7

ತಬ್ಬಲಿ ಜಾತಿಯೊಂದರ ರೋದನ...

Published:
Updated:
ತಬ್ಬಲಿ ಜಾತಿಯೊಂದರ ರೋದನ...

ಇಪ್ಪತ್ತು–ಮೂವತ್ತು ವರ್ಷಗಳ ಹಿಂದಿನ ಮಾತು. ಈ ಜನಾಂಗದವರ ಗುಡಾರಗಳು ಊರಿನ ಅಂಚಲ್ಲಿ ಕಾಣಿಸುತ್ತಿದ್ದಂತೆ ಗ್ರಾಮಸ್ಥರು ಜಾಗೃತರಾಗುತ್ತಿದ್ದರು. ಕುರಿ, ಕೋಳಿ, ಬಟ್ಟೆ ಬರೆ, ಪದಾರ್ಥಗಳನ್ನೆಲ್ಲ ಜೋಪಾನ ಮಾಡುತ್ತಿದ್ದರು. ಮನೆ ಬಾಗಿಲನ್ನು ಭದ್ರಪಡಿಸಿಕೊಳ್ಳುತ್ತಿದ್ದರು. ಹೊಲಕ್ಕೆ ಕಾವಲು ಹೋಗುತ್ತಿದ್ದರು.ಹೆಂಗಸರು ಹಚ್ಚೆ ಹಾಕಲು, ಮೀನು, ಹಣೆಬೊಟ್ಟು, ಹೇರ್‌ಪಿನ್‌ಗಳನ್ನು ಮಾರಲು ಊರಿನೊಳಕ್ಕೆ ಹೋದರೆ ಅನುಮಾನದಿಂದಲೇ ನೋಡುತ್ತಿದ್ದರು. ನಾನು ಬಾಲ್ಯದಲ್ಲಿ ಈ ಜನಾಂಗದ ಬಗ್ಗೆ ಇಂಥ ಅಪವಾದ, ಅನುಮಾನ, ಕಳವಿನ ಕತೆಗಳನ್ನು ಕೇಳಿದ್ದೆ.ಇವರನ್ನು ‘ಕಟಬರ’ ಎನ್ನುತ್ತಾರೆ. ಮಹಾರಾಷ್ಟ್ರ ಮೂಲದ ಅಲೆಮಾರಿ ಜನಾಂಗವಿದು. ಮನೆಮಾತು ಮರಾಠಿ. ಪೂರ್ವಜರ ಕಾಲದಿಂದಲೂ ತೊಗಲುಗೊಂಬೆ ಆಡಿಸುವುದು, ಮೀನು ಹಿಡಿಯುವುದು, ಹಚ್ಚೆ ಹಾಕುವುದು, ಕೌದಿ ಹೊಲೆಯುವುದು ಇವರ ಕಸುಬು. ಒಂದೆಡೆ ನೆಲೆ ನಿಲ್ಲದ ಇವರಿಗೆ ಇನ್ನೂ ‘ಐಡೆಂಟಿಟಿ’ ಎನ್ನುವುದೇ ಇಲ್ಲ.ಉತ್ತರ ಕರ್ನಾಟಕದಲ್ಲಿ ಕಟಬು, ಕಟಬರ, ಮಧ್ಯ ಕರ್ನಾಟಕದಲ್ಲಿ ಕಿಳ್ಳೇಕ್ಯಾತ, ಹಳೆ ಮೈಸೂರು ಭಾಗದಲ್ಲಿ ಶಿಳ್ಳೇಕ್ಯಾತ ಎಂದು ಇವರನ್ನು ಕರೆಯುತ್ತಾರೆ.ಗೊಂಬೆಯಾಟದಲ್ಲಿ ಬರುವ ಹಾಸ್ಯಪಾತ್ರಧಾರಿ ಹೆಸರು ಕಟಬ, ಕಿಳ್ಳೆ ಅಥವಾ ಶಿಳ್ಳೆಕ್ಯಾತ. ಕಿಳ್ಳೆ, ಶಿಳ್ಳೆ ಎಂದರೆ ಚೇಷ್ಟೆ ಎಂದರ್ಥ. ಇದನ್ನು ಮಾಡುವವ ಕಿಳ್ಳೆ ಅಥವಾ ಶಿಳ್ಳೆಕ್ಯಾತ. ಇದೇ ಹೆಸರು ಈ ಜನಾಂಗಕ್ಕೆ ಉಳಿದುಕೊಂಡಿದೆ.ಇವರಿಗೆ ತಮ್ಮ ‘ಜಾತಿ’ ಯಾವುದು ಎನ್ನುವುದೇ ಸ್ಪಷ್ಟವಿಲ್ಲ. ಕಟಬು, ಕಟಬರ, ಛೇತ್ರಿ, ಶಿಳ್ಳೇಕ್ಯಾತ, ಕಿಳ್ಳೇಕ್ಯಾತ, ಗೊಂಬೆರಾಮ, ಮೀನುಗಾರ–ಹೀಗೆ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ. ಅನಕ್ಷರಸ್ಥರಾದರೂ ಇವರ ಎದೆಯಲ್ಲಿ ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳು ಜೀವಂತವಾಗಿದ್ದವು. ರಾತ್ರಿ ಊರು ಗುಡಿ ಮುಂದೆ ಗೊಂಬೆಯಾಟ ಪ್ರದರ್ಶಿಸುತ್ತಿದ್ದರು. ಜೀವನ ನಡೆಯುತ್ತಿತ್ತು.ಇವೆಲ್ಲ ಸಂಗತಿಗಳಿಂದ ಕುತೂಹಲಗೊಂಡ ನಾನು ಕಲಬುರ್ಗಿ ಜಿಲ್ಲೆಯಲ್ಲಿ ಇವರನ್ನು ಹುಡುಕುತ್ತಾ ಹೋದೆ. ನಾಗೂರಿನ ಅಂಚಿನಲ್ಲಿ ಅಣಬೆಗಳಂತೆ ಗುಡಾರಗಳು ಎದ್ದಿದ್ದವು. ಅಲ್ಲಿ ಹರಿಶ್ಚಂದ್ರನೊಂದಿಗೆ ಮಾತಿಗೆ ನಿಂತರೂ  ಕಣ್ಣುಗಳು ಗೊಂಬೆಗಳನ್ನೇ ಹುಡುಕುತ್ತಿದ್ದವು. ಇದನ್ನು ಗಮನಿಸಿದ ಹರಿಶ್ಚಂದ್ರ–‘ಸೋಮಿ, ಏನ್‌ ಹುಡುಕುತ್ತಿದ್ದೀರಿ’.

‘ತೊಗಲುಗೊಂಬೆಗಳು’.‘ಅವಾ? ಗಂಗೆ ಪಾಲಾದವು’.‘ಏಕೆ!?’‘ಯಾರಿಗೆ ಅಂತ ಆಟ ಆಡಿಸೋಣ. ತಂದೆ ಕಾಲಕ್ಕೆ ಅವೆಲ್ಲವೂ ಯಾವುದೋ ಹೊಳೆಯಲ್ಲಿ ಲೀನವಾಗಿ ಹೋದವು’ ಎಂದರು.ಧರ್ಮಸೇನಾ ಎನ್ನುವ ವ್ಯಕ್ತಿ ಮರಾಠಿಯಲ್ಲಿ ಏನೋ ಹೇಳಿದ. ಬಲೆ ನೇಯುತ್ತಿದ್ದ ಹರಿಶ್ಚಂದ್ರ ಅದೇ ದಾರಗಳನ್ನು ಎದುರುಗಿದ್ದ ವ್ಯಕ್ತಿಗೆ ಹಿಡಿದುಕೊಳ್ಳಲು ಕೊಟ್ಟು ತೊಗಲುಗೊಂಬೆಗಳನ್ನು ಕುಣಿಸುವವನಂತೆ ನಟಿಸುತ್ತಾ...‘ಕುಣಿ.. ಕುಣಿ.. ಮಗನಾ ಕುಣಿ. ಎಷ್ಟು ಕುಣಿತಿಯೋ ಕುಣಿ, ಸುಸ್ತಾಗೋತನ ಕುಣಿ. ಅವರು ರೊಕ್ಕ ಕೊಡ್ತಾರೋ ಇಲ್ಲೋ ಕೇಳು. ಇಲ್ಲ ಅಂದ್ರೆ ನಿನ್ನ ಗಂಗೆಪಾಲು ಮಾಡ್ತೀನಿ’–ಹೀಗೆ ತಮ್ಮ ತಂದೆ ಕಟಬು ಪಾತ್ರಧಾರಿ ಮೂಲಕ ಹೇಳಿಸುತ್ತಿದ್ದ ಸಂಭಾಷಣೆಯನ್ನು ಒಪ್ಪಿಸಿದರು.ಇಂಥ ಸಂಭಾಷಣೆ ಮೂಲಕ ಗೊಂಬೆರಾಮರು ಪ್ರೇಕ್ಷಕರಿಗೆ ಗಂಭೀರ ಸಂದೇಶವನ್ನು ರವಾನಿಸುತ್ತಿದ್ದರು. ಆದರೆ ಹಳ್ಳಿಗರಿಗೆ ಇವರ ಒಡಲಾಳದ ಮಾತು ನಾಟಲೇ ಇಲ್ಲ.ಮಹಿಳೆಯರು ಹಚ್ಚೆ (ಟ್ಯಾಟೂ) ಹಾಕುತ್ತಾ ಸಂಸಾರಕ್ಕೆ ನೆರವಾಗುತ್ತಿದ್ದರು. ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಯಿತು. ಶುಚಿತ್ವಕ್ಕೂ ಹೆಚ್ಚು ಗಮನ ಕೊಟ್ಟರು. ಹೀಗಾಗಿ ಇವರನ್ನು ಕರೆದು ಹಚ್ಚೆ ಹಾಕಿಸಿಕೊಳ್ಳುವುದನ್ನು ಬಿಟ್ಟರು.ಇವರು ಹೊಲೆಯುತ್ತಿದ್ದ ಕೌದಿಗಳಲ್ಲಿ ತಾಯಿಮಡಿಲಿನಂತಹ ಬೆಚ್ಚನೆ ಭಾವವಿತ್ತು. ಇವರು ಗಲೀಜು ಜನರು ಎಂದು ನಾಜೂಕಿನ ಮಂದಿ ಕೌದಿ ಹೊಲೆಸುವುದನ್ನು ನಿಲ್ಲಿಸಿದರು.ಗೊಂಬೆಯಾಟ, ಹಚ್ಚೆ ಹಾಕುವುದು, ಕೌದಿ ಹೊಲೆಯುವುದು ಕಾಲದ ಓಟದಲ್ಲಿ ಇವರ ಕೈತಪ್ಪಿದವು. ಅವುಗಳೇ ಈಗ ಕಾರ್ಟೂನ್‌, ಟ್ಯಾಟೂ ಮತ್ತು ಕ್ವಿಲ್ಟ್‌ (ಬೆಚ್ಚನೆಯ ಹೊದಿಕೆ) ರೂಪ ಪಡೆದು ಉದ್ಯಮವಾಗಿವೆ.ಇವರ ಕೈಯಲ್ಲಿ ಈಗ ಉಳಿದಿರುವುದು ಮೀನುಗಾರಿಕೆ ಮಾತ್ರ. ಹೀಗಾಗಿ ಇಂದಿಗೂ ಇವರ ಬದುಕನ್ನು ಹಳ್ಳ, ಕೊಳ್ಳ, ಕೆರೆ, ಕಟ್ಟೆ, ಹೊಳೆಗಳು ನಿರ್ಧರಿಸುತ್ತವೆ. ಇವುಗಳ ಸೆರಗಿನಲ್ಲೇ ಇವರ ಬದುಕು ಅರಳುತ್ತದೆ, ಮುದುಡುತ್ತದೆ.ಸಮಾಜ ಇನ್ನೂ ಇವರನ್ನು ತಮ್ಮೊಳಗಿನವರು ಎಂದುಕೊಂಡಿಲ್ಲ. ಏಕೆಂದರೆ ಇವರು ‘ಅಪರಾಧಿ ಜನಾಂಗ’ ಎನ್ನುವುದು ಅವರ ನಂಬಿಕೆ. ‘ನಮ್ಮವರು ಹೊಟ್ಟೆಗಾಗಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದರು. ಸಿಕ್ಕಿಬಿದ್ದು ಕೆಲವರು ಜೀವವನ್ನೂ ಕಳೆದುಕೊಂಡಿದ್ದಾರೆ’ ಎಂದು ಜನಾಂಗದ ಮುಖಂಡರೇ ಹೇಳುತ್ತಾರೆ.ಇವರಿಗೆ ಇತ್ತೀಚಿನವರೆಗೂ ಹೋಟೆಲ್‌ಗಳಲ್ಲಿ ಚಹಾ ಕೊಡುತ್ತಿರಲಿಲ್ಲ. ಕ್ಷೌರ ಮಾಡುವವರೂ ಹತ್ತಿರ ಸೇರಿಸುತ್ತಿರಲಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಕೊಳಕು, ದುರ್ಗಂಧ ಎನ್ನುವ ಕಾರಣಕ್ಕಾಗಿಯೇ ಅಟ್ಟುತ್ತಿದ್ದರು.ಹೀಗಾದರೆ ಇವರ ಮಕ್ಕಳ ಎದೆಗೆ ಅಕ್ಷರ ಬೀಳುವುದು ಹೇಗೆ? ತುಳಿತಕ್ಕೆ ಒಳಗಾದ ಜಾತಿಗಳು ಶಿಕ್ಷಣದಿಂದಾಗಿಯೇ ತಲೆಎತ್ತಿ ನಿಂತಿವೆ. ಹಕ್ಕುಗಳನ್ನು ಕೇಳುತ್ತಿವೆ. ಶಿಕ್ಷಣವೇ ಸಿಗದೆ ಹೋದರೆ ಇವರು ಜಾಗೃತರಾಗುವುದು ಹೇಗೆ?ಸಮೀಕ್ಷೆಯೊಂದರ ಪ್ರಕಾರ ಕರ್ನಾಟಕದಲ್ಲಿ ಇವರ ಸಂಖ್ಯೆ ಕೇವಲ ‘ಎಂಬತ್ತು ಸಾವಿರ!’ ಇವರಲ್ಲೂ ಕೆಲವರು ಶಿಕ್ಷಣ ಪಡೆದು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಎಚ್ಚೆತ್ತ ಇವರು ಜನಾಂಗವನ್ನು ಸಂಘಟಿಸುತ್ತಿದ್ದಾರೆ.‘ಕಟಬು, ಕಟಬರ, ಕಿಳ್ಳೆಕ್ಯಾತ ಇವು ಶಿಳ್ಳೇಕ್ಯಾತಕ್ಕೆ ಪರ್ಯಾಯ ಪದಗಳು. ಶಿಳ್ಳೇಕ್ಯಾತರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಸಿಗುತ್ತಿದೆ. ಉಳಿದವರಿಗೆ ಪ್ರವರ್ಗ–1 ಪ್ರಮಾಣಪತ್ರ ಕೊಡಲಾಗುತ್ತಿದೆ. ಇದನ್ನು ಸರಿಪಡಿಸದೇ ನಮ್ಮ ಜನಾಂಗವನ್ನು ಮೇಲೆತ್ತಲು ಸಾಧ್ಯವೇ ಇಲ್ಲ’ ಎನ್ನುತ್ತಾರೆ ಕಟಬರ ಮುಖಂಡ ವಿಲಾಸಕುಮಾರ ಜಿ. ಸಿಂಧೆ.

ನಮ್ಮ ಸಮಾಜವು ಸಾವಿರಾರು ರ್ಷಗಳಿಂದಲೂ ಜಾತಿಯನ್ನೇ ಉಸಿರಾಡುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ‘ರಾಜಕೀಯ ಅಧಿಕಾರ’ ಮತ್ತು ‘ಆರ್ಥಿಕ ಲಾಭ’ದಿಂದಾಗಿ ಜಾತಿಗಳು ಹೆಚ್ಚಾಗಿಯೇ ಜಾಗೃತವಾಗಿವೆ. ಬಲಾಢ್ಯ ಜಾತಿಗಳು ಮುನ್ನೆಲೆಗೆ ಬಂದಿವೆ. ಸೂಕ್ಷ್ಮ, ಅತೀ ಸೂಕ್ಷ್ಮ ಜಾತಿಗಳು ಅಂಚಿಗೆ ತಳ್ಳಲ್ಪಟ್ಟಿವೆ. ರಾಜಕೀಯ ಪಕ್ಷಗಳು  ಹೀಗೆಯೇ ವರ್ತಿಸುತ್ತಿವೆ. ಬಲಾಢ್ಯ ಜಾತಿಗಳ ‘ಮಹಾತ್ಮರ ಜಯಂತಿ’ಯನ್ನು ಆಚರಿಸುತ್ತಾ ಅವರನ್ನೇ ರಮಿಸುತ್ತಿವೆ.ಆರೋಗ್ಯವಂತ ಸಮಾಜ ಮತ್ತು ಸರ್ಕಾರ ತುಳಿತಕ್ಕೆ ಒಳಗಾದ ಜಾತಿಗಳ ಬಗೆಗೆ ಪ್ರೇಮವನ್ನು ಹೊಂದಬೇಕು.   ಎಲ್ಲ ಸವಲತ್ತುಗಳನ್ನು ಕೊಡಬೇಕು. ಬಲಾಢ್ಯರೊಂದಿಗೆ ಓಟಕ್ಕೆ ನಿಲ್ಲುವಂತೆ ಪೋಷಿಸಬೇಕು. ಈಗಿನಿಂದಲೇ ಎಲ್ಲ ಸವಲತ್ತುಗಳನ್ನು ಕೊಟ್ಟರೂ ಇವರು ಸ್ಪರ್ಧೆಗೆ ನಿಲ್ಲಲ್ಲು ಇನ್ನೂ ಮೂವತ್ತು ವರ್ಷಗಳೇ ಬೇಕಾಗುತ್ತದೆ.ತಾಯಿಯೊಬ್ಬಳು ತನ್ನ ಮಕ್ಕಳಲ್ಲಿ ದುರ್ಬಲನಿಗೆ ಹೆಚ್ಚು ಕಾಳಜಿ, ಮಮತೆ ತೋರುತ್ತಾಳೆ. ಇಂಥ ‘ತಬ್ಬಲಿ ಜಾತಿ’ಗಳ ಬಗೆಗೆ ಸಮಾಜ ಮತ್ತು ಸರ್ಕಾರ ತಾಯಿಯ ಅಂತಃಕರಣ

ಹೊಂದುವುದು ಮುಖ್ಯವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry