7

ಸಮಾನ ನಾಗರಿಕ ಸಂಹಿತೆ ಎಂಬ ಕನಸು

ಆರ್‌. ಪೂರ್ಣಿಮಾ
Published:
Updated:
ಸಮಾನ ನಾಗರಿಕ ಸಂಹಿತೆ ಎಂಬ ಕನಸು

ಸಮಾಜದಲ್ಲಿ ಕಾಣುವ ಅಸಮಾನತೆಗೆ ಧರ್ಮವೂ ಒಂದು ಪ್ರಮುಖ ಕಾರಣವಾಗಿ ಇರುತ್ತದೆ ಎಂಬ ಕಟುಸತ್ಯ, ಇತಿಹಾಸದ ಎಲ್ಲ ಕಾಲಘಟ್ಟಗಳಲ್ಲೂ ನಿಚ್ಚಳವಾಗಿ ಎದ್ದು ಕಾಣುತ್ತದೆ. ಈ ಕಟುಸತ್ಯದ ಮುಂದೆ ‘ಧರ್ಮ ಎಲ್ಲ ಜನರನ್ನೂ ಒಂದುಗೂಡಿಸುತ್ತದೆ, ಸಮಾನವಾಗಿ ಕಾಣುತ್ತದೆ’ ಎನ್ನುವ ಪ್ರತಿಪಾದನೆಯಲ್ಲಿ ಎಷ್ಟರ ಮಟ್ಟಿಗೆ ಸತ್ಯವಿದೆ ಎಂಬ ಸಂದೇಹ ಮೂಡುವುದು ಅನಿವಾರ್ಯ.ವಿವಿಧ ಉದ್ದೇಶಗಳಿಂದ ಕೆಳಗೆ ತಳ್ಳಿದವರನ್ನು ಅಲ್ಲೇ ಅದುಮಿ ಇರಿಸುವ ಶೋಷಣೆಯ ಅಸ್ತ್ರಗಳಿಗೆ, ವಿಭಜನೆಯ ಶಸ್ತ್ರಗಳಿಗೆ ಧರ್ಮದ ಒಂದಿಷ್ಟು ಲೇಪನ ಇರಲೇಬೇಕು, ಇಲ್ಲದಿದ್ದರೆ ಅವು ಕಾಲಕ್ರಮೇಣ ತುಕ್ಕು ಹಿಡಿಯುತ್ತವೆ.ಇದೀಗ ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯ ಮಾತು ಮತ್ತೊಮ್ಮೆ ಚರ್ಚೆಗೆ ಬಂದು, ಹಳೆಯದನ್ನೂ ಹೊಸದನ್ನೂ ಕೆದಕುವಂತೆ ಮಾಡುತ್ತಿದೆ. ಸಮಾನತೆ ಕಾಪಾಡುವುದರಲ್ಲಿ ಸಂವಿಧಾನದಷ್ಟೇ ಪವಿತ್ರ  ಪಾತ್ರ ವಹಿಸುವ ನ್ಯಾಯಾಂಗ, ಸಮಾನ ನಾಗರಿಕ ಸಂಹಿತೆ ಕುರಿತು ಗಂಭೀರವಾಗಿ ಚಿಂತನೆ ನಡೆಯುವ ಅಗತ್ಯ ಕುರಿತು ಹಿಂದೆ ಅನೇಕ ಬಾರಿ ಎಚ್ಚರಿಸಿದೆ.ನಾಲ್ಕಾರು ದಿನಗಳ ಹಿಂದೆ ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಯ ಸಾಧಕಬಾಧಕಗಳನ್ನು ವಿಸ್ತೃತವಾಗಿ ಚರ್ಚಿಸಿ ವರದಿ ನೀಡುವಂತೆ ಕಾನೂನು ಆಯೋಗಕ್ಕೆ ಪತ್ರ ಬರೆದಿದೆ. ಅಂದಮೇಲೆ, ಸಮಾನ ನಾಗರಿಕ ಸಂಹಿತೆ ಕುರಿತು ಹೊಸ ಸಂವಾದಕ್ಕೆ ವೇದಿಕೆ ಅಥವಾ ಸಮರಕ್ಕೆ ಭೂಮಿಕೆ ಸಿದ್ಧವಾಗಿದೆ. ಏನಾದರಾಗಲಿ ಸಮಾನ ಸಂಹಿತೆ ಕುರಿತ ಚರ್ಚೆಗೆ ಸಿಕ್ಕಿರುವ ಚಾಲನೆ, ತನಗೆ ಎದುರಾಗುವ ರಾಜಕೀಯ- ಧಾರ್ಮಿಕ ಅಡೆತಡೆಗಳನ್ನು ದಾಟಿಕೊಂಡು ಕಾನೂನು ರೂಪದ ತಾರ್ಕಿಕ ಗುರಿ ಮುಟ್ಟಲಿ ಎನ್ನುವುದು ಹಲವರ ಕನಸು. ಆದರೆ ಅವರ ಕನಸೊಡೆದೆಬ್ಬಿಸಲು ಹಳೆಯ ಭೂತಗಳು ಬೇಕಾದಷ್ಟಿವೆ.ಬ್ರಿಟಿಷರು ಭಾರತದಲ್ಲಿ ಆಡಳಿತ ನಡೆಸುವಾಗ ‘ನಾವು ನಿಮ್ಮ ಧಾರ್ಮಿಕ ವಿಷಯಗಳಲ್ಲಿ ತಲೆಹಾಕುವುದಿಲ್ಲ’ ಎಂದು ಬಾಯಲ್ಲಿ ಹೇಳುತ್ತಲೇ ಅದರಲ್ಲಿ ಕೈಹಾಕುತ್ತಾ ಇದ್ದರು.  ಆದರೆ ಧರ್ಮಗಳ ಆಚರಣೆ ವಿಚಾರದಲ್ಲಿ ಮಾತ್ರ ತುಂಬ ಹುಷಾರಾಗಿ ‘ವೈಯಕ್ತಿಕ ಕಾನೂನು’ ತಂದರು. ಬೇರೆಲ್ಲಾ ವಿಚಾರಗಳಲ್ಲಿ ಎಲ್ಲ ಜನರೂ ಸಮಾನರು, ಆದರೆ ಧಾರ್ಮಿಕ ವಿಚಾರದಲ್ಲಿ ಮಾತ್ರ ಅವರವರ ಗ್ರಂಥಗಳು ಮತ್ತು ಗುರುಗಳು ಹೇಳಿದಂತೆ ಮಾಡಿಕೊಳ್ಳಲಿ ಎನ್ನುವುದು ಅವರ ನಿಲುವಾಗಿತ್ತು.ಧಾರ್ಮಿಕ ಆಚರಣೆ ಮತ್ತು ವಿಧಿವಿಧಾನ ಅನುಸರಣೆ ವೈಯಕ್ತಿಕ ಇಷ್ಟಾನಿಷ್ಟ’ ಎನ್ನುವುದು ಯಾರಾದರೂ ಒಪ್ಪಬಹುದಾದ ಮಾತು. ಆದರೆ ಧಾರ್ಮಿಕ ವಿಧಿಗಳ ರೂಪದಲ್ಲಿದ್ದ ಕೆಲವು ವೈಯಕ್ತಿಕ ಆಚರಣೆಗಳು ಮತ್ತು ವೈಯಕ್ತಿಕ ರೂಢಿಗಳನ್ನು ‘ವೈಯಕ್ತಿಕ ಕಾನೂನು’ ಎಂದು ಕರೆದ ಬ್ರಿಟಿಷರು ಧರ್ಮ ಮತ್ತು ಕಾನೂನು ಎರಡನ್ನೂ ಒಂದುಗೂಡಿಸಿದರು. ಅವರು ದೇಶ ಬಿಟ್ಟ ನಂತರ ರೂಪುಗೊಂಡ ನಮ್ಮ ಸಂವಿಧಾನವು ಸಮಾನತೆಯನ್ನು ಒತ್ತಿ ಹೇಳಿದರೂ ನಮ್ಮ ಸಂಸತ್ತು ರೂಪಿಸಿದ ಕೆಲವು ಕಾನೂನುಗಳು ಅದನ್ನು ಎತ್ತಿ ಹಿಡಿಯಲಿಲ್ಲ. ಆದ್ದರಿಂದ ವಿಭಜನೆಯ ನಂತರವೂ ದೇಶ ಭಾವನಾತ್ಮಕವಾಗಿ ಎರಡಾಯಿತು ಎಂಬ ವಿಶ್ಲೇಷಣೆ ನಮ್ಮೆದುರಿಗಿದೆ.ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಭಿನ್ನತೆ ಬಹುರೂಪವಷ್ಟೇ ಅಲ್ಲ, ವಿರಾಟ್‌ರೂಪದಲ್ಲೂ ಇದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಸಮಾನವಾಗಿ ಅನ್ವಯಿ

ಸುವ ಕಾನೂನುಗಳನ್ನು ರಚಿಸುವುದೇ ಸ್ವತಂತ್ರ ಭಾರತ ಎದುರಿಸಿದ ಅತ್ಯಂತ ಸಂಕೀರ್ಣ ಸವಾಲು ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಮ್ಮ ಸಂವಿಧಾನ ಮತ್ತು ಕಾನೂನು ಸಂಹಿತೆಗಳ ರಚನೆಯ ಚರಿತ್ರೆಯಲ್ಲಿ ಈ ಕುರಿತ ಹಲವಾರು ವಿಷಾದಕರ ಅಧ್ಯಾಯಗಳಿವೆ.ದೇಶದ ಮೊದಲ ಪ್ರಧಾನಿಯಾದ ಜವಾಹರಲಾಲ್ ನೆಹರು ನಿಜವಾಗಿಯೂ ಸಮಾನ ನಾಗರಿಕ ಸಂಹಿತೆಗೆ ಬದ್ಧರಾಗಿದ್ದರೇ ಎಂಬ ಪ್ರಶ್ನೆ ಇನ್ನೂ ಕಾಡುತ್ತಿದೆ. ಸಂವಿಧಾನದ ಧರ್ಮನಿರಪೇಕ್ಷ ನಿಲುವಿಗೆ ಕಟಿಬದ್ಧರಾಗಿದ್ದ ಅವರು ಏಕರೂಪದ ನಾಗರಿಕ ಸಂಹಿತೆ ತರಲು ಇಷ್ಟ ಇದೆ ಎಂದು ಎಷ್ಟು ಹೇಳಿದರೂ ಅದನ್ನು ತರಲು ಮಾತ್ರ ಏಕೆ ಹಟ ತೊಡಲಿಲ್ಲ ಎಂಬ ಪ್ರಶ್ನೆ ಇನ್ನೂ ಚರ್ಚೆಗೆ ಉಳಿದಿದೆ. ಸಮಾನ ನಾಗರಿಕ ಸಂಹಿತೆ ವಿಚಾರವನ್ನು ಪರಿಚ್ಛೇದ 44 ರಲ್ಲಿ ಸೇರಿಸುವ ಮೂಲಕ ‘ಅದು ಒಂದು ಹಕ್ಕಲ್ಲ, ಒಂದು ಗುರಿ ಮಾತ್ರ’ ಎಂಬಂತೆ ಅದನ್ನು ಕನ್ನಡಿಯ ಗಂಟಾಗಿಸಿದ ಅವರ ಚಾಣಾಕ್ಷತೆ ವಿವಿಧ ವ್ಯಾಖ್ಯಾನಗಳನ್ನು ಪಡೆದಿದೆ.ಹಾಗೆಯೇ ದೇಶದ ಪ್ರಥಮ ಮಹಾಚುನಾವಣೆಗೆ ನೆಹರು ಈ ವಿಚಾರವನ್ನೇ ಒತ್ತೆ ಇಟ್ಟು ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ನೋಡಿಕೊಂಡು ತಮ್ಮ ಸ್ಥಾನ ಭದ್ರ ಮಾಡಿಕೊಂಡರೇ ಎಂಬ ಪ್ರಶ್ನೆಗೆ ಹಲವಾರು ಬಗೆಯ ಉತ್ತರಗಳಿವೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ನಂತರ 1952-56ರ ಅವಧಿಯಲ್ಲಿ ಆ ಕುರಿತ ಕಾನೂನನ್ನು ನಾಲ್ಕು ಮಸೂದೆಗಳಾಗಿ ವಿಂಗಡಿಸಿ ಸಂಸತ್ತಿನಲ್ಲಿ ಅಂಗೀಕಾರ ಪಡೆದ ಅವರ ರಾಜಕೀಯ ನೀತಿಗೆ ಧರ್ಮದ ಗ್ರಹಣ ಹಿಡಿದಿತ್ತೇ ಎಂಬ ಪ್ರಶ್ನೆ ಮುಂದಿನ ಪೀಳಿಗೆಗಳನ್ನು ಬಾಧಿಸಿದೆ.ಜನಸಂಖ್ಯೆಯಲ್ಲಿ ಶೇ 80 ರಷ್ಟು ಇರುವ ಹಿಂದುಗಳನ್ನು ಅವರ ಧರ್ಮ ಲೆಕ್ಕಿಸದೆ ಮೊದಲು ಕಾನೂನು ಮೂಲಕ ಒಗ್ಗೂಡಿಸಿ ಭಾರತ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಲು ಅವರು ಯತ್ನಿಸಿದರೇ ಎಂಬ ಪ್ರಶ್ನೆ ಇನ್ನೂ ಉತ್ತರ ಬೇಡುತ್ತಿದೆ. ಅನೇಕ ರೀತಿಯ ಧರ್ಮನಿರಪೇಕ್ಷ ಕಾನೂನುಗಳು, ಸಮಾನತೆ ಸಾರುವ ಕಾನೂನುಗಳನ್ನು ತರಲು ಉತ್ಸಾಹ ತೋರಿದರೂ ಧಾರ್ಮಿಕ ಕಟ್ಟುಪಾಡುಗಳಿಗೆ ಕೆಲವು ಕಾನೂನುಗಳನ್ನು ಕಟ್ಟಿಹಾಕಿದರೇಕೆ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಇನ್ನೂ ಉಳಿದಿದೆ.ಬಹುಪಾಲು ಭಾರತೀಯ ಮಹಿಳೆಯರ ಧಾರ್ಮಿಕ ಸಂಕೋಲೆಗಳನ್ನು ಸರಿಸಿ ಅವರಿಗೆ ಅನೇಕ ಸಮಾನ ಹಕ್ಕುಗಳನ್ನು ಕೊಡಲು ಮುಂದಾದ ನೆಹರು, ಮುಸ್ಲಿಮ್ ಮಹಿಳೆಯರ ವಿಚಾರದಲ್ಲಿ ಮಾತ್ರ ಏಕೆ ಹಿಂದೆಗೆದರು ಎನ್ನುವ ಪ್ರಶ್ನೆ ನಮ್ಮ ಸಾಮಾಜಿಕ ಚರಿತ್ರೆಯಲ್ಲಿ ಉಳಿದುಹೋಗಿದೆ. ಮುಂದೆ ತರಲಾದ ಧರ್ಮಾಚರಣೆಯನ್ನು ಮೀರಿದ ‘ವಿಶೇಷ ವಿವಾಹ ಕಾನೂನು’, ಪಾಪಕ್ಕೆ ಪ್ರಾಯಶ್ಚಿತ್ತ ರೂಪದಲ್ಲಿ ಜಾರಿಗೆ ಬಂತೇ ಎಂಬ ಕುಹಕ- ಅನುಮಾನದ ಪ್ರಶ್ನೆಯೂ ದಾಖಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಆರಂಭವಾದ ಸಂವಿಧಾನ ಮತ್ತು ಅದನ್ನು ಆಧರಿಸಿದ ಕಾನೂನುಗಳ ಸ್ವರೂಪದ ಚರ್ಚೆ, ಸ್ವಾತಂತ್ರ್ಯ ಬಂದ ನಂತರ ನಡೆದ ಅತ್ಯಂತ ಪ್ರಮುಖ ಮತ್ತು ಅಮೂಲ್ಯ ಪ್ರಕ್ರಿಯೆಯಾಗಿ ಬದಲಾಗಿದೆ. ಚರ್ಚೆಗಳೆಲ್ಲ ಕಾರ್ಯರೂಪಕ್ಕೆ ಇಳಿಯುವಾಗ, ಆಶಯಕ್ಕೂ ಆಚರಣೆಗೂ ಒಂದಿಷ್ಟಾದರೂ ಅಂತರ ಇದ್ದೇ ಇರುತ್ತದಲ್ಲವೇ? ಇದರಲ್ಲಿ ಎದ್ದು ಕಾಣುವುದು ಸಮಾನ ನಾಗರಿಕ ಸಂಹಿತೆಯನ್ನು ಸ್ವತಂತ್ರ ಭಾರತ ಕಾಣಬೇಕಾದ ಒಂದು ಕನಸು ಎಂಬಂತೆ ಮಾಡಿಟ್ಟದ್ದು ರಾಜಕೀಯ.ಇದಕ್ಕೆ ನೇತೃತ್ವ ನೆಹರು ಅವರದಾದರೂ ಒಟ್ಟಾರೆ ಆ ಕಾಲದ ರಾಜಕೀಯ ಹಿತಾಸಕ್ತಿ ಮತ್ತು ಕಾಂಗ್ರೆಸ್ ಒತ್ತಡಗಳೇ ಅದಕ್ಕೆ ಹೊಣೆ. ಅಲ್ಲಿಂದಾಚೆಗೆ ರಾಜಕೀಯ ಹಿತಾಸಕ್ತಿಗೆ ಧರ್ಮವನ್ನು ಬಳಸಿಕೊಳ್ಳುವುದು ಒಂದು ರೀತಿಯಲ್ಲಿ ಕಾನೂನೇತರ ಕಾನೂನಾಯಿತು. ವ್ಯಕ್ತಿಯ ಸಮಾಧಾನಕ್ಕಿಂತ ಅವರ ಧರ್ಮದ ಆದೇಶಗಳ ರಕ್ಷಣೆಯೇ ಮುಖ್ಯವಾಯಿತು.ನೆಹರು ನೇತೃತ್ವದ ಈ ಬೆಳವಣಿಗೆಗೆ ಆ ಕಾಲದ ರಾಜಕೀಯ ಮತ್ತು ಧಾರ್ಮಿಕ ವಿರೋಧ ಮತ್ತು ಬೆಂಬಲ ಎರಡೂ ಅಪಾರವಾಗಿತ್ತು. ಸ್ವಾತಂತ್ರ್ಯ ಬಂದ ನಂತರ ದೇಶ

ದಲ್ಲಿ ಅಸಮಾನತೆ ತಾನಾಗಿ ಹೋಗಿಬಿಡುತ್ತದೆ ಅಂದುಕೊಂಡವರು, ಸಾಮಾಜಿಕ ಚಳವಳಿಕಾರರು, ಮುಸ್ಲಿಮರೂ ಸೇರೆ ಅನೇಕ ಪುರೋಗಾಮಿ ಚಿಂತಕರು ಸಮಾನ ಸಂಹಿತೆಗೆ ಒತ್ತಾಯಿಸುತ್ತಿದ್ದರು. ಆದರೆ ಧಾರ್ಮಿಕ ಸಂಘಟನೆಗಳು, ಧರ್ಮರಾಜಕಾರಣದ ನಾಯಕರು ಅದನ್ನು ವಿರೋಧಿಸುತ್ತಿದ್ದರು.ಸಂವಿಧಾನದ ಕರ್ತೃಗಳು ಸಮಾನತೆಯನ್ನು ಎಲ್ಲ ಕಾನೂನುಗಳಲ್ಲಿ ಎತ್ತಿಹಿಡಿಯಲು ಕಾತುರರಾಗಿದ್ದರು. ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಈ ಕುರಿತು ಅನೇಕ ರೀತಿಯ ಹೊಡೆದಾಟ ಬಡಿದಾಟಗಳು ಆಗಿದ್ದವು. ಆದರೆ ಇವೆಲ್ಲಕ್ಕಿಂತ ಅನನ್ಯವಾದದ್ದು ಬಿ.ಆರ್. ಅಂಬೇಡ್ಕರ್ ಅವರ ಆಕ್ರೋಶಭರಿತ ಪ್ರತಿಭಟನೆ. ಸಮಾನ ನಾಗರಿಕ ಸಂಹಿತೆಯನ್ನು ತರಲು ದೇಶದ ಪ್ರಥಮ ಸರ್ಕಾರ ಮತ್ತು ಸಂಸತ್ತು ತೋರಿದ ಉದ್ದೇಶಪೂರ್ವಕ ನಿರಾಸಕ್ತಿ ಮತ್ತು ವೈಫಲ್ಯವನ್ನು, ಕಾನೂನು ಸಚಿವರಾಗಿದ್ದ ಅಂಬೇಡ್ಕರ್ ಅವರು ತೀವ್ರವಾಗಿ ವಿರೋಧಿಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.ವಿಭಜನೆಯ ಕರಾಳ ಸತ್ಯಗಳ ನೆರಳಲ್ಲೇ ನಮ್ಮ ಸಂವಿಧಾನ ರೂಪುಗೊಂಡರೂ ಅದಕ್ಕೆ ಧರ್ಮನಿರಪೇಕ್ಷತೆ ಮತ್ತು ಸಮಾನತೆಯ ನೆಲೆಗಟ್ಟು ರೂಪಿಸಲು ಶ್ರಮಿಸುತ್ತಿದ್ದ ಅವರಿಗೆ ಅತ್ಯಂತ ನಿರಾಶೆಯಾಗಿತ್ತು. ಅಂಬೇಡ್ಕರ್ ಅವರಂತೆ ಅನೇಕ ಮುಖಂಡರು ಸಮಾನತೆಗೆ ಆಗ್ರಹಿಸಿದರೂ ರಾಜಕೀಯ ಲೆಕ್ಕಾಚಾರಗಳೇ ಮೇಲುಗೈ ಪಡೆದವು. ಸಮಾನ ನಾಗರಿಕೆ ಸಂಹಿತೆ ಮತ್ತೊಂದು ಕಾಶ್ಮೀರವಾಯಿತು. ದೇಶವನ್ನು ಅನಿಶ್ಚಯತೆ, ಅನಿರ್ದಿಷ್ಟತೆಗಳಿಗೆ ದೂಡಿದ ಅಂದಿನ ಕೆಲವು ತೀರ್ಮಾನಗಳಿಗೆ ಇನ್ನೂ ಹೊಸದಿಕ್ಕು ಸಿಕ್ಕಿಲ್ಲ.ಸಂಸತ್ತಿನಲ್ಲಿ ನಾಲ್ಕುನೂರಕ್ಕೂ ಹೆಚ್ಚು ಸಂಖ್ಯಾಬಲವಿದ್ದರೂ ಮನೋಬಲ ಇಲ್ಲದಿದ್ದ ಕಾಂಗ್ರೆಸ್ ಸರ್ಕಾರ ಸಮಾನ ನಾಗರಿಕ ಸಂಹಿತೆಯನ್ನು ಒಟ್ಟಿನಲ್ಲಿ ಒಂದು ಬಲಿಷ್ಠ ಕಾನೂನು ಎಂಬಂತೆ ಮಾಡಲಿಲ್ಲ. ಭಾರತದಲ್ಲಿ ಜೈನ, ಬೌದ್ಧ, ಸಿಖ್ಖ, ಪಾರಸಿಕ, ಕ್ರೈಸ್ತ, ಯೆಹೂದಿ ಮುಂತಾದ ಧರ್ಮಗಳು ಇದ್ದರೂ ಸಮಾನ ನಾಗರಿಕ ಸಂಹಿತೆ ಎನ್ನುವುದು ಕೇವಲ ಹಿಂದು - ಮುಸ್ಲಿಂ ಸಂಘರ್ಷದ ಅಜೆಂಡಾ ಆಗಿ ಬೆಳೆದದ್ದು ಮುಂದಿನ ಕಥೆ.ಈ ವಿಷಯ ‘ರಾಜ್ಯನೀತಿ ನಿರ್ದೇಶಕ ತತ್ವ’ ಎಂಬ ಪಟ್ಟ ಗಳಿಸಿದರೂ ಅದು ಮುಖ್ಯವಾಗಿ ಕಾಂಗ್ರೆಸ್ ಸೇರಿ ಎಲ್ಲ ರಾಜಕೀಯ ಪಕ್ಷಗಳ ಚುನಾವಣಾ ನೀತಿ ನಿರ್ದೇಶಕ ತತ್ವವಾಗಿ ಬೆಳೆದಿದೆ. ಆಮೇಲೆ ನೆಹರು ಅವರ ಈ ‘ಧರ್ಮನಿರಪೇಕ್ಷ’ ಮತನೀತಿ ಮತ್ತು ಮತಬ್ಯಾಂಕ್ ನೀತಿ, ಮುಂದೆ ಅವರ ಮೊಮ್ಮಗ ರಾಜೀವ್ ಗಾಂಧಿ ಅವರ ಕೈಯಲ್ಲಿ ಶಾ ಬಾನೋ ಪ್ರಕರಣದಲ್ಲಿ ಇನ್ನೆಂಥ ಕರಾಳ ರೂಪವನ್ನು ಪಡೆಯಿತು ಎನ್ನುವುದನ್ನೂ ಇಡೀ ದೇಶ ತೀವ್ರ ಅಸಹ್ಯ ಮತ್ತು ಅಸಹಾಯಕತೆಯಿಂದ ನೋಡಿತು. ನ್ಯಾಯಾಂಗದ ತೀರ್ಪಿಗೆ ವಿರೋಧವಾಗಿ ಸಂವಿಧಾನವನ್ನೇ ಹೇಗೆ ತಿರುಚುವುದು ಅಥವಾ ತಿದ್ದುಪಡಿ ಮಾಡುವುದು ಎಂಬುದನ್ನೆಲ್ಲ ಅವರು ಮನೆಯೆಂಬ ಮೊದಲ ಪಾಠಶಾಲೆಯಲ್ಲಿ ಜನನಿ ಎಂಬ ಮೊದಲ ಗುರುವಿನಿಂದ ಕಲಿತಿದ್ದರಲ್ಲ? ವಸ್ತುನಿಷ್ಠವಾಗಿ ನೋಡಿದರೆ ಸಮಾನ ನಾಗರಿಕ ಸಂಹಿತೆ ಎನ್ನುವುದು ಯಾವುದೇ ಧರ್ಮದಲ್ಲಿ ಇರುವ ಅಸಮಾನತೆಯನ್ನು ಅದರಲ್ಲೂ ಮಹಿಳೆಯರನ್ನು ಬಾಧಿಸುವ ಅಸಮಾನತೆಯನ್ನು ನಿವಾರಿಸಲು ನೆರವಾಗುವ ಕಾನೂನು. ಬೇರೆ ಎಲ್ಲ ಕಾನೂನುಗಳು ಎಲ್ಲ ಧರ್ಮಗಳಿಗೂ ಸಮಾನವಾಗಿ ಅನ್ವಯಿಸುವಂತೆ ಇದೂ ಕೂಡ ಹಾಗೆ ಮಾಡಿ ಮಹಿಳೆಯರಿಗೆ ಹಕ್ಕುಗಳನ್ನು ಕೊಡುತ್ತದೆಯಷ್ಟೆ.ಆಸ್ತಿಪಾಸ್ತಿ, ಮದುವೆ, ದಾಂಪತ್ಯ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ ಮುಂತಾದ ವಿಚಾರಗಳಲ್ಲಿ ಎಲ್ಲ ಧರ್ಮಗಳಿಗೆ ಸೇರಿದ ಮಹಿಳೆಯರಿಗೆ ಪುರುಷರಿಗೆ ಸಮಾನವಾದ ಹಕ್ಕು ದೊರಕಿಸುವುದು ಇದರ ಮೂಲ ಉದ್ದೇಶ. ಇದನ್ನು ಕುರಿತು ಯೋಚಿಸುವುದೇ ‘ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆಸುವ ಪ್ರಹಾರ’ ಎನ್ನುವುದು ಅಪ್ಪಟ ಅಪಪ್ರಚಾರ.  ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಕುರಿತು ಪ್ರಸ್ತಾಪ ಮಾಡಿತ್ತು. ಈಗ ಅಧಿಕಾರ ಹಿಡಿದ ಎರಡು ವರ್ಷಗಳ ನಂತರ ಇದನ್ನು ಕೈಗೆತ್ತಿಕೊಂಡು ಕಾನೂನು ಆಯೋಗಕ್ಕೆ ವರದಿ ನೀಡಲು ಸೂಚನೆ ನೀಡಿದೆ. ಕೇಂದ್ರ ಕಾನೂನು ಸಚಿವರೂ ಈ ಬಗ್ಗೆ ಮಾತನಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಂದಿರುವ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಇದನ್ನು ಮುಂದಿಟ್ಟಿದೆ ಎಂದು ನಿರೀಕ್ಷೆಯಂತೆ ಕಾಂಗ್ರೆಸ್ ಆರೋಪಿಸಿದೆ.ಮಾಧ್ಯಮಗಳು ಧಾರ್ಮಿಕ ನಾಯಕರ ವಿರೋಧವನ್ನೇ ದೊಡ್ಡದು ಮಾಡುತ್ತಿವೆ. ಈ ಪ್ರಸ್ತಾವಕ್ಕೆ ನಮ್ಮ ರಾಜ್ಯಗಳ ಮುಖ್ಯಮಂತ್ರಿಗಳು ಒಬ್ಬೊಬ್ಬರಾಗಿ ಅವರದೇ ಕಾರಣಗಳಿಗೆ ವಿರೋಧ ವ್ಯಕ್ತಪಡಿಸುವುದು ಇದ್ದೇ ಇರುತ್ತದೆ. ಆದರೆ ಅವರಿಗೆ ಹೇಳಬೇಕಾದ ಒಂದು ಅದ್ಭುತ ವಿಷಯವೆಂದರೆ ನಮ್ಮ ದೇಶದಲ್ಲಿ ಗೋವಾ ರಾಜ್ಯದಲ್ಲಿ ಮಾತ್ರ ಈಗಾಗಲೇ ಸಮಾನ ನಾಗರಿಕ ಸಂಹಿತೆ ಕಾನೂನಿದ್ದು, ಅಲ್ಲಿರುವ ಎಲ್ಲ ಧರ್ಮಗಳ ಜನರೂ ಅದನ್ನು ಒಪ್ಪಿಕೊಂಡು ಜೀವನ ಮಾಡುತ್ತಿದ್ದಾರೆ.ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಚುನಾವಣೆಯ ಫಲಿತಾಂಶ ಏನೇ ಆದರೂ ಕಾನೂನು ತರುವ ಕಠೋರ ಬದ್ಧತೆ ಎನ್‌ಡಿಎ ಸರ್ಕಾರಕ್ಕೆ ಇದೆಯೇ, ಆ ಕುರಿತು ಬಹಿರಂಗ ವಾಗ್ದಾನ ನೀಡಲು ಅದು ಸಿದ್ಧವಿದೆಯೇ ಎಂದು ಕೇಳಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry