7

ಸ್ಟಾಕ್‌ಹೋಮ್ ಗೆ ಬೇಕಂತೆ ನೀರಿನ ಹೊಸ ಐಡಿಯಾ

ನಾಗೇಶ ಹೆಗಡೆ
Published:
Updated:
ಸ್ಟಾಕ್‌ಹೋಮ್ ಗೆ ಬೇಕಂತೆ ನೀರಿನ ಹೊಸ ಐಡಿಯಾ

‘ಅಜ್ಜ-ಅಜ್ಜೀನ್ನ ನೋಡೋಕೆ ಅಂತ ಇಂಡಿಯಾಕ್ಕೆ ಹೋಗಿದ್ದೆ. ಅಲ್ಲಿನ ನೀರಿನ ಸಮಸ್ಯೆ ನೋಡಿ ತುಂಬಾ ಬೇಜಾರಾಯ್ತು. ನೀರಿನ ಶುದ್ಧೀಕರಣದ ಬಗ್ಗೆ ಏನಾದರೂ ಹೊಸ ಸಂಶೋಧನೆ ಮಾಡಬೇಕು ಅಂತ ಆಗಲೇ ನಿರ್ಧಾರ ಮಾಡಿದೆ...’-ಕಳೆದ ವರ್ಷ, 2015ರ ‘ಸ್ಟಾಕ್‌ಹೋಮ್ ಜೂನಿಯರ್ ವಾಟರ್ ಪ್ರೈಝ್’ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಅಮೆರಿಕದ ಹದಿ ಹುಡುಗ ಪೆರ್ರಿ ಅಳಗಪ್ಪನ್ ಹೇಳಿದ ಮಾತು ಇದು.ಕುತೂಹಲದ ಸಂಗತಿ ಏನೆಂದರೆ, ಇದೇ ಅರ್ಥದ ಮಾತನ್ನು ಒಂದು ವರ್ಷ ಮುಂಚೆ, 2014ರಲ್ಲಿ ದೀಪಿಕಾ ಕುರುಪ್ ಎಂಬ ಅಮೆರಿಕದ ಹದಿಹುಡುಗಿಯೂ ಹೇಳಿದ್ದಳು. ಅವಳಿಗೂ ಚೆನ್ನೈಯಲ್ಲಿ ಅಜ್ಜನ ಮನೆಯ ಆಸುಪಾಸಿನ ಕೊಳಕು ನೀರಿನ ಪರಿಸರವೇ ಹೊಸ ಸಂಶೋಧನೆಗೆ ಪ್ರೇರಣೆ ನೀಡಿತು.

ನೀರಿನ ಶುದ್ಧೀಕರಣಕ್ಕೆ ಅವಳು ರೂಪಿಸಿದ ಸಾಧನಕ್ಕೆ ಆ ವರ್ಷ ಅಮೆರಿಕದ ‘ಸ್ಟಾಕ್‌ಹೋಮ್ ಜೂನಿಯರ್ ವಾಟರ್ ಪ್ರೈಝ್’ ಲಭಿಸಿತ್ತು. ಅಂದಹಾಗೆ, ದೊಡ್ಡವರಿಗೆ ನೀಡುವ ಸ್ಟಾಕ್‌ಹೋಮ್ ವಾಟರ್ ಪ್ರೈಝ್ (ಅದಕ್ಕೆ ‘ನೀರಿನ ನೊಬೆಲ್’ ಎಂತಲೇ ಕರೆಯುತ್ತಾರೆ) ಕೂಡ ಭಾರತದ ರಾಜೇಂದ್ರ ಸಿಂಗ್ ಅವರಿಗೆ ಕಳೆದ ವರ್ಷ ಲಭಿಸಿದೆ.ರಾಜೇಂದ್ರ ಅವರೇನೂ ಅಜ್ಜ-ಅಜ್ಜಿಯ ಮನೆಗೆ ಹೋಗಿರಲಿಲ್ಲ. ಆದರೆ ನೀರು ಅವರನ್ನು ಹೇಗೆ ತನ್ನತ್ತ ಸೆಳೆದುಕೊಂಡಿತು ಎಂಬುದು ಕುತೂಹಲಕಾರಿ ಕತೆಯೇ ಆಗಿದೆ. ಈ ವಾರ ಈ ಮೂವರ ಸುತ್ತ ತುಸು ಗಿರಕಿ ಹೊಡೆಯೋಣ.ನೀರನ್ನು ನಾವು ಜೀವಜಲ ಎನ್ನುತ್ತೇವಾದರೂ, ಅದು ಅಶುದ್ಧವಾಗಿದ್ದರೆ ನಮ್ಮ ಬದುಕಿಗೆ ನಂಬರ್ 1 ಖಳನಾಯಕ ಆಗುತ್ತದೆ. ನೀರಿನಿಂದ ಹಬ್ಬುವ ರೋಗರುಜಿನಗಳೇ ಹಿಂದೆಲ್ಲ ಜಗತ್ತಿನ ಜನಸಂಖ್ಯೆಯನ್ನು ನಿಯಂತ್ರಣದಲ್ಲಿ ಇಟ್ಟಿರುತ್ತಿದ್ದವು.

ಕಳೆದ ನೂರು ವರ್ಷಗಳಲ್ಲಿ ವೈದ್ಯಕೀಯ ಕ್ರಾಂತಿಯಿಂದಾಗಿಯೇ ಮನುಷ್ಯನ ಜೀವಿತಾವಧಿ ಹೆಚ್ಚಿತೆಂದು ಹೇಳುತ್ತಾರಾದರೂ ಅಸಲೀ ವಿಷಯ ಏನೆಂದರೆ ನಲ್ಲಿಯ ಮೂಲಕ ಶುದ್ಧ ನೀರಿನ ಪೂರೈಕೆ ವ್ಯವಸ್ಥೆ ಜಾರಿಗೆ ಬಂದಿದ್ದೇ ಕೋಟ್ಯಂತರ ಮಕ್ಕಳ ಜೀವ ಉಳಿಸಿದೆ.ಅವರೆಲ್ಲ ದೊಡ್ಡವರಾಗಿ ವಂಶೋದ್ಧಾರಕರಾಗಲು ನೀರೇ ನೆರವಿಗೆ ಬಂದಿದೆ. ಆದರೆ ಈಗಲೂ ಹಿಂದುಳಿದ ಪ್ರಜೆಗಳಿಗೆ ಶುದ್ಧ ನೀರು ಸಿಗುತ್ತಿಲ್ಲ. ಕೊಳಕು ನೀರನ್ನು ಶುದ್ಧ ಮಾಡಬೇಕೆಂದರೆ ಕೋಟಿಗಟ್ಟಲೆ ಬಂಡವಾಳ ಬೇಕು; ವಿದ್ಯುತ್ ವ್ಯವಸ್ಥೆ ಬೇಕು. ಆಡಳಿತ ಯಂತ್ರವೂ ಸುವ್ಯವಸ್ಥಿತ ಇರಬೇಕು. ಎಲ್ಲಕ್ಕಿಂತ ಮುಖ್ಯ ಏನೆಂದರೆ ಶುದ್ಧ ಮಾಡಲೆಂದು ಒಂದಷ್ಟು ನೀರು ಇರಬೇಕು.ಅಮೆರಿಕದಲ್ಲಿ ಜನಿಸಿದ ಮಲೆಯಾಳಿ ಹುಡುಗಿ ದೀಪಿಕಾ ಕುರುಪ್ 2012ರಲ್ಲಿ ರಜೆ ಕಳೆಯಲು ಬಂದಾಗ ಇಲ್ಲಿನ ಕೊಳೆಗೇರಿಗಳ ನೀರಿನ ಅಧ್ವಾನವನ್ನು ನೋಡಿ ಹೌಹಾರಿದ್ದಳು. ಮರಳಿ ನ್ಯೂಹ್ಯಾಂಪ್‌ಶೈರ್‌ಗೆ ಹೋಗಿ ತನ್ನ ಹೈಸ್ಕೂಲ್‌ನ ಸಂಶೋಧನಾ ಪ್ರಾಜೆಕ್ಟ್‌ಗೆ ನೀರಿನ ಶುದ್ಧೀಕರಣವನ್ನೇ ಆಯ್ದುಕೊಂಡಳು.ಬಿಸಿಲಿನ ಶಕ್ತಿಯಿಂದಲೇ ನೀರಲ್ಲಿರುವ ಸೂಕ್ಷ್ಮ ಏಕಾಣು ಜೀವಿಗಳನ್ನೂ ಕೊಳಕು ದ್ರವ್ಯಗಳನ್ನೂ ಧ್ವಂಸ ಮಾಡಬಲ್ಲ ಫಿಲ್ಟರನ್ನು ರೂಪಿಸಿದಳು. ಬಹುರಾಷ್ಟ್ರೀಯ ಕಂಪನಿಗಳ ವಿಶ್ವಮಾನ್ಯ ಫಿಲ್ಟರ್‌ಗಳಿಗಿಂತ ಇದು ಹೆಚ್ಚಿನ ದಕ್ಷತೆಯ ಹಾಗೂ ಅಗ್ಗದ ಸಾಧನ; ಅಷ್ಟೇ ಅಲ್ಲ, ಯಾವುದೇ ಬಗೆಯ ಕೆಮಿಕಲ್ ವಸ್ತುಗಳನ್ನು ನೀರಿಗೆ ಸೇರಿಸಬೇಕಾದ ಅಗತ್ಯ ಇಲ್ಲ.ಅಮೆರಿಕದಲ್ಲಿ ಪಿಯುಸಿ ಸ್ತರದ ವಿದ್ಯಾರ್ಥಿಗಳಿಗಾಗಿ ನಡೆಸುವ ರಾಷ್ಟ್ರಮಟ್ಟದ ‘ಯಂಗ್ ಸೈಂಟಿಸ್ಟ್’ ಸ್ಪರ್ಧೆಯ 25 ಸಾವಿರ ಡಾಲರ್‌ಗಳ ಮೊದಲ ಸ್ಥಾನವನ್ನು ದೀಪಿಕಾ ಪಡೆದಳು.ಸ್ಟಾಕ್‌ಹೋಮ್ ಜೂನಿಯರ್ ಜಲ ಪ್ರಶಸ್ತಿಗಾಗಿ ರಾಷ್ಟ್ರಮಟ್ಟದಲ್ಲಿ ಮೀಸಲಿರುವ 10 ಸಾವಿರ ಡಾಲರ್ ಬಹುಮಾನ ಪಡೆದಳು. ನಂತರದ ಎರಡು ವರ್ಷಗಳಲ್ಲಿ ಇದೇ ಫಿಲ್ಟರನ್ನು ಇನ್ನಷ್ಟು ಸುಧಾರಿಸಿ ಶ್ವೇತಭವನದ ಸನ್ಮಾನ, ನ್ಯಾಷನಲ್ ಜಿಯಾಗ್ರಫಿಕ್‌ನ ‘ಗೂಗಲ್ ಸೈನ್ಸ್ ಫೇರ್’ ಪ್ರಶಸ್ತಿ ಪಡೆದದ್ದೂ ಅಲ್ಲದೆ, ಫೋರ್ಬ್ಸ್‌ನ ‘30ರೊಳಗಿನ 30’ ಅಗ್ರಮಾನ್ಯ ಸಂಶೋಧಕರ ಪಟ್ಟಿಯಲ್ಲೂ ಸೇರ್ಪಡೆಯಾದಳು. ಪೆರ್ರಿ ಅಳಗಪ್ಪನ್ ಕತೆ ಇದಕ್ಕಿಂತ ತುಸು ಭಿನ್ನವಾದುದು. ಅಮೆರಿಕದ ಟೆಕ್ಸಾಸ್‌ನಲ್ಲಿ ಓದುತ್ತಿರುವ ಈ ಹುಡುಗ ಕೂಡ ಅಜ್ಜನ ಮನೆಗೆ ಬಂದಾಗ ನಗರದಂಚಿನ ಕೊಳಕು ಪರಿಸರವನ್ನು ನೋಡಿದ್ದ. ಕೊಳೆಗೇರಿಗಳಲ್ಲಿ ನೀರಿನ ಗುಣಮಟ್ಟ ಅವನನ್ನು ಕಂಗೆಡಿಸಿತ್ತು. ಅಲ್ಲೆಲ್ಲ ಗುಜರಿ ವಸ್ತುಗಳಿಂದ ಇಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಬೇರ್ಪಡಿಸುವ ಕೆಲಸ ನಡೆಯುತ್ತಿತ್ತು.ನಮ್ಮದಷ್ಟೇ ಅಲ್ಲ, ಜಗತ್ತಿನ ನಾನಾ ದೇಶಗಳಲ್ಲಿ ಕೆಟ್ಟು ಕೆರ ಹಿಡಿದ ಟಿವಿ, ಕಂಪ್ಯೂಟರ್, ಮೊಬೈಲ್‌ಗಳೆಲ್ಲ ನಜ್ಜುಗುಜ್ಜಾಗಿ ಹಡಗು ಏರಿ ಚೀನಾಕ್ಕೆ ಇಲ್ಲವೆ ಭಾರತಕ್ಕೆ ಬರುತ್ತವೆ. ಇಲ್ಲಿನ ಚಿಂದಿ ಕಾರ್ಮಿಕರು ಅವುಗಳನ್ನು ಬೇರ್ಪಡಿಸುವಾಗ ವಿಷಕಾರಿ ಲೋಹದ ಸಂಯುಕ್ತಗಳು ಆಸಿಡ್ ವಾಶ್‌ನಲ್ಲಿ ಬೇರ್ಪಟ್ಟು, ಕೊಳಕು ಚರಂಡಿಗಳ ಮೂಲಕ ಕೆರೆಗೋ ಹಳ್ಳಕ್ಕೋ ಸೇರುತ್ತವೆ.ಕ್ರಮೇಣ ಜಲಚರಗಳಿಗೆ, ಪ್ರಾಣಿಪಕ್ಷಿಗಳಿಗೆ, ಕೊನೆಗೆ ಮೇವಿನ ಮೂಲಕ ಜಾನುವಾರುಗಳ ಹೊಟ್ಟೆಗೆ ಸೇರುತ್ತವೆ ಮತ್ತು ಕೊಳವೆ ಬಾವಿಗಳ ಮೂಲಕ ಅಥವಾ ನೇರವಾಗಿ ಮನುಷ್ಯರ ಶರೀರದಲ್ಲೂ ಸಂಗ್ರಹವಾಗುತ್ತವೆ. ಕುಡಿಯುವ ನೀರು ಅದೆಷ್ಟೋ ಬಾರಿ ಸ್ಫಟಿಕ ಶುದ್ಧವಾಗಿ ಕಂಡರೂ ಅದರಲ್ಲಿ ಏಕಾಣು ಜೀವಿಗಳ ಲವಲೇಶವೂ ಇಲ್ಲದಿದ್ದರೂ ಆ ನೀರು ವಿಷಮಯ ಆಗಿರಬಹುದು. ಅದರಲ್ಲಿ ಕಣ್ಣಿಗೆ ಕಾಣದ ಭಾರಲೋಹಗಳ ಸಂಯುಕ್ತಗಳು ಲೀನವಾಗಿರಬಹುದು.ಅಂಥ ನೀರಲ್ಲಿ ಸೇರ್ಪಡೆಯಾಗಿರುವ ಕ್ರೋಮಿಯಂ, ಕ್ಯಾಡ್ಮಿಯಂ, ವೆನಾಡಿಯಂ, ಪಾದರಸ ಮುಂತಾದ ವಿಷಕಾರಿ ಭಾರಲೋಹಗಳನ್ನು ಹೀರಿ ತೆಗೆಯುವುದು ಹೇಗೆಂಬ ಬಗ್ಗೆ 17 ವರ್ಷದ ಪೆರ್ರಿ ಅಮೆರಿಕದ ಟೆಕ್ಸಾಸ್‌ನಲ್ಲಿ ಅಧ್ಯಯನ ನಡೆಸಿದ. ಬಳಕೆಯಲ್ಲಿದ್ದ ಎಲ್ಲ ವಿಧಾನಗಳೂ ತೀರ ದುಬಾರಿ, ತೀರ ಕ್ಲಿಷ್ಟವಾಗಿದ್ದವು. ವಿಶ್ವಾಸಾರ್ಹತೆ ಇರಲೇ ಇಲ್ಲ.ಅಮೆರಿಕಕ್ಕೆ ಮರಳಿದ ಮೇಲೆ, ಈ ಯುವಕ ಗ್ರಾಫೀನ್ ನ್ಯಾನೊ ಕೊಳವೆಗಳ ಒಂದು ಸೋಸು ಪರದೆಯನ್ನು ತಯಾರಿಸಿದ. ಅದರ ಮೂಲಕ ಇಂಥ ಕೊಳೆನೀರನ್ನು ಹಾಯಿಸಿ ನೋಡಿದ. ಕೆಲವು ವಿಫಲ ಪ್ರಯತ್ನಗಳ ನಂತರ ನೂರಕ್ಕೆ ನೂರರಷ್ಟು ಚೊಕ್ಕಟವಾಗಿ ನೀರನ್ನು ಸೋಸಬಲ್ಲ ಅಲ್ಪವೆಚ್ಚದ ಸೋಸು ಪರದೆ ಸಿದ್ಧವಾಯಿತು. ಅಮೆರಿಕದ ಇತರೆಲ್ಲ ಯುವ ಸಂಶೋಧಕರಿಗಿಂತ ಈತನ ಸಾಧನೆಗೇ ಪ್ರಶಸ್ತಿ ಲಭಿಸಿತು.ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲೂ 15 ಸಾವಿರ ಡಾಲರ್‌ಗಳ ‘ಸ್ಟಾಕ್‌ಹೋಮ್ ಜೂನಿಯರ್’ ಜಲ ಪ್ರಶಸ್ತಿ ಪೆರ್ರಿಯ ಮುಡಿಗೇರಿತು. ಬಯಸಿದ್ದರೆ ಆತ ತನ್ನ ಸಾಧನಕ್ಕೆ ಪೇಟೆಂಟ್ ಪಡೆದು ಡಾಲರ್ ಕೋಟ್ಯಧೀಶನಾಗಲು ಸಾಧ್ಯವಿತ್ತು. ಆದರೆ ಪೆರ್ರಿ ಅದನ್ನು ಬಯಸಲಿಲ್ಲ. ಲೋಕ ಕಲ್ಯಾಣಕ್ಕೆಂದು ತನ್ನ ಸೋಸು ಪರದೆಯ ತಾಂತ್ರಿಕ ವಿವರಗಳನ್ನು ಮುಕ್ತವಾಗಿ ಬಿಡುಗಡೆ ಮಾಡಿ ಸೈ ಎನ್ನಿಸಿಕೊಂಡ.ಕೊಳೆನೀರು, ಕೊಳೆಗೇರಿ, ಜಲದಾರಿದ್ರ್ಯಗಳ ಬಗ್ಗೆ ಏನೂ ಗೊತ್ತಿಲ್ಲದ ಅಮೆರಿಕದ ಮಧ್ಯಮ ವರ್ಗದ ಮಕ್ಕಳಿಗೆ ಭಾರತದ ಕೊಳೆಗೇರಿಗಳು ಹೊಸ ಸಂಶೋಧನೆಯ ಅವಕಾಶಗಳನ್ನು ತೆರೆದು ತೋರಿಸಿದವು. ಆದರೆ ಭಾರತದಲ್ಲೇ ಹುಟ್ಟಿ ಬೆಳೆದ ರಾಜೇಂದ್ರ ಸಿಂಗ್‌ಗೆ ಹೊಸತಲ್ಲದ, ತೀರ ಹಳೇ ಸಂಪ್ರದಾಯಗಳ ಬಗೆಗೆ ಆಸಕ್ತಿ ಇತ್ತು.ರಾಜಸ್ತಾನದಲ್ಲಿ ಮೂಲೆಗುಂಪಾಗುತ್ತಿದ್ದ ಪುರಾತನ ಜಲಖಜಾನೆಗಳ ಜಾಡು ಹಿಡಿದು ಅವರು 1985ರಲ್ಲಿ ಹಳ್ಳಿಗಳನ್ನು ಅಲೆಯತೊಡಗಿದ್ದರು. ಹಿಂದೊಂದು ಕಾಲದಲ್ಲಿ ಧಾನ್ಯದ ಮಾರುಕಟ್ಟೆ ಎನಿಸಿದ್ದ ಅಲ್ವಾರ್ ಪಟ್ಟಣದ ಸುತ್ತಮುತ್ತ ಬರ ಆಕ್ರಮಿಸಿತ್ತು.

ಕೆರೆಕಟ್ಟೆಗಳೆಲ್ಲ ಬರಿದಾಗಿ, ಗಿಡಮರಗಳೆಲ್ಲ ಕಣ್ಮರೆಯಾಗಿ, ಹಳ್ಳಿಗಳೆಲ್ಲ ಬಿಕೋ ಎನ್ನುತ್ತಿದ್ದವು. ಏಕೆಂದರೆ ಪುರಾತನ ಕಾಲದ ಸಾಂಪ್ರದಾಯಿಕ ‘ಜೋಹಡ್’ ಎಂಬ ನೀರುಕಟ್ಟೆಗಳೆಲ್ಲ ಬರೀ ಒಣದೂಳಿನ ಗುಂಡಿಗಳಾಗಿದ್ದವು.ಯುವಕರೆಲ್ಲ ಊರುಬಿಟ್ಟು ಪಟ್ಟಣ ಸೇರಿದ್ದರು. ಅನುಕೂಲಸ್ಥ ಕೆಲವರು ಕೊಳವೆ ಬಾವಿಗಳಿಂದ ಹಗಲೂ ರಾತ್ರಿ ನೀರೆತ್ತಿ ಅಂತರ್ಜಲವನ್ನೂ ಬರಿದು ಮಾಡಿದ್ದರು. ಇಡೀ ಅಲ್ವಾರ್ ಜಿಲ್ಲೆಯನ್ನೇ ಕಪ್ಪು ಜಿಲ್ಲೆ ಎಂದು ಸರ್ಕಾರ ಘೋಷಿಸಿತ್ತು.

ಭಣಗುಡುವ ಊರಿಂದ ಊರಿಗೆ ಅಲೆದಾಡುತ್ತ ರಾಜೇಂದ್ರ ಸಿಂಗ್ ಅಲ್ಲಲ್ಲಿ ಇದ್ದಬದ್ದ ಕೆಲವು ಯುವಕರನ್ನು ಸೇರಿಸಿ ‘ತರುಣ ಭಾರತ ಸಂಘ’ವನ್ನು ಕಟ್ಟಿ ಅಲ್ಲಿನ ನೀರ್ಕಟ್ಟೆಗಳಿಗೆ ಮರುಜೀವ ಕೊಡುವ ಕೆಲಸವನ್ನು ಪ್ರಾರಂಭಿಸಿದರು.ಹನಿಹನಿ ಮಳೆನೀರೂ ಆಯಾ ಊರಿನ ಕಟ್ಟೆಗಳಲ್ಲೇ ಸಂಗ್ರಹವಾಗುವಂತೆ ಶ್ರಮದಾನ ಮಾಡಿದರು. ಮೊದಲ ಮೂರು ನಾಲ್ಕು ವರ್ಷಗಳ ಎದೆಗುಂದಿಸುವ ಸಾಹಸದ ನಂತರ ಕೆರೆಕಟ್ಟೆಗಳು ತುಂಬಿದವು. ಭೂಮಿ ಜೀವಂತವಾಯಿತು. ವರ್ಷವಿಡೀ ಹಣ್ಣು, ತರಕಾರಿ, ದವಸ ಧಾನ್ಯಗಳನ್ನು ಬೆಳೆಯುವ ಅವಕಾಶ ಸಿಕ್ಕಿದ್ದರಿಂದ ವಲಸೆ ಹೋಗಿದ್ದವರು ಊರಿಗೆ ಮರಳಿ ಬಂದರು.ದೂರದ ಊರುಗಳ ಜನರೂ ರಾಜೇಂದ್ರ ಸಿಂಗರ ತರುಣ ಭಾರತ ತಂಡದ ನೆರವು ಕೋರತೊಡಗಿದರು. ಸುಮಾರು 60 ವರ್ಷಗಳಿಂದ ಚಲನೆಯನ್ನೇ ಮರೆತಿದ್ದ ಅರ್ವಾರಿ ನದಿ ಕ್ರಮೇಣ ಏಪ್ರಿಲ್‌ವರೆಗೆ ಹರಿಯುವುದನ್ನು ಕಲಿಯಿತು. ಮುಂದಿನ ಕೆಲ ವರ್ಷಗಳಲ್ಲಿ ಜೂನ್‌ವರೆಗೂ ಹರಿಯುತ್ತ ಹೊಸ ಮಳೆಗಾಲದಲ್ಲಿ ಮತ್ತೆ ಮೈತುಂಬಿ ದಾಖಲೆ ಬರೆಯಿತು. ಅರ್ವಾರಿ ನದಿಗೆ ಅಂತರರಾಷ್ಟ್ರೀಯ ನದಿ ಪ್ರಶಸ್ತಿ ಲಭಿಸಿತು.ಜೋಹಡ್ ಎಂಬ ನೀರ್ಕಟ್ಟೆಗಳ ಮೂಲಕ ನಡೆದು ಹೋದ ಈ ಜಾದೂವನ್ನು ನೋಡಲೆಂದು ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಖುದ್ದಾಗಿ ಬಂದರು. ‘ಓಡುವ ನೀರನ್ನು ನಡೆಯುವಂತೆ ಮಾಡಿ; ನಡೆಯುವ ಧಾರೆ ಅಲ್ಲೇ ನಿಲ್ಲುವಂತೆ ಮಾಡಿ; ನಿಂತ ನೀರು ಅಲ್ಲೇ ಇಂಗುವಂತೆ ಮಾಡಿ’ ಎಂಬ ಮಾತು ಎಲ್ಲ ಹಳ್ಳಿಕೊಳ್ಳಗಳಲ್ಲಿ ಪ್ರತಿಧ್ವನಿಸಿದವು.

1998ರ ಹೊತ್ತಿಗೆ ರಾಜಸ್ತಾನದ 850 ಗ್ರಾಮಗಳಲ್ಲಿ 4500 ನೀರ್ಕಟ್ಟೆಗಳು ಸಿದ್ಧವಾದವು. ಅರ್ವಾರಿ ನದಿಯ ಮಾದರಿಯಲ್ಲಿ ರೂಪಾರೆಲ್, ಭಾಗಣಿ ನದಿ, ಸಾರ್ಸಾ ನದಿ, ಜಹಜ್ವಾಲಿ ನದಿಗಳೂ ಮತ್ತೆ ಜೀವ ತಳೆದವು. ರಾಜೇಂದ್ರ ಸಿಂಗರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿತು.ಅಂದು ನರೇಗಾ, ಮನ್ರೇಗಾ ಯಾವುದೂ ಇರಲಿಲ್ಲ. ‘ಕೂಲಿಗಾಗಿ ಕಾಳು’ ಕೂಡ ಸಿಗುತ್ತಿರಲಿಲ್ಲ. ಊರೂರಲ್ಲಿ ಜೆಸಿಬಿಗಳು, ಬುಲ್ಡೋಜರ್‌ಗಳು ಇರಲಿಲ್ಲ. ಜನರು ತಾವಾಗಿ ಬಂದು ಕೈಯಾರೆ ಬಗ್ಗಿ ಎದ್ದು ತಂತಮ್ಮ ಊರಿನ ಕೆರೆಗಳ ಹೂಳೆತ್ತುತ್ತಿದ್ದರು. ಒಂದು ಊರಿನ ಯಶಸ್ಸೇ ಇನ್ನೊಂದು ಊರಿಗೆ ಪ್ರೇರಕವಾಗುತ್ತಿತ್ತು. ಜನರನ್ನು ಹುರಿದುಂಬಿಸಬಲ್ಲ, ನಿಸ್ವಾರ್ಥ ನಾಯಕನ ಪ್ರೇರಣೆ ಇತ್ತು.ಅಂಥ ನಾಯಕತ್ವವನ್ನು ರಾಜಸ್ತಾನದ ಜನರಿಗೆ ಕೊಟ್ಟಿದ್ದಕ್ಕೆ ರಾಜೇಂದ್ರ ಸಿಂಗರಿಗೆ ಒಂದೂವರೆ ಲಕ್ಷ ಡಾಲರ್ ಮೌಲ್ಯದ ಸ್ಟಾಕ್‌ಹೋಮ್ ಜಲ ಸನ್ಮಾನ ಕೂಡ ಸಿಕ್ಕಿತು. ‘ನೀರಿನ ಸಮಸ್ಯೆಯನ್ನು ಕೇವಲ ವಿಜ್ಞಾನ ತಂತ್ರಜ್ಞಾನದಿಂದಷ್ಟೇ ಪರಿಹರಿಸಲು ಸಾಧ್ಯವಿಲ್ಲ... ನೀರಿನ ಸುಸ್ಥಿರ ನಿರ್ವಹಣೆ ಕುರಿತಂತೆ ರಾಜೇಂದ್ರ ಸಿಂಗ್ ಅವರ ಸಾಧನೆಗಳು ಎಲ್ಲರಿಗೂ ಮಾದರಿಯಾಗಬೇಕು’ ಎಂದು ಪ್ರಶಸ್ತಿ ಪತ್ರದಲ್ಲಿ ಶ್ಲಾಘನೆ ಬಂತು. ನೊಬೆಲ್ ಪ್ರಶಸ್ತಿಗಳ ಉಗಮಸ್ಥಾನವೆನಿಸಿದ ಸ್ವೀಡಿಶ್ ನಗರ ಸ್ಟಾಕ್‌ಹೋಮ್‌ನಲ್ಲಿ ಜಾಗತಿಕ ಮಾನ್ಯತೆ ಪಡೆದ Stockholm International Water Institute (SIWI) ಸಂಸ್ಥೆ ಕೂಡ ಇದೆ. ನೀರಿಗೆ ಸಂಬಂಧಿಸಿದ ಎಲ್ಲ ಬಗೆಯ ಸಮಸ್ಯೆಗಳ ಪರಿಹಾರಕ್ಕೆ ಮುಡಿಪಾಗಿರುವ ಈ ಸಂಸ್ಥೆ ಪ್ರತಿ ವರ್ಷ ಆಗಸ್ಟ್ 28ರಿಂದ ಒಂದು ವಾರದ ಕಾಲ ವಿಶ್ವ ಜಲಸಪ್ತಾಹ’ವನ್ನು ಆಚರಿಸುತ್ತದೆ.ಈ ವರ್ಷ ಹೊಸದಾಗಿ ಒಂದು ‘ಐಡಿಯಾ ಮಾರುಕಟ್ಟೆ’ಯನ್ನು ಆರಂಭಿಸಲಿದೆ. ನೀರು ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾರಿಗೆ ಏನೇ ಹೊಸ ಐಡಿಯಾ ಹೊಳೆದರೂ ಇದೇ ಮೇ 20ರೊಳಗಾಗಿ ತಮ್ಮ ಪ್ರಸ್ತಾವನೆಯನ್ನು siwi.org ಜಾಲತಾಣದಲ್ಲಿ ಸೇರ್ಪಡೆ ಮಾಡಲು ಅವಕಾಶವಿದೆ.ನೀರಿನ ಮಿತವ್ಯಯ, ಶುದ್ಧೀಕರಣ, ಮರುಬಳಕೆ, ಕೆರೆಗಳ ಮರುಸೃಷ್ಟಿ ಹೀಗೆ ನಾನಾ ಬಗೆಯಲ್ಲಿ ಜಲಕ್ಕೆ ಜೀವ ತುಂಬುವ ಹೊಸದೇನಾದರೂ ಯೋಚನೆ ಬಂದಿದ್ದರೆ, ಐಡಿಯಾ ಮಾರುಕಟ್ಟೆಯಲ್ಲಿ ಅದಕ್ಕೆ ಮಾನ್ಯತೆ ಸಿಕ್ಕರೂ ಸಿಗಬಹುದು.

ಸಿಕ್ಕರೆ ಅದನ್ನು ಜಾರಿಗೆ ತರಲು ಧನಸಹಾಯ, ತಂತ್ರಜ್ಞಾನದ ನೆರವು ಸಿಗುವಂತೆ ಈ ಸಂಸ್ಥೆ ಸಹಾಯ ಮಾಡುತ್ತದೆ. ಕನ್ನಡಿಗರೂ ಒಂದು ಕೈ ನೋಡಬಹುದು. ಚಿಂತೆಯ ಕಾರ್ಮೋಡದ ಮಧ್ಯೆ ಹೊಸದೊಂದು ಮಿಂಚಿಗಾಗಿ ನಾವೆಲ್ಲ ಕಾಯುತ್ತಿದ್ದೇವೆ. ನೆಲವೂ ಕಾದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry