7

ಮೂಢನಂಬಿಕೆ ತಡೆ ಮಸೂದೆಗೆ ಬೆಕ್ಕು ಅಡ್ಡ ಬಂತು!

ಆರ್‌. ಪೂರ್ಣಿಮಾ
Published:
Updated:
ಮೂಢನಂಬಿಕೆ ತಡೆ ಮಸೂದೆಗೆ ಬೆಕ್ಕು ಅಡ್ಡ ಬಂತು!

ನಮ್ಮವೈಚಾರಿಕತೆ ಬೆತ್ತಲು ಮಾಡುವ ಮಡೆಮಡೆ ಸ್ನಾನದ ನಿಷೇಧ ಅಗತ್ಯ

ಜಗತ್ತಿನ ಇತಿಹಾಸದಲ್ಲಿ ಎಷ್ಟೋ ರಾಜರು ಆಗಿ ಹೋಗಿದ್ದಾರೆ, ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಎಷ್ಟೋ ಸರ್ಕಾರಗಳು ಬಂದುಹೋಗಿವೆ. ಆದರೆ ಕೆಲವು ಸರ್ಕಾರಗಳು ಮತ್ತು ಕೆಲವು ರಾಜರು ಮಾತ್ರ ಕೈಗೊಳ್ಳುವ ಕೆಲವೊಂದು ಕ್ರಮಗಳಿಂದ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತಾರೆ.ಅಂಥ ಚಿರಂತನ ಕ್ರಮ ಕೈಗೊಳ್ಳುವುದು ಸರಳವಾದ, ಸುಲಭವಾದ ತೀರ್ಮಾನವೇನೂ ಆಗಿರುವುದಿಲ್ಲ. ಹಾಗಿದ್ದೂ ಜನರಿಗೆ ಒಳ್ಳೆಯದಾಗಬೇಕು ಎಂಬ ಒಂದೇ ಕಾರಣಕ್ಕೆ, ಎದುರಾಗುವ ನೂರೆಂಟು ವಿರೋಧಗಳನ್ನು ಲೆಕ್ಕಿಸದೆ ಎಲ್ಲವನ್ನೂ ಒತ್ತೆಯಿಟ್ಟು ಅಂಥ ಕ್ರಮ ಕೈಗೊಳ್ಳಲಾಗಿರುತ್ತದೆ.ಅದರ ಪರಿಣಾಮವಾಗಿ ತಲೆದಂಡ ಕೊಡುವ ಅನಿವಾರ್ಯತೆಯೂ ಬಂದಿರಬಹುದು. ಆದರೆ ತಲೆದಂಡ ಕೊಟ್ಟರೇನಂತೆ, ಚರಿತ್ರೆಯಲ್ಲಿ ಆ ಕ್ರಮ ಮತ್ತು ಅದರ ಕಾರಣಕರ್ತರು ಜೀವಂತವಾಗಿ ಉಳಿಯುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ.‘ಕರ್ನಾಟಕ ಸರ್ಕಾರ ಧಾರ್ಮಿಕ ಮಠಗಳಿಗೆ ತಲೆಬಾಗಿ, ತಾನು ಜಾರಿ ಮಾಡಲು ಯತ್ನಿಸುತ್ತಿರುವ ಮೂಢನಂಬಿಕೆ ನಿಷೇಧ ಮಸೂದೆಯ ಬಿಗಿಪಟ್ಟುಗಳನ್ನು ಸಡಲಿಸಿದೆ, ಮುಖ್ಯ ಅಂಶಗಳನ್ನೇ ಕೈಬಿಟ್ಟಿದೆ, ಅವೆಲ್ಲ ಇರಲಿ, ಮಸೂದೆಯ ಹೆಸರನ್ನೇ ಬದಲಾಯಿಸಿದೆ’ ಎಂಬ ವಿವರಗಳು ಕಳೆದವಾರ ಪ್ರಕಟವಾದ ಒಂದು ಪತ್ರಿಕೆಯ ವಿಶೇಷ ವರದಿಯಲ್ಲಿ ಬಯಲಾಯಿತು.ಯಾವ ಕಾಲವಾದರೂ ಆಗಲಿ, ಸಿದ್ಧಪ್ರಸಿದ್ಧ ಆಡಳಿತಗಾರರನ್ನೂ ಧಾರ್ಮಿಕ ಆಚಾರ್ಯರು ಬಿಗಿಮುಷ್ಟಿಯಲ್ಲಿ ಇಟ್ಟುಕೊಳ್ಳುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ಪಕ್ಷ ಯಾವುದಾದರೇನು, ಈ ಹಿಡಿತ ಪುರಾತನ! ಏಕೆಂದರೆ ಜನರಾಜಕಾರಣಕ್ಕಿಂತ ಧರ್ಮರಾಜಕಾರಣ ಯಾವತ್ತೂ ಬಲಿಷ್ಠ.

ರಾಜಕಾರಣ ಏನಿದ್ದರೂ ಧರ್ಮದ ಅಡಿಯಾಳು ಎನ್ನುವುದು, ಮಠಾಧೀಶರ ಆದೇಶ ಪಾಲಿಸುವಿಕೆಗೂ ಸತ್ಯ, ಮುಸ್ಲಿಮರ ಓಲೈಸುವಿಕೆಗೂ ಸತ್ಯ. 

ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಇರುವ ಮೂಢ, ಮೂರ್ಖ, ಅತಾರ್ಕಿಕ, ಅವೈಚಾರಿಕ, ಅವೈಜ್ಞಾನಿಕ, ಕೊನೆಗೆ ಅಮಾನವೀಯ ಆಚರಣೆಗಳು ಉಳಿಯಲೇಬೇಕು ಎಂದು ಪಣತೊಡುವ ಗುಂಪುಗಳು, ಸರ್ಕಾರದ ನಿರ್ಧಾರಗಳನ್ನು ಸಡಲಿಸುವುದು ಬಹಳ ಸುಲಭ.ದೇವಾಲಯಗಳಲ್ಲಿ ಕಂಡವರು ಉಂಡ ಎಂಜಲೆಲೆಯ ಮೇಲೆ ಹೊರಳಾಡುವುದನ್ನೂ ದೇವಾಲಯಗಳ ಮಾಳಿಗೆ ಮೇಲಿಂದ ಅಳುವ ಹಸುಗೂಸುಗಳನ್ನು ಎಸೆಯುವುದನ್ನೂ ಅಂಥ ಅಸಹ್ಯವಾದ ಎಲ್ಲವನ್ನೂ ‘ನಮ್ಮ ಧರ್ಮ, ನಮ್ಮ ಪರಂಪರೆ’ ಎಂದು ಸಮರ್ಥಿಸಿಕೊಳ್ಳಲೇಬೇಕು.‘ಹಿಂದಿನಿಂದ ಬಂದದ್ದು’ ಎಂದು ಎಲ್ಲವನ್ನೂ ಹಿಂದಕ್ಕೆ ಎಸೆದು, ಮುಂದುವರೆಸಲಾಗುತ್ತದೆ; ಅದರಿಂದಾಗಿ ‘ಪರಂಪರೆ’ ಎನ್ನುವುದು, ಪಾಪ, ಅವೈಚಾರಿಕ ಕಸದ ಪರ್ವತವೇ ಆಗಿಬಿಟ್ಟಿದೆ! ವರದಿ ಹೇಳುವ ಹಾಗೆ,‘ಕರ್ನಾಟಕ ಹಾನಿಕರ, ಅಮಾನವೀಯ ಮತ್ತು ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ’ ಎನ್ನುವುದೇ ಈಗ ಪ್ರಭಾವಿ ಮಠಾಧೀಶರ ಪಾದಕ್ಕೆ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟಿದೆ.2013ರಲ್ಲಿ ಆರಂಭವಾದ ಕರಡನ್ನು ಈಗ 2016ರ ‘ಕರ್ನಾಟಕ ನರಬಲಿ ಮತ್ತು ಇನ್ನಿತರ ಅಮಾನುಷ, ದುಷ್ಟ ಮತ್ತು ಅಘೋರಿ ಆಚರಣೆಗಳ ಮತ್ತು ವಾಮಾಚಾರಗಳ ಪ್ರತಿಬಂಧಕ ಮತ್ತು ನಿರ್ಮೂಲನ ಕಾಯಿದೆ’ ಎಂದು ಬದಲಾಯಿಸಲಾಗಿದೆ.ಕಾಯಿದೆ ಹೆಸರನ್ನು ಉದ್ದಕ್ಕೆ ಎಳೆಯಲಾಗಿದ್ದರೂ ಅದರಲ್ಲಿದ್ದ ಆಶಯಗಳ ಪಟ್ಟಿಯನ್ನು ಗಿಡ್ಡಕ್ಕೆ ಕತ್ತರಿಸಲಾಗಿದೆ. ಮತ್ತೆ ರೂಪಿಸಲಾದ ಈ ಕರಡು ಮಸೂದೆಯಲ್ಲಿ ಕೆಲವು ಮೂಢನಂಬಿಕೆ ಆಚರಣೆಗಳನ್ನು, ಮುಖ್ಯವಾಗಿ ಮಡೆಮಡೆ ಸ್ನಾನದ ಹೆಸರನ್ನು ಕೈಬಿಡಲಾಗಿದೆ. ಕೆಲವು ಅನ್ಯಾಯಗಳಿಗೆ ನ್ಯಾಯಾಲಯದ ಹೆಸರೇ ಸಮರ್ಥನೆ ಒದಗಿಸುತ್ತದೆಯಲ್ಲ, ಹಾಗೆ ಇದಕ್ಕೂ ಅದೇ ಒದಗಿದೆ.‘ಮಡೆಮಡೆ ಸ್ನಾನದ ವಿಷಯ ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವುದರಿಂದ ನಾವು ಅದನ್ನು ಮಸೂದೆಯಲ್ಲಿ ಸೇರಿಸುವುದು ಸರಿಯಲ್ಲ’ ಎಂದು ಇದಕ್ಕೆ ಸಬೂಬು ಹೇಳಲಾಗಿದೆ. ಹಾಗೆ ಹೇಳುವ ಮೂಲಕ ಸಮಾಜ ಕಲ್ಯಾಣ ಇಲಾಖೆ, ಕಾನೂನು ಇಲಾಖೆ ಸೇರಿ ಒಟ್ಟಾರೆ ಸರ್ಕಾರದ ನಿರ್ಧಾರಾತ್ಮಕ ಶಕ್ತಿಯೇ ಮೂಢನಂಬಿಕೆಗಳ ಎಂಜಲೆಲೆಗಳ ಮೇಲೆ ಉರುಳಾಡಿಬಿಟ್ಟಿದೆ.ಆದರೆ ಮೊನ್ನೆ ಬುದ್ಧಜಯಂತಿಯ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದೊಳಗಿನ ಈ ವಿಚಾರದಲ್ಲಿ ತಮ್ಮ ವಿಫಲತೆಯನ್ನೋ ವಿಹ್ವಲತೆಯನ್ನೋ ಬಹಿರಂಗವಾಗಿ ತೋಡಿಕೊಂಡಿದ್ದಾರೆ. ‘ಮೇಲ್ಜಾತಿಯ ಜನ ಊಟ ಮಾಡಿದ ಎಲೆಯ ಮೇಲೆ ಉರುಳಾಡಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿ ಕೆಳಜಾತಿಯ ಜನರಿಂದ ಮಡೆಮಡೆ ಸ್ನಾನದಂಥ ಆಚರಣೆಗಳನ್ನು ಮಾಡಿಸಲಾಗುತ್ತದೆ.ಇಂಥ ಆಚರಣೆ ಇರುವ ಧರ್ಮ, ಅದು ಧರ್ಮ ಆಗುತ್ತದೆಯೇ? ಧರ್ಮ ಅನ್ನಿಸಿಕೊಳ್ಳುತ್ತದೆಯೇ? ಮನುಷ್ಯರ ನಡುವೆ ಕಂದಕ ಸೃಷ್ಟಿಸುವ ಧರ್ಮ ಧರ್ಮವೇ ಅಲ್ಲ. ಧರ್ಮಕ್ಕೋಸ್ಕರ ಮನುಷ್ಯರು ಅಲ್ಲ, ಮನುಷ್ಯರಿಗೋಸ್ಕರ ಧರ್ಮ ಇರಬೇಕು’ ಎಂದೆಲ್ಲಾ  ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿಗಳು ಆಕ್ರೋಶದಿಂದ ಪ್ರಶ್ನಿಸಿದರೆಂದು ಇನ್ನೊಂದು ಪತ್ರಿಕಾ ವರದಿ ಹೇಳುತ್ತದೆ. ಅವರ ಧರ್ಮಸಂಕಟ ಕಂಡು ಬುದ್ಧ ಮುಗುಳ್ನಕ್ಕಿರಬೇಕು. ಏಕೆಂದರೆ ಎಷ್ಟಾದರೂ ಅವನೂ ಒಂದಷ್ಟು ಕಾಲ ಒಂದು ರಾಜ್ಯದ ಆಡಳಿತಗಾರ ಆಗಿದ್ದನಲ್ಲವೇ?ಮೂಢನಂಬಿಕೆ ನಿಷೇಧ ಕಾಯಿದೆ ತರುವ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗಿರುವ ಬದ್ಧತೆ ಕುರಿತು ಸಂಶಯಪಡಬೇಕಿಲ್ಲ. ಇದೇ ತಿಂಗಳ ಮೊದಲಲ್ಲಿ ಅವರು ‘ಮಹಾರಾಷ್ಟ್ರದಲ್ಲಿರುವ ಮೂಢನಂಬಿಕೆ ನಿಷೇಧ ಕಾಯಿದೆಗಿಂತಲೂ ಉತ್ತಮ ಕಾಯಿದೆಯನ್ನು ರಾಜ್ಯದಲ್ಲಿ ನಾವು ಜಾರಿಗೆ ತರುತ್ತೇವೆ.ಕರಡು ರೂಪಿಸಿ ಅದನ್ನು ಶಾಸನಸಭೆ ಮುಂದೆ ತರಬೇಕು ಎಂದು ಈಗಾಗಲೇ ಕಾನೂನು ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ವ್ಯಕ್ತಿಯು ವ್ಯವಸ್ಥೆ, ಮೌಲ್ಯ, ಸಿದ್ಧಾಂತ, ಮನುಷ್ಯತ್ವದ ಮೇಲೆ ನಂಬಿಕೆ ಇಡಬೇಕೇ ವಿನಾ ಮೂಢನಂಬಿಕೆ ಮೇಲಲ್ಲ.ಶೀಘ್ರದಲ್ಲೇ ವಿಧಾನಮಂಡಲದಲ್ಲಿ ವಿಧೇಯಕ ಮಂಡಿಸಲಾಗುವುದು’ ಎಂಬಂಥ ಮಾತುಗಳಲ್ಲಿ ಸಮಾರಂಭವೊಂದರಲ್ಲಿ ಭರವಸೆ ಕೊಟ್ಟಿದ್ದಾರೆ. ‘ಮನುಷ್ಯಜಾತಿ ತಾನೊಂದೆ ವಲಂ’ ಎಂಬ ಘೋಷಣೆ, ವಚನಕಾರರ ಚಳವಳಿ ಸೇರಿ ಹಲವಾರು ಅಂಶಗಳಿಂದ ಪುಷ್ಟಗೊಂಡಿರುವ ಕರ್ನಾಟಕದ ವೈಚಾರಿಕ ಪ್ರಜ್ಞೆ ಅದನ್ನು ಎದುರುನೋಡುತ್ತಿದೆ. ಸಿಕ್ಕಿರುವ ಅಧಿಕಾರವನ್ನು ಯಾವಾಗ ಬೇಕಾದರೂ ಯಾವ ಕಾರಣದಿಂದಲಾದರೂ ಕಳೆದುಕೊಳ್ಳಬಹುದು ಎಂಬ ಹೆದರಿಕೆ ಎಲ್ಲಾ ರಾಜಕಾರಣಿಗಳಲ್ಲೂ ಇದ್ದೇ ಇರುತ್ತದೆ.ಹಾಗಿದ್ದೂ ಚಾಮರಾಜನಗರಕ್ಕೆ ಕಾಲಿಟ್ಟವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಹೊಸಕಾಲದ ಮೂಢನಂಬಿಕೆಯನ್ನು ಧಿಕ್ಕರಿಸಿ ಮುಖ್ಯಮಂತ್ರಿಯಾದ ಮೇಲೆ ಆರು ಬಾರಿ ಅಲ್ಲಿಗೆ ಹೋಗಿಬಂದ ಸಿದ್ದರಾಮಯ್ಯ ಅವರ ದಿಟ್ಟ ನಿರ್ಧಾರ ನಿಸ್ಸಂದಿಗ್ಧವಾಗಿ ಒಂದು ಬಹುದೊಡ್ಡ ಸಾರ್ವಜನಿಕ ಸಂಕೇತ. ತಮ್ಮ ಜೀವನದ ಮುಖ್ಯ ಮುಹೂರ್ತಗಳಲ್ಲಿ ಅವರು ಪಂಚಾಂಗವನ್ನು ಪಕ್ಕಕ್ಕಿಟ್ಟದ್ದು,ರಾಹುಕಾಲದಲ್ಲಿ ಮುಂಗಡಪತ್ರ ಮಂಡನೆ ಮಾಡಿದ್ದು ಮುಂತಾದುವೆಲ್ಲ ವೈಯಕ್ತಿಕವಾಗಿ ಮಾತ್ರವಲ್ಲ, ರಾಜಕೀಯ ಸಂಕಥನದಲ್ಲೂ ಸ್ಥಾನ ಪಡೆಯಬೇಕು ಎನ್ನುವುದು ನಿಸ್ಸಂಶಯ. ಅಂಥವರ ನೇತೃತ್ವದ ಸರ್ಕಾರ ಮೂಢನಂಬಿಕೆ ನಿಷೇಧ ಕಾಯಿದೆ ತರಲು ಯತ್ನಿಸುವಾಗ ಯಾವ ಧಾರ್ಮಿಕ ಹಿತಾಸಕ್ತಿಯ ಬೆದರಿಕೆಗೂ ಜಗ್ಗಬಾರದು ಎಂದು ಪ್ರಜ್ಞಾವಂತರು ಆಶಿಸುವುದು ತಪ್ಪಲ್ಲ.2014ರಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಮಠಾಧೀಶರೇ ಬಹಿರಂಗವಾಗಿ ಧರಣಿ ಕುಳಿತು ಈ ಮಸೂದೆ ಜಾರಿಗೆ ಆಗ್ರಹಿಸಿದರು ಎನ್ನುವುದನ್ನು ಮರೆಯುವಂತಿಲ್ಲ. ಭಕ್ತರಿಂದ ಪಾದಗಳಿಗೆ ನಮಸ್ಕಾರ ಮಾಡಿಸಿಕೊಳ್ಳುವ,ಪಾದ ತೊಳೆದ ನೀರನ್ನು ಅವರು ಕುಡಿಯುವುದನ್ನು ಬೆಂಬಲಿಸುವ ಮಠಾಧೀಶರೇ ಇದಕ್ಕೆ ಒತ್ತಾಯಿಸಿದ್ದು ಸೋಜಿಗವೇ. ಈಗ ಒಬ್ಬಿಬ್ಬರು ಮಠಾಧೀಶರ ತೆರೆಮರೆ ಹಿತಾಸಕ್ತಿಯ ಬೆಕ್ಕು ಮಸೂದೆಗೆ ಅಡ್ಡ ಬಂದು ಅದನ್ನು ತೆಳುಗೊಳಿಸಿ, ವಿಳಂಬಿಸಲು ಕಾರಣವಾಗಿದೆಯೇ?ಯಾವ ಹೊಸ ವಿಚಾರಕ್ಕೆ ಮಸೂದೆ- ಕಾಯಿದೆ ಆಲೋಚಿಸಿದರೂ ಅದಕ್ಕೆ ಹಿತಾಸಕ್ತ ಅಥವಾ ಅಹಿತಾಸಕ್ತ ವಲಯಗಳಿಂದ ವಿರೋಧ ಇದ್ದೇ ಇರುತ್ತದೆ. ಆಳುವ ‘ಜನಪ್ರತಿನಿಧಿ’ಗಳು ತಮ್ಮ ಭತ್ಯೆಯನ್ನು ಮುನ್ನೂರು ಪಟ್ಟು ಏರಿಸಿಕೊಳ್ಳಲು ಯತ್ನಿಸಿದಾಗ ಕಂಡೂಕಾಣದಂತೆ ಸುಮ್ಮನಿರುವ ಜನ, ತಮ್ಮಲ್ಲೇ ಶೋಷಿತರ ಹಿತ, ಮರ್ಯಾದೆಯಿಂದ ಬದುಕುವ ಹಕ್ಕು ಕಾಯಲು ಸರ್ಕಾರ ಆಲೋಚಿಸಿದರೆ ದಿಕ್ಕೆಟ್ಟಂತೆ ವರ್ತಿಸುವುದು ನಿರೀಕ್ಷಿತವೇ.‘ಇದು ಹಿಂದೂ ಧರ್ಮದ ಮೇಲೆ ನಡೆಸಲಾಗುತ್ತಿರುವ ಪ್ರಹಾರ’ ಎಂಬ ಅಬ್ಬರದ ಅಪಪ್ರಚಾರವೂ ಇದ್ದೇ ಇತ್ತು. ಹಾಗಂದಮೇಲೆ, ಅಲ್ಲಿ ಮೂಢನಂಬಿಕೆಗಳು ಹೆಚ್ಚಾಗಿವೆ ಎಂದಂತಾಗಬಾರದಷ್ಟೆ. ಈ ಮಸೂದೆ ಶೋಷಕ ಹಿತಾಸಕ್ತಿಗಳು ಪೋಷಿಸುವ ತಾರತಮ್ಯ ನಿವಾರಣೆಯ ಆಶಯ ಹೊಂದಿದೆ, ಈ ತಾರತಮ್ಯ ಯಾವ ಧರ್ಮದಲ್ಲಿ ಇದ್ದರೂ ಅದಕ್ಕೆ ಗುರಿಯಿಡುತ್ತದೆ ಎನ್ನುವುದನ್ನು ವಿರೋಧಿಗಳು ನಂಬುವುದಿಲ್ಲ.ಮೂಢನಂಬಿಕೆ ಉಳಿಸಿಕೊಳ್ಳುವುದು ತಮ್ಮ ಹಕ್ಕು ಎಂದು ವಾದಿಸುವ ಸನಾತನಿಗಳು, ಮೂಢನಂಬಿಕೆ ವಿರೋಧಿಸುವುದು ವಿಚಾರವಾದಿಗಳ ಹಕ್ಕು ಎಂಬ ಸರಳ ತರ್ಕವನ್ನು ಒಪ್ಪುವುದೇ ಇಲ್ಲ ಎನ್ನುವುದೂ ಗೊತ್ತಿರುವ ಸಂಗತಿ. ಈ ಹಿನ್ನೆಲೆಯಲ್ಲಿ ಆಡಳಿತಾತ್ಮಕ ದೃಢ ನಿರ್ಧಾರವೊಂದೇ ಈಗುಳಿದಿರುವ ದಾರಿ ಮತ್ತು ಆಶಾಕಿರಣ. ಹುಸಿ ಧಾರ್ಮಿಕತೆ ಹಾಕುವ ಬೆದರಿಕೆಗಳಿಗೆ ಸರ್ಕಾರ ಬಗ್ಗಬಾರದು.ಈ ಮಸೂದೆಯಲ್ಲಿ ಮಾಧ್ಯಮಗಳ ಮೂಲಕ ಬಿತ್ತರವಾಗುತ್ತಿರುವ ದಿನಭವಿಷ್ಯ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಮುಂತಾದ ಭವಿಷ್ಯದ ಹೆಸರಿನ ಭೂತದ ಉಚ್ಚಾಟನೆಯೂ ಸೇರಿದರೆ ಎಷ್ಟು ಚೆನ್ನ!ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮೂರು ವರ್ಷಗಳು ತುಂಬಿದ ಈ ಸಂದರ್ಭ ಹಲವು ದೃಷ್ಟಿಗಳಿಂದ ಬಹಳ ಮುಖ್ಯ. ಅವರ ಸರ್ಕಾರದ ಸಾಮಾಜಿಕ ನ್ಯಾಯದ ಕಲ್ಪನೆ, ಕೆಲವಾರು ಜನಪ್ರಿಯ ಕೊಡುಗೆ ಕಾರ್ಯಕ್ರಮಗಳ ಆಚೆಗೆ ವಿಸ್ತರಿಸಿಲ್ಲ ಮತ್ತು ಈ ಕಾರ್ಯಕ್ರಮಗಳಿಂದ ಸುಸ್ಥಿರ ಸಾಮಾಜಿಕ ಪ್ರಗತಿ ಸಾಧ್ಯವಿಲ್ಲ ಎನ್ನುವುದನ್ನು ಈಗಾಗಲೇ ಗುರುತಿಸಲಾಗಿದೆ.ಲೋಕಾಯುಕ್ತ ಸಂಸ್ಥೆಗೆ ಸರ್ಕಾರ ಮಾಡಿದ ಅಸಾಂಪ್ರದಾಯಿಕ  ‘ತಿಥಿ’ ಅವರಿಗೆ ಯಾವ ಮರ್ಯಾದೆಯನ್ನೂ ತಂದುಕೊಡುವುದಿಲ್ಲ. ವಕ್ಫ್ ಆಸ್ತಿ ಅಕ್ರಮಗಳನ್ನು ಕುರಿತ ಮಾಣಿಪ್ಪಾಡಿ ವರದಿ ಕುರಿತ ತಿರಸ್ಕಾರದ ಹಿಂದಿನ ಕಾರಣಗಳೂ ಸುಸ್ಪಷ್ಟ. ನಗರ ಮಧ್ಯಮ ವರ್ಗ ಮತ್ತು ಮೇಲ್ಜಾತಿಗಳ ವಿಚಾರಕ್ಕೆ ಅವರು ತೋರುವ ನಿರ್ಲಕ್ಷ್ಯವೂ ಸಾಕಷ್ಟು ಟೀಕೆಗೆ ಗುರಿಯಾಗಿದೆ.ಅದಿರು ಗಣಿಗಾರಿಕೆಯ ಹಾಗೆ ಹೆಚ್ಚಿರುವ ಮರಳು ಗಣಿಗಾರಿಕೆಯ ಹಿಂದೆ ಏನೇನಿದೆ, ಯಾರ್‍ಯಾರಿದ್ದಾರೆ ಅನ್ನುವುದು ಎಲ್ಲರಿಗೂ ಗೊತ್ತು. ಎಷ್ಟೊಂದು ಇಲಾಖೆಗಳಲ್ಲಿ ಎಷ್ಟೊಂದು ಅಕ್ರಮ-ಅವ್ಯವಹಾರ ಇವೆ ಎನ್ನುವುದು ದಿನೇದಿನೇ ಬಯಲಾಗುತ್ತಿದೆ.ಭರವಸೆ ಕೊಡಲಾಗಿದ್ದ ಆಡಳಿತದ ಪಾರದರ್ಶಕತೆಗೆ ಎಷ್ಟು ಪರದೆಗಳಿವೆ ಎನ್ನುವುದು ಎಲ್ಲರ ಕಣ್ಣಿಗೆ ಕಂಡಿದೆ. ಅಂಥ ಅನೇಕ ಇಲ್ಲಸಲ್ಲಗಳನ್ನು ವಿರೋಧ ಪಕ್ಷದಲ್ಲಿ ಇಲ್ಲದವರೂ ಪಟ್ಟಿ ಮಾಡಿಬಿಟ್ಟಿದ್ದಾರೆ.ಹೀಗೆ ಹೇಳಿದ ಮಾತ್ರಕ್ಕೆ ಮೂರು ವರ್ಷಗಳ ಆಡಳಿತದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಏನೂ ಗಮನಾರ್ಹ ಕೆಲಸ ಮಾಡಿಲ್ಲ ಎಂದು ಯಾರೂ ಹೇಳುವುದಿಲ್ಲ. ಆದರೆ ಅದು ನಿರೀಕ್ಷೆಯ ಮಟ್ಟ ಮುಟ್ಟಿಲ್ಲ ಎಂಬುದಷ್ಟೇ ಹಲವರ ತಕರಾರು.ಆದ್ದರಿಂದ ಇನ್ನೆರಡು ವರ್ಷಗಳ ಆಡಳಿತದಲ್ಲಿ, ಅವರಿಂದ ಇನ್ನೂ ಹೆಚ್ಚಿನದನ್ನು, ಇನ್ನೂ ಬೇರೆಯದನ್ನು ಸಹಜವಾಗಿಯೇ ಅಪೇಕ್ಷಿಸಲಾಗುತ್ತಿದೆ. ಆಗಬೇಕಾದ್ದನ್ನೂ ಅನೇಕರು ಪಟ್ಟಿ ಮಾಡಿ ಇಟ್ಟಿದ್ದಾರೆ.ಅನೇಕ ಜನಪರ ನಿರ್ಧಾರಗಳು ಅವರಿಂದ ಬಾಕಿ ಇದೆ. ಅವನ್ನು ಕೈಗೊಳ್ಳುವ ಬದ್ಧತೆ ಅವರಿಗಿದೆ ಎಂಬ ನಂಬಿಕೆ ಇನ್ನೂ ಉಳಿದಿದೆ. ಮೂಢನಂಬಿಕೆ ನಿಷೇಧ ಮಸೂದೆಯ ಮಂಡನೆ ಮತ್ತು ಅಂಗೀಕಾರದಿಂದಲೇ ಈ ನಂಬಿಕೆ ನಿಜವಾಗಲು ಆರಂಭವಾಗಬೇಕು.

ಮಹಾರಾಷ್ಟ್ರ, ಅಸ್ಸಾಂ ಸೇರಿ ಹಲವು ರಾಜ್ಯಗಳಲ್ಲಿ ಇಂಥ ಮಸೂದೆ ಈಗಾಗಲೇ ಜಾರಿಯಾಗಿದೆ. ಅದರಿಂದಾಗಿ ನಿಧಿಶೋಧನೆಗೆ ನರಬಲಿ ಕೊಟ್ಟ ಹಲವಾರು ಮುಸ್ಲಿಮರ ಬಂಧನವೂ ಆಗಿದೆ. ಅಂದಹಾಗೆ ಅಂಧಶ್ರದ್ಧೆ ಯಾರೊಬ್ಬರ ಸ್ವತ್ತೂ ಅಲ್ಲವಲ್ಲ.ಯಶಸ್ಸು ಗಳಿಸಲು ಸಿದ್ಧ ಸೂತ್ರಗಳಿಲ್ಲ; ಯಶಸ್ಸನ್ನು ಅಳೆದು ಬೆಲೆಕಟ್ಟಲೂ ಸಿದ್ಧ ಸೂತ್ರಗಳಿಲ್ಲ. ಆದರೆ ಸಿದ್ದರಾಮಯ್ಯ ಅವರು ಕೆಲವು ವಿಚಾರಗಳಲ್ಲಿ ದಿಟ್ಟತನದಿಂದ ಕೈಗೊಳ್ಳುವ ನಿರ್ಧಾರಗಳೇ ಮುಖ್ಯಮಂತ್ರಿಯಾಗಿ ಅವರ ಯಶಸ್ಸಿನ ಸಿದ್ಧ ಸೂತ್ರಗಳಾಗಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry