7

ಗ್ರಾಮರಾಜ್ಯದ ಉಸಿರು ಕಟ್ಟದಿರಲಿ ಹಣದ ಕ್ಷಾಮ

ಆರ್‌. ಪೂರ್ಣಿಮಾ
Published:
Updated:
ಗ್ರಾಮರಾಜ್ಯದ ಉಸಿರು ಕಟ್ಟದಿರಲಿ ಹಣದ ಕ್ಷಾಮ

ಸಾರ್ವಜನಿಕ ಚರ್ಚೆಗೆ ಅರ್ಹವಾದ ಎಷ್ಟೊಂದು ಸಂಗತಿಗಳು, ತೀರ್ಮಾನಗಳು ಮತ್ತು ಘಟನೆಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸದಾ ಘಟಿಸುತ್ತಲೇ ಇರುತ್ತವೆ. ಆದರೇನು ಮಾಡೋಣ, ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಗಮನ ಹರಿಸುವ ಕೆಲವೇ ವಿಷಯಗಳು ಮಾತ್ರ ಸಾರ್ವಜನಿಕ ಚರ್ಚೆಯ ಸರಕಾಗುತ್ತವೆ.ಅವುಗಳು ಮಾತ್ರ ದೇಶದ ಪ್ರಮುಖ ಸಮಸ್ಯೆಗಳು ಎಂಬಂತೆ ಬಿಂಬಿತವಾಗುತ್ತವೆ. ಯಾವುದಾದರೂ ವಿಷಯವನ್ನು ಒಂದು ಪಕ್ಷ ಅಥವಾ ಕೆಲವು ವ್ಯಕ್ತಿಗಳು ಸ್ವಂತ ರಾಜಕೀಯಕ್ಕೆ ಬಳಸಿಕೊಂಡಾಗಲಂತೂ ಆ ವಿಷಯ ಹೊತ್ತಿಕೊಂಡು ಉರಿಯುತ್ತದೆ; ಆದರೆ ಉಳಿದ ಅನೇಕ ವಿಷಯಗಳು ಕತ್ತಲೆಯಲ್ಲೇ ಉಳಿಯುತ್ತವೆ.ಬಹುಪಾಲು ವಿಷಯಗಳಿಗೆ ಪ್ರತಿಪಕ್ಷಗಳ ವಿರೋಧ ಮತ್ತು ಮಾಧ್ಯಮಗಳ ವಿಶ್ಲೇಷಣೆ ಎರಡೂ ಅರ್ಹವಾಗಿಯೇ ದೊರಕುತ್ತವೆ ಅಂದುಕೊಳ್ಳೋಣ. ಆದರೆ ಅವೆರಡು ವಲಯಗಳು ಕಣ್ಣೆತ್ತಿ ನೋಡದ, ಕೈಗೆತ್ತಿಕೊಳ್ಳದ ಹತ್ತಾರು ವಿಷಯಗಳು ಪ್ರತಿಯೊಂದು ಸರ್ಕಾರದ ಅವಧಿಯಲ್ಲೂ ಸಂಭವಿಸುತ್ತವೆ.ಇನ್ನು ನಿರಂತರ ಗಮನ ಬೇಡುವ ನೂರಾರು ವಿಷಯಗಳಂತೂ ಒಂದು ದೇಶದ ಜನಜೀವನದಲ್ಲಿ ಇದ್ದೇ ಇರುತ್ತವೆ. ಅನೇಕ ವಿಷಯಗಳು ಯಾರಿಗೂ ವಿಶೇಷ ಲಾಭ ತರದಿರಬಹುದು- ಆದರೆ ಅವುಗಳ ಬಗ್ಗೆ ಗಮನ ಹರಿಸದಿದ್ದರೆ ಬಡಜನರಿಗೆ ವಿಶೇಷ ನಷ್ಟ ಆಗುತ್ತದೆ. ದೇಶದ ಪಂಚಾಯತ್ ರಾಜ್ ವ್ಯವಸ್ಥೆಗೆ ಒದಗಿರುವ ದುರವಸ್ಥೆ ಅಂಥ ಜರೂರು ವಿಷಯ.ಜೂನ್ ತಿಂಗಳ ಕೊನೆಯ ವಾರ ನವದೆಹಲಿಯಲ್ಲಿ ಪಂಚಾಯತ್‌ ರಾಜ್ ಸಚಿವರ ಸಭೆ ನಡೆಯಿತು. ದೇಶದ ಎಲ್ಲ ಪಂಚಾಯತ್‌ ರಾಜ್ ಸಚಿವರು ಅದಕ್ಕೆ ಬರಬೇಕಾಗಿದ್ದರೂ ಅರ್ಧದಷ್ಟು ರಾಜ್ಯಗಳ ಸಚಿವರು ಮಾತ್ರ ಅದರಲ್ಲಿ ಭಾಗವಹಿಸಿದ್ದರು. ಪಂಚಾಯತ್‌ ರಾಜ್ ವ್ಯವಸ್ಥೆಯ ನಿರ್ವಹಣೆಗಾಗಿ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಕೊಡುತ್ತಿದ್ದ ಅನುದಾನದಲ್ಲಿ ಭಾರೀ ಕಡಿತ ಮಾಡಿರುವುದು ಮತ್ತು ಕೊಡುವಷ್ಟಕ್ಕೂ ತುಂಬಾ ವಿಳಂಬ ಮಾಡುತ್ತಿರುವುದರ ಬಗ್ಗೆ ಹಲವಾರು ರಾಜ್ಯಗಳ ಪಂಚಾಯತ್‌ ರಾಜ್ ಸಚಿವರು ಆಕ್ರೋಶ ವ್ಯಕ್ತ ಪಡಿಸಿದರು.ಅನುದಾನ, ಹಣಕಾಸು ಪೂರೈಕೆ ಕೊರತೆಯಿಂದ ಈ ಇಲಾಖೆ ನಿರ್ವಹಿಸಬೇಕಾದ ‘ಸ್ವಚ್ಛಭಾರತ’ದಂಥ ಪ್ರಮುಖ ಯೋಜನೆಗಳೇ ಕುಸಿಯುತ್ತಿವೆ ಎಂದು ಕರ್ನಾಟಕದ ಸಚಿವ ಎಚ್.ಕೆ. ಪಾಟೀಲ್ ವಿವರಿಸಿದರು. ಕೇಂದ್ರದಿಂದ ಹಣ ಬರದಿದ್ದರೆ, ಈ ಇಲಾಖೆ ಕೆಲಸ ಮಾಡುವುದು ಹೇಗೆ, ಪಂಚಾಯತ್‌ ರಾಜ್ ವ್ಯವಸ್ಥೆ ಉಳಿಯುತ್ತದೆಯೇ, ಅದರ ಕೊನೆಗಾಲ ಸಮೀಪಿಸಿದೆಯೇ ಎಂಬ ಆತಂಕ ಇನ್ನೂ ಹಲವರಿಂದ ವ್ಯಕ್ತವಾಯಿತು.ಒಟ್ಟಿನಲ್ಲಿ ದೇಶದಾದ್ಯಂತ ಇರುವ ಗ್ರಾಮ ಪಂಚಾಯಿತಿಗಳಿಗೆ ಹೊಟ್ಟೆಗೆ ಹಿಟ್ಟಿಲ್ಲದೆ ಹಸಿವಿನಿಂದ ಸಾಯುವ ದುಸ್ಥಿತಿ ಬಂದಿದೆ ಎನ್ನುವುದು ಆ ಸಭೆಯಿಂದ ಮತ್ತೊಮ್ಮೆ ದೃಢಪಟ್ಟ ಸತ್ಯಸಂಗತಿ. ಪಂಚಾಯತ್‌ ರಾಜ್ ವ್ಯವಸ್ಥೆಗೆ ಉಸಿರು ಕಟ್ಟಿಸಿದರೆ ಅದು ಒಂಟಿಯಲ್ಲ, ಅದರೊಂದಿಗೆ ಹಲವಾರು ಜನಪರ ಸಂಗತಿಗಳು ಸಾಯುತ್ತವೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮರಣಶಯ್ಯೆಯ ಮೇಲೆ ಮಲಗಿಸಿ ಬಹಳ ದಿನಗಳೇ ಆಗಿವೆ. ಅನುದಾನವೆಂಬ ಉಸಿರಾಟದ ಉಪಕರಣವನ್ನು ಮೆಲ್ಲಗೆ ಎಳೆದು ಹಾಕಲು ಶುರುಮಾಡಿದ ಮೇಲೆ ಅದು ಏದುಸಿರು ಎಳೆಯುತ್ತ ಕ್ರಮೇಣ ತಣ್ಣಗಾಗುತ್ತಿದೆ.ಪಂಚಾಯತ್‌ ರಾಜ್ ವ್ಯವಸ್ಥೆಗೆ ಒದಗಿರುವ ದುರವಸ್ಥೆಯ ವಿಶ್ಲೇಷಣೆ ಮಾಡುವುದು ಅಷ್ಟೊಂದು ಸುಲಭವಲ್ಲ. ಸಾರ್ವಜನಿಕ ಚರ್ಚೆಗೆ ಅದು ಸರಳವಾಗಿ ದಕ್ಕುವ ವಿಷಯವಲ್ಲ. ರಾಜಕೀಯ ಪಕ್ಷಗಳ ಪ್ರತಿಭಟನೆ, ಧರಣಿ ಇತ್ಯಾದಿ ಎಲ್ಲಿ ನಡೆದವೋ ಗೊತ್ತಿಲ್ಲ. ಜೂನ್ 27 ರಂದು ನವದೆಹಲಿ ಸಭೆ ನಡೆದ ಮರುದಿನವೇ ಪಂಚಾಯತ್‌ ರಾಜ್‌ನ ಮರಣಶಯ್ಯೆ ಕುರಿತು ಆಂಗ್ಲ ಪತ್ರಿಕೆಯೊಂದರಲ್ಲಿ ವಿಶೇಷ ಅಗ್ರ ವಾರ್ತೆಯೊಂದು ಪ್ರಕಟವಾಗಿ ಎಲ್ಲರ ಗಮನ ಸೆಳೆಯಲು ಪ್ರಯತ್ನಿಸಿದರೂ ಅದು ಒಟ್ಟಾರೆ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಯಾಗಿ ಬೆಳೆಯಲಿಲ್ಲ.ಕಳೆದ ವರ್ಷದ ಮುಂಗಡಪತ್ರದಲ್ಲೇ ಪಂಚಾಯತ್ ರಾಜ್ ಇಲಾಖೆಗೆ ನೀಡುತ್ತಿದ್ದ ಅನುದಾನವನ್ನು ಏಳು ಸಾವಿರ ಕೋಟಿ ರೂಪಾಯಿಗಳಿಂದ ಕೇವಲ 96 ಕೋಟಿ ರೂಪಾಯಿಗಳಿಗೆ ದಿಢೀರನೆ ಇಳಿಸಿದ್ದನ್ನು ಮತ್ತು ಅದರ ಪರಿಣಾಮಗಳನ್ನು ಅದು ಚರ್ಚಿಸಿತ್ತು. ಇಂಥ ಭಾರೀ ಕಡಿತ ಆದ ಮೇಲೆ ಸಹಜವಾಗಿ ಪಂಚಾಯತ್‌ ರಾಜ್ ವ್ಯವಸ್ಥೆ ಶವಾಸನದಲ್ಲಿ ಮಲಗಿಬಿಟ್ಟಿತು. ಅಷ್ಟೇ ಇಲ್ಲ ಪಂಚಾಯತ್‌ ರಾಜ್ ಇಲಾಖೆಯೇ ಒಟ್ಟಾರೆ ಕೆಲಸಕ್ಕೆ ಬಾರದ ಇಲಾಖೆ ಆಗಿಹೋಯಿತು. ಇಲ್ಲಿ ಜಾರಿಯಲ್ಲಿದ್ದ ಒಂದು ಮುಖ್ಯ ಯೋಜನೆಯಲ್ಲಿದ್ದ ರಾಜೀವ್ ಗಾಂಧಿ ಹೆಸರನ್ನು ಕಿತ್ತುಹಾಕಿ ಅದಕ್ಕೆ ‘ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಅಭಿಯಾನ’ ಎಂದು ಹೊಸ ಹೆಸರಿಟ್ಟಮೇಲೆ, ಈ ವರ್ಷದ ಮುಂಗಡ ಪತ್ರದಲ್ಲಿ 685 ಕೋಟಿ ರೂಪಾಯಿ ಅನುದಾನ ಮಂಜೂರಾಯಿತು.ಕೇಂದ್ರದಿಂದ ಬರುವ ಅನುದಾನ ಕುಸಿತದ ಬಗ್ಗೆ ರಾಜ್ಯಗಳ ಅಳಲು, ಅಹವಾಲುಗಳನ್ನು ಕೇಂದ್ರವೇ ಕೇಳಿಸಿಕೊಳ್ಳಬೇಕಲ್ಲವೇ? ಆದರೆ ಈ ವರ್ಷದ ಏಪ್ರಿಲ್ 24 ರಂದು ನಡೆದ ‘ರಾಷ್ಟ್ರೀಯ ಗ್ರಾಮ ಪಂಚಾಯಿತಿ ದಿನ’ ಆಚರಣೆಯಲ್ಲಿ ಸಚಿವರಾದ ವೆಂಕಯ್ಯ ನಾಯ್ಡು ಮಾಡಿದ ಭಾಷಣದಲ್ಲಿ ಊದಿದ್ದು ಬೇರೆ ಗ್ರಾಮಕಹಳೆ. ಪಿ.ವಿ. ನರಸಿಂಹ ರಾವ್ ಅವರು ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ಪಂಚಾಯತ್‌ ರಾಜ್ ವ್ಯವಸ್ಥೆ ಜಾರಿಗೆ ಬಂದದ್ದನ್ನು ಪ್ರತಿವರ್ಷ ಸ್ಮರಿಸುವ ದಿನ ಅದಲ್ಲವೇ?‘ಹದಿನಾಲ್ಕನೇ ಹಣಕಾಸು ಆಯೋಗವು ಹೇಳಿದ ಹಾಗೆ, ಅನುದಾನವನ್ನು ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಒದಗಿಸುತ್ತಿದ್ದೇವೆ. ಅದರಂತೆ ಈ ವರ್ಷ ಹಣ ಬಿಡುಗಡೆಯಾಗಿದೆ. ಒಟ್ಟಾರೆ ಇದು ಕಳೆದ ಸರ್ಕಾರ ತನ್ನ ಆಡಳಿತದಲ್ಲಿ ಒದಗಿಸಿದ ಹಣಕ್ಕಿಂತ ಮೂರು ಪಟ್ಟು ಹೆಚ್ಚು. ಅದರಂತೆ ಪ್ರತೀ ಗ್ರಾಮ ಪಂಚಾಯಿತಿಗೆ ಪ್ರತೀ ವರ್ಷಕ್ಕೆ 17 ಲಕ್ಷ ರೂಪಾಯಿ ಅನುದಾನ ಸಿಗುತ್ತದೆ.ಐದು ವರ್ಷಕ್ಕೆ ಒಟ್ಟು 85 ಲಕ್ಷ ರೂಪಾಯಿ ಮೊತ್ತದ ಈ ಹಣ ಗ್ರಾಮ ಪಂಚಾಯಿತಿಗೆ ಮಾತ್ರ ಸಿಗಲಿದೆ, ಅದಕ್ಕಿಂತ ಮೇಲಿನ ಎರಡು ಸ್ತರಗಳ ಪಂಚಾಯಿತಿಗಳಿಗೆ ಅಲ್ಲ. ಇದನ್ನು ಆ ಗ್ರಾಮ ಪಂಚಾಯಿತಿ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಇತ್ಯಾದಿಗಳಿಗೆ ಬಳಸಿಕೊಳ್ಳಲಿ’ ಎಂದು ನಾಯ್ಡು ವಿವರಣೆ ಕೊಟ್ಟರು.ಪಂಚಾಯತ್‌ ವ್ಯವಸ್ಥೆ ಕುರಿತ ಅನುದಾನ ಅರ್ಥವಾಗದ ಒಂದು ಸಂಕೀರ್ಣ ಕಥೆ. ಅಷ್ಟೇ ಅಲ್ಲ, ‘ನಮ್ಮ ಎನ್‌ಡಿಎ ಸರ್ಕಾರ ಗ್ರಾಮ ಸ್ವರಾಜ್ಯ ಆಡಳಿತವನ್ನು ಹೆಚ್ಚು ಅರ್ಥಪೂರ್ಣ ಮಾಡುವ ಬಗ್ಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಇನ್ನೇನಿದ್ದರೂ ರಾಜ್ಯಗಳ ಕೆಲಸ ಬಾಕಿ ಅಷ್ಟೆ’ ಎಂದೂ ನಾಯ್ಡು ಚುಚ್ಚಿದರು. ಹೆಚ್ಚು ಅರ್ಥ, ಅಂದರೆ ಆರ್ಥಿಕ ಅನುದಾನ ಇಲ್ಲದೆ ಗ್ರಾಮ ಸ್ವರಾಜ್ಯ ಹೇಗೆ ಅರ್ಥಪೂರ್ಣ ಆಗುತ್ತದೋ ಗೊತ್ತಿಲ್ಲ.ಆಡಿದ್ದು ವ್ಯವಸ್ಥೆಯನ್ನು ಬಲಪಡಿಸುವ ಮಾತು, ಆದರೆ ಆಗಿದ್ದು ಅದನ್ನು ದುರ್ಬಲಗೊಳಿಸುವ ತೀರ್ಮಾನ ಎಂದು ಗ್ರಾಮ ಆರ್ಥಿಕತೆಯ ತಜ್ಞರು ಕೂಗು ಹಾಕಿದ್ದು ಅವರ ಕಿವಿಗೆ ಬೀಳಲೇ ಇಲ್ಲ. ಯಾವ ಇಲಾಖೆಯ ಲೆಕ್ಕದಲ್ಲಿ, ಯಾವ ಖಾತೆಯ ಲೆಕ್ಕದಲ್ಲಿ ಅನುದಾನ ಕೊಡಲಾಯಿತೋ ಸಾಮಾನ್ಯ ಜನರಿಗೆ ಗೊತ್ತಾಗಲಿಲ್ಲ. ಕೊಟ್ಟದ್ದು ಹೆಚ್ಚಾಯಿತೋ ಕಡಿಮೆಯಾಯಿತೋ ಯಾರಿಗೂ ಸರಿಯಾಗಿ ಲೆಕ್ಕ ಸಿಗಲಿಲ್ಲ.ಗ್ರಾಮ ಪಂಚಾಯಿತಿಗಳು ಮಾಡಬೇಕಾದ ಇಪ್ಪತ್ತೊಂಬತ್ತು ಥರದ ಕೆಲಸಗಳಿಗೆ ಬೆಂಬಲ ಕೊಡಲು ರಾಜ್ಯಗಳು ಎಲ್ಲಿಂದ ಹಣ ತರಬೇಕು ಎನ್ನುವುದನ್ನು ಯಾರೂ ಹೇಳಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡುವ ಅನುದಾನದ ಜೊತೆಗೆ ಗ್ರಾಮ ಪಂಚಾಯಿತಿಗಳೇ ಸ್ವತಃ ಸಂಪನ್ಮೂಲ ಸಂಗ್ರಹಿಸಬೇಕು ಎಂಬ ಮಾತಂತೂ ಒಂದು ಆದರ್ಶ ವಾಕ್ಯ ಅಷ್ಟೆ. ಆಮೇಲೆ ಪಂಚಾಯತ್‌ ವ್ಯವಸ್ಥೆಯಲ್ಲಿ ಮೇಲಿನ ಎರಡು ಸ್ತರಗಳ ಕಾರ್ಯ ನಿರ್ವಹಣೆಗೆ ರಾಜ್ಯ ಸರ್ಕಾರವೇ ಹಣ ಕೊಡಬೇಕಂತೆ. ಒಂದೊಂದು ಜಿಲ್ಲಾ ಪಂಚಾಯಿತಿಯೂ ಏನೇನು ಕೆಲಸಕಾರ್ಯ ಮಾಡಬೇಕು, ಅದಕ್ಕೆಷ್ಟು ಹಣ ಬೇಕು ಅನ್ನುವುದು- ಗೊತ್ತಿರುವವರಿಗೆ ಮಾತ್ರ ಗೊತ್ತು. ‘ಗ್ರಾಮ ಉದಯದಿಂದ ಭಾರತದ ಉದಯ’ ಎಂಬ ಕಾರ್ಯಕ್ರಮ ಕೂಡ ಎಷ್ಟು ಹಳೆಯ ವಿಷಯದ ಹೊಸ ಮಾತು ಎನ್ನುವುದೂ ಎಲ್ಲರಿಗೂ ಗೊತ್ತು. ನಾವೀಗ ಎಲ್ಲವನ್ನೂ ಹೇಳುವುದು ಮತ್ತು ಕೇಳುವುದು ಇಂಗ್ಲಿಷ್ ಭಾಷೆಯ ಮೂರು ನಾಲ್ಕು ಪದಗಳ ಮುದ್ದಾದ ಸೂತ್ರದಲ್ಲಿ ತಾನೇ? ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೂ ಪ್ರಧಾನಿಗಳ ತ್ರೀ-ಡಿ ಸೂತ್ರ ಅನ್ವಯಿಸುತ್ತದೆ ಎಂದು ವೆಂಕಯ್ಯ ನಾಯ್ಡು ಅಂದಿನ ಭಾಷಣದಲ್ಲಿ ಹೇಳಿದ್ದರು: ಡೀಸೆಂಟ್ರಲೈಸೇಷನ್, ಡಿವೊಲ್ಯೂಷನ್ ಮತ್ತು ಡೆವಲಪ್‌ಮೆಂಟ್! ಈ ಪದಗಳ ಅರ್ಥ - ವಿಕೇಂದ್ರೀಕರಣ, ಖಾಸಗೀಕರಣ ಮತ್ತು ಅಭಿವೃದ್ಧಿ.ಈ ಪದಗಳಿಗೆ ನಿಘಂಟಿನಾಚೆ ಕೂಡಾ ಬೇರೇನೋ ಅರ್ಥಗಳು ಇದ್ದರೂ ಇರಬಹುದು. ಈ ತ್ರೀ-ಡಿ ಪದಗಳ ಜೊತೆ - ಇಡೀ ಪಂಚಾಯತ್‌ ವ್ಯವಸ್ಥೆಯನ್ನು ‘ಡಿಸ್‌ರಿಗಾರ್ಡ್’ (ಅನಾದರಿಸು) ಮತ್ತು ‘ಡಿಸಾಲ್ವ್’ (ವಿಸರ್ಜಿಸು) ಎಂಬ ಪದಗಳು ಅಥವಾ ಅಂಥ ಉದ್ದೇಶಗಳು ಕೂಡ ಇದ್ದರೇನು ಗತಿ ಎಂದು ಯಾರಾದರೂ ಹೆದರಿದರೆ, ಅದು ಅವರ ಪಾಡು ಬಿಡಿ!ಈ ಇಪ್ಪತ್ತೈದು ವರ್ಷಗಳಲ್ಲಿ ಪಂಚಾಯತ್ ವ್ಯವಸ್ಥೆಯ ಸಾಧನೆಗಳು- ವೈಫಲ್ಯಗಳನ್ನು ವಸ್ತುನಿಷ್ಠವಾಗಿ ಮತ್ತು ಪಕ್ಷಾತೀತವಾಗಿ ಅಧ್ಯಯನ ಮಾಡುವ ಅಗತ್ಯ ಇರುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಈ ಅದ್ಭುತ ಜನಾಡಳಿತ ವ್ಯವಸ್ಥೆ ಹುಟ್ಟಿದ್ದು ನಮ್ಮಂಥ ಬೃಹತ್ ಪ್ರಜಾಸತ್ತಾತ್ಮಕ ದೇಶದಲ್ಲಿ ನಡೆದ ರಕ್ತರಹಿತ ಕ್ರಾಂತಿಯಲ್ಲಿ ಎನ್ನುವುದನ್ನು ಮರೆಯಬಾರದು.ಇದನ್ನು ಉಳಿಸಿ, ಬೆಳೆಸುವ ಬಗ್ಗೆ ಅತ್ಯಂತ ವೈಚಾರಿಕವಾಗಿ ಚಿಂತನೆ ನಡೆಸಬೇಕೇ ಹೊರತು, ಏನೇನೋ ಕೂಡಿಸಿ ಗುಣಿಸಿ ಭಾಗಿಸಿ ಕಳೆಯಲು ಹೋಗಬಾರದು. ಸ್ಥಳೀಯ ಆಡಳಿತದ ಈ ವ್ಯವಸ್ಥೆಯನ್ನು ಬಲಪಡಿಸುವುದು, ಜಾಗತಿಕ ಮನ್ನಣೆ ಗಳಿಸುವುದಕ್ಕಿಂತ ದೊಡ್ಡ ಸವಾಲು. ‘ಗ್ರಾಮರಾಜ್ಯ ಇಲ್ಲದಿದ್ದರೆ ರಾಮರಾಜ್ಯ ಅಪೂರ್ಣ’ ಎನ್ನುವ ಮಾತು ಎಷ್ಟು ಕ್ಲೀಷೆಯಾದರೂ ಕಟುಸತ್ಯ. ಪಂಚಾಯತ್‌ ರಾಜ್ ವ್ಯವಸ್ಥೆ ಎನ್ನುವುದು ಸಾಮಾಜಿಕ ಬದಲಾವಣೆಗೆ ಇರುವ ಬೃಹತ್ ಯಂತ್ರ ಮತ್ತು ವಿಸ್ತಾರವಾದ ನೆಲೆಗಟ್ಟು. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಏನಾದರೂ ಒಳ್ಳೆಯದು ಮಾಡಲು ಇದಕ್ಕಿಂತ ಒಳ್ಳೆಯ ವ್ಯವಸ್ಥೆ ಇರಲಾರದು.ಹಿಂದಿನ ಯುಪಿಎ ಸರ್ಕಾರದಲ್ಲಿ ಪಂಚಾಯತ್‌ ರಾಜ್ ಇಲಾಖೆಯ ಸಚಿವರಾಗಿದ್ದ ಮಣಿಶಂಕರ ಅಯ್ಯರ್ ಈ ಕುರಿತ ಅಗ್ರ ವಾರ್ತೆಗೆ ಪ್ರತಿಕ್ರಿಯೆಯಾಗಿ ಬರೆದ ಲೇಖನದಲ್ಲಿ ಹೇಳಿದ ಇದರ ವಿಸ್ತಾರದ ವಿವರಗಳನ್ನು ನೆನಪಿಸಿಕೊಳ್ಳುವುದು ಅಪ್ರಸ್ತುತವಾಗಲಾರದು- ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ನಮ್ಮ ದೇಶದ ಆಡಳಿತ ನಡೆಸಲು ಜನರಿಂದ ಆಯ್ಕೆಯಾದ ಸುಮಾರು ಐದು ಸಾವಿರದಷ್ಟು ಸಂಸದರು ಮತ್ತು ಶಾಸಕರು ಇದ್ದರೆ, ಸುಮಾರು 28 ಲಕ್ಷ ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸುಮಾರು 4 ಲಕ್ಷ ಮಂದಿ ನಗರ ಪ್ರತಿನಿಧಿಗಳು ಇದ್ದಾರೆ.ಹಾಗಾಗಿ ನಮ್ಮ ದೇಶ ಜಗತ್ತಿನ ಅತ್ಯಂತ ಹೆಚ್ಚು ಜನ ಪ್ರಾತಿನಿಧ್ಯ ಇರುವ ಪ್ರಜಾಪ್ರಭುತ್ವವೂ ಆಗಿದೆ. ಇಷ್ಟೇ ಅಲ್ಲ, ಜಗತ್ತಿನ ಎಲ್ಲಾ ದೇಶಗಳನ್ನು ಒಟ್ಟುಗೂಡಿಸಿದರೆ ಕಂಡುಬರುವ ಆಯ್ಕೆಯಾಗಿರುವ ಮಹಿಳಾ ಪ್ರತಿನಿಧಿಗಳಿಗಿಂತ ಹೆಚ್ಚು ಸಂಖ್ಯೆಯ ಮಹಿಳಾ ಪ್ರತಿನಿಧಿಗಳು ಭಾರತವೊಂದರಲ್ಲೇ ಇದ್ದಾರೆ. ಪಂಚಾಯತ್‌ ವ್ಯವಸ್ಥೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮತ್ತು ಇತರ ಹಿಂದುಳಿದ ವರ್ಗಗಳ ಜನರಿಗೆ ಪ್ರಾತಿನಿಧ್ಯ ಸಿಕ್ಕೇ ಸಿಗುತ್ತದೆ. ಫಲಾನುಭವಿಗಳಿಗೆ ಗ್ರಾಮ ಸಭೆಗಳು ಉತ್ತರದಾಯಿ ಆಗಿರುತ್ತವೆ.ಗ್ರಾಮ ಪಂಚಾಯಿತಿಯ ಮೂಲಕ ಹತ್ತು ಹಲವಾರು ಸೇವೆಗಳನ್ನು ಹಳ್ಳಿಯ ಜನರಿಗೆ ಒದಗಿಸುವ ಪ್ರಯೋಗ ಎಂದಿಗೂ ಸ್ವಾಗತಾರ್ಹ. ಇಂಥದೊಂದು ವ್ಯವಸ್ಥೆ ಪ್ರಜಾಪ್ರಭುತ್ವದ ಅಡಿಪಾಯವಲ್ಲದೆ ಬೇರೇನೂ ಅಲ್ಲ. ಈ ಅಡಿಪಾಯದ ಮೇಲೆ ಏನನ್ನು ಬೇಕಾದರೂ ಕಟ್ಟಬಹುದು ಅಲ್ಲವೇ? ಅದು ಎಲ್ಲ ರಾಜಕೀಯ ಪಕ್ಷಗಳಿಗೂ ಅರ್ಥವಾಗಬೇಕಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry