7

ಶತ್ರುವಿನ ಶತ್ರು ಮಿತ್ರನಾಗಬಲ್ಲ, ಹೇಗೆಂದರೆ?

ಸುಧೀಂದ್ರ ಬುಧ್ಯ
Published:
Updated:
ಶತ್ರುವಿನ ಶತ್ರು ಮಿತ್ರನಾಗಬಲ್ಲ, ಹೇಗೆಂದರೆ?

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ ತುಂಬಿದೆ. ಅಪಾರ ಕನಸುಗಳನ್ನು ಬಿತ್ತಿ ಬಹುಮತದ ಬೆಳೆ ತೆಗೆದ ಸರ್ಕಾರ, ಈ 730 ದಿನಗಳಲ್ಲಿ ಸಾಧಿಸಿದ್ದೇನು ಎಂಬ ಬಗ್ಗೆ ಚರ್ಚೆ, ಪರಾಮರ್ಶೆ ನಡೆಯುತ್ತಿದೆ. ಪ್ರಧಾನಿಯಾದ ತರುವಾಯ ಮೋದಿ ಅವರು ಕೈಗೊಂಡ ವಿದೇಶ ಯಾತ್ರೆಗಳ ಬಗ್ಗೆ ಕೂಡ ಪರ್ಯಾಲೋಚನೆ ನಡೆದಿದೆ.ಮುಖ್ಯವಾಗಿ ಅವರ ವಿದೇಶ ಪ್ರವಾಸಗಳ ಬಗ್ಗೆ ಟೀಕೆ ವ್ಯಕ್ತವಾಗಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ಪ್ರಧಾನಿ ವಿಮಾನದಲ್ಲಿ ಇದ್ದದ್ದೇ ಹೆಚ್ಚು, ಈ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಎರಡು ಅವಧಿಗಳಲ್ಲಿ, ಅಂದರೆ ಸುಮಾರು ಹತ್ತು ವರ್ಷಗಳಲ್ಲಿ ನಡೆಸಿದ ವಿದೇಶ ಪ್ರವಾಸಗಳನ್ನು, ತಮ್ಮ ಎರಡು ವರ್ಷದ ಅವಧಿಯಲ್ಲೇ ಪೂರೈಸಲು ಮೋದಿ ಪಣ ತೊಟ್ಟಂತಿದೆ ಎಂಬ ಮಾತು ಹಿಂದೆಯೂ ವ್ಯಂಗ್ಯವಾಗಿ ಬಳಕೆಯಾಗಿತ್ತು.ಹೀಗೆ ತಮ್ಮ ವಿದೇಶ ಪ್ರವಾಸಗಳ ಬಗ್ಗೆ ಟೀಕೆ ಚಾಲ್ತಿಯಲ್ಲಿರುವ ಹೊತ್ತಿನಲ್ಲೇ, ಪ್ರಧಾನಿ ಮೋದಿ ಕಳೆದ ವಾರವಷ್ಟೇ ಎರಡು ದಿನದ ಇರಾನ್ ಭೇಟಿ ಮುಗಿಸಿ ಬಂದಿದ್ದಾರೆ, ಮುಂದಿನ ಮೂರ್ನಾಲ್ಕು ದಿನಗಳಲ್ಲೇ ಅಮೆರಿಕಕ್ಕೆ ತೆರಳಲು ಸಿದ್ಧತೆ ನಡೆಸಿದ್ದಾರೆ. ನಿಜ, ದೇಶದ ಒಳಗೆ ಹಲವು ಸಮಸ್ಯೆಗಳಿರುವಾಗ, ಈಡೇರಿಸಬೇಕಾದ ಆಶ್ವಾಸನೆಯ ಪಟ್ಟಿ ದೊಡ್ಡದಿರುವಾಗ ಪ್ರಧಾನಿ ವಿದೇಶ ಭೇಟಿಗಳಿಂದ ಸಾಧಿಸುತ್ತಿರುವುದೇನು ಎಂಬ ಪ್ರಶ್ನೆ ಎದುರಾಗಬಹುದು.ಆದರೆ ಕೊಂಚ ಸಂಯಮದಿಂದ ಪರಿಶೀಲಿಸಿದರೆ ಅದರಿಂದ ದೇಶಕ್ಕಾಗುತ್ತಿರುವ ಲಾಭಗಳು ಗೋಚರಿಸುತ್ತವೆ. ಮೊನ್ನಿನ ಇರಾನ್ ಭೇಟಿಯನ್ನೇ ತೆಗೆದುಕೊಳ್ಳಿ, ಅದನ್ನು ಮಹತ್ವಪೂರ್ಣ ಭೇಟಿ ಎಂದು ಕರೆಯಲಾಯಿತು. ಸುಮಾರು 15 ವರ್ಷಗಳಿಂದ ಭಾರತದ ಪ್ರಧಾನಿ, ಇರಾನಿಗೆ ಭೇಟಿ ನೀಡಿರಲಿಲ್ಲ ಎಂಬ ಕಾರಣಕ್ಕಷ್ಟೇ ಅದು ಮಹತ್ವದ್ದು ಎನಿಸಿಕೊಂಡದ್ದಲ್ಲ.ಭಾರತ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಹಾದಿಯಲ್ಲಿ, ಏಷ್ಯಾದಲ್ಲಿ ತನ್ನ ಪ್ರಾಬಲ್ಯವನ್ನು ಪುನರ್‌ಸ್ಥಾಪಿಸುವ ನಿಟ್ಟಿನಲ್ಲಿ ಈ ಭೇಟಿ ಒಂದು ದಾಪುಗಾಲು. ಪ್ರಧಾನಿ ಮೋದಿ, ಇರಾನ್ ಅಧ್ಯಕ್ಷ ಹಸನ್ ರೌಹಾನಿ ಮತ್ತು ಆಫ್ಘನ್‌ ಅಧ್ಯಕ್ಷ ಅಶ್ರಫ್ ಘನಿ ಜತೆ ತ್ರಿಪಕ್ಷೀಯ ಮಾತುಕತೆ ನಡೆಸಿ, ಇರಾನಿನ ಚಬಾಹರ್ ಬಂದರನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿರುವುದು ಈ ಭೇಟಿಯ ಪ್ರಮುಖ ಅಂಶ.ಈ ಒಡಂಬಡಿಕೆಯ ಹಿಂದೆ ಹಲವು ಲೆಕ್ಕಾಚಾರಗಳಿವೆ. ಹಾಗೆ ನೋಡಿದರೆ, ಭಾರತ ಮತ್ತು ಇರಾನ್ ಬಾಂಧವ್ಯ ಈ ಆರು ದಶಕಗಳಲ್ಲಿ ಏಳುಬೀಳುಗಳನ್ನು ಕಂಡಿದೆ. ಇರಾನಿನ ಅಣ್ವಸ್ತ್ರ ನೀತಿಯನ್ನು ವಿರೋಧಿಸುತ್ತಾ ಬಂದ ಭಾರತ, ಅದರೊಂದಿಗಿನ ವ್ಯಾಪಾರ ವಹಿವಾಟನ್ನು ಮಾತ್ರ ಬಿಟ್ಟುಕೊಡಲು ಎಂದಿಗೂ ತಯಾರಿರಲಿಲ್ಲ.ಇರಾನ್ ಬಗೆಗಿನ ಭಾರತದ ಈ ನಿಲುವನ್ನು ಅಮೆರಿಕ ಮತ್ತು ಯುರೋಪ್ ಒಕ್ಕೂಟಗಳು ಹಲವು ಬಾರಿ ಟೀಕಿಸಿದ್ದವು, ಅನುಮಾನದಿಂದ ನೋಡಿದ್ದವು. ಮೇಲ್ನೋಟಕ್ಕೆ ದ್ವಂದ್ವ ನಿಲುವಿನಂತೆ ಕಂಡರೂ, ಭಾರತ ಜಾಗರೂಕತೆಯಿಂದ ಇರಾನ್ ಜೊತೆಗಿನ ಸ್ನೇಹವನ್ನು ಕಾಪಾಡಿಕೊಳ್ಳುತ್ತಲೇ ಬಂದಿದೆ. ಅದಕ್ಕೆ ಕಾರಣವೂ ಇದೆ.ಇತಿಹಾಸದ ಪುಟಗಳನ್ನು ಕೊಂಚ ಸರಿಸಿದರೆ, ಶೀತಲ ಸಮರದ ದಿನಗಳಲ್ಲಿ ಭಾರತ ಅಲಿಪ್ತ ನೀತಿಯನ್ನು ನೆಚ್ಚಿಕೊಂಡು ಸೋವಿಯತ್ ಯೂನಿಯನ್ ಜೊತೆ ಬೆಸೆದುಕೊಂಡರೆ, ಇರಾನ್ ಅಮೆರಿಕದೊಂದಿಗೆ ಸ್ನೇಹ ಬೆಳೆಸಿಕೊಂಡಿತ್ತು. ಯು.ಕೆ., ಇರಾಕ್, ಟರ್ಕಿ ಮತ್ತು ಪಾಕಿಸ್ತಾನಗಳ ಜತೆ ಸೇರಿ 1955ರಲ್ಲಿ ಸೇನಾ ಸಹಕಾರದ Central Treaty Organization (CENTO) ಅಥವಾ ‘ಬಾಗ್ದಾದ್ ಒಪ್ಪಂದ’ವನ್ನು ಇರಾನ್ ಮಾಡಿಕೊಂಡಿತು.ಆ ಒಪ್ಪಂದ ಭಾರತದ ಹಿತಾಸಕ್ತಿಗೆ ಮಾರಕವಾಗಿತ್ತು. ಸೆಂಟೋ ಕೂಟದ ಮುಖ್ಯ ಉದ್ದೇಶ ನೈರುತ್ಯ ಏಷ್ಯಾದಲ್ಲಿ ಕಮ್ಯುನಿಸಂ ವಿಸ್ತರಣೆಯನ್ನು ತಡೆಗಟ್ಟುವುದಾಗಿತ್ತು. ಆದರೆ ಪಾಕಿಸ್ತಾನ ತನ್ನ ಕೈಗೆ ದಕ್ಕಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಭಾರತದ ವಿರುದ್ಧ ಬಳಸಲು ಆರಂಭಿಸಿತು. ಇದಕ್ಕೆ ಇರಾನಿನ ಅಂದಿನ ಅರಸ ರೆಜಾ ಶಾ ಪಹ್ಲವಿ ಬೆಂಬಲವಾಗಿ ನಿಂತರು. 1965ರ ಯುದ್ಧದ ವೇಳೆ ಶಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆಯನ್ನೂ ಮಾಡಿದರು.1971ರ ಯುದ್ಧದಲ್ಲಿ ‘ಪಶ್ಚಿಮ ಪಾಕಿಸ್ತಾನವನ್ನು ತುಂಡರಿಸಲು ಭಾರತ ಪ್ರಯತ್ನಿಸಿದರೆ, ಇರಾನಿನ ಜತೆ ಸೆಣಸಬೇಕಾಗುತ್ತದೆ’ ಎಂದು ಶಾ ಭಾರತಕ್ಕೆ ಎಚ್ಚರಿಸಿದ್ದರು. ಆದರೆ ಯಾವ ಬೆದರಿಕೆಗೂ ಜಗ್ಗದ ಭಾರತ, ಪಾಕಿಸ್ತಾನವನ್ನು ಮುರಿಯಲು ಸಫಲವಾಯಿತು. ನಂತರದ ದಿನಗಳಲ್ಲಿ ಇರಾನ್ ಕೊಂಚ ಮೆತ್ತಗಾಯಿತು. ಭಾರತದೊಂದಿಗೆ ಸ್ನೇಹ ಬಯಸಲು ಹವಣಿಸಿತು.ಆದರೆ 1979ರಲ್ಲಾದ ಇಸ್ಲಾಮಿಕ್ ಕ್ರಾಂತಿಯಿಂದಾಗಿ ಇರಾನಿನ ವಿದೇಶಾಂಗ ನೀತಿ ಮತ್ತೊಂದು ಮಗ್ಗುಲಿಗೆ ಹೊರಳಿತು. ಖೊಮೇನಿಯ ನೇತೃತ್ವದ ಇರಾನ್, ಇಸ್ಲಾಮಿಕ್ ರಾಷ್ಟ್ರ ಎಂಬ ಕಾರಣಕ್ಕೆ ಪಾಕಿಸ್ತಾನಕ್ಕೆ ಹತ್ತಿರವಾಯಿತು. ತೊಂಬತ್ತರ ದಶಕದಲ್ಲಿ ಹೊರಜಗತ್ತಿನೊಂದಿಗೆ ಮುಕ್ತವಾಗಿ ವ್ಯವಹರಿಸಲು ಇರಾನ್ ಯತ್ನಿಸಿತಾದರೂ, ಆಕ್ರಮಣಕಾರಿ ನಿಲುವಿನ ಮೊಹಮ್ಮದ್ ಅಹಮದಿನೆಜಾದ್ ಅಧ್ಯಕ್ಷರಾದ ತರುವಾಯ ಅಣ್ವಸ್ತ್ರ ಹೊಂದುವುದನ್ನೇ ಅದು ತನ್ನ ಪ್ರಥಮ ಆದ್ಯತೆಯನ್ನಾಗಿಸಿಕೊಂಡಿತು.ಇರಾನಿನ ಈ ನಿಲುವಿಗೆ ಅಮೆರಿಕ ವಿರೋಧ ವ್ಯಕ್ತಪಡಿಸಿತು. ಭಾರತ ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (ಐಎಇಎ) ಮತ್ತು ವಿಶ್ವಸಂಸ್ಥೆಯಲ್ಲಿ ಇರಾನ್ ಅಣ್ವಸ್ತ್ರ ನೀತಿಯ ವಿರುದ್ಧ ಮತ ಚಲಾಯಿಸಿತು. ಇರಾನ್ ಅಣ್ವಸ್ತ್ರ ಹೊಂದುವ ಪ್ರಯತ್ನವನ್ನು ಅಮೆರಿಕ ವಿರೋಧಿಸಿದ್ದು ಅದು ಇಸ್ರೇಲ್ ಅಸ್ತಿತ್ವಕ್ಕೆ ಬಾಧಕವಾಗಬಹುದು ಎಂಬ ಕಾರಣಕ್ಕಾದರೆ, ಭಾರತ ವಿರೋಧಿಸಿದ್ದು ಅದು ಮಧ್ಯಪ್ರಾಚ್ಯದ ಶಾಂತಿಯನ್ನು ಕದಡಬಹುದು ಎಂಬ ಕಾರಣಕ್ಕೆ.ಸುನ್ನಿ ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾಕ್ಕೆ ಪ್ರತಿಯಾಗಿ ಇರಾನ್ ಅಣ್ವಸ್ತ್ರ ಹೊಂದಲು ತಹತಹಿಸುತ್ತಿದೆ ಎಂದೇ ಭಾರತ ಭಾವಿಸಿತ್ತು. ಒಂದೊಮ್ಮೆ ಈ ರಾಷ್ಟ್ರಗಳ ನಡುವೆ ಯುದ್ಧ ಏರ್ಪಟ್ಟರೆ ಅದು ಭಾರತದ ಆರ್ಥಿಕತೆಗೆ ಹೊಡೆತ ನೀಡಲಿದೆ ಎಂಬುದನ್ನು ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಭಾರತ ಕಂಡುಕೊಂಡಿತ್ತು.ಹಾಗಾಗಿಯೇ ಅರಬ್ ರಾಷ್ಟ್ರಗಳು ಇಸ್ರೇಲ್ ಮತ್ತು ಇರಾನನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊರಡಿಸಿದ ‘ಅಣ್ವಸ್ತ್ರ ಮುಕ್ತ ಮಧ್ಯಪ್ರಾಚ್ಯ’ ಘೋಷಣೆಗೆ ಭಾರತ ದನಿಗೂಡಿಸಿತು.ಮುಖ್ಯವಾಗಿ ಗಮನಿಸಬೇಕಾದ್ದೆಂದರೆ, ಭಾರತ ಇಸ್ರೇಲ್ ಬಗಲಿಗೆ ನಿಂತು ಇರಾನ್ ಅಣ್ವಸ್ತ್ರ ನೀತಿಯನ್ನು ವಿರೋಧಿಸಲಿಲ್ಲ, ಬದಲಿಗೆ ಅರಬ್ ರಾಷ್ಟ್ರಗಳ ಜೊತೆಯಲ್ಲಿ ನಿಂತು ತನ್ನ ವಿರೋಧವನ್ನು ವ್ಯಕ್ತಪಡಿಸಿತು. ಕಾರಣ, ಜಿಹಾದ್ ಹೆಸರಿನ ಭಯೋತ್ಪಾದನೆಯನ್ನು ಮಟ್ಟ ಹಾಕಲು ಅರಬ್ ರಾಷ್ಟ್ರಗಳಿಂದ ಬೇಕಿರುವ ಸಹಕಾರ, ತೈಲ ಪರಾವಲಂಬನೆ ಮತ್ತು ಸುಮಾರು 35 ಲಕ್ಷ ಭಾರತೀಯರು ಅರಬ್ ರಾಷ್ಟ್ರಗಳಲ್ಲಿ ದುಡಿಯುತ್ತಿದ್ದಾರೆ, ಅವರ ಸುರಕ್ಷತೆ ಪ್ರಥಮ ಆದ್ಯತೆ ಎನ್ನುವುದು.ಇರಾನ್ ಅಣ್ವಸ್ತ್ರ ಮೋಹವನ್ನು ಭಾರತ ವಿರೋಧಿಸಿದರೂ, ಅಮೆರಿಕವು ಇರಾನ್ ಮೇಲೆ ಹೇರಿದ ಆರ್ಥಿಕ ದಿಗ್ಬಂಧನವನ್ನು ಭಾರತ ಖಂಡಿಸಿತು. ಈ ಕಾರಣಕ್ಕಾಗಿಯೇ ಅಮೆರಿಕವು ಇರಾನ್ ವಿಷಯದಲ್ಲಿ ಭಾರತದ್ದು ದ್ವಂದ್ವ ನೀತಿ ಎಂದು ಜರಿಯಿತು. ಆದರೆ ಭಾರತ ತನ್ನ ಹಿತಾಸಕ್ತಿಯನ್ನು ಪೊರೆಯುವ ನಿಟ್ಟಿನಲ್ಲಿ ಸೂಕ್ತ ಹೆಜ್ಜೆಯನ್ನೇ ಇಟ್ಟಿತ್ತು.ಅಮೆರಿಕ ಮತ್ತು ಇತರ ಪ್ರಬಲ ರಾಷ್ಟ್ರಗಳು ಹೇರಿದ ಆರ್ಥಿಕ ದಿಗ್ಬಂಧನದಿಂದ ಇರಾನ್ ಆರ್ಥಿಕತೆ ಕುಸಿದು ಬಿತ್ತು. ಆದರೂ ಇರಾನ್ ಅಣ್ವಸ್ತ್ರವನ್ನು ಬತ್ತಳಿಕೆಗೆ ಸೇರಿಸುವ ಉಮೇದು ಬಿಡಲಿಲ್ಲ. ಈ ಮಧ್ಯೆ 2013ರಲ್ಲಿ ಇರಾನ್ ಚುನಾವಣೆ ನಡೆದು ಹೊಸ ಗಾಳಿಯೊಂದು ಬೀಸಿತು.ಮೊಹಮ್ಮದ್ ಅಹಮದಿನೆಜಾದ್ ಆಳ್ವಿಕೆಯಲ್ಲಿ ಕುಸಿದಿದ್ದ ದೇಶದ ಘನತೆ, ಬದುಕಿನ ಮಟ್ಟವನ್ನು ಮೇಲೆತ್ತುವ ಭರವಸೆಯನ್ನು ಹಸನ್ ರೌಹಾನಿ ನೀಡಿದರು. ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷ ರೌಹಾನಿ, ಇರಾನ್ ಚುಕ್ಕಾಣಿ ಹಿಡಿದರು. ಅಲ್ಲಿಂದ ಇರಾನ್ ಮತ್ತೊಮ್ಮೆ ತನ್ನ ವಿದೇಶಾಂಗ ನೀತಿಯಲ್ಲಿ ಮಗ್ಗುಲು ಬದಲಿಸಿತು.ಅಮೆರಿಕ ಅಧ್ಯಕ್ಷರೊಂದಿಗೆ ಇರಾನ್ ಮಾತಿಗೆ ಕೂರದೆ 33 ವರ್ಷಗಳೇ ಆಗಿದ್ದವು. ರೌಹಾನಿ ದೂರವಾಣಿಯಲ್ಲಿ ಒಬಾಮರೊಂದಿಗೆ ಮಾತನಾಡಿ ಸ್ನೇಹ ಹಸ್ತ ಚಾಚಿದರು.ಜಾಗತಿಕ ಸಮುದಾಯ ಹೇರಿದ್ದ ಆರ್ಥಿಕ ನಿರ್ಬಂಧದಿಂದ ಹೊರಬಂದು ದೇಶದ ಆರ್ಥಿಕತೆಗೊಂದಿಷ್ಟು ಜೀವ ತುಂಬುವ, ಹಿರಿಯಣ್ಣನೊಂದಿಗೆ ಕೈಕುಲುಕಿ ತನ್ನ ಶತ್ರು ರಾಷ್ಟ್ರ ಇಸ್ರೇಲ್ ನಿದ್ದೆಕೆಡಿಸುವ ಕೆಲಸವನ್ನು ರೌಹಾನಿ ಜಾಣ್ಮೆಯಿಂದ ಮಾಡಿದರು. ಹಲವು ಸುತ್ತಿನ ಮಾತುಕತೆಗಳ ಮೂಲಕ ಟೆಹರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿತು. ಅಮೆರಿಕ ಆರ್ಥಿಕ ನಿರ್ಬಂಧವನ್ನು ಸಡಿಲಿಸಿತು.ಈ ಬೆಳವಣಿಗೆಯಿಂದ ಇರಾನಿನೊಂದಿಗೆ ವ್ಯವಹರಿಸಲು ಭಾರತಕ್ಕೆ ಮುಕ್ತ ಅವಕಾಶ ದೊರೆತಂತಾಯಿತು. ಜೊತೆಗೆ ಕಳೆದ ಒಂದು ದಶಕದಲ್ಲಿ ಭಾರತದೊಂದಿಗೆ ಇರಾನ್ ಸಖ್ಯ ಗಟ್ಟಿಯಾಗಲು ಪಾಕಿಸ್ತಾನವೂ ಕಾರಣವೆ. 9/11 ದಾಳಿಯ ತರುವಾಯ ಅಮೆರಿಕ, ಇರಾಕ್ ಮತ್ತು ಆಫ್ಘಾನಿಸ್ತಾನದ ಮೇಲೆರಗಿದ್ದು ನಿಮಗೆ ಗೊತ್ತೇ ಇದೆ. ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಬುಷ್, ಅಮೆರಿಕ ಕಾಂಗ್ರೆಸ್ಸಿನ ಜಂಟಿ ಅಧಿವೇಶನದ ಭಾಷಣದಲ್ಲಿ ಇರಾನ್, ಇರಾಕ್ ಮತ್ತು ಉತ್ತರ ಕೊರಿಯಾವನ್ನು ‘Axis of Evil’ ಎಂದು ಜರಿದಿದ್ದರು. ಇದರಿಂದ ಇರಾನ್ ಅಮೆರಿಕವನ್ನು ದ್ವೇಷಿಸತೊಡಗಿತು.ಅಮೆರಿಕದೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಪಾಕಿಸ್ತಾನದೊಂದಿಗೆ ಅಂತರವನ್ನು ಕಾಯ್ದುಕೊಂಡಿತು. ಭಾರತದತ್ತ ಮುಖ ಮಾಡಿತು. ಇದರಿಂದಾಗಿ ಪಾಕಿಸ್ತಾನಕ್ಕೆ ಕಸಿವಿಸಿಯಾಯಿತು. ಬಲೂಚಿಸ್ತಾನದಲ್ಲಿ ಪ್ರತ್ಯೇಕತೆಯ ಕೂಗನ್ನು ಪೋಷಿಸಲು ಭಾರತಕ್ಕೆ ಇರಾನ್ ಸಹಾಯ ಮಾಡಬಹುದು ಎಂಬ ಅನುಮಾನ ಪಾಕಿಸ್ತಾನದ ತಲೆಯಲ್ಲಿ ಮೊಳಕೆಯೊಡೆಯಿತು.ಬಲೂಚಿಸ್ತಾನದ ಜುನ್ದುಲ್ಲಾ ಎಂಬ ತೀವ್ರವಾದಿ ಪಡೆ, ಇರಾನ್ ಗಡಿ ಭಾಗದಲ್ಲಿ ಅರಾಜಕತೆ ಉಂಟು ಮಾಡಲು ಯತ್ನಿಸಿದಾಗ ಪಾಕಿಸ್ತಾನ ಮೌನ ವಹಿಸಿತು. ಅಲ್ಲದೆ, ಇರಾನ್-ಪಾಕಿಸ್ತಾನ್-ಇಂಡಿಯಾ ಪೈಪ್‌ಲೈನ್‌ ಯೋಜನೆಗೆ ಪಾಕಿಸ್ತಾನ ಸಹಕರಿಸಲಿಲ್ಲ. ಈ ಎಲ್ಲದರಿಂದ ಪಾಕಿಸ್ತಾನ ಇರಾನ್ ದೃಷ್ಟಿಯಲ್ಲಿ ಅಪನಂಬಿಕೆಗೆ ಒಳಗಾಯಿತು.ಈ ನಡುವೆ ಏಷ್ಯಾದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಚೀನಾ, ಪಾಕಿಸ್ತಾನದೊಂದಿಗೆ ದೋಸ್ತಿ ಮಾಡಿಕೊಂಡು ಗ್ವಾದರ್ ಬಂದರು ಅಭಿವೃದ್ಧಿಗೆ ಮುಂದಾಯಿತು. ಗ್ವಾದರ್ ಬಂದರು ಅಭಿವೃದ್ಧಿ ಹೊಂದಿದರೆ ಅದು ಪಾಕಿಸ್ತಾನದ ಆರ್ಥಿಕತೆ ಬಲಗೊಳ್ಳಲು ಸಹಾಯವಾಗುತ್ತದೆ. ಗ್ವಾದರ್ ಬಂದರು ಅಭಿವೃದ್ಧಿ ಏಷ್ಯಾದ ಮಟ್ಟಿಗೆ ಪಾಕಿಸ್ತಾನ ಮತ್ತು ಚೀನಾ ಶಕ್ತಿ ವೃದ್ಧಿಸಿಕೊಳ್ಳಲು ಸಹಾಯ ಮಾಡುತ್ತದೆ. ಭಾರತ ಸಹಜವಾಗಿ ಕಳವಳಗೊಂಡಿತು.‘ಚಬಾಹರ್’ ದಾಳ ಉರುಳಿಸಿತು. ಚೀನಾ ಮತ್ತಷ್ಟು ಬಲಗೊಳ್ಳುವುದನ್ನು ಅಮೆರಿಕ ಸಹಿಸುವುದಿಲ್ಲ. ಹಾಗಾಗಿ ಇದೀಗ ಭಾರತ-ಇರಾನ್-ಆಫ್ಘಾನಿಸ್ತಾನಗಳು ಮಾಡಿಕೊಂಡಿರುವ ಒಪ್ಪಂದವನ್ನು ಅಮೆರಿಕ ಕೂಡ ಬೆಂಬಲಿಸಿದೆ. ಮೊನ್ನೆ ಅಮೆರಿಕದ ಕಾಂಗ್ರೆಸ್ಸಿನಲ್ಲಿ ಕೆಲವು ಸೆನೆಟರ್‌ಗಳು ಭಾರತ-ಇರಾನ್ ಚಬಾಹರ್ ಒಪ್ಪಂದದ ಬಗ್ಗೆ ಪ್ರಶ್ನಿಸಿದಾಗ, ಒಬಾಮ ಸರ್ಕಾರ ಭಾರತದ ಪರವಾಗಿ ವಾದಿಸಿದೆ. ‘ಈ ಒಪ್ಪಂದದಿಂದಾಗಿ ಆಫ್ಘಾನಿಸ್ತಾನದ ಅಭಿವೃದ್ಧಿಯಲ್ಲಿ ಭಾರತ ಪಾಲ್ಗೊಳ್ಳಲು ಅನುಕೂಲವಾಗುತ್ತದೆ.ಭಾರತ ತನ್ನ ಇಂಧನ ಬೇಡಿಕೆ ನೀಗಿಸಿಕೊಳ್ಳಲು ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ಸ್ನೇಹ ಬಯಸುತ್ತಿದೆ. ಈ ಒಪ್ಪಂದ ಅದಕ್ಕೆ ಪೂರಕವಾಗಿ ನಡೆದಿದೆ’ ಎಂದು ಸಮಜಾಯಿಷಿ ನೀಡಿದೆ. ಅತ್ತ ಇರಾನಿಗೂ ಭಾರತದೊಂದಿಗಿನ ಸ್ನೇಹ ಅನಿವಾರ್ಯವೇ ಆಗಿದೆ. ಸುನ್ನಿ ಮುಸ್ಲಿಮರ ತಾಲಿಬಾನ್, ಆಫ್ಘಾನಿಸ್ತಾನದಲ್ಲಿ ಮೇಲುಗೈ ಸಾಧಿಸುವುದನ್ನು ತಡೆಯುವ ಜರೂರು ಶಿಯಾ ಇರಾನಿಗಿದೆ.ಹಾಗಾಗಿ ತಾಲಿಬಾನ್ ಬೆಂಬಲಿಸುವ ಪಾಕಿಸ್ತಾನಕ್ಕಿಂತ, ಪ್ರಜಾಪ್ರಭುತ್ವ ಸರ್ಕಾರವನ್ನು ಬೆಂಬಲಿಸುವ ಭಾರತ ಇರಾನಿಗೆ ಆಪ್ತವಾಗಿದೆ. ಕುಸಿದು ಬಿದ್ದ ಆರ್ಥಿಕತೆಯನ್ನು ಎತ್ತಿ ನಿಲ್ಲಿಸುವ ಪ್ರಯತ್ನದಲ್ಲಿರುವ ಇರಾನಿಗೆ, ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ಹೂಡಿಕೆ ಅಗತ್ಯ ಎನಿಸಿದೆ. ಇತ್ತ ಚಬಾಹರ್ ಒಪ್ಪಂದದ ಜಾಣ ನಡೆಯ ಮೂಲಕ ಭಾರತ ತನ್ನ ಸ್ವಹಿತಾಸಕ್ತಿಯನ್ನು ಪೋಷಿಸಿ, ಚೀನಾ ಮತ್ತು ಪಾಕಿಸ್ತಾನಕ್ಕೆ ಟಾಂಗ್ ನೀಡಿದೆ.ದೇಶದ ಪ್ರಧಾನಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂದರೆ ಅದರ ಹಿಂದೆ ಹೀಗೆ ಹಲವು ಲೆಕ್ಕಾಚಾರಗಳಿರುತ್ತವೆ. ಅದು ನಮ್ಮ ಮಂತ್ರಿ ಮಹೋದಯರು, ಸಂಸದರು ವಿದೇಶಕ್ಕೆ ತೆರಳಿ, ಫೋಟೊ  ತೆಗೆಸಿಕೊಂಡು ಬಂದು ಫೇಸ್‌ಬುಕ್ ಗೋಡೆಗೆ ಏರಿಸುತ್ತಾರಲ್ಲ, ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry