3

ನಾವು ಭಾರತೀಯರು ಫ್ಯಾಸಿಸ್ಟ್‌ ಆಗಬಲ್ಲೆವೇ?

ಪ್ರಸನ್ನ
Published:
Updated:
ನಾವು ಭಾರತೀಯರು ಫ್ಯಾಸಿಸ್ಟ್‌ ಆಗಬಲ್ಲೆವೇ?

ಲೇಖನವು ಕ್ಲಿಷ್ಟವಾಗಿದೆ. ಸರಳಗೊಳಿಸಲು ತುಂಬ ಪ್ರಯತ್ನಿಸಿದೆ. ಸಾಧ್ಯವಾಗುತ್ತಿಲ್ಲ. ಹಾಗಂತ, ಈ ಪ್ರಶ್ನೆಗೆ ಸುಲಭ ಉತ್ತರವೂ ಇದೆ.

ಆದರದು, ಇಂದಿನ ಸಂದರ್ಭದಲ್ಲಿ ಕೇವಲ ಆರೋಪ ಪ್ರತ್ಯಾರೋಪಗಳ ಜಗಳದಲ್ಲಿ ನಮ್ಮನ್ನು ಮುಳುಗಿಸುತ್ತಿದೆ.

ಮತೀಯವಾದಿಗಳು ಎಂದು ಯಾರನ್ನಾದರೂ ನೀವು ಆರೋಪಿಸಿದಿರೆಂದು ಇಟ್ಟುಕೊಳ್ಳಿ, ‘ಸ್ಯೂಡೊ ಸೆಕ್ಯುಲರಿಸ್ಟರು ನೀವು’ ಎಂಬ ತತ್‌ಕ್ಷಣದ ಪ್ರತಿಕ್ರಿಯೆ ಬರುತ್ತದೆ.

ರಾಜಕೀಯವೆಂಬುದು, ಅತೀವ ಭ್ರಷ್ಟವೂ ಅತೀವ ನಿಸ್ತೇಜವೂ ಆಗಿರುವ ಇಂದಿನ ಸಂದರ್ಭವೇ ಫ್ಯಾಸಿಸಂ ಎಂಬ ಕಾಯಿಲೆ ಹರಡಲಿಕ್ಕೆ ಪ್ರಶಸ್ತ ವಾತಾವರಣವಾಗಿದೆ. ಆದರೆ ಕೇವಲ ಹಾಗೆ ಹೇಳುವುದರಿಂದಲೂ ಸತ್ಯದರ್ಶನವಾಗುವುದಿಲ್ಲ. ಹಾಗಾಗಿ, ಕ್ಲಿಷ್ಟವಾದರೂ ಸರಿಯೇ, ಚಾರಿತ್ರಿಕವಾಗಿಯೇ ಉತ್ತರ ಹುಡುಕೋಣವಂತೆ.

ಚಾರಿತ್ರಿಕವಾಗಿ, ಫ್ಯಾಸಿಸಮ್ಮಿನ ಉಗಮಕ್ಕೆ ಮೂರು ಮೂಲಭೂತ ಕಾರಣಗಳನ್ನು ಸೂಚಿಸಲಾಗುತ್ತದೆ. ಮಾರುಕಟ್ಟೆಯ ಅನೀತಿ, ಆರ್ಥಿಕ ಹಿಂಜರಿತ, ಸಾಂಸ್ಕೃತಿಕ ಹಿಂಜರಿತ. ಇವು ಮೂರು ಕಾರಣಗಳನ್ನು ಭಾರತೀಯ ಸಂದರ್ಭದಲ್ಲಿ ಇಟ್ಟು ನೋಡಿದರೆ, ಪ್ರಾಯಶಃ, ಪ್ರಶ್ನೆಗೆ ಉತ್ತರ ದೊರಕೀತು.

ಬರ್ಟೊಲ್ಟ್ ಬ್ರೆಕ್ಟ್ ಎಂಬ ಒಬ್ಬ ಮಹಾನ್ ನಾಟಕಕಾರನಿದ್ದಾನೆ. ಅವನು ಫ್ಯಾಸಿಸ್ಟ್ ಜರ್ಮನಿಯಲ್ಲಿ, ಅಲ್ಪಸಂಖ್ಯಾತ ಯಹೂದ್ಯ ಜನಾಂಗದಲ್ಲಿ ಹುಟ್ಟಿ ಬಂದವನು. ಸ್ಪಷ್ಟವಾದ ಫ್ಯಾಸಿಸ್ಟ್ ವಿರೋಧಿ ನಿಲುವು ತಾಳಿದ್ದವನು.

ಫ್ಯಾಸಿಸ್ಟರ ಕಪಿಮುಷ್ಟಿಯಿಂದ ಹೇಗೋ ಪಾರಾಗಿ, ಜರ್ಮನಿಯಿಂದ ಬಿಟ್ಟೋಡಿ ಬಂದು, ಬದುಕುಳಿದವನು. ಫ್ಯಾಸಿಸ್ಟರ ಪತನದ ನಂತರ ಪುನಃ ತನ್ನ ಮಾತೃಭೂಮಿಗೆ- ಫ್ಯಾಸಿಸ್ಟರು ಅದನ್ನು ಪಿತೃಭೂಮಿ ಎಂದು ತಿಳಿಯುತ್ತಾರೆ- ಮರಳಿದವನು.

ಆತನ ನಾಟಕವೊಂದಿದೆ. ಅದರ ಕಥಾನಾಯಕ ಒಬ್ಬ ಯಶಸ್ವಿ ಉದ್ದಿಮೆಪತಿ. ಆತ, ಒಂದೇ ಸೂರಿನಡಿಯಲ್ಲಿ, ಒಂದು ಭಾಗದಲ್ಲಿ ವೇಶ್ಯಾವಾಟಿಕೆಯನ್ನೂ ಮತ್ತೊಂದು ಭಾಗದಲ್ಲಿ ಲೈಂಗಿಕ ರೋಗಗಳ ಚಿಕಿತ್ಸಾ ಕೇಂದ್ರವನ್ನೂ ನಡೆಸುತ್ತಿರುತ್ತಾನೆ. ಎರಡೂ ಉದ್ದಿಮೆಗಳಿಂದ ಲಾಭ ಪಡೆಯುತ್ತಿರುತ್ತಾನೆ. ಇದೊಂದು ರೂಪಕ. ಫ್ಯಾಸಿಸಮ್ಮಿನ ಪ್ರಮುಖ ಕಾರಣವಾದ, ಮಾರುಕಟ್ಟೆಯ ಅನೀತಿಯ ಬಗೆಗೆ ಒಂದು ಅಸಾಧಾರಣ ರೂಪಕ.

ಮಾರುಕಟ್ಟೆಯನ್ನು ಅಂತಿಮ ಸತ್ಯವೆಂದು ತಿಳಿದು ತಲೆಯ ಮೇಲೆ ಹೊತ್ತು ತಿರುಗಿದ ಆರ್ಥಿಕ ವ್ಯವಸ್ಥೆಯನ್ನು ಬಂಡವಾಳಶಾಹಿ ವ್ಯವಸ್ಥೆಯೆಂದು ಕರೆಯುವ ಪರಿಪಾಠ ಈವರೆಗೂ ಇತ್ತು.

ಫ್ಯಾಸಿಸಂ ಮೊದಲ ಬಾರಿಗೆ ಜರ್ಮನಿ, ಇಟಲಿ ಇತ್ಯಾದಿ ದೇಶಗಳಲ್ಲಿ ಕಾಣಿಸಿಕೊಂಡದ್ದು ಇದೇ ವ್ಯವಸ್ಥೆಯ ಒಳಗಿನಿಂದಲೇ. ಅದರೆ, ಇಂದಿನ ಹೋಲಿಕೆಯಲ್ಲಿ ಅಂದಿನ ಮಾರುಕಟ್ಟೆಯು ಹಳ್ಳಿಯ ಪುಟ್ಟ ಸಂತೆಯಿದ್ದಂತೆಯೆ ಸರಿ.

ಇಂದಿನದು ಅದೆಷ್ಟು ಅಗಾಧವಾದದ್ದೆಂದರೆ, ಸಮಾಜವಾದಿ, ಸಮತಾವಾದಿ, ಪ್ರಜಾಪ್ರಭುತ್ವವಾದಿ ಎಂಬಿತ್ಯಾದಿ ರಾಜಕೀಯ ವ್ಯವಸ್ಥೆಗಳನ್ನೆಲ್ಲ ಅದು ಬೆರೆಸಿ, ಕುಲಗೆಡಿಸಿ, ವಿಶ್ವವ್ಯಾಪಿಯಾಗಿ ಹರಡಿದೆ.

ಹಾಗಾಗಿಯೇ ಸಮತಾವಾದಿ ಚೀನಾ, ಪ್ರಜಾಪ್ರಭುತ್ವವಾದಿ ಭಾರತ, ಸಾಮ್ರಾಜ್ಯಶಾಹಿ ಅಮೆರಿಕ, ಧಾರ್ಮಿಕಶಾಹಿ ಸೌದಿ ಅರೇಬಿಯ ಇತ್ಯಾದಿ ಎಲ್ಲ ರಾಷ್ಟ್ರಗಳೂ ಕೇವಲ ಮಾರುಕಟ್ಟೆಶಾಹಿ ವ್ಯವಸ್ಥೆಗಳಾಗಿ ಪರಿವರ್ತಿತವಾಗಿವೆ. ಆ ದೇಶಗಳ ರಾಜಕೀಯ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಹಾಗೂ

ಸಾಂಸ್ಕೃತಿಕ ವ್ಯವಸ್ಥೆಗಳು ಕೇವಲ ನೆಪಮಾತ್ರದ ವ್ಯವಸ್ಥೆಗಳಾಗಿ ಉಳಿದುಕೊಂಡಿವೆ. ತಾವಿನ್ನೂ ಇದ್ದೇವೆ ಎಂದು ತೋರ್ಪಡಿಸಿಕೊಳ್ಳಲಿಕ್ಕಾಗಿ ವಿನಾಕಾರಣ ಆರ್ಭಟಿಸುತ್ತಿರುತ್ತವೆ ಇವುಗಳು. ಕಾಲುಕೆದರಿ ಜಗಳ ತೆಗೆಯುತ್ತಿರುತ್ತವೆ. ಮಿಕ್ಕಂತೆ, ಮಠಾಧಿಪತಿಗಳು ಮೇಷ್ಟ್ರು ರಾಜಕಾರಣಿಗಳು... ಇತ್ಯಾದಿ ಎಲ್ಲ ಸಭ್ಯರೂ ಮಾರುಕಟ್ಟೆಯತ್ತಲೇ ಮುಖಮಾಡಿಕೊಂಡು ಕುಳಿತಿರುತ್ತಾರೆ.

ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ, ಯಾರ ದುಡ್ಡು ಎಲ್ಲಿ ಹೂಡಿಕೆಯಾಗಿದೆ, ಯಾವ ದೇಶ ಯಾರ ಆಂತರಿಕ ವ್ಯವಹಾರದೊಳಗೆ ಕಡ್ಡಿಯಾಡಿಸುತ್ತಿದೆ, ಯಾರ ಬಂದೂಕು ಯಾರ ಜೀವ ತೆಗೆಯುತ್ತಿದೆ, ಯಾರ ಧನಸಹಾಯವು ಯಾವ ಆತಂಕವಾದಿಯನ್ನು ಸಲಹುತ್ತಿದೆ, ಯಾರು ಶತ್ರುಗಳು ಯಾರು ಮಿತ್ರರು ಎಂದೇ ತಿಳಿಯುವುದಿಲ್ಲ. ಈ ವ್ಯವಸ್ಥೆ ಕೆಲಕಾಲ ಅಬ್ಬರದಿಂದಲೇ ನಡೆಯಿತು.

ಈಗ ಅದಕ್ಕೆ ಹಿಂಜರಿತವೆಂಬ ರೋಗ ಬಡಿದುಕೊಂಡಿದೆ. ಮೊದಲಿಗೆ ಆರ್ಥಿಕ ಹಿಂಜರಿತವನ್ನು ಗಮನಿಸೋಣವಂತೆ. 2008ರಲ್ಲಿ ಆರಂಭವಾದ ಈ ಹಿಂಜರಿತವು ಕಳೆದ ಶತಮಾನದ 30ರ ದಶಕದಲ್ಲಿ ಕಂಡು ಬಂದಿದ್ದ ಗ್ರೇಟ್ ಡಿಪ್ರೆಷನ್ನಿಗಿಂತಲೂ ಹೆಚ್ಚು ಡಿಪ್ರೆಸಿವ್ ಆಗಿ ಕಂಡುಬಂದಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಮಾತ್ರವಲ್ಲ, ಈ ಬಾರಿ ಹಿಂಜರಿತವು ಕಾಯಂ ಆಗಿ ಉಳಿದುಬಿಡುವ ಎಲ್ಲ ಸೂಚನೆಗಳೂ ಇವೆ.

ಆರ್ಥಿಕ ಹಿಂಜರಿತವೆಂಬುದು ಲೈಂಗಿಕ ರೋಗವಿದ್ದಂತೆ. ಅದು ಒಳರೋಗ, ಒಳಗಿನಿಂದಲೇ ಮಾರುಕಟ್ಟೆಯನ್ನು ಕೊಲ್ಲಬಲ್ಲ ರೋಗ. ರೋಗಿ ವ್ಯವಸ್ಥೆಯು ಒಮ್ಮಗೇ ನಿಸ್ತೇಜವಾಗಿ ಬಿಡುತ್ತದೆ.

ಬಂಡವಾಳವು ಚಾಲನೆ ಕಳೆದುಕೊಳ್ಳುತ್ತದೆ, ಕಾರ್ಖಾನೆಗಳ ಮಾಲು ವ್ಯಾಪಾರವಾಗದೆ ಉಳಿದುಕೊಳ್ಳುತ್ತದೆ, ಬ್ಯಾಂಕುಗಳ ವ್ಯವಹಾರ ಸ್ಥಗಿತವಾಗುತ್ತದೆ, ಸಾಪ್ಟ್‌ವೇರುಗಳು ಬೇಡಿಕೆಯಿಲ್ಲದೆ ಬಳಲುತ್ತವೆ, ಕಟ್ಟಡಗಳು ಬಿಕರಿಯಾಗದೆ ಬಾವಲಿಗಳ ವಾಸಸ್ಥಾನಗಳಾಗುತ್ತವೆ, ಮೋಜು ಮಾಡುವವರು ಮೋಜು ಮಾಡದೆ ತಮ್ಮ ತಮ್ಮ ಮನೆಗಳಲ್ಲಿ ಮಂಕಾಗಿ ಕುಳಿತಿರುತ್ತಾರೆ... ಇತ್ಯಾದಿ.

ಫ್ಯಾಸಿಸಮ್ಮಿನ ರೋಗ ಹರಡಲಿಕ್ಕಿರುವ ಮೂರನೆಯ ಕಾರಣವನ್ನು ಸಾಂಸ್ಕೃತಿಕ ಹಿಂಜರಿತ ಎಂದು ಕರೆಯಬಹುದಾಗಿದೆ. ನೈತಿಕ ಹಿಂಜರಿತ ಅಥವಾ ಆಧ್ಯಾತ್ಮಿಕ ಹಿಂಜರಿತ ಎಂದು ಸಹ ಅದನ್ನು ಕರೆಯುತ್ತಾರೆ.

ತಾನು ಇನ್ನೂ ಭಾರತೀಯನಾಗಿ ಉಳಿದಿದ್ದೇನೆಯೇ, ತನ್ನ ಭಾಷೆ ಧರ್ಮ ನಡವಳಿಕೆ ಜೀವನಶೈಲಿಗಳು ತನ್ನವೇ ಆಗಿ ಉಳಿದಿವೆಯೇ ಎಂಬ ತೀವ್ರವಾದ ಆತಂಕ ಜನರನ್ನು ಕಾಡತೊಡಗುತ್ತದೆ. ಈ ಮೂರೂ ಲಕ್ಷಣಗಳು ಭಾರತದಲ್ಲಿ ದಟ್ಟವಾಗಿ ಕಂಡುಬಂದಿವೆ.

ರೋಗ ಬಂದಾಗ ಮನುಷ್ಯರು ಆತಂಕಕ್ಕೊಳಗಾಗುತ್ತಾರೆ ಹಾಗೂ ವಿವೇಚನೆ ಕಳೆದುಕೊಳ್ಳುತ್ತಾರೆ. ನಾವೂ ಸಹ ವಿವೇಚನೆ ಕಳೆದುಕೊಳ್ಳತೊಡಗಿದ್ದೇವೆ. ನಮ್ಮದೇ ಅಕ್ಕಪಕ್ಕಗಳಲ್ಲಿ ಅಥವಾ ನೆರೆಹೊರಿಕೆಯಲ್ಲಿ, ಕುಸಿತಗಳಿಗೆ ಕಾರಣ ಹುಡುಕತೊಡಗಿದ್ದೇವೆ.

ಗಂಡನು ಹೆಂಡತಿಯನ್ನು, ಕನ್ನಡಿಗನು ತಮಿಳನನ್ನು, ಹಿಂದೂವು ಮುಸಲ್ಮಾನನನ್ನು, ಕ್ರೈಸ್ತನು ಯಹೂದ್ಯನನ್ನು ದುರುಗುಟ್ಟಿಕೊಂಡು ನೋಡತೊಡಗುತ್ತಾನೆ. ಹಳೆಯ, ಪೌರಾಣಿಕ ಜಗಳಗಳು ಹೊಸ ಕೀವು ಸುರಿಸತೊಡಗಿವೆ.

ಬ್ರೆಕ್ಟನ ರೂಪಕವು ನಿಜಕ್ಕೂ ಅಸಾಧಾರಣವಾದದ್ದು. ರೂಪಕದೊಳಗಿನ ವೇಶ್ಯಾವಾಟಿಕೆಯನ್ನು ಅತ್ತ ಸರಿಸಿಟ್ಟು ಅದರ ಜಾಗೆಯಲ್ಲಿ ಯುದ್ಧ ಅಥವಾ ಹಿಂಸೆಯನ್ನಿಟ್ಟರೆ ಆಗ, ಪ್ರೀತಿಯ ವ್ಯಾಪಾರೀಕರಣದಷ್ಟೇ ಯಶಸ್ವಿಯಾಗಿ ಹಾಗೂ ಮಾರಕವಾಗಿ, ಹಿಂಸೆಯ ವ್ಯಾಪಾರೀಕರಣವೂ ಫಲಿಸತೊಡಗುತ್ತದೆ. ಹಿಂಸೆಯ ವ್ಯಾಪಾರೀಕರಣವೇ ಫ್ಯಾಸಿಸಂ.

ಕಳೆದ ಶತಮಾನದಲ್ಲಿ ಜರ್ಮನಿಯಲ್ಲಿ ಫ್ಯಾಸಿಸಮ್ಮಿನ ಉಗಮಕ್ಕೆ ಕಾರಣರಾದವರು, ಬಹುಸಂಖ್ಯಾತರೂ ಮಧ್ಯಮವರ್ಗಿಗಳೂ ಮಾನವಂತರೂ ಶುದ್ಧ ಆರ್ಯರೂ ಆದ ಅಲ್ಲಿನ ಕ್ರೈಸ್ತರು. ನಾವು, ಭಾರತೀಯ ಹಿಂದೂಗಳು ಸಹಿತ ಇವೆಲ್ಲವೂ ಹೌದು. ಅಥವಾ ಹಾಗೆಂದು ತಿಳಿದವರು.

ಉದಾಹರಣೆಗೆ ನಾವು ಬೆರಕೆ ತಳಿಯ ಜನರೇ ಆದರೂ ಆರ್ಯರೆಂಬ ವಿಪರೀತದ ಹೆಮ್ಮೆಯಿದೆ ನಮಗೆ. ಇರಲಿ. ಆರ್ಥಿಕ ಹಾಗೂ ಸಾಂಸ್ಕೃತಿಕ ಹಿಂಜರಿತವು ಜರ್ಮನರನ್ನು ಆವರಿಸಿಕೊಂಡಾಗ ಅವರಿಗೆ ಕಂಡ ಶತ್ರು, ಅವರ ನೆರೆಹೊರಿಕೆಯ ಅಲ್ಪಸಂಖ್ಯಾತ ಯಹೂದ್ಯರು. ಪಾಪ! ಯಹೂದ್ಯರೂ ಕೂಡ ಮನುಷ್ಯರೇ ಆದ್ದರಿಂದ ಅವರಲ್ಲೂ ಸಣ್ಣತನಗಳಿದ್ದವು. ಅವು ಬಹುಸಂಖ್ಯಾತರಿಗೆ ದೊಡ್ಡದಾಗಿ ಕಾಣತೊಡಗಿದವು.

ಇಂತಹ ಪ್ರತಿಕ್ರಿಯೆಗಳನ್ನೇ ಬಂಡವಾಳ ಮಾಡಿಕೊಂಡು ಬೆಳೆಯಲು ಒಬ್ಬ ನಾಯಕ ಕಾದಿರುತ್ತಾನೆ. ಹಿಟ್ಲರ್ ಮಹಾಶಯ ಅಂತಹ ಒಬ್ಬ ನಾಯಕನಾಗಿದ್ದ. ಆತ ರಾಷ್ಟ್ರೀಯವಾದಿ ಪಕ್ಷವೊಂದನ್ನು ಕಟ್ಟಿ ಬೆಂಕಿಗೆ ತುಪ್ಪ ಸುರಿದ.

ದೇಶಪ್ರೇಮದ ಮಾತನ್ನಾಡಿದ. ಒಟ್ಟಾರೆಯಾಗಿ ದೊಡ್ಡ ದೊಡ್ಡ ಮಾತುಗಳನ್ನು ತುಂಬ ರೋಚಕವಾಗಿ ಆಡಿದ. ಹಾಗೂ ಬಹುಸಂಖ್ಯಾತರ ಆತಂಕವನ್ನು ಅಲ್ಪಸಂಖ್ಯಾತರ ಕಡೆಗೆ ಹಾಗೂ ತನ್ನ ರಾಜಕೀಯ ವಿರೋಧಿಗಳ ಕಡೆಗೆ ತುಂಬ ಸಮರ್ಥವಾಗಿ ತಿರುಗಿಸಿದ. ಆರ್ಥಿಕ ಕುಸಿತವೆಂಬ ಒಳರೋಗದಿಂದ ನಿತ್ರಾಣರಾಗಿದ್ದ ಉದ್ದಿಮೆಪತಿಗಳಿಗೆ ಈ ಬೆಳವಣಿಗೆಯಿಂದ ಜೀವ ಬಂದಂತಾಯಿತು.

ಹಿಂಸೆಯೇ ಉದ್ದಿಮೆಯಾಗಿ ಕಂಡಿತು ಅವರಿಗೆ. ನಾಯಕನ ಚುನಾವಣೆಗೆ ಧಾರಾಳವಾಗಿ ಹಣ ಒದಗಿಸಿದರು. ಗೆದ್ದರು. ಒಟ್ಟು ಕತೆಯ ನೀತಿಯೆಂದರೆ, ಎಲ್ಲರೂ ಸೇರಿ, ತರಕಾರಿ ಹೆಚ್ಚುವಷ್ಟೇ ನಿರ್ಮಮತೆಯಿಂದ ಲಕ್ಷಲಕ್ಷ ಜನರ ಕೊಲೆಗೈದರು. ಸಿಕ್ಕಸಿಕ್ಕ ದೇಶಗಳ ಮೇಲೆ ದಂಡೆತ್ತಿ ಹೋದರು. ತಾವೂ ಸತ್ತರು ಇತರರನ್ನೂ ಸಾಯಿಸಿದರು.

ಜರ್ಮನಿ ಭಾರತವಲ್ಲ ನಿಜ, ಎಲ್ಲ ಪ್ರತಿಕ್ರಿಯಾವಾದಿಗಳೂ ಫ್ಯಾಸಿಸ್ಟರಾಗುವುದಿಲ್ಲ ನಿಜ, ಆದರೆ ಹಾಗಾಗಬಲ್ಲ ಅನುವಂಶೀಯತೆ ಎಲ್ಲಾ ಪ್ರತಿಕ್ರಿಯಾವಾದಿಗಳಲ್ಲಿ ಇರುತ್ತದೆ. ವಾತಾವರಣ ಕೂಡಿ ಬಂದಾಗ ಕಾಯಿಲೆ ಅಮರಿಕೊಳ್ಳುತ್ತದೆ. ಹುಲುಮಾನವರು ಆಗ ಜೀವ ಉಳಿಸಿಕೊಳ್ಳಬೇಕಾದ ಅಗತ್ಯ ಬೀಳುತ್ತದೆ. ಹೇಗೆ ಜೀವ ಉಳಿಸಿಕೊಳ್ಳುವುದು? ವೋಟು ಹಾಕಿದರೆ ಸಾಲದೇ?

ಸಾಲದು! ನೆರೆಹೊರಿಕೆಯನ್ನು, ಅವರೆಲ್ಲ ಸಣ್ಣತನಗಳ ನಡುವೆಯೂ ನೆರೆಹೊರಿಕೆಯಂತೆ ನಾವು ಕಾಣಬೇಕು. ಆರ್ಥಿಕವಾದ ಹಾಗೂ ಸಾಂಸ್ಕೃತಿಕವಾದ ಆತಂಕ ಮುತ್ತಿಕೊಂಡಾಗ ತಾಳ್ಮೆ ಕಳೆದುಕೊಳ್ಳಬಾರದು. ರಾಜನಾದವನು ರಾಜಧರ್ಮ ಪಾಲಿಸುವಂತೆ ಗಟ್ಟಿಯಾಗಿ ಸೂಚಿಸಬೇಕು.

ರಾಜಕಾರಣದಲ್ಲಿ ಅಹಿಂಸೆಯ ಅಸ್ತ್ರ ಮಾತ್ರವೇ ಬಳಕೆಯಾಗುವಂತೆ ಸೂಚಿಸಬೇಕು. ಮಾರುಕಟ್ಟೆ ಹಾಗೂ ಬಂಡವಾಳಗಳು ರಾಕ್ಷಸರೂಪಿಯಾಗಿ ಬೆಳೆಯದಂತೆ ನೋಡಿಕೊಳ್ಳಬೇಕು. ಇಂದಿನ ಸಂಕಟಗಳಿಗೆ ಎಲ್ಲಕ್ಕಿಂತ ಮಿಗಿಲಾಗಿ, ನಮ್ಮದೇ ಸುಲಭ ಬದುಕು ಕಾರಣ ಎಂಬ ಅರಿವು ನಮಗಿರಬೇಕು.

ಅರಿವಿನಿಂದ ಕೂಡಿದ ಜನಚಳವಳಿಗಳನ್ನು ಕಟ್ಟಬೇಕು ಹಾಗೂ ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಫ್ಯಾಸಿಸಮ್ಮನ್ನು ಮಣಿಸಲಿಕ್ಕೆ ಇದಲ್ಲದೆ ಮತ್ತಾವುದೇ ಸುಲಭ ಉಪಾಯವಿಲ್ಲ. ವೋಟು ಖಂಡಿತಾ ಉಪಾಯವಲ್ಲ. ಲೋಕಸಭೆಯೂ ಅಲ್ಲ ವಿಧಾನಸಭೆಯೂ ಅಲ್ಲ ಉಪಾಯ.

ಫ್ಯಾಸಿಸಮ್ಮಿಗೆ ರಾಜಕೀಯ ರೂಪು ಕೊಡಬಲ್ಲವರನ್ನು ಬಲಪಂಥೀಯರು ಎಂದು ಕರೆಯುವ ಪರಿಪಾಠವಿದೆ. ಬಲಪಂಥೀಯರಿಗೆ ಹಳತು ಪ್ರಿಯವಾದದ್ದು. ಹೇಗೆ ಎಡಪಂಥೀಯರಿಗೆ ಹೊಸತು ಪ್ರಿಯವೋ ಹಾಗೆ.

ಎಡಪಂಥೀಯರು ನಾಳೆಗಳ ಸೃಷ್ಟಿಗಾಗಿ ಹೆಣಗಿದರೆ ಬಲಪಂಥೀಯರು ನೆನ್ನೆಗಳ ಸೃಷ್ಟಿಗಾಗಿ ಹೆಣಗುತ್ತಿರುತ್ತಾರೆ. ಆದರೆ, ಎರಡೂ ಸೃಷ್ಟಿಗಳ ಭೂಮಿಕೆ ಇಂದೇ ಆಗಿರುತ್ತದೆ. ಇಂದಿನ ಭೂಮಿಕೆಯನ್ನು ಬಲವಂತದಿಂದ ಹಾಗೂ ಉಗ್ರವಿಧಾನಗಳಿಂದ ಬದಲಿಸಲು ಪ್ರಯತ್ನಿಸುವವರು, ಅವರು ಬಲಪಂಥೀಯರೇ ಇರಲಿ ಎಡಪಂಥೀಯರೇ ಇರಲಿ, ಅನಾಹುತಗಳನ್ನು ಸೃಷ್ಟಿಸುತ್ತಾರೆ.

ಬಲಪಂಥೀಯ ಪಕ್ಷಗಳ ಸಮರ್ಥಕರೆಂದರೆ ಯಾರು? ನಾವೇ. ನಾವು ಜಾಗರೂಕರಾಗಿಲ್ಲದಿದ್ದರೆ ಪ್ಯಾಸಿಸಮ್ಮಿನ ಸಮರ್ಥಕರು ಕೂಡಾ ನಾವೇ. ಈಚೆಗೆ ನಾನವರನ್ನು ನಮ್ಮೂರಿನ ಅರ್ಚಕನಲ್ಲಿ ಅಥವಾ ನಮ್ಮೂರಿನ ಎರಡನೇ ದರ್ಜೆಯ ಗುಮಾಸ್ತನಲ್ಲಿ ಕಾಣತೊಡಗಿದ್ದೇನೆ.

ಇವರ ಸಮಸ್ಯೆಯೆಂದರೆ, ಇವರಿಗೆ ಸುಲಭತೆಯೂ ಬೇಕು ಸಭ್ಯತೆಯೂ ಬೇಕು. ಧರ್ಮವೂ ಬೇಕು ಸಂಸ್ಕೃತಿಯೂ ಬೇಕು ದೇಶಪ್ರೇಮ ದೇಶಭಕ್ತಿ ಎಲ್ಲವೂ ಬೇಕು. ಅದರೆ ಬೇರೆ ಯಾರಾದರೂ ಅದನ್ನು ಉಳಿಸಬೇಕು.

ತಾನು ಅಷ್ಟಿಷ್ಟು ಧನಸಹಾಯ ಮಾಡಿಯೇನು, ಪಿಸುಮಾತಿನ ಸಹಾಯ ಮಾಡಿಯೇನು, ವೋಟಿನ ಸಹಾಯ ಮಾಡಿಯೇನು... ಎಂದು ಬಯಸುತ್ತಾರೆ ಇವರು. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ಎಲ್ಲೆಡೆಗಳಲ್ಲಿ ಬಲಪಂಥೀಯ ಪಕ್ಷಗಳನ್ನು ಚುನಾವಣೆಗಳಲ್ಲಿ ಗೆಲ್ಲಿಸತೊಡಗಿದ್ದಾರೆ ಇವರು.

ಬ್ರೆಕ್ಟನ ರೂಪಕವು ನಿಜಕ್ಕೂ ಅಸಾಧಾರಣವಾದದ್ದು. ಫ್ಯಾಸಿಸಂ ಎಂಬ ರಾಕ್ಷಸನ ಜೀವವು ಹಿಂದೂ ಧರ್ಮದಲ್ಲಾಗಲೀ ಇಸ್ಲಾಂ ಧರ್ಮದಲ್ಲಾಗಲೀ ಕ್ರೈಸ್ತ ಧರ್ಮದಲ್ಲಾಗಲೀ ಇಲ್ಲ ಎಂದು ಅದು ಸೂಚಿಸುತ್ತಿದೆ. ಅದಿರುವುದು ಮಾರುಕಟ್ಟೆಯ ಅನೀತಿಯಲ್ಲಿ ಎಂದು ಅದು ಸೂಚಿಸುತ್ತಿದೆ.

ನಾವೆಲ್ಲರೂ ಭಾವಿ ಫ್ಯಾಸಿಸ್ಟರು ಎಂದು ಅದು ಸೂಚಿಸುತ್ತಿದೆ. ನಾವು ಮಾರುಕಟ್ಟೆಯ ಜೀವ ಉಳಿಸುತ್ತೇವೆಯೇ ಅಥವಾ ಮಾನವೀಯತೆಯ ಜೀವ ಉಳಿಸುತ್ತೇವೆಯೇ ಎಂದು ಬೇಗ ನಿರ್ಧರಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry