7

ಸ್ವಯಂ ಶ್ಲಾಘನೆಯ ಪ್ರಲೋಭನೆ

ರಾಮಚಂದ್ರ ಗುಹಾ
Published:
Updated:
ಸ್ವಯಂ ಶ್ಲಾಘನೆಯ ಪ್ರಲೋಭನೆ

ಉದಾರೀಕರಣ ಪ್ರಕ್ರಿಯೆಯ 25ನೇ ವಾರ್ಷಿಕದ ಸಂದರ್ಭದಲ್ಲಿ ಕಳೆದ ವಾರ ‘ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆ, ಸುಧಾರಣೆಗಳು ರೂಪುಗೊಳ್ಳುವಾಗ ಹಣಕಾಸು ಸಚಿವರಾಗಿದ್ದ ಡಾ. ಮನಮೋಹನ್ ಸಿಂಗ್ ಅವರ ಸುದೀರ್ಘ ಸಂದರ್ಶನವನ್ನು ಪ್ರಕಟಿಸಿತು.ಅವು ಸಾರ್ವಜನಿಕ ಜೀವನದಲ್ಲಿ ಡಾ. ಸಿಂಗ್ ಅವರ ಅತ್ಯುತ್ತಮ ವರ್ಷಗಳು; ಪ್ರಧಾನಿಯಾಗಿ ತೀರಾ ಸಾಧಾರಣವಾದ (ದುರಂತಮಯ ಅಲ್ಲವಾದರೂ) ಎರಡನೇ ಅವಧಿ ಪೂರ್ಣಗೊಂಡ ಬಳಿಕ ಈಗ ಅರೆ ನಿವೃತ್ತಿಯಲ್ಲಿರುವ ಡಾ. ಸಿಂಗ್ ಅವರು ಸಂದರ್ಶನದಲ್ಲಿ ಸ್ವಯಂ ಹೊಗಳಿಕೆಯ ಧ್ವನಿಯಲ್ಲಿ ಮಾತನಾಡಬಹುದು ಎಂದು ಯಾರಾದರೂ ನಿರೀಕ್ಷಿಸಬಹುದು.ಆದರೆ ಅದಕ್ಕೆ ವ್ಯತಿರಿಕ್ತವಾಗಿ, ಹಣಕಾಸು ಸಚಿವರಾಗಿದ್ದಾಗ ತಮ್ಮ ಕೆಲಸಕ್ಕೆ ನೆರವಾದ ಜನರನ್ನು ಡಾ. ಸಿಂಗ್ ಅವರು ಉದಾರವಾಗಿ ಶ್ಲಾಘಿಸಿದ್ದು ಈ ಲೇಖಕನ ಗಮನ ಸೆಳೆಯಿತು.ಸೋನಿಯಾ ಗಾಂಧಿ ಅವರಿಗೆ ಪಿ.ವಿ. ನರಸಿಂಹರಾವ್ ಅವರು (ನಾನು ಈ ಅಂಕಣದಲ್ಲಿ 2010ರಲ್ಲಿ ವಾದಿಸಿದಂತೆ) ‘ಉಲ್ಲೇಖಿಸಬಾರದ’ ವ್ಯಕ್ತಿ. 2004-14ರ ಅವಧಿಗೆ ಯುಪಿಎ ಸರ್ಕಾರದ ಪ್ರಧಾನಿಯಾಗಿ ಸೋನಿಯಾ ನೇಮಿಸಿದ ವ್ಯಕ್ತಿ ಅಷ್ಟೊಂದು ಜಿಪುಣ ಅಥವಾ ಒರಟ ಅಲ್ಲ.ತಮ್ಮ ಮೇಲ್ವಿಚಾರಣೆಯಲ್ಲಿ 1990ರ ದಶಕದಲ್ಲಿ ನಡೆದ ಸುಧಾರಣೆಗಳಿಗೆ ‘ದೇಶದಲ್ಲಿ ಮತ್ತು ಪಕ್ಷದೊಳಗೆ (ಕಾಂಗ್ರೆಸ್) ಭಾರಿ ವಿರೋಧ ಇತ್ತು. ಆದರೆ ಪ್ರಧಾನಿ ರಾವ್ ಅವರ ರಾಜಕೀಯ ನಿರ್ವಹಣೆಯ ಜಾಣ್ಮೆಯಿಂದ ಎಲ್ಲ ತಡೆಗಳನ್ನು ದಾಟಲು ಸಾಧ್ಯವಾಯಿತು’ ಎಂದು ಸಿಂಗ್ ಹೇಳಿದರು.ಆಗ ವಾಣಿಜ್ಯ ಸಚಿವರಾಗಿದ್ದ ಪಿ. ಚಿದಂಬರಂ ಅವರನ್ನೂ ಸಿಂಗ್ ಹೊಗಳಿದರು. ‘ಅವರ ಬೆಂಬಲ ಇಲ್ಲದೆ ಇದ್ದಿದ್ದರೆ ವ್ಯಾಪಾರ ನೀತಿ ಅಷ್ಟು ವೇಗವಾಗಿ ರೂಪುಗೊಳ್ಳುವುದು ಸಾಧ್ಯವಿರಲಿಲ್ಲ’ ಎಂಬುದನ್ನು ಸಿಂಗ್ ನೆನಪಿಸಿಕೊಂಡರು.ಕೆಲವು ಅಧಿಕಾರಿಗಳ ಬಗ್ಗೆಯೂ ಸಿಂಗ್ ಅವರು ಒಳ್ಳೆಯ ಮಾತುಗಳನ್ನು ಆಡಿದರು. ‘ಆಗ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಎ.ಎನ್. ವರ್ಮಾ ಅವರಿಲ್ಲದಿದ್ದರೆ ನಾಗರಿಕ ಸೇವಾ ಸಮುದಾಯದಿಂದ ಅಷ್ಟೊಂದು ಬಲವಾದ ಬೆಂಬಲ ದೊರೆಯುತ್ತಿರಲಿಲ್ಲ’ ಎಂದು ಹೇಳಿದರು.ಅಧಿಕಾರಿ ವರ್ಗ ಮತ್ತು ಸಂಪುಟ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದ ಸಿಂಗ್, ತಮ್ಮ ಸಹ ವಿದ್ವಾಂಸರಿಂದ ಪಡೆದ ನೆರವಿಗೂ ಆಭಾರಿಯಾದರು. ಸಂದರ್ಶನದ ವಿವಿಧ ಸಂದರ್ಭಗಳಲ್ಲಿ  ಅವರು ಇತರ 14 ಅರ್ಥಶಾಸ್ತ್ರಜ್ಞರನ್ನು ಹೆಸರಿಸಿದರು;

ಅವರಲ್ಲಿ ಏಳು ಮಂದಿ ಸರ್ಕಾರದಲ್ಲಿದ್ದವರಾದರೆ ಏಳು ಮಂದಿ ಹೊರಗಿನವರು. ಇವರೆಲ್ಲರೂ ಸುಧಾರಣೆ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಿದವರು ಅಥವಾ ಅದನ್ನು ಪರಿಷ್ಕರಿಸಿದವರು  ಅಥವಾ ಸಾರ್ವಜನಿಕವಾಗಿ ಬೆಂಬಲ ಘೋಷಿಸಿದವರು.ಸಿಂಗ್ ಅವರು ಹಣಕಾಸು ಸಚಿವರಾಗಿ ಕೆಲಸ ಮಾಡಿದ ಸರ್ಕಾರದ ನಂತರ ಬಂದ ಸರ್ಕಾರಗಳನ್ನು ಶ್ಲಾಘಿಸುವ ಮೂಲಕ ಸಂದರ್ಶನ ಕೊನೆಗೊಳ್ಳುತ್ತದೆ. ‘ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ಪ್ರಕ್ರಿಯೆ ಆರಂಭಿಸಿದ್ದರೂ ನಂತರ ಬಂದ ಎಚ್.ಡಿ. ದೇವೇಗೌಡ ಮತ್ತು ಐ.ಕೆ. ಗುಜ್ರಾಲ್ ನೇತೃತ್ವದ ಸಂಯುಕ್ತ ರಂಗ ಸರ್ಕಾರ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಯಿತು. ನಂತರದ ಬಿಜೆಪಿ ಸರ್ಕಾರವೂ ಸುಧಾರಣೆ ಪ್ರಕ್ರಿಯೆಯನ್ನು ಮುಂದುವರಿಸಿತು’ ಎಂದು ಸಿಂಗ್ ಹೇಳಿದರು.ಬಹುಶಃ ಸಿಂಗ್ ಅವರು ವಿದ್ವಾಂಸನಾಗಿರುವುದರಿಂದ ಹೀಗೆ ನೆರವಾದವರನ್ನು ಹೊಗಳಲು ಸಾಧ್ಯವಾಗಿರಬಹುದು. ತಮ್ಮ ಕೆಲಸ ಇತರ ವಿದ್ವಾಂಸರ ಕೆಲಸದ ಆಧಾರದಲ್ಲಿ ರೂಪುಗೊಳ್ಳುತ್ತದೆ ಎಂಬುದು ಎಲ್ಲ ವಿದ್ವಾಂಸರಿಗೂ ಗೊತ್ತು; ಹಾಗಾಗಿ ಅದನ್ನು ನೆನಪಿಸಿಕೊಳ್ಳುವುದು ಸೂಕ್ತ. ಆದರೆ ಇತ್ತೀಚಿನ, ಹೆಚ್ಚು ವ್ಯಾಪಕ ಪ್ರಚಾರ ಪಡೆದುಕೊಂಡ ಇನ್ನೊಂದು ಸಂದರ್ಶನ ಹಾಗೆ ಮಾಡಲಿಲ್ಲ.ಖಂಡಿತವಾಗಿಯೂ ನಾನು ಉಲ್ಲೇಖಿಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರು ಅರ್ನಾಬ್ ಗೋಸ್ವಾಮಿ ಅವರಿಗೆ ನೀಡಿದ ಸಂದರ್ಶನ. ತಾವು ಪ್ರಧಾನಿಯಾದ ನಂತರ ‘ಪ್ರತಿ ಕ್ಷೇತ್ರದಲ್ಲಿಯೂ ಹೊಸತನ ತುಂಬಲು ನಡೆಸಿದ ಪ್ರಯತ್ನದಿಂದಾಗಿ’ ದೇಶ ಎಲ್ಲ ನಿಟ್ಟಿನಲ್ಲಿಯೂ ‘ಮುಂದಕ್ಕೆ ಸಾಗಿದೆ’ ಎಂದು ಪ್ರಧಾನಿ ಗಟ್ಟಿ ಧ್ವನಿಯಲ್ಲಿ ಹೇಳಿದರು.ತಾವು ಅಧಿಕಾರ ವಹಿಸಿಕೊಂಡಾಗ, ‘ದೇಶದಲ್ಲಿ ನಿರಾಶೆ ಕವಿದಿತ್ತು’, ಆದರೆ ಎರಡು ವರ್ಷಗಳ ನಂತರ ಈಗ, ‘ವ್ಯವಸ್ಥೆಗೆ ಹೊಸ ನಂಬಿಕೆಯನ್ನು ತುಂಬಿ, ಜನರಲ್ಲಿ ವಿಶ್ವಾಸ ಸೃಷ್ಟಿಸಿದೆ, ಹಾಗಾಗಿ ‘ನಿರಾಶೆಯ ಸುಳಿವು ಕೂಡ ಕಾಣಸಿಗದು’ ಎಂದು ಪ್ರಧಾನಿ ಹೇಳಿದರು.ಇತರ ದೇಶಗಳು ಭಾರತವನ್ನು ಕೀಳಾಗಿ ಕಾಣುತ್ತಿವೆ ಎಂಬ ಭಾವನೆಯನ್ನು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಮೋದಿ ಹೊಂದಿದ್ದರು. ಆದರೆ ಈಗ ತಮ್ಮಿಂದ ಮತ್ತು ತಮ್ಮ ಪ್ರವಾಸಗಳಿಂದಾಗಿ, ‘ದೇಶಗಳು ಮತ್ತು ಜಾಗತಿಕ ನಾಯಕರು ಭಾರತದ ಬಗೆಗಿನ ದೃಷ್ಟಿಕೋನವನ್ನೇ ಬದಲಿಸಿಕೊಂಡಿದ್ದಾರೆ’ ಎಂಬುದು ಅವರ ನಿಲುವು.ಚುನಾವಣಾ ಭರವಸೆಯಾದ, ವಿದೇಶಗಳಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣವನ್ನು ವಾಪಸ್ ತರುವಲ್ಲಿ ಸರ್ಕಾರ ವಿಫಲವಾಗಿದೆಯಲ್ಲ ಎಂಬ ವಿರಳವಾದ ಆದರೆ ಅಷ್ಟೊಂದು ಕಠಿಣವಲ್ಲದ ವಿಮರ್ಶಾತ್ಮಕ ಪ್ರಶ್ನೆಗೆ ಮೋದಿ ಅವರು ಹೀಗೆ ಉತ್ತರಿಸಿದರು:

‘ಮೊದಲನೆಯದಾಗಿ, ಈ ಪ್ರಶ್ನೆ ಈಗ ಜನರ ಮನಸಿನಲ್ಲಿ ಇಲ್ಲ. ಯಾರಾದರೂ ಅದನ್ನು ಮಾಡುತ್ತಾರೆ ಎಂದಾದರೆ ಅದು ನರೇಂದ್ರ ಮೋದಿ ಮಾತ್ರ ಎಂಬ ವಿಶ್ವಾಸ ಜನರಲ್ಲಿ ಇದೆ. ಅವರು ಅದನ್ನು ಮಾಡುತ್ತಾರೆ’.ಈ ಸ್ವ-ಹೊಗಳಿಕೆಯಲ್ಲಿ ಅವರ ವ್ಯಕ್ತಿತ್ವದ ಭಾಗವೇ ಆಗಿರುವ ಒಂದು ಭ್ರಮೆಯ ಅಂಶವೂ ಇತ್ತು. ಅದೆಂದರೆ, ಪ್ರಧಾನಿಯ ಬಗೆಗಿನ ಯಾವುದೇ ಟೀಕೆ ಅವರ ಸಾಧನೆಗಳ ಬಗೆಗಿನ ಅಸೂಯೆಯಿಂದ ಬಂದದ್ದಾಗಿದೆ ಎಂಬ ಭಾವನೆ. ತಾವು ಅಮೆರಿಕದ ‘ಕಾಂಗ್ರೆಸ್‌ನಲ್ಲಿ ಮಾಡಿದ ಭಾಷಣ ಮತ್ತು ಭಾರತದ ಬಗ್ಗೆ ಅಲ್ಲಿ ವ್ಯಕ್ತವಾದ ಗೌರವಕ್ಕೆ ಭಾರಿ ಪ್ರಚಾರ ನೀಡಲಾಯಿತು.ಇಷ್ಟೊಂದು ಪ್ರಚಾರ ದೊರೆಯದಿರುತ್ತಿದ್ದರೆ, ಪರಮಾಣು ಪೂರೈಕೆದಾರರ ಗುಂಪಿನ (ಎನ್‍ಎಸ್‌ಜಿ) ಸದಸ್ಯತ್ವಕ್ಕೆ ಸಂಬಂಧಿಸಿದ ವಿಚಾರದಲ್ಲಿ ಈ ಮಟ್ಟದ ಟೀಕೆ ವ್ಯಕ್ತವಾಗುತ್ತಿರಲಿಲ್ಲ. ಎನ್‍ಎಸ್‌ಜಿಯ ವಿಚಾರವನ್ನು ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎಂಬುದಕ್ಕೆ ಟೀಕೆ ವ್ಯಕ್ತವಾಗಿಲ್ಲ, ಬದಲಿಗೆ, ಅಲ್ಲಿ (ಅಮೆರಿಕದಲ್ಲಿ) ನಾವು ಇಷ್ಟೊಂದು ಯಶಸ್ವಿಯಾಗಿರುವುದಕ್ಕೆ ಟೀಕೆ ವ್ಯಕ್ತವಾಗುತ್ತಿದೆ’.ಸಂದರ್ಶನದ ಕೊನೆಯಲ್ಲಿ ನರೇಂದ್ರ ಮೋದಿ ಅವರು ತಮಗೆ ಇನ್ನೊಂದು ಪ್ರಮಾಣಪತ್ರವನ್ನೂ ಕೊಟ್ಟುಕೊಂಡರು: ‘ನೋಡಿ, ಎಷ್ಟೊಂದು ವೇಗವಾಗಿ ಮುನ್ನುಗ್ಗುತ್ತಿದ್ದರೂ ನನಗೆ ತೃಪ್ತಿ ಎಂಬುದಿಲ್ಲ. ಇಂದು ನಾನು ನೂರರ ವೇಗದಲ್ಲಿ ಓಡುತ್ತಿದ್ದರೆ ಮುಂದೆ 200ರ ವೇಗದಲ್ಲಿ ಓಡುವ ಗುರಿ ಇರಿಸಿಕೊಳ್ಳುತ್ತೇನೆ. ...ನಾವು ನಮ್ಮನ್ನು ಸಮರ್ಪಿಸಿಕೊಳ್ಳುವ ಅಗತ್ಯ ಇದೆ. ನಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಇಡೀ ಸರ್ಕಾರ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ’.ನನ್ನಂತೆ, ಇತರರು ಈ ಸಂದರ್ಶನಗಳ ಬರಹ ರೂಪವನ್ನು ಒಂದರ ನಂತರ ಒಂದರಂತೆ ಓದುತ್ತಾ ಹೋದರೆ, ಮೋದಿ ಅವರು ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ ಅನಿಸುತ್ತದೆ. ವಾಸ್ತವದಲ್ಲಿ, ಇತರ ಸಂದರ್ಭಗಳು ಮತ್ತು ಸಮಾರಂಭಗಳಿಗೆ ಹೋಲಿಸಿದರೆ ಪ್ರಧಾನಿ ತುಲನಾತ್ಮಕವಾಗಿ ತಮ್ಮ ಸ್ವ-ಹೊಗಳಿಕೆಯಲ್ಲಿ ಸ್ವಲ್ಪ ಸಂಯಮ ಪಾಲಿಸಿದ್ದಾರೆ.ನವದೆಹಲಿಯಲ್ಲಿ ಮೇ ಕೊನೆಯ ವಾರದಲ್ಲಿ ನಡೆದ ಆರು ತಾಸಿನ ಕಾರ್ಯಕ್ರಮವೊಂದನ್ನು ನೆನಪಿಸಿಕೊಳ್ಳಬಹುದು; ಅಲ್ಲಿ ಪ್ರಧಾನಿ ಹೀಗೆ ಘೋಷಿಸಿದರು: ‘ನನ್ನ ಸರ್ಕಾರದ ಸಾಧನೆಗಳು ಎಷ್ಟೊಂದಿವೆಯೆಂದರೆ, ದೂರದರ್ಶನ ಇಡೀ ಒಂದು ವಾರ ನನ್ನ ಬಗ್ಗೆಯೇ ನೇರ ಪ್ರಸಾರ ಮಾಡಬೇಕಾಗುತ್ತದೆ’.ನಿಯಮಿತವಾಗಿ ಮತ್ತು ಧಾರಾಳವಾಗಿ ಸ್ವಯಂ ಹೊಗಳಿಕೆಯ ಈ ಪ್ರವೃತ್ತಿ ಮೋದಿ ಅವರು ರಾಷ್ಟ್ರೀಯ ರಾಜಕಾರಣಕ್ಕೆ ಕಾಲಿರಿಸಿದ ಆರಂಭದಲ್ಲಿಯೇ ವ್ಯಕ್ತವಾಗಿತ್ತು. 2013ರ ಫೆಬ್ರುವರಿಯಲ್ಲಿ ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಮೋದಿ ಅವರು ಮಾಡಿದ ಭಾಷಣವನ್ನು ಮುಂದಿನ ದಿನಗಳಲ್ಲಿ ಇತಿಹಾಸಕಾರರು ಅವರ ರಾಷ್ಟ್ರ ರಾಜಕಾರಣ ಪ್ರವೇಶದ ಭಾಷಣ ಎಂದು ಪರಿಗಣಿಸಬಹುದು.ಆ ಭಾಷಣದಲ್ಲಿ ಅವರು ದೆಹಲಿಗೆ ಗುಜರಾತ್ ಹಾಲು ಪೂರೈಕೆ ಮಾಡುತ್ತಿದೆ ಎಂದು ಹೇಳಿದ್ದರು. ದೆಹಲಿಯ ಮಕ್ಕಳು ಕುಡಿಯುವ ಹಾಲು ಬಾಟಲಿಗೆ ಹರಿಯುವಂತಾಗಲು ತಾವೇ ಕಾರಣ ಎಂಬಂತೆ ಮೋದಿ ಮಾತನಾಡಿದ್ದರು. ಈ ಭಾಷಣ ಮತ್ತು ಇದೇ ವಿಷಯವನ್ನು ಹೇಳಿದ ಇತರ ಭಾಷಣಗಳಲ್ಲಿ ಮೋದಿ ಅವರು ವರ್ಗೀಸ್ ಕುರಿಯನ್ ಅವರ ಕೆಲಸವನ್ನು ಎಲ್ಲಿಯೂ ಉಲ್ಲೇಖಿಸಲಿಲ್ಲ.

ಸ್ವಲ್ಪ ಕಡಿಮೆ ಪೊಳ್ಳು  ಮತ್ತು ಕಡಿಮೆ ಅಸುರಕ್ಷತೆಯ ಯಾವುದೇ ವ್ಯಕ್ತಿ ಹೈನುಗಾರಿಕೆ ಕ್ಷೇತ್ರದ ಕ್ರಾಂತಿಗೆ ಕುರಿಯನ್ ನೀಡಿದ ಕೊಡುಗೆಯನ್ನು ಹೊಗಳದೆ ಇರುತ್ತಿರಲಿಲ್ಲ. ಮಲಯಾಳಿ ಕ್ರೈಸ್ತ ವ್ಯಕ್ತಿಯೊಬ್ಬರು ಗುಜರಾತನ್ನು ತಮ್ಮ ‘ಕರ್ಮಭೂಮಿ’ ಮಾಡಿಕೊಳ್ಳಲು ತಮ್ಮ ರಾಜ್ಯದ ಆತಿಥ್ಯದ ಸ್ಫೂರ್ತಿಯೇ ಕಾರಣ ಎಂದೂ ಮೋದಿ ಅವರು ಹೇಳಿದ್ದಾರೆ.‘ಗುಜರಾತ್ ಮಾದರಿ’ಯನ್ನು ಕೊಂಡಾಡುವ ಪ್ರಚಾರ ಭಾಷಣಗಳಲ್ಲಿ, ಸಾಮಾನ್ಯವಾಗಿ, ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ಆ ರಾಜ್ಯ ಬರಡು ಭೂಮಿಯಾಗಿತ್ತು ಎಂಬಂತೆ ಮಾತನಾಡಿದ್ದಾರೆ.ರಾಜ್ಯದ ಸಹಕಾರ ಚಳವಳಿ, ಹೂಡಿಕೆ ಅಥವಾ ಆರ್ಥಿಕ ಪ್ರಗತಿಗಾಗಿ ಕೆಲಸ ಮಾಡಿದ ಇತರ ಮುಖ್ಯಮಂತ್ರಿಗಳು, ಹಲವು ತಲೆಮಾರುಗಳ ಅಪ್ರತಿಮ ಸಮಾಜ ಸೇವಕರು, ಲಾಲ್‌ಭಾಯಿ ಮತ್ತು ಸಾರಾಭಾಯಿ ಅವರಂತಹ ಸಮಾಜಸೇವಾ ಮನಸ್ಥಿತಿಯ ಉದ್ಯಮ ಪ್ರವರ್ತಕರು ಮುಂತಾದ ಯಾರ ಕೊಡುಗೆಯನ್ನೂ ಮೋದಿ ಅವರು ಪ್ರಸ್ತಾಪಿಸಿಲ್ಲ. ತಮ್ಮದೇ ಸಹೋದ್ಯೋಗಿಗಳನ್ನಾಗಲಿ, ಹಿರಿಯ ಅಥವಾ ಕಿರಿಯ ಅಧಿಕಾರಿಯ ಹೆಸರನ್ನಾಗಲಿ ಎಂದೂ ಉಲ್ಲೇಖಿಸಿಲ್ಲ.ಈ ಪ್ರವೃತ್ತಿ ಅವರು ಪ್ರಧಾನಿಯಾದ ನಂತರವೂ ಮುಂದುವರಿದಿದೆ. ಭಾಷಣಗಳಲ್ಲಿ ಮತ್ತು ಸಂದರ್ಶನಗಳಲ್ಲಿ, ತಮ್ಮನ್ನು ಹೊರತುಪಡಿಸಿ ಇತರರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳುವುದು ಬಹಳ ವಿರಳ. ಅಸುರಕ್ಷತೆ ಕಡಿಮೆ ಇರುವ ಯಾವುದೇ ವ್ಯಕ್ತಿ ತಮ್ಮ ವಿದೇಶ ಪ್ರವಾಸಗಳಲ್ಲಿ, ಜಾಗತಿಕ ಮಟ್ಟದಲ್ಲಿ ಭಾರತವನ್ನು ವಿಶ್ವಾಸಾರ್ಹ ಮತ್ತು ಆತ್ಮವಿಶ್ವಾಸದ ದೇಶವನ್ನಾಗಿ ಬಿಂಬಿಸಿದ್ದಕ್ಕೆ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರನ್ನು  ಹೊಗಳದಿರುತ್ತಿರಲಿಲ್ಲ;ಅಮೆರಿಕದ ಜತೆ ಅತ್ಯುತ್ತಮ ಬಾಂಧವ್ಯ ಸ್ಥಾಪಿಸಿದ ಮನಮೋಹನ್ ಸಿಂಗ್ ಅವರ ಕೆಲಸಗಳನ್ನು ಸ್ಮರಿಸುತ್ತಿದ್ದರು; ಅಥವಾ, ಜನಧನ್ ಯೋಜನೆ ಇಷ್ಟೊಂದು ಯಶಸ್ವಿಯಾಗಲು ಹಿಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿದ ಆಧಾರ್ ಯೋಜನೆಯೇ ಕಾರಣ ಎಂಬುದನ್ನು ದೇಶದಲ್ಲಿದ್ದಾಗ ಹೇಳುತ್ತಿದ್ದರು (ಆಧಾರ್ ಯೋಜನೆ ಆರಂಭವಾದಾಗ ಬಿಜೆಪಿ ವಿರೋಧಿಸಿತ್ತು).ಅತ್ಯಂತ ಯಶಸ್ವೀ ನಾಯಕರಲ್ಲಿ ತಮ್ಮ ಸಾಮರ್ಥ್ಯದ ಮತ್ತು ಇತರರ ಜತೆಗೂಡಿ ಕೆಲಸ ಮಾಡುವ ಸಾಮರ್ಥ್ಯಗಳ ಸಮತೋಲನ ಇರುತ್ತಿತ್ತು. ಕ್ಲೆಮೆಂಟ್ ಅಟ್ಲೀಯನ್ನು ಗಣನೆಗೆ ತೆಗೆದುಕೊಂಡರೆ, ಅವರ ಸರ್ಕಾರ ಎರಡನೇ ಜಾಗತಿಕ ಯುದ್ಧದಲ್ಲಿ ಜರ್ಜರಿತವಾದ ಬ್ರಿಟನನ್ನು ಮತ್ತೆ ಕಟ್ಟಿತು.ಅಟ್ಲೀ ಅಧಿಕಾರಯುತವಾಗಿ ನಡೆದುಕೊಂಡಿದ್ದರು, ಆದರೆ ಎಂದೂ ನಿರಂಕುಶಾಧಿಕಾರಿಯಾಗಿರಲಿಲ್ಲ. ಅವರ ಸರ್ಕಾರ, ಬ್ರಿಟನ್ ದೇಶವನ್ನು ಕಲ್ಯಾಣ ರಾಜ್ಯವಾಗಿ ಪರಿವರ್ತಿಸಿತು ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ ಅದರ ಹಿರಿಮೆ ಅಟ್ಲೀ ಅವರಿಗಲ್ಲ, ಅವರ ಸರ್ಕಾರದಲ್ಲಿ ಸಚಿವರಾಗಿದ್ದು ರಾಷ್ಟ್ರೀಯ ಆರೋಗ್ಯ ಸೇವೆ ರೂಪಿಸಿದ ಅನ್ವೇರಿನ್ ಬೆವನ್‌ಗೆ ಸಲ್ಲುತ್ತದೆ. ಅಟ್ಲೀ ಅವರು ಸಂತೋಷದಿಂದಲೇ ಇದನ್ನು ಒಪ್ಪಿಕೊಳ್ಳುತ್ತಿದ್ದರು.

ಆಧುನಿಕ ಕಾಲದ ಇನ್ನೊಬ್ಬ ಮುತ್ಸದ್ದಿ ಜರ್ಮನಿಯ ಹೆಲ್ಮಟ್ ಕೋಲ್ ತಮ್ಮ ಸಂಪುಟ ಸಹೋದ್ಯೋಗಿಗಳ ಜತೆ ನಿಕಟವಾಗಿ ಕೆಲಸ ಮಾಡುತ್ತಿದ್ದರು, ವಿರೋಧ ಪಕ್ಷವನ್ನು ಎಂದೂ ಹಂಗಿಸುತ್ತಿರಲಿಲ್ಲ, ತಮ್ಮ ಘನತೆ ಗೌರವವನ್ನು ಕಾಪಾಡಿಕೊಂಡಿದ್ದರು. ಹಾಗಿದ್ದರೂ ಸರ್ಕಾರ ಅವರ ನಿಯಂತ್ರಣ ಬಿಟ್ಟು ಹೋಗಿರಲಿಲ್ಲ.ಆತ್ಮವೈಭವದಿಂದ ಸಂಪೂರ್ಣವಾಗಿ ಮುಕ್ತರಾಗಿದ್ದ ಮತ್ತೊಬ್ಬ ಪ್ರಬಲ ನಾಯಕ ನೆಲ್ಸನ್ ಮಂಡೇಲಾ. ಕ್ರಾಂತಿಕಾರಿಯಾಗಿ ಮತ್ತು ಸರ್ಕಾರದ ಮುಖ್ಯಸ್ಥನಾಗಿ ಮಂಡೇಲಾ ಅವರನ್ನು ಸಮಾನರಲ್ಲಿ ಮೊದಲಿಗ ಎಂದು ಮಾತ್ರ ಪರಿಗಣಿಸಲಾಗುತ್ತಿತ್ತು.ಅವರ ನಾಯಕತ್ವದ ವಿರುದ್ಧ ಯಾರೂ ಧ್ವನಿ ಎತ್ತಲಿಲ್ಲ. ಒಲಿವರ್ ಟ್ಯಾಂಬೊ, ವಾಲ್ಟರ್ ಸಿಸುಲು, ಗೊವನ್ ಎಂಬೆಕಿ ಮತ್ತು ಜೋ ಸ್ಲೊವೊ ಅವರ ಕೊಡುಗೆ ತಮ್ಮಷ್ಟೇ ಗಣನೀಯವಾದುದು ಎಂಬುದನ್ನು ಮಂಡೇಲಾ ಅವರು ಧಾರಾಳವಾಗಿ, ಮತ್ತೆ ಮತ್ತೆ ಹೇಳಿದ್ದಾರೆ.ಯಾವುದೇ ಒಬ್ಬ ವ್ಯಕ್ತಿ ಎಷ್ಟೇ ಪ್ರಬಲ ಅಥವಾ ದಾರ್ಶನಿಕ ಆಗಿದ್ದರೂ ಇತರರ ಸಲಹೆ, ನೆರವು ಮತ್ತು ಟೀಕೆ ಇಲ್ಲದಿದ್ದರೆ ಪರಿಣಾಮಕಾರಿ ಮತ್ತು ಸುಸ್ಥಿರ ಸಾಮಾಜಿಕ ಬದಲಾವಣೆ ತರಲು ಸಾಧ್ಯವಿಲ್ಲ ಎಂಬುದನ್ನು ಮಂಡೇಲಾ ಗುರುತಿಸಿದ್ದರು. ತಮ್ಮ ಸಹೋದ್ಯೋಗಿಗಳಿಂದ ಮಂಡೇಲಾ ಪಡೆಯುತ್ತಿದ್ದ ಗೌರವಕ್ಕೆ ಕಾರಣ ಇತರರ ಬಗ್ಗೆ ಅವರು ಹೊಂದಿದ್ದ ಮಮತೆ ಮತ್ತು ಗೌರವವೇ ಆಗಿತ್ತು (ಅದು ಯಾವತ್ತೂ ಭೀತಿಯಿಂದ ಆಗಿರಲಿಲ್ಲ).ವಿರೋಧಿಗಳಿಂದಲೂ ಮಂಡೇಲಾ ಗೌರವ ಸಂಪಾದಿಸಿದ್ದರು. ಬಿಳಿಯರ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಿದ್ದ, ಮಂಡೇಲಾ ಅವರನ್ನು ಜೈಲಿಗೆ ತಳ್ಳಿದ್ದ ಪಕ್ಷದ ನಾಯಕ ಎಫ್.ಡಬ್ಲ್ಯು.ಡಿ ಕ್ಲರ್ಕ್ ಅವರು ಮಂಡೇಲಾ ನೇತೃತ್ವದ ರಾಷ್ಟ್ರೀಯ ಸರ್ಕಾರದಲ್ಲಿ ಕೆಲಸ ಮಾಡಲು ಮುಂದೆ ಬಂದದ್ದು ಅದರ ದ್ಯೋತಕ.ಮಂಡೇಲಾ ಅವರನ್ನು ನಾನು ಹೇಗಿದ್ದರೂ ಉಲ್ಲೇಖಿಸುತ್ತಿದ್ದೆ. ಆದರೆ ಪ್ರಧಾನಿ ಮೋದಿ ಅವರು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಈ ಸಂದರ್ಭದಲ್ಲಿ ಇದು ಹೆಚ್ಚು ಸಕಾಲಿಕ ಎನಿಸುತ್ತದೆ. ಮಂಡೇಲಾ ಅವರು ಜೈಲಿನಿಂದ ತಮ್ಮ ಗೆಳೆಯನೊಬ್ಬನಿಗೆ ಬರೆದ ಪತ್ರದ ಈ ಸಾಲುಗಳನ್ನು ಯಾರಾದರೂ ಮೋದಿ ಅವರ ಗಮನಕ್ಕೆ ತರಬೇಕು:‘ಅತ್ಯಂತ ಯಶಸ್ವೀ ವ್ಯಕ್ತಿಗಳು ಒಂದು ರೀತಿಯ ಜಂಬಕ್ಕೆ ತುತ್ತಾಗುವುದು ನಿಜಕ್ಕೂ ಸಮಸ್ಯೆ. ಅಹಂಕಾರಿಗಳಾಗಲು ತಮಗೆ ಹಕ್ಕಿದೆ ಎಂದು ತಮ್ಮ ಜೀವನದ ಒಂದು ಹಂತದಲ್ಲಿ ಈ ಜನರು ಭಾವಿಸುತ್ತಾರೆ. ತಮ್ಮ ವಿಶಿಷ್ಟ ಸಾಧನೆಗಳ ಬಗ್ಗೆ ಸಾರ್ವಜನಿಕವಾಗಿ ಬಡಾಯಿ ಕೊಚ್ಚಿಕೊಳ್ಳಲು ಆರಂಭಿಸುತ್ತಾರೆ’.ನಮ್ಮ ಪ್ರಧಾನಿಯ ವಿಚಾರದಲ್ಲಿ ‘ಈ ಹಂತ’ ಸ್ವಲ್ಪ ಬೇಗನೆ ಆರಂಭಗೊಂಡಿದೆ ಮತ್ತು ಅದು ದೀರ್ಘ ಅವಧಿಗೆ ವಿಸ್ತರಿಸಿಕೊಂಡಿದೆ. ಅವರ ಒಳ್ಳೆಯದಕ್ಕೆ ಮತ್ತು ನಮ್ಮ ಒಳ್ಳೆಯದಕ್ಕೆ ಅದು ಆದಷ್ಟು ಬೇಗ ಕೊನೆಗೊಳ್ಳಲಿ ಎಂದು ಹಾರೈಸೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry