7

‘ಮನ್‌ ಸಾಹೇಬರು’ ಕೊರೆಸಿದ 1200 ಬಾವಿಗಳು!

Published:
Updated:
‘ಮನ್‌ ಸಾಹೇಬರು’ ಕೊರೆಸಿದ 1200 ಬಾವಿಗಳು!

ಕ್ಯಾಪ್ಟನ್‌ ಲಿಯೋನಾರ್ಡ್‌ ಮನ್‌ ನನ್ನೊಳಗೆ ಬೇಗನೆ ಇಳಿದರು. ಅಷ್ಟೇ ಬೇಗನೆ ಬೆಳೆಯ ತೊಡಗಿದರು. ಈ ಲಿಯೋನಾರ್ಡ್‌ ಮನ್‌ ಮಹಾಶಯ ಏಕೆ ಇಷ್ಟವಾದರು ಎನ್ನುವುದನ್ನು ಹೇಳುತ್ತೇನೆ.ಇವರು ಶ್ರೇಷ್ಠ ಭೂಗರ್ಭಶಾಸ್ತ್ರಜ್ಞ. ನಿಜಾಮ್‌ ಸರ್ಕಾರದಲ್ಲಿ ಗಣಿ ಎಂಜಿನಿಯರಾಗಿದ್ದರು. ಆ ಸಂದರ್ಭದಲ್ಲಿ ಭೀಕರ ಬರಗಾಲವಿತ್ತು.  ಬಾವಿಗಳು ಬತ್ತಿ ಹೋಗಿದ್ದವು. ನೀರಿನ ಬವಣೆಯನ್ನು ನೀಗುವ ಸಲುವಾಗಿಯೇ ಇವರನ್ನು ನಿಜಾಮ್‌ ಸರ್ಕಾರ 1928 ರಿಂದ 1935 ರ ವರೆಗೂ ‘ಭೌಗೋಳಿಕ ಸಮೀಕ್ಷೆ ನಿರ್ದೇಶಕ ಮತ್ತು ಬಾವಿ ಕೊರೆತ ವಿಭಾಗ’ದ ವಿಶೇಷಾಧಿಕಾರಿಯಾಗಿ ಎರವಲು ಸೇವೆಯ ಮೇಲೆ ರಾಯಚೂರು ಜಿಲ್ಲೆಗೆ ಕಳುಹಿಸಿತ್ತು.ಮನ್‌ ಅವರಿಗೆ ಈಗಿನ ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯ ಪ್ರತಿ ಅಂಗುಲ ನೆಲವೂ ತಮ್ಮ ಮನೆಯ ಅಂಗಳದಷ್ಟೇ ಪರಿಚಯವಿತ್ತು. ಅಲ್ಲಿನ ಭೌಗೋಳಿಕ ಸಮಗ್ರ ಚಿತ್ರಣವನ್ನು ಬಲ್ಲವರಾಗಿದ್ದರು. ನೀರು ಮತ್ತು ಖನಿಜ ಲಭ್ಯವಾಗುವ ಪ್ರದೇಶಗಳ ಕುರಿತಾಗಿ ಸಾಕಷ್ಟು ಸಂಶೋಧನೆ ಕೈಗೊಂಡಿದ್ದರು.ಬರದ ದಿನಗಳಲ್ಲಿ ತೆರೆದ ಬಾವಿಗಳಲ್ಲಿ ಸ್ವಲ್ಪವೇ ನೀರು ಇರುತ್ತಿತ್ತು. ಜನರು ಈ ಬಾವಿಗಳಿಗೆ ಇಳಿದು ನೀರು ತುಂಬುತ್ತಿದ್ದರು. ಅದೇ ಸಂದರ್ಭದಲ್ಲಿ ನಾರುಹುಣ್ಣು ರೋಗ ಕಾಣಿಸಿಕೊಂಡಿತ್ತು. ಜನರು ಬಾವಿಗಳಿಗೆ ಇಳಿಯುತ್ತಿದ್ದರಿಂದ ಸೋಂಕು ನೀರಿಗೆ ಸೇರಿ ಹರಡುತ್ತಿತ್ತು. ಇದನ್ನು ಅರಿತ ಮನ್‌ ‘ಸೇದುವ ಬಾವಿ’ಗಳನ್ನು ನಿರ್ಮಿಸಿದ್ದರು. ಈ ಬಾವಿಗಳ ರಚನೆಯಲ್ಲೂ ವಿಶಿಷ್ಟತೆ ಮೆರೆದಿದ್ದರು. ಜತೆಗೆ ದೂರದೃಷ್ಟಿಯನ್ನೂ ಹೊಂದಿದ್ದರು. ಊರು, ಅಲ್ಲಿನ ಜನಸಂಖ್ಯೆ, ಅವು ಭವಿಷ್ಯದಲ್ಲಿ ಬೆಳೆಯಬಹುದಾದ ಬಗೆ, ಅಂತರ್ಜಲ ಲಭ್ಯತೆಗಳೆಲ್ಲವನ್ನೂ ಗಣನೆಗೆ ತೆಗೆದುಕೊಂಡಿದ್ದರು.ಪುಟ್ಟ ಊರು ಮತ್ತು ದಾರಿ ಮಧ್ಯದಲ್ಲಿ ಸಣ್ಣ ಬಾವಿಗಳನ್ನು ಕೊರೆಸಿದ್ದರು. ದೊಡ್ಡ ಊರುಗಳಲ್ಲಿ ತ್ರಿಕೋನ, ಚತುಷ್ಕೋನ, ಪಂಚಕೋನ, ಷಟ್ಕೋನ, ಸಪ್ತಕೋನ, ಅಷ್ಟಕೋನ, ನವಕೋನ ಹಾಗೂ ದಶಕೋನಾಕಾರಗಳ ಬಾವಿಗಳನ್ನು ನಿರ್ಮಿಸಿದ್ದರು.ಮನ್‌ ಅವರು ದಾರಿಹೋಕರಿಗೆ ಅನುಕೂಲವಾಗಲೆಂದು ದಾರಿಗುಂಟ ಬಾವಿಗಳನ್ನು ಕೊರೆಸಿದ್ದರು. ಬಾಯಾರಿದವರು ನೀರು ಕುಡಿಯಲು ಅನುಕೂಲವಾಗುವಂತೆ ಸರಪಳಿ ಜೋಡಿಸಿದ ಬಕೆಟನ್ನು ಅಲ್ಲಿ ಇಡಲು ವ್ಯವಸ್ಥೆ ಮಾಡಿದ್ದರು. ಇಂಥ ಬಾವಿಗಳ ಬಳಿ ತೊಟ್ಟಿಯನ್ನೂ ನಿರ್ಮಿಸಿದ್ದರು. ಅವು ಜಾನುವಾರುಗಳ ದಾಹವನ್ನು ನೀಗಿಸುತ್ತಿದ್ದವು.ಇಂದಿಗೂ ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಮನ್‌ ಕೊರೆಸಿದ ಬಾವಿಗಳು ಕಾಣಸಿಗುತ್ತವೆ. ಇವುಗಳನ್ನು ಜನರು ‘ಗಿರಕಿಬಾವಿ’ ಅಥವಾ ‘ಮನ್‌ಬಾವಿ’ಗಳು ಎಂದು ಕರೆಯುತ್ತಾರೆ.ಮನ್‌ ಅವರು ಬಾವಿಗಳ ನಿರ್ಮಾಣಕ್ಕಾಗಿ ಹೆಚ್ಚು ಹಣ ಖರ್ಚು ಮಾಡುತ್ತಿರಲಿಲ್ಲ. ಸ್ಥಳದಲ್ಲೇ ಸಿಗುತ್ತಿದ್ದ ಬೆಣಚುಕಲ್ಲು ಮತ್ತು ಗಚ್ಚನ್ನು ಬಳಸಿ ಬಾವಿಗಳನ್ನು ನಿರ್ಮಿಸುತ್ತಿದ್ದರು. ಪ್ರತಿಯೊಂದು ಬಾವಿಗೂ ನಾಲ್ಕರಿಂದ ಎಂಟು ರಾಟೆ (ಗಿರಕಿ)ಗಳನ್ನು ಅಳವಡಿಸಿ ಹೆಚ್ಚು ಮಂದಿ ನೀರು ಸೇದಲು ಅನುಕೂಲ ಮಾಡಿಕೊಟ್ಟರು.ಈ ಬಾವಿಗಳ ಮೇಲೆ ಎಚ್‌ಇಎಚ್‌ ನಿಜಾಮ್‌ ಡಬ್ಲ್ಯೂಎಸ್‌ಡಿ (Well sinking department) ಎಂದು ಬರೆಯಲಾಗುತ್ತಿತ್ತು. ಡಬ್ಲ್ಯೂಎಸ್‌ಡಿ ವಿಭಾಗವು ಬಾವಿಯನ್ನು ಕೊರೆಯುವ ಕೆಲಸ ಮಾಡುತ್ತಿತ್ತು. ಗ್ರಾಮದಲ್ಲಿ ಕೊರೆಯುವ ಬಾವಿಗಳಿಗೆ ಸಂಖ್ಯೆ ಮತ್ತು ಇಸವಿಯನ್ನು ಬರೆಯಲಾಗುತ್ತಿತ್ತು. ಮನ್‌ ಅವರು 1200 ಕ್ಕೂ ಹೆಚ್ಚು ಬಾವಿಗಳನ್ನು ಕೊರೆಸಿದ್ದರು.ನಾನು ಇತ್ತೀಚೆಗೆ ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕು ಮುಡಬೂಳ ಗ್ರಾಮಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಮಹಿಳೆಯರು ಬಾವಿಯಿಂದ ನೀರು ಸೇದುತ್ತಿದ್ದರು. ಆ ಬಾವಿಕಟ್ಟೆಗೆ ಅಳವಡಿಸಿರುವ ಫಲಕವು ಅದು 207ನೇ ಬಾವಿ ಎನ್ನುವುದನ್ನು ಸಾರುತ್ತಿತ್ತು.ರಾಯಚೂರು ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿರುವ ‘ಲಿಂಗಸುಗೂರು’ ಹೈದರಾಬಾದ್ ನಿಜಾಮ್‌ ಆಡಳಿತಕ್ಕೆ ಒಳಪಟ್ಟು ‘ಜಿಲ್ಲಾ ಕೇಂದ್ರ’ವಾಗಿತ್ತು. ಸಿಂಧನೂರು, ಶಹಾಪುರ, ಸುರಪುರ, ಕುಷ್ಟಗಿ ಮತ್ತು ಗಂಗಾವತಿ ತಾಲ್ಲೂಕುಗಳು ಇದರ ವ್ಯಾಪ್ತಿಗೆ ಒಳಪಟ್ಟಿದ್ದವು.ಇಲ್ಲಿ ಹೈದರಾಬಾದ್‌ ನಿಜಾಮ್‌ ಬ್ರಿಟಿಷರೊಂದಿಗೆ ಸಂಧಾನ ಮಾಡಿಕೊಂಡು ಆಡಳಿತ ನಡೆಸುತ್ತಿದ್ದರು. ಆಗ ಲಿಂಗಸುಗೂರನ್ನು ‘ಛಾವಣಿ’ ಎಂದು ಕರೆಯಲಾಗುತ್ತಿತ್ತು. ‘ಛಾವಣಿ’ ಎಂದರೆ ‘ದಂಡು ಪ್ರದೇಶ’ ಎಂದರ್ಥ. ಆಗ ಅಲ್ಲಿ ಬ್ರಿಟಿಷರ ದಂಡು ತಂಗಿತ್ತು. ನಿಜಾಮಶಾಹಿ ಆಡಳಿತದ ವಿವಿಧ ಅಧಿಕಾರಿಗಳು ಅಲ್ಲಿ ವಾಸವಾಗಿದ್ದರು. ಅವರಲ್ಲಿ ಮನ್‌ ಕೂಡ ಒಬ್ಬರು ಎಂದು ಇತಿಹಾಸದ ಸಹಾಯಕ ಪ್ರಾಧ್ಯಾಪಕರಾದ ಡಾ.ಅಮರೇಶ ಯತಗಲ್‌ ಅವರು ಮನ್‌ ಕುರಿತು ತಮ್ಮ ‘ಇತಿಹಾಸ ಇಂಚರ’ ಪುಸ್ತಕದಲ್ಲಿ ದಾಖಲು ಮಾಡಿದ್ದಾರೆ.ಆಸ್ಟ್ರೇಲಿಯಾದ ಕ್ಯಾಪ್ಟನ್‌ ಲಿಯೋನಾರ್ಡ್‌ ಮನ್‌ ಅಕ್ಟೋಬರ್‌ 21, 1935 ರಂದು ಮರಣ ಹೊಂದುತ್ತಾರೆ. ಇವರ ಅಂತ್ಯಕ್ರಿಯೆ ಲಿಂಗಸುಗೂರಿನಲ್ಲೇ ನೆರವೇರುತ್ತದೆ.ತಮಗೆ ಕುಡಿಯುವ ನೀರು ಕೊಟ್ಟ ‘ಮನ್‌’ ಅವರ ಬಗೆಗೆ ಈ ಭಾಗದ ಜನರಲ್ಲಿ ಅಪಾರ ಗೌರವ. ಜನಪದರು ‘ಮನ್‌’ ಅವರನ್ನು ‘ಮನ್ನಾಸಾಬ್‌’ ಎನ್ನುತ್ತಾ ತಮ್ಮವರನ್ನಾಗಿಸಿಕೊಂಡಿದ್ದಾರೆ. ಇಷ್ಟು ಸಾಲದು ಎನ್ನುವಂತೆ ತಮ್ಮ ಮಕ್ಕಳಿಗೆ ‘ಮನ್ನಾಸಾಬ್‌’ ಎಂದು ನಾಮಕರಣ ಮಾಡಿ ಕೃತಜ್ಞರಾಗಿದ್ದಾರೆ.

ಮನ್‌ ಅವರಲ್ಲಿ ಅಪಾರ ಜ್ಞಾನ, ಪಾಂಡಿತ್ಯವಿತ್ತು. ಆದ್ದರಿಂದ ಅವರು ಗುರುತು ಮಾಡಿದ ಜಾಗದಲ್ಲಿ ಕೊರೆದ ಬಾವಿಗಳಲ್ಲಿ ಇಂದಿಗೂ ಜಲ ಜಿನುಗುತ್ತಲೇ ಇದೆ!ನಮ್ಮವರಿಗೆ ಅಂತರ್ಜಲ ಶೋಧಿಸುವ ‘ಉಪಕರಣ ಮತ್ತು ‘ತಜ್ಞ’ರಿಗಿಂತ ‘ಕವಡೆ’ ಮತ್ತು ‘ಜ್ಯೋತಿಷಿ’ಗಳ ಮೇಲೆ ಹೆಚ್ಚು ನಂಬಿಕೆ. ಅಂಗೈಯಲ್ಲಿ ತೆಂಗಿನಕಾಯಿ ಇಟ್ಟುಕೊಂಡು ನೀರಿನ ಮೂಲ ಹುಡುಕುತ್ತಾರೆ. ದೇವರಿಗೆ ಬಿಟ್ಟ ‘ಟಗರು’ ಕಾಲು ಕೆರೆಯುವ ಜಾಗ, ಸ್ವಾಮೀಜಿಯೊಬ್ಬರು ಸಾಕಿರುವ ಕುದುರೆ ಲದ್ದಿ ಹಾಕುವ ಜಾಗದಲ್ಲಿ ಬಾವಿ ಕೊರೆಸುತ್ತಾರೆ. ನಮ್ಮ ಜನರು ಜಲಮೂಲವನ್ನು ಹುಡುಕಿಕೊಡುವ ‘ಜವಾಬ್ದಾರಿ’ಯನ್ನು ದೇವರಿಗೆ ವಹಿಸಿಕೊಟ್ಟಿದ್ದಾರೆ!

ಕಾಲ ಬದಲಾಗಿದೆ. ಮನ್‌ ಇತಿಹಾಸವಾಗಿದ್ದಾರೆ. ಆದರೆ ಅವರು ಕೊರೆಸಿದ ಬಾವಿಗಳು ಇಂದಿಗೂ ಮಾತನಾಡುತ್ತಿವೆ.ಯಾವಾಗ ಮನೆಯೊಳಕ್ಕೇ ನಲ್ಲಿಗಳು ಬಂದವೋ ಜನರು ಬಾವಿಗಳನ್ನು ಮರೆತರು. ಆಟವಾಡುವ ಮಕ್ಕಳು ಬಾವಿಗಳಿಗೆ ಕಸ, ಕಡ್ಡಿ, ಕಲ್ಲು, ಮಣ್ಣು ತುಂಬಿದವು. ಈಗ ಬಹುತೇಕ ಕಡೆ ‘ಮನ್‌ಬಾವಿ’ಗಳು ಅರೆಜೀವವಾಗಿವೆ. ಅವುಗಳನ್ನು ಪುನರುಜ್ಜೀವನಗೊಳಿಸಲು ಜನರಿಗೆ ಮನಸ್ಸಿಲ್ಲ. ಅಧಿಕಾರಿಗಳಿಗೆ ಬೇಕಾಗಿಲ್ಲ. ಏಕೆಂದರೆ ಅವರು ‘ಲಾಭ’ ತರುವ ಕೊಳವೆಬಾವಿಗಳ ಹಿಂದೆ ಬಿದ್ದಿದ್ದಾರೆ.ಅಪೂರ್ವ ಭೂಗರ್ಭಶಾಸ್ತ್ರಜ್ಞ ಕೊರೆಸಿದ ಬಾವಿಗಳು ಮುಂದೆ ಜೀವ ಕಳೆದುಕೊಳ್ಳಲೂಬಹುದು. ಇದಕ್ಕೆ ಊರಿನ ಯುವಕರು ಅವಕಾಶ ಮಾಡಿಕೊಡಬಾರದು. ತಾವೇ ‘ಶ್ರಮದಾನ’ದ ಮೂಲಕ ಅವುಗಳಿಗೆ ಮರು ಜೀವಕೊಡಬೇಕು.ಮನ್‌ ಅವರು ಬಾವಿಗಳನ್ನು ಕೊರೆಸಿದ ಸಂದರ್ಭದಂತೆ ಈಗಲೂ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಜನರು ಗುಟುಕು ನೀರಿಗೂ ಬೊಗಸೆ ಒಡ್ಡುತ್ತಿದ್ದಾರೆ. ಆದ್ದರಿಂದ ಭೂವಿಜ್ಞಾನಿಗಳು, ಜಲತಜ್ಞರು ಮಾತನಾಡಬೇಕು. ಸರ್ಕಾರಕ್ಕೆ ಸಲಹೆ ನೀಡಬೇಕು. ಒಂದು ವೇಳೆ ಆಳುವವರು ಕಿವಿ ಕಿವುಡಾದರೆ ಜನಾಭಿಪ್ರಾಯವನ್ನು ರೂಪಿಸಬೇಕು.  ಏಕೆಂದರೆ ಕೆರೆ, ಕಟ್ಟೆ, ಬಾವಿ, ಅಂತರ್ಜಲ ಎಲ್ಲವೂ ಸಮಾಜದ ಸೊತ್ತು.ನನಗೆ ಈಗಲೂ ಬಲವಾಗಿ ಅನಿಸುತ್ತಿದೆ. ಮನ್‌ ಅವರಂತಹ ಜ್ಞಾನಿಗಳು, ವೃತ್ತಿ ಪರಿಣತರು, ಜನರ ಬಗೆಗೆ ಪ್ರೀತಿ, ಕಾಳಜಿ, ಕಾಯಕದಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಹೊಂದಿರುವವರು, ತಾವು ಬದುಕುತ್ತಿರುವ ಸಮಾಜದ ಬಗ್ಗೆ ಅಪಾರ ಕನಸು ಕಾಣುತ್ತಿರುವವರು ಕ್ರಿಯಾಶೀಲರಾದರೆ ಬಾಯಾರಿದ ಜನರ ದಾಹ ಖಂಡಿತ ತೀರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry