7

ಸಾವಿನ ಸಮ್ಮುಖದಲ್ಲಿ ಬದುಕಿನ ಅರಿವು–ಆಯ್ಕೆ

ಲಕ್ಷ್ಮೀಶ ತೋಳ್ಪಾಡಿ
Published:
Updated:
ಸಾವಿನ ಸಮ್ಮುಖದಲ್ಲಿ ಬದುಕಿನ ಅರಿವು–ಆಯ್ಕೆ

ಯಕ್ಷಪ್ರಶ್ನೆಯ ಉಲ್ಲೇಖ ಹಿಂದೆ ಬಂದಿತ್ತು. ವಿಶೇಷವೆಂದರೆ – ‘ಯಕ್ಷ’ನು ಕೇಳಿದ ಪ್ರಶ್ನೆಗಳಿಗೆ ಆಳದ ಸಮಾಧಾನಗಳನ್ನು ಯುಧಿಷ್ಠಿರನು ಕೊಟ್ಟಿದ್ದರೂ, ಯಕ್ಷನಿಗೇ ಅದರಿಂದ ತೃಪ್ತಿಯಾಗಿದ್ದರೂ, ಹಾಗೆಂದು ಮಹಾಭಾರತವೇ ಹೇಳುತ್ತದಾದರೂ, ಸಮಾಜದ ನಮ್ಮ ಸಾಮಾನ್ಯ ತಿಳಿವಳಿಕೆಯಲ್ಲಿ ‘ಯಕ್ಷ–ಪ್ರಶ್ನೆ’ ಎಂದರೆ ಅದು ಉತ್ತರವಿಲ್ಲದ ಪ್ರಶ್ನೆ ಎನ್ನುವ ಭಾವನೆಯೇ ಇದೆ. ಯಕ್ಷನಿಗೇ ತೃಪ್ತಿಯಾದರೂ ಜನಕ್ಕೆ ತೃಪ್ತಿಯಾಗಿಲ್ಲ! ಇಲ್ಲಿನ ಉತ್ತರಗಳನ್ನು ಒಪ್ಪಿಯೂ ಬೇರೆ ಉತ್ತರಗಳೂ ಸಾಧ್ಯವಿರಬಹುದಲ್ಲವೆ? ಕಾಲ ಕಾಲಕ್ಕೆ ಪ್ರಶ್ನೆ–ಉತ್ತರಗಳ ವಿನ್ಯಾಸ; ಮೊನಚು; ಅರ್ಥದ ಛಾಯೆಗಳೂ ಬದಲಾಗಬಹುದಲ್ಲವೆ?ಅಲ್ಲದೆ ಪ್ರಶ್ನೆಗೆ ಉತ್ತರವಿಲ್ಲ ಎನ್ನುವುದೇ ಒಂದು ಆಕರ್ಷಣೆ ಕೂಡ! ಸಮಾಜದ ಈ ತಿಳಿವಳಿಕೆ ‘ಮಹಾಭಾರತ’ದ ಒಳಗಿನ ತಿಳಿವಳಿಕೆಗೆ ಸಂವಾದಿಯಾಗಿಯೇ ಇದೆ. ಇದೇ ಒಂದು ಆಶ್ಚರ್ಯ. ‘ಮಹಾಭಾರತ’ವು  ದಿಗ್‌ಭ್ರಮೆಯ ಒಂದು ಅನುಭವವನ್ನು ಕೊಡುತ್ತದೆ. ಬದುಕನ್ನು ಕಟ್ಟುವ ಸಂಭ್ರಮದ ಅನುಭವಕ್ಕಿಂತ, ಕಟ್ಟಿದ್ದೆಲ್ಲವೂ ಮುರಿದುಬಿದ್ದು; ಆ ಅವಶೇಷಗಳ ನಡುವೆ, ಏನಿದರೆಲ್ಲದರ ಅರ್ಥ ಎಂದು ಕೈ ಎತ್ತಿ ಕೂಗಿಕೊಳ್ಳುವ ಅನುಭವ! ಅವಶೇಷಗಳ ತುಂಡು–ತುಣುಕುಗಳನ್ನು ದಿಟ್ಟಿಸಿ ನೋಡಿದರೆ ತಾವು ಎಲ್ಲಿ ಮುರಿದುಬಿದ್ದೆವು ಎನ್ನುವುದರ ಗುರುತು!ಆ ಮುರಿದ ಸಂದು–ಗೊಂದಿಗಳು ಕಂಡಾಗ ನಮ್ಮನ್ನು ಮರಳಿ ಜೋಡಿಸು ಎಂದು ಅವೇ ಕೂಗಿ ಕರೆದಂತೆ! ಜೋಡಿಸುವ ತವಕ ಉಂಟಾದರೂ ಮುರಿದದ್ದನ್ನು ಜೋಡಿಸಿದರೆ ಅದು ಎಷ್ಟುಕಾಲ ಅಲ್ಲಿ ನಿಂತೀತು ಎನ್ನುವ ನಿಟ್ಟುಸಿರು. ಅಥವಾ ಮುರಿದದ್ದನ್ನಲ್ಲದೆ ಮತ್ತಾವುದನ್ನು ಕಟ್ಟಬೇಕು? ಕಟ್ಟುವುದು ಎನ್ನುವುದೇ ಮುರಿದದ್ದರ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಪ್ರೇರಣೆಯಲ್ಲವೆ ಎಂಬ ಭಾವ – ಇವೆಲ್ಲ ಉಂಟಾಗುವುವು. ಉತ್ತರವಿಲ್ಲ ಎಂಬ ತಿಳಿವಳಿಕೆ ಖಂಡಿತ ತಪ್ಪು ತಿಳಿವಳಿಕೆಯಲ್ಲ. ಅದು ಪ್ರಶ್ನೆ–ಉತ್ತರಗಳ ಬೌದ್ಧಿಕ ವಿನ್ಯಾಸದ ಚೌಕಟ್ಟನ್ನು ಮೀರಿ ಇರುವ ಬದುಕಿನ ಅನುಭವವನ್ನು ಕಂಡುಕೊಳ್ಳುವ ಬಗೆಯೂ ಆಗಿರಬಹುದು.ಇಲ್ಲೊಂದು ಸೋಜಿಗವನ್ನು ನೋಡಿ. ಯಕ್ಷನ ಪ್ರಶ್ನೆಗಳಿಗೆ ಉತ್ತರಿಸುವವನು ಧರ್ಮಜ – ಯುಧಿಷ್ಠಿರ. ಸಾಮಾನ್ಯವಾಗಿ ಪಾಂಡವರನ್ನು ಕಾಡುವ ಪ್ರಶ್ನೆಗಳಿಗೆ ಉತ್ತರಿಸುವವನು, ಉತ್ತರಿಸಬಲ್ಲವನು ಧರ್ಮಜನೇ. ಇದೇ ವನಪರ್ವದಲ್ಲಿ ಭೀಮಸೇನನನ್ನು ಹೆಬ್ಬಾವಿನ ರೂಪದ ಶಾಪಗ್ರಸ್ತನ ನಹುಷ ಸಿಂಬಿಸುತ್ತಿ ತನ್ನೊಳಗೆ ಹಿಡಿದಿಟ್ಟಾಗ, ನಹುಷನ ಪ್ರಶ್ನೆಗಳಿಗೆ ಉತ್ತರಿಸಿ ಭೀಮನನ್ನು ಬಿಡಿಸಿಕೊಂಡು, ನಹುಷನನ್ನೂ ಅವನ ಶಾಪದಿಂದ ಬಿಡಿಸಿದವನು – ಯುಧಿಷ್ಠಿರನೇ. ಸ್ವಯಂ ಅಜಗರ ಬಂಧನಕ್ಕೆ ಒಳಗಾದ ಭೀಮನಲ್ಲ. ಇಂಥ, ಸಮಾಧಾನದಿಂದ ಎಲ್ಲದಕ್ಕೂ ಉತ್ತರಿಸಬಲ್ಲ ಧರ್ಮಜನಿಗೇ ಉತ್ತರವಿಲ್ಲದಂತೆ ಕಾಣುವ ಪ್ರಶ್ನೆಗಳು – ಮಹಾಭಾರತದುದ್ದಕ್ಕೆ ಕಾಡುವವು!ಅಲ್ಲದೆ ಈ ಕಾರಣದಿಂದಲೇ ಅವನಷ್ಟು ಸಮಾಧಾನವಾಗಿ ಉಪದೇಶಗಳನ್ನು ಕೇಳಿದವನು – ಅದೂ ಮಹಾ ಭಾರತದುದ್ದಕ್ಕೆ – ಬೇರೆ ಯಾರೂ ಇಲ್ಲ. ಇದೇ ಒಂದು ಸೋಜಿಗ. ಮೇಲ್ನೋಟಕ್ಕೆ – ಉಪಶಾಂತ, ಬಹು ಸಮಾಧಾನಿ, ಎಲ್ಲರ ಕಾಳಜಿ ಮಾಡುವ ಪಾಂಡವ ಜ್ಯೇಷ್ಠನ ಮನದೊಳಗೆ ಬದುಕಿನ ಸಾರ್ಥಕತೆ–ನಿರರ್ಥಕತೆಗಳ ಬಗೆಗೆ, ಹುಟ್ಟು–ಸಾವುಗಳ ಬಗೆಗೆ ಎಂಥ ಜಿಜ್ಞಾಸೆಯೆ ಬೆಂಕಿ ಉರಿಯುತ್ತಿತ್ತೆಂದರೆ, ಇವನು ಸಾವಿನ ದೇವತೆಯಾದ ಯಮಧರ್ಮನ ನಿಯೋಗದಿಂದ ಕುಂತೀದೇವಿಯಲ್ಲಿ ಜನಿಸಿದ್ದೇ ಇದಕ್ಕೆ  ಕಾರಣವಿರಬೇಕು ಎಂದು ಊಹಿಸುವಂತೆ ಮಾಡುತ್ತಾರೆ ಕೃತಿಕಾರರಾದ ವ್ಯಾಸರು! ಜೀವನವೆಂದರೇ ಜೀವನ್ಮರಣಪ್ರಶ್ನೆಯಾಗಿದೆ ಎಂದು ತನ್ನ ಸಂವೇದನೆಯಿಂದಲೇ ತಿಳಿದವನು ಈ ಯಮಜ.ಸಾವಿನ ಕಣ್ಣಿನಿಂದ ಬದುಕನ್ನು ನೋಡಿದರೆ ಉಂಟಾಗುವ ಜೀವನಪ್ರೀತಿಯೇ ಬೇರೆ ಬಗೆಯದು! ‘ಅದರ ಬಗೆ ಬೇರೆ!’ ಒಂದೆಡೆ ಹುಟ್ಟಿನ ಒಟ್ಟಿಗೇ ಸಂದುಗಡಿಯದೆ ಒಡನಾಡುವ; ಅನಿವಾರ್ಯವಾದ ಸಾವನ್ನು – ಒಪ್ಪಲಾಗದೆ ದೂರವಿಡುವ, ಸಾವಿನ ಮಾತೇ ಅಮಂಗಲವೆನ್ನುವ ಬದುಕಿನ ದಾಹ. ಇನ್ನೊಂದೆಡೆ ಇಂಥ ಬದುಕಿಗಾಗಿಯೇ, ಯುದ್ಧವನ್ನು ಸೃಷ್ಟಿಸುವ; ನೋಡಿದ್ದು; ಕೇಳಿದ್ದು; ಮುಟ್ಟಿದ್ದು, ಮೂಸಿದ್ದು ಯುದ್ಧಕಾರಣವಾಗಿ, ಯುದ್ಧವೇ ಬಿಡುಗಡೆಯ ದಾರಿ ಏನೋ ಎಂಬಂತೆ, ಎಲ್ಲೆಡೆ ರಣರಂಗವನ್ನು ಸೃಷ್ಟಿಸುವ, ಯುದ್ಧವಿದ್ಯೆಯನ್ನೊಂದು ಕಲೆಯ ಮಟ್ಟಕ್ಕೆ ಮುಟ್ಟಿಸುವ – ಉನ್ಮತ್ತ ಕ್ಷತ್ರಿಯರು! ಇವೆರಡರ ನಡುವೆ, ‘ಯಮಧರ್ಮ’ನ ಈ ಮಗ ಪಟ್ಟ ಪಾಡು ಸಾವಿಗೇ ಪ್ರೀತಿ ಎನ್ನಬೇಕು. ಧರ್ಮಜನ ದಿಗ್‌ಭ್ರಮೆಯ ಆಳದ ಚಿತ್ರಣವೇ ಮಹಾಭಾರತವೆನ್ನಬಹುದು.ಯಕ್ಷನ ಪ್ರಶ್ನೆಗಳಿಗೆಲ್ಲ ತಕ್ಕ ಸಮಾಧಾನವನ್ನು ಕೆಡೆದುಬಿದ್ದ ತಮ್ಮಂದಿರ ಶರೀರಗಳ ನಡುವೆ ನಿರುದ್ವಿಗ್ನನಾಗಿ ನಿಂತು ಯುಧಿಷ್ಠಿರ ಹೇಳಿದನಲ್ಲ – ಯಕ್ಷನಿಗೆ ಪರಮ ಸಂತೃಪ್ತಿಯಾಯಿತು. ತಮ್ಮಂದಿರು ನಾಲ್ವರಲ್ಲಿ ಯಾರಾದರೊಬ್ಬರನ್ನು ಆಯ್ಕೆಮಾಡು; ಅವನನ್ನು ಬದುಕಿಸುವೆನೆನ್ನುತ್ತಾನೆ – ಯಕ್ಷ. ಈಗ ಧರ್ಮಜನಿಗೆ ಆಯ್ಕೆಯ ಸಂಕಟ ಎದುರಾಯಿತು. ಸಂಕಟವಿಲ್ಲದೆ ಯಾವ ಆಯ್ಕೆಯೂ ಇಲ್ಲವೇನೋ. ಆಯ್ಕೆಯೇ ಒಂದು ಸಂಕಟ! ‘ಧರ್ಮ’ದ ಜತೆಗೆ ಸದಾ ಇರುವ ಪದವಿದು – ಧರ್ಮ–ಸಂಕಟ. ಸಂಕಟ ಪಡದೆ ‘ಧರ್ಮ’ ಕಾಣದೇನೋ! ಧರ್ಮಜನಿಗೆ ಎದೆ ಕಲಕಿಹೋಗಿತ್ತು. ತಮ್ಮಂದಿರನ್ನು ಕಳೆದುಕೊಂಡು ತಾನಿನ್ನು ಬದುಕಿರುವುದೇಕೆ ಎಂಬ ಭಾವ ತೀವ್ರವಾಗಿ ಕಾಡುತ್ತಿತ್ತು. ದೇಹತ್ಯಾಗ ಮಾಡುವುದೇ ಸರಿ ಎಂದು ನಿಶ್ಚಯಿಸಿದ್ದ.‘ದೇಹತ್ಯಾಗೋದ್ಯತಃ’ – ಎನ್ನುತ್ತಾನೆ ಕ್ಷೇಮೇಂದ್ರ ತನ್ನ ‘ಭಾರತಮಂಜರಿ’ಯಲ್ಲಿ. ಈ ಭಾವ ವ್ಯಾಸರಲ್ಲಿ ಅಸ್ಫುಟವಾಗಿದೆ. ಪ್ರಾಯಃ ಮಹಾಭಾರತದ ಕಾಶ್ಮೀರಪಾಠದಲ್ಲಿ ಇದ್ದಿತ್ತೇನೋ? ಅಥವಾ ಇದು ಕ್ಷೇಮೇಂದ್ರನ ಕೊಡುಗೆಯೇ ಇರಬಹುದು. ಕುಮಾರವ್ಯಾಸನ ಮನೋಧರ್ಮವನ್ನು ನೋಡಿದರೆ ಅವನು ಈ ಭಾವವನ್ನು ಹಿಡಿಯಬಹುದಾಗಿತ್ತು; ಮಿಡಿಯಬಹುದಾಗಿತ್ತು. ಅವನೂ ಹೇಳಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದರೆ ಯಕ್ಷನ ಪ್ರಶ್ನೆಗಳಿಗೆ, ದೇಹತ್ಯಾಗಕ್ಕೆ ಉದ್ಯುಕ್ತನಾದ ಧರ್ಮಜನು ಉತ್ತರಿಸಿದ್ದೇ ಒಂದು ಆಶ್ಚರ್ಯವೆಂಬಂತೆ ಕಾಣುವುದು. ಪ್ರಾಯಃ ಬದುಕುವ ಆಸೆಯನ್ನು ಪೂರ್ತಿಯಾಗಿ ಬಿಟ್ಟುಕೊಟ್ಟ ಹೊತ್ತಿನಲ್ಲಿಯೇ ಪ್ರಕಟಗೊಳ್ಳುವ ಬದುಕಿನ ಉಜ್ಜ್ವಲತೆಯೇ ಯಕ್ಷನಿಗೆ ಉತ್ತರಿಸುವ ಶಕ್ತಿಯನ್ನೂ ಅರಿವನ್ನೂ ಧರ್ಮಜನಿಗೆ ಒದಗಿಸಿರಬೇಕು! ಬದುಕಿನ ವಿಸ್ಮಯಗಳಿಗೆ ಕೊನೆಯುಂಟೆ?ವಿಸ್ಮಯವನ್ನು ಕುರಿತೇ ಯಕ್ಷನು ಧರ್ಮಜನಿಗೆ ಒಂದು ಪ್ರಶ್ನೆಯನ್ನು ಕೇಳಿದ್ದ: ‘ಕಿಮಾಶ್ಚರ್ಯಂ?’ ಈ ಬದುಕಿನಲ್ಲಿ ನಿಜವಾದ ಆಶ್ಚರ್ಯ ಯಾವುದು? ಈ ಪ್ರಶ್ನೆಗೆ ಧರ್ಮಜ, ಆಳವಾದ, ಮನಕರಗಿಸುವ ಉತ್ತರವನ್ನು ಕೊಟ್ಟಿದ್ದ:

‘ಅಹನ್ಯಹನಿ ಭೂತಾನಿ ಗಚ್ಛಂತೀಹ ಯಮಾಲಯಂ

ಶೇಷಾಃ ಸ್ಥಾವರಮಿಚ್ಛಂತಿ ಕಿಮಾಶ್ಚರ್ಯಮತಃ ಪರಂ’

ಕಣ್ಣ ಮುಂದೆ ಸಾವಿನ ಮೆರವಣಿಗೆ ಅನುದಿನವೆಂಬಂತೆ ನಡೆಯುತ್ತಿದೆ. ಇದನ್ನು ನೋಡುತ್ತಲೇ ಇದೆ ಲೋಕ. ನೋಡಿಯೂ ತಮಗೆ ಮಾತ್ರ ಸಾವಿಲ್ಲವೆಂಬಂತೆ ಇದಾರಲ್ಲ – ಜನ. ಇದಕ್ಕಿಂತ ದೊಡ್ಡ ಆಶ್ಚರ್ಯ – ಆಘಾತಕಾರಿಯಾದ ಆಶ್ಚರ್ಯ – ಬೇರಾವುದಿರಬಲ್ಲುದು? ಬದುಕೆಂದರೆ ವೇಷಾಂತರದಲ್ಲಿರುವ ಸಾವು! ವೇಷಾಂತರದಲ್ಲಿರುವುದನ್ನು ತಿಳಿಯುವುದೇ ಅರಿವಿಗೆ ಒಂದು ಸವಾಲೂ ಹೌದು; ಒಂದು ರೋಮಾಂಚನವೂ ಹೌದು. ಆದರೆ ‘ಜೀವನ–ಪ್ರೀತಿ’ ಎಂಬ ಹೆಸರಿನಲ್ಲಿದ್ದ ‘ಸಾವಿನ ಭೀತಿ’ಯಿಂದ (ಇದೂ ಒಂದು ವೇಷಾಂತರವೇ!) ಜನ ಇದನ್ನು ತಿಳಿಯಲಾರದವರಾಗಿದ್ದಾರೆ.ಇದು ಯಮಧರ್ಮನ ಮಗ ಮಾತ್ರ ಕೊಡಬಹುದಾದ ಉತ್ತರವೆಂಬಂತಿದೆ. ಅಲ್ಲದೆ ಈ ಉತ್ತರ, ಧರ್ಮಜ ತನ್ನ ಮುಂದೆ ಯಕ್ಷಸರೋವರದ ಬಳಿ ನಡೆದಿರುವುದನ್ನು ವ್ಯಾಖ್ಯಾನಿಸಿದಂತಿದೆ. ಕಣ್ಣಮುಂದೆ ತಮ್ಮಂದಿರು ಕೆಡೆದುಬಿದ್ದಿದ್ದರೂ ಅಣ್ಣಂದಿರು ಗಮನಿಸಲಿಲ್ಲವಲ್ಲ – ಗಾಬರಿಗೊಂಡು ಹಿರಿಯಣ್ಣ ಧರ್ಮರಾಜನಲ್ಲಿಗೆ ಬಂದು ಹೇಳಲೂ ಇಲ್ಲವಲ್ಲ – ತನ್ನ ಈ ಅನುಭವವನ್ನೇ ಧರ್ಮಜ ನಿರೂಪಿಸುತ್ತಿರುವುದು. ತನ್ನೆದುರು ನಡೆದ ಘಟನೆ ಈ  ಅರ್ಥದಲ್ಲಿ ಇತಿಹಾಸದ ಸದ್ಯೋಮುಖ. ಅಂದರೆ ಈಗ ಚಲಿಸುತ್ತಿರುವ ಇತಿಹಾಸ. ಮತ್ತು ಈ ಉತ್ತರ, ಇತಿಹಾಸವನ್ನು ತಾನು ತನ್ನೊಳಗೆ ಕಂಡ ಬಗೆ ಕೂಡ. ಅಂದರೆ ತನ್ನ ಅಂತರನುಭವ. ಇತಿಹಾಸವನ್ನು ಒಳಗಿನಿಂದ ನೋಡಿದ್ದು; ಒಳಗಿನವನಾಗಿ ನೋಡಿದ್ದು.ಹೀಗೆ ನೋಡುವ ಧರ್ಮಜ ತಮ್ಮಂದಿರು ಅಳಿದ ಮೇಲೆ ತಾನುಳಿಯಬೇಕಿಲ್ಲ ಎಂದುಕೊಂಡಿದ್ದರೆ ಆಶ್ಚರ್ಯವಿಲ್ಲ. ಇದನ್ನೇ ಕ್ಷೇಮೇಂದ್ರ ಹೇಳಿದ್ದು. ಧರ್ಮಜನ ಈ ಮಾತು ಮೊದಲ ಬಾರಿಗೆ ಸಾವನ್ನು ಕಂಡು ತೀವ್ರವಾಗಿ ವಿಚಲಿತನಾದ ಬುದ್ಧನ ಸ್ಪಂದನದ ಮುಂಗಾಣ್ಕೆಯಂತಿದೆ. ಕುಮಾರವ್ಯಾಸ ಯಕ್ಷಪ್ರಶ್ನೆಯ ಈ ಭಾಗದಲ್ಲಿ ಪ್ರಶ್ನೋತ್ತರಗಳಲ್ಲಿ ತನಗೆ ಮುಖ್ಯವೆಂದು ಕಂಡ ಕೆಲವನ್ನು ನಿರೂಪಿಸುತ್ತಾನಾದರೂ ಅದೇಕೋ ಇಷ್ಟು ಮಹತ್ತ್ವದ ಈ ಉತ್ತರವನ್ನು ಕೈಬಿಟ್ಟಿದ್ದಾನೆ. ವ್ಯಾಸಕುವರ ಇದನ್ನು ಕೈಬಿಡಬಾರದಿತ್ತೆನಿಸುತ್ತದೆ. ಪಂಪ, ಯಕ್ಷಪ್ರಶ್ನೆಯ ವಿವರಗಳಿಗೇ ಹೋಗುವುದಿಲ್ಲ. ಅವನ ಕಾವ್ಯೋದ್ದೇಶವೇ ಬೇರೆ ಇದೆ. ಕ್ಷೇಮೇಂದ್ರನೂ ಈ ಉತ್ತರವನ್ನು ಪ್ರಸ್ತಾವಿಸುವುದಿಲ್ಲ.ಯಾರನ್ನು ಬದುಕಿಸುವಂತೆ ಕೇಳಿಕೊಳ್ಳಲಿ ಎಂದು ಆಯ್ಕೆಯ ಸಂಕಟ ಎದುರಾದಾಗ, ಯುಧಿಷ್ಠಿರ ಗತಚೇತನರಂತೆ ಬಿದ್ದಿದ್ದ ತನ್ನ ಈ ನಾಲ್ವರು ಒಡಹುಟ್ಟುಗಳನ್ನು ಮತ್ತೊಮ್ಮೆ ನೋಡಿದ. ಮನಸ್ಸಿನಲ್ಲೇ ಏನನ್ನೋ ನಿರ್ಧರಿಸಿದ. ತಾನು ನೀರು ತಾರೆಂದು ಮೊದಲು ಕಳುಹಿಸಿದ ನಕುಲ ಬದುಕಿ ಬರಲಿ ಎಂದು ಯಕ್ಷನನ್ನು ಕೇಳಿಕೊಂಡ. ‘ನಕುಲೋ ಯಕ್ಷ ಜೀವತು’, ‘ಅಸುವನಿತ್ತೈ ಖಚರಪತಿ ಜೀವಿಸಲಿ ನಕುಲನು ಧನ್ಯನಾ’ (ಕುಮಾರವ್ಯಾಸ), ‘ಮಾದ್ರೀಸುತೋ ಜೀವತು ಮೇ ಭ್ರಾತಾ ಮಮ ಪುತ್ರಾಧಿಕಃ ಪ್ರಿಯಃ’ ಮಾದ್ರಿಯ ಮಗ, ಈ ನನ್ನ ತಮ್ಮ, ನನಗೆ ಮಗನಿಗಿಂತ ಹೆಚ್ಚು ಪ್ರಿಯನಾದ ನಕುಲ ಬದುಕಿ ಬರಲಿ (ಕ್ಷೇಮೇಂದ್ರ).ಈ ಆಯ್ಕೆಗೆ ಯಕ್ಷನೇ ಚಕಿತನಾಗುತ್ತಾನೆ. ಏಕೆ ನಕುಲನ ಆಯ್ಕೆ?  ಭೀಮಾರ್ಜುನರಿದ್ದರಲ್ಲ! ಪಾಂಡವರ ಮುಂದಿನ ಏಳಿಗೆಗೆ ಆಶಾಕಿರಣದಂತಿರುವವರು. ಧರ್ಮಜನ ಪ್ರೀತಿಪಾತ್ರರು. ಕುಂತಿ ಹೆತ್ತ ಮಕ್ಕಳು. ಅಲ್ಲದೆ, ಭೀಮನಿಲ್ಲವೆಂದು ಕೇಳಿ ಪಾಂಡವರ ಆಗರ್ಭಶತ್ರುವಾದ ದುರ್ಯೋಧನ ಕುಣಿದಾಡಬಹುದಲ್ಲ. ಶತ್ರುವಿಗೆ ಅತ್ಯಂತ ಪ್ರಿಯವಾದ ಸಂಗತಿಯಲ್ಲವೆ ಇದು? ಅದನ್ನೆಣಿಸಬೇಡವೆ? ದ್ರೌಪದಿಯನ್ನು ಕಾಪಿಡುವ ಶಕ್ತರು ಭೀಮಾರ್ಜುನರಲ್ಲವೆ? ಅದರಲ್ಲೂ ಭೀಮನಲ್ಲವೆ? ಭೀಮನಿಲ್ಲವೆಂದರೆ ದ್ರೌಪದಿಗೆ ಹೇಗಾಗಬೇಡ? ಈ ಯಾವ ಎಣಿಕೆಗಳೂ ಬೇಡವೆ? ಸಲ್ಲವೆ? ಯಾಕೆ ನಕುಲ? ಪ್ರಾಯಃ ಇದು ಯಕ್ಷನ ಕೊನೆಯ ಪ್ರಶ್ನೆ. ಕೊನೆಯ ಪರೀಕ್ಷೆ.ಧರ್ಮಜನ ಉತ್ತರವಿದು: ತಂದೆ ಪಾಂಡುರಾಜನಿಗೆ  ಕುಂತಿ–ಮಾದ್ರಿಯರು ಪತ್ನಿಯರು. ನನ್ನ ತಾಯಿ ಕುಂತಿ; ಚಿಕ್ಕಮ್ಮ ಮಾದ್ರಿ. ನಕುಲ–ಸಹದೇವರು ಮಾದ್ರಿಯ ಮಕ್ಕಳು. ತನ್ನಿಬ್ಬರು ಈ ಎಳೆಮಕ್ಕಳನ್ನು ನಮ್ಮ ಉಡಿಗೆ ಹಾಕಿ – ‘ಭಾವಭೇದವನಣುವಬಗೆಯದೆ ಕಾವುದೆಲೆ ಮಗನೆಂದು ಬೆಸಸಿ’ – ಮಾದ್ರಿ ಪಾಂಡುವಿನ ಚಿತೆ ಏರಿದಳು. ಈಗ ಹೀಗಾಗಿದೆ. ಕುಂತಿಯ ಮಕ್ಕಳಲ್ಲಿ ಈ ಭೂಮಿಯಲ್ಲಿ ನಾನೊಬ್ಬನಿದ್ದೇನೆ. ಆದರೆ ಮಾದ್ರಿಯ ಮಕ್ಕಳು? ‘ಆವ ಪರಿಯಲಿ ಮರೆವೆನೈ ಮಾದ್ರೀ ಕುಮಾರಕರ?’ ‘ನನ್ನ ಮಗನಿಗಿಂತ ನನಗೆ ನಕುಲ ಹೆಚ್ಚು’ ಎನ್ನುವ ಅರ್ಥದ ಕ್ಷೇಮೇಂದ್ರನ ‘ಪುತ್ರಾಧಿಕಃ’ ಎನ್ನುವ ಮಾತಿನ ತಾತ್ಪರ್ಯವಿದು. ಈ ಸಂದರ್ಭದಲ್ಲಿ ಕುಮಾರವ್ಯಾಸ, ಧರ್ಮರಾಯನ ಆಯ್ಕೆಯನ್ನು ತಾನೇ ಮನಸಾರೆ ಮೆಚ್ಚಿಕೊಂಡನೆಂಬಂತೆ, ಹೀಗೆ ಚಿತ್ರಿಸುತ್ತಾನೆ. ಯಕ್ಷ, ಧರ್ಮಜನನ್ನು ಮೆಚ್ಚಿ, ಇನ್ನೂ ಒಬ್ಬನನ್ನು ಬದುಕಿಸುವೆ, ಆಗ ನಿನ್ನ ಆಯ್ಕೆ ಯಾರು ಎಂದು ಕೇಳಿದನಂತೆ. ಸಹದೇವ ಬದುಕಲಿ ಎಂದನಂತೆ ಯುಧಿಷ್ಠಿರ. ‘ಜೀವಿಸಲಿ ಸಹದೇವಾಂಕನೆಂದನು ಧರ್ಮನಂದನನು’.ನಕುಲ–ಸಹದೇವರು ಅವಳಿ ಮಕ್ಕಳಲ್ಲವೆ! ನಕುಲ, ಮಾದ್ರಿಯ ಮಗ ಎನ್ನುವುದೊಂದು, ಅವನೂ ಯಕ್ಷನ ಮಾತನ್ನು ಕೇಳುವ ಹೊತ್ತಿನಲ್ಲಿ ಅವನ ಮುಂದೆ ಯಾರೂ ವಿವಶರಾಗಿ ಬಿದ್ದಿರಲಿಲ್ಲ ಎನ್ನುವುದೊಂದು, ಮಾತನ್ನು ಕೇಳದಿದ್ದರೆ ಏನಾಗುತ್ತದೆ ಎಂದು ತಿಳಿಯಲವಕಾಶವಿಲ್ಲದೆ ಹೋಗಿದೆಯಾಗಿ ನಕುಲನ ಮೇಲೆ ಯಕ್ಷ ಮುನಿದದ್ದು ಕ್ರೂರವಾಯಿತು ಎನ್ನುವುದನ್ನು ತಿಳಿಸಲೆಂಬಂತೆ ಎದೆಯಲ್ಲಿ ದಯೆಯನ್ನು ಹೊತ್ತು ನಕುಲನನ್ನು ಆಯ್ಕೆ ಮಾಡಿದೆನೆನ್ನುತ್ತಾನೆ ಧರ್ಮಜ. ಕುಂತಿ, ಕರ್ಣನನ್ನು – ತನ್ನ ಚೊಚ್ಚಲ ಕೂಸನ್ನು – ಅಪವಾದಕ್ಕೆ ಹೆದರಿ ಗಂಗೆಗೆ ಚೆಲ್ಲಿದ್ದಳು. ಆ ಕುಂತಿಯ ಮಗ, ಈಗ ಮಾದ್ರಿಯ ಮಗ ನಕುಲ ಬದುಕಲಿ ಎಂದು ಬಯಸಿದ. ಎಂಥ ವೈದೃಶ್ಯ! ಧರ್ಮಜನ ಮನೋಧರ್ಮಕ್ಕೆ ಮನಸೋತು, ನಕುಲನನ್ನು ಮಾತ್ರವಲ್ಲ ನಾಲ್ಕು ಮಂದಿ ಸೋದರರನ್ನೂ ಯಕ್ಷ ಉಜ್ಜೀವಿಸಿದ ಎನ್ನುವುದು ಸುಖಾಂತ್ಯಗೊಳ್ಳುವ ಈ ಪ್ರಕರಣದ ಕೊನೆಯಲ್ಲ.ಕೊನೆಯಲ್ಲಿ ತಿಳಿಯುವುದೇನೆಂದರೆ ಆ ನಿಗೂಢಯಕ್ಷ ಬೇರಾರು ಅಲ್ಲ; ಅವನು ಧರ್ಮರಾಜನ ತಂದೆಯಾದ ಯಮಧರ್ಮನೇ ಎಂಬುದು. ಜಿಂಕೆಯಾಗಿ ಬಂದು ಪಾಂಡವರು ತನ್ನನ್ನು ಬೆಂಬತ್ತುವಂತೆ ಮಾಡಿದವನೂ ಅವನೇ ಎಂಬುದು. ಅವನು ‘ಧರ್ಮ’. ಅವನು ಎಲ್ಲರ ಮುಂದೆ ಅಲ್ಲ, ಎಲ್ಲರ ಹಿಂದೆ ಇದ್ದಾನೆ. ಎಲ್ಲರನ್ನೂ ಅನುಸರಿಸುತ್ತಿದ್ದಾನೆ. ನಾವು ಅವನನ್ನು ಬೆನ್ನಟ್ಟುವಂತೆಸಗಿ, ತಾನೇ ನಮ್ಮನ್ನು ಬೆನ್ನಟ್ಟುತ್ತಿದ್ದಾನೆ! ‘ಧರ್ಮಃ ತ್ವಾಂ ಅನುಗಚ್ಛತಿ’. ಧರ್ಮವು ನಿನ್ನನ್ನು ಬೆಂಗಡೆಯಿಂದ ಅನುಸರಿಸುತ್ತಿದೆ. ಅದರ ಹೆಜ್ಜೆಗುರುತು, ಅದರ ನಡೆ, ಚಹರೆ, ತಿಳಿಯಬೇಕಾದರೆ – ಹಿಂದೆ ನೋಡಬೇಕು. ಹಿಂದೆ ಯಾರಿದ್ದಾರೆ, ಏನಿದೆ, ಏನು ನಡೆದಿದೆ ಎಂದು ನೋಡಬೇಕು. ಆಹಾ! ಹಿಂದೆ ನೋಡುವುದು ಇತಿಹಾಸದ ಗತಿಯೂ ಅಲ್ಲವೆ!

(‘ಭಾರತಯಾತ್ರೆ’ ಅಂಕಣ ಪ್ರತಿ ಎರಡು ವಾರಗಳಿಗೊಮ್ಮೆ ಪ್ರಕಟವಾಗುವುದು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry