6

ಕಲಬುರ್ಗಿ ಮಾಳಿಗೆಮನೆಯ ಮಾತುಕತೆ

Published:
Updated:
ಕಲಬುರ್ಗಿ ಮಾಳಿಗೆಮನೆಯ ಮಾತುಕತೆ

ಆ ಮೂವರು ‘ಅತಿಥಿ’ಗಳ ಮುಖದ ಮೇಲೆ ಭಯ ಎದ್ದು ಕಾಣುತ್ತಿತ್ತು.  ಎಷ್ಟೇ ಸಮಾಧಾನ ಹೇಳಿದರೂ ಭಯ ಕಡಿಮೆ ಆಗಿರಲಿಲ್ಲ. ಅವರದು ಒಂದೇ ಹಟ. ‘ನಾವು ಈ ಮನೆಯಲ್ಲಿ ಮಲಗುವುದಿಲ್ಲ’.ಅದು ಮದುವೆ ಮನೆ. ಹೆಚ್ಚು ಜನ ಇದ್ದರು. ಎಲ್ಲರೂ ಅವರ ಮನವೊಲಿಸಲು ಸೋತರು. ಬೇರೆ ದಾರಿ ಕಾಣಲಿಲ್ಲ. ಅವರನ್ನು ಆರ್‌ಸಿಸಿ ಕಟ್ಟಡದಲ್ಲಿದ್ದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಲಗಲು ವ್ಯವಸ್ಥೆ ಮಾಡಿದರು.ಅವರು ಹಟ ಹಿಡಿಯಲು ಕಾರಣವಿಷ್ಟೆ–ಆ ಮನೆಯ ಮಾಳಿಗೆಗೆ   ಸುಣ್ಣಕಲ್ಲಿನ ಚಪ್ಪಡಿಗಳನ್ನು ಹೊದಿಸಲಾಗಿತ್ತು. ಅಲ್ಲಿಯವರೆಗೆ ಈ ರೀತಿಯ ಮಾಳಿಗೆಮನೆಯನ್ನು ಅವರು ನೋಡಿರಲಿಲ್ಲ. ಮಲಗಿದ್ದಾಗ ಅವುಗಳು ತಮ್ಮ  ಮೇಲೆ ಬಿದ್ದುಬಿಟ್ಟರೆ ಎನ್ನುವ ಭಯ ಅವರನ್ನು ಆವರಿಸಿತ್ತು.ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕು ಪಸ್ತಾಪುರ ಗ್ರಾಮದ ಯುವಕ ಮೈಸೂರಿನಲ್ಲಿ ಶಿಕ್ಷಕನಾಗಿದ್ದ. ಈತನ ಮದುವೆಗಾಗಿ ಅವರು ಅಲ್ಲಿಂದ ಬಂದಿದ್ದರು.

‘ಅತಿಥಿ’ಗಳು ಮರುದಿನ ಊರು ಸುತ್ತಾಡುತ್ತಿದ್ದರು. ಅಲ್ಲಿ ಎಲ್ಲ ಮನೆಗಳ ಮಾಳಿಗೆಗೂ ಸುಣ್ಣಕಲ್ಲಿನ ಚಪ್ಪಡಿಯನ್ನೇ ಹಾಸಲಾಗಿತ್ತು.ಆಶ್ಚರ್ಯದಿಂದ ಅವುಗಳನ್ನೇ ದಿಟ್ಟಿಸಿ ನೋಡುತ್ತಿದ್ದರು. ಅವರೊಂದಿಗೆ ಇದ್ದ ವ್ಯಕ್ತಿ ‘ನೂರಾರು ವರ್ಷಗಳಿಂದ ನಮ್ಮ ಪೂರ್ವಿಕರು ಇದೇ ರೀತಿಯ ಮಾಳಿಗೆ ಮನೆಗಳಲ್ಲಿ ಬಾಳಿ ಬದುಕಿದ್ದರು. ನಾವೂ ಬದುಕುತ್ತಿದ್ದೇವೆ’ ಎಂದು ಮುಗ್ಧವಾಗಿಯೇ ಹೇಳಿದ್ದರು.ಒಂದು ಪ್ರದೇಶದಲ್ಲಿ ನಿರ್ಮಾಣಗೊಳ್ಳುವ ಮನೆಗಳು ಅಲ್ಲಿನ ವಾತಾವರಣ ಮತ್ತು ಸ್ಥಳೀಯವಾಗಿ ಸಿಗುವ ವಸ್ತುಗಳನ್ನು  ಅವಲಂಬಿಸಿರುತ್ತವೆ. ಆದ್ದರಿಂದ ಹಳೇ ಮೈಸೂರು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿನ ಮನೆಗಳು ವಿಭಿನ್ನ ವಿನ್ಯಾಸದಲ್ಲಿವೆ. ಅವರಿಗೆ ಈ ಸಹಜ ತಿಳಿವಳಿಕೆಯೂ ಇರಲಿಲ್ಲ.ಕರ್ನಾಟಕದಲ್ಲಿ ಹೆಚ್ಚು ಸುಣ್ಣಕಲ್ಲು ಕಲಬುರ್ಗಿ ಜಿಲ್ಲೆಯಲ್ಲಿ  ಸಿಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಸುಣ್ಣಕಲ್ಲಿನ ಮನೆಗಳು ಹೇರಳವಾಗಿವೆ.  ಹೊರಗಿನಿಂದ ಬಂದವರಿಗೆ ಅಚ್ಚರಿ, ಕುತೂಹಲ ಮತ್ತು ಭಯವನ್ನು ಹುಟ್ಟಿಸುತ್ತವೆ. ಆದರೆ ಸ್ಥಳೀಯರು ಇಂಥ ಮನೆಗಳನ್ನು ನಿರ್ಮಿಸಿಕೊಳ್ಳುವುದನ್ನು ಪ್ರಕೃತಿಯೇ ಕಲಿಸಿಕೊಟ್ಟಿದೆ.ಸುಣ್ಣಕಲ್ಲು ಬಳಸಿ ಮನೆಗಳನ್ನು ನಿರ್ಮಿಸುವುದು ಎಂದಿನಿಂದ ರೂಢಿಗೆ ಬಂದಿತು ಎನ್ನುವುದನ್ನು ಹುಡುಕುತ್ತಾ ಹೋದರೆ ಅದು ಹಲವು ನೂರು ವರ್ಷಗಳ ಇತಿಹಾಸಕ್ಕೆ ಕರೆದೊಯ್ಯುತ್ತದೆ.ಕಲ್ಯಾಣ ಚಾಳುಕ್ಯರು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಸಮೀಪವಿರುವ  ‘ನಾಗಾವಿ ಗ್ರಾಮ’ವನ್ನು ಸುಣ್ಣಕಲ್ಲಿನಿಂದಲೇ ನಿರ್ಮಿಸಿದ್ದರು. ನಾನಾ ಕಾರಣಗಳಿಂದ ಧ್ವಂಸಗೊಂಡಿರುವ ‘ನಾಗಾವಿ ಗ್ರಾಮ’ದಲ್ಲಿ ಇಡುವ ಪ್ರತಿ ಹೆಜ್ಜೆಯೂ ಸುಣ್ಣಕಲ್ಲಿನ ಮೇಲೆಯೇ ಇರುತ್ತದೆ. ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ರಾಷ್ಟ್ರಕೂಟರು ಕೋಟೆ, ದೇವಸ್ಥಾನಗಳನ್ನು ಸುಣ್ಣಕಲ್ಲು ಬಳಸಿಯೇ  ನಿರ್ಮಿಸಿದ್ದಾರೆ.‘ಇಲ್ಲಿ ಸುಣ್ಣಕಲ್ಲು ಹೆಚ್ಚಾಗಿ ಸಿಗಲು ಕಾರಣವೇನು’ ಎನ್ನುವ ಪ್ರಶ್ನೆಯನ್ನು ಕಲಬುರ್ಗಿಯ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಸಿಮೆಂಟ್‌ ಮತ್ತು ಸೆರಾಮಿಕ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾಬುರಾವ ಶೇರಿಕಾರ ಅವರ ಮುಂದಿಟ್ಟಾಗ ‘ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿರುವ ನೀರು ಒಂದೇ ಕಡೆ ಸಂಗ್ರಹವಾದಾಗ ಅದು ಆವಿಯಾಗಿ ಭೂಮಿ ಒಳಗಡೆ ವಿವಿಧ ಕ್ರಿಯೆಗಳ ಮೂಲಕ ಸುಣ್ಣಕಲ್ಲು ಉತ್ಪತ್ತಿಯಾಗುತ್ತದೆ.ಈ ಭಾಗದ ಸುಣ್ಣಕಲ್ಲಿಗೆ 600 ಮಿಲಿಯನ್‌ ವರ್ಷಗಳ ಚರಿತ್ರೆಯಿದೆ. ನಮ್ಮಲ್ಲಿ ಭೀಮಾ ನದಿ ಪ್ರದೇಶದಲ್ಲಿ ಹೆಚ್ಚಾಗಿ ಸುಣ್ಣಕಲ್ಲು ಲಭ್ಯವಾಗುತ್ತದೆ’ ಎಂದು ವಿವರಣೆ ನೀಡಿದರು.‘ಮನೆ ಯಾವಾಗಲೂ ಹೊರಗಿನ ಸಂಗತಿಗಳಿಂದ ರಕ್ಷಣೆ ಒದಗಿಸಬೇಕು. ಅಂದರೆ, ಹೊರಗಿನ ವಾತಾವರಣ ತಂಪಾಗಿದ್ದಾಗ ಒಳಗೆ ಬೆಚ್ಚಗೂ, ಹೊರಗಿನ ವಾತಾವರಣ ಬಿಸಿ ಇದ್ದಾಗ ಒಳಗಿನ ವಾತಾವರಣ ತಂಪಾಗಿಯೂ ಇರಬೇಕು. ಹೀಗೆ ಮನೆಯನ್ನು ವಿನ್ಯಾಸಗೊಳಿಸುವುದು ವಾಸ್ತುಶಿಲ್ಪ’ ಎಂದು ಪ್ರಖ್ಯಾತ ವಾಸ್ತುಶಿಲ್ಪಿಯೊಬ್ಬರು ಹೇಳುತ್ತಾರೆ.ಇದ್ಯಾವುದನ್ನೂ ಶಾಸ್ತ್ರೀಯವಾಗಿ ಅಧ್ಯಯನ ಮಾಡದ ನಮ್ಮ ‘ದೇಸಿ ವಾಸ್ತುಶಿಲ್ಪಿಗಳು’ ಈ ಭಾಗದಲ್ಲಿ ಹೀಗೆಯೇ ಮನೆಯನ್ನು ನಿರ್ಮಿಸಿದ್ದಾರೆ!

ಉತ್ತರ ಕರ್ನಾಟಕದ ಜನರ ಮುಖ್ಯ ಆಹಾರ ಜೋಳದರೊಟ್ಟಿ, ಹಳೇ ಮೈಸೂರಿನವರದು ಅನ್ನ ಮತ್ತು ರಾಗಿಮುದ್ದೆ. ಹವಾಗುಣ, ವಸ್ತುಗಳ ಲಭ್ಯತೆ, ಆಹಾರ ಬೆಳೆ ಪದ್ಧತಿಗಳೆಲ್ಲವೂ ಆಯಾ ಪ್ರದೇಶದ ಜನರ ಬದುಕನ್ನು ಹೀಗೆ ಸಹಜ ರೂಪಿಸಿವೆ.ಕಾಲವನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ಈಗ ಹಳ್ಳಿಗಳಲ್ಲಿ ‘ಮಾಳಿಗೆಮನೆ’ಗಳು ಕಡಿಮೆ ಆಗುತ್ತಿವೆ. ಗಟ್ಟಿಯಾದ ಸುಣ್ಣಕಲ್ಲನ್ನು ಪಾಯ ಮತ್ತು ಗೋಡೆಗೂ, ಹಗುರ ಪದರವನ್ನು ಮಾಳಿಗೆಗೂ, ನುಣುಪಾದ ಕಲ್ಲುಗಳನ್ನು ನೆಲಹಾಸಾಗಿ ಬಳಕೆ ಮಾಡಲಾಗುತ್ತಿದೆ.‘ನಾವ್‌ ಗರೀಬರ ಇದ್ದೀವಿ. ಛತ್ (ಆರ್‌ಸಿಸಿ) ಹಾಕ್ಸೊವಷ್ಟು ರೊಕ್ಕಾ ಇಲ್ಲ. ಮನಿ ಹ್ಯಾಂಗ್‌ ಆದ್ರೂ ಇರಲಿ, ತಲಿ ಮ್ಯಾಗ್‌ ಒಂದ್‌ ನೆಲಿ ಐತಿ. ಇಷ್ಟ ನಮಗ ಸಾಕ್ರಿ’ ಎಂದು ಚಿತ್ತಾಪುರದ ಚಂದ್ರಕಲಾ ಹಡಪದ  ಹೇಳುತ್ತಾರೆ.ವಿಶ್ವ ವಿಖ್ಯಾತ ವಾಸ್ತುಶಿಲ್ಪಿ ನಾರ್ಮನ್‌ ಫೋಸ್ಟರ್‌ ಅವರು ‘ಮನೆ ಎನ್ನುವುದು ಮೌಲ್ಯದ ಅಭಿವ್ಯಕ್ತಿ’ ಎನ್ನುತ್ತಾರೆ. ಮನೆ ಎನ್ನುವುದು ಶ್ರೀಮಂತಿಕೆಯ ಪ್ರದರ್ಶನವಲ್ಲ. ಸಂಸ್ಕೃತಿ ಮತ್ತು ಮೌಲ್ಯವನ್ನು ರೂಪಿಸುವ ತಾಣ.‘ಮನೆ ಎಂದರೆ ನಾವೆಲ್ಲ ಕಟ್ಟಡವೆಂದು ತಿಳಿಯುತ್ತೇವೆ. ಮನೆಯೆಂಬುದು ಮನಸ್ಸು, ದೇಹ, ಆತ್ಮಗಳನ್ನು ರಕ್ಷಿಸುವ, ರೂಪಿಸುವ ಜಾಗ’ ಎಂದು ಲೇಖಕ ಪಿ.ಲಂಕೇಶ್‌ ಅವರು ತಮ್ಮ ‘ಟೀಕೆ–ಟಿಪ್ಪಣಿ’ಯಲ್ಲಿ ‘ಅರ್ಥಪೂರ್ಣ ಮನೆ’ ಎನ್ನುವ ಲೇಖನದಲ್ಲಿ ಬರೆದಿದ್ದು ಥಟ್ಟನೆ ನೆನಪಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry