7

ಮಹಿಳೆ ಬದುಕಿನಲ್ಲಿ ಹೊಸ ಬೆಳಗು!

Published:
Updated:
ಮಹಿಳೆ ಬದುಕಿನಲ್ಲಿ ಹೊಸ ಬೆಳಗು!

ಎರಡು ವರ್ಷಗಳ ಆಡಳಿತ ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಸಾಧನೆಗಳನ್ನು ವಿವಿಧ ಮಾಧ್ಯಮಗಳ ಮೂಲಕ  ಬಿಂಬಿಸಲಾಗುತ್ತಿದೆ. ಮಹಿಳಾ ಸಬಲೀಕರಣಕ್ಕೆ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ನಡೆದ ‘ವಿಕಾಸ ಪರ್ವ’ ರ‍್ಯಾಲಿಗಳಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಗ್ರಾಮೀಣ ಮಹಿಳೆಯರಿಗೆ ಅಡುಗೆ ಅನಿಲ ಒದಗಿಸುವ ‘ಉಜ್ವಲ’ ಯೋಜನೆ, ಮಹಿಳಾ ಉದ್ಯಮಿಗಳಿಗೆ ಹಣಕಾಸು ನೆರವು ಒದಗಿಸುವ ‘ಮುದ್ರಾ’ ಯೋಜನೆ ಪ್ರಚಾರಾಂದೋಲನದಲ್ಲಿ ಪ್ರಮುಖ ಸ್ಥಾನ ಗಳಿಸಿವೆ. ‘ಬೇಟಿ ಬಚಾವೊ ಬೇಟಿ ಪಡಾವೊ’ ಯೋಜನೆಯ ಪರವಾಗಿ ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್ ಹಾಗೂ ರವೀನಾ ಟಂಡನ್ ತಮ್ಮ ದನಿ ಸೇರಿಸಿ ಗ್ಲ್ಯಾಮರ್ ಸ್ಪರ್ಶವನ್ನೂ ನೀಡಿದ್ದಾರೆ.ಪ್ರಚಾರಗಳ ಈ ಭರಾಟೆ ವಾಸ್ತವಗಳಿಗೆ ಎಷ್ಟು ಹತ್ತಿರವಾಗಿವೆ? ಎಂಬುದು ಪ್ರಶ್ನೆ. 2014ರ ಲೋಕಸಭೆ ಚುನಾವಣೆ ಪೂರ್ವ ಪ್ರಚಾರಾಂದೋಲನದಲ್ಲಿ  ‘ಬಹುತ್ ಹುವಾ ನಾರಿ ಪರ್ ಅತ್ಯಾಚಾರ್ , ಅಬ್ ಕಿ ಬಾರ್ ಮೋದಿ ಸರ್ಕಾರ್’ ಘೋಷಣೆ ಅನುರಣಿಸಿತ್ತು. ಆದರೆ ಎರಡು ವರ್ಷಗಳ ನಂತರ ಮಹಿಳೆ ವಿರುದ್ಧದ ಅಪರಾಧ ಪ್ರಕರಣಗಳು ಕಡಿಮೆ  ಏನೂ ಆಗಲಿಲ್ಲ ಎಂಬುದನ್ನು ದಾಖಲೆಗಳು ಹೇಳುತ್ತಿವೆ.ಜೊತೆಗೆ ಮೂರು ವರ್ಷಗಳ ಹಿಂದೆ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಮಹಿಳಾ ಸುರಕ್ಷತೆಗಾಗಿ  ರೂಪಿಸಿದ ‘ನಿರ್ಭಯಾ ನಿಧಿ’ ಬಳಕೆಯಾಗದಿರುವುದು ಆಡಳಿತದ ಲೋಪವನ್ನು ಎತ್ತಿ ಹಿಡಿಯುತ್ತದೆ. ಹೀಗಾಗಿಯೇ, ನಿರ್ಭಯಾನಿಧಿ ಎಂಬುದು ಬರೀ ಬಾಯಿ ಮಾತಿನ ಸೇವೆಯಾಗಿದೆ . ಯಾರಿಗೂ ಇದರಿಂದ ಲಾಭವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ಟೀಕಿಸಿದೆ. ಇದರ ಹಣಕಾಸು ವಿತರಣೆಗೆ ಸ್ಪಷ್ಟ ನಿಯಮಗಳಿಲ್ಲ  ಎಂಬುದು ಮುಖ್ಯ ಸಮಸ್ಯೆಯಾಗಿ ಕೂತಿದೆ.‘ರಾಷ್ಟ್ರ ನಿರ್ಮಾಪಕರು’ ಎಂದು ಈ ರಾಷ್ಟ್ರದ ಮಹಿಳೆಯರನ್ನು  ಚುನಾವಣಾ ಪ್ರಣಾಳಿಕೆಯಲ್ಲಿ  ಬಿಜೆಪಿ ಬಣ್ಣಿಸಿತ್ತು. ಮಹಿಳಾ ಮೀಸಲು ಮಸೂದೆ ಅಂಗೀಕರಿಸುವ ವಿಚಾರದ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಯನ್ನೂ ನೀಡಲಾಗಿತ್ತು. ಆದರೆ ಆಡಳಿತದ ಗದ್ದುಗೆ ಏರಿ ಎರಡು ವರ್ಷಗಳಾದರೂ ಈ ಬಗ್ಗೆ ಮೌನವೇ ರಾಜ್ಯವಾಳುತ್ತಿದೆ ಎನ್ನಬಹುದು. ಸದ್ಯಕ್ಕೆ ರಾಜ್ಯಗಳ ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ರಾಷ್ಟ್ರೀಯ ಸರಾಸರಿ ಶೇ 9 ಮಾತ್ರ.ಲೋಕಸಭೆಯಲ್ಲಿ ಇದು ಶೇ 12.  ಹಾಗೆಯೇ ಸ್ಥಳೀಯ ಮಟ್ಟಗಳಲ್ಲಿ ಅಧಿಕಾರಸ್ಥಾನಗಳಲ್ಲಿ ಮಹಿಳೆಯನ್ನು ಹೊರಗಿಡುವಂತಹ ನೀತಿಗಳನ್ನು ಬಿಜೆಪಿ ಆಡಳಿತವಿರುವ ಹರಿಯಾಣ ಹಾಗೂ ರಾಜಸ್ತಾನಗಳಲ್ಲಿ ತೆಗೆದುಕೊಂಡಿರುವುದು ಮತ್ತೊಂದು ಅಹಿತಕರ ಬೆಳವಣಿಗೆ.ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಲು 8ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು ಎಂಬುದನ್ನೀಗ ಅಲ್ಲಿ ಕಡ್ಡಾಯ ಮಾಡಲಾಗಿದೆ.  ಇಂತಹದೊಂದು ನಿಯಮದಿಂದ ಬಹುತೇಕ ದಲಿತ ಮಹಿಳೆಯರು ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಲೇ ಅನರ್ಹರಾಗುತ್ತಾರೆ ಎಂಬುದನ್ನು ನಿರ್ಲಕ್ಷಿಸಲಾಗದ ಸಂಗತಿ.ಹಾಗೆಯೇ ಮಕ್ಕಳ ಲಿಂಗಾನುಪಾತ ಕುಸಿಯುತ್ತಿರುವುದನ್ನು ನಿಯಂತ್ರಿಸಲು ಕಳೆದ ವರ್ಷ  ಜನವರಿಯಲ್ಲಿ ಆರಂಭಿಸಲಾದ ‘ಬೇಟಿ ಬಚಾವೊ ಬೇಟಿ ಪಡಾವೊ’  (ಬಿಬಿಬಿಪಿ) ಆಂದೋಲನಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿದೆ ಎಂಬುದು ನಿಜ. ಅದೂ ಸಾಮಾಜಿಕ ಮಾಧ್ಯಮಗಳಲ್ಲಿ  ‘ಸೆಲ್ಫೀ ವಿಥ್ ಡಾಟರ್’ ಅಭಿಯಾನದಿಂದಾಗಿ ಈ ಯೋಜನೆ  ಇನ್ನಷ್ಟು ಪ್ರಚಾರ ಗಿಟ್ಟಿಸಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದು 2021ರಲ್ಲಿ ನಡೆಯುವ ಜನಗಣತಿಯಲ್ಲಷ್ಟೇ  ತಿಳಿಯಬೇಕಿದೆ. ಈ ಎಲ್ಲಾ ಟೀಕೆ ಟಿಪ್ಪಣಿಗಳ ನಡುವೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿರುವ  ಕರಡು ರಾಷ್ಟ್ರೀಯ ಮಹಿಳಾ ನೀತಿ – 2016, ಮಹಿಳಾ ಹಕ್ಕುಗಳನ್ನು ಎತ್ತಿ ಹಿಡಿಯುವಂತಹ ಕಾಳಜಿಯನ್ನು ವ್ಯಕ್ತಪಡಿಸಿದೆ ಎಂಬುದು ಗಮನಾರ್ಹ. ಹೊಸ ಸಹಸ್ರಮಾನ ಹಾಗೂ ತ್ವರಿತಗತಿಯಲ್ಲಿ ಬದಲಾಗುತ್ತಿರುವ ಜಾಗತಿಕ ಮತ್ತು ರಾಷ್ಟ್ರೀಯ ಸನ್ನಿವೇಶಗಳು ಲಿಂಗ ಪಾತ್ರಗಳಲ್ಲಿ ತಂದಿರುವ ಸಂಕೀರ್ಣತೆಗಳನ್ನು  ಗುರುತಿಸಲು  ಈ ನೀತಿ ಯತ್ನಿಸುತ್ತದೆ ಎಂಬುದು ವಿಶೇಷ. ಈ ಹಿಂದೆ ರಾಷ್ಟ್ರೀಯ ಮಹಿಳಾ ನೀತಿ ಪ್ರಕಟವಾದದ್ದು 2001ರಲ್ಲಿ. ಈಗ 15 ವರ್ಷಗಳ ಅಂತರದ ನಂತರ ಈ  ಹೊಸ ಕರಡು ರಾಷ್ಟ್ರೀಯ ಮಹಿಳಾ ನೀತಿ ಪ್ರಕಟವಾಗಿದೆ.2001ರಲ್ಲಿ ಮಹಿಳಾ ಸಬಲೀಕರಣದ ರಾಷ್ಟ್ರೀಯ ನೀತಿಯನ್ನು ರೂಪಿಸಿದ ನಂತರ  ಮಹಿಳಾ ಸಬಲೀಕರಣದ ಪರಿಕಲ್ಪನೆ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಈಗ ಆಕೆ ಕ್ಷೇಮಾಭಿವೃದ್ಧಿ ಯೋಜನೆಗಳ ಫಲಾನುಭವಿಯಷ್ಟೇ  ಅಲ್ಲ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯ ಪಾಲುದಾರಳು. ಮುಂದಿನ 15–20 ವರ್ಷಗಳಲ್ಲಿ ಮಹಿಳೆ ಕುರಿತಾದ ಸರ್ಕಾರದ ಕ್ರಿಯೆಗಳಿಗೆ ಈ ಕರಡು ನೀತಿ ಚೌಕಟ್ಟು ಒದಗಿಸಲಿದೆ.ವಿವಿಧ ವರ್ಗಗಳ ಬಹಳಷ್ಟು ಮಹಿಳೆಯರ ಜೊತೆ ಸಮಾಲೋಚಿಸಿ ಈ ಕರಡು ಸಿದ್ಧ ಪಡಿಸಲಾಗಿದೆ. 2012ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ರಚಿಸಿದ್ದ ಪಾಮ್ ರಜಪೂತ್ ಸಮಿತಿ ವರದಿಯನ್ನು ಈ ನೀತಿ ಆಧರಿಸಿದೆ. ಈ ಸಮಿತಿ ಕಳೆದ ವರ್ಷವಷ್ಟೇ ತನ್ನ ಶಿಫಾರಸುಗಳನ್ನು ಸಲ್ಲಿಸಿತ್ತು.ಅವಿವಾಹಿತೆ, ವಿಚ್ಛೇದಿತೆ, ವಿಧವೆ, ಉದ್ಯೋಗಸ್ಥೆ ಹೀಗೆ ವಿವಿಧ ವರ್ಗಗಳ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ನಿರ್ವಹಿಸಲು ಈ ಕರಡು ನೀತಿ ಯತ್ನಿಸಿದೆ. 2011ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆಯ ಶೇ 21ರಷ್ಟು ಮಂದಿ ಒಂಟಿ ಮಹಿಳೆಯರಿದ್ದಾರೆ.ಕಳೆದ ಜನಗಣತಿಗೆ ಹೋಲಿಸಿದರೆ ಇದು ಶೇ 40ರಷ್ಟು ಹೆಚ್ಚಳ ಸೂಚಿಸುತ್ತದೆ. ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದಕ್ಕಾಗಿ ಈ ಕರಡು ನೀತಿಯಲ್ಲಿ  ಗುರಿಗಳನ್ನು ಇಟ್ಟುಕೊಳ್ಳಲಾಗಿದೆ.  24 ಪುಟಗಳ ಈ ಕರಡು ನೀತಿ ವಿವರವಾದ ಕ್ರಿಯಾ ಯೋಜನೆಯನ್ನೂ ಮುಂದಿಟ್ಟಿದೆ. ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನೂ ಆಹ್ವಾನಿಸಲಾಗಿದೆ.  ಹೀಗಾಗಿ ಭಾರತೀಯ ಮಹಿಳೆಯರ ಧ್ವನಿಗಳು ಹಾಗೂ ಆಶೋತ್ತರಗಳನ್ನು ಅಂತಿಮ ಕರಡು ಪ್ರತಿ ಪ್ರತಿಬಿಂಬಿಸಲಿದೆ ಎನ್ನಬಹುದು.ಮಾತೃಮರಣ ಪ್ರಮಾಣ ಇಳಿಕೆ, ಹೆಣ್ಣುಮಕ್ಕಳಿಗೆ ಹಾಗೂ ಮಹಿಳೆಯರಿಗೆ ಪೌಷ್ಟಿಕ  ಆಹಾರ ಹೆಚ್ಚಳ, ಪ್ರಜನನ ಹಕ್ಕುಗಳ ರಕ್ಷಣೆ, ಹದಿಹರೆಯದ ಹೆಣ್ಣುಮಕ್ಕಳು ಅರ್ಧದಲ್ಲೇ ಶಾಲೆ ಬಿಡುವುದನ್ನು ತಪ್ಪಿಸುವುದು, ಗಂಡು- ಹೆಣ್ಣು ಮಕ್ಕಳ ಅನುಪಾತ ಸುಧಾರಣೆ, ಹೆಣ್ಣು ಭ್ರೂಣಹತ್ಯೆ ತಡೆ, ಪುರುಷರು- ಮಹಿಳೆಯರ ನಡುವೆ ವೇತನ ಅಂತರ ಕಡಿಮೆ ಮಾಡುವುದು, ಕೌಶಲ ಅಭಿವೃದ್ಧಿ , ಮನೆ ಹಾಗೂ ಹೊರಗೆ ಸುರಕ್ಷತೆ, ಲಿಂಗ ಸಂವೇದನಾಶೀಲತೆ ಪ್ರಯತ್ನಗಳಲ್ಲಿ ಪುರುಷರು ಹಾಗೂ ಗಂಡು ಮಕ್ಕಳನ್ನು ಒಳಗೊಳ್ಳುವುದು ಇತ್ಯಾದಿ ಹಲವು ಕ್ರಮಗಳನ್ನು ಈ ನೀತಿ  ಮುಂದಿಟ್ಟಿದೆ.ಹೊಸದಾದ ಹಲವು ಉಪಕ್ರಮಗಳೂ ಈ ನೀತಿಯಲ್ಲಿವೆ. ಇದರಲ್ಲಿ ಮುಖ್ಯವಾದದ್ದು ಮಹಿಳಾ ಪ್ರಜನನ ಹಕ್ಕುಗಳಿಗೆ ನೀಡಿರುವ ಮಹತ್ವ. ಕುಟುಂಬ ಯೋಜನೆ ಹೊರೆ ಮಹಿಳೆಗೇ ಸೀಮಿತವಾಗಬೇಕಿಲ್ಲ. ಹೀಗಾಗಿ ಪುರುಷರ ಸಂತಾನ ಶಕ್ತಿ ಹರಣ ಕಾರ್ಯಕ್ರಮಗಳಿಗೆ ಈ ಕರಡು ನೀತಿಯಲ್ಲಿ ಒತ್ತು ನೀಡಲಾಗಿದೆ.ಆಳವಾಗಿ ಬೇರೂರಿರುವ ಪಿತೃಪ್ರಧಾನ ಪೂರ್ವಗ್ರಹಗಳನ್ನು ನಿರ್ವಹಿಸಲು, ಮಕ್ಕಳ ಪಾಲನೆ ಹಾಗೂ  ವೇತನ ಸಹಿತ ರಜೆಗಳಂತಹ  ಸೌಲಭ್ಯಗಳು ಪುರುಷ ಹಾಗೂ ಮಹಿಳೆಯರಿಬ್ಬರಿಗೂ ದೊರಕಬೇಕೆಂದು ಈ ನೀತಿ ಸಲಹೆ ನೀಡುತ್ತದೆ.ಇದು ಲಿಂಗತ್ವ ಪಾತ್ರಗಳ ಮರು ವಿಂಗಡಣೆಗೆ ನೆರವಾಗುವುದಲ್ಲದೆ ಸಂಘಟಿತ ಹಾಗೂ ಅಸಂಘಟಿತ ವಲಯಗಳಲ್ಲಿನ ನೌಕರರು ಮನೆ ಹಾಗೂ ಕಚೇರಿ ಕೆಲಸಗಳಲ್ಲಿ  ಸಮತೋಲನ ಸಾಧಿಸಲು ನೆರವಾಗುತ್ತದೆ ಎಂದು ಹೇಳಲಾಗಿದೆ. ಆದರೆ ಇದು ಹೇಗೆ ವಾಸ್ತವ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಹೇಳಿಲ್ಲ.60 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರ ಆರೋಗ್ಯ ಅಗತ್ಯಗಳ ನಿರ್ವಹಣೆ ಬಲಪಡಿಸುವ ಉದ್ದೇಶವನ್ನೂ ಈ ನೀತಿ ಹೊಂದಿದೆ. ಈ ವರ್ಗದ ಮಹಿಳೆಯರು ಜನಸಂಖ್ಯೆಯ ಶೇ 8.4ರಷ್ಟಿದ್ದಾರೆ. ಪ್ರೌಢಶಾಲೆಗಳಲ್ಲಿ ಹೆಚ್ಚಿನ ಹುಡುಗಿಯರನ್ನು ಸೇರಿಸಿಕೊಳ್ಳಲು ಹಾಗೂ ಈಗಾ ಗಲೇ ಇರುವ ಹುಡುಗಿಯರು ಶಾಲೆ ಬಿಡದಂತೆ ನೋಡಿಕೊಳ್ಳಲು ಶಾಲೆಯಿಂದ ಮನೆಗೆ ಮಿನಿಬಸ್‌ಗಳಂತಹ ವಿನೂತನ ಸಾರಿಗೆ ಮಾದರಿಗಳ ಸಲಹೆಯನ್ನು ಪ್ರಸ್ತಾಪಿಸಲಾಗಿದೆ.ಸಣ್ಣ ವಯಸ್ಸಿನಿಂದಲೇ ಪುರುಷರಲ್ಲಿ ಮಹಿಳೆಯರ ಬಗ್ಗೆ ಗೌರವ ಭಾವನೆ ಮೂಡಿಸಲು ಜಾಗೃತಿ ಕಾರ್ಯಕ್ರಮಗಳಲ್ಲಿ ಪುರುಷರು ಹಾಗೂ ಬಾಲಕರನ್ನು ತೊಡಗಿಸಿಕೊಳ್ಳುವ ಬಗ್ಗೆ ಈ ನೀತಿಯಲ್ಲಿ ಪ್ರಸ್ತಾಪವಿರುವುದು ಮುಖ್ಯವಾದದ್ದು. ಕರಡು ನೀತಿಯ ಕೆಲವು ಆಯಾಮಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಚಿವಾಲಯ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲೂ ಆರಂಭಿಸಿದೆ.ಹೀಗಾಗಿ ಶಿಕ್ಷಣ ಸಚಿವಾಲಯದ ಜೊತೆ ಕೈಜೋಡಿಸಿ ಶಾಲಾ ಬಾಲಕರಿಗೆ  ‘ಜೆಂಡರ್ ಚಾಂಪಿಯನ್ಸ್’ ಸ್ಪರ್ಧೆ ಏರ್ಪಡಿಸಲು ಮುಂದಾಗಿದೆ. ರಾಷ್ಟ್ರದಾದ್ಯಂತ ಕಾರ್ಯಗತಗೊಳಿಸಲಾಗುವ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಐದನೇ ತರಗತಿಯ ನಂತರದ ಬಾಲಕರು ಅರ್ಹರು. ಮಹಿಳೆಯರಿಗೆ ಗೌರವ ನೀಡುವುದನ್ನು ಎತ್ತಿ ಹಿಡಿಯುವವವರಿಗೆ ಬಹುಮಾನ ನೀಡಲಾಗುವುದು.ಮಹಿಳೆಯರಿಗೆ ಸುರಕ್ಷತೆ ಹೆಚ್ಚಿಸುವ ವಿಚಾರದಲ್ಲಿ ಮಹಿಳೆ ಮೇಲಿನ ಹಿಂಸಾಚಾರಗಳ ಸಮಗ್ರ ಮಾಹಿತಿ ನೆಲೆಯನ್ನು ಅಭಿವೃದ್ಧಿಪಡಿಸುವ ವಿಚಾರವನ್ನೂ ಈ ನೀತಿ ಪ್ರಸ್ತಾಪಿಸುತ್ತದೆ. ಮಹಿಳೆ ಮೇಲಿನ ಹಿಂಸಾಚಾರಗಳಿಗೆ ಕಾನೂನು ಜಾರಿ ಸಂಸ್ಥೆಗಳ  ಪ್ರತಿಕ್ರಿಯೆಗಳ ಕಟ್ಟುನಿಟ್ಟಿನ ಉಸ್ತುವಾರಿ,  ಕಾಲಮಿತಿಯಲ್ಲಿ ವಿಚಾರಣೆ, ನಾರಿ ಅದಾಲತ್‌ಗಳು ಹಾಗೂ ಕುಟುಂಬ ನ್ಯಾಯಾಲಯಗಳ ಬಲವರ್ಧನೆ ಇತ್ಯಾದಿಗೂ ಒತ್ತು ನೀಡಲಾಗಿದೆ.ಪೊಲೀಸ್ ಠಾಣೆಗಳಿಗೆ ಸಂಪರ್ಕ ಕಲ್ಪಿಸುವ ಪ್ಯಾನಿಕ್ ಬಟನ್‌ಗಳನ್ನು ಸೆಲ್‌ಫೋನ್‌ಗಳಲ್ಲಿ ಅಳವಡಿಸುವ ಬಗ್ಗೆಯೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ಜನವರಿಯೊಳಗೆ ಇದು ಸಾಧ್ಯವಾಗಲಿದೆ. ಬಳಕೆದಾರರು ಬಯಸುವ 10 ಜನರಿಗೆ ಆತಂಕದ ಧ್ವನಿ ಹೋಗುವಂತಹ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವ ಯತ್ನಗಳೂ ನಡೆದಿವೆ.ಇದರಿಂದ ಪೊಲೀಸರಿಗಿಂತ ಮುಂಚೆಯೇ ಮಹಿಳೆಯ ಆಪ್ತರೂ ಆಕೆ ಬಳಿ ತೆರಳುವುದು ಸಾಧ್ಯವಾಗಬಹುದು.ಹಾಗೆಯೇ ಈ ನೀತಿ ಗಮನ ನೀಡಲಿರುವ ಕಾಳಜಿಯ ಮತ್ತೊಂದು ಕ್ಷೇತ್ರವೆಂದರೆ ಮಹಿಳೆಯರ ಅಕ್ರಮ ಸಾಗಣೆ. ಆನ್‌ಲೈನ್‌ನಲ್ಲಿ ವಂಚನೆ ಅಥವಾ ಕಿರುಕುಳಗಳಿಂದ ರಕ್ಷಣೆ  ಮತ್ತು  ಬಾಡಿಗೆ ತಾಯಂದಿರಿಗೆ ರಕ್ಷಣೆ ವಿಚಾರವೂ ಈ ನೀತಿಯಲ್ಲಿ ಪ್ರಸ್ತಾಪವಾಗಿದೆ.ಮಹಿಳಾ ಸಬಲೀಕರಣ ರಾಷ್ಟ್ರದ ಅಭಿವೃದ್ಧಿಗೆ ಪೂರಕ.  ಹೀಗಾಗಿಯೇ ಮಹಿಳೆಯರ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಬೆಳವಣಿಗೆಗೆ ಪೂರಕವಾಗುವ ಕಾನೂನುಗಳು ಹಾಗೂ ನೀತಿಗಳು ಅಸ್ತಿತ್ವದಲ್ಲಿವೆ. ಹೀಗಿದ್ದೂ ಮಹಿಳಾ ಸಬಲೀಕರಣ ಎಂಬುದು ವಾಸ್ತವ ಸಂಗತಿಯಾಗುತ್ತಿಲ್ಲ.ಇಂತಹ ಸಂದರ್ಭದಲ್ಲಿ ಸಮಯ ಉಳಿಸುವ ತಂತ್ರಜ್ಞಾನ, ಮೂಲ ಸೌಕರ್ಯ ಹಾಗೂ ಮಕ್ಕಳ ಪಾಲನಾ ಸೇವೆಗಳನ್ನು ಒದಗಿಸುವ ಮೂಲಕ ವೇತನ ರಹಿತ ಕೆಲಸಕ್ಕೆ ವಿನಿಯೋಗಿಸುವ ಸಮಯದಿಂದ ಮಹಿಳೆಗೆ ಮುಕ್ತಿ ನೀಡುವಂತಹ ಯೋಜನೆಗಳಿಗೆ ಮುಂದಾಗುತ್ತಿರುವುದು ಸಕಾರಾತ್ಮಕ.ಈ ಕರಡು ನೀತಿ, ಕಾಲದ ಅಗತ್ಯಗಳಿಗೆ ಸ್ಪಂದಿಸುವಂತಿದೆ ಎಂಬುದು ಮುಖ್ಯ. ಆದರೆ ವಿವಾಹ ಸಂಬಂಧದೊಳಗಿನ ಅತ್ಯಾಚಾರದ ಸಮಸ್ಯೆ ಬಗ್ಗೆ  ಈ ಕರಡು ನೀತಿ  ಮೌನವಾಗಿರುವುದು ಲೋಪ. ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿಸಲು ಭಾರತೀಯ ಸಮಾಜ ಇನ್ನೂ ಸನ್ನದ್ಧವಾಗಿಲ್ಲ ಎಂದು ಈ ವರ್ಷದ  ಆರಂಭದಲ್ಲಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಹೇಳಿದ್ದರು ಎಂಬುದನ್ನು ಸ್ಮರಿಸಬಹುದು.ಭಾರತೀಯ ಮಹಿಳೆಯರು ಒಂದಲ್ಲ ಒಂದು ಸಾಮಾಜಿಕ ಕಟ್ಟಳೆಗಳನ್ನು ಮುರಿಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಲೇ ಇದೆ. ದೇವಾಲಯ ಪ್ರವೇಶಕ್ಕೆ ಮಹಿಳೆಗಿದ್ದ ನಿರ್ಬಂಧಗಳನ್ನು ನ್ಯಾಯಾಲಗಳೂ ಕಿತ್ತು ಹಾಕಿವೆ.ಹಾಗೆಯೇ ಪಾಸ್‌ಪೋರ್ಟ್ ಅರ್ಜಿಯಲ್ಲಿ ಮಗುವಿನ ತಂದೆಯ ಹೆಸರನ್ನು ಬಹಿರಂಗ ಪಡಿಸಲು ಇಚ್ಛೆ ಇಲ್ಲದ ಒಂಟಿ ಮಹಿಳೆಯರ ಹಕ್ಕನ್ನೂ ನ್ಯಾಯಾಲಯ ಎತ್ತಿ ಹಿಡಿದಿದೆ.  ಬದಲಾವಣೆಯ ಗಾಳಿ ಬೀಸುತ್ತಿದೆ ಎಂಬುದಕ್ಕೆ ಇವು ನಿದರ್ಶನ. ಸಮಾಜದಲ್ಲಿನ ಪಿತೃಪ್ರಾಧಾನ್ಯದ ಹಿಡಿತ ಸಡಿಲಗೊಳಿಸುವ ಯತ್ನಗಳಂತೂ ನಡೆಯುತ್ತಿವೆ. ಈ ಬದಲಾವಣೆಯ ದಿಕ್ಕನ್ನು ಮಹಿಳಾ ನೀತಿಯ ಚೌಕಟ್ಟು ಬಲಪಡಿಸಲಿ ಎಂಬುದು ಎಲ್ಲರ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry