7

ಚಕ್ರವ್ಯೂಹದಲ್ಲಿ ಮಾಧ್ಯಮ ಸ್ವಾತಂತ್ರ್ಯ

Published:
Updated:
ಚಕ್ರವ್ಯೂಹದಲ್ಲಿ ಮಾಧ್ಯಮ ಸ್ವಾತಂತ್ರ್ಯ

ಪತ್ರಕರ್ತರ ಧ್ವನಿ ಹತ್ತಿಕ್ಕುವ ಯತ್ನ ಅಧಿಕಾರಸ್ಥರ ಅಧಿಕಾರವನ್ನು ಬಲಗೊಳಿಸುವುದಿಲ್ಲ; ಕ್ರಮೇಣ ನಾಶ ಮಾಡುತ್ತದೆ

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಇಂದು (ಮೇ 3).  ಪತ್ರಕರ್ತರ ಸ್ಥಿತಿಗತಿಯ ಬಗ್ಗೆ ಗಮನ ಸೆಳೆಯುವಂತಹ ಮುಖ್ಯವಾದ ದಿನ. ವಿಶ್ವದಾದ್ಯಂತ ಪತ್ರಿಕಾ ಸ್ವಾತಂತ್ರ್ಯಕ್ಕೆ ಮುತ್ತಿಗೆ ಹಾಕಿರುವಂತಹ ಪರಿಸ್ಥಿತಿ ಇಂದಿನದು. ಕಳೆದ ವಾರವಷ್ಟೇ  ಬಾಂಗ್ಲಾದೇಶದಲ್ಲಿ, ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ  ಮ್ಯಾಗಜೀನ್ ಒಂದರ ಸಂಪಾದಕನ ಹತ್ಯೆಯಾಗಿದೆ.‘ಮಾತೆಂಬುದು ಜ್ಯೋತಿರ್ಲಿಂಗ’ ಎಂಬ ಸ್ಥಿತಿ ಇಲ್ಲ ಈಗ. ಮಾತನಾಡುವವರನ್ನು ದುರಂತಮಯ ರೀತಿಯಲ್ಲಿ ಸುಮ್ಮನಾಗಿಸುವುದನ್ನು ಕಾಣುತ್ತಿದ್ದೇವೆ. ನೆರೆಯ ನೇಪಾಳದಲ್ಲಿ ‘ಹಿಮಾಲ್ ’ಪತ್ರಿಕೆ ಸಂಪಾದಕ ಹಾಗೂ ನಾಗರಿಕ ಹಕ್ಕುಗಳ ಕಾರ್ಯಕರ್ತ ಕನಕ ಮಣಿದೀಕ್ಷಿತ್ ಅವರನ್ನು ಭ್ರಷ್ಟಾಚಾರ ವಿರೋಧಿ ಪಡೆ ಇತ್ತೀಚೆಗೆ ಬಂಧಿಸಿದೆ.

ಮೆಕ್ಸಿಕೊದಲ್ಲಿ, ಕ್ರಿಮಿನಲ್ ಗುಂಪುಗಳು ಅಥವಾ ಇಂತಹ ಸಂಚಿನಲ್ಲಿ ಭಾಗಿಯಾಗುವ ಸರ್ಕಾರಿ ಅಧಿಕಾರಿಗಳಿಂದಲೇ ಪತ್ರಕರ್ತರು  ಹತ್ಯೆಯಾಗುತ್ತಿದ್ದಾರೆ. ಇಂತಹ ಪ್ರಕರಣಗಳಿಗೆ ಯಾವುದೇ  ಶಿಕ್ಷಾ ಭಯ ಇಲ್ಲ. ದಕ್ಷಿಣ ಆಫ್ರಿಕಾದಲ್ಲಿ ರಾಷ್ಟ್ರೀಯ ಭದ್ರತೆ ಬಗ್ಗೆ ಹೊಸ ಮಸೂದೆ ಮಂಡನೆಯಾಗುತ್ತಿದೆ. ಈ ಪ್ರಕಾರ, ವಿಷಲ್‌ಬ್ಲೋವರ್ಸ್‌ಗಳನ್ನು ದಶಕಗಳ ಕಾಲ ಜೈಲಿಗೆ ತಳ್ಳಲು ಅವಕಾಶ ಇರುತ್ತದೆ.ವರ್ಣಭೇದ ನೀತಿ ಆಡಳಿತದ ವಿರುದ್ಧ ಬಂಡೆದ್ದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ  ರಾಷ್ಟ್ರದಲ್ಲಿ ಇಂತಹದೊಂದು ಶಾಸನ ಜಾರಿಗೊಳಿಸಲಾಗುತ್ತಿದೆ ಎಂಬುದೇ ವಿಪರ್ಯಾಸ. ಟರ್ಕಿಯಲ್ಲಿ ವೃತ್ತಪತ್ರಿಕೆಗಳ ಸಂಪಾದಕರ ಬಂಧನಗಳು ಆತಂಕಕಾರಿ.

ಟ್ಯುನೀಷಿಯಾದಲ್ಲಿ ಮಾಧ್ಯಮದ ಮುಖ್ಯ ಶತ್ರು ಸರ್ವಾಧಿಕಾರಿಯ ದಬ್ಬಾಳಿಕೆಯಲ್ಲ, ಮಾನನಷ್ಟ ಮೊಕದ್ದಮೆಗಳು. ಮಾನನಷ್ಟ ಮೊಕದ್ದಮೆಗಳನ್ನು ಕ್ರಿಮಿನಲ್ ಅಪರಾಧವಾಗಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಭದ್ರತೆಗೆ ಬೆದರಿಕೆ ಒಡ್ಡುವ ಸಂಗತಿಗಳು ಯಾವುವು ಎಂಬ ಬಗ್ಗೆ ಸ್ಪಷ್ಟ ವಿವರಣೆಗಳನ್ನು ಸಾಮಾನ್ಯವಾಗಿ ನೀಡುವುದಿಲ್ಲ. ಈಗ ಆ ಬೆದರಿಕೆಗಳ ನೆಪದಲ್ಲಿ ಫ್ರಾನ್ಸ್, ಬೆಲ್ಜಿಯಂ ಮತ್ತು ಇತರೆಡೆಗಳಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧಗಳನ್ನು ಹೇರಲು ಯತ್ನಿಸಲಾಗುತ್ತಿದೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿ ಬಿಂಬಿತವಾಗಿರುವ ಡೊನಾಲ್ಡ್ ಟ್ರಂಪ್ ಅವರೂ ಮಾನನಷ್ಟ ಮೊಕದ್ದಮೆಗೆ ಬದಲಾವಣೆ ತಂದು ಮಾಧ್ಯಮಗಳ ಮೇಲೆ ಹಿಡಿತ ಸಾಧಿಸುವ ಮಾತುಗಳನ್ನಾಡಿದ್ದಾರೆ.ಪತ್ರಿಕಾ ಸ್ವಾತಂತ್ರ್ಯ ಆತಂಕಕಾರಿಯಾಗಿ ಇಳಿಮುಖವಾಗುತ್ತಿದೆ ಎಂಬುದು 2016ರ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ ವರದಿಯಿಂದ ವ್ಯಕ್ತವಾದ ಅಂಶ. ಪ್ಯಾರಿಸ್ ಮೂಲದ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಫ್ರೆಂಚ್ ಸಂಕ್ಷಿಪ್ತ ರೂಪವಾಗಿ ಆರ್ಎಸ್ಎಫ್ ಎಂದೂ ಕರೆಯಲಾಗುತ್ತದೆ) ಈ ವರದಿಯನ್ನು ಕಳೆದ ವಾರ ಬಿಡುಗಡೆ ಮಾಡಿದೆ.ಹೆಚ್ಚುತ್ತಿರುವ ನಿರಂಕುಶಾಧಿಕಾರ, ಸರ್ಕಾರಿ ಮಾಧ್ಯಮಗಳ ಮೇಲೆ ಬಿಗಿಯಾದ ಸರ್ಕಾರದ ನಿಯಂತ್ರಣ, ಯುದ್ಧ ಪೀಡಿತ ರಾಷ್ಟ್ರಗಳಲ್ಲಿ ಕುಸಿಯುತ್ತಿರುವ ಭದ್ರತಾ ಪರಿಸ್ಥಿತಿ, ಭಯೋತ್ಪಾದನೆ ಇತ್ಯಾದಿಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಮಾಧ್ಯಮ ಸ್ವಾತಂತ್ರ್ಯದಲ್ಲಿ ವಿಶ್ವದಾದ್ಯಂತ ಶೇ 13.6ರಷ್ಟು ಕುಸಿತ ಕಂಡುಬಂದಿದೆ ಎಂಬುದು ಈ ವರದಿಯ ಸಾರ.1992ರಿಂದ ಜಗತ್ತಿನಲ್ಲಿ 1,189 ಪತ್ರಕರ್ತರು ಹತ್ಯೆಯಾಗಿದ್ದಾರೆ ಎನ್ನುತ್ತದೆ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ). ಹತ್ಯೆಯಾದ ಈ ಪತ್ರಕರ್ತರು ಭ್ರಷ್ಟಾಚಾರ, ಯುದ್ಧ, ರಾಜಕೀಯ  ಅಥವಾ ಮಾನವ ಹಕ್ಕುಗಳ ಕಾಳಜಿಗಳ ಕುರಿತು ವರದಿ ಮಾಡುತ್ತಿದ್ದರು.ಇಂತಹ ಹತ್ಯೆಯ ಅಪಾಯ ಇರುವ ದೇಶಗಳಲ್ಲಿ ಹೆಚ್ಚಿನವು ಮಧ್ಯಪ್ರಾಚ್ಯ ಹಾಗೂ ಸಂಘರ್ಷಮಯ ಆಫ್ರಿಕಾಗೆ ಸೇರಿದವು. ಈ ಪಟ್ಟಿಯಲ್ಲಿ ಇರಾಕ್, ಸಿರಿಯಾ, ಆಲ್ಜೀರಿಯ, ಸೊಮಾಲಿಯ ಹಾಗೂ ಪಾಕಿಸ್ತಾನಗಳಿವೆ. ಆದರೆ, ಈಗ ಭಾರತ ಸೇರಿದಂತೆ ಫಿಲಿಪ್ಪೀನ್ಸ್, ರಷ್ಯಾ, ಕೊಲಂಬಿಯ, ಬ್ರೆಜಿಲ್ ಹಾಗೂ ಮೆಕ್ಸಿಕೊಗಳು ಸೇರ್ಪಡೆಯಾಗಿರುವುದು ಈ ಪಿಡುಗು ಜಾಗತಿಕವಾಗಿ ವ್ಯಾಪಿಸುತ್ತಿರುವುದಕ್ಕೆ ಸಾಕ್ಷಿ. ಸಿಪಿಜೆ ಅಂಕಿ ಅಂಶಗಳ ಪ್ರಕಾರ, 1992ರಿಂದ ಈವರೆಗೆ ಭಾರತದಲ್ಲಿ ಹತ್ಯೆಯಾದ ಪತ್ರಕರ್ತರ ಸಂಖ್ಯೆ 38.ಸುತ್ತಲ ಜಗತ್ತಿನ ಈ ವಿದ್ಯಮಾನಗಳನ್ನು ಗಮನಿಸುತ್ತಿದ್ದಲ್ಲಿ ಕಳೆದ ಶತಮಾನದಲ್ಲಿ ಫ್ರ್ಯಾಂಜ್ ಕಾಫ್ಕಾ ಜರ್ಮನ್ ಭಾಷೆಯಲ್ಲಿ ಬರೆದ ‘ದಿ ಟ್ರಯಲ್’ ಕಾದಂಬರಿ ನೆನಪಾಗುತ್ತದೆ.ಸರ್ವಾಧಿಕಾರದ ಸಮಾಜ ಹಾಗೂ ಅಧಿಕಾರಶಾಹಿ ಕ್ರೌರ್ಯದ ಚಕ್ರವ್ಯೂಹದಲ್ಲಿ ವ್ಯಕ್ತಿಯ ಅಸಂಗತ ಅನುಭವಗಳ ಸ್ಥಿತಿಯನ್ನು ಕಾಫ್ಕಾಯೆಸ್ಕ್ (Kafkaesqe) ಎಂದು ಕರೆಯುವಷ್ಟರ ಮಟ್ಟಿಗೆ ಈ ಕಾದಂಬರಿ ಕಟ್ಟಿಕೊಡುವ ಜಗತ್ತು  ತೀವ್ರವಾದದ್ದು.

ಕಾರಣವಿಲ್ಲದೆ ಬಂಧಿತನಾಗುವ ಜೋಸೆಫ್ ಕೆ.ನನ್ನು ಕತ್ತಿಯೊಂದರಲ್ಲಿ ಎದೆಗೆ ಚುಚ್ಚಿ ಸಾಯಿಸಲಾಗುತ್ತದೆ. ‘ನಾಯಿಯಂತೆ’ ಎಂದು ಗೊಣಗಿಕೊಂಡು ಆತ ಸಾಯುತ್ತಾನೆ. ಮಾಡದೇ ಇರುವ ಅಪರಾಧಕ್ಕಾಗಿ ಸಾವಿನ ಶಿಕ್ಷೆಗೆ ಗುರಿಯಾಗುವಂತಹ ಈ ಅಸಂಗತತೆಯ ಬಿಕ್ಕಟ್ಟುಗಳು ಇಂದಿನ ಆಧುನಿಕೋತ್ತರ ಬದುಕಿನಲ್ಲಿ ರೂಪಕವಾಗಿ ಕಾಡುತ್ತವೆ.ಪತ್ರಕರ್ತರ ಹತ್ಯೆಗಳಿಗೆ ಶಿಕ್ಷೆಗಳಾಗುವುದು ಕಡಿಮೆ. ಇಂತಹ ಸಂದರ್ಭದಲ್ಲಿ ಕಳೆದ ಸೋಮವಾರ ಡೇನಿಯಲ್ ಪರ್ಲ್ ಹತ್ಯೆಯ ಶಂಕಿತ ಕೊಲೆಗಾರನನ್ನು ಕರಾಚಿಯಲ್ಲಿ ಬಂಧಿಸಿರುವುದು ಉತ್ತಮ ಬೆಳವಣಿಗೆ ಎನ್ನಲೇಬೇಕು. ‘ವಾಲ್ ಸ್ಟ್ರೀಟ್ ಜರ್ನಲ್’ನ ದಕ್ಷಿಣ ಏಷ್ಯಾ ಬ್ಯೂರೊ ಮುಖ್ಯಸ್ಥರಾಗಿದ್ದ ಡೇನಿಯಲ್ ಪರ್ಲ್ 2002ರಲ್ಲಿ ಹತ್ಯೆಯಾಗಿದ್ದು, ತಮ್ಮ ಪಾಡಿಗೆ ತಮ್ಮ ಕೆಲಸವನ್ನು ಮಾಡುವ ಮಾಧ್ಯಮ ವೃತ್ತಿಪರರು ಹತ್ಯೆಗೆ ಗುರಿಯಾಗುವುದರ ಸಂಕೇತವಾಗಿದ್ದಾರೆ.ಈ ಹತ್ಯೆ ಪ್ರಕರಣದಲ್ಲಿ ನಾಲ್ವರಿಗೆ ಈಗಾಗಲೇ ಶಿಕ್ಷೆ ವಿಧಿಸಲಾಗಿದೆ. ಈಗ ಪ್ರಕರಣದ ಮತ್ತೊಬ್ಬ  ಸಂಚುಕೋರನ ಬಂಧನವಾಗಿದೆ. ಆರ್ಎಸ್ಎಫ್, ಸಿಪಿಜೆಯಂತಹ ಎನ್‌ಜಿಓಗಳು ಮಾತ್ರವಲ್ಲ ವಿಶ್ವಸಂಸ್ಥೆಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಹಾಗೂ ಎಚ್ಚೆತ್ತ ಸರ್ಕಾರಗಳೂ ಪತ್ರಿಕಾ ಸ್ವಾತಂತ್ರ್ಯದಂತಹ ವಿಚಾರಕ್ಕೆ ಪ್ರಾಮುಖ್ಯ ನೀಡಿವೆ ಎಂಬುದು ಇಲ್ಲಿ ಮುಖ್ಯ.ಆರ್ಎಸ್ಎಫ್‌ನ 2016ರ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ ಪಟ್ಟಿಯಲ್ಲಿ 180 ದೇಶಗಳ ಪೈಕಿ ಭಾರತ ಪಡೆದಿರುವುದು 133ನೇ ಸ್ಥಾನ. 2002ರಲ್ಲಿ 80ನೇ ಸ್ಥಾನದಲ್ಲಿದ್ದ ಭಾರತದ ಸ್ಥಾನ ಕುಸಿಯುತ್ತಲೇ ಸಾಗಿರುವುದು ವಿಪರ್ಯಾಸ. ‘ದೇಶದಲ್ಲಿ ಬಲಪಂಥೀಯ ತೀವ್ರಗಾಮಿತ್ವ ಹೆಚ್ಚಳವಾಗಿದ್ದು ಸುಲಭವಾಗಿ ಕೆರಳುವ ವಿವಿಧ ಧಾರ್ಮಿಕ ಸಂಘಟನೆಗಳಿಂದ ಪತ್ರಕರ್ತರು ಮತ್ತು ಬ್ಲಾಗಿಗರ ಮೇಲೆ ಹಲ್ಲೆಗಳಾಗಿವೆ. ಕಾಶ್ಮೀರದಂತಹ ಪ್ರದೇಶಗಳಿಂದ ವರದಿಗಾರಿಕೆ ಕಷ್ಟ’ ಎಂದೂ ಈ ವರದಿ ಗುರುತಿಸಿದೆ. ಆದರೆ ‘ಈ ತೊಂದರೆಗಳು, ಬೆದರಿಕೆಗಳ ಬಗ್ಗೆ ಮೋದಿ ಅನಾಸಕ್ತಿ ತೋರಿದ್ದಾರೆ.ಪತ್ರಕರ್ತರನ್ನು ರಕ್ಷಿಸುವ ಯಾವುದೇ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿಲ್ಲ’ ಎಂದೂ ಈ ವರದಿ ಹೇಳಿದೆ. ಛತ್ತೀಸಗಡದ ಜಗದಾಲ್ಪುರ ಪಟ್ಟಣದಲ್ಲಿ ‘ಸ್ಕ್ರಾಲ್‌ ಡಾಟ್‌ ಇನ್‌’ ವೆಬ್‌ಸೈಟ್‌ನ ವರದಿಗಾರ್ತಿ ಮಾಲಿನಿ ಸುಬ್ರಮಣಿಯಂ ಅವರ ಮನೆ ಮೇಲೆ ದಾಳಿ ನಡೆಸಿ ಬೆದರಿಕೆ ಒಡ್ಡಿದ ಪರಿಣಾಮವಾಗಿ ಅವರು ಜಗದಾಲ್ಪುರವನ್ನೇ ಬಿಡಬೇಕಾದ ಸಂದರ್ಭ ಎರಡು ತಿಂಗಳ ಹಿಂದೆಯಷ್ಟೇ ಸೃಷ್ಟಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಸರ್ಕಾರ ಹಾಗೂ ಪೊಲೀಸರನ್ನು ಟೀಕಿಸುವಂತಹ ವರದಿಗಳನ್ನು ಇಲ್ಲಿ ಸಹಿಸುವುದಿಲ್ಲ. ಅಂತಹ ಪತ್ರಕರ್ತರಿಗೆ ಕಿರುಕುಳ ನೀಡುವುದು ಛತ್ತೀಸಗಡದಲ್ಲಿ ಮಾಮೂಲಾಗಿಹೋಗಿದೆ. ಬಸ್ತಾರ್‌ನ ವಾಸ್ತವಗಳನ್ನು ವಸ್ತುನಿಷ್ಠವಾಗಿ ವರದಿ ಮಾಡುವುದೂ ಕಷ್ಟಕರವಾದ ಸ್ಥಿತಿ ಅಲ್ಲಿ ಸೃಷ್ಟಿಯಾಗಿದೆ.ಹರಿಯಾಣದಲ್ಲಿ ಶೈಕ್ಷಣಿಕ ಪತ್ರಿಕೆಯ ಸಂಪಾದಕರೊಬ್ಬರನ್ನು ಇತ್ತೀಚೆಗೆ ಸರ್ಕಾರ ವಜಾ ಮಾಡಿತು, ಕಬ್ಬಿಣಾಂಶ ಎಂಬುದು ದೇಹಕ್ಕೆ ಅಗತ್ಯವಾದ ಪೋಷಕಾಂಶ, ಇದು ದನದ ಅಥವಾ ಕರುವಿನ ಮಾಂಸದಲ್ಲಿ ಲಭ್ಯವಿದೆ ಎಂದು ಬರೆದದ್ದು ವಿವಾದವಾಯಿತು.ಶಿಕ್ಷಣ ಇಲಾಖೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಪ್ರಕಟಿಸುವ ‘ಶಿಕ್ಷಾ ಸಾರಥಿ’ ಪತ್ರಿಕೆಯಲ್ಲಿ ಆಹಾರ ಪೋಷಕಾಂಶ ಕುರಿತಂತಹ ಈ ಲೇಖನ ಪ್ರಕಟಿಸಿದ್ದಕ್ಕಾಗಿ ‘ಶಿಕ್ಷಾಸಾರಥಿ’ ಪ್ರಧಾನ ಸಂಪಾದಕಿ ದೇವಯಾನಿ ಸಿಂಗ್ ಅವರನ್ನು ವಜಾ ಮಾಡಲಾಯಿತು.ಇತ್ತೀಚೆಗೆ ಬೆಂಗಳೂರಿನಲ್ಲಿ ಗಾರ್ಮೆಂಟ್ ಮಹಿಳೆಯರ ಮುಷ್ಕರದ ವರದಿಗಾರಿಕೆಗೆ ತೆರಳಿದ್ದ ಮಾಧ್ಯಮ ವ್ಯಕ್ತಿಗಳು ಪೊಲೀಸರ ಲಾಠಿರುಚಿ ನೋಡಬೇಕಾಯಿತು.ಮೂರು ದಿನಗಳ ಹಿಂದೆ, ಟ್ವಿಟರ್‌ನಿಂದ ರಾಜ್‌ದೀಪ್ ಸರ್‌ದೇಸಾಯಿ ನಿರ್ಗಮಿಸಿದ್ದಾರೆ. ತಮ್ಮ ಟ್ವಿಟರ್ ಖಾತೆ ಮೂಲಕ ಅಸಹನೀಯವಾದ ನೇರ ಸಂದೇಶಗಳನ್ನು (ಡಿಎಂ) ಕಳುಹಿಸಿದ್ದು ಪತ್ತೆಯಾದ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಈಗ ಸುದ್ದಿಯಲ್ಲಿರುವ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಮಾತೃಸಂಸ್ಥೆ ಫಿನ್ ಮೆಕ್ಯಾನಿಕಾ, ಮಾಧ್ಯಮ ಪ್ರಚಾರಕ್ಕಾಗಿ ವ್ಯಯಿಸಿದ ಹಣದ ಫಲಾನುಭವಿಗಳಲ್ಲಿ ಅವರೂ ಒಬ್ಬರು  ಎಂಬಂತಹ ಆರೋಪವನ್ನು ರಾಜ್‌ದೀಪ್ ಸರ್‌ದೇಸಾಯಿ ವಿರುದ್ಧ ಮಾಡಲಾಗಿದೆ.ಪ್ರಜಾಪ್ರಭುತ್ವಕ್ಕೆ ಸ್ವತಂತ್ರ ಹಾಗೂ ಮುಕ್ತ ಮಾಧ್ಯಮ ಮೂಲಭೂತವಾದದ್ದು ಎಂಬುದು ಒಪ್ಪಿತ ವಿಚಾರ. ಹೀಗಿದ್ದೂ ಮಾಧ್ಯಮಗಳ ವಿರುದ್ಧ  ರಾಜಕೀಯ ಪಕ್ಷಗಳು ಕೆಂಡ ಕಾರುವುದು ನಡೆದುಕೊಂಡೇ ಬಂದಿದೆ.ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ 1975ರಲ್ಲಿ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಪತ್ರಿಕಾ ಸೆನ್ಸಾರ್‌ಷಿಪ್ ವಿಧಿಸಿದ್ದಂತಹ ಕರಾಳ ಅಧ್ಯಾಯಕ್ಕೆ ಈಗ 41 ವರ್ಷಗಳಾಗುತ್ತಿವೆ. ಹಾಗೆಯೇ ಕೇಂದ್ರದ ಈಗಿನ ಸಚಿವ ವಿ.ಕೆ.ಸಿಂಗ್ ಅವರು ಮಾಧ್ಯಮದವರನ್ನು ವೇಶ್ಯೆಯರೆಂದು ಬಣ್ಣಿಸಲು  ‘ಪ್ರೆಸ್ಟಿಟ್ಯೂಟ್’ ಎಂಬ ನುಡಿಗಟ್ಟನ್ನು ಬಳಸಿದ್ದರು.

ಈ ನುಡಿಗಟ್ಟು ನಿಂದನಾತ್ಮಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ  ಬಳಕೆಯಾಗುತ್ತಲೇ ಇದೆ. ಆಮ್ ಆದ್ಮಿ ಪಕ್ಷದ ಪ್ರಯೋಗಶೀಲತೆಗೆ ಆರಂಭದಲ್ಲಿ ಮಾಧ್ಯಮಗಳಿಂದ ಸಾಕಷ್ಟು  ಪ್ರಚಾರ ಸಿಕ್ಕಿತ್ತು. ಆದರೆ ನಂತರ ಅಧಿಕಾರಪಟ್ಟಕ್ಕೇರಿದ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರಿಗೂ ಮಾಧ್ಯಮಗಳ ಟೀಕಾಸ್ತ್ರಗಳು ಸಹನೀಯವಾಗಲಿಲ್ಲ ಎಂಬುದು ವಿಪರ್ಯಾಸ.ಟೀಕಾಸ್ತ್ರಗಳು ಎಂದ ಮಾತ್ರಕ್ಕೆ ಪತ್ರಿಕೆಗಳು ತಮಗೆ ಬೇಕಾದ ಹಾಗೆ ಬರೆದುಕೊಳ್ಳಬಹುದು, ಅಪರಿಮಿತ ಸ್ವಾತಂತ್ರ್ಯವನ್ನು ಅನುಭವಿಸಬಹುದು ಎಂಬುದು ಇದರ ಅರ್ಥವಲ್ಲ. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಡಿವಿಜಿ ಅವರು ತಮ್ಮ ‘ವೃತ್ತಪತ್ರಿಕೆ’ ಪುಸ್ತಕದಲ್ಲಿ ಹೇಳುವ ಮಾತುಗಳು ಈಗಲೂ ಅರ್ಥಪೂರ್ಣ.‘ಪತ್ರಿಕಾಕರ್ತನ ಸ್ವಾತಂತ್ರ್ಯವು ನಿಜವಾಗಿ ಪ್ರಜಾಜನರೆಲ್ಲರಿಗೂ ಸೇರಿದ ಒಂದು ಅಧಿಕಾರವೇ ಹೊರತು ಅದು ಅವನೊಬ್ಬನಿಗೆ ಮಾತ್ರ ಸಂಬಂಧಪಟ್ಟ ಹಕ್ಕೇನೂ ಅಲ್ಲವೆಂಬುದನ್ನು ಯಾರೂ ಮರೆಯಲಾಗದು.’ ನಮ್ಮ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿಯಷ್ಟೇ (ಸಂವಿಧಾನ ವಿಧಿ 19ರಿಂದ 22) ಇದೆ. ಮಾಧ್ಯಮಗಳಿಗೆ ವಿಶೇಷ ಹಕ್ಕೇನೂ ಇಲ್ಲ.ಕರ್ತವ್ಯ ನಿರ್ವಹಣೆಯಲ್ಲಿ ಮಾಧ್ಯಮಗಳು ಜನರ ಹಕ್ಕು ಮತ್ತು ಬಾಧ್ಯತೆಗಳನ್ನು ರಕ್ಷಿಸುತ್ತವೆ. ಈ ನಿಟ್ಟಿನಲ್ಲಿ ಅವು ಪ್ರಜಾಸತ್ತೆಯ ‘ಕಾವಲು ನಾಯಿಗಳು’ ಎಂಬುದನ್ನು ನೆನಪಿಡಬೇಕು. ಪ್ರಜಾಸತ್ತೆ ಹಾಗೂ ನಾಗರಿಕರ ಹಕ್ಕುಗಳ ರಕ್ಷಣೆಯ ಉನ್ನತ ಧ್ಯೇಯೋದ್ದೇಶಗಳಿಗಾಗಿ ಅನಿರ್ಬಂಧಿತ ಸ್ವಾತಂತ್ರ್ಯವನ್ನು ಬಯಸುವ  ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದು ಅಗತ್ಯ.ಎಲ್ಲಾ ಅಧಿಕಾರ ಕೇಂದ್ರಗಳು ಅಧಿಕಾರ ಹೊಂದಿರುವ ಕಾರಣದಿಂದಾಗಿಯೇ ಅವನ್ನು ಉತ್ತರದಾಯಿಯಾಗಿಸಲು ಪತ್ರಿಕಾ ಸ್ವಾತಂತ್ರ್ಯ ಇದೆ ಎಂಬುದನ್ನು ತತ್ವಶಃ ಒಪ್ಪಿಕೊಳ್ಳಬೇಕಾದುದು ಅಗತ್ಯ. ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುವುದು ಅಧಿಕಾರಸ್ಥರ ಅಧಿಕಾರವನ್ನು ಬಲಗೊಳಿಸುವುದಿಲ್ಲ. ಬದಲಿಗೆ ಕ್ರಮೇಣ ನಾಶ ಮಾಡುತ್ತದೆ.

ಈಚಿನ ದಿನಗಳಲ್ಲಿ ಸರ್ಕಾರ ಮಾತ್ರವಲ್ಲ ‘ಕಾರ್ಪೊರೆಟ್ ಸೆನ್ಸಾರ್‌ಷಿಪ್’ ಎಂಬುದು ಮಾಧ್ಯಮ ಸ್ವಾತಂತ್ರ್ಯಕ್ಕೆ  ಅಡ್ಡಗಾಲಾಗುತ್ತಿದೆ ಎಂಬುದೂ ನಿಜ. ಹೀಗಾಗಿಯೇ ರಾಜಕೀಯ ವ್ಯವಸ್ಥೆಯಂತೆ ಮಾಧ್ಯಮ ಜಗತ್ತೂ ಭ್ರಷ್ಟಗೊಂಡಿದೆ ಎಂಬ ಆರೋಪಗಳಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ.

ವ್ಯಕ್ತಿ ಮತ್ತು ಸಿದ್ಧಾಂತಗಳ ಪರ ಪ್ರಚಾರಕ್ಕಾಗಿ ಮಾಧ್ಯಮಗಳು ಬಳಕೆಯಾಗುತ್ತವೆ.  ಕಾಸಿಗಾಗಿ ಸುದ್ದಿ ಪ್ರಕಟಿಸುವ ಸಮಸ್ಯೆಯೂ ಮಾಧ್ಯಮ ಜಗತ್ತಿನಲ್ಲಿದೆ. ಇಂತಹ ಕಹಿ ಬೆಳವಣಿಗೆಗಳು ಮಾಧ್ಯಮ ಜಗತ್ತಿಗೆ ಕಳಂಕ ತರುವಂತಹವು. ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಈ ಬೆಳವಣಿಗೆಗಳ ಕುರಿತಾಗಿ ಆತ್ಮಾವಲೋಕನ  ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry