7

ಇದಕ್ಕೆ ಎಲ್ಲರೂ ‘ಉಚಿತ’ ಅಪ್ಪಅಮ್ಮಂದಿರು!

ಆರ್‌. ಪೂರ್ಣಿಮಾ
Published:
Updated:
ಇದಕ್ಕೆ ಎಲ್ಲರೂ ‘ಉಚಿತ’ ಅಪ್ಪಅಮ್ಮಂದಿರು!

ಚುನಾವಣೆಯ ಕಾಲ ಎನ್ನುವುದು ಮನುಷ್ಯ ವರ್ತನೆಯ ಹೊಸ ಅಧ್ಯಾಯಗಳು ತೆರೆದುಕೊಳ್ಳುವ ಕಾಲ. ಈ ಮಾತು ಎಲ್ಲ ದೇಶಗಳಿಗೂ ಅನ್ವಯಿಸುತ್ತದೆ ಎಂಬ ಸತ್ಯವನ್ನು ಅಮೆರಿಕದ ಅಧ್ಯಕ್ಷ ಚುನಾವಣೆಯ ವರದಿಗಳೇ ಸೊಗಸಾಗಿ ಹೇಳುತ್ತಿವೆ.ಇನ್ನು ನಮ್ಮ ದೇಶದಲ್ಲಿ ಸಂಸತ್ತಿಗೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯುವ ಕಾಲದಲ್ಲಿ, ಬಯಲಿಗೆ ಬರುವ ಸಂಗತಿಗಳು ಮತ್ತು ಸುದ್ದಿಗಳು ನಮ್ಮ ದೇಶದ ಮೂಲಸತ್ವವಾದ ವೈವಿಧ್ಯಕ್ಕೆ, ಬಹುತ್ವಕ್ಕೆ ಅನುಗುಣವಾಗಿಯೇ ಇರುತ್ತವೆ. ಬೇಕಾದರೆ ಇದನ್ನು ‘ಚುನಾವಣಾ ಜಾನಪದ’ ಎಂದು ಕರೆಯಬಹುದು!ಚುನಾವಣೆ ಎಂದ ಮೇಲೆ ಅದಕ್ಕೆ ಮಾಮೂಲು ರಾಜಕೀಯ, ಸಾಮಾಜಿಕ ಮತ್ತು ಬಹಳ ಮುಖ್ಯವಾಗಿ ಜಾತಿಧರ್ಮಗಳ ಆಧಾರ, ಆಯಾಮಗಳು ಇದ್ದೇ ಇರುತ್ತವೆ.ರಾಜಕೀಯ ನಿಪುಣರು, ಸಮಾಜಶಾಸ್ತ್ರಜ್ಞರು, ಮಾಧ್ಯಮ ತಜ್ಞರು ಮುಂತಾದವರು ಇವುಗಳ ವಿಶ್ಲೇಷಣೆಯನ್ನು ಒಂದು ಪವಿತ್ರ ಕರ್ತವ್ಯವೇನೋ ಎಂಬಂತೆ ಮಾಡುತ್ತಾರೆ. ಅದರಲ್ಲಿ ಪಾಂಡಿತ್ಯದ ಪರಿಮಳ ಇರುವ ಹಾಗೆ, ದುಡ್ಡುಕಾಸಿನ ದುರ್ವಾಸನೆಯೂ ಇರುತ್ತದೆ ಎನ್ನುವುದು ಬೇರೆ ಮಾತು.ಅವೆಲ್ಲವನ್ನೂ ಮೀರಿದ ಜಾನಪದ ಚುನಾವಣೆಯ ಆಸುಪಾಸಿನಲ್ಲಿ ಹುಟ್ಟಿಕೊಳ್ಳುತ್ತದೆ. ಅದರಲ್ಲಿ ಹಾಸ್ಯ, ಲೇವಡಿ, ವಿಡಂಬನೆ, ಹೊಟ್ಟೆಕಿಚ್ಚು, ಕೋಪತಾಪ, ರಾಜಕೀಯ ದ್ವೇಷ ಇವೆಲ್ಲವೂ ಇರುತ್ತವೆ. ಈಗ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ನಡೆಯುತ್ತಿರುವ ಚುನಾವಣೆಗಳು ಇದಕ್ಕೆ ಹೊರತಾಗಿರಲು ಸಾಧ್ಯವೇ?ತಮಿಳುನಾಡಿನ ಚುನಾವಣೆಯನ್ನು ಕುರಿತು ಬಂದಿರುವ ವಿಶ್ಲೇಷಣಾ ಬರಹಗಳು ನಿಜವಾದ ಅರ್ಥದಲ್ಲಿ ಮಿಕ್ಕವರದಕ್ಕಿಂತ ಒಂದು ತೂಕ ಹೆಚ್ಚು. ರಾಷ್ಟ್ರೀಯ ಮಾಧ್ಯಮದಲ್ಲಿ ನಡೆಯುವ ರಾಜಕೀಯ ಸಂವಾದದಲ್ಲಿ ಅದಕ್ಕೇ ಹೆಚ್ಚು ಸ್ಥಾನ ಸಿಗುತ್ತದೆ. ಪಶ್ಚಿಮ ಬಂಗಾಳ ಅಕ್ಕನ ರಾಜ್ಯವಾದರೆ, ತಮಿಳುನಾಡು ಅಮ್ಮನ ರಾಜ್ಯ. ಆ ‘ದೀದಿ’ಗೂ ಈ ‘ಅಮ್ಮ’ನಿಗೂ ಚುನಾವಣೆ ನಿಸ್ಸಂಶಯವಾಗಿ ದೊಡ್ಡ ಪರೀಕ್ಷೆ.ಮಿಕ್ಕವರಿಗೂ ಚುನಾವಣೆ ಪರೀಕ್ಷೆಯೇ ಆಗಿರುತ್ತದೆ. ಆದರೆ ತಮಿಳುನಾಡಿನ ಚುನಾವಣೆಯ ‘ಮದರ್’ಗಿರುವಷ್ಟು ಖದರ್ ಅವರಿಗಿಲ್ಲ. ಈ ರಾಜ್ಯದಲ್ಲಂತೂ ವರ್ಷದ ಪ್ರತಿಯೊಂದು ದಿನವೂ ‘ಮದರ್ಸ್‌ ಡೇ’!ಕರ್ನಾಟಕ ಮೂಲದ ‘ಪೆರಿಯಾರ್’ ರಾಮಸ್ವಾಮಿ ನಾಯಕರ್, ಕೇರಳ ಮೂಲದ ಎಂ.ಜಿ. ರಾಮಚಂದ್ರನ್ ಅವರೆಲ್ಲ ತಮಿಳುನಾಡಿನ ಮೇಲೆ ಬೀರಿದ ರಾಜಕೀಯ ಪ್ರಭಾವವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡದ್ದು   ಕರ್ನಾಟಕ ಮೂಲದವರೇ ಆದ ಜಯಲಲಿತಾ ಎಂಬ ‘ಅಮ್ಮ’. ರಾಜಕಾರಣಿಗಳು ಏನೋ ಒಂದು ಕಾರಣಕ್ಕೆ ಸೆರೆಮನೆ ಕಂಡ ಮೇಲೆ ರಾಜಕೀಯವಾಗಿ ತೆರೆಮರೆಗೆ ಸರಿಯುತ್ತಾರೆಂದೇನಲ್ಲ; ಆದರೆ ಅಮ್ಮನ ಹಾಗೆ ಮತ್ತೆ ಮೆರೆದವರು ಬಹಳ ಇಲ್ಲ.ಎಷ್ಟಾಗಲೀ ಅವರು ಅಮ್ಮನಾದ್ದರಿಂದ ಕೊಡುವುದು, ನೀಡುವುದು ಎಲ್ಲದರಲ್ಲೂ ಅವರು ಅಮ್ಮನೇ. ಈ ಚುನಾವಣೆಯಲ್ಲಿ ಅವರು ಜನರಿಗೆ ಪುಕ್ಕಟೆ ಉಡುಗೊರೆಗಳನ್ನು ಕೊಡುವುದರಲ್ಲಿ ಕರ್ಣನನ್ನು ಮೀರಿಸಿದ್ದಾರಂತೆ. ಆದ್ದರಿಂದಲೇ ‘ಅಮ್ಮಾ’ ಕಥಾನಕವೂ ಅಗಾಧವಾಗಿಯೇ ಬೆಳೆದಿದೆ. ಆದರೂ ಅದರಲ್ಲಿ ಗಂಭೀರವಾದ ರಾಜಕೀಯ ವಿಶ್ಲೇಷಣೆಗೆ ಬೇಕಾದ ಅಂಶಗಳು ಖಂಡಿತ ಸಿಗುತ್ತವೆ ಅಲ್ಲವೇ?ಚುನಾವಣೆ ಹತ್ತಿರ ಇದೆ ಎನ್ನುವುದನ್ನು ತಿಳಿಯಲು ಹೆಚ್ಚು ಕಷ್ಟಪಡಬೇಕಿಲ್ಲ, ಪಕ್ಷದ ವರಿಷ್ಠರ ನಿವಾಸದ ಹತ್ತಿರ ಅಡ್ಡಾಡಿದರೆ ಸಾಕು ಎಲ್ಲವೂ ತಿಳಿಯುತ್ತದೆ. ಹಾಗೆ ಕಳೆದ ಹತ್ತಾರು ತಿಂಗಳುಗಳಲ್ಲಿ ಅಮ್ಮನ ಮನೆಗೆ ಬಂದವರ ಲೆಕ್ಕ ಇಡಲು ಚಿತ್ರಗುಪ್ತನಿಗೂ ಸಾಧ್ಯವಿಲ್ಲವಂತೆ. ಎಲ್ಲ ದೇವರುಗಳಿಗಿಂತ ಹೆಚ್ಚು ಸಾಷ್ಟಾಂಗ ನಮಸ್ಕಾರ ಪಡೆದದ್ದು ಅಮ್ಮನೇ ಎನ್ನುವುದೂ ದಾಖಲೆ ಆಯಿತಂತೆ.ಕೇರಳವನ್ನು ಅವರು ‘ಗಾಡ್ಸ್ ಓನ್ ಕಂಟ್ರಿ’ ಎಂದು ಕರೆದುಕೊಂಡರೂ ದೇವರುಗಳು ಹೆಚ್ಚಾಗಿ ನೆಲೆಸಿರುವುದು ತಮಿಳುನಾಡಿನಲ್ಲಿ. ಅಂಥಾ ರಾಜ್ಯದಲ್ಲಿರುವ ಅಪಾರ ದೇವರುಗಳನ್ನೂ ಮೀರಿಸಿದ್ದು ನಮ್ಮ ಈ ‘ಅಮ್ಮ’ ಎಂಬ ರಾಜಕೀಯ ದೇವತೆ ಎನ್ನುವುದು ಸುಮ್ಮನೆ ಅಲ್ಲ. ಮನೆಗಳಲ್ಲಿ ಹೆತ್ತಮ್ಮನಿಗೆ ಯಾರು ಬೇಕಾದರೂ ನಮಸ್ಕಾರ ಮಾಡಬಹುದು, ಆದರೆ ‘ಪಕ್ಷದ ಟಿಕೆಟ್ ಕೊಟ್ಟು ರಾಜಕೀಯದಲ್ಲಿ ನಮ್ಮನ್ನು ಎತ್ತಮ್ಮಾ’ ಎಂದು ಯಾರ್‍ಯಾರೋ ಗಂಡಸರಿಂದ ಸಾಷ್ಟಾಂಗ ನಮಸ್ಕಾರ ಮಾಡಿಸಿಕೊಳ್ಳುವುದು ಎಂಥ ಅದ್ಭುತ ಸಾಧನೆ!ಕಾಲಿಗೆ ಬೀಳದಿದ್ದರೆ ಕೈಗೆ ಟಿಕೆಟ್ ಇಲ್ಲ ಎನ್ನುವುದು ರಾಜಕೀಯ ಶಾಲೆ ಸೇರುವ ಮಕ್ಕಳಿಗೆ ಅವರು ಕಲಿಸಿದ ಮೊದಲ ಪಾಠ. ಎಐಎಡಿಎಂಕೆ ಅಂದರೆ ‘ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ’ ಎಂಬುದು ನಮಗೆ ಗೊತ್ತು- ಆದರೆ ‘ಅಣ್ಣಾ ದ್ರಾವಿಡ ಅಲ್ಲ, ಅಮ್ಮಾ ದ್ರಾವಿಡ ಮುನ್ನೇಟ್ರ ಕಳಗಂ’ ಎಂದು ಜನರು ಪ್ರೀತಿಯಿಂದ ಬದಲಾಯಿಸಿದ್ದಾರಂತೆ.‘ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ’ ಎನ್ನುವುದನ್ನು ಹಿಂದೆ ನಾವು ಹೇಗೂ ಕೇಳಿದ್ದೆವಲ್ಲ? ಇಷ್ಟಾಗಿ, ಗಂಡಸರೇ ಹೆಚ್ಚಾಗಿ ಕಾಲಿಗೆ ಬಿದ್ದರೂ ಅಮ್ಮ ಹೆಣ್ಣುಮಕ್ಕಳಿಗೆ ಹೆಚ್ಚು ಟಿಕೆಟ್ ಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಎಐಎಡಿಎಂಕೆ ತನ್ನ ಅಭ್ಯರ್ಥಿಗಳಲ್ಲಿ ಶೇ 6 ರಷ್ಟನ್ನು ಮಹಿಳೆಯರಿಗೆ ಕೊಟ್ಟಿದ್ದರೆ, ಈ ಬಾರಿ ಶೇ 11 ರಷ್ಟು ಕೊಟ್ಟಿದೆ. ನಾಲ್ಕು ರಾಜ್ಯಗಳಲ್ಲಿ ಮಹಿಳೆಯರಿಗೆ ಸಿಕ್ಕಿರುವುದು ಇದೇ ಹೆಚ್ಚು ಅನ್ನುವುದನ್ನು ಗಮನಿಸಬೇಕು.ಅಮ್ಮಂದಿರ ಮೊದಲ ಕೆಲಸ ‘ಮಕ್ಕಳ ಹೊಟ್ಟೆ ನೋಡುವುದು’ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಂಧ್ರದಲ್ಲಿ ಎನ್.ಟಿ.ಆರ್. ಮತ್ತು ತಮಿಳುನಾಡಿನಲ್ಲಿ ಎಂ.ಜಿ.ಆರ್. ಹತ್ತಾರು ವರ್ಷಗಳ ಮೊದಲೇ ಚುನಾವಣೆಯ ನೆಪದಲ್ಲಿ ಬಡಜನರಿಗೆ ಅನ್ನಭಾಗ್ಯ ಕೊಟ್ಟಿದ್ದರು. ಅದನ್ನು ಮುಂದುವರೆಸಿದ ಅಮ್ಮ, ತನ್ನ ನಾಡಿನ ಬಡಜನರಿಗೆಲ್ಲ ಅನ್ನ ಕೊಟ್ಟರು. ಆದರೆ, ‘ಬರೀ ಅನ್ನ ಉಣ್ಣಲು ಆಗುವುದಿಲ್ಲ, ಅದರೊಂದಿಗೆ ಸಾಂಬಾರ್ ಬೇಕಾಗುತ್ತದೆ.ಆದ್ದರಿಂದ ಬೇಳೆ, ಎಣ್ಣೆ, ಸಾಸಿವೆ, ಅರಿಶಿನ, ಮಸಾಲೆಪುಡಿಗಳನ್ನೂ ಸಬ್ಸಿಡಿ ದರದಲ್ಲಿ ಒದಗಿಸೋಣ’ ಎಂಬಂಥ ಔದಾರ್ಯ ತೋರಿಸುವುದು ಅಮ್ಮನ ಕರುಳಿಗೆ ಮಾತ್ರ ಸಾಧ್ಯ.ಕೆಲದಿನಗಳ ನಂತರ, ‘ನಿಮ್ಮ ಮನೆಗಳಲ್ಲಿ ಅನ್ನ, ಸಾಂಬಾರ್ ಮಾಡಿಕೊಳ್ಳಲು ಪುರಸೊತ್ತು ಇಲ್ಲದಿದ್ದರೆ ಪರವಾಗಿಲ್ಲ, ನಾವೇ ಅಷ್ಟನ್ನು ಮಾಡಿ ಐದಾರು ರೂಪಾಯಿಗೆ ಕೊಡುತ್ತೇವೆ’ ಎಂದೂ ಹೇಳಿ ‘ಅಮ್ಮಾ ಕ್ಯಾಂಟೀನ್’ಗಳನ್ನು ತೆರೆದು ಜನರ ಹಸಿವು ತಣಿಸಿದರು. ಆದರೆ ಇವನ್ನೆಲ್ಲ  ಜೀರ್ಣಿಸಿಕೊಳ್ಳಲು ಟೀಕಾಕಾರರಿಗೆ ಸಾಧ್ಯವಾಗಲಿಲ್ಲ.ಅಮ್ಮನ ಅನ್ನದಾನಕ್ಕೆ ಜನರ ಮತದಾನವೇ ಗುರಿ ಎಂದು ಅವರೆಲ್ಲ ಖಾರವಾಗಿ ಟೀಕಿಸಿದರು. ಏಕೆಂದರೆ ‘ಅಗುಳು ಅಗುಳಿನ ಮೇಲೆ ಉಂಬುವರ ಹೆಸರು ಬರೆದಿರುತ್ತದೆ’ ಎಂಬ ನಂಬಿಕೆಯನ್ನು ಅಳಿಸಿಹಾಕಿ, ಅಗುಳು ಅಗುಳಿನ ಮೇಲೆ ಅಮ್ಮನ ಹೆಸರು ಬರೆಯಲಾಗಿತ್ತು.  ಅಗುಳಿನ ಮೇಲೆ ಇರಲಿ, ಕೆಲವು ತಿಂಗಳ ಹಿಂದೆ ಮಳೆ, ಪ್ರವಾಹದಿಂದ ತಮಿಳುನಾಡು ಕೊಚ್ಚಿಕೊಂಡು ಹೋಗುತ್ತಿದ್ದಾಗ ನಿರಾಶ್ರಿತರು, ನೊಂದವರಿಗೆ ಸರ್ಕಾರ ಕೊಟ್ಟದ್ದರ ಮೇಲೆಲ್ಲಾ ‘ಅಮ್ಮ’ನ ಭಾವಚಿತ್ರ ಇತ್ತು.‘ಅಪಘಾತ ಆದಾಗ ಕರೆದೊಯ್ಯುವ ಆಂಬುಲೆನ್ಸ್ ಮೇಲೂ ಅವರ ಚಿತ್ರ, ಸ್ಮಶಾನಕ್ಕೆ ಕರೆದೊಯ್ಯುವ ಶವವಾಹನದ ಮೇಲೂ ಅವರ ಚಿತ್ರ’ ಎಂದು ಆಗದವರು ಆಡಿಕೊಂಡರು. ‘ದೇವರು ಎಲ್ಲೆಲ್ಲೂ ಇರಲು ಸಾಧ್ಯವಿಲ್ಲ, ಆದ್ದರಿಂದಲೇ ಅವನು ಅಮ್ಮನನ್ನು ಕೊಟ್ಟಿದ್ದಾನೆ’ ಎಂಬ ನಂಬಿಕೆ ಸುಳ್ಳಲ್ಲ, ‘ಸರ್ವಂ ಅಮ್ಮಮಯಂ ಜಗತ್’ ಎಂದು ಅಮ್ಮನ ಮಕ್ಕಳು ಅದನ್ನೆಲ್ಲ ಸಮರ್ಥಿಸಿಕೊಂಡರು. ಚುನಾವಣೆ ಕಾಲದಲ್ಲಿ ಮತದಾನದ ದಿನ ಹತ್ತಿರ ಬಂದ ಹಾಗೆ ಏನೋ ಒಂದಿಷ್ಟು ಹಣ, ಹೆಂಡ, ಸೀರೆ, ಪಂಚೆ ಇತ್ಯಾದಿ ಕೊಡುವುದನ್ನು ನಮ್ಮ ದೇಶ ಎಂದಿನಿಂದಲೂ ಒಪ್ಪಿಕೊಂಡುಬಿಟ್ಟಿತ್ತು. ಕಾಲಕ್ಕೆ ತಕ್ಕ ಹಾಗೆ ಅದರ ಕ್ವಾಂಟಿಟಿ ಮತ್ತು ಕ್ವಾಲಿಟಿಯೂ ಹೆಚ್ಚುತ್ತಿತ್ತು. ಆದರೆ  ‘ಜನರು ಬರೀ ಅನ್ನ ತಿನ್ನಲು ಬದುಕುವುದಿಲ್ಲ, ಬೇರೆ ವಸ್ತುಗಳಿಗೂ ಬದುಕುತ್ತಾರೆ’ ಎಂಬ ಸತ್ಯವನ್ನು ಅಮ್ಮ ಮೊದಲು ಕಂಡುಕೊಂಡರು.ಅವರು ಎಷ್ಟಾದರೂ ಸಾವಿರಾರು ಜೊತೆ ಚಪ್ಪಲಿ, ಸಾವಿರಾರು ಸೀರೆಗಳು ಇತ್ಯಾದಿಗಳೊಡನೆ ಜೀವನ ಮಾಡಿದವರು. ಮಹಿಳಾ ಮತದಾರರಿಗೆ ಏನೇನು ಬೇಕು ಎನ್ನುವುದು ಅವರಿಗೆ ಗೊತ್ತಿತ್ತು. ‘ಅಮ್ಮಾ’ ಸೀರೆಕುಪ್ಪುಸಗಳ ಜೊತೆ ಅಡುಗೆಮನೆ, ಬಚ್ಚಲುಮನೆಗೆ ಬೇಕಾದುದನ್ನೂ ಯೋಚಿಸಿದರು. ಫ್ಯಾನ್, ಟ್ರಾನ್ಸಿಸ್ಟರ್, ಟಿವಿ ಸೆಟ್, ಮಿಕ್ಸರ್‌ಗ್ರೈಂಡರ್, ರೆಫ್ರಿಜಿರೇಟರ್, ವಾಷಿಂಗ್‌ಮೆಷಿನ್ ಮುಂತಾದುವನ್ನೂ ಕೊಟ್ಟರು.ಅವುಗಳನ್ನು ಬಳಸಲು ವಿದ್ಯುತ್ ಬೇಕಾದ್ದರಿಂದ ಪ್ರತೀ ಮನೆಗೆ ನೂರು ಯೂನಿಟ್ ವಿದ್ಯುತ್ ಕೂಡ ಉಚಿತ. ಬರೀ ಟಿವಿ ಕೊಟ್ಟರೆ ಸಾಲದು, ಅದರೊಂದಿಗೆ ಕೇಬಲ್ ಸರ್ವೀಸ್ ಸೆಟ್ ಟಾಪ್ ಬಾಕ್ಸ್ ಉಚಿತ. ‘ಮತ ಕೊಟ್ಟರೆ ಹಿತ, ಮತ ಕೊಟ್ಟರೆ ಉಚಿತ’ ಎಂಬುದನ್ನು ಅಕ್ಷರಶಃ ತೋರಿಸಿದರು. ‘ಸರ್ಕಾರದ ಜನಪರ ದೃಷ್ಟಿಯ ಕರ್ತವ್ಯಗಳೇನು, ಜನೋದ್ಧಾರಕ್ಕೆ ಸರ್ಕಾರ ಏನು ಮಾಡಬೇಕು’ ಮುಂತಾದ ರಾಜಕೀಯ ಸಿದ್ಧಾಂತಗಳನ್ನೆಲ್ಲ ಅಮ್ಮ ಪಕ್ಕದಲ್ಲೇ ಇರುವ ಸಮುದ್ರಕ್ಕೆ ಎಸೆದರು.‘ಉತ್ತಮ ಸರ್ಕಾರ ಲೊಳಲೊಟ್ಟೆ’ ಆದ್ದರಿಂದ ಎಲ್ಲವನ್ನೂ ಉಚಿತವಾಗಿ ಹಂಚುವ ಸರ್ಕಾರವೇ ಉತ್ತಮ ಸರ್ಕಾರ ಎನ್ನುವುದು ಚುನಾವಣೆಯಿಂದ ಚುನಾವಣೆಗೆ ಅಮ್ಮ ಕಲಿತ ಮತ್ತು ಕಲಿಸಿದ ಉಚಿತ ಪಾಠ. ತಮಿಳುನಾಡಿನ ಚುನಾವಣೆಯಲ್ಲಿ ಜನರು ಹೆಚ್ಚು ಮಾತನಾಡುವುದು ‘ಈ ಬಾರಿ ಯಾವ ಪಕ್ಷ ಏನೇನು ಕೊಡುತ್ತದೆ’ ಎಂಬುದನ್ನೇ. ಡಿಎಂಕೆ ಮಾತ್ರವಲ್ಲದೆ ಕಣದಲ್ಲಿರುವ ಇತರ ಪಕ್ಷಗಳೂ ಸವಾಲು ಒಡ್ಡಿರುವುದರಿಂದ ಅಮ್ಮ ಈ ಬಾರಿ ಯಾವುದನ್ನೂ ಸಲೀಸಾಗಿ ತೆಗೆದುಕೊಳ್ಳುವಂತಿರಲಿಲ್ಲ.ಪಕ್ಷಗಳ ‘ಪ್ರಣಾಳಿಕೆ’ ಎನ್ನುವುದಕ್ಕೆ ನಿಜವಾಗಿ ಪಕ್ಷಗಳಿಂದ ‘ಹಂಚುವಿಕೆ’ ಎಂಬ ಅರ್ಥವೇ ಇರುವುದರಿಂದ ಎಲ್ಲರೂ ಏನೇನು ಕೊಡುತ್ತಾರೆ ಎಂಬುದನ್ನು ಕಾದು ನೋಡಿ ತೀರಾ ಇತ್ತೀಚೆಗೆ ಎಐಎಡಿಎಂಕೆ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತು. ಆದರೆ ಬೇರೆ ಪಕ್ಷಗಳೇನು ಸುಮ್ಮನೆ ಇರುವುದಿಲ್ಲವಲ್ಲ. ಅವೂ ಧಾರಾಳವಾಗಿ ಕೊಡುಗೆಗಳನ್ನು ಪ್ರಕಟಿಸಿವೆ.ದೊಡ್ಡವರಿಗೆ ಕೊಟ್ಟರೆ ಸಾಲದು, ಇಂದಿನ ಮಕ್ಕಳೇ ನಾಳೆಯ ಮತದಾರರು ಎಂದು ಹಿಂದೆಯೇ ಹದಿನೆಂಟಕ್ಕೆ ಹತ್ತಿರದಲ್ಲಿರುವ ಮಕ್ಕಳಿಗೆ ಟಾಬ್ಲೆಟ್, ಲ್ಯಾಪ್‌ಟಾಪ್ ಕೊಡಲಾಗಿತ್ತು. ಈಗ ಅವುಗಳೊಂದಿಗೆ ಮೊಬೈಲ್ ಕೊಟ್ಟು ಅದಕ್ಕೆ ವೈಫೈ, ತ್ರೀಜಿ, ಫೋರ್‌ಜಿ ಉಚಿತ. ಇಂಗ್ಲಿಷ್‌ನಲ್ಲಿ ಈ ಉಚಿತವಸ್ತುಗಳನ್ನು ‘ಫ್ರೀಬೀಸ್’ ಎಂದು ಕರೆಯುತ್ತಾರೆ, ಈಗ ತಮಿಳುನಾಡು ಒಂದು ‘ಉಚಿತ ರಾಜ್ಯ’. ಆದರೆ ರಾಜಕೀಯವಾಗಿ, ಸಾಮಾಜಿಕವಾಗಿ ಈ ಕ್ರಮ ಉಚಿತವೇ ಎನ್ನುವುದನ್ನು ಚರ್ಚೆ ಮಾಡಲು ಅನೇಕ ಬಾರಿ ಅವಕಾಶ ಇರುವುದಿಲ್ಲ. ‘ಹೊಟ್ಟೆ ತುಂಬಿದವರು ಖಂಡಿತಾ ಇದಕ್ಕೆ ಹೊಟ್ಟೆಕಿಚ್ಚು ಪಡಬಾರದು, ನಮ್ಮ ದೇಶದಲ್ಲಿ ಇಂಥ ಕ್ರಮಗಳ ಅಗತ್ಯ ಎಷ್ಟೆಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂಬ ಟೀಕಾಪ್ರಹಾರವೂ ವಿಮರ್ಶಕರಿಗೆ ಉಚಿತವಾಗಿ ಸಿಗುತ್ತದೆ.ಚುನಾವಣೆಯಲ್ಲಿ ಮತ ನೀಡಲು ಮತದಾರರು ‘ಸರ್ಕಾರ ಏನು ಯೋಜನೆಗಳನ್ನು ಮಾಡಿದೆ ಎನ್ನುವುದನ್ನು ಪರಿಗಣಿಸಬೇಕೆ ಅಥವಾ ಏನೇನು ವಸ್ತುಗಳನ್ನು ಕೊಡುತ್ತಿದೆ ಎನ್ನುವುದನ್ನು ಎಣಿಸಬೇಕೆ’ ಎಂಬ ಸರಳ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟ.ಒಂದು ಸರ್ಕಾರದ ನೀತಿನಿರೂಪಣೆಯ ಭಾಗ ಆಗಬೇಕಿರುವ ಜನಹಿತ ಕ್ರಮಗಳು, ಒಂದು ರಾಜಕೀಯ ಪಕ್ಷದ ಅಥವಾ ಒಬ್ಬ ರಾಜಕಾರಣಿಯ ‘ಅನುಗ್ರಹ’ ಆಗುವುದರ ಅಪಾಯವನ್ನು ಅರಿಯಲೇಬೇಕು.ಬಡತನದ ರೇಖೆಯ ಕೆಳಗಿರುವ ಸಾಮಾನ್ಯರಿಗೆ ನೀಡುವ ಅನ್ನಭಾಗ್ಯ, ಕಡಿಮೆ ದರದಲ್ಲಿ ಇನ್ನಿತರ ಸಾಮಗ್ರಿ ಸರಬರಾಜು, ಬಡಮಕ್ಕಳಿಗೆ ಉಚಿತ ಶಿಕ್ಷಣ, ಅವರಿಗೆ ಮಧ್ಯಾಹ್ನದ ಊಟ, ಬಡವರಿಗೆ ಉಚಿತ ಆರೋಗ್ಯ ಸೇವೆ, ಬಸುರಿ ಹೆಣ್ಣುಮಕ್ಕಳಿಗೆ ಪೋಷಣೆ, ಬಡತನದಲ್ಲಿ ಬೇಯುವ ವೃದ್ಧರಿಗೆ ನೆಮ್ಮದಿ, ಬಡರೈತರಿಗೆ ಬಡ್ಡಿರಹಿತ ಸಾಲ, ಬರಗಾಲದಲ್ಲಿ ಅವರ ಸಾಲ ಮನ್ನಾ, ಹಳ್ಳಿಯ ಹೆಣ್ಣುಮಕ್ಕಳಿಗೆ ಶಾಲೆಗೆ ಬರಲು ಸೈಕಲ್ ಮುಂತಾದ ನೂರಾರು ಕ್ರಮಗಳು ಒಂದು ಸರ್ಕಾರ ಮಾಡಲೇ ಬೇಕಾದ ಕರ್ತವ್ಯಗಳು. ಆದರೆ ಅವು ಚುನಾವಣೆಯಲ್ಲಿ ಮತದಾರರಿಗೆ ನೀಡುವ ‘ಲಂಚ’ ಆಗಿ ಬದಲಾಗುವುದರ ಬಗ್ಗೆ ಯೋಚಿಸುವುದು ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry