7

ಗಾರ್ಮೆಂಟ್ ಕಾರ್ಮಿಕರು ನುಡಿದ ಐ.ಟಿ. ಭವಿಷ್ಯ

ಎನ್.ಎ.ಎಂ. ಇಸ್ಮಾಯಿಲ್
Published:
Updated:

ಅದು ಹೊಸ ಸಹಸ್ರಮಾನದ ಮೊದಲ ವರ್ಷ. ಆಗಷ್ಟೇ ಒಡೆದು ಹೋಗಿದ್ದ ಡಾಟ್ ಕಾಮ್ ಗುಳ್ಳೆ ಭಾರತದ ಸಿಲಿಕಾನ್ ನಗರಿಯಲ್ಲಿ ನಿರಾಶೆಯ ಕಾರ್ಮೋಡಕ್ಕೆ ಕಾರಣವಾಗಿತ್ತು. ‘ಗುಲಾಬಿ ಚೀಟಿ’ ಅರ್ಥಾತ್ ‘ಪಿಂಕ್ ಸ್ಲಿಪ್’ ಅಥವಾ ‘ಇನ್ನು ಮುಂದೆ ಕೆಲಸಕ್ಕೆ ಬರುವುದು ಅಗತ್ಯವಿಲ್ಲ’ ಎಂದು ನೌಕರರಿಗೆ ತಿಳಿಸುವ ಪತ್ರದ ಕುರಿತ ಚರ್ಚೆ ತೀವ್ರವಾಗಿದ್ದ ಕಾಲವದು. ಅಮೆರಿಕದ ಆರ್ಥಿಕ ವರ್ಷ ಶುರುವಾದ ಜುಲೈ ತಿಂಗಳಲ್ಲಂತೂ ಗುಲಾಬಿ ಚೀಟಿಯ ಹಾವಳಿ ಇನ್ನಿಲ್ಲದಂತೆ ಏರಿತ್ತು. ಈ ಹೊತ್ತಿಗಾಗಲೇ ಕಾರ್ಮಿಕ ಸಂಘಟನೆ, ಸಾಮೂಹಿಕ ಚೌಕಾಶಿ ಮುಂತಾದ ಪದಗಳೆಲ್ಲವೂ ನಕಾರಾತ್ಮಕ ಅರ್ಥಗಳನ್ನು ಪಡೆದುಕೊಂಡು ಒಂದು ದಶಕ ತುಂಬಿದ್ದರಿಂದ ಐ.ಟಿ. ನೌಕರರು ಹೇಗೆ ‘ಗುಲಾಬಿ ಚೀಟಿ’ ಋತುವನ್ನು ‘ಸಕಾರಾತ್ಮಕವಾಗಿ’ ಎದುರಿಸಬೇಕೆಂಬ ಚರ್ಚೆ ಚಾಲನೆಯಲ್ಲಿತ್ತು.ಬೆಂಗಳೂರಿನಲ್ಲೂ ಉತ್ಪಾದನಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಗಳಿವೆ ಎಂಬುದನ್ನು ಸರ್ಕಾರವಷ್ಟೇ ಏಕೆ ಮಾಧ್ಯಮಗಳೂ ಮರೆತುಬಿಟ್ಟ ಆ ಹೊತ್ತಿನಲ್ಲಿ ಬೆಂಗಳೂರಿಗೆ ಬೆಂಗಳೂರೇ ಬೆಚ್ಚಿ ಬೀಳುವಂತೆ ಗಾರ್ಮೆಂಟ್ ಉದ್ದಿಮೆಯಲ್ಲಿ ದುಡಿಯುತ್ತಿದ್ದ 10,000ಕ್ಕೂ ಹೆಚ್ಚು ಮಹಿಳೆಯರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಬೀದಿಗಿಳಿದಿದ್ದರು. ಉದಾರೀಕರಣೋತ್ತರ ಕಾಲಘಟ್ಟದಲ್ಲಿ ಬೆಂಗಳೂರು ಕಂಡ ಮೊದಲ ಬಹುದೊಡ್ಡ ಕಾರ್ಮಿಕರ ಪ್ರತಿಭಟನೆ ಇದುವೇ ಇರಬಹುದೇನೋ. ಆಗಲೂ ಇದಕ್ಕೆ ನಾಯಕರಿರಲಿಲ್ಲ. ಆಗಲೂ ಪ್ರತಿಭಟನೆಗೆ ಕಾರಣವಾಗಿದ್ದು ಭವಿಷ್ಯ ನಿಧಿ ಹಣ ಹಿಂದೆಗೆದುಕೊಳ್ಳುವ ವಿಚಾರವೇ. ಸಂಚಾರ ಅಸ್ತವ್ಯಸ್ತವಾಯಿತು. ಪೊಲೀಸರು ಲಾಠಿ ಪ್ರಯೋಗಿಸಿ ಪ್ರತಿಭಟನೆ ಹಿಂಸಾತ್ಮಕವಾಗುವಂತೆ ಮಾಡಿದರು.ಮರುದಿನದ ಪತ್ರಿಕೆಗಳಲ್ಲಿ ಮಹಿಳೆಯರೇಕೆ ಬೀದಿಗಿಳಿದರು, ಪೊಲೀಸರಿಗೆ ಕ್ರೂರವಾಗಿ ವರ್ತಿಸುವ ಅಗತ್ಯವೇನಿತ್ತು ಎಂಬುದಕ್ಕಿಂತ ಹೆಚ್ಚಾಗಿ ಸಂಚಾರದ ಅಡಚಣೆಯ, ಕೆಲವು ‘ಹಿತಾಸಕ್ತಿ’ಗಳು ಪ್ರತಿಭಟನೆಯನ್ನು ಹೇಗೆ ಹಿಂಸಾಚಾರಕ್ಕೆ ತಿರುಗಿಸಿದವು ಎಂಬುದೇ ಹೆಚ್ಚು ಚರ್ಚೆಯಾಯಿತು. ಇದೆಲ್ಲಾ ಸಂಭವಿಸಿ ಹದಿನೈದು ವರ್ಷ ತುಂಬುವುದಕ್ಕೆ ಇನ್ನು ಮೂರು ತಿಂಗಳು ಬಾಕಿಯಿರುವಾಗ ಮತ್ತೊಮ್ಮೆ ಭವಿಷ್ಯ ನಿಧಿಯ ಹಣವನ್ನು ಹಿಂದೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿದ ನಿಯಮದ ವಿರುದ್ಧ ಗಾರ್ಮೆಂಟ್ ಕಾರ್ಮಿಕರು ಪ್ರತಿಭಟಿಸಿದರು. ಈ ಬಾರಿಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರ ಸಂಖ್ಯೆ ಒಂದು ಲಕ್ಷ ಮೀರಿತ್ತು. ಆಗ ಒಂದೇ ದಿನಕ್ಕೆ ಸೀಮಿತವಾಗಿದ್ದ ಪ್ರತಿಭಟನೆಯ ಬಿಸಿ ಈ ಬಾರಿ ಎರಡನೇ ದಿನಕ್ಕೂ ವ್ಯಾಪಿಸಿತ್ತು.ಪೀಣ್ಯ ಕೈಗಾರಿಕಾ ಪ್ರದೇಶದ ಜತೆಗೆ ಬೆಂಗಳೂರಿನೊಳಕ್ಕೆ ಬರುವ ಎಲ್ಲಾ ಮುಖ್ಯ ರಸ್ತೆಗಳಲ್ಲಿಯೂ ಸಂಚಾರ ಅಸ್ತವ್ಯಸ್ತವಾಯಿತು. ಪೊಲೀಸರು 15 ವರ್ಷಗಳ ಹಿಂದೆ ನಡೆದುಕೊಂಡಂತೆಯೇ ಈಗಲೂ ವರ್ತಿಸಿದರು. ಪ್ರತಿಭಟನೆಗೆ ಹಿಂಸಾತ್ಮಕ ಆಯಾಮ ದೊರೆಯಿತು. ಅದೃಷ್ಟವಶಾತ್ ಈ ಬಾರಿ ಗಾರ್ಮೆಂಟ್ ಉದ್ದಿಮೆಯಲ್ಲಿ ದುಡಿಯುತ್ತಿರುವ ಮಹಿಳೆಯರ ಕಷ್ಟಗಳ ಕುರಿತೂ ಮಾಧ್ಯಮಗಳು ಅಷ್ಟಿಷ್ಟು ಬೆಳಕು ಚೆಲ್ಲಿದವು. ಆದರೂ ಸಂಚಾರಕ್ಕೆ ಅಸ್ತವ್ಯಸ್ತಗೊಂಡದ್ದರಿಂದ ‘ಟೆಕ್ಕಿ’ಗಳಿಗೆ ಆದ ತೊಂದರೆಯ ಕುರಿತ ಚರ್ಚೆಯೂ ಅಷ್ಟೇ ಪ್ರಮುಖವಾಗಿ ನಡೆಯಿತು. ಬೆಂಗಳೂರಿನಲ್ಲಿ ಏನು ಸಂಭವಿಸಿದರೂ ಅದನ್ನು ಟೆಕ್ಕಿಗಳ ಹಿತದ ಸುತ್ತಲೇ ಚರ್ಚಿಸಲಾಗುತ್ತದೆ ಎಂಬುದಕ್ಕೆ ಈ ಪ್ರಕರಣವೂ ಸಾಕ್ಷಿಯಾಯಿತು. ಬೆಂಗಳೂರು ಭಾರತದ ಐ.ಟಿ.ನಗರ ಎಂಬುದರಲ್ಲಿ ಸಂಶಯವೇನೂ ಇಲ್ಲ. ಭಾರತದಲ್ಲಿ ಒಟ್ಟು ಐ.ಟಿ. ಉದ್ಯೋಗಿಗಳಲ್ಲಿ ಶೇಕಡಾ 35ರಷ್ಟು ಬೆಂಗಳೂರಿನಲ್ಲೇ ಇದ್ದಾರೆ.ಭಾರತದ ಒಟ್ಟು ಐ.ಟಿ. ರಫ್ತಿನ ಶೇಕಡಾ 40ರಷ್ಟನ್ನು ಬೆಂಗಳೂರು ಪೂರೈಸುತ್ತದೆ. ಈ ಉದ್ದಿಮೆಯಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ತೊಡಗಿಸಿಕೊಂಡಿರುವವರ ಸಂಖ್ಯೆ ಸುಮಾರು ಎಂಟರಿಂದ ಒಂಬತ್ತು ಲಕ್ಷ ಎಂಬ ಅಂದಾಜಿದೆ. ಇಂಥದ್ದೇ ಸಂಬಂಧಗಳೂ ಬೆಂಗಳೂರಿನ ಗಾರ್ಮೆಂಟ್ ಉದ್ಯಮಕ್ಕೂ ಇದೆ. ಬೆಂಗಳೂರಿನಲ್ಲಿರುವ ಗಾರ್ಮೆಂಟ್ ಉದ್ಯಮದಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಕಾರ್ಮಿಕರ ಸಂಖ್ಯೆಯೂ ಹೆಚ್ಚು ಕಡಿಮೆ ಐ.ಟಿ. ಉದ್ಯೋಗಿಗಳಷ್ಟೇ ಇದೆ. ಸುಮಾರು 9000 ಕೋಟಿ ರೂಪಾಯಿಗಳಷ್ಟು ಮೊತ್ತದ ಸಿದ್ದ ಉಡುಪುಗಳನ್ನು ಬೆಂಗಳೂರು ರಫ್ತು ಮಾಡುತ್ತದೆ. ಐ.ಟಿ ಉದ್ಯಮದಂತೆಯೇ ಇದಕ್ಕೂ ವಿದೇಶಿ ವಿನಿಮಯ ದರಕ್ಕೂ ಹತ್ತಿರದ ಸಂಬಂಧವಿದೆ. ಐ.ಟಿ. ಉದ್ಯಮದಂತೆಯೇ ಇದೂ ಕೂಡಾ ಶೇಕಡಾ 3 ರಿಂದ 7ರ ತನಕದ ದರದಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ.ಸೇವಾ ಕ್ಷೇತ್ರದ ಉದ್ಯಮವಾಗಿರುವ ಐ.ಟಿ.ಯ ಗಳಿಕೆಯ ಪ್ರಮಾಣ ಬಹಳ ದೊಡ್ಡದಿದೆ. ಉನ್ನತ ಶಿಕ್ಷಣ ಪಡೆದ ವಿಶೇಷ ಕೌಶಲವಿರುವ ನೌಕರರು ಬೇಕಿರುವ ಈ ಉದ್ಯಮದ ಗಳಿಕೆಯ ಪ್ರಮಾಣ ಹೆಚ್ಚಾಗಿರುವುದು ಸಹಜ. ಎಲ್ಲದಕ್ಕಿಂತ ಹೆಚ್ಚಾಗಿ ಈ ಉದ್ಯಮದ ಸ್ವರೂಪವೇ ಜಾಗತಿಕವಾದದ್ದು. ಆದ್ದರಿಂದ ಇದಕ್ಕೆ ಬೇಕಿರುವ ಮಾನವ ಸಂಪನ್ಮೂಲವನ್ನು ಪಡೆದುಕೊಳ್ಳುವ ಕ್ರಿಯೆ ಸಂಪೂರ್ಣ ಜಾಗತಿಕವಲ್ಲವಾದರೂ ಬಹುತೇಕ ಸ್ಥಳೀಯ ಎನ್ನುವುದಕ್ಕೂ ಸಾಧ್ಯವಿಲ್ಲ. ಆದರೆ ಗಾರ್ಮೆಂಟ್ ಉದ್ಯಮ ಸ್ಥಳೀಯರಿಗೆ ಒದಗಿಸಿರುವ ಉದ್ಯೋಗದ ಪ್ರಮಾಣ ಬಹಳ ದೊಡ್ಡದು. ಭಾರತ ಸರ್ಕಾರದಿಂದ ಆರಂಭಿಸಿ ಕರ್ನಾಟಕ ಸರ್ಕಾರದ ತನಕದ ಎಲ್ಲರೂ ತಮ್ಮ ಆಡಳಿತ ನೀತಿಗಳನ್ನು ರೂಪಿಸುವಾಗ ಐ.ಟಿ. ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡಂತೆ ಅಷ್ಟೇ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಸಿದ್ದ ಉಡುಪು ಕ್ಷೇತ್ರವನ್ನು ಗಮನಿಸುವುದಿಲ್ಲ.ಕಳೆದ ಒಂದು ವರ್ಷದ ಅವಧಿಯಲ್ಲಿ ಅಂತರ್ಜಾಲಾಧಾರಿತ ವೇದಿಕೆಗಳನ್ನು ಬಳಸಿ ವ್ಯವಹಾರ ನಡೆಸುವ ಓಲಾ, ಉಬರ್‌ನಂಥ ಟ್ಯಾಕ್ಸಿ ಸೇವೆಗಳು, ಅಮೆಝಾನ್, ಫ್ಲಿಪ್‌ಕಾರ್ಟ್‌ನಂಥ ಮಾರಾಟ ಸೇವೆಗಳನ್ನು ನಿಯಂತ್ರಿಸುವುದಕ್ಕೆ ಸರ್ಕಾರ ಮುಂದಾದಾಗ ನಡೆದ ಚರ್ಚೆಯ ಅರ್ಧದಷ್ಟೂ ಗಾರ್ಮೆಂಟ್ ಕಾರ್ಮಿಕ ಕಷ್ಟಗಳ ಕುರಿತ ನಡೆದಿಲ್ಲ. ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿಯೂ ಗಾರ್ಮೆಂಟ್ ಉದ್ದಿಮೆಗಳು ಘಟಕಗಳನ್ನು ಹೊಂದಿದ್ದರೂ ಒಂದು ರಸ್ತೆ ಅಥವಾ ಫ್ಲೈ ಓವರ್ ನಿರ್ಮಿಸುವಾಗ ಸರ್ಕಾರ ಅಥವಾ ಬೆಂಗಳೂರು ಮಹಾನಗರ ಪಾಲಿಕೆ ಈ ಉದ್ದಿಮೆಗಳ ನೌಕರರಿಗೆ ಸಂಚಾರಕ್ಕೆ ಸಹಾಯವಾಗುತ್ತದೆ ಎಂದು ತೋರಿಕೆಗೂ ಹೇಳಿಲ್ಲ. ಎಲೆಕ್ಟ್ರಾನಿಕ್ ಸಿಟಿಯ ತನಕದ ಅತಿ ಉದ್ದದ ಎತ್ತರಿಸಿದ ರಸ್ತೆಯನ್ನು ನಿರ್ಮಿಸಿದಾಗಲೂ ಹೇಳಿದ್ದು ‘ಐ.ಟಿ. ಉದ್ದಿಮೆಯ ಅನುಕೂಲಕ್ಕೆ’ ಎಂದೇ.ಈ ಫ್ಲೈ ಓವರ್‌ಗಳ ಅಡಿಯಲ್ಲಿ, ವಿಸ್ತರಿಸಿದ ರಸ್ತೆಗಳ ಬದಿಯಲ್ಲಿ ಬಸ್ಸುಗಳನ್ನು ಇಳಿದು ತಮ್ಮ ಫ್ಯಾಕ್ಟರಿಗಳಿಗೆ ಹೋಗುತ್ತಿದ್ದ ಮಹಿಳೆಯರು ಒಂದು ದಿನ ರಸ್ತೆಯಲ್ಲೇ ನಿಂತರೆ ಏನಾಗಬಹುದು ಎಂಬುದು ಗಾರ್ಮೆಂಟ್ ನೌಕರರ ಎರಡು ದಿನಗಳ ಪ್ರತಿಭಟನೆ ತೋರಿಸಿಕೊಟ್ಟಿತು. ಆಗಲೂ ಅದನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿರುವುದು ‘ಟೆಕ್ಕಿಗಳಿಗೆ ಆದ ಕಷ್ಟ’ದ ಪರಿಭಾಷೆಯಲ್ಲಿಯೇ. ಹೀಗೆ ಅರ್ಥ ಮಾಡಿಕೊಳ್ಳುವುದರಲ್ಲಿ ಸರ್ಕಾರಗಳಿಗೆ ಸುಖವಿದೆ. ಮೊನ್ನೆ ಗಾರ್ಮೆಂಟ್ ಉದ್ಯೋಗಿಗಳು ಭವಿಷ್ಯ ನಿಧಿಯ ವಿಚಾರದಲ್ಲಿ ಪ್ರತಿಭಟನೆಗೆ ಇಳಿದಾಗ ಮುಖ್ಯಮಂತ್ರಿಗಳಾದಿಯಾಗಿ ಹೇಳಿದ್ದ ‘ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ’. ಕೇಂದ್ರ ಸರ್ಕಾರವೂ ಅಷ್ಟೇ ‘ಕಾನೂನು ಸುವ್ಯವಸ್ಥೆ ರಾಜ್ಯದ ಹೊಣೆ’ ಎಂದಿತು. ಇವರೆಡೂ ಸರ್ಕಾರಗಳು ಮುಚ್ಚಿಟ್ಟ ವಿಚಾರವೊಂದಿದೆ.ಅದು ಕಾರ್ಮಿಕರಿಗೆ ಸಂಬಂಧಿಸಿದ್ದು. ಇದು ಜಂಟಿ ಪಟ್ಟಿಯಲ್ಲಿರುವ ಸಂಗತಿ. ಭವಿಷ್ಯ ನಿಧಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿರಬಹುದು. ಆದರೆ ಕಾರ್ಮಿಕರ ಹಕ್ಕುಗಳನ್ನು ಕಾಪಾಡುವ ಹೊಣೆಗಾರಿಕೆ ರಾಜ್ಯ ಸರ್ಕಾರದ್ದು. ಅಂತರ ರಾಷ್ಟ್ರೀಯ ಮಟ್ಟದ ಸಂಘಟನೆಗಳ ವರದಿಗಳೆಲ್ಲವೂ ಬೆಂಗಳೂರಿನ ಗಾರ್ಮೆಂಟ್ ಉದ್ಯೋಗಿಗಳ ಕಷ್ಟದ ಕುರಿತು ಹೇಳಿದ್ದರೂ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಏನು ಮಾಡಿದೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳ ಉತ್ತರವೇನು? ಗಾರ್ಮೆಂಟ್ ಕಾರ್ಮಿಕರು ತಮ್ಮ ಪ್ರತಿಭಟನೆಯ ಮೂಲಕ ಮುಂದಿಟ್ಟ ಭವಿಷ್ಯ ನಿಧಿಯ ಪ್ರಶ್ನೆ ಅವರದ್ದಷ್ಟೇ ಆಗಿರಲಿಲ್ಲ. ಇದು ಐ.ಟಿ. ಕ್ಷೇತ್ರದ ಉದ್ಯೋಗಿಗಳೂ ಸೇರಿದಂತೆ ಇಡೀ ಭಾರತದ ಸಂಘಟಿತ ಕ್ಷೇತ್ರದ ಶ್ರಮಿಕರದ್ದು.ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ‘ಗುಲಾಬಿ ಚೀಟಿ’ ಪಡೆಯುವ ಐ.ಟಿ. ಉದ್ಯೋಗಿಗೂ ಈ ಹಣವೇನೂ ಸಣ್ಣ ಮೊತ್ತವಲ್ಲ. ಆದರೆ ಇದು ಗಾರ್ಮೆಂಟ್ ಕಾರ್ಮಿಕರಂತೆ ಸಾವು–ಬದುಕಿನ ಪ್ರಶ್ನೆಯಲ್ಲ. ಕೋಟ್ಯಂತರ ಕಾರ್ಮಿಕರ ಪಾಲಿರುವ ಭವಿಷ್ಯ ನಿಧಿಯ ಕುರಿತಂತೆ ಒಂದು ನಿರ್ಧಾರ ಕೈಗೊಳ್ಳುವಾಗ ಕೇಂದ್ರ ಸರ್ಕಾರ ತೋರಿಕೆಗಾಗಿಯೂ ಪಾಲುದಾರರ ಜೊತೆಗೆ ಚರ್ಚಿಸಲಿಲ್ಲ. ಇದು ನಮ್ಮ ಸರ್ಕಾರಗಳ ಕಾರ್ಮಿಕ ನೀತಿಗಳು ಹೇಗಿರುತ್ತವೆ ಎಂಬುದನ್ನು ಹೇಳುತ್ತಿದೆ. ಮೊನ್ನೆ ಸಂಚಾರಕ್ಕೆ ಅಡ್ಡಿ ಪಡಿಸಿದ ಮಹಿಳೆಯರು ಕೆಲಸ ಮಾಡುವ ಉದ್ಯಮಗಳು ಫಿಲಿಪೈನ್ಸ್, ಬಾಂಗ್ಲಾದೇಶ, ಶ್ರೀಲಂಕಾದಂಥ ದೇಶಗಳಿಂದ ಸ್ಪರ್ಧೆ ಎದುರಿಸುತ್ತಿವೆ.ಇದೇ ಸಮಸ್ಯೆ ಐ.ಟಿ.ಕ್ಷೇತ್ರದ ಹೊರಗುತ್ತಿಗೆ ಉದ್ಯಮಗಳಿಗೂ ಇವೆ. ಇವೇ ದೇಶಗಳು ಇನ್ನೂ ಅಗ್ಗವಾಗಿ ಸೇವೆ ನೀಡಲು ಮುಂದಾಗುತ್ತಿವೆ. ಬೆಂಗಳೂರಿನಂಥ ನಗರಗಳ ‘ಇಂಗ್ಲಿಷ್ ಬಲ’ಕ್ಕೆ ಸವಾಲೊಡ್ಡುವ ರೀತಿಯಲ್ಲಿ ಇವು ಮುಂದಕ್ಕೆ ಸಾಗುತ್ತಿವೆ. 2001ರಲ್ಲಿ ‘ಗುಲಾಬಿ ಚೀಟಿ’ಗಳನ್ನು ಸಕಾರಾತ್ಮಕವಾಗಿ ಹೇಗೆ ನಿರ್ವಹಿಸಬಹುದು ಎಂಬ ಸಲಹೆಗಳನ್ನು ನೀಡಲು ಸಾಧ್ಯವಿದ್ದ ವಾತಾವರಣವಿತ್ತು. 2016ರಲ್ಲಿ ಇದು ಸಂಭವಿಸಿದರೆ ಗಾರ್ಮೆಂಟ್ ನೌಕರರಂತೆಯೇ ಬೀದಿಗಿಳಿದು ಪ್ರತಿಭಟಿಸುವಷ್ಟು ಹತಾಶ ಸ್ಥಿತಿಯಲ್ಲಿರುವ ಐ.ಟಿ. ಉದ್ಯೋಗಿಗಳು ಈಗ ಬೆಂಗಳೂರಿನಲ್ಲಿದ್ದಾರೆ.ಸಿಐಟಿಗೆ ಸೆಡ್ಡು ಹೊಡೆಯಲು ಮುಂದಾಗುತ್ತಿದ್ದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಸಿಇಟಿಯ ಮೂಲಕವಾದರೂ ಸರಿ ತಮ್ಮ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲಿ ಎಂದು ಹಾರೈಸುತ್ತಿರುವ ಕಾಲವಿದು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಹೊರಗುತ್ತಿಗೆಯ ಕುರಿತ ಆಡುವ ಒಂದೊಂದು ಮಾತುಗಳೂ ಐ.ಟಿ. ಉದ್ಯಮದ ಎದೆಯಲ್ಲಿ ಭತ್ತ ಕುಟ್ಟುವ ಯುಗವಿದು. ಇದೆಲ್ಲದರ ಒಟ್ಟರ್ಥ ಬಹಳ ಸರಳ. ಮೊನ್ನೆ ಬಸ್ ಇಳಿದು ಕಾರ್ಖಾನೆಗಳ ಒಳಕ್ಕೆ ಹೋಗದೆ ರಸ್ತೆಯಲ್ಲೇ ನಿಂತ ಮಹಿಳೆಯರು ನೀಡುತ್ತಿರುವ ಸಂದೇಶವನ್ನು ಫ್ಲೈ ಓವರ್‌ಗಳ ಮೇಲೆ ವೇಗವಾಗಿ ಚಲಿಸುವ ಕ್ಯಾಬ್‌ಗಳಲ್ಲಿ ಕಚೇರಿ ತಲುಪುವವರು ಅರ್ಥ ಮಾಡಿಕೊಳ್ಳಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry