7

ಮೃದು ರಾಷ್ಟ್ರೀಯತೆ ಪ್ರತಿಪಾದಿಸಿದ್ದ ಅನಂತಮೂರ್ತಿ

ರಾಮಚಂದ್ರ ಗುಹಾ
Published:
Updated:
ಮೃದು ರಾಷ್ಟ್ರೀಯತೆ ಪ್ರತಿಪಾದಿಸಿದ್ದ ಅನಂತಮೂರ್ತಿ

ಸಾವರ್ಕರ್‌ ಮತ್ತು ಗಾಂಧಿಯನ್ನು ಹೋಲಿಸಿ ನೋಡುವ ‘ಹಿಂದುತ್ವ ಅಥವಾ ಹಿಂದ್‌ ಸ್ವರಾಜ್‌’‘ಭಾರತದ ಯಾವುದೇ ಇಂಗ್ಲಿಷ್ ಲೇಖಕನಿಗೆ ಅನಂತಮೂರ್ತಿ ಅವರಿಗೆ ಇರುವಂತಹ ಸಾಮಾಜಿಕ ಪ್ರಜ್ಞೆಯಾಗಲಿ, ಅವರು ಓದುಗರು ಮತ್ತು ಜನರ ಜತೆ ಹೊಂದಿರುವ ಗಾಢ ಮತ್ತು ಜೀವನದುದ್ದಕ್ಕೂ ವ್ಯಾಪಿಸಿದ ನಂಟಾಗಲಿ ಇಲ್ಲ. ನನ್ನ ವರ್ಗದವರು ಯಾರಾದರೂ ಮೃತಪಟ್ಟರೆ ಆ ಸಾವಿನ ಸುದ್ದಿ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್ ಗಮನಕ್ಕೆ ಬಂದರೂ ಬರಬಹುದು. ಆದರೆ ಅನಂತಮೂರ್ತಿ ತಮ್ಮ ಸೃಷ್ಟಿಕರ್ತನನ್ನ ಸಂಧಿಸುವಾಗ ಅವರ ಬರಹಗಳು ಮತ್ತು ಕೊಡುಗೆಗಳ ಬಗ್ಗೆ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಚರ್ಚೆ ಮತ್ತು ಸಂವಾದಗಳು ನಡೆಯಲಿವೆ’ ಎಂದು 2012ರ ಡಿಸೆಂಬರ್‌ನಲ್ಲಿ ಯು.ಆರ್. ಅನಂತಮೂರ್ತಿ ಅವರಿಗೆ ಎಂಬತ್ತು  ವರ್ಷ ತುಂಬಿದಾಗ ಈ ಅಂಕಣದಲ್ಲಿ ನಾನು ಬರೆದಿದ್ದೆ.

ನಂತರ ಎರಡು ವರ್ಷ ತುಂಬುವ ಮೊದಲೇ ಅನಂತಮೂರ್ತಿ ನಿಧನರಾದರು. ಕನ್ನಡಿಗರ ಮನದಲ್ಲಿ ಅನಂತಮೂರ್ತಿ ಹೊಂದಿದ್ದ ಅಸಾಧಾರಣ ಪ್ರೀತಿಗೆ ಆಗ ಬೆಂಗಳೂರಿನಲ್ಲಿಯೇ ಇದ್ದ ನಾನು ಸಾಕ್ಷಿಯಾದೆ. ರಾಷ್ಟ್ರಧ್ವಜ ಹೊದ್ದ ಅವರ ದೇಹವನ್ನು ಪುರಭವನದ ಹೊರಗೆ ಇರಿಸಿದ್ದರು. ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದ ಜನರ ಸಾಲು ಜೆ.ಸಿ.ರಸ್ತೆಯಿಂದ ಮುಂದಕ್ಕೆ ಸಾಗಿ ಕಬ್ಬನ್ ಪಾರ್ಕ್‌ವರೆಗೆ ವ್ಯಾಪಿಸಿತ್ತು. ವಿದ್ಯಾರ್ಥಿಗಳು, ಶಿಕ್ಷಕರು, ನಟರು, ಗೃಹಿಣಿಯರು ಮತ್ತು ಇತರ ಕ್ಷೇತ್ರಗಳ ಜನರು ಸರತಿ ಸಾಲಿನಲ್ಲಿದ್ದರು. ಶಿವಮೊಗ್ಗ, ದಾವಣಗೆರೆ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಜನರು ಬಂದಿದ್ದರು. ಮುಂದೆ ಅವರೆಲ್ಲರೂ ಈ ದಿಟ್ಟ, ವರ್ಣರಂಜಿತ ಮತ್ತು ವಿವಾದಾತ್ಮಕ (ಕೆಲವೊಮ್ಮೆ ಉದ್ದೇಶಪೂರ್ವಕ) ಲೇಖಕ ಮತ್ತು ಚಿಂತಕನಿಗೆ ತಮ್ಮದೇ ಆದ ನುಡಿ ನಮನ ಕಾರ್ಯಕ್ರಮಗಳನ್ನು ನಡೆಸುವವರಿದ್ದರು.ಅನಂತಮೂರ್ತಿ ಅವರ ನಿಧನದ ನಂತರ ಅವರಿಗೆ ಪುಷ್ಪ ನಮನ, ನುಡಿನಮನಗಳೆಲ್ಲವೂ ಸಂದಾಯವಾಗಿವೆ. ಆದರೆ ಲೇಖಕನನ್ನು ಆತನ ವಿರೋಧಿಗಳು ಆಂಶಿಕವಾಗಿ ಮಾತ್ರ ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿಯೇ ಅಂತಹ ಲೇಖಕನ ಸಾವಿನ ನಂತರ ಕೆಲವು ‘ಸಂಭ್ರಮಾಚರಣೆ’ಯ ಕಾರ್ಯಕ್ರಮಗಳೂ ನಡೆಯುತ್ತವೆ. ಹಿಂದುತ್ವ ಗುಂಪುಗಳ ಹಿಂಸೆ ಮತ್ತು ಧರ್ಮಾಂಧತೆಯನ್ನು ಅನಂತಮೂರ್ತಿ ಅವರು ದೀರ್ಘ ಕಾಲ ಅತ್ಯಂತ ಸ್ಪಷ್ಟವಾಗಿ ವಿರೋಧಿಸಿದ್ದರು. ಅವರ ನಿಧನದ ನಂತರ ಇಂತಹ ಹಿಂದುತ್ವ ಗುಂಪುಗಳು ಸಂಭ್ರಮಾಚರಣೆಯನ್ನು ನಡೆಸಿದವು. ಭೂಮಿಯ ಮೇಲಿದ್ದ ಕೊನೆಯ ದಿನಗಳಲ್ಲಿ ಅನಂತಮೂರ್ತಿ ಅವರು ವಿ.ಡಿ. ಸಾವರ್ಕರ್ ಮತ್ತು ಮಹಾತ್ಮ ಗಾಂಧಿ ಅವರ ಚಿಂತನೆಗಳನ್ನು ಹೋಲಿಸುವ ಕೃತಿಯೊಂದನ್ನು ರಚಿಸಿದ್ದರು.ಈಗ, ಅನಂತಮೂರ್ತಿ ಅವರು ಮೃತಪಟ್ಟು ಎರಡು ವರ್ಷಗಳ ನಂತರ ಈ ಪುಸ್ತಕವನ್ನು ಕೀರ್ತಿ ರಾಮಚಂದ್ರನ್ ಮತ್ತು ವಿವೇಕ್ ಶಾನಭಾಗ್ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ‘ಹಿಂದುತ್ವ ಆರ್ ಹಿಂದ್ ಸ್ವರಾಜ್’ (ಹಿಂದುತ್ವ ಅಥವಾ ಹಿಂದ್‌ಸ್ವರಾಜ್‌) ಎಂಬ ಈ ಮಿಂಚಿನಂತಹ ಕೃತಿಯ ಮೂಲಕ ಅನಂತಮೂರ್ತಿ ಅವರು ತಮ್ಮ ಗೆಳೆಯರು, ಅಭಿಮಾನಿಗಳು, ಸಂದೇಹವಾದಿಗಳು ಮತ್ತು ಟೀಕಾಕಾರರ ಜತೆ ವಿವೇಕಯುತ ಚಾಟೂಕ್ತಿಯಿಂದ ಸಮೃದ್ಧವಾದ ಬರವಣಿಗೆಯ ಯಾನದ ಮೂಲಕ ತಮ್ಮ ಚಿತೆಯ ಆಚೆಯಿಂದ ಸಂವಹನ ನಡೆಸುತ್ತಾರೆ. ನರೇಂದ್ರ ಮೋದಿ ಅವರು ಅಖಿಲ ಭಾರತ ನಾಯಕರಾಗಿ ಹೊರಹೊಮ್ಮುತ್ತಿದ್ದುದಕ್ಕೆ ಸಂಬಂಧಿಸಿ ಅನಂತಮೂರ್ತಿಯವರ ಹೇಳಿಕೆಗಳು ಸೃಷ್ಟಿಸಿದ ಅವರ ಜೀವನದ ಕೊನೆಯ ವಿವಾದದ ಬೆಳಕಿನಲ್ಲಿ ಈ ಕೃತಿಯನ್ನು ಓದಬೇಕು.ಪ್ರಧಾನಿಯಾಗುವ ಆಕಾಂಕ್ಷೆಯಿಂದ ಮೋದಿ ಅವರು ದೇಶದಾದ್ಯಂತ ಸಂಚರಿಸಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ, 2013ರ ನವೆಂಬರ್‌ನಲ್ಲಿ ಸುದ್ದಿ ವಾಹಿನಿಯೊಂದಕ್ಕೆ ಅನಂತಮೂರ್ತಿ ಹೀಗೆ ಹೇಳಿದ್ದರು: ‘ನರೇಂದ್ರ ಮೋದಿ ಅವರು ಆಡಳಿತ ನಡೆಸುವ ದೇಶವೊಂದರಲ್ಲಿ ನಾನು ಜೀವಿಸುವುದಿಲ್ಲ. ನಾನು ಯುವಕನಾಗಿದ್ದಾಗ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಟೀಕಿಸಿದ್ದೇನೆ. ಆದರೆ ಅವರ ಬೆಂಬಲಿಗರು ಯಾವತ್ತೂ ನನ್ನ ಮೇಲೆ ದಾಳಿ ನಡೆಸಲಿಲ್ಲ. ಅವರು ನಮ್ಮ ನಿಲುವುಗಳನ್ನು ಗೌರವಿಸುತ್ತಿದ್ದರು. ಮೋದಿ ಬೆಂಬಲಿಗರು ಈಗ ಧರ್ಮಾಂಧರಂತೆ ವರ್ತಿಸುತ್ತಿದ್ದಾರೆ... ಒಂದು ಕಾಲದಲ್ಲಿ ನೆಹರೂ ಅವರಂತಹ ವ್ಯಕ್ತಿಗಳು ಕುಳಿತು ಆಡಳಿತ ನಡೆಸಿದ್ದ ಕುರ್ಚಿಯಲ್ಲಿ ಮೋದಿ ಅವರು ಕೂರುವುದನ್ನು ನಾನು ಬಯಸುವುದಿಲ್ಲ.ನನಗೆ ತೀರಾ ವಯಸ್ಸಾಗಿದೆ ಮತ್ತು ಅನಾರೋಗ್ಯವೂ ಇದೆ. ಮೋದಿ ಪ್ರಧಾನಿಯಾದರೆ ನನಗದು ದೊಡ್ಡ ಆಘಾತ. ನಾನು ಬದುಕುವುದಿಲ್ಲ’. ಮೋದಿ ಅವರ ಅಸಂಖ್ಯ ಬೆಂಬಲಿಗರಲ್ಲಿ ಈ ಹೇಳಿಕೆ ಆಕ್ರೋಶ ಸೃಷ್ಟಿಸಿದೆ. ಕೆಲವರು ಅನಂತಮೂರ್ತಿ ಅವರಿಗೆ ಪಾಕಿಸ್ತಾನಕ್ಕೆ (ಅಥವಾ ಅವರ ಇಷ್ಟದ ಯಾವುದೇ ದೇಶಕ್ಕೆ) ಉಚಿತ ಟಿಕೆಟ್ ಕೊಡಿಸುತ್ತೇವೆ ಎಂದರು; ಇತರ ಕೆಲವರು ಅನಂತಮೂರ್ತಿ ಅವರ ಪ್ರತಿಕೃತಿ ದಹಿಸಿದರು; ಕೆಲವರು ಕೊಲ್ಲುವ ಬೆದರಿಕೆ ಹಾಕಿದರು. ದಿನದ 24 ಗಂಟೆಯೂ ಈ ಲೇಖಕನ ಮನೆಯ ಹೊರಗೆ ಪೊಲೀಸ್ ಕಾವಲು ಹಾಕುವಷ್ಟು ಈ ಬೆದರಿಕೆ ಗಂಭೀರವಾಗಿತ್ತು. ನಂತರದ ಮೇ ತಿಂಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತು ಮತ್ತು ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದರು.ಅನಂತಮೂರ್ತಿ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಮಾರ್ಪಡಿಸಿದರು. ಭಾವನಾತ್ಮಕವಾಗಿ ಉದ್ವಿಗ್ನಗೊಂಡ ಸ್ಥಿತಿಯಲ್ಲಿ ಆ ಹೇಳಿಕೆ ನೀಡಿದ್ದೇನೆ ಎಂದರು. ‘ಆ ಹೇಳಿಕೆ ಸ್ವಲ್ಪ ಅತಿಯಾಯಿತು, ಯಾಕೆಂದರೆ ಭಾರತ ಬಿಟ್ಟು ಎಲ್ಲಿ ಹೋಗುವುದೂ ನನಗೆ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿತು. ಆದರೆ ಮೋದಿ ಅವರ ನಿಲುವುಗಳ ಬಗ್ಗೆ ಅನಂತಮೂರ್ತಿ ಅವರಿಗೆ ಆಗಲೂ ತಕರಾರುಗಳು ಇದ್ದವು. ‘ಪ್ರಬಲ ದೇಶ’ ಮೋದಿ ಅವರ ಬಯಕೆಯಾಗಿದ್ದರೆ ಅನಂತಮೂರ್ತಿ ಅವರು ‘ಮೆದು ದೇಶ’ವೊಂದನ್ನು ಬಯಸುತ್ತಿದ್ದರು. ಈ ಭಿನ್ನತೆಯನ್ನು ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಕೃತಿಯಲ್ಲಿ ಮತ್ತಷ್ಟು ಬೆಳೆಸಲಾಗಿದೆ.ಪುಸ್ತಕ ಮುಖ್ಯವಾಗಿ ಸಾವರ್ಕರ್ ಮತ್ತು ಗಾಂಧಿ ಅವರ ಎರಡು ಬರಹಗಳನ್ನೇ ಕೇಂದ್ರೀಕರಿಸಿದ್ದರೂ ಭಾರತದ ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ಅನುಸರಿಸಿದ ಅಥವಾ ಅನುಷ್ಠಾನಗೊಳಿಸಿದ ರಾಷ್ಟ್ರೀಯತೆ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯಂತಹ ಮಹತ್ವದ ವಿಚಾರಗಳ ಬಗೆಗಿನ ಧ್ಯಾನವೂ ಹೌದು. ನಮ್ಮ ರಾಜಕೀಯ ನಾಯಕರ ಸ್ವಾರ್ಥದ ಬಗ್ಗೆ ಅನಂತಮೂರ್ತಿ ತಿರಸ್ಕಾರದಿಂದಲೇ ಬರೆಯುತ್ತಾರೆ: ‘ಮೋದಿಯಂತಹ ಜನರು ಗುಮ್ಮಟದಲ್ಲಿ ಬದುಕುತ್ತಾರೆ. ತಾವು ಹೇಳಿದ್ದು ಮತ್ತೆ ಮತ್ತೆ ಪ್ರತಿಧ್ವನಿಸುವ ಗುಮ್ಮಟದಲ್ಲಿ. ಇದು ಕೂಡ ಭಾರತಕ್ಕೆ ಹೊಸದೇನೂ ಅಲ್ಲ; ಕಾಂಗ್ರೆಸ್‌ನ ನಾಯಕರೂ ಅದನ್ನು ಮಾಡಿದ್ದಾರೆ’.7, ರೇಸ್‍ಕೋರ್ಸ್ ರಸ್ತೆಯ ನಿವಾಸದಲ್ಲಿ ಪ್ರಧಾನಿ; 10, ಜನಪಥ್ ಮನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರು; ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು- ಮನೆಯಲ್ಲಿರಲಿ ಅಥವಾ ಅತ್ಯಂತ ಜಾಗರೂಕತೆಯಿಂದ ವ್ಯವಸ್ಥೆಗೊಳಿಸಿದ ಚುನಾವಣಾ ರ‍್ಯಾಲಿಗಳಲ್ಲಿರಲಿ ಈ ನಾಯಕರು ಸದಾ ಹೊಗಳಿಕೆ ಮತ್ತು ಮುಖಸ್ತುತಿಯನ್ನೇ ಕೇಳಲು ಬಯಸುತ್ತಾರೆಯೇ ಹೊರತು ವಿಮರ್ಶೆಯನ್ನಲ್ಲ. ಸಾವರ್ಕರ್ ಬರಹಗಳು ಮತ್ತು ಭಾಷಣಗಳು ಕ್ರಿಯೆಗೆ ಪ್ರಚೋದನೆಯಾದರೆ, ಗಾಂಧಿ ಸಂವಾದಕ್ಕೆ ಆಹ್ವಾನ ನೀಡುತ್ತಾರೆ ಎಂಬುದನ್ನು ಈ ಪುಸ್ತಕದಲ್ಲಿ ಅನಂತ ಮೂರ್ತಿ ಗುರುತಿಸುತ್ತಾರೆ. ‘ಸಾವರ್ಕರ್‌ವಾದ ಶೌರ್ಯದ ಪ್ರದರ್ಶನವಾದರೆ ಗಾಂಧಿ ಯಾವತ್ತೂ ಬಯಸುತ್ತಿದ್ದುದು ನೈತಿಕತೆ ಮತ್ತು ಆತ್ಮಜ್ಞಾನ’ ಎಂದು ಗಾಂಧಿ ಆತ್ಮಾವಲೋಕನದ ಜರಡಿ ಹಿಡಿಯುತ್ತಾರೆ ಅವರು.ರಾಮಮನೋಹರ್ ಲೋಹಿಯಾ ಅವರನ್ನು ಯುವಕ ಅನಂತಮೂರ್ತಿ ತಿಳಿದುಕೊಂಡಿದ್ದರು ಮತ್ತು  ಅವರ ಬಗ್ಗೆ ಅಭಿಮಾನ ಹೊಂದಿದ್ದರು. ಆದರೆ ಲೋಹಿಯಾ ಸಿದ್ಧಾಂತದ ಅನುಯಾಯಿಗಳಿಗೆ ಹೆಚ್ಚು ಸಮಯ ಕೊಡಲಿಲ್ಲ. ಅಸ್ತಿತ್ವವಾದಿ ರಾಜಕಾರಣದ ಗಂಡಾಂತರಗಳ ಬಗ್ಗೆ ಅವರಿಗೆ ಸ್ಪಷ್ಟವಾದ ಅರಿವಿತ್ತು. ಅನಂತಮೂರ್ತಿ ಅವರು ಹಳೆಯ ರೀತಿಯ ಸಮಾಜವಾದಿ. ಅವರಿಗೆ ಜಾತಿ ಅಥವಾ ಧರ್ಮದ ಅಸ್ತಿತ್ವಕ್ಕಿಂತ ವೈಯಕ್ತಿಕ ಘನತೆ ಮತ್ತು ಸಮುದಾಯದ ಒಗ್ಗಟ್ಟು ಮುಖ್ಯವಾಗಿತ್ತು. ಪಕ್ಷಗಳು ಮತ್ತು ಅವುಗಳ ಸಿದ್ಧಾಂತಿಗಳು ಧರ್ಮ ಮತ್ತು ಜನಾಂಗೀಯತೆಯನ್ನು ಭಾರತದ ರಾಜಕಾರಣ ಮತ್ತು ಆಡಳಿತದ ಕೇಂದ್ರವಾಗಿಸಲು ಹೆಚ್ಚು ಹೆಚ್ಚು ಬಯಸುವ ಪ್ರವೃತ್ತಿ ಅನಂತಮೂರ್ತಿ ಅವರ ಚಿಂತೆಗೆ ಕಾರಣವಾಗಿತ್ತು.ಕಡಿವಾಣವಿಲ್ಲದ ‘ಅಭಿವೃದ್ಧಿ’ ಮತ್ತು ಗ್ರಾಹಕವಾದಗಳು ಪರಿಸರದ ಮೇಲೆ ಉಂಟು ಮಾಡುವ ಘೋರ ಪರಿಣಾಮಗಳನ್ನೂ ಈ ಕೃತಿ ಮುನ್ನೆಲೆಗೆ ತಂದು ನಿಲ್ಲಿಸುತ್ತದೆ. ಅವರು ಹೇಳುತ್ತಾರೆ: ‘ನಮ್ಮ ಒಳಗೂ ನಮ್ಮ ಸುತ್ತಲೂ ಇರುವ ಈವಿಲ್‌ನ ಶತಾವತಾರಗಳನ್ನು ಕಾಣಲು ಪ್ರಯತ್ನಿಸುವೆ. ಈವಿಲ್‌ ನಮ್ಮ ಕಾಲದಲ್ಲಿ  ಗಣಿಗಳು; ಡ್ಯಾಮ್‌ಗಳು; ವಿದ್ಯುತ್‌ ಸ್ಥಾವರಗಳು. ನೂರಾರು ಸ್ಮಾರ್ಟ್‌ ಸಿಟಿಗಳು. ಮರಗಳನ್ನು ನಾಶಮಾಡಿ ಅಗಲ ಮಾಡಿದ ನೆರಳಿಲ್ಲದ ರಸ್ತೆಗಳು. ದಿಕ್ಕು ತಪ್ಪಿ ಹರಿದು ಪಂಚತಾರಾ ಹೋಟೆಲುಗಳ  ಕಕ್ಕಸ್ಸುಗಳನ್ನು ತೊಳೆಯುವ ನೀರಾಗಿ ಸಲ್ಲುವ ನದಿಗಳು. ಗಣಿಗಾರಿಕೆಯಿಂದ ಬೋಳಾದ ಗಿರಿಜನರ ದೇವಾಲಯಗಳಾಗಿದ್ದ ಗುಡ್ಡಗಳು. ಗುಬ್ಬಚ್ಚಿಗಳು ಇಲ್ಲದ ಪೇಟೆಗಳು. ಹಕ್ಕಿ ಕೂರದ ಹಸಿರು ಮರಗಳು’.‘ಇನ್ನು ಮುಂದೆ ‘ಎಡ’ದ ಮಾತುಗಳನ್ನು ಮೋದಿ ಅವರ ಡೆವಲಪ್‌ಮೆಂಟಿನಿಂದ ಕೊರಗಿ ಕ್ರುದ್ಧಳಾಗುವ ಭೂಮಿಯೇ ಆಡಬೇಕೇನೊ? ಮಳೆ ಗುಡುಗು ಮಿಂಚು ಪ್ರವಾಹ ಭೂಕಂಪಗಳ ಅಸ್ತ್ರವನ್ನು ಭೂಮಿ ಹೇಗೆ ಬಳಸಿಯಾಳು ಎಂಬುದನ್ನು ಲೋಕ ಅನುಭವಿಸಿ ಬಲ್ಲುದು’ ಎಂದು ಭಾರತದಲ್ಲಿನ ಎಡಪಕ್ಷಗಳ ಕುಸಿತ ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಅವರು ಹೇಳುತ್ತಾರೆ. ಪುಸ್ತಕದ ಕೊನೆಯಲ್ಲಿ ಹೀಗೆ ಹೇಳುತ್ತಾರೆ: ‘ಮೋದಿ ಹುರುಪಿನ ಡೆವಲಪ್‌ಮೆಂಟಿನಲ್ಲಿ ಎಲ್ಲೆಲ್ಲೂ ಕಾರಖಾನೆ ಹೊಗೆ ತುಂಬಿರುತ್ತದೆ. ಪ್ರಕೃತಿಗೆ ಹತ್ತಿರವಾಗಿ ಬದುಕುವ ಗಿರಿಜನರು ದಿಕ್ಕಾಪಾಲಾಗಿರುತ್ತಾರೆ. ಅತಿ ಅಭಿವೃದ್ಧಿಯ ಹ್ಯೂಬ್ರಿಸ್‌ನಲ್ಲಿ ತಿಂದು ತಿಂದು ವಾಕರಿಕೆ ಹುಟ್ಟಿ ರಾವು ಬಿಟ್ಟ ಮನುಷ್ಯ ಬದಲಾಗುವ ಅಗತ್ಯ ಕಂಡಾನು’.ಇವು ಅತ್ಯಂತ ಶಕ್ತಿಶಾಲಿ ಮತ್ತು ಮನಮುಟ್ಟುವ ಸಾಲುಗಳು. ಆದರೆ ಇಲ್ಲಿ ಮತ್ತೊಂದು ವಿಚಾರವನ್ನು ನಾನು ಹೇಳಲೇಬೇಕು. ಮೋದಿ ಪ್ರಧಾನಿಯಾಗುವುದಕ್ಕಿಂತ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಕೂಡ ಸುಸ್ಥಿರ ಪರಿಸರ ಮತ್ತು ಆದಿವಾಸಿ ಸಮುದಾಯಗಳ ಬಗ್ಗೆ ನಿರ್ಲಕ್ಷ್ಯತಾಳಿದ್ದವು. ಬಹುಶಃ ಸಮಸ್ಯೆಯನ್ನು ವ್ಯಕ್ತಿಗೆ ಸಮೀ ಕರಿಸುವುದು ಸಾಹಿತಿಯ ಸ್ವಾತಂತ್ರ್ಯವಾದರೂ ಸಮಸ್ಯೆ ಮಾತ್ರ ಅನಂತಮೂರ್ತಿ ಉಲ್ಲೇಖಿಸುವ ವ್ಯಕ್ತಿಗಿಂತ (ಅಥವಾ ರಾಜಕೀಯ ಪಕ್ಷಕ್ಕಿಂತ) ಹಿಂದಿನಿಂದಲೂ ಇತ್ತು.  ಅನಂತಮೂರ್ತಿ ಅವರ ಜೀವನಕ್ಕೆ ಇಂಡೊನೇಷ್ಯಾದ ತುಲನಾತ್ಮಕ ರಾಷ್ಟ್ರೀಯವಾದದ ಶ್ರೇಷ್ಠ ಚಿಂತಕ 2015ರ ಡಿಸೆಂಬರ್‌ನಲ್ಲಿ ಮೃತಪಟ್ಟ ಬೆನೆಡಿಕ್ಟ್ ಆಂಡರ್ಸನ್ ಜತೆ ಸಾಮ್ಯತೆ ಇದೆ ಅನಿಸುತ್ತದೆ.ಆಂಡರ್ಸನ್ ಸಾಹಿತ್ಯದಲ್ಲಿ ಗಾಢ ಆಸಕ್ತಿ ಇದ್ದ ಸಮಾಜ ವಿಜ್ಞಾನಿ ಮತ್ತು ಇತಿಹಾಸಕಾರ. ಅನಂತಮೂರ್ತಿ ರಾಜಕಾರಣ ಮತ್ತು ಇತಿಹಾಸದಲ್ಲಿ ಆಳವಾದ ಆಸಕ್ತಿ ಇದ್ದ ಲೇಖಕ. ಈ ಇಬ್ಬರೂ ಸ್ವತಂತ್ರ ಚಿಂತನೆಯ ಎಡಪಂಥೀಯರು; ಇಬ್ಬರೂ ತಾವು ಹೊಂದಿರುವ ಶ್ರೇಷ್ಠತೆ ಮತ್ತು ಪ್ರಸಿದ್ಧಿಯ ಹೊರತಾಗಿಯೂ ಆಡಂಬರದಿಂದ ದೂರ ಇದ್ದವರು. ಕಿರಿಯ ಬರಹಗಾರರಿಂದ ಕಲಿಯುವ ಮನಸನ್ನು ಹೊಂದಿದ್ದವರು. ತಾವು ಬದುಕಿ ಸತ್ತ ಭಾರತವನ್ನು ಅನಂತಮೂರ್ತಿ ತಮ್ಮ ನೆಲ ಎಂದು ಕರೆದರೆ, ಆಂಡರ್ಸನ್ ತಾವು ಕಲಿತ ದೇಶದೊಂದಿಗೆ ಗುರುತಿಸಿಕೊಂಡರು ಮತ್ತು ಆ ದೇಶವಾದ ಇಂಡೊನೇಷ್ಯಾದ ಬಗ್ಗೆ ಬರೆದರು. ರಾಷ್ಟ್ರೀಯತೆ ಮತ್ತು ಅತಿ ರಾಷ್ಟ್ರೀಯತೆಯ ನಡುವಣ ವ್ಯತ್ಯಾಸವನ್ನು ಗುರುತಿಸಬೇಕು ಎಂದು ಆಂಡರ್ಸನ್ ಸದಾ ಹೇಳುತ್ತಿದ್ದರು.‘ತನ್ನದೇ ದೇಶದ ಪ್ರಜೆಗಳು ಮತ್ತು ಇತರರ ವಿರುದ್ಧ ತನ್ನ ಸರ್ಕಾರ ಮಾಡುವ ತಪ್ಪುಗಳ ಬಗ್ಗೆ ನಾಚಿಕೆಪಟ್ಟುಕೊಳ್ಳದವನು ನಿಜವಾದ ರಾಷ್ಟ್ರೀಯವಾದಿಯಾಗುವುದು ಸಾಧ್ಯವೇ ಇಲ್ಲ’ ಎಂದು ಆಂಡರ್ಸನ್ ಒಮ್ಮೆ ಹೇಳಿದ್ದರು. ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಕೃತಿಯಲ್ಲಿ ಇಂತಹುದೇ ಪ್ರಶ್ನೆಯನ್ನು ಅನಂತಮೂರ್ತಿ ಅವರೂ ಕೇಳುತ್ತಾರೆ: ‘ಮನುಷ್ಯ ಒಳ್ಳೆಯವನೂ ಅಲ್ಲ, ಕೆಟ್ಟವನೂ ಅಲ್ಲ ಎಂದು ತಿಳಿಯುವುದು ನಮ್ಮ ಹೊರಗಿರುವ ಮನುಷ್ಯರನ್ನು ನೋಡುವುದರಿಂದ ಮಾತ್ರವಲ್ಲ ನಮ್ಮಲ್ಲೂ ಒಳಿತು/ ಕೆಡುಕುಗಳು ಘರ್ಷಣೆಯಲ್ಲಿ ಇರುತ್ತದೆ ಎಂದು ತಿಳಿಯುವುದರಲ್ಲಿ. ಹೀಗೆ ಆತ್ಮ ಪರೀಕ್ಷಣೆಯಲ್ಲಿ ಹೊರಗಿನ ಲೋಕವನ್ನೂ ನೋಡಿದಾಗ ಒಂದು ಸ್ಟೇಟ್‌ ಎಷ್ಟು ಸ್ಪಂದನಶೀಲವಾಗಿ ಉಳಿದಿರಬೇಕೆಂಬ ಪ್ರಜ್ಞೆ ನಮ್ಮಲ್ಲಿ ಮೂಡುತ್ತದೆ’.ಸಾವರ್ಕರ್ ಅವರ ಹಿಂದುತ್ವ ಪುಸ್ತಕ ‘ಪ್ರಾಚೀನ ಭಾರತದ ಸ್ತುತಿ’ ಎಂದು ಅನಂತಮೂರ್ತಿ ಗುರುತಿಸುತ್ತಾರೆ. ಒಬ್ಬ ವ್ಯಕ್ತಿ ಯಾವುದನ್ನಾದರೂ ಪ್ರಶಂಸಿಸುವುದರಲ್ಲಿ ಮುಳುಗಿಹೋಗಿದ್ದಾಗ ಅವರು ಅದರಲ್ಲಿ ಕಳೆದು ಹೋಗುತ್ತಾರೆ. ಅಂತಹ ಸ್ಥಿತಿಯಲ್ಲಿ ಪ್ರಾಚೀನವಾದ ಎಲ್ಲವೂ ಭವ್ಯವಾಗಿ ಕಾಣಿಸುತ್ತವೆ ಎಂದು ಅನಂತಮೂರ್ತಿ ಬರೆಯುತ್ತಾರೆ. ಸಾವರ್ಕರ್ ತಮ್ಮ ಬರವಣಿಗೆಯಲ್ಲಿ ‘ನ್ಯೂನತೆಯಿಲ್ಲದ (ಹಿಂದೂ) ಭೂತಕಾಲ’ವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಇದ್ದಕ್ಕಿದ್ದ ಹಾಗೆ ಅನುಕರಿಸಬೇಕಾದ ಭವ್ಯ, ಪೌರಾಣಿಕ ವಿಶಿಷ್ಟ ಜಗತ್ತು. ಆದರೆ ಸತ್ಯ ಸಂಪೂರ್ಣ ಭಿನ್ನ ಎಂದು ಅನಂತಮೂರ್ತಿ ಗುರುತಿಸುತ್ತಾರೆ. ಪ್ರಾಚೀನ ಭಾರತದಲ್ಲಿ ಜೀವಿಸಿದ್ದ ಬುದ್ಧ ತನ್ನ ಸುತ್ತಲೂ ಸಾಕಷ್ಟು ನೋವುಗಳನ್ನು ಕಾಣುತ್ತಾನೆ.‘ವ್ಯಾಸರ ಮಹಾಭಾರತ ದಂತಹ ಒಂದು ಕೃತಿಯನ್ನು ಓದಿದಾಗ ಭೂತಕಾಲದಲ್ಲಿಯೂ ಇದ್ದ ವರ್ತಮಾನದ ಎಲ್ಲಾ ಮೋಹಗಳು, ಕುಟಿಲತೆ, ಕಾಮುಕತೆ, ದೇವನಿಂದನೆ, ಕ್ರೌರ್ಯ, ಅಸೂಯೆ ಮತ್ತು ಪ್ರಾಣಿಹಿಂಸೆ ಯಥೇಚ್ಛವಾಗಿ ಇದ್ದಂತೆ ಕಾಣುತ್ತದೆ’ ಎಂದು ಅನಂತಮೂರ್ತಿ ಬರೆಯುತ್ತಾರೆ.ಅನಂತಮೂರ್ತಿ ಪ್ರಜಾತಂತ್ರ ಭಾರತವನ್ನು ಪ್ರೀತಿಸಿದರು. ಆದರೆ ಅವರು ಅದರ ಅನಾಕರ್ಷಕ ಅಂಶಗಳನ್ನು ವಿವರಿಸುವುದಕ್ಕೆ ಹಿಂಜರಿಯಲಿಲ್ಲ- ಮಹಿಳೆಯರು ಮತ್ತು ದಲಿತರ ಶೋಷಣೆ, ರಾಜಕೀಯ ವ್ಯವಸ್ಥೆಯ ಭ್ರಷ್ಟಾಚಾರ, ಅದರ ನಾಯಕರ ಸ್ವಪ್ರತಿಷ್ಠೆ, ಶ್ರೀಮಂತ ಅನೈತಿಕತೆ ಮತ್ತು ಅತಿಯಾಸೆ. ಅವರ ರಾಷ್ಟ್ರಭಕ್ತಿಯಲ್ಲಿ ಅಪಮಾನದ, ನಾಚಿಕೆಯ ಛಾಯೆ (ಸಮರ್ಥನೀಯ ಮತ್ತು ಗೌರವಾರ್ಹವಾದ) ಇತ್ತು.ಈ ನಾಚಿಕೆಯೇ ಅವರನ್ನು ಗಾಂಧಿ, ಅಂಬೇಡ್ಕರ್ ಮತ್ತು ಜಯಪ್ರಕಾಶ್ ನಾರಾಯಣ್ ಅವರಿಗೆ ನಿಕಟವಾಗಿಸುತ್ತದೆ. ಅದುವೇ ಅನಂತಮೂರ್ತಿ ಅವರನ್ನು ಸಾವರ್ಕರ್, ಗೋಲ್ವಾಲ್ಕರ್ ಮತ್ತು ಮೋದಿ ಅವರಂತಹ ಅತಿ ರಾಷ್ಟ್ರೀಯವಾದಿಗಳ ಹೇಳಿಕೆಗಳು ಮತ್ತು ಸಿದ್ಧಾಂತಗಳ ಬಗ್ಗೆ ಸಂದೇಹಪಡುವಂತೆ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry