7

ಸರs, ನಿಮ್‌ ಸರ್‌ನೇಮ್‌ ಏನ್ರೀ?

Published:
Updated:

‘ಏನ್ರೀ, ಆ ಕಡೆ ಮೆಣಸಿನಕಾಯಿ, ಉಳ್ಳಾಗಡ್ಡಿ, ಲಿಂಬಿಕಾಯಿ, ಅಕ್ಕಿ, ರೊಟ್ಟಿ, ಜೋಳ, ಕುದುರಿ, ಕುರಿ, ಕರಡಿ, ಕಾಗೆ, ಮನೆ, ಮಠ ಅಂತೆಲ್ಲ ಹೆಸರುಗಳು ಇವೆಯಂತಲ್ಲ' ಎಂದು ಸ್ನೇಹಿತರೊಬ್ಬರು ಆಶ್ಚರ್ಯದಿಂದ ಕೇಳಿದರು.‘ಹೌದು’ ಎನ್ನುವಂತೆ ತಲೆ ಆಡಿಸಿದೆ. ‘ಅವೆಲ್ಲ ಒಂದು ಹೆಸರೇನ್ರಿ. ತರಕಾರಿ, ಪ್ರಾಣಿ, ಪಕ್ಷಿ, ವಸ್ತುಗಳನ್ನೆಲ್ಲ ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾರಲ್ಲ' ಎಂದು ಹಾಸ್ಯದ ಧಾಟಿಯಲ್ಲಿ ಹೇಳಿದರು.ಇಂಥ ಮಾತುಗಳನ್ನು ಹಲವು ಬಾರಿ ಕೇಳಿ, ನಕ್ಕು ಸುಮ್ಮನಾಗಿದ್ದೆ. ಏಕೆಂದರೆ ಉತ್ತರ ಕರ್ನಾಟಕದಲ್ಲಿ ಈ ರೀತಿಯ ಹೆಸರುಗಳು ಮಾಮೂಲಿ. ಇವುಗಳು ಅವರ ‘ಸರ್‌ನೇಮ್‌– ಎಂದರೆ ‘ಮನೆತನದ ಹೆಸರು'.ಇವುಗಳಿಂದಲೇ ಒಂದು ಮನೆತನದ ‘ಗುರುತು' ಸಿಗುತ್ತದೆ. ಇಲ್ಲದೇ ಹೋದರೆ ನೀವು ಹುಡುಕುತ್ತಿರುವ ವ್ಯಕ್ತಿ ಮುಂದೆ ನಿಂತಿದ್ದರೂ ಗೊತ್ತಾಗುವುದಿಲ್ಲ! ವ್ಯಕ್ತಿಯ ಹೆಸರಿನ ಮುಂದೆ ‘ಮನೆತನದ ಹೆಸರು' ಸುಮ್ಮನೆ ಸೇರಿಕೊಂಡಿಲ್ಲ. ಅದರ ಹಿಂದೆ ಸ್ವಾರಸ್ಯವಿದೆ. ಕತೆ ಇದೆ. ಮನೆತನದ ಇತಿಹಾಸವಿದೆ. ಬೇರಿದೆ.‘ಮನೆತನದ ಹೆಸರುಗಳು ಕಾಯಕ, ಸ್ಥಳ, ಜಾತಿ, ಹುದ್ದೆ, ವಸ್ತು ಇತ್ಯಾದಿಗಳನ್ನು ಆಧರಿಸಿಯೇ ಇರುತ್ತವೆ. ಮನೆತನದ ಹೆಸರಿನ ಎಳೆಯನ್ನು ಹಿಡಿದುಕೊಂಡು ಹೋದರೆ ಆ ವ್ಯಕ್ತಿಯ ಪೂರ್ವಿಕರ ಇತಿಹಾಸವನ್ನು ತಿಳಿಯಬಹುದು' ಎಂದು ಕಲಬುರ್ಗಿಯ ನಿವೃತ್ತ ಪ್ರಾಧ್ಯಾಪಕ ಎಂ.ಜಿ.ಬಿರಾದಾರ ಅವರು ಹೇಳುತ್ತಾರೆ.‘ಮನೆತನದ ಹೆಸರು'ಗಳು ಹುಟ್ಟಿದ ಕೆಲವು ಸ್ವಾರಸ್ಯಕರ ಪ್ರಸಂಗಗಳು ಹೀಗಿವೆ: ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ತಿಮ್ಮಾಪುರದಲ್ಲಿ ಅಬ್ದುಲ್ ರಹೀಂ ಘಡಿಕಂಪೆನಿ ಎನ್ನುವವರು ಇದ್ದಾರೆ. ಅಲ್ಲಿಗೆ ಹೋಗಿ ಅಬ್ದುಲ್ ರಹೀಂ ಅವರ ಮನೆ ಎಲ್ಲಿದೆ ಎಂದು ಕೇಳಿದರೆ ಯಾರೂ ತೋರಿಸುವುದಿಲ್ಲ. ಘಡಿಕಂಪೆನಿ ಅವರ ಮನೆ ಎಂದರೆ ‘ಓ! ಅವರಾ?' ಎನ್ನುತ್ತಾರೆ. ಗಡಿಯಾರಕ್ಕೆ ಉರ್ದುವಿನಲ್ಲಿ ಘಡಿ ಎನ್ನುತ್ತಾರೆ.ಅಬ್ದುಲ್ ರಹೀಂ ಅವರ ತಾತ ನೂಲಿನ ಕಂಪೆನಿ ಹೊಂದಿದ್ದರು. ಅವರು ಆ ಕಾಲಕ್ಕೆ ಊರಿಗೆ ಮೊದಲಿಗರಾಗಿ ಕೈಗಡಿಯಾರವನ್ನು ತಂದಿದ್ದರು. ಜನರು ಅವರನ್ನು ‘ಘಡಿಕಂಪೆನಿ’ಯವರು ಎಂದು ಕರೆಯಲು ಶುರು ಮಾಡಿದರು. ಲೇಖಕರಾದ ಬೋಡೆ ರಿಯಾಜ್ ಅಹ್ಮದ್ ಅವರು ಒಬ್ಬರನ್ನು ಪರಿಚಯಿಸುತ್ತಾ ‘ಇವರ ಸರ್‌ನೇಮ್ ಚೂಹೆ.  ಅಂದರೆ ಇಲಿ' ಎಂದು ತಿಳಿಸಿದರು.‘ಇಲಿ' ಕತೆ ಗಮ್ಮತ್ತಾಗಿದೆ. ನೂರ್ ಅಹ್ಮದ್ ಅವರ ತಾತ ಇಸ್ಮಾಯಿಲ್ ಸಾಬ್. ಇವರು ಮಹಾರಾಷ್ಟ್ರದ ಲಾತೂರಿನವರು. ಸೀರೆಗಳನ್ನು ನೇಯ್ದು ಕಲಬುರ್ಗಿಗೆ ಕಳುಹಿಸುತ್ತಿದ್ದರು. ಒಮ್ಮೆ ಬಂಡಲ್‌ನೊಳಗೆ ಇಲಿ ನುಸುಳಿಕೊಂಡಿತು. ಕಲಬುರ್ಗಿಯಲ್ಲಿ ಅದನ್ನು ಬಿಚ್ಚಿದಾಗ ಸತ್ತ ಇಲಿಯೂ ಇತ್ತು. ಇಸ್ಮಾಯಿಲ್ ಸಾಬ್ ಬಂದಾಗ ಅಂಗಡಿ ಮಾಲೀಕರು ಆ ಬಂಡಲ್ ತರುವಂತೆ ಕೆಲಸದವನಿಗೆ ಹೇಳಿದರು. ಆತ ‘ಯಾವ ಬಂಡಲ್' ಎಂದಾಗ, ‘ಚೂಹೆ ಬಂಡಲ್' ಎಂದರು. ಮುಂದೆ ಅಂಗಡಿಯವರೆಲ್ಲ ಇಸ್ಮಾಯಿಲ್ ಅವರನ್ನು ‘ಚೂಹೆ’ ಎಂದು ಕರೆಯತೊಡಗಿದರು.ನಿವೃತ್ತ ಪ್ರಾಧ್ಯಾಪಕರೊಬ್ಬರ ಮನೆತನದ ಹೆಸರು ‘ಹೆಂಡಿ'. ಹೆಂಡಿ ಎಂದರೆ ಸೆಗಣಿ. ಅವರ ಮನೆಯಲ್ಲಿ ಹೆಚ್ಚು ಎಮ್ಮೆ, ಹಸುಗಳು ಇದದ್ದರಿಂದ ಹೆಂಡಿ ಹೆಚ್ಚು ಸಂಗ್ರಹವಾಗುತ್ತಿತ್ತು. ಊರಿನ ಜನರು ಹೆಂಡಿ ತೆಗೆದುಕೊಳ್ಳಲು ಅವರ ಮನೆಗೆ ಹೋಗುತ್ತಿದ್ದರು. ಹೀಗೆ ಅವರ ಹೆಸರಿನೊಂದಿಗೆ ‘ಹೆಂಡಿ’ ಸೇರಿಕೊಂಡಿತು.ಊರಿನ ಮುಖ್ಯಸ್ಥರು ಪಾಟೀಲ, ಪಟೇಲರು. ಭೂದಾಖಲೆಗಳನ್ನು ಇಟ್ಟು, ಕಂದಾಯ ವಸೂಲಿ ಮಾಡುತ್ತಿದ್ದವರು ಕುಲಕರ್ಣಿ. ಉಂಬಳಿ ಭೂಮಿಯನ್ನು ಪಡೆದವನು ಜಹಗೀರದಾರ. ಸೇವಾ ಕಾರ್ಯಕ್ಕಾಗಿ ಇನಾಮು ಭೂಮಿಯನ್ನು ಪಡೆದವರು ಇನಾಂದಾರ. ಹಳ್ಳಿಯ ವ್ಯಾಜ್ಯಗಳನ್ನು ತೀರ್ಮಾನ ಮಾಡುತ್ತಿದ್ದವರು ಪೊಲೀಸ್‌ ಪಾಟೀಲರಾದರು.ಬಡಗಿ ಕೆಲಸ ಮಾಡುವವರು ಬಡಿಗೇರ, ಚಿನ್ನದ ಕೆಲಸ ಮಾಡುವವರು ಪತ್ತಾರ, ಮಡಿಕೆ ಮಾಡುವವರು ಕುಂಬಾರ ಎನ್ನುವ ಹೆಸರು ಕಾಯಕದಿಂದ ಬಂದಿದೆ. ದೊಡ್ಡಮನೆ ಇದ್ದವರು ದೊಡ್ಡಮನಿ. ಮನೆ ಮುಂದೆ ದೊಡ್ಡ ಕಟ್ಟೆ ಇದ್ದವರು ಕಟ್ಟಿಮನಿ. ಬಾವಿ ಇದ್ದವರು ಬಾವಿಮನಿ. ಹೆಂಚಿನಮನೆ ಇದ್ದವರು ಹೆಂಚಿನಮನಿ. ಮನೆ ಮುಂದೆ ಬೇವಿನಮರ ಇದ್ದವರು ಬೇವಿನಮರದ ಆದರು.ಮೆಣಸಿನಕಾಯಿ, ಉಳ್ಳಾಗಡ್ಡಿ, ಬಳ್ಳೊಳ್ಳಿ, ಲಿಂಬಿಕಾಯಿ ಬೆಳೆಯುತ್ತಿದ್ದವರು ಅಥವಾ ಮಾರುತ್ತಿದ್ದವರ ಹೆಸರಿನೊಂದಿಗೆ ಇಂಥ ಹೆಸರುಗಳು ಸೇರಿಕೊಂಡಿವೆ. ಹೆಸರಿನ ಮುಂದೆ ಕಲಬುರ್ಗಿ, ಧಾರವಾಡ, ಸವದತ್ತಿ, ಬಿಜಾಪುರೆ, ಜಮಖಂಡಿ ಎಂದಿದ್ದರೆ ಅವು ಅವರ ಮೂಲ ಸ್ಥಳಗಳ ಹೆಸರಾಗಿರುತ್ತವೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಬಂದವರನ್ನು ಅವರು ಬಂದ ಸ್ಥಳದ ಹೆಸರಿನೊಂದಿಗೆ ಗುರುತಿಸಲಾಗುತ್ತಿತ್ತು. ಒಮ್ಮೆ ಹೆಸರಿನ ಮುಂದೆ ‘ಮನೆತನದ ಹೆಸರು’ ಸೇರಿಕೊಂಡರೆ ಸುಲಭವಾಗಿ ಅಳಿಸಲು ಆಗುವುದಿಲ್ಲ.ಈ ಪ್ರಸಂಗ ಹೀಗಿದೆ. ಆ ಊರಿನಲ್ಲಿ ‘ಪಾತ್ರದವರು' ಎನ್ನುವ ಮನೆತನವಿತ್ತು. ‘ಪಾತ್ರದವರು' ಎಂದರೆ ಆ ದಿನಗಳಲ್ಲಿ ಗುಡಿ, ಗುಂಡಾರಗಳಂತಹ ಸ್ಥಳಗಳಲ್ಲಿ ನೃತ್ಯ ಮಾಡುವವರು. ಇವರನ್ನು ಜನರು ‘ಪಾತ್ರದವರು’ ಎನ್ನುತ್ತಿದ್ದರು. ಮುಂದೆ ಒಂದು ತಲೆಮಾರಿನವರಿಗೆ ‘ಪಾತ್ರದವರು' ಎನ್ನುವ ಮನೆತನದ ಹೆಸರು ಮುಜುಗರವನ್ನುಂಟು ಮಾಡಿತು. ಆ ಹೆಸರನ್ನು ಕೈಬಿಟ್ಟು ಮತ್ತೊಂದು ಹೆಸರನ್ನು ಇಟ್ಟುಕೊಂಡು ಇಡೀ ಊರಿಗೆ ಊಟ ಹಾಕಿಸಿದರು. ಊಟ ಮಾಡಿಕೊಂಡು ಹಿಂದಿರುಗುತ್ತಿದ್ದವರನ್ನು ದಾರಿಯಲ್ಲಿ ಸಿಕ್ಕ ವ್ಯಕ್ತಿಯೊಬ್ಬ ‘ಎಲ್ಲಿಗೆ ಹೋಗಿದ್ದಿರಿ' ಎಂದು ಕೇಳಿದನಂತೆ. ಆಗ ಅವರು ‘ಪಾತ್ರದವರ ಮನೆ ಊಟಕ್ಕೆ' ಎಂದರಂತೆ!ಉತ್ತರ ಕರ್ನಾಟಕದಲ್ಲಿ ಹೆಸರಿಗಿಂತ ಮನೆತನದ ಹೆಸರಿಗೇ ಹೆಚ್ಚು ಮೌಲ್ಯ. ‘ಮನೆತನದ ಹೆಸರು’ಹೇಳುತ್ತಿದ್ದಂತೆಯೇ ಸಂಬಂಧದ ಕೊಂಡಿಗಳು ಬೆಸೆದುಕೊಳ್ಳುತ್ತವೆ. ಜತೆಗೆ ‘ಮನೆತನದ ಹೆಸರು’ ದೊಡ್ಡ ಗುಂಪೊಂದನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಯಾರಿಗೆ ಮನೆತನದ ಹೆಸರು ಮುಜುಗರ ತರುತ್ತದೆಯೋ ಅಂಥವರು, ದೊಡ್ಡ ಪರಿವಾರದ ಆವರಣದಿಂದ ದೂರ ಸರಿದು ನಗರದಲ್ಲಿ ವಾಸಿಸುವವರು ಮನೆತನದ ಹೆಸರಿನ ಬದಲು ಇನಿಷಿಯಲ್‌ಗಳ ಮೊರೆ ಹೋಗುತ್ತಿದ್ದಾರೆ ಎನ್ನುತ್ತಾರೆ ಬಲ್ಲವರು.  ಕೆಲವೊಂದು ‘ಮನೆತನದ ಹೆಸರು'ಗಳು ಎರಡು ಅಥವಾ ಮೂರು ರಾಜ್ಯಗಳು, ಅಷ್ಟೇ ಸಂಸ್ಕೃತಿಗಳು, ಭಾಷೆಗಳನ್ನು  ದಾಟಿ ಬಂದಿರುತ್ತವೆ.‘ನಾವು ಗುಜರಾತ್ ಮೂಲದವರು. ಅಲ್ಲಿ ಜೈನರಾಗಿದ್ದೆವು. ವೃತ್ತಿ ವ್ಯಾಪಾರ. ಅಲ್ಲಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದೆವು. ಅಲ್ಲಿಯ ಸಂಸ್ಕೃತಿಯೊಂದಿಗೆ ಬೆರೆತು ಹೋದೆವು. ಕಾಲಕ್ರಮೇಣ ಕರ್ನಾಟಕಕ್ಕೆ ಬಂದು ನೆಲೆಸಿ  ಲಿಂಗಾಯತರಾದೆವು’ ಎಂದು ಕವಿ ವಿಕ್ರಮ ವಿಸಾಜಿ ಅವರು ತಮ್ಮ ಮನೆತನದ ಹೆಸರಿನ ಮೂಲವನ್ನು  ವಿವರಿಸುತ್ತಾರೆ.‘ಮನೆತನದ ಹೆಸರು’ಗಳ ಮೂಲವನ್ನು ಹುಡುಕುತ್ತಾ ಹೋದಷ್ಟು ಸಂಕೀರ್ಣ ಎನಿಸುತ್ತದೆ. ಏಕೆಂದರೆ ‘ಮನೆತನದ ಹೆಸರು’ಗಳು ಧುತ್ತನೆ ಬಂದಿಲ್ಲ. ಸಂಸ್ಕೃತಿಯ ಒಡಲಿನಿಂದ ಬಂದ ಯಾವುದೋ ಒಂದು ಪರಂಪರೆಯ ನಿರಂತರತೆಯನ್ನು ಹೇಳುತ್ತವೆ. ಮನೆತನದ ಹೆಸರಿನ ಹಿಂದೆ ಸುದೀರ್ಘ ಪಯಣ, ಚರಿತ್ರೆ, ರಾಜ್ಯಗಳು, ಸಂಸ್ಕೃತಿಗಳು ಇರುತ್ತದೆ. ಆದ್ದರಿಂದ ವಿಶ್ವವಿದ್ಯಾಲಯಗಳು, ಭಾಷಾಶಾಸ್ತ್ರಜ್ಞರು ಉತ್ತರ ಕರ್ನಾಟಕದಲ್ಲಿನ ಮನೆತನದ ಹೆಸರುಗಳ ಕುರಿತು ಸಾಂಸ್ಕೃತಿಕ ಅಧ್ಯಯನ ಮಾಡುವುದು ಮುಖ್ಯವಾಗುತ್ತದೆ.‘ಬಟ್ಟೆ, ಬರೆ ಮನೆ, ಮಠ, ತರಕಾರಿಗಳೆಲ್ಲ ಒಂದು ಹೆಸರೇನ್ರಿ' ಎಂದು ಕೇಳುವವರಿಗೆ ಇವುಗಳೇ ಆ ಮನೆತನದವರ ‘ಹೆಗ್ಗುರುತು' ಎನ್ನುವುದು ತಿಳಿದಿರುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry