7

ಅಲ್ಲಿ ವಿಕಾಸ ಮಂತ್ರ, ಇಲ್ಲಿ ವಿಕಾರ ತಂತ್ರ

ಆರ್‌. ಪೂರ್ಣಿಮಾ
Published:
Updated:
ಅಲ್ಲಿ ವಿಕಾಸ ಮಂತ್ರ, ಇಲ್ಲಿ ವಿಕಾರ ತಂತ್ರ

ಎರಡು ವರ್ಷಗಳ  ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ತನ್ನ ‘ಪ್ರಧಾನ ಮಂತ್ರಿ’ ಎಂದು ಹಿಂದುತ್ವದ ಪ್ರತಿಮೂರ್ತಿ ನರೇಂದ್ರ ಮೋದಿ ಅವರನ್ನು ಮುಂದಿಟ್ಟಿತು. ಆದರೆ ಅದು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದುತ್ವವನ್ನು ಮುಂದಿಡಲಿಲ್ಲ- ಕಾಂಗ್ರೆಸ್ ಆಡಳಿತದಲ್ಲಿ ಅಧಃಪಾತಾಳ ತಲುಪಿದ್ದ ದೇಶವನ್ನು ಮೇಲೆತ್ತಿ ಮುಂದಕ್ಕೆ ಒಯ್ಯುವ ತತ್ವವನ್ನು, ಅಂದರೆ ವಿಕಾಸ ಮಂತ್ರವನ್ನು ಮುಂದಿಟ್ಟಿತು.

ಎರಡು ವರ್ಷಗಳ ಅವಧಿಯಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ‘ವಿಕಾಸ ಪ್ರಧಾನಿ’ ಎಂದು ಕರೆಸಿಕೊಳ್ಳುವಷ್ಟು ವಿಕಾಸ, ಅಭಿವೃದ್ಧಿ, ಪ್ರಗತಿ, ಏಳಿಗೆ, ಮುನ್ನಡೆ ಇತ್ಯಾದಿಗಳ ಬಗ್ಗೆ ಧಾರಾವಾಹಿಯಾಗಿ ಮಾತನಾಡುತ್ತಿದ್ದಾರೆ. ‘ಆಕಾಶವಾಣಿ’ ಯಲ್ಲಿ ಮಾತ್ರವಲ್ಲ ಸಿಕ್ಕಸಿಕ್ಕ ಅವಕಾಶವಾಣಿಗಳಲ್ಲೂ ಅವರು ವಿಕಾಸವನ್ನು ಕುರಿತೇ ಹೇಳುತ್ತಿದ್ದಾರೆ.ಅವರು ‘ವಿಕಾಸ ಪ್ರಧಾನಿ’ ಮಾತ್ರವಲ್ಲದೆ, ‘ಪ್ರವಾಸ ಪ್ರಧಾನಿ’ಯೂ ಆಗಿರುವುದರಿಂದ ಜಗತ್ತಿನಲ್ಲಿ ಯಾವ್ಯಾವ ದೇಶಗಳಲ್ಲಿ ಸಾಧ್ಯವೋ ಅಲ್ಲೆಲ್ಲ, ಇತ್ತೀಚೆಗೆ ಅಮೆರಿಕದ ಕಾಂಗ್ರೆಸ್‌ನಲ್ಲಿ ಕೂಡ ವಿಕಾಸ ಮಂತ್ರವನ್ನೇ ಮುಂದಿಟ್ಟಿದ್ದಾರೆ. ‘ರಾಮ ಮಂತ್ರವ ಜಪಿಸೋ ಮನುಜಾ’ ಎಂದು ಹರಿದಾಸರು ಹೇಳಿರಬಹುದು, ಆದರೆ ಅವರು ರಾಮ ಮಂತ್ರ ಜಪಿಸುವುದಿಲ್ಲ, ಬದಲಿಗೆ ದೇಶವನ್ನು ರಾಮರಾಜ್ಯ ಮಾಡುವ ಮಂತ್ರ ಜಪಿಸುತ್ತಿದ್ದಾರೆ.

ಪ್ರಧಾನಿ ಆಡುತ್ತಿರುವ ವಿಕಾಸ ಕುರಿತ ಮಾತುಗಳು ಮತ್ತು ಅವರ ಸರ್ಕಾರ ಕೈಗೊಳ್ಳುವ ಪ್ರಮುಖ ನಿರ್ಧಾರಗಳ ನಡುವೆ ವಿಪರೀತ ಕಂದಕ ಇದೆ ಎಂದು ಆರ್ಥಿಕ ತಜ್ಞರು ಎಂದಿನಂತೆ ಹೇಳುತ್ತಿದ್ದಾರೆ. ಅದೊಂದು ಕಡೆ ಇರಲಿ, ಕೇಳುಗರ (ಮತ್ತು ನೋಡುಗರ) ಮನ ಮೆಚ್ಚುವಂತೆ ಮಾತನಾಡುವ ನರೇಂದ್ರ ಮೋದಿ ಅವರಿಗೆ ತಮ್ಮ ಪಕ್ಷ, ಸಂಘಟನೆ ಮತ್ತು ಸರ್ಕಾರಕ್ಕೆ ಸೇರಿದ ಕೆಲವರು ಏನು ಮಾತನಾಡುತ್ತಿದ್ದಾರೆ ಎನ್ನುವುದು ಕೇಳಿಸುತ್ತಿಲ್ಲವೇ?

ಒಂದಲ್ಲಾ ಒಂದು ಬಗೆಯಲ್ಲಿ ತಮ್ಮ ಸರ್ಕಾರದ ಭಾಗವಾಗಿರುವ ರಾಮ ದೇವ್, ರಾಮ ಶಂಕರ್ ಇತ್ಯಾದಿ ಪ್ರಭೃತಿಗಳು ಆಡುತ್ತಿರುವ ಏನೇನೋ ಮಾತುಗಳು ಕಿವಿಗೆ ಬಿದ್ದರೂ ಅವರು ಬಾಯಿ ತೆರೆಯದೇ ಸುಮ್ಮನಿರುವುದಕ್ಕೆ ಏನೋ ಕಾರಣ ಇದ್ದೇ ಇದೆ.‘ನನ್ನ ಅಜೆಂಡಾ ನಾನು ಜೋರಾಗಿ ಮುಂದಿಡುತ್ತೇನೆ, ನಾನು ಹೇಳಲಾರದ ಅಜೆಂಡಾ ಅವರು ಜೋರಾಗಿ ಮುಂದಿಡುತ್ತಾರೆ’ ಎನ್ನುವುದೇ ಇಲ್ಲಿನ ಕಾರಣ ಎನ್ನುವುದು ಊಹೆಗೆ ಬಿಟ್ಟ ವಿಚಾರ. ಆದರೆ ದೇಶದ ಜನರಿಗೆ ವಿಕಾಸ ಮಂತ್ರ ಅರ್ಥವಾದ ಹಾಗೆ, ವಿಕಾರ ತಂತ್ರವೂ ಅರ್ಥವಾಗುತ್ತದೆ.

ವಿಕಾರ ತಂತ್ರದ ಹೊಸ ಸ್ಯಾಂಪಲ್ ಅನ್ನು ಇದೀಗ ದೇಶದ ಮುಂದಿಡಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಶಿಕ್ಷಣದ ಅಭಿವೃದ್ಧಿಯೇ ಪ್ರಧಾನ ಪಠ್ಯವಾಗಬೇಕಿತ್ತು. ಆದರೆ ಅದು ತನ್ನ ಪಠ್ಯೇತರ ಮತ್ತು ಅಶಿಕ್ಷಿತ ಅಭಿಪ್ರಾಯಗಳಿಗೇ ಹೆಚ್ಚು ಹೆಸರು ಗಳಿಸಿದೆ. ಆ ಇಲಾಖೆಗೆ ಸಚಿವರಾಗಿರುವ ಸ್ಮೃತಿ ಇರಾನಿ ಅವರ ಇರಾದೆಗಳ ಬಗ್ಗೆ ವಿವರಿಸುವ ಅಗತ್ಯವಿಲ್ಲ.

ಇಲಾಖೆಯಲ್ಲಿ ಅವರ ನಂತರ ರಾಮ ಶಂಕರ್ ಕಠೇರಿಯಾ ಎಂಬ ರಾಜ್ಯ ಸಚಿವರಿದ್ದಾರೆ. ಉತ್ತರ ಪ್ರದೇಶದ ಲಖನೌ ವಿಶ್ವವಿದ್ಯಾಲಯದ ಆವರಣದಲ್ಲಿ ಮೊನ್ನೆ ಶನಿವಾರ ‘ಹಿಂದವಿ ಸ್ವರಾಜ್ ದಿವಸ್ ಸಮಾರೋಹ್’ ನಡೆಯಿತು.ಅದು ಮರಾಠ ವೀರ ಶಿವಾಜಿ ಮಹಾರಾಜನ ಸಿಂಹಾಸನಾರೋಹಣ 342ನೇ ವರ್ಷಾಚರಣೆ ಸಮಾರಂಭ. ‘ವಿವಿ ಆವರಣದಲ್ಲಿ ವಿದ್ಯಾರ್ಥಿಗಳು, ಅವರ ಸಂಘಟನೆಗಳು ಕಾರ್ಯಕ್ರಮ ನಡೆಸಬಾರದು, ಆದರೆ ನಾವು, ನಮ್ಮ ಸಂಘಟನೆ ಮಾತ್ರ ಅವರಿಗೋಸ್ಕರ ಯಾವ ಕಾರ್ಯಕ್ರಮವನ್ನಾದರೂ ಏರ್ಪಡಿಸಬಹುದು’ ಎನ್ನುವ ತತ್ವ ಅದರ ಹಿಂದೆ ಇತ್ತು.

ಅಲ್ಲಿ ಈ ಸಚಿವರು ಭಾಷಣ ಮಾಡುತ್ತಾ ಹೀಗೆ ಹೇಳಿದರು: ‘ನಾವು ಶಿಕ್ಷಣದ ಕೇಸರೀಕರಣ ಮಾಡುತ್ತಿದ್ದೇವೆಯೇ ಎಂದು ಪತ್ರಕರ್ತರು ಕೇಳುತ್ತಾರೆ. ನಾನು ಹೌದು ಎಂದು ಹೇಳುತ್ತೇನೆ. ಶಿಕ್ಷಣವಷ್ಟೇ ಅಲ್ಲ, ದೇಶದ ಕೇಸರೀಕರಣವನ್ನೂ ಮಾಡುತ್ತೇವೆ. ದೇಶಕ್ಕೆ ಏನು ಒಳ್ಳೆಯದೋ ಅದನ್ನು ಮಾಡುತ್ತೇವೆ. ಅದು ಕೇಸರೀಕರಣ ಇರಬಹುದು, ಸಂಘವಾದ ಇರಬಹುದು’.

ಸಂಘ ಪರಿವಾರಕ್ಕೆ ಸೇರಿದ ರಾಮ ಶಂಕರ್ ಕಠೇರಿಯಾ ಎಂಬ ಸಚಿವರು ಕಠೋರ ಸತ್ಯವನ್ನೇ ಬಾಯಿಬಿಟ್ಟು ಹೇಳಿದರು. ‘ಜಗತ್ತಿನ ಮುಂದೆ ದೇಶದ ಗೌರವ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುವ ಪಠ್ಯಕ್ರಮವನ್ನು ರೂಪಿಸುವುದು ಈ ಹೊತ್ತಿನ ಅಗತ್ಯ. ಇದುವರೆಗೂ ಯಾರನ್ನೂ ದೂಷಿಸದೆ ನಾವು ಬಾಯಿ ಮುಚ್ಚಿಕೊಂಡಿದ್ದೇವೆ. ಈಗ ಕಾಲ ಬಂದಿದೆ. ಮಹಾರಾಣ ಪ್ರತಾಪ ಮತ್ತು ಶಿವಾಜಿ ಮಹಾರಾಜರ ಚರಿತ್ರೆಯನ್ನು ನಾವು ಓದದಿದ್ದರೆ, ಚೆಂಘಿಸ್ ಖಾನ್ ಚರಿತ್ರೆ ಓದಬೇಕಾಗುತ್ತದೆ ಅಷ್ಟೆ’ ಎಂದೂ ಘೋಷಿಸಿದರು.

ರಾಮ ಶಂಕರ್ ಅವರ ಈ ಕೇಸರೀಬಾತ್ ಕೇಳಿಸಿಕೊಂಡು ಅಲ್ಲಿನ ರಾಜ್ಯಪಾಲ ರಾಮ ನಾಯಕ್ ಅವರೂ ವೇದಿಕೆಯ ಮೇಲೆ ಕುಳಿತಿದ್ದರು. ಈ ವರದಿಗೆ ‘ಅಯ್ಯೋ ರಾಮ’ ಎಂದು ಸುಮ್ಮನೆ ನಿಟ್ಟುಸಿರು ಬಿಡೋಣವೇ? ಶಿಕ್ಷಣದಲ್ಲಿ ಏನೇನು ಬದಲಾವಣೆ ಮಾಡಬೇಕು ಎಂದು ಸಚಿವೆ ಸ್ಮೃತಿ ಅವರು ಹೇಳುತ್ತಲೇ ಇದ್ದಾರೆ. ಅವರಂತೆ ಅವರ ಖಾತೆಯ ಕಿರಿಯ ಸಚಿವರೂ ‘ಸ್ಮೃತಿ ಅವರು ಹೇಳುವಂತೆ ಚರಿತ್ರೆಯಲ್ಲಿ ನಮ್ಮ ಮಕ್ಕಳು ಓದಬೇಕಾದ್ದು ಮಾತ್ರ ಓದಲಿ, ಅವರು ವಿಸ್ಮೃತಿಗೆ ಸರಿಯುವುದು ಬೇಡ’ ಎಂಬರ್ಥದ ಮಾತುಗಳನ್ನು ಆಡುತ್ತಿದ್ದಾರೆ. ಸರ್ಕಾರ ಮತ್ತು ಪಕ್ಷದ ಮುಖ್ಯಸ್ಥರು ನಮ್ಮ ಗುರಿಸಾಧನೆಗೆ ಸಚಿವ ಕಠೇರಿಯಾ ಎಂಥ ಕಠೋರ ಶ್ರಮ ಹಾಕುತ್ತಿದ್ದಾನೆ ಎಂದು ಸಮಾಧಾನ ಪಡಬಹುದು. ಶಿಕ್ಷಣ ಕುರಿತು ಈ ಸಚಿವರು ದೇಶದ ಮಕ್ಕಳಿಗೆ ಎಂಥ ಪಾಠ ಹೇಳುತ್ತಿದ್ದಾರೆ?

ನಮ್ಮ ದೇಶದಲ್ಲಿ ರಾಮಾಯಣಗಳು ನಿರಂತರವಾಗಿ ಸೃಷ್ಟಿಯಾಗುತ್ತಿರುತ್ತವೆ. ಇವತ್ತು ‘ಅಂತರರಾಷ್ಟ್ರೀಯ ಯೋಗ ದಿನ’ವಂತೆ. ಅದಕ್ಕೆ ಬಾಬಾ ರಾಮ ದೇವ್ ಎಂಬ ಯೋಗೋದ್ಯಮಿಯೇ ಪರಮಗುರು. ಅವರೇ ನಮ್ಮ ಭಾರತ ಜಗತ್ತಿನ ಮುಂದಿಡುತ್ತಿರುವ ‘ಯೋಗ ಐಕಾನ್’.

ಯೋಗವಷ್ಟೇ ಅಲ್ಲ, ರೋಗವೂ ಭೋಗವೂ ಅವರ ಬೃಹತ್ ಉದ್ಯಮ. ಅಂದರೆ ಜನರಿಗೆ ಬರುವ ಎಲ್ಲ ರೋಗಗಳಿಗೆ ಔಷಧ ತಯಾರಿಸಿ ಮಾರುವ, ಜನರು ಸುಂದರವಾಗಿ, ಸುಖವಾಗಿ ಇರಲು ಕ್ರೀಮುಸರಂಜಾಮು, ನೂಡಲ್ಸ್‌ಗಳೆಂಬ ಭೋಗವಸ್ತುಗಳನ್ನು ತಯಾರಿಸಿ ಮಾರುವ ಸಾವಿರಾರು ಕೋಟಿ ರೂಪಾಯಿಗಳ ಉದ್ಯಮವೇ ಅವರ ಯಶೋಯೋಗದ ಮಾದರಿ ಆಸನ.

ಮಿಕ್ಕ ಸಣ್ಣಪುಟ್ಟ ಹುಲುಮಾನವರ ಸಾವಯವ ಉದ್ಯಮಗಳಿಗೆ ಶಾಶ್ವತ ಶವಾಸನ ನೀಡುವುದೇ ಅವರು ನಡೆಸುತ್ತಿರುವ ನೂರಾರು ಕೋಟಿಗಳ ಜಾಹೀರಾತು ಸಮರದ ಮುಖ್ಯಗುರಿ. ಕಾವಿಬಟ್ಟೆ ಧರಿಸಿದ ಸರ್ವಸಂಗ ಪರಿತ್ಯಾಗಿ ಸನ್ಯಾಸಿಯೊಬ್ಬರು ಅತ್ಯಂತ ಯಶಸ್ವಿ ಉದ್ಯಮಿಯಾದ ಮೇಲೆ, ಯೋಗ ದಿನದಂದು ಜಗತ್ತಿಗೆ ಅವರೇ ಪರಮಗುರುವಾಗಿ ದೀಕ್ಷೆ ಕೊಡುವುದು ಒಂದು ಯೋಗಾಯೋಗವೇ ಸರಿ.

ಕೇಂದ್ರ ಸರ್ಕಾರ ಮತ್ತು ಪಕ್ಷಪರಿವಾರಗಳೆಲ್ಲ ರಾಮ ದೇವ್ ಅವರ ಮುಂದೆ ಪೂರ್ತಿ ಬಾಗಿ ದೀರ್ಘದಂಡ ನಮಸ್ಕಾರಾಸನ ಮಾಡಿರುವುದರ ಹಿಂದಿನ ಗುಟ್ಟು ತಿಳಿಯಬಯಸುವವರು ಸಾಕಷ್ಟು ಆರ್ಥಿಕಾಸನಗಳನ್ನು ಹಾಕಿ ಅದನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡಬೇಕು. ಅದಿರಲಿ, ಈ ಮಹಾನ್ ‘ಯೋಗ ಸಂಕೇತ’ ಕೆಲವೇ ತಿಂಗಳುಗಳ ಹಿಂದೆ ಆಡಿದ ಮಾತುಗಳು ನಮ್ಮ ಪ್ರಧಾನಿಗೆ, ಅವರ ಪರಿವಾರಕ್ಕೆ ಕೇಳಿಸದೇ ಇರಲು ಸಾಧ್ಯವಿಲ್ಲ.

‘ಏನು ಮಾಡೋಣ ಕೆಲವು ಕಾರಣಗಳಿಗೆ ನಾನೂ ಸುಮ್ಮನೆ ಇರಬೇಕು. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ‘ಭಾರತ ಮಾತಾ ಕೀ ಜೈ’ ಎಂದು ಕೂಗಲು ಒಲ್ಲದ ಸಾವಿರಾರು ಜನರ ರುಂಡ ಚೆಂಡಾಡಿಬಿಡುತ್ತಿದ್ದೆ’ ಎಂಬರ್ಥದ ನುಡಿಗಳನ್ನು ಈ ಯೋಗಿ ಆಡಿದರು.ಯೋಗ ಮಾಡುವುದರಿಂದ ದೇಹದ ರೋಗಗಳು ದೂರವಾಗುತ್ತವೆ ಎಂಬುದರಲ್ಲಿ ನಂಬಿಕೆಯಿರುವ ನಮಗೆ, ಮನಸ್ಸಿನ ರೋಗಗಳನ್ನು ದೂರವಿಡಲು ಏನು ಮಾಡಬೇಕು ಎನ್ನುವುದು ತಿಳಿಯದಾಯಿತು. ‘ಯೋಗಗುರು ಹಂಗೆ ಹೇಳಲೇ ಇಲ್ಲ’ ಎಂದು ಕೆಲವರು ತಿರುಗಿಸಿ ಲಾಗ ಹಾಕಿದರೂ ಅವರು ನುಡಿದರೆ ಶಲಾಕೆಗಳು ಹೊರಬಂದದ್ದು ಕಂಡುಬಿಟ್ಟಿತ್ತು.

‘ಅಂತರರಾಷ್ಟ್ರೀಯ ಯೋಗ ದಿನ’ ದಂದು ದೇಶದ ಕೋಟ್ಯಂತರ ಜನರು ಬಾಬಾ ರಾಮ ದೇವ್ ಅವರ ಆಸನಗಳನ್ನು ಅನುಕರಿಸಿಕೊಳ್ಳಲಿ, ಸದ್ಯ ದೇಶಭಕ್ತಿ ಕುರಿತ ಅವರ ಶಾಸನಗಳನ್ನು ಅನುಕರಿಸುವುದು ಬೇಡ. ಜಗತ್ತಿಗೆ ಹೊಸದಾಗಿ ಯೋಗವನ್ನು ಪರಿಚಯಿಸುವಂತೆ ಈಗ ರಾಮ ದೇವ್ ಅವರ ಜೊತೆ ಇಡೀ ಕೇಂದ್ರ ಸರ್ಕಾರವೇ ಯೋಗ ಮಾಡುತ್ತಿದೆ.

ಹಾಗಾದರೆ ಸುಮಾರು ಐವತ್ತು ಅರವತ್ತು ವರ್ಷಗಳ ಹಿಂದೆಯೇ ಹತ್ತುಸಾವಿರ ಮೈಲುಗಳ ದೂರದ ಅಮೆರಿಕದಲ್ಲೂ ನೂರಾರು ಎಕರೆಗಳಷ್ಟು ವಿಶಾಲವಾದ ಯೋಗಾಶ್ರಮಗಳನ್ನು ಆರಂಭಿಸಿದ ಮಹೇಶ್ ಯೋಗಿ, ಸ್ವಾಮಿ ರಜನೀಶ್ ಮೊದಲಾದ ಅನೇಕ ಯೋಗಿಗಳು ಮತ್ತು ಯೋಗವೇ ತಪಸ್ಸಾಗಿದ್ದ ಬಿ.ಕೆ.ಎಸ್. ಅಯ್ಯಂಗಾರ್ ಅವರಂಥ ಅನೇಕ ಯೋಗಗುರುಗಳು ಮಾಡಿದ್ದು ಯೋಗದ ಪ್ರಚಾರವಲ್ಲದೆ ಮತ್ತೇನು ಎನ್ನುವುದು ತಿಳಿಯುತ್ತಿಲ್ಲ.

ಯೋಗ ಮಾಡುವ ಚಾಪೆ ಕೆಳಗೆ ತೂರಿಸಲಾದ ಕೆಲವು ಸತ್ಯಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಆರೋಗ್ಯ ಎನ್ನುವುದು ಒಂದು ವೈಯಕ್ತಿಕ ಕಾಳಜಿ ಹೇಗೋ ಹಾಗೆ ಅಂತರರಾಷ್ಟ್ರೀಯ ಮಾರುಕಟ್ಟೆಗೂ ಒಂದು ಸರಕು. ಆದ್ದರಿಂದ ಯೋಗದ ವಿಷಯದಲ್ಲಿ ಸಾಮಾನ್ಯ ತರ್ಕವನ್ನು ತ್ಯಾಗ ಮಾಡಲೇಬೇಕು!

ಹಳೆಯದೆಲ್ಲ ಚೆನ್ನಾಗಿತ್ತು ಎಂಬ ಭಾವನೆ ಸರ್ಕಾರಗಳ ಪಾಲಿಗೆ ಇರಬೇಕಿಲ್ಲ. ಆದರೆ ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಮೊಳಗುತ್ತಿರುವ ವಿಕಾಸ ಮಂತ್ರದ ಜೊತೆಗೆ ಭುಗಿಲೇಳುತ್ತಿರುವ ಅಸಹನೆಯನ್ನು ಮತ್ತು ಕೇಸರೀಕರಣದ ಆತುರವನ್ನು ಮರೆಮಾಚುವುದು ಸಾಧ್ಯವೇ ಇಲ್ಲ. ಸಾಂಸ್ಕೃತಿಕ ಬಿಕ್ಕಟ್ಟು ಎನ್ನುವುದು ಒಂದು ಜಾಗತಿಕ ಬೆಳವಣಿಗೆ; ನಮ್ಮ ದೇಶದಲ್ಲಿ ಅದು ಪರಿಹಾರ ಹುಡುಕಿಕೊಳ್ಳುವುದು ಹೀಗೆಯೇ ಇರಬಹುದು.

ಎಲ್ಲ ಧರ್ಮಗಳನ್ನೂ ನಮ್ಮ ಸಂವಿಧಾನ ಗೌರವಿಸುವುದರಿಂದ, ಚಿಂತನೆ, ಅಭಿವ್ಯಕ್ತಿ, ನಂಬಿಕೆ, ಆರಾಧನೆ ಎಲ್ಲದರಲ್ಲಿ ಸ್ವಾತಂತ್ರ್ಯ ನೀಡಿರುವುದರಿಂದ, ‘ಕೇಸರೀಕರಣ ದೇಶಕ್ಕೆ ಅತ್ಯಗತ್ಯ’ ಎಂಬ ವಾದ ಸಂವಿಧಾನದ ಆಶಯಗಳಿಗೆ ಖಂಡಿತಾ ವಿರೋಧಿಯಾದದ್ದು. ಜಾಗತಿಕ ಉದ್ಯಮ ಮಾರುಕಟ್ಟೆಗೆ ಮುಕ್ತ ಆಹ್ವಾನ ನೀಡುವ ಈ ಸರ್ಕಾರದ ನೀತಿಗೆ ಅದು ವಿರೋಧಾಭಾಸವಾಗಿ ನಿಲ್ಲುತ್ತದೆ.

ದೇಶಕ್ಕೆ ದೇಶವನ್ನೇ ಜಾಗತಿಕ ಉದ್ಯಮಕ್ಕೆ ಒಂದು ಕಾರ್ಖಾನೆಯನ್ನಾಗಿ ಮಾಡಲು ಹೊರಟಿರುವಾಗ, ಗುಜರಾತ್‌ನ ಗುಡಿಯೊಂದರಲ್ಲಿ ದೇವರಿಗೆ ಆರ್‌ಎಸ್‌ಎಸ್ ಖಾಕಿ ಚೆಡ್ಡಿ,ಕರಿ ಟೋಪಿ ತೊಡಿಸಿ ಆರತಿ ಬೆಳಗುವುದು ವಿಚಿತ್ರವಾಗಿ ತೋರುತ್ತದೆ.ವಿಭಿನ್ನ ಉದ್ಯಮಗಳು, ಕೊನೆಗೆ ರಕ್ಷಣಾ ವಲಯ, ಶಿಕ್ಷಣ, ಮಾಧ್ಯಮ ಎಲ್ಲದಕ್ಕೂ ವಿದೇಶಗಳಿಂದ ಬಂಡವಾಳ ಹೂಡಿಕೆ ಆಗಬೇಕು- ಆದರೆ ಪಹ್ಲಜ್ ನಿಹಲಾನಿ ಎಂಬ ಚಿತ್ರ ಪ್ರಮಾಣೀಕರಣ ಮಂಡಲಿಯ ವಿದೂಷಕ ನಮ್ಮ ಸಿನಿಮಾಗಳಿಗೆ ಹಿಂದುತ್ವದ ಕತ್ತರಿ ಹಿಡಿದು ಹೆದರಿಸಬೇಕು ಎನ್ನುವುದು ತೀರಾ ವಿಪರ್ಯಾಸವಾಗಿ ಕಾಣುತ್ತದೆ.

ಪ್ರತಿಯೊಂದು ಯೋಜನೆ, ಕಾರ್ಯಕ್ರಮ, ಸಮಾರಂಭ, ಪ್ರವಾಸ, ಭಾಷಣ, ಪ್ರಚಾರ ಎಲ್ಲವನ್ನೂ ತುಂಬಾ ವ್ಯವಸ್ಥಿತವಾಗಿ ರೂಪಿಸುವ ಪ್ರಧಾನ ಮಂತ್ರಿ ಮತ್ತು ಅವರ ತಂಡ ಇಂಥ ಬೆಳವಣಿಗೆಯನ್ನು ಮಾತ್ರ ಬೇಕಾಬಿಟ್ಟಿ ಬೆಳೆಯಲು ಬಿಟ್ಟಿದೆ ಎನ್ನುವುದು ವಿಚಿತ್ರ ಆದರೂ ಸತ್ಯ. ಅನೇಕ ಸಾಧ್ವಿಗಳು,ಸಾಧುಗಳು, ಸಂಘಿಗಳು ನಮ್ಮ ಸಂಸದರೂ ಸಚಿವರೂ ಆಗಿರುವುದರಿಂದ ಅವರ ಮಾತನ್ನು ಬೇಕಾದವರು ನಂಬಲಿ ಎಂದು ಉಡಾಫೆ ಮಾಡಿ ಬಿಡುವಂತಿಲ್ಲ.

ಏಕೆಂದರೆ ಅವರು ಮಾಡುತ್ತಿರುವುದು ಧಾರ್ಮಿಕ ಪ್ರವಚನ ಅಲ್ಲ. ಅವರ ಸಾರ್ವಜನಿಕ ಹೇಳಿಕೆಗಳೆಲ್ಲ ಒಂದು ರೀತಿಯಲ್ಲಿ ಸರ್ಕಾರದ ನೀತಿಗಳೇ ಆಗಿರುತ್ತವೆ. ಯಾರು ಏನು ಬೇಕಾದರೂ ಮಾಡಲಿ, ಏನು ಬೇಕಾದರೂ ಮಾತನಾಡಲಿ ‘ನಮಗೂ ಇದಕ್ಕೂ ಸಂಬಂಧವಿಲ್ಲ, ನಾವು ಅಂತರ ಕಾದುಕೊಂಡಿದ್ದೇವೆ’ ಅನ್ನುವುದೆಲ್ಲ ಈ ನಾಟಕದ ಅಮಂಗಳಾಚರಣೆಯಷ್ಟೇ.

‘ಕೆಟ್ಟದ್ದನ್ನು ನೋಡುವುದಿಲ್ಲ, ಕೆಟ್ಟದ್ದನ್ನು ಕೇಳುವುದಿಲ್ಲ, ಕೆಟ್ಟಮಾತುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಕಣ್ಣು, ಕಿವಿ ಮತ್ತು ಬಾಯಿ ಮುಚ್ಚಿಕೊಳ್ಳುವುದು ಯಾವ ರಾಜಧರ್ಮ? ಕಟ್ಟುನಿಟ್ಟಾದ ಚಿಕಿತ್ಸೆ ಕೊಡದಿದ್ದರೆ, ಇಂಥ ಕೇಸರೀಬಾತ್ ದೇಶಕ್ಕೆ ಅನಾರೋಗ್ಯ ತರುವುದು ಖಂಡಿತ.ಜಗತ್ತಿಗೆ ಹೇಳುವ ಆರ್ಥಿಕ ಅಜೆಂಡಾ ಬೇರೆ, ದೇಶದೊಳಗಿನ ಸಾಮಾಜಿಕ ಅಜೆಂಡಾ ಬೇರೆ- ಇದೇ ನಮ್ಮ ರಾಜಕೀಯ ಅಜೆಂಡಾ ಎಂದು ಸರ್ಕಾರ, ಪಕ್ಷ ಹೇಳುತ್ತಿವೆಯೇ? ಹಾಗಿದ್ದರೆ, ಇತಿಹಾಸದಲ್ಲಿ ಮೋದಿ ಅಧ್ಯಾಯಕ್ಕೆ ‘ಹೇಳಿದ್ದೊಂದು, ಮಾಡಿದ್ದೊಂದು’ ಎಂಬ ಶೀರ್ಷಿಕೆ ಉಳಿಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry