7

ಹಳೆಯ ಮೈತ್ರಿಯ ಮರು ಅನ್ವೇಷಣೆ

Published:
Updated:
ಹಳೆಯ ಮೈತ್ರಿಯ ಮರು ಅನ್ವೇಷಣೆ

ಆಫ್ರಿಕನ್ ಪ್ರಜೆಗಳ ಸುರಕ್ಷತೆಯನ್ನು ಕಾಪಾಡಬೇಕೆಂದು ಕರ್ನಾಟಕ ಮುಖ್ಯಮಂತ್ರಿ ಸೇರಿದಂತೆ ದೇಶದ ಏಳು ರಾಜ್ಯಗಳ ಮುಖ್ಯಮಂತ್ರಿಗಳಿಗೆ  ಈ ತಿಂಗಳ  ಆರಂಭದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಪತ್ರ ಬರೆದಿದ್ದರು. ಈ ಪತ್ರ ರವಾನೆಯಾದ ಇತರ  ಆರು ರಾಜ್ಯಗಳು:  ಮಹಾರಾಷ್ಟ್ರ, ತೆಲಂಗಾಣ, ದೆಹಲಿ, ಉತ್ತರ ಪ್ರದೇಶ, ತಮಿಳುನಾಡು ಮತ್ತು ಗೋವಾ. ಇದೇ ಸಂದರ್ಭದಲ್ಲಿ ಜೂನ್ 12ರಿಂದ 18ರವರೆಗೆ ಆಫ್ರಿಕಾದ ಮೂರು ರಾಷ್ಟ್ರಗಳಾದ  ಘಾನಾ, ಐವರಿ ಕೋಸ್ಟ್ ಹಾಗೂ ನಮೀಬಿಯಾಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪ್ರವಾಸ ನಿಗದಿಯಾಗಿದ್ದುದು ಕಾಕತಾಳೀಯವಾಗಿತ್ತು.

ಕಳೆದ ತಿಂಗಳಷ್ಟೇ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್‌) ಆಚರಿಸಲು ಉದ್ದೇಶಿಸಿದ್ದಂತಹ  ಆಫ್ರಿಕಾ ದಿನಾಚರಣೆಯನ್ನು ಆಫ್ರಿಕಾ ಖಂಡದ  54 ರಾಷ್ಟ್ರಗಳ ರಾಯಭಾರಿಗಳು ಬಹಿಷ್ಕರಿಸಿದ್ದರಿಂದ ಆ ಕಾರ್ಯಕ್ರಮವನ್ನು ಮುಂದೂಡಿದ್ದಂತಹ ಪ್ರಸಂಗವೂ ನಡೆದಿತ್ತು.  ದೆಹಲಿಯಲ್ಲಿ ಕಾಂಗೊ ಪ್ರಜೆಯೊಬ್ಬನ ಹತ್ಯೆ ಈ ಆಕ್ರೋಶಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ಬೆಂಗಳೂರು ಸೇರಿದಂತೆ ರಾಷ್ಟ್ರದ ಹಲವು ನಗರಗಳಲ್ಲಿ ವರದಿಯಾದಂತಹ ಆಫ್ರಿಕನ್ನರ ಮೇಲಿನ ಹಲ್ಲೆ ಪ್ರಕರಣಗಳು ಆಫ್ರಿಕನ್ ಸಮುದಾಯದಲ್ಲಿ ಅಸಮಾಧಾನದ ಅಲೆ ಎಬ್ಬಿಸಿತ್ತು.ಹೀಗಾಗಿ ಈ ರಾಜತಾಂತ್ರಿಕ ಕಾಳಜಿಯನ್ನು ನಿರ್ವಹಿಸಲು ಅಧಿಕೃತವಾಗಿ ಹಲವು ನೆಲೆಗಳಲ್ಲಿ ಸರ್ಕಾರ ಯತ್ನಿಸುವುದು ಸಹಜವಾದದ್ದೇ ಆಗಿತ್ತು. ಆಫ್ರಿಕಾ ರಾಷ್ಟ್ರಗಳ ಜೊತೆಗಿನ ಮೈತ್ರಿ ಯನ್ನು ದುರ್ಬಲಗೊಳಿಸಬಾರದೆಂದು ಎಚ್ಚರಿಸಿದ ಮೊದಲ ಭಾರತೀಯ ನಾಯಕರೆಂದರೆ  ರಾಷ್ಟ್ರಪತಿ ಪ್ರಣವ್ ಮುಖರ್ಜಿ. ‘ಆಫ್ರಿಕಾದ  ಬಾಂಧವ್ಯ ಯಾವ ಕಾರಣಕ್ಕೂ ಎಂದೂ ಹಾಳಾಗಬಾರದು. ಆಫ್ರಿಕಾ ಜೊತೆಗಿನ ಭಾರತದ ಚಾರಿತ್ರಿಕ ಸಂಬಂಧಗಳ ಬಗ್ಗೆ ಯುವ ಮನಸ್ಸುಗಳಲ್ಲಿ ಸೂಕ್ತ ಎಚ್ಚರ ಮೂಡಿಸಬೇಕು’ ಎಂದು  ರಾಷ್ಟ್ರಪತಿ  ಕರೆ ನೀಡಿದ್ದರು.ನಂತರ, ‘ನಿಮ್ಮೆಲ್ಲಾ ಹೋರಾಟಗಳಿಗೆ ನಾವು ಜೊತೆಯಾಗಿರುತ್ತೇವೆ’ ಎಂಬಂಥ ಭರವಸೆಯನ್ನೂ ಘಾನಾ, ಐವರಿಕೋಸ್ಟ್ ಹಾಗೂ ನಮೀಬಿಯಾ ಪ್ರವಾಸ ಸಂದರ್ಭದಲ್ಲಿ ರಾಷ್ಟ್ರಪತಿ ಪುನರುಚ್ಚರಿಸಿದ್ದರು. ಇದಕ್ಕೂ ಮುಂಚೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೂ ಮೊರೊಕೊ ಹಾಗೂ ಟ್ಯುನೀಷಿಯಾಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಂತಹದೇ ವಿಶ್ವಾಸದ ಮಾತುಗಳನ್ನಾಡಿದ್ದರು. ಈ  ಇಬ್ಬರೂ  ಸಾಂವಿಧಾನಿಕ ಮುಖಂಡರು ರಾಷ್ಟ್ರದ ಆಡಳಿತ ಪಕ್ಷದ ರಾಜಕೀಯ ದನಿಯಾಗುವುದು ಸಾಧ್ಯವಿಲ್ಲ. ಹೀಗಾಗಿಯೇ  ಪ್ರಧಾನಿ ನರೇಂದ್ರ ಮೋದಿ ಅವರೂ ಸದ್ಯದಲ್ಲೇ ಆಫ್ರಿಕನ್ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದಾರೆ ಎಂಬುದು ಇಲ್ಲಿ ಮುಖ್ಯ.ರಾಷ್ಟ್ರಪತಿ ವಿದೇಶ ಪ್ರವಾಸಗಳಲ್ಲಿ ವಿಧ್ಯುಕ್ತ  ಅಥವಾ ಸಾಂಪ್ರದಾಯಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವ ಎಂಬುದು ಗೊತ್ತಿರುವ ಸಂಗತಿ. ಆದರೆ ಸಾಂಪ್ರದಾಯಿಕವಾದ ಅನೇಕ ಆಚರಣೆಗಳೊಂದಿಗೆ ರಾಷ್ಟ್ರಪತಿ ಪ್ರವಾಸ ಕಾರ್ಯಕ್ರಮದಲ್ಲಿ ಅನೇಕ ಪ್ರಮುಖ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ವಿಚಾರಗಳು ಆದ್ಯತೆ ಪಡೆಯುತ್ತಿರುವುದು ಮುಖ್ಯವಾದ ಸಂಗತಿ. ಹಲವು ಪ್ರಮುಖ ವಿಚಾರಗಳನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಚರ್ಚೆಯ ಮುನ್ನೆಲೆಗೆ ತಂದಿದ್ದಾರೆ ಎಂಬುದು ನಿಜ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ  ಭಾರತ ಹಾಗೂ ಆಫ್ರಿಕಾದ ರಾಷ್ಟ್ರಗಳಿಗೆ ಕಾಯಂ ಸದಸ್ಯತ್ವ ಇಲ್ಲದಿರುವ ವಿಚಾರವನ್ನು ಆಫ್ರಿಕಾ ಪ್ರವಾಸ ಕಾಲದಲ್ಲಿ ಚರ್ಚೆಯ ಮುಖ್ಯ ಸಂಗತಿಯಾಗಿಸಿದರು ಪ್ರಣವ್.ಅಂತರರಾಷ್ಟ್ರೀಯ ನೀತಿಯಲ್ಲಿ ಇಂತಹ  ‘ವರ್ಣಭೇದ ನೀತಿ’ ಸರಿಯಲ್ಲ ಎಂದು ಈ ಚರ್ಚೆಗೆ ನಮೀಬಿಯಾ ಅಧ್ಯಕ್ಷ  ಡಾ. ಹಾಗ್ ಜಿ. ಗೆಂಗೊಟ್ ತೀವ್ರ ಮಾತುಗಳಲ್ಲಿ ಸ್ಪಂದಿಸಿದ್ದು  ವಿಶೇಷವಾಗಿತ್ತು. ಇನ್ನು ಪರಮಾಣು ಪೂರೈಕೆದಾರರ ಗುಂಪಿಗೆ (ಎನ್ಎಸ್‌ಜಿ)  ಭಾರತದ  ಸದಸ್ಯತ್ವವನ್ನು ಚೀನಾ ಏಕೆ ಬೆಂಬಲಿಸುವುದು ಅವಶ್ಯ ಎಂಬ ಬಗ್ಗೆ  ಚೀನಾ ನಾಯಕತ್ವದ ಮನ  ಒಲಿಸಲು ಕಳೆದ ತಿಂಗಳು  ಪ್ರಣವ್ ಮುಖರ್ಜಿ ಅವರು ಚೀನಾಗೆ ಭೇಟಿ ನೀಡಿದ್ದಾಗ ಯತ್ನಿಸಿದ್ದರು. ಆದರೆ, ‘ಆಫ್ರಿಕಾ ಪ್ರಜೆಗಳ ಮೇಲಿನ ಹಿಂಸಾಚಾರದ ವಿಚಾರವನ್ನು ಯಾರೂ ಪ್ರಸ್ತಾಪಿಸಲಿಲ್ಲ’ ಎಂದು ಪ್ರಣವ್ ಮುಖರ್ಜಿ ಅವರು ಆಫ್ರಿಕಾ ಪ್ರವಾಸದ ಅಂತ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದರು.ಆದರೆ ಈ ರಾಜತಾಂತ್ರಿಕ ಮೌನ ಭಾರತದ ಹೊಣೆಯನ್ನೇನೂ ಕಡಿಮೆ ಮಾಡದು. ಶತಮಾನಗಳ ಹಿಂದೆಯೇ ರವೀಂದ್ರನಾಥ್  ಟ್ಯಾಗೋರ್ ಅವರು ‘ಆಫ್ರಿಕಾ’ ಎಂಬ ಸುಂದರ ಪದ್ಯ ಬರೆದಿದ್ದರು. ವರ್ಣಭೇದ ನೀತಿಯ ಬಗ್ಗೆ ನೋವು, ದುಃಖ, ಕಾರುಣ್ಯದ ಭಾವಗಳನ್ನು ಈ ಕವನ ಅಭಿವ್ಯಕ್ತಿಸುತ್ತದೆ.  ಇನ್ನು ದಕ್ಷಿಣ ಆಫ್ರಿಕಾದಲ್ಲಿ 21 ವರ್ಷಗಳಷ್ಟು ಕಾಲ ನೆಲೆಸಿದ್ದ ಮಹಾತ್ಮ ಗಾಂಧಿಯವರು  ಸತ್ಯಾಗ್ರಹದ ಮೊದಲ ಪ್ರಯೋಗಗಳನ್ನು ಅಲ್ಲೇ ಕೈಗೊಂಡಿದ್ದರು ಎಂಬುದನ್ನು ಮರೆಯುವಂತಿಲ್ಲ. ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯ ಪಡೆದುಕೊಂಡ ನಂತರ  ಸ್ವತಂತ್ರ ಭಾರತ ಸುಮ್ಮನಾಗಲಿಲ್ಲ. ಆಫ್ರಿಕಾ ಖಂಡದ ಹಲವು ರಾಷ್ಟ್ರಗಳಲ್ಲಿ  ಇನ್ನೂ ನಡೆಯುತ್ತಿದ್ದ ವಸಾಹತು ಆಳ್ವಿಕೆ ವಿರೋಧಿ ಆಂದೋಲನಗಳಿಗೆ ಇನ್ನಿಲ್ಲದಂತೆ  ಬೇಷರತ್  ಬೆಂಬಲ ನೀಡಿತ್ತು. ಜೊಮೊ ಕೆನ್ಯಾಟಾ, ಜೂಲಿಯಸ್ ನೈರೇರೆ ಹಾಗೂ ಕೆನೆತ್ ಕೌಂಡಾರಂತಹ ಆಫ್ರಿಕನ್  ನಾಯಕರಿಗೆ ಬೆಂಬಲವಾಗಿ ಇಡೀ ಭಾರತ ನಿಂತಿತ್ತು ಎಂಬುದು ನಮ್ಮ ರಾಜಕೀಯ ಪರಂಪರೆಯ ಭಾಗ. ಇನ್ನು ನೆಲ್ಸನ್ ಮಂಡೇಲಾ ಅವರಂತೂ ಗಾಂಧಿ ತತ್ವಗಳ ಸಾಕಾರ ರೂಪವಾಗಿದ್ದರು. 1955ರಲ್ಲಿ ಇಂಡೊನೇಷ್ಯಾದ  ಬಾಂಡುಂಗ್‌ನಲ್ಲಿ  ಮೊದಲ ಬಾರಿಗೆ  ನಡೆದ ಆಫ್ರೊ– ಏಷ್ಯನ್ ಸಮ್ಮೇಳನದಲ್ಲಿ ಈಜಿಪ್ಟ್‌ನ ಗಮಾಲ್ ಅಬ್ದೆಲ್ ನಾಸೆರ್ ಹಾಗೂ ಘಾನಾದ ಕ್ವಾಮೆ ನಕ್ರುಮಾ  ಅವರು ಭಾರತದ ಪ್ರಧಾನಿ ಜವಾಹರ ಲಾಲ್ ನೆಹರೂಗೆ ಜೊತೆಯಾಗಿದ್ದರು. ಹಾಗೆಯೇ 1961 ರಲ್ಲಿ ಅಲಿಪ್ತ ಚಳವಳಿ ಹುಟ್ಟು ಹಾಕುವಲ್ಲಿಯೂ ಆಫ್ರಿಕಾ ರಾಷ್ಟ್ರಗಳ ನಾಯಕರು  ನೆಹರೂಗೆ ಹೆಗಲು ಕೊಟ್ಟಿದ್ದರು. ಆಫ್ರಿಕಾ ರಾಷ್ಟ್ರಗಳೊಂದಿಗಿನ ಈ ಬೆಸುಗೆ  ಪಕ್ಷಾತೀತವಾದುದು.  ವಸಾಹತುಶಾಹಿ ಆಳ್ವಿಕೆಯಿಂದ  ವಿಮೋಚನೆಗೊಂಡ ನಂತರ  1990ರ ಮಾರ್ಚ್‌ನಲ್ಲಿ  ನಮೀಬಿಯಾದಲ್ಲಿ ನಡೆದ  ಸ್ವಾತಂತ್ರ್ಯೋತ್ಸವ  ಸಮಾರಂಭದಲ್ಲಿ ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಪಾಲ್ಗೊಂಡಿದ್ದರು. ಅವರ ಜೊತೆ  ವಿಭಿನ್ನ ರಾಜಕೀಯ ಪಕ್ಷಗಳಿಗೆ ಸೇರಿದ ಅಟಲ್ ಬಿಹಾರಿ ವಾಜಪೇಯಿ,  ಕೆ.ಆರ್. ನಾರಾಯಣನ್ ಹಾಗೂ ಹರಿಕಿಷನ್ ಸಿಂಗ್  ಇದ್ದರು.ಜೊತೆಗೆ ಆಗಿನ ಪ್ರತಿಪಕ್ಷದ ನಾಯಕರಾಗಿದ್ದ ರಾಜೀವ್ ಗಾಂಧಿಯವರೂ ಇದ್ದರು. ಈ ಪರಂಪರಾಗತ ಬಾಂಧವ್ಯಕ್ಕೆ ನಿರಂತರವಾಗಿ ಬೆಸುಗೆ ಹಾಕುತ್ತಲೇ ಬರಲಾಗುತ್ತಿದೆ.  2008ರಲ್ಲಿ ನವದೆಹಲಿ ಹಾಗೂ 2011ರಲ್ಲಿ ಅಡ್ಡಿಸ್ ಅಬಾಬಾದಲ್ಲಿ ನಡೆದ ಭಾರತ– ಆಫ್ರಿಕಾ ವೇದಿಕೆ ಶೃಂಗಸಭೆಗಳ (ಐಎಎಫ್‌ಎಸ್) ನಂತರ ದೆಹಲಿಯಲ್ಲಿ ಕಳೆದ ವರ್ಷ  ಮೂರನೇ ಐಎಎಫ್‌ಎಸ್ ನಡೆದಿದೆ. ದ್ವಿಪಕ್ಷೀಯ ಹಾಗೂ ಖಂಡಗಳ ಮಟ್ಟಗಳಲ್ಲಿ  ಸಹಭಾಗಿತ್ವ ಹೆಚ್ಚಿಸುವುದೇ ಈ  ಶೃಂಗಸಭೆಗಳ ಮೂಲ ಉದ್ದೇಶ.  ಈ ಶೃಂಗಸಭೆಗಳಲ್ಲಿ ಮಾಡಿಕೊಂಡ ಬದ್ಧತೆಗಳನ್ನು ಮುಂದಕ್ಕೊಯ್ಯುವ  ಉದ್ದೇಶವೂ ರಾಷ್ಟ್ರಪತಿಯವರ ಆಫ್ರಿಕಾ ಪ್ರವಾಸದ ಆಶಯಗಳಲ್ಲಿ ಅಂತರ್ಗತವಾಗಿತ್ತು.ರಾಜಕೀಯ ವಿಮೋಚನಾ ಹೋರಾಟಗಳಲ್ಲಿ ಆಫ್ರಿಕಾ ರಾಷ್ಟ್ರಗಳು ಗೆಲುವು ಸಾಧಿಸಿದ ನಂತರ, ಭಾರತ-  ಆಫ್ರಿಕಾ ಬಾಂಧವ್ಯದಲ್ಲಿ ಆರ್ಥಿಕ ಅಂಶಗಳು ಪ್ರಾಧಾನ್ಯ ಪಡೆಯತೊಡಗಿವೆ.  1991ರಲ್ಲಿ ಆರ್ಥಿಕ ಸುಧಾರಣೆಗಳ ನಂತರ ಭಾರತದ ಆರ್ಥಿಕ ವೃದ್ಧಿ ದರ ಬೆಳವಣಿಗೆ ಸಾಧಿಸುತ್ತಿದ್ದು, ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಹೀಗಾಗಿ, ತೈಲ, ಅನಿಲ, ಫಾಸ್ಫೇಟ್,  ಯುರೇನಿಯಂ, ಪ್ಲಾಟಿನಂ, ತಾಮ್ರ  ಮುಂತಾದ  ಖನಿಜ  ಸಂಪನ್ಮೂಲಗಳು ಹೇರಳವಾಗಿರುವ ಆಫ್ರಿಕಾ ರಾಷ್ಟ್ರಗಳ ಜೊತೆ ಈಗಾಗಲೇ ಇರುವ ಪಾರಂಪರಿಕ ಬಾಂಧವ್ಯವವನ್ನು ಗಟ್ಟಿಗೊಳಿಸಿಕೊಳ್ಳಲು ಭಾರತ ಮುಂದಾಗಿದೆ.ಹಾಗೆಯೇ ಭಾರತದ ತಂತ್ರಜ್ಞಾನ ಹಾಗೂ ಹಣಹೂಡಿಕೆಯೂ  ಅಭಿವೃದ್ಧಿ ಉದ್ದೇಶಗಳಿಗಾಗಿ ಆಫ್ರಿಕಾಗೆ ಅಗತ್ಯ. ಭಾರತದ ಸರ್ಕಾರಿ ಹಾಗೂ ಖಾಸಗಿ ಬಂಡವಾಳ ಈಗಾಗಲೇ ಆಫ್ರಿಕಾದ ವಿವಿಧ ಭಾಗಗಳನ್ನು ಪ್ರವೇಶಿಸಿಯೂ ಆಗಿದೆ. ಆಫ್ರಿಕಾದಲ್ಲಿ ಹಣ ಹೂಡಿಕೆ ಹೆಚ್ಚಳದೊಂದಿಗೆ ವ್ಯಾಪಾರ ವಹಿವಾಟುಗಳನ್ನು ವೃದ್ಧಿಸಿಕೊಳ್ಳುತ್ತಿದ್ದರೂ ಪಾರಂಪರಿಕ ಪ್ರತಿಸ್ಪರ್ಧಿಯಾದ ಚೀನಾದೊಂದಿಗೆ  ಭಾರತ ಸೆಣಸಬೇಕಿದೆ.  ಆಫ್ರಿಕಾದಲ್ಲಿ ಹೇರಳವಾಗಿರುವ  ಇಂಧನ ಹಾಗೂ ಖನಿಜ ಸಂಪನ್ಮೂಲಗಳನ್ನು ಬಾಚಿಕೊಳ್ಳಲು ಚೀನಾ ಕೂಡ ಯತ್ನಿಸುತ್ತಿದೆ. ಹೀಗಾಗಿ ತ್ವರಿತವಾಗಿ ಬೆಳೆಯುತ್ತಿರುವ ಆಫ್ರಿಕಾದ ಆರ್ಥಿಕತೆ ಜೊತೆಗೆ ವಿಭಿನ್ನ ನೆಲೆಯಲ್ಲಿ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳಲು ಭಾರತವೂ  ಯತ್ನಿಸುತ್ತಿದೆ.ಆಫ್ರಿಕಾ ರಾಷ್ಟ್ರಗಳ ಜೊತೆಗೆ ಭಾರತ ವ್ಯಾಪಾರ ಸಂಬಂಧಕ್ಕೆ ಶತಮಾನಗಳ ಇತಿಹಾಸವಿದೆ.  ಆಫ್ರಿಕಾ ಖಂಡದ 54 ರಾಷ್ಟ್ರಗಳಲ್ಲೂ ಉದ್ಯಮ, ಕೈಗಾರಿಕೆಗಳಲ್ಲಿ ತೊಡಗಿಕೊಂಡಿರುವಂತಹ ಭಾರತೀಯ ಸಮುದಾಯವಿದೆ. ರಾಷ್ಟ್ರಪತಿಯವರ  ಭೇಟಿ ಸಂದರ್ಭದಲ್ಲಿ ಘಾನಾ, ಐವರಿ ಕೋಸ್ಟ್ ಹಾಗೂ ನಮೀಬಿಯಾಗಳಲ್ಲಿ  ವ್ಯಕ್ತವಾದ ಸಂಭ್ರಮ, ಆತ್ಮೀಯತೆಗಳು ಆಫ್ರಿಕಾ- ಭಾರತ ಮಧ್ಯದ ಚಾರಿತ್ರಿಕ ಸ್ನೇಹದ ಪ್ರತೀಕವಾಗಿತ್ತು. ಘಾನಾದಲ್ಲಿ 10,000, ಐವರಿ ಕೋಸ್ಟ್‌ನಲ್ಲಿ 2500 ಹಾಗೂ  ನಮೀಬಿಯಾದಲ್ಲಿ 300 ಮಂದಿ ವೃತ್ತಿಪರರು, ಕಾರ್ಮಿಕರು, ಉದ್ಯಮಿಗಳು ಹಾಗೂ ವ್ಯಾಪಾರಿಗಳನ್ನೊಳಗೊಂಡ ಭಾರತೀಯ ಸಮುದಾಯವಿದೆ.ಸಣ್ಣ, ಮಧ್ಯಮ ಗಾತ್ರದ ವ್ಯಾಪಾರಗಳಲ್ಲಿ ತೊಡಗಿಕೊಂಡ ಅನೇಕ ಭಾರತೀಯ ಕಂಪೆನಿಗಳು ಇಲ್ಲಿವೆ. ತಯಾರಿಕೆ, ಐಸಿಟಿ, ಕೃಷಿ ಸಂಸ್ಕರಣೆ,  ಔಷಧ, ಗಣಿಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಈ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ಅಭಿವೃದ್ಧಿ ಸಹಭಾಗಿತ್ವದ ಹೆಗಲು ನೀಡಲು ಚೀನಾ ಕೂಡ ದೊಡ್ಡ ಮಟ್ಟದಲ್ಲಿ ಆಫ್ರಿಕಾಗೆ ಪ್ರವೇಶಿಸಿದೆ. ತಯಾರಿಕಾ ವಲಯ, ಮೂಲ ಸೌಕರ್ಯ ಸ್ಥಾಪನೆ ಕ್ಷೇತ್ರಕ್ಕೆ ಚೀನಾ ಆದ್ಯತೆ ನೀಡಿದೆ. ಮಾನವ ಸಂಪನ್ಮೂಲ ಹಾಗೂ ಸಾಮರ್ಥ್ಯ ಹೆಚ್ಚಳ ಕ್ಷೇತ್ರದಲ್ಲಿ ಭಾರತ ಈಗಾಗಲೇ ಸಾಕಷ್ಟು ಕೆಲಸ ಮಾಡಿದೆ. ಘಾನಾದಲ್ಲಿ ಇತ್ತೀಚೆಗೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಸಹ ತನ್ನ ಶಾಖೆಯೊಂದನ್ನು ತೆರೆದಿದೆ. 2003ರಲ್ಲಿ ಘಾನಾದಲ್ಲಿ  ಭಾರತದ ನೆರವಿನೊಂದಿಗೆ ಸ್ಥಾಪನೆಯಾದ ಕೋಫಿ ಅನ್ನಾನ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಐಸಿಟಿ  ಸಾಧನೆ ಮುಖ್ಯವಾದದ್ದು. ಈ ಕೇಂದ್ರದೊಂದಿಗೆ ಇಂಡಿಯನ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ( ಸಿ- ಡಾಕ್)  ಸಹಕಾರ ಇದ್ದು ಪಠ್ಯಗಳನ್ನು ನಿರಂತರವಾಗಿ ವಿಸ್ತರಿಸುವುದು ಸಾಧ್ಯವಾಗಿದೆ. ಸೈಬರ್ ಸೆಕ್ಯುರಿಟಿ, ಮೊಬೈಲ್ ಕಂಪ್ಯೂಟಿಂಗ್, ಉದ್ಯಮ ಸಾಫ್ಟ್‌ವೇರ್ ಇತ್ಯಾದಿ ಆಧುನಿಕ ಹಾಗೂ ಪ್ರಸ್ತುತ ಪಠ್ಯಗಳು ಸೇರ್ಪಡೆಯಾಗಿವೆ.ಎಲ್ಲಕ್ಕಿಂತ ಹೆಚ್ಚಾಗಿ ಈ ಕೇಂದ್ರದಿಂದ ಪದವಿ ಪಡೆದ ಯುವಜನರು ಉದ್ಯಮ ಸಂಸ್ಥೆಗಳಲ್ಲಿ ಒಳ್ಳೆಯ ಉದ್ಯೋಗಗಳಲ್ಲಿದ್ದಾರೆ. ಉದ್ಯಮ ಸ್ಥಾಪಿಸಿದವರಿದ್ದಾರೆ. ದೇಶೀಯ ಅಗತ್ಯಗಳಿಗೆ  ಐಟಿಸಿ ಸಲ್ಯೂಷನ್ಸ್‌ಗಳನ್ನು ಸೃಷ್ಟಿಸುತ್ತಾ ಉದ್ಯೋಗದಾತರೂ ಆಗಿರುವುದು ಕಡಿಮೆ ಸಾಧನೆಯೇನಲ್ಲ. ಹಾಗೆಯೇ 1964ರಲ್ಲಿ ಆರಂಭವಾದ  ಇಂಡಿಯನ್  ಟೆಕ್ನಿಕಲ್ ಅಂಡ್ ಎಕನಾಮಿಕ್ ಕೋಆಪರೇಷನ್ (ಐಟೆಕ್) ಕಾರ್ಯಕ್ರಮ ಫಲ ನೀಡುತ್ತಿದೆ. ಆಫ್ರಿಕಾದ ಸಣ್ಣ ರಾಷ್ಟ್ರಗಳೊಂದಿಗೆ ಹೆಚ್ಚುತ್ತಿರುವ ಸಹಕಾರದ ಮುಖ್ಯ ಆಯಾಮ ಎಂದರೆ  ಮಾಹಿತಿ ಹಾಗೂ ತಂತ್ರಜ್ಞಾನಕ್ಕೆ ಸಿಗುತ್ತಿರುವ  ಹೆಚ್ಚಿನ ಒತ್ತು  ಎಂಬುದನ್ನು ಗಮನಿಸಬೇಕು. ನಮೀಬಿಯಾ ಅಧ್ಯಕ್ಷರು ಭಾರತೀಯ ನಿಯೋಗಕ್ಕೆ ನೀಡಿದ  ಔತಣಕೂಟದಲ್ಲಿ ಈ ವರದಿಗಾರ್ತಿ ಪಕ್ಕ ಕುಳಿತ ಅಲ್ಲಿನ ಸಂಸತ್ ಸದಸ್ಯೆಯೊಬ್ಬರು, ‘ನಮಗೆ ಈಗ ಅಗತ್ಯವಾಗಿ ಬೇಕಿರುವುದು ಕೃಷಿ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ’ ಎಂದು ಪ್ರತಿಪಾದಿಸಿದರು. ಆಫ್ರಿಕಾ ಈಗ ‘ಕಪ್ಪು ಖಂಡ’ವಾಗಿ ಉಳಿದಿಲ್ಲ. ಭಾರತದಂತೆಯೇ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಆಫ್ರಿಕಾದ ನವ ಆಶೋತ್ತರಗಳಿಗೆ ಸ್ಪಂದಿಸುವ ಜಾಣ್ಮೆ ಭಾರತಕ್ಕೆಬೇಕು. ಇಂದಿನ ಜಾಗತಿಕ ವಿಶ್ವದಲ್ಲಿ ಭಾರತ ಹಾಗೂ ಆಫ್ರಿಕಾ  ಗುರುತ್ವಾಕರ್ಷಣೆಯ ಕೇಂದ್ರಬಿಂದುಗಳು ಎಂದು ಪ್ರಣವ್ ಬಣ್ಣಿಸಿದ್ದಾರೆ. ಹೀಗಾಗಿ ಭಾರತ ಹಾಗೂ ಆಫ್ರಿಕಾ ರಾಷ್ಟ್ರಗಳಲ್ಲಿ  ಶಾಂತಿ, ಭದ್ರತೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಕಾರ್ಯ ನಿರ್ವಹಿಸಬೇಕಾಗಿರುವ ಹೊಣೆಗಾರಿಕೆಯನ್ನು ಮರೆಯುವಂತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry