7

ಪ್ರಜಾಪ್ರಭುತ್ವಕ್ಕೆ ‘ಆಫ್‌ ಸ್ಪಾ’ ಅಪಾಯ

Published:
Updated:
ಪ್ರಜಾಪ್ರಭುತ್ವಕ್ಕೆ ‘ಆಫ್‌ ಸ್ಪಾ’ ಅಪಾಯ

‘ಗಲಭೆಗ್ರಸ್ತ’ ಪ್ರದೇಶಗಳಲ್ಲಿ ವಾಸಿಸುವವರು ಸೇರಿದಂತೆ ಭಾರತೀಯ ನಾಗರಿಕರೆಲ್ಲರ ಮಾನವ ಹಕ್ಕುಗಳ ಪರವಾದ ನಿಲುವನ್ನು ಸುಪ್ರೀಂ ಕೋರ್ಟ್ ಕಳೆದ ವಾರ (ಜುಲೈ 8)  ದೃಢವಾಗಿ ಪ್ರತಿಪಾದಿಸಿದೆ.ಗಲಭೆಗ್ರಸ್ತ ಪ್ರದೇಶಗಳಲ್ಲಿ ನಿಯೋಜಿತವಾದ ಸೇನೆಗೆ ಅಪಾರ ಅಧಿಕಾರ ನೀಡುವಂತಹ  ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ ( ಆಫ್‌ಸ್ಪಾ),   ನಮ್ಮ  ‘ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ’ ಹಾಗೂ ಪ್ರಭುತ್ವದ ‘ವೈಫಲ್ಯಕ್ಕೆ ಸೂಚಕ’ ಎಂದು ಸುಪ್ರೀಂ ಕೋರ್ಟ್ ತೀವ್ರ ಮಾತುಗಳಲ್ಲಿ  ವ್ಯಾಖ್ಯಾನಿಸಿದೆ.  ಸುದೀರ್ಘ ಕಾಲದ ನಂತರ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ ಮತ್ತೊಮ್ಮೆ  ಕಟುವಿಮರ್ಶೆಗೆ ಒಳಗಾಗಿದೆ.1978ರಿಂದ 2010ರವರೆಗೆ ಮಣಿಪುರ ರಾಜ್ಯದಲ್ಲಿ ಭದ್ರತಾ ಪಡೆ ಹಾಗೂ ಪೊಲೀಸರಿಂದ ನಡೆದ  1528 ಕಾನೂನುಬಾಹಿರ ಹತ್ಯೆಗಳ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ  ಮದನ್ ಬಿ ಲೋಕೂರ್ ಹಾಗೂ ಉದಯ್ ಯು ಲಲಿತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ನೀಡಿರುವ ಈ ನಿರ್ದೇಶನ ಮುಖ್ಯವಾದದ್ದು.  ‘ಆಫ್‌ಸ್ಪಾ’ ಅಡಿ ಯಾರಿಗೂ ಪೂರ್ಣ ವಿನಾಯಿತಿ ಇಲ್ಲ ಎಂಬುದನ್ನು ಕೋರ್ಟ್ ಸ್ಪಷ್ಟಪಡಿಸಿದೆ.ಪ್ರಭುತ್ವದ ಶತ್ರುಗಳು ಎಂಬಂಥ ಸಣ್ಣ  ಶಂಕೆ ಅಥವಾ ಆರೋಪದ ಮೇಲೆ ನಾಗರಿಕರನ್ನು ಹತ್ಯೆ ಮಾಡಲು ಸಶಸ್ತ್ರ ಪಡೆಗಳಿಗೆ ಅನುಮತಿ ನೀಡಿದಲ್ಲಿ ಪ್ರಜಾಪ್ರಭುತ್ವ ತೀವ್ರ ಅಪಾಯಕ್ಕೆ ಸಿಲುಕುತ್ತದೆ ಎಂದು 85 ಪುಟಗಳ ಈ ತೀರ್ಪಿನಲ್ಲಿ ಪೀಠ ಅಭಿಪ್ರಾಯಪಟ್ಟಿದೆ.1958ರಲ್ಲಿ ‘ಆಫ್‌ಸ್ಪಾ’ಗೆ ಭಾರತದ ಸಂಸತ್ತು ಅನುಮೋದನೆ ನೀಡಿತು. ಆಂತರಿಕ ಭದ್ರತೆ ಕಾಪಾಡುವುದು ಇದರ ಮೂಲ ಉದ್ದೇಶವಾಗಿತ್ತು.   1960ರಲ್ಲಿ ಮಣಿಪುರದ ಕೆಲವು ಭಾಗಗಳಲ್ಲಿ ಈ ಕಾಯಿದೆ ಜಾರಿಗೊಳಿಸಲಾಯಿತು.  ನಂತರ 1980ರ ವೇಳೆಗೆ ಇಡೀ ಮಣಿಪುರ ರಾಜ್ಯದಲ್ಲಿ (ಇಂಫಾಲ ಮುನಿಸಿಪಾಲಿಟಿ ಪ್ರದೇಶ ಹೊರತು ಪಡಿಸಿ) ಜಾರಿಗೊಳಿಸಲಾಯಿತು.ನಾಗಾಲ್ಯಾಂಡ್‌ನಲ್ಲೂ ಈ ಕಾಯಿದೆ ಜಾರಿಯಲ್ಲಿದೆ. 1990ರಿಂದ ಕಾಶ್ಮೀರ ಹಾಗೂ ಅಸ್ಸಾಂಗಳಲ್ಲಿ ಮತ್ತು 1991ರಿಂದ ಅರುಣಾಚಲ ಪ್ರದೇಶದ ಮೂರು ಜಿಲ್ಲೆಗಳಲ್ಲಿ ‘ಆಫ್‌ಸ್ಪಾ’ ಜಾರಿಯಲ್ಲಿದೆ. ಯಾವುದಾದರೂ  ಪ್ರದೇಶವನ್ನು ಗಲಭೆಗ್ರಸ್ತ  ಪ್ರದೇಶ ಎಂದು ಕೇಂದ್ರ ಸರ್ಕಾರ ಗುರುತಿಸಿದಲ್ಲಿ ಸಹಜವಾಗಿ ಅಲ್ಲಿ ‘ಆಫ್‌ಸ್ಪಾ’ ಜಾರಿಯಾಗುತ್ತದೆ.ಬಂಡುಕೋರ ಚಟುವಟಿಕೆಗಳನ್ನು ಬಗ್ಗು ಬಡಿಯುವುದಕ್ಕಾಗಿ ಈ ಕಾಯಿದೆ ಅನ್ವಯ ಸೇನೆಗೆ ಅಪಾರ ಅಧಿಕಾರ ಇರುತ್ತದೆ. ಹೊರಗಿನ ಆಕ್ರಮಣ ಹಾಗೂ ಭಯೋತ್ಪಾದನಾ ದಾಳಿಗಳಿಂದ ರಾಷ್ಟ್ರವನ್ನು ರಕ್ಷಿಸುವ ಸಾರ್ವಭೌಮತ್ವ ಕಾರ್ಯವನ್ನು ಸೇನೆ ನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ.  ಆದರೆ ಯಾವುದೇ ಶಿಕ್ಷಾ ಭಯವಿಲ್ಲದೆ ಜನರನ್ನು ಹಿಂಸಿಸಿ ಕೊಲ್ಲಲು ಈ ವಿಶೇಷ ಕಾನೂನು ದುರ್ಬಳಕೆಯಾಗುತ್ತಿದೆ ಎಂಬ ಆರೋಪವನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮಾಡುತ್ತಲೇ ಬಂದಿದ್ದಾರೆ.ಕಳೆದ ಕೆಲವು ವರ್ಷಗಳಲ್ಲಿ ‘ಆಫ್‌ಸ್ಪಾ’ ವಿರುದ್ಧ ಮಣಿಪುರದ ಮಹಿಳೆಯರು ನಡೆಸಿಕೊಂಡು ಬರುತ್ತಿರುವಂತಹ ಪ್ರತಿಭಟನೆಗಳು  ಪಡೆದುಕೊಂಡ ಸ್ವರೂಪ ಆಕ್ರೋಶದ ಪರಾಕಾಷ್ಠೆಯನ್ನು ಬಿಂಬಿಸುವಂತಹವು. ಇದರ ಜೊತೆಗೇ ನೋವು, ಹತಾಶೆಗಳನ್ನೂ ಬಿಂಬಿಸುವಂತಹವಾಗಿವೆ ಈ ಪ್ರತಿಭಟನೆಗಳು. 2004ರಷ್ಟು ಹಿಂದೆ ಮಣಿಪುರ ಮಹಿಳೆಯರು ನಡೆಸಿದ ಪ್ರತಿಭಟನೆ ನೆನಪಿಸಿಕೊಳ್ಳಿ. ಆ ವರ್ಷ  ಜುಲೈ 15ರಂದು ಇಂಫಾಲದಲ್ಲಿರುವ ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್ ಕಚೇರಿಯ ಎದುರು ಮಣಿಪುರದ  12 ಮಂದಿ ಮಹಿಳೆಯರು ನಗ್ನರಾಗಿ ನಿಂತು ‘ಇಂಡಿಯನ್ ಆರ್ಮಿ ರೇಪ್ ಅಸ್’ (ಭಾರತೀಯ ಸೇನೆ, ಬನ್ನಿ ನಮ್ಮ ಮೇಲೆ ಅತ್ಯಾಚಾರವೆಸಗಿ) ಎಂಬಂತಹ ಘೋಷಣೆಯಿದ್ದ ಭಿತ್ತಿಫಲಕ ಹಿಡಿದು ಪ್ರತಿಭಟಿಸಿದ್ದರು. ಆ ಮೂಲಕ ಪ್ರತಿಭಟನೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದೇ ಅಲ್ಲದೆ ರಾಷ್ಟ್ರದಾದ್ಯಂತ ಜನರ ಅಂತಃಸಾಕ್ಷಿಯನ್ನೂ ಮಣಿಪುರದ ಈ ‘ಅಮ್ಮಂದಿರು’  ಕಲಕಿದ್ದರು.ಇಂತಹದೊಂದು ಆಕ್ರೋಶಭರಿತ ಪ್ರತಿರೋಧಕ್ಕೆ  ಕಾರಣವಾದದ್ದು 32 ವರ್ಷದ ತಂಗ್ ಜಮ್ ಮನೋರಮಾ ದೇವಿಯ  ಹತ್ಯೆ.  ಜುಲೈ 10 ರ ರಾತ್ರಿ ಮನೋರಮಾ ದೇವಿಯ ಮನೆಗೆ ನುಗ್ಗಿ ಆಕೆಯನ್ನು ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಎಳೆದೊಯ್ದಿದ್ದರು.  ಆಕೆಯನ್ನು ಉಗ್ರಗಾಮಿ ಎಂದು ಸೇನೆ ಬಿಂಬಿಸಿತು. ಮರುದಿನವೇ ಆಕೆಯ ಮೃತದೇಹ ಮೈತುಂಬಾ ಗಾಯಗಳೊಂದಿಗೆ ಅರೆನಗ್ನಾವಸ್ಥೆಯಲ್ಲಿ ರಸ್ತೆಯಲ್ಲಿ ಬಿದ್ದಿತ್ತು.ಹತ್ಯೆಯಾಗುವ ಮುಂಚೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ಮರಣೋತ್ತರ ಪರೀಕ್ಷೆಯ ವೈದ್ಯಕೀಯ ವರದಿ ಹೇಳಿತು. ಮುಗ್ಧ ಮಹಿಳೆಯೊಬ್ಬಳ ಮೇಲಿನ ಹೀನ ಅತ್ಯಾಚಾರ ಹಾಗೂ ಹತ್ಯೆಯ ಆರೋಪವನ್ನು ಮಣಿಪುರಿ ಮಹಿಳೆಯರು ಅಸ್ಸಾಂ ರೈಫಲ್ಸ್ ವಿರುದ್ಧ ಹೊರಿಸಿದರು. ಈವರೆಗೆ ಹತ್ತಿಕ್ಕಿಕೊಂಡಿದ್ದ ಅವರ ಆಕ್ರೋಶವೂ ಭುಗಿಲೆದ್ದಿತ್ತು. ಸೇನೆಯ ದೌರ್ಜನ್ಯ, ಅತ್ಯಾಚಾರಗಳಿಂದ ಅವಮಾನಿತರಾಗಿ ನೊಂದಿದ್ದ ಮಹಿಳೆಯರು ಪೂರ್ಣ ನಿರ್ವಸ್ತ್ರರಾಗಿ ಸಿಡಿದೆದ್ದು ನಿಂತರು. ಆ ಮೂಲಕ ಭಾರತೀಯ ಸೇನೆಯ ಕ್ರೌರ್ಯವನ್ನೂ ಬೆತ್ತಲುಗೊಳಿಸಿದ್ದರು.   ಈ ಪ್ರತಿಭಟನೆಯ ನಂತರ ಇಂಫಾಲದ  ಕಾಂಗ್ಲಾ ಕೋಟೆಯಿಂದ ಅಸ್ಸಾಂ ರೈಫಲ್ಸ್ ಅನ್ನೂ  ತೆರವುಗೊಳಿಸಲಾಯಿತು. ಜೊತೆಗೆ ಇಂಫಾಲದ ಅನೇಕ ಪ್ರದೇಶಗಳಲ್ಲಿ 2004ರ ಆಗಸ್ಟ್‌ನಲ್ಲಿ  ‘ಆಫ್‌ಸ್ಪಾ’ ರದ್ದು ಮಾಡಲಾಯಿತು. ಆದರೇನು?  ಮನೋರಮಾ ಹಂತಕರಿಗೆ ಮಾತ್ರ ಶಿಕ್ಷೆಯಾಗಲಿಲ್ಲ.‘ಆಫ್‌ಸ್ಪಾ’ ರದ್ದು ಮಾಡಬೇಕೆಂದು ಒತ್ತಾಯಿಸಿ ಮಣಿಪುರದ ಇನ್ನೊಬ್ಬ ಉಕ್ಕಿನ ಮಹಿಳೆ ಇರೊಮ್ ಶರ್ಮಿಳಾ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವಂತೂ ಈಗ  16ನೇ ವರ್ಷಕ್ಕೆ ಕಾಲಿರಿಸಿದೆ.  ವಿಶ್ವದಲ್ಲೇ ಅತ್ಯಂತ ಸುದೀರ್ಘವಾದ ಉಪವಾಸ ಸತ್ಯಾಗ್ರಹ ಇದಾಗಿದ್ದು ಆಕೆ ದಂತಕತೆಯಾಗಿದ್ದಾರೆ. 2000ದ ನವೆಂಬರ್ 2ರಂದು ಇಂಫಾಲ ಬಳಿಯ ಪುಟ್ಟ ಗ್ರಾಮ ಮಲೋಮ್‌ನ ಬಸ್ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದ ಜನಸಾಮಾನ್ಯರ ಮೇಲೆ ಭದ್ರತಾಪಡೆಗಳು ಹಾರಿಸಿದ ಗುಂಡಿಗೆ 10 ಜನ ಬಲಿಯಾಗಿದ್ದರು.ಅಸ್ಸಾಂ ರೈಫಲ್ಸ್ ಕ್ಯಾಂಪ್‌ನಲ್ಲಿ ಬಾಂಬೊಂದು ಸ್ಫೋಟಗೊಂಡಿದ್ದೇ ಈ ಗುಂಡಿನ ದಾಳಿಗೆ ಕಾರಣವಾಗಿತ್ತು.  ಬಾಂಬ್ ಸ್ಫೋಟಕ್ಕೆ ಕಾರಣರಾಗಿದ್ದವರಾರೋ ಅಪರಿಚಿತ ಬಂಡುಕೋರರು. ಆದರೆ ತನ್ನ ಆಕ್ರೋಶವನ್ನು ಮುಗ್ಧ ಜನರ ಮೇಲೆ ಅಸ್ಸಾಂ ರೈಫಲ್ಸ್ ಹರಿಯಬಿಟ್ಟಿತ್ತು.   ಈ ಹತ್ಯಾಕಾಂಡಕ್ಕೆ ಶಿಕ್ಷೆ ಆಗುವುದು ಸಾಧ್ಯವಿರಲಿಲ್ಲ. ಏಕೆಂದರೆ ಅವರಿಗೆ ಸಶಸ್ತ್ರಪಡೆಗಳ ವಿಶೇಷ ಅಧಿಕಾರ ಕಾಯಿದೆಯ ಬಲ ಇದ್ದದ್ದು ಗೊತ್ತಿದ್ದ ಸಂಗತಿ.ಏನೂ ಮಾಡಲಾಗದ ಇಂತಹ ಸಾಮಾಜಿಕ ವ್ಯವಸ್ಥೆಯಲ್ಲಿ  ಶರ್ಮಿಳಾ ಆರಿಸಿಕೊಂಡಿದ್ದು ತನ್ನದೇ ಆದ ದೇಹದ ದಂಡನೆ.  ಈ ಕರಾಳ ಶಾಸನದ ವಿರುದ್ಧ ಆಗಿನಿಂದಲೇ ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಈ 16 ವರ್ಷಗಳಲ್ಲಿ ಅವರು ಒಂದು ತುತ್ತು ಅನ್ನವನ್ನೂ ತಿಂದಿಲ್ಲ. ಗುಟುಕು ನೀರೂ ಕುಡಿದಿಲ್ಲ.  ವೈದ್ಯರು ನಳಿಕೆಗಳ ಮೂಲಕ ದ್ರವಾಹಾರ ನೀಡುತ್ತಿದ್ದಾರೆ.‘ಆಫ್‌ಸ್ಪಾ’  ರದ್ದು ಮಾಡಬೇಕೆಂಬ ಶರ್ಮಿಳಾರ ಬೇಡಿಕೆಗೆ ಪ್ರಭುತ್ವ ಮಣಿದಿಲ್ಲ. ಆದರೆ ‘ಆಫ್‌ಸ್ಪಾ’ ರದ್ದುಪಡಿಸಬೇಕೆಂಬ ಶಿಫಾರಸನ್ನು 2004ರಲ್ಲಿ ಕೇಂದ್ರ ಸರ್ಕಾರ ರಚಿಸಿದ್ದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿಗಳಾದ ಬಿ.ಪಿ.ಜೀವನ್ ರೆಡ್ಡಿ ಅಧ್ಯಕ್ಷತೆಯ ಸಮಿತಿ ನೀಡಿತ್ತು. ಈ ಮೂಲಕ  ಜ್ವಲಂತ ವಿಚಾರವೊಂದು ಚರ್ಚೆಯ ಮುಂಚೂಣಿಗೆ ಬರಲು ಸಾಧ್ಯವಾಯಿತು.ಮಿಲಿಟರಿಮಯ ಮಣಿಪುರದಲ್ಲಿ ಮಹಿಳೆಯ ದೇಹಗಳೂ ಯುದ್ಧದ ಸಾಧನಗಳಾಗಿ ಬಳಕೆಯಾಗುವಂತಹ ಕ್ರೌರ್ಯದ ವಿರುದ್ಧ ಮಣಿಪುರ ಮಹಿಳೆಯರು ಪ್ರತಿರೋಧ ತೋರುತ್ತಲೇ ಬಂದಿದ್ದಾರೆ. ಮನಸೋ ಇಚ್ಛೆ ಮಾಡುವ ಹತ್ಯೆಗಳನ್ನು ಎನ್‌ಕೌಂಟರ್ ಎಂದು ಸೇನೆ ಬಿಂಬಿಸುತ್ತದೆ.  ಹೀಗಾಗಿ ಈ ಹತ್ಯೆಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ನೇತೃತ್ವದ ಮೂವರು ಸದಸ್ಯರ ಆಯೋಗವನ್ನು 2013ರಲ್ಲಿ ಸುಪ್ರೀಂ ಕೋರ್ಟ್ ನೇಮಕ ಮಾಡಿತ್ತು. ತನಿಖೆಗೆ ಎನ್‌ಕೌಂಟರ್‌ಗಳ  ಆರು ಪ್ರಕರಣಗಳನ್ನು ನ್ಯಾಯಮೂರ್ತಿ ಹೆಗ್ಡೆ ಆಯೋಗ ಕೈಗೆತ್ತಿಕೊಂಡು  ಶೋಧನಾ ವರದಿಯನ್ನು 2013ರ ಏಪ್ರಿಲ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ತಾನು ತನಿಖೆ ನಡೆಸಿದ ಆರು ಪ್ರಕರಣಗಳಲ್ಲಿ ಎಲ್ಲಾ ಏಳು ಸಾವುಗಳೂ ಕಾನೂನುಬಾಹಿರ ಹತ್ಯೆಗಳು ಎಂದು ಆಯೋಗ ಹೇಳಿತು.  ಜೊತೆಗೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ಮಣಿಪುರದ ಭದ್ರತಾ ಪಡೆಗಳು ವ್ಯಾಪಕವಾಗಿ ದುರುಪಯೋಗ ಮಾಡಿಕೊಳ್ಳುತ್ತಿವೆ ಎಂಬುದನ್ನೂ ಈ ವರದಿಯಲ್ಲಿ ಎತ್ತಿಹೇಳಲಾಗಿತ್ತು.ವ್ಯಕ್ತಿಗಳು ನಾಪತ್ತೆಯಾಗುವುದು, ಹತ್ಯೆ, ಹಿಂಸೆ,  ಮನೆ ಮೇಲಿನ ದಾಳಿಗಳು, ಲೂಟಿ, ಬೇಕಾಬಿಟ್ಟಿ ಬಂಧನ  ಮಣಿಪುರದ ದಿನನಿತ್ಯದ ಚಟುವಟಿಕೆಗಳಾಗಿವೆ. ಹಾಗೆಯೇ ಏನೂ ಕಾರಣಗಳಿಲ್ಲದೆ, ಮಿಲಿಟರೀಕರಣದ ಅಡಿ   ಅತ್ಯಾಚಾರ, ಲೈಂಗಿಕ ದೌರ್ಜನ್ಯ , ಹೊಡೆತ ಬಡಿತ, ಹತ್ಯೆ, ವೈಧವ್ಯ, ಬಲಾತ್ಕಾರದ ವೇಶ್ಯಾವಾಟಿಕೆ ಇತ್ಯಾದಿ  ಹಲವು ಬಗೆಯ  ದಮನಗಳಿಗೆ ಮಹಿಳೆಯರು ಒಳಗಾಗುತ್ತಾರೆ. ಮಹಿಳೆ ವಿರುದ್ಧದ ಲೈಂಗಿಕ ಹಿಂಸಾಚಾರವನ್ನು ‘ಆಫ್‌ಸ್ಪಾ’ ನ್ಯಾಯಬದ್ಧಗೊಳಿಸಿದೆ ಎಂಬುದನ್ನು  ಲೈಂಗಿಕ ದೌರ್ಜನ್ಯಗಳ ವಿರುದ್ಧದ ಕಾನೂನುಗಳ ಪುನರ್‌ಪರಿಶೀಲನೆಗಾಗಿ 2012ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರದಿಂದ   ನೇಮಕಗೊಂಡಿದ್ದ   ನ್ಯಾಯಮೂರ್ತಿ ವರ್ಮಾ ಸಮಿತಿಯೂ ಎತ್ತಿ ಹೇಳಿತ್ತು.  ಅಲ್ಲದೆ, ಈ ಕರಾಳ ಕಾಯಿದೆಯ ಪುನರ್‌ಪರಿಶೀಲನೆಗೂ ಶಿಫಾರಸು ಮಾಡಿತ್ತು.ತುರ್ತು ಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೇನೆ ನೆರವು ಅಗತ್ಯ. ಆದರೆ ಇದು ಕಾಯಂ ಆಗಬಾರದು ಎಂಬ ಬಗ್ಗೆ ಕೋರ್ಟ್ ಹೇಳಿರುವ ಕಿವಿಮಾತು ಸರಿಯಾದುದು. ಸೇನೆಯ ನೆರವಿಲ್ಲದೆಯೇ ಉಗ್ರರನ್ನು ದಮನ ಮಾಡಿದ ಪಂಜಾಬ್‌ನ  ಉದಾಹರಣೆ ನಮ್ಮ ಮುಂದಿದೆ.  2015ರಲ್ಲಿ ತ್ರಿಪುರಾದಲ್ಲೂ ‘ಆಫ್‌ಸ್ಪಾ’ ರದ್ದುಪಡಿಸಲಾಗಿದೆ. ಆದರೆ ಇದರಿಂದ ದೊಡ್ಡ ಸಮಸ್ಯೆಯೇನೂ ಸೃಷ್ಟಿಯಾಗಿಲ್ಲ.  1980ರ ಆರಂಭದಲ್ಲಿ  ಮಣಿಪುರದಲ್ಲಿ ‘ಆಫ್‌ಸ್ಪಾ’ ಜಾರಿಗೊಳಿಸಿದಾಗ ಮಣಿಪುರದಲ್ಲಿ ಕೇವಲ ಎರಡು ಸಕ್ರಿಯ ಬಂಡುಕೋರ ಗುಂಪುಗಳಿದ್ದವು.  ಆದರೆ ‘ಆಫ್‌ಸ್ಪಾ’ ಜಾರಿ ನಂತರ  ರಾಜ್ಯದಲ್ಲಿ ಸುಮಾರು 50 ಬಂಡುಕೋರ ಗುಂಪುಗಳು ಹುಟ್ಟಿಕೊಂಡಿವೆ ಎಂದು ಆರೋಪಿಸಲಾಗುತ್ತದೆ.ಹೀಗಾಗಿ ಮೇರೆ ಮೀರಿದ ಅಧಿಕಾರವಿರುವಂತಹ ಸೇನೆಯ ದೀರ್ಘಕಾಲದ ನಿಯೋಜನೆಯಿಂದ ಹಾನಿಯೇ ಹೆಚ್ಚಾಗಬಹುದು ಎಂಬಂಥ ವ್ಯಾಖ್ಯಾನಗಳನ್ನು ಕಡೆಗಣಿಸಲಾಗದು.ಹಲವು ಬಗೆಯ ಆಂತರಿಕ ಸಂಘರ್ಷಗಳು, ಸುಳ್ಳು ಎನ್‌ಕೌಂಟರ್‌ಗಳು   ಹಾಗೂ ‘ಆಫ್‌ಸ್ಪಾ’ ವಿರುದ್ಧದ ಪ್ರತಿಭಟನೆಗಳು ಮಣಿಪುರದಲ್ಲಿ ಮಾಮೂಲೆಂಬಂತೆ ನಡೆದುಕೊಂಡು ಬಂದಿವೆ.ಇಂತಹ ಸಂದರ್ಭದಲ್ಲಿ ಮಣಿಪುರದಲ್ಲಿ ಸೇನೆ ನಿಯೋಜನೆ ಬಗ್ಗೆ  ಸುಪ್ರೀಂ ಕೋರ್ಟ್ ಎತ್ತಿರುವ ಪ್ರಶ್ನೆಗಳ ಬಗ್ಗೆ ಮಿಲಿಟರಿಗೆ ಭಿನ್ನಾಭಿಪ್ರಾಯ  ಇದ್ದೇ ಇದೆ. ತೀವ್ರ ಒತ್ತಡಗಳಲ್ಲಿ ಕೆಲಸ ಮಾಡುವ ಸೇನೆಗೆ ಶತ್ರು ಹಾಗೂ ಮಾಮೂಲಿ ನಾಗರಿಕನ ನಡುವಿನ ವ್ಯತ್ಯಾಸ ಗುರುತಿಸುವುದು ಕ್ಲಿಷ್ಟಕರ. ವಿಚಾರಣೆಗೊಳಪಡಬೇಕಾಗಬಹುದು ಎಂಬ ಭೀತಿಯಿಂದ ಸೇನಾ ಕಾರ್ಯಾಚರಣೆ ಪರಿಣಾಮಕಾರಿಯಾಗದೆ ಉಗ್ರರಿಗೆ ಅನುಕೂಲವಾಗಬಹುದು ಎಂಬುದು ಸೇನೆಯ ವಾದ.ಏನೇ ಆಗಲಿ, ಅತಿರೇಕದ ತುರ್ತು ಸಂದರ್ಭಗಳ ನಿರ್ವಹಣೆಯಲ್ಲಿ ನಾಗರಿಕ ಆಡಳಿತಕ್ಕೆ ಸೇನೆ ಬೆಂಬಲ ನೀಡಲೇಬೇಕು.  ಆದರೆ ರಾಜಕೀಯ ಅನುಕೂಲಕ್ಕೋ ಅಥವಾ ರಾಜ್ಯ ಪಡೆಗಳ ಅಸಾಮರ್ಥ್ಯದ ಕಾರಣದಿಂದಲೋ  ವರ್ಷಗಟ್ಟಲೇ ಮುಂದುವರಿಯಲು ಬಿಟ್ಟಲ್ಲಿ ಅದರ ಪರಿಣಾಮ ಸಕಾರಾತ್ಮಕವಾಗಿರುವುದಿಲ್ಲ ಎಂಬುದನ್ನು ಇತ್ತೀಚಿನ ಬೆಳವಣಿಗೆಗಳು ಧ್ವನಿಸುತ್ತಿವೆ. ಹಿಜ್‌ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಎನ್‌ಕೌಂಟರ್ ಹತ್ಯೆಯ ನಂತರ ಕಳೆದೆರಡು ದಿನಗಳಿಂದ ಕಾಶ್ಮೀರ ಹೊತ್ತಿ ಉರಿಯುತ್ತಿರುವ ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಹೊಸದೊಂದು ಅರಿವಿನ ಬೆಳಕಲ್ಲಿ ಅರ್ಥೈಸಿಕೊಳ್ಳುವುದು ಅಗತ್ಯ.  ಇದಕ್ಕೆ ಸಮತೋಲನದ ದೃಷ್ಟಿಕೋನ ಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry