7

ನಟನೊಬ್ಬನ ಕಥೆಗೆ ಪಾತ್ರವಾಗಿದ್ದೇನೆ

Published:
Updated:
ನಟನೊಬ್ಬನ ಕಥೆಗೆ ಪಾತ್ರವಾಗಿದ್ದೇನೆ

* ಹಿರಿ ಮತ್ತು ಕಿರುತೆರೆಯ ಅಂತರ ನಿಮ್ಮ ಅನುಭವಕ್ಕೆ ಬಂದಂತೆ ಹೇಳುವುದಾದರೆ...

ಕಿರುತೆರೆ ನನಗೆ ಇದೇ ಮೊದಲೇನೂ ಅಲ್ಲ. ಈ ಹಿಂದೆ ಝೀ ಕನ್ನಡದ ‘ಶ್ರೀರಸ್ತು ಶುಭಮಸ್ತು’ ಮೂಲಕ ಕಿರುತೆರೆಗೆ ಬಂದೆ. ಆನಂತರ ದೂರದರ್ಶನ ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ನಟಿಸಿದೆ. ದೊಡ್ಡತೆರೆ- ಕಿರುತೆರೆಗೆ ದೊಡ್ಡ  ವ್ಯತ್ಯಾಸಗಳೇನೂ ನನಗೆ ಕಂಡಿಲ್ಲ. ಕಲಾವಿದನಾಗಿ ಹೊಟ್ಟೆಪಾಡಿಗೆ ಯಾವುದರಲ್ಲಾದರೂ ತೊಡಗಲೇಬೇಕು. ಒಂದಂತೂ ಸತ್ಯ, ಟಿವಿಯಲ್ಲಿ ಧಾರಾವಾಹಿ ಪ್ರಸಾರವಾಗುವಾಗ ಜನಪ್ರಿಯತೆ ಹೆಚ್ಚಿರುತ್ತದೆ. ಆದರೆ, ಅದು  ಮುಗಿದ ತಕ್ಷಣ ಇಲ್ಲವಾಗುತ್ತದೆ. ಸಿನಿಮಾದಲ್ಲಾದರೆ ಒಮ್ಮೆ ಗಳಿಸಿದ ಜನಪ್ರಿಯತೆ ಕೊನೆತನಕ ಉಳಿಯುತ್ತದೆ. ಕೆಲಸದ ವಿಷಯಕ್ಕೆ ಬಂದರೆ ಟಿವಿಯಲ್ಲಿ ಕೆಲಸ ಜಾಸ್ತಿ. ಅಷ್ಟು ಮಾತ್ರ ಅಲ್ಲದೆ, ಹೆಚ್ಚಿನ ಅನುಭವವನ್ನು ಕೊಡುತ್ತದೆ. ಸಿನಿಮಾದಲ್ಲಿ ಕೆಲಸ ಸ್ವಲ್ಪ ಕಡಿಮೆ ಎನ್ನಿಸುತ್ತದೆ.

* ನಿತ್ಯವೂ ಶೂಟಿಂಗ್‌ ಒತ್ತಡವನ್ನು ಹೇಗೆ ನಿಯಂತ್ರಿಸುತ್ತೀರಿ?

ಸೀರಿಯಲ್‌ಗಳು ಸಿನಿಮಾದಂತೆ ಅಲ್ಲ. ಇಲ್ಲಿ ನಿತ್ಯವೂ ಬಣ್ಣ ಹಚ್ಚಲೇಬೇಕು. ಆದರೆ, ಒತ್ತಡವೇನೂ ಅನ್ನಿಸುವುದಿಲ್ಲ. ಬಿಡುವು ಬೇಕು ಎಂದು ಅನ್ನಿಸಿದಾಗ  ಕೇಳಿ ಅವಕಾಶ ಮಾಡಿಕೊಳ್ಳುತ್ತೇನೆ. ಅದಾವುದೂ ನನಗೆ ತೊಂದರೆ ಅನ್ನಿಸುವುದಿಲ್ಲ.

* ‘ಅರಮನೆ’ಯಲ್ಲಿ ನಿಮ್ಮ ಪಾತ್ರವೇನು?

ಸಿನಿಮಾ ನಟನೊಬ್ಬನ ಏಳುಬೀಳಿನ ಕಥೆಗೆ ಜೀವ ತುಂಬುತ್ತಿದ್ದೇನೆ. ಖ್ಯಾತಿ- ಶ್ರೀಮಂತಿಕೆ ಪಡೆದಿದ್ದರೂ ನನ್ನ ಬದುಕಿನಲ್ಲಿಯೂ ಬಿರುಗಾಳಿ      ಕಹಿಯನ್ನು  ಉಂಟುಮಾಡುತ್ತದೆ. ಆದರೆ ನನ್ನ ಕುಟುಂಬದ ಖಾಸಗಿತನವನ್ನು ಸಾರ್ವತ್ರಿಕ ಮಾಡುವ ಆಸಕ್ತಿ ಇರುವುದಿಲ್ಲ. ವಿಚ್ಛೇದನ ಪಡೆದು ಗಂಡ- ಹೆಂಡತಿ ಬದುಕುತ್ತಿರುತ್ತೇವೆ. ಆಕೆಯ ಜೊತೆ ಒಬ್ಬ ಮಗಳು, ನನ್ನ ಜೊತೆ ಒಬ್ಬ ಮಗಳು ಬೆಳೆದಿರುತ್ತವೆ. ಮಗು ದೊಡ್ಡದಾಗಿದೆ ಅಮ್ಮನನ್ನು ಕೇಳುತ್ತಾಳೆ. ಆದರೆ ನನಗೆ ಬದುಕಿರುವ ತಾಯಿಯನ್ನು ಸತ್ತಿದ್ದಾಳೆ ಎಂದು ಸುಳ್ಳು ಹೇಳಲು ಮನಸ್ಸಿಲ್ಲ. ಹೀಗಿರುವಾಗ ನನಗೊಬ್ಬ ಚಿಕ್ಕಮ್ಮ ಇದ್ದಾರೆ. ಅವರಿಗೆ ಏನೋ ಮತ್ಸರ. ನನ್ನ ಸಂಸಾರ ನಾಶವಾದರೆ ಸಾಕು ಎನ್ನುವ ಮನಸ್ಥಿತಿ. ಆಕೆ ನಿಮ್ಮ ಅಮ್ಮ ಸತ್ತಿದ್ದಾಳೆ ಎಂದು ಮಗಳಿಗೆ ಹೇಳುತ್ತಾಳೆ.ಪ್ರಜ್ಞಾವಂತಳಾದ ನನ್ನ ಮಗಳು ಸ್ವತಃ ಮುಂದೆ ನಿಂತು ತನ್ನ ತಂದೆಗೆ ಮರು ಮದುವೆ ಮಾಡಿಸುತ್ತಾಳೆ. ಅಷ್ಟರಲ್ಲಿ ಮೊದಲ ಹೆಂಡತಿ ಪ್ರವೇಶವಾಗುತ್ತದೆ. ಧಾರಾವಾಹಿ ಈಗಷ್ಟೇ ಶುರುವಾಗಿದೆ. ಒಂದು ಕುತೂಹಲದ ಸಂಗತಿ ಎಂದರೆ ಸುಮಾರು ನೂರು ಕಂತು ಮುಗಿಯುವ ಹೊತ್ತಿಗೆ ಸುಧಾರಾಣಿ ಪ್ರವೇಶ ಪಡೆಯುತ್ತಾರೆ.

* ಅಂದರೆ, ಹೆಂಡತಿಯರಿಬ್ಬರ ಕಿತ್ತಾಟ ಇಲ್ಲಿ ಬರುತ್ತಾ?

ಇಲ್ಲ. ಮೊದಲ ಹೆಂಡತಿ ಆಕಸ್ಮಿಕ ಪ್ರವೇಶ ಆಗುತ್ತದೆ. ಹೊಸ ಬದುಕಿನ ಪ್ರವೇಶಕ್ಕೆ ಅಡ್ಡಿಯಾಗದಂತೆ ತಾನು ತನ್ನ ದಾರಿ ಹಿಡಿಯುತ್ತಾಳೆ. ಕವಲೊಡೆದ ಹಿಂದಿನ ಬದುಕು ಮತ್ತೆ ಮುಖ್ಯಧಾರೆಗೆ ಬೆಸೆದುಕೊಳ್ಳುವ ಯಾವ ಪ್ರಯತ್ನವನ್ನೂ ಆಕೆ ಮಾಡುವುದಿಲ್ಲ. ಹಳೆಯದನ್ನು ಕೆದಕದಿರುವುದೂ ಹೊಸ ಬಗೆಯ ತಿರುವು. ಒಟ್ಟಾರೆ ಕಥೆ ತುಂಬಾ ಚೆನ್ನಾಗಿದೆ.

* ಅವಕಾಶ ಹುಡುಕುವ ಹುಡುಗರಿಗೆ ಏನು ಹೇಳಲು ಬಯಸುತ್ತೀರಾ?

ಕಲಾಕ್ಷೇತ್ರವೂ ದೇವಸ್ಥಾನ ಎನ್ನುವ ಪ್ರಜ್ಞೆ ಇರಬೇಕು. ದೇವಸ್ಥಾನದಲ್ಲಿ ನಮ್ಮ ನಡವಳಿಕೆ, ಹಾವ- ಭಾವ ಹೇಗಿರುತ್ತವೆಯೋ ಅದು ಈ ಕ್ಷೇತ್ರದಲ್ಲಿಯೂ ಇರಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಗೌರವ, ಮಾಡುವ ಕೆಲಸಕ್ಕೆ ಮರ್ಯಾದೆ ಕೊಟ್ಟರೆ ಸಾಕು. ಸುಳ್ಳು- ಬುರುಡೆ ಹೇಳುತ್ತಾ ತಿರುಗಾಡುವವರು ಈಗೀಗ ಹೆಚ್ಚಾಗುತ್ತಿದ್ದಾರೆ. ಆ ಮಾರ್ಗದಲ್ಲಿ ಸಾಗಿದರೆ ಎಂತಹ ದೊಡ್ಡನಟನಾಗಿದ್ದರೂ ಮಕಾಡೆ ಬೀಳುವುದು ತಪ್ಪುವುದಿಲ್ಲ. ಇಂತಹ ಕಟು ಸತ್ಯವನ್ನು ಅರಿತು ನಿಷ್ಠೆ ಹಾಗೂ ಪ್ರಜ್ಞೆಯ ಎಚ್ಚರದಲ್ಲಿ ಸಾಗಿದರೆ ಎಲ್ಲಾ ರೀತಿಯ ಯಶಸ್ಸು ಸಿಗುವ ಬಗ್ಗೆ ಅನುಮಾನ ಇಲ್ಲ.

* ನಿಮ್ಮ ‘ಯಾನ’ದ ಬಗ್ಗೆ ಹೇಳಿ?

ಚಿತ್ರರಂಗಕ್ಕೆ ನಮ್ಮ ಮಕ್ಕಳು ಮೂರನೇ ತಲೆಮಾರು. ನಾನು, ನನ್ನ ಶ್ರೀಮತಿ ವಿಜಯಲಕ್ಷ್ಮಿ ಸಿಂಗ್‌ ಇಬ್ಬರೂ ಸಿನಿಮಾ ಹಿನ್ನೆಲೆ ಇರುವ ಕುಟುಂಬದಿಂದ ಬಂದವರು. ನಮ್ಮ ಮಕ್ಕಳಿಗೆ ಬೇಡ ಎಂದರೂ ಸಿನಿಮಾರಂಗ ತುಂಬಾ ಪ್ರಭಾವ ಬೀರಿರುತ್ತದೆ. ನನ್ನ ಶ್ರೀಮತಿ ನಿರ್ದೇಶನದಲ್ಲಿ ‘ಯಾನ’ ಸಿನಿಮಾ ಮಾಡುವ ಚಿಂತನೆ ಬಂತು. ಹೀಗಿರುವಾಗ ನಟಿಯರನ್ನು ಬೇರೆ ಎಲ್ಲಿ ಹುಡುಕುವುದು, ನಮ್ಮ ಮಕ್ಕಳಾದ ವೈಭವಿ, ವೈನಿಧಿ, ವೈಸಿರಿ ಅವರನ್ನೇ ಆಯ್ಕೆ ಮಾಡಿಕೊಂಡರೆ ಹೇಗೆ ಎನ್ನುವ ಯೋಚನೆಯಿಂದ ಮಕ್ಕಳನ್ನು ಹಾಕಿಕೊಂಡು  ಆ ಸಿನಿಮಾವನ್ನು ನಿರ್ಮಾಣವನ್ನು ಮಾಡುತ್ತಿದ್ದೇವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry