೇಕ್ಷಿತ ಕತೆಯಂತೆ ಕೇಳಿಸಬಹುದು.ನಾವು ಗತಕಾಲದಿಂದಲೂ ಪಾಠ ಕಲಿಯುವುದು ಇರುತ್ತದೆ. ಗತಕಾಲದ ಅನನ್ಯ ನೆನಪುಗಳಿಂದ ಹುಟ್ಟುವ ವರ್ತಮಾನ ಸದೃಢವಾಗಿಯೂ, ಉತ್ತಮವಾಗಿಯೂ ಇರುತ್ತದೆ.ಎಲ್ಲರೂ ತಾವೇ ತಪ್ಪು ಮಾಡಿ ಅವುಗಳಿಂದ ಪಾಠ ಕಲಿಯುವಷ್ಟು ಬದುಕು ದೀರ್ಘವಾಗಿಲ್ಲ. ಗತಕಾಲದಿಂದ ಕಲಿಯುವುದೂ ಇರುತ್ತದೆ. ಗತಕಾಲದ ನೆನಪು ನಮ್ಮನ್ನು ಘಾಸಿಗೊಳಿಸಬಹುದು. ಆರ್ದ್ರಗೊಳಿಸಬಹುದು. ಉಲ್ಲಾಸಗೊಳಿಸಬಹುದು. ಉತ್ತೇಜಿಸಬಹುದು. ಸರಿ ದಾರಿ ತೋರಿಸಬಹುದು. ಎಚ್ಚರಿಸಬಹುದು. ವಿಸ್ಮಯಗೊಳಿಸಬಹುದು.ಯಾವುದೇ ಒಂದು ಕುಟುಂಬ ಚೂರು ರೊಟ್ಟಿಗಾಗಿ ಹಸಿವಿನಿಂದ ಪರಿತಪಿಸುವುದು. ಹೆಲಿಪ್ಯಾಡ್‌ ಆಗಿದ್ದ ಕೆರೆ ಇಂದಿಗೂ ಅದೇ ಸ್ಥಿತಿಯಲ್ಲೇ ಇರುವುದು. ರೈಲುಗಾಡಿಗಳು ಗುಳೆ ಹೋಗುವುದರಿಂದ ತುಂಬಿ ತುಳುಕಾಡುವುದು. ಟ್ಯಾಂಕರ್‌ಗಳು ಕುಡಿಯುವ ನೀರು ಹೊತ್ತು ರಭಸವಾಗಿ ಓಡಾಡುವುದು. ಜಾನುವಾರುಗಳು ಮೇವು ಇಲ್ಲದೆ ಕಸಾಯಿಖಾನೆ ಸೇರುವುದು–ಇಂಥ ಪರಿಸ್ಥಿತಿ ವರ್ತಮಾನದಲ್ಲೂ ಇದೆ ಎನ್ನುವುದಾದರೆ ನಾವು ಗತಕಾಲದಿಂದ ಏನನ್ನೂ ಪಾಠ ಕಲಿತಿಲ್ಲ ಅನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry