7

ಭೂಪಟ ಬಳಸುವುದೂ ಅಪರಾಧವಾಗುವ ಕಾಲ

ಎನ್.ಎ.ಎಂ. ಇಸ್ಮಾಯಿಲ್
Published:
Updated:

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಪ್ರಚಾರಕ್ಕೆ ಸಂಪೂರ್ಣ ಕಾವೇರಿದ ಹೊತ್ತಿನಲ್ಲಿ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ನಮ್ಮೆಲ್ಲರ ನಿತ್ಯದ ಬದುಕಿನ ಮೇಲೂ ಪರಿಣಾಮ ಬೀರುವ ಮಸೂದೆಯೊಂದರ ಕರಡನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಿತು. ರಾಷ್ಟ್ರವ್ಯಾಪಿಯಾಗಿ ಮಾಧ್ಯಮಗಳು ಈ ಕುರಿತ ಸುದ್ದಿಯನ್ನು ಪ್ರಕಟಿಸಿದವಾದರೂ ಚುನಾವಣೆಯ ಕಾವಿನ ಮಧ್ಯೆ ಇದು ಸಾಕಷ್ಟು ಸುದ್ದಿ ಮಾಡಲಿಲ್ಲ. ‘ದ ಜಿಯೋ ಸ್ಪೇಷಿಯಲ್ ರೆಗ್ಯುಲೇಷನ್ ಬಿಲ್ 2016’ರ ಕರಡು ಮೇ 4ರಂದು ಹೊರ ಬಂತಾದರೂ ಇದರ ಪರಿಣಾಮವೇನೆಂದು ಅರ್ಥವಾಗುವುದಕ್ಕೆ ಮತ್ತೊಂದು ದಿನವೇ ಬೇಕಾಯಿತು. ಅರ್ಥವೇ ಆಗದ ಭಾಷೆಯಲ್ಲಿ ಇರುವ ಈ ಮಸೂದೆ ಜಾರಿಗೆ ಬಂದರೆ ಅದು ಎಂತೆಂಥಾ ಪರಿಣಾಮಗಳನ್ನು ಬೀರಬಹುದು ಎಂಬುದನ್ನು ವಿವರಿಸುವ ಮೊದಲ ಪ್ರಯತ್ನ ಮಾಡಿದ್ದು ಬಹುಶಃ ಬೆಂಗಳೂರಿನ ತೇಜೇಶ್ ಜಿ.ಎನ್.ಮುಕ್ತ ತಂತ್ರಾಂಶ ಆಂದೋಲನದಿಂದ ಆರಂಭಿಸಿ ಮುಕ್ತ ದತ್ತಾಂಶ ಆಂದೋಲನದ ತನಕ ಮುಕ್ತ ಮಾಹಿತಿಯ ಆಂದೋಲನದಲ್ಲಿ ಸಕ್ರಿಯರಾಗಿರುವ ತೇಜೇಶ್ ಇದನ್ನು ಬಹಳ ಸರಳ ಆದರೆ ಮನಮುಟ್ಟುವ ಉದಾಹರಣೆಗಳ ಮೂಲಕ ವಿವರಿಸಿದ್ದು ಹೀಗೆ: ‘ನೀವು ನಗರದೊಳಗೆ ಯಾವುದಾದರೂ ವಿಳಾಸ ಹುಡುಕುವುದಕ್ಕಾಗಿ ಗೂಗಲ್ ಮ್ಯಾಪ್ ಬಳಸುತ್ತಿದ್ದೀರಾ... ಹಾಗಿದ್ದರೆ ನೀವು ಕಾನೂನು ಮುರಿಯುತ್ತಿದ್ದೀರಿ ಎಂದರ್ಥ. ಏಕೆಂದರೆ ನೀವು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಭೂಪ್ರದೇಶದ ನಕ್ಷೆಯನ್ನು ಬಳಸುತ್ತಿದ್ದೀರಿ. ರುಚಿಕರ ತಿನಿಸುಗಳನ್ನು ಒದಗಿಸುವ ಉಪಾಹಾರ ಗೃಹವೊಂದನ್ನು ಇದ್ದಕ್ಕಿದ್ದಂತೆಯೇ ಗುರುತಿಸಿದ ನೀವು ಅದನ್ನು ಗೂಗಲ್ ಮ್ಯಾಪ್‌ನಲ್ಲಿ ಗುರುತಿಸಿ ಇತರರಿಗೆ ಸಹಾಯ ಮಾಡಲು ಹೊರಟರೆ ಅದೂ ಕಾನೂನಿನ ಉಲ್ಲಂಘನೆಯೇ. ಏಕೆಂದರೆ ನೀವು ನಿರ್ದಿಷ್ಟ ಭೂಪ್ರದೇಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸೃಷ್ಟಿಸುತ್ತಿರುತ್ತೀರಿ. ನೀವು ನಿಮ್ಮ ಗೆಳೆಯ, ಗೆಳತಿ, ಪತ್ನಿ ಅಥವಾ ಮಕ್ಕಳೊಂದಿಗೆ ಎಲ್ಲೋ ಒಂದು ಕಡೆ ನಿಂತು ಫೋಟೋ ತೆಗೆಸಿಕೊಂಡು ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್‌ನ ಲೋಕೇಶನ್ ಸೇವೆ ಬಳಸಿ ಹಂಚಿಕೊಂಡರೆ ಆಗಲೂ ನೀವೊಂದು ಅಪರಾಧ ಎಸಗಿದಂತಾಗುತ್ತದೆ. ಏಕೆಂದರೆ ನೀವು ನಿರ್ದಿಷ್ಟ ಭೂಪ್ರದೇಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಕಟಿಸುತ್ತಿರುತ್ತೀರಿ. ನಿಮ್ಮ ಕೆಲಸಗಳಿಗಾಗಿ ನೀವು ಜೈಲಿನಲ್ಲಿ ಕೊಳೆಯಬೇಕಾಗುಬಹುದು’ (goo.gl/8zRjEk).ತೇಜೇಶ್ ಅವರು ಬರೆದ ಈ ಸಾಲುಗಳು ಉತ್ಪ್ರೇಕ್ಷೆಯಲ್ಲ. ಜಿಯೋಸ್ಪೇಷಿಯಲ್ ರೆಗ್ಯುಲೇಶನ್ ಬಿಲ್ ಅನುಮೋದನೆಗೊಂಡರೆ ಎದುರಾಗಬಹುದಾದ ಬಿಕ್ಕಟ್ಟುಗಳು. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಭಾರತ್‌ವಾಣಿ, ಸ್ಮಾರ್ಟ್ ಸಿಟಿ, ನವೋದ್ಯಮಗಳಿಗೆ ಪ್ರೋತ್ಸಾಹ ಎಂಬೆಲ್ಲಾ ಪದಪುಂಜಗಳನ್ನು ಬಳಸುತ್ತಿರುವ ಸರ್ಕಾರವೊಂದು ಮಂಡಿಸಬಹುದಾದ ಮಸೂದೆ ಇದುವೇ ಎಂದು ಆಶ್ಚರ್ಯ ಹುಟ್ಟಿಸುವಂಥ ಎಲ್ಲಾ ಅಂಶಗಳೂ ಈ ಮಸೂದೆಯಲ್ಲಿವೆ.ಜನಸಾಮಾನ್ಯರು ತಮ್ಮ ನಿತ್ಯದ ಬದುಕಿಗೆ ಅಗತ್ಯವಾಗಿರುವ ಮಾಹಿತಿಯನ್ನು ಪಡೆಯುವ ಮತ್ತು ಹಂಚಿಕೊಳ್ಳುವ ಕ್ರಿಯೆ ‘ಅಪರಾಧ’ವಾಗುವಂಥ ಮಸೂದೆ ಹೇಗೆ ಹುಟ್ಟಿಕೊಂಡಿತು...? ಯಾವ ದೃಷ್ಟಿಯಲ್ಲಿ ನೋಡಿದರೂ ಈ ಮಸೂದೆಯಲ್ಲಿರುವ ಅಂಶಗಳು ಉದಾರೀಕರಣೋತ್ತರ ಭಾರತಕ್ಕೆ ಹೊಂದಿಕೊಳ್ಳುವುದಿಲ್ಲ. ಎಷ್ಟೇ ಕಷ್ಟಪಟ್ಟರೂ ಇದನ್ನು ಡಿಜಿಟಲ್ ಕ್ರಾಂತಿಯ ಕಾಲಕ್ಕೆ ಅನ್ವಯಿಸಲು ಸಾಧ್ಯವಿಲ್ಲ. ಸ್ಮಾರ್ಟ್ ಸಿಟಿ, ನವೋದ್ಯಮಗಳ ಅಭಿವೃದ್ಧಿಯ ಹಿನ್ನೆಲೆಯಲ್ಲಿ ನೋಡಿದರಂತೂ ಇದು ಇತಿಹಾಸ ಪೂರ್ವ ಕಾಲದ ಪರಿಕಲ್ಪನೆಯಂತೆ ಕಾಣಿಸುತ್ತದೆ.ಕಳೆದ ಇಪ್ಪತ್ತು ದಿನಗಳ ಅವಧಿಯಲ್ಲಿ ಈ ಮಸೂದೆಯ ಕರಡನ್ನು ಇಟ್ಟುಕೊಂಡು ತಜ್ಞರು ಕಲೆ ಹಾಕಿರುವ ಮಾಹಿತಿಯ ಮೇಲೊಮ್ಮೆ ಕಣ್ಣಾಡಿಸಿದರೆ ಈ ಮಸೂದೆ ಹುಟ್ಟಿಕೊಂಡದ್ದರ ಹಿನ್ನೆಲೆ ಸ್ವಲ್ಪ ಮಟ್ಟಿಗೆ ಅರ್ಥವಾಗುತ್ತದೆ. ಬಹುರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಮತ್ತು ಉದ್ಯಮಗಳು ಪ್ರಕಟಿಸುವ ಭಾರತದ ನಕ್ಷೆಯ ಸ್ವರೂಪ ಅನೇಕ ಸಾರಿ ಭಾರತ ಸರ್ಕಾರವನ್ನು ಕೆರಳಿಸಿದೆ.ಕಾಶ್ಮೀರವನ್ನು ‘ವಿವಾದಾಸ್ಪದ ಪ್ರದೇಶ’ವನ್ನಾಗಿ ಗುರುತಿಸಿರುವ ನಕ್ಷೆಗಳು ಸಹಜವಾಗಿಯೇ ಭಾರತೀಯರನ್ನು ಸಿಟ್ಟಿಗೇಳಿಸುತ್ತದೆ. ಈ ಕಾರಣದಿಂದಾಗಿಯೇ ವಿದೇಶಗಳಿಂದ ಆಮದಾಗುವ ಪುಸ್ತಕಗಳಲ್ಲಿ ಭಾರತದ ನಕ್ಷೆ ಇದ್ದರೆ ಅದರ ಮೇಲೆ ‘ನಕ್ಷೆ ವಾಸ್ತವವನ್ನು ಪ್ರತಿಬಿಂಬಿಸುವುದಿಲ್ಲ’ ಎಂಬ ಒಕ್ಕಣೆ ಇರುವ ಸಾಲುಗಳನ್ನು ರಬ್ಬರ್ ಸ್ಟಾಂಪ್ ಬಳಸಿ ಮುದ್ರಿಸಲಾಗುತ್ತಿತ್ತು.ಆದರೆ ಈ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡದ್ದು ಗೂಗಲ್, ಫೇಸ್‌ಬುಕ್‌, ಆ್ಯಪಲ್‌ನಂಥ ಸಂಸ್ಥೆಗಳು ಜಾಗತಿಕವಾಗಿ ನಕ್ಷೆ ಸೇವೆಯನ್ನು ಒದಗಿಸಲಾರಂಭಿಸಿದ ನಂತರ. ಈ ಕಂಪೆನಿಗಳ ಗ್ರಾಹಕರು ವಿಶ್ವವ್ಯಾಪಿಯಾಗಿದ್ದರೂ ಇವು ನೀಡುವ ನಕ್ಷೆಗಳ ಹಿಂದಿನ ದೃಷ್ಟಿಕೋನ ಮಾತ್ರ ಇವುಗಳ ಮೂಲವಿರುವ ದೇಶಗಳದ್ದೇ ಆಗಿರುವುದೊಂದು ಸಮಸ್ಯೆಯಾಗಿತ್ತು. ನಕ್ಷೆಗಳ ಬಳಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲದೇ ಇರುವುದರಿಂದ ಈ ಎಲ್ಲಾ ಸಂದರ್ಭಗಳಲ್ಲಿಯೂ ಭಾರತದ ನಕ್ಷೆಯನ್ನು ವಿರೂಪಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆ, ರಹಸ್ಯ ದಾಖಲೆಗಳ ಕಾಯ್ದೆ ಇತ್ಯಾದಿಗಳನ್ನು ಬಳಸುತ್ತಿತ್ತು.ನಕ್ಷೆಗಳ ರಚನೆ, ಮಾಲೀಕತ್ವ ಮತ್ತು ಬಳಕೆಗೆ ಸಂಬಂಧಿಸಿದ ಯಾವುದೇ ಕಾಯ್ದೆಗಳಿಲ್ಲ ಎಂದು ಹೇಳುವಂತಿಲ್ಲ. ಈಗಿರುವ ಕಾನೂನುಗಳಂತೆ ಭಾರತೀಯ ಭೂಭಾಗ ಎಲ್ಲಾ ಬಗೆಯ ನಕ್ಷೆಗಳ ಮಾಲೀಕತ್ವ ಸರ್ವೇ ಆಫ್ ಇಂಡಿಯಾದ್ದು. ಭೂಪ್ರದೇಶದ ನಕ್ಷೆಗೆ ಸಂಬಂಧಿಸಿದಂತೆ ಈ ಇಲಾಖೆಯದ್ದೇ ಕೊನೆಯ ಮಾತು.ಆದರೆ ಇದು ಖಾಸಗಿಯವರು ನಕ್ಷೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯುತ್ತಿರಲಿಲ್ಲ ಎಂಬುದು ವಾಸ್ತವ. ಗೂಗಲ್ ಮ್ಯಾಪ್ಸ್‌ ಭಾರತ ನಕ್ಷೆಯನ್ನು ವಿರೂಪಗೊಳಿಸಿರುವುದಕ್ಕೆ ಸಂಬಂಧಿಸಿದಂತೆ 2014ರಲ್ಲಿ ಸರ್ವೇ ಆಫ್ ಇಂಡಿಯಾ ನೀಡಿದ ಪೊಲೀಸ್ ದೂರಿನ ಪರಿಣಾಮವಾಗಿ ಈಗ ಗೂಗಲ್ ಮ್ಯಾಪ್ ಭಾರತದ ಬಳಕೆದಾರರಿಗೆ ಕಾಶ್ಮೀರವನ್ನೂ ಒಳಗೊಂಡ ಭಾರತವನ್ನು ತೋರಿಸಿದರೆ ಭಾರತದ ಹೊರಗೆ ಬೇರೆಯೇ ನಕ್ಷೆಯನ್ನು ತೋರಿಸುತ್ತದೆ.ಭೂಪಟಗಳಿಗೆ ಸಂಬಂಧಿಸಿದಂತೆ ಈ ಎಲ್ಲಾ ವಿವಾದಗಳದ್ದು ಹಳೆಯ ಕಥೆ. ಇತ್ತೀಚೆಗೆ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಗೂಗಲ್ ಮ್ಯಾಪ್, ಗೂಗಲ್ ಅರ್ತ್ ಬಗೆಯ ಸೇವೆಗಳನ್ನು ಬಳಸಿದ್ದರು ಎಂಬುದು ಮತ್ತೊಂದು ವಿವಾದಕ್ಕೆ ಕಾರಣವಾಯಿತು. ಈ ಸಂಬಂಧ ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆಯೊಂದು ದಾಖಲಾಗಿತ್ತು. ‘ಕೃತಕ ಉಪಪಗ್ರಹ ಆಧಾರಿತ ಭೂಪಟ ಸೇವೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಸಮಗ್ರ ನೀತಿಯೊಂದನ್ನು ರೂಪಿಸುತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಮೂಲಕ ತಿಳಿದುಬಂದಿದೆ’ ಎಂಬ ಟಿಪ್ಪಣಿಯೊಂದಿಗೆ ನ್ಯಾಯಾಲಯ ಈ ಮೊಕದ್ದಮೆಯನ್ನು ವಿಲೇವಾರಿ ಮಾಡಿತ್ತು. ಬಹುಶಃ ಈಗಿನ ಮಸೂದೆಯೇ ಆ ಸಮಗ್ರ ನೀತಿಯಾಗಿರುವಂತೆ ಕಾಣಿಸುತ್ತದೆ.ಈ ವಿವರಗಳನ್ನೆಲ್ಲಾ ನೋಡುವಾಗ ಆಂತರಿಕ ಭದ್ರತೆಗೆ ಸವಾಲನ್ನೊಡ್ಡುವ ಕೃತಕ ಉಪಗ್ರಹ ಆಧಾರಿತ ಭೂಪಟ ಸೇವೆಗಳನ್ನು ನಿಯಂತ್ರಿಸುವುದು ಅವಶ್ಯಕ ಎಂದು ಅನ್ನಿಸುವುದು ಸಹಜ. ಇದಕ್ಕಾಗಿ ಎಲ್ಲಾ ಬಗೆಯ ಭೂಪಟ ಸಂಬಂಧಿ ಚಟುವಟಿಕೆಗಳನ್ನು ಸರ್ಕಾರಿ ಕೆಂಪು ಪಟ್ಟಿಯ ಅಡಿಯಲ್ಲಿ ತರುವುದು ಪರಿಹಾರವಲ್ಲ. ಮಸೂದೆಯಲ್ಲಿ ಪ್ರಸ್ತಾಪಿಸಲಾಗಿರುವಂತೆ ಎಲ್ಲಾ ಭೂಪಟ ಸಂಬಂಧಿ ಪ್ರಕ್ರಿಯೆಗಳನ್ನು ನಡೆಸುವುದಕ್ಕೂ ಸರ್ಕಾರ ರೂಪಿಸುವ ಪ್ರಾಧಿಕಾರದಿಂದ ಲೈಸೆನ್ಸ್ ಪಡೆಯಬೇಕಾಗುತ್ತದೆ. ಇಂಥದ್ದೊಂದು ಲೈಸೆನ್ಸ್ ರಾಜ್ಯದಲ್ಲಿ ಭೂಪಟ ಆಧಾರಿತ ಸೇವೆಗಳನ್ನು ಒದಗಿಸುವ ಓಲಾ, ಉಬರ್‌ನಂಥ ಟ್ಯಾಕ್ಸಿ ಸೇವೆಗಳಿಗೆ ಏನಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಅದಕ್ಕಿಂತ ದೊಡ್ಡ ಸಮಸ್ಯೆಯೆಂದರೆ ಸಾರ್ವಜನಿಕ ಮಾಹಿತಿಯೊಂದಿಗೆ ಉಪಾಹಾರ ಗೃಹಗಳನ್ನು ಗುರುತಿಸುವ ಝೊಮ್ಯಾಟೊದಂಥ ಸೇವೆಗಳ ಸ್ಥಿತಿಯೇನು ಎಂಬುದರ ಮಾಹಿತಿಯಿಲ್ಲ.ಗೂಗಲ್ ಮ್ಯಾಪ್‌ನಂಥ ಬಹುರಾಷ್ಟ್ರೀಯ ಉದ್ಯಮಗಳಿಗೆ ಪರ್ಯಾಯವಾಗಿ ರೂಪುಗೊಂಡಿರುವ ಜನರೇ ರೂಪಿಸುವ ಓಪನ್ ಸ್ಟ್ರೀಟ್ ಮ್ಯಾಪ್, ವಿಕಿ ಮ್ಯಾಪಿಯಾದಂಥ ಸೇವೆಗಳು ಲೈಸೆನ್ಸ್ ಪಡೆಯುವುದಾದರೂ ಹೇಗೆ? ಏಕೆಂದರೆ ಇವು ಯಾವುದೋ ಒಂದು ಸಂಸ್ಥೆ ನಡೆಸುವ ವ್ಯವಸ್ಥೆಯಲ್ಲ. ಬಳಕೆದಾರರೇ ಮಾಹಿತಿಯನ್ನು ಊಡಿಸುವ ಮೂಲಕ ಸಮೃದ್ಧವಾಗುವ ಮಾದರಿಗಳಿವು. ಇನ್ನೂ ದೊಡ್ಡ ಸಮಸ್ಯೆ ಎದುರಾಗುವುದು ಜೀವ ವೈವಿಧ್ಯವನ್ನು ದಾಖಲಿಸುವಂಥ ಇಂಡಿಯಾ ಬಯೋಡೈವರ್ಸಿಟಿ ಪೋರ್ಟಲ್‌ನಂಥ ಸಂಶೋಧನೆಗಳನ್ನು ಭೂಪಟಗಳೊಂದಿಗೆ ಹೊಂದಿಸಿ ಬಳಕೆಗೆ ನೀಡುವ ವ್ಯವಸ್ಥೆಗೆ. ಸಂಶೋಧಕರಿಗೆ ಮತ್ತು ಜೀವವೈವಿಧ್ಯ  ಕ್ಷೇತ್ರದ ಆಸಕ್ತರೆಲ್ಲರಿಗೂ ಅನುಕೂಲವಾಗುವಂಥ ವ್ಯವಸ್ಥೆಯಿದು. ಭಾರತದಾದ್ಯಂತ ಕಾಣಸಿಗುವ ಚಿಟ್ಟೆ ಮತ್ತು ಪತಂಗಗಳನ್ನು ಇಲ್ಲಿ ಭೂಪಟಾಧಾರಿತವಾಗಿ ದಾಖಲಿಸಲಾಗಿದೆ. ಇದೊಂದು ಮುಕ್ತ ಮತ್ತು ಸ್ವತಂತ್ರ ಮಾಹಿತಿ ಹಂಚಿಕೆಯ ತಾಣ. ಇಂಥವುಗಳು ಹೇಗೆ ಕಾರ್ಯ ನಿರ್ವಹಿಸಬೇಕು? ಈ ಪ್ರಶ್ನೆಗಳ್ಯಾವಕ್ಕೂ ಕರಡು ಮಸೂದೆಯಲ್ಲಿ ಉತ್ತರವಿಲ್ಲ.ಭದ್ರತೆ, ಸಾರ್ವಭೌಮತೆಯಂಥ ದೊಡ್ಡ ಪದಗಳನ್ನು ಬಳಸುವ ಮೂಲಕ ಈ ಪ್ರಶ್ನೆಗಳಿಗೆ ಉತ್ತರ ನೀಡುವುದನ್ನು ತಪ್ಪಿಸಿಕೊಳ್ಳಬಹುದು ಎಂಬ ಮನಃಸ್ಥಿತಿಯಲ್ಲಿ ಈ ಮಸೂದೆ ರೂಪುಗೊಂಡಿರುವಂತಿದೆ. ಪಾಕಿಸ್ತಾನದ ತಗಾದೆ ಸರ್ಕಾರದ ಈ ನಿಲುವನ್ನು ಸಮರ್ಥಿಸುವಂತಿದೆ. ರಾಜತಂತ್ರದ ಪದಪುಂಜಗಳಲ್ಲಿ ವಾಸ್ತವವನ್ನು ಮರೆಮಾಚಲು ಸಾಧ್ಯವಿಲ್ಲ. ಸ್ಮಾರ್ಟ್ ಸಿಟಿಯಂಥ ಪರಿಕಲ್ಪನೆ ಮುಕ್ತ ಭೂಪಟ ತಂತ್ರಜ್ಞಾನವಿಲ್ಲದೆ ಸಾಧ್ಯವಿದೆಯೇ? ಅಷ್ಟೇಕೆ ನವೋದ್ಯಮವೆಂಬ ಪರಿಕಲ್ಪನೆಯೇ ಈ ಬಗೆಯ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡಿರುವ ಆರ್ಥಿಕ ವಾಸ್ತವವೂ ನಮ್ಮ ಮುಂದಿದೆ. ಅಷ್ಟೇಕೆ ಸರ್ಕಾರ ಈಗಾಗಲೇ ರೂಪಿಸಿರುವ ಮುಕ್ತ ದತ್ತಾಂಶ ಯೋಜನೆಯ ಭವಿಷ್ಯವೇನು?ಈ ಪ್ರಶ್ನೆಗಳ ಮೂಲಕ ಮಸೂದೆಯನ್ನು ರೂಪಿಸಿರುವವರ ಸಂಕುಚಿತ ದೃಷ್ಟಿಕೋನವನ್ನು ಬಯಲುಗೊಳಿಸುವ ಪ್ರಯತ್ನ ಈಗಾಗಲೇ ಚಾಲನೆಯಲ್ಲಿದೆ. ಆಂತರಿಕ ಭದ್ರತೆಯ ದೃಷ್ಟಿಯಿಂದ ಸೂಕ್ಷ್ಮವಾಗಿರುವ ಪ್ರದೇಶಗಳನ್ನು ಹೊರತು ಪಡಿಸಿದ ಭೂಪ್ರದೇಶದ ನಕ್ಷೆಯನ್ನು ಮುಕ್ತವಾಗಿಡುವುದು ಏಕೆ ಅಗತ್ಯ ಎಂಬುದನ್ನು ವಿವರಿಸುವುದಕ್ಕೆ ಈ ಕ್ಷೇತ್ರದ ತಜ್ಞರು ಮತ್ತು ಹೋರಾಟಗಾರರು ಒಂದಾಗಿ ‘ಸೇವ್ ದ ಮ್ಯಾಪ್’ ಎಂಬ ಆಂದೋಲನ ಆರಂಭಿಸಿದ್ದಾರೆ. ಜಿಯೋಸ್ಪೇಷಿಯಲ್ ರೆಗ್ಯೂಲೇಷನ್ ಬಿಲ್‌ನ ಕರಡನ್ನು ಓದಿ ಪ್ರತಿಕ್ರಿಯೆಗಳನ್ನು ನೀಡುವುದಕ್ಕೆ ಜೂನ್ 4 ಕೊನೆಯ ದಿನ. savethemap.in ಜಾಲತಾಣ ಈ ಮಸೂದೆಯ ಹುಳುಕುಗಳನ್ನು ಬಿಡಿಸಿಡುತ್ತಿದೆ. ಈ ಹಿಂದೆ ಇಂಟರ್ನೆಟ್ ಆಧಾರಿತ ಸಂದೇಶ ಸೇವೆಗೆ ಲೈಸೆನ್ಸ್ ವ್ಯವಸ್ಥೆ ತರುವ ಪ್ರಯತ್ನವನ್ನು ವಿಫಲಗೊಳಿಸಿದಂತೆಯೇ ಭೂಪಟಗಳನ್ನು ಸಮುದಾಯಗಳ ಆಸ್ತಿಯನ್ನಾಗಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry