7

ನೇಣು ಹಾಕಿಕೊಳ್ಳುವೆ ಎನ್ನುವವರಿಗೆ ಹಗ್ಗ ಕೊಡಿ...

Published:
Updated:
ನೇಣು ಹಾಕಿಕೊಳ್ಳುವೆ ಎನ್ನುವವರಿಗೆ ಹಗ್ಗ ಕೊಡಿ...

ಇದು ಸಮೂಹ ಸನ್ನಿ. ಒಬ್ಬರನ್ನು ನೋಡಿ ಇನ್ನೊಬ್ಬರು ಅದೇ ದಾರಿ ಹಿಡಿಯುತ್ತಿದ್ದಾರೆ. ಎಲ್ಲರಿಗೂ ಒಂದೊಂದು ಕಾರಣ. ಅದು ಸಕಾರಣವೇ, ನಿಷ್ಕಾರಣವೇ ದೇವರೇ ಬಲ್ಲ. ಸರ್ಕಾರಿ ನೌಕರಿ ಮಾಡುವುದು ಎಷ್ಟು ಕಷ್ಟ ಎಂದು ಮಾತ್ರ ಅವರು ಎಲ್ಲರೂ ಹೇಳುತ್ತಿರುವಂತಿದೆ. ಆದರೆ, ಅದು ನಿಜವೇ? ಈಗ ಆತ್ಮಹತ್ಯೆ ಮಾಡಿಕೊಂಡವರು ಮತ್ತು ಮಾಡಿಕೊಳ್ಳಲು ಯತ್ನಿಸಿದವರು ಇದೇ ನೌಕರಿಗಾಗಿ ಎಷ್ಟೆಲ್ಲ ಪ್ರಯತ್ನ ಮಾಡಿದರು ಅಲ್ಲವೇ? ಸರ್ಕಾರಿ ನೌಕರಿಯಲ್ಲಿ ಇರುವ ಸವಲತ್ತು ಮತ್ತು ಸುಖಗಳಿಗಾಗಿಯೇ ಅಲ್ಲವೇ ಅವರು ಅಷ್ಟೆಲ್ಲ ಪ್ರಯತ್ನ ಮಾಡಿದ್ದು? ಈಗ ಮೇಲಧಿಕಾರಿ ಏನೋ ಹೇಳಿದರು ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟರೆ ಅದನ್ನು ಹೇಗೆ ಸಮರ್ಥನೆ ಮಾಡುವುದು? ಮೇಲಧಿಕಾರಿಯಾದವರು ಏನನ್ನೂ ಹೇಳಲೇಬಾರದು ಎನ್ನುವುದಾದರೆ ಒಂದು ವ್ಯವಸ್ಥೆ ಕೆಲಸ ಮಾಡುವುದೇ ಕಷ್ಟ. ಮೇಲಧಿಕಾರಿ ಕೂಡ ತನ್ನ ಮೇಲಿನವರ ಆದೇಶವನ್ನು ಪಾಲಿಸುತ್ತ ಇರುತ್ತಾರೆ.ನೌಕರಿ ಎಂದ ಮೇಲೆ ಅಲ್ಲಿ ಆದೇಶ ಪಾಲನೆ ಮಾಡುವುದು ಮತ್ತು ಅಧೀನವಾಗಿ ಇರುವುದು ಎಂಬ ಅಂಶ ಅಡಕವಾಗಿಯೇ ಇರುತ್ತದೆ. ಅದು ಆಗದು ಎನ್ನುವವರು ನೌಕರಿ ಮಾಡಲು ಬರಬಾರದು. ತಮ್ಮ ಒಡೆಯ ತಾವೇ ಆಗಿ ಇನ್ನು ಏನನ್ನೋ ಮಾಡಿಕೊಂಡು ಇರಬೇಕು. ಅದು ಸರ್ಕಾರದ್ದೇ ಇರಲಿ, ಖಾಸಗಿಯದ್ದೇ ಇರಲಿ ನೌಕರಿ ಎಂದ ಮೇಲೆ ಅಲ್ಲಿ ಒತ್ತಡಗಳು ಇದ್ದೇ ಇರುತ್ತವೆ. ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಗುರಿಯನ್ನು ಸಾಧಿಸಲೇ ಬೇಕಿರುತ್ತದೆ.ಹಾಗೆ ನೋಡಿದರೆ ಖಾಸಗಿಯವರಿಗಿಂತ ಸರ್ಕಾರಿ ನೌಕರಿ ಸಾವಿರ ಪಾಲು ಮೇಲು. ಅಲ್ಲಿ ಅಂದಿನ ಕೆಲಸವನ್ನು ಅಂದೇ ಮಾಡಬೇಕು ಎಂದು ಇಲ್ಲ. ಅಂದಿನ ಕೆಲಸವನ್ನು ಅಂದೇ ಎಲ್ಲರೂ ಮಾಡಿದ್ದರೆ ಸರ್ಕಾರಿ ಕಚೇರಿಗಳು ಕಡತಗಳ ಉಗ್ರಾಣಗಳು ಆಗುತ್ತಿರಲಿಲ್ಲ. ಸಾರ್ವಜನಿಕರಲ್ಲಿ ಸರ್ಕಾರಿ ನೌಕರರ ಬಗೆಗೆ ಒಂದು ನಯಾಪೈಸೆಯಷ್ಟೂ ಸಹಾನುಭೂತಿ ಇಲ್ಲದೇ ಇರುವುದಕ್ಕೆ ಇದೇ ಕಾರಣ. ಸರ್ಕಾರದ ಕಚೇರಿಗಳಲ್ಲಿ ಯಾವ  ಕೆಲಸವೂ ನಿಗದಿತ ಅವಧಿಯಲ್ಲಿ ಆಗುವುದೇ ಇಲ್ಲ. ನೌಕರರು ಕಚೇರಿಗೆ ಬಂದರೆ ಉಂಟು. ಬರದೇ ಇದ್ದರೂ ಉಂಟು. ಕಚೇರಿಗೆ ಬಂದು ಕುರ್ಚಿಗೆ ಕೋಟು ಹಾಕಿ ಹೊರಗೆ ಹೋದರೂ ಉಂಟು. ಬಹುಪಾಲು ಸರ್ಕಾರಿ ನೌಕರರು ತಮಗೆ ಕೊಡುವ ಸಂಬಳಕ್ಕಾಗಿ ಕೆಲಸ ಮಾಡುವುದಿಲ್ಲ; ಮೇಜಿನ ಕೆಳಗಿನಿಂದ ಮತ್ತು ಕೆಲವು ಕಡೆ ರಾಜಾರೋಷವಾಗಿ ಮೇಜಿನ ಮೇಲಿನಿಂದಲೇ ಬರುವ ಲಂಚಕ್ಕಾಗಿ ಕೆಲಸ ಮಾಡುತ್ತಾರೆ ಅಥವಾ ಹಾಗೆಂದು ಜನರು ಭಾವಿಸುತ್ತಿದ್ದಾರೆ.ನಿಜವಾಗಿಯೂ ಸರ್ಕಾರಿ ನೌಕರರಿಗೆ ಅಷ್ಟು ಕಷ್ಟ ಇದೆಯೇ? ಅವರಿಗೆ ಕಾಲಕಾಲಕ್ಕೆ ಸಂಬಳ ಬರುತ್ತಿಲ್ಲವೇ? ಅನೇಕರಿಗೆ ಸರ್ಕಾರವೇ ಮನೆ ಕಟ್ಟಿಸಿ ಇರಲು ಕೊಟ್ಟಿಲ್ಲವೇ? ನಿವೃತ್ತರಾದ ನೌಕರರು ಸುಖವಾಗಿ ಇರಲಿ ಎಂದು ಅವರಿಗೆ ಪಿಂಚಣಿ ಕೊಡುತ್ತಿಲ್ಲವೇ? ನೌಕರ ಕಾಲವಾದರೆ ಅವರ ಕುಟುಂಬಕ್ಕೂ ಪಿಂಚಣಿ ಸಿಗುತ್ತಿಲ್ಲವೇ? ಈ ಎಲ್ಲ ಭಾಗ್ಯಗಳು ಬಡ ಭಾರತ ದೇಶದಲ್ಲಿ ಎಷ್ಟು ಜನರಿಗೆ ಇವೆ? ನಿಜವಾಗಿಯೂ, ನೌಕರಿಗಾಗಿ ಬೀದಿ ಬೀದಿ ಅಲೆಯುತ್ತಿರುವ ಪದವೀಧರ ಆತ್ಮಹತ್ಯೆ ಮಾಡಿಕೊಳ್ಳಬೇಕು. ನೌಕರಿಯಲ್ಲಿ ಇರುವವರು ಏಕೆ ನೇಣಿಗೆ ಕೊರಳು ಒಡ್ಡಬೇಕು?ನೌಕರಿ ಒಡ್ಡುವ ಎಲ್ಲ ಕಷ್ಟಗಳನ್ನು, ನಿಷ್ಠುರಗಳನ್ನು, ಸವಾಲುಗಳನ್ನು ಎದುರಿಸಿ ಧೈರ್ಯದಿಂದ ಕೆಲಸ ಮಾಡುವ ಜನರು ನಮ್ಮ ಮುಂದೆಯೇ ಇದ್ದಾರೆ. ಗಡಿಯಲ್ಲಿ ಗುಂಡಿನ ಮೊರೆತಗಳ ನಡುವೆ ದೇಶದ ಕಾವಲು ಕಾಯುವ ಸೈನಿಕ ಎಂದಾದರೂ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ನಾವು ಓದಿದ್ದೇವೆಯೇ? ಸಿಯಾಚಿನ್‌ನ ನಡುಗುವ ಚಳಿಯಲ್ಲಿ ಒಂದು ದಿನವಾದರೂ ನಾವು ಹೋಗಿ ಕೆಲಸ ಮಾಡಲು ಸಾಧ್ಯವಿದೆಯೇ? ಎಲ್ಲದಕ್ಕೂ ಒಂದು ಮಿತಿ ಎಂದು ಇರುತ್ತದೆ. ಯಾವನಾದರೂ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿದರೆ ಅವನ ವಿರುದ್ಧ ಮೊಕದ್ದಮೆ ದಾಖಲು ಮಾಡಿ ಕ್ರಮ ತೆಗೆದುಕೊಳ್ಳದೇ ಇದ್ದರೆ ಸರ್ಕಾರ ಕೆಲಸವನ್ನೇ ಮಾಡದಂಥ ಒಂದು ಸ್ಥಿತಿಯನ್ನು ಈ ಕೈಲಾಗದ ಹೇಡಿಗಳು ನಿರ್ಮಿಸಿ ಬಿಡಬಹುದು. ಈಗಾಗಲೇ ಅಂಥ ಲಕ್ಷಣಗಳು ಕಾಣಿಸುತ್ತಿವೆ. ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕರಂಥ ಅತ್ಯಂತ ಉನ್ನತ ಅಧಿಕಾರಿ ಮುಂದೆ ಹೋಗಿ ನಿಲ್ಲಲು ಕಾಲು ನಡುಗಬೇಕಿದ್ದ ಕಾನ್‌ಸ್ಟೆಬಲ್‌ಗಳು ಈಗ ಅವರ ಎದುರೇ ಹೋಗಿ ತಮಗೆ ಇಂಥದೇ ಊರಿಗೆ ವರ್ಗ ಮಾಡಬೇಕು ಎಂದು ಒಂದು ರೀತಿ ಬ್ಲ್ಯಾಕ್‌ ಮೇಲ್‌ ಮಾಡುತ್ತಾರೆ ಎಂದರೆ ಏನರ್ಥ?ಸರ್ಕಾರಿ ನೌಕರರಿಗೆ ಮುಖ್ಯವಾಗಿ ಆತ್ಮಗೌರವ ಇರಬೇಕು. ತಾವು ಬಂದಿರುವುದು ಜನರ ಕೆಲಸ ಮಾಡುವುದಕ್ಕೆ ಎಂದು ಗೊತ್ತಿರಬೇಕು. ತನ್ನ ಕರ್ತವ್ಯದಲ್ಲಿ ಏನಾದರೂ ಅಡ್ಡಿ ಆತಂಕಗಳು ಎದುರಾದರೆ ಅದನ್ನು ಅಷ್ಟೇ ಧೈರ್ಯದಿಂದ ಎದುರಿಸಬೇಕು. ಮೈಸೂರಿನ ಜಿಲ್ಲಾಧಿಕಾರಿ ಸಿ.ಶಿಖಾ ಒಬ್ಬ ಹೆಣ್ಣುಮಗಳು. ಅವರನ್ನು ದಲಿತ ಮಹಿಳೆ ಎಂದು ಒತ್ತು ಕೊಟ್ಟು ಗುರುತಿಸುವುದು ಅವರಿಗೆ ಮಾಡಿದ ಅವಮಾನ ಎಂದುಕೊಂಡವನು ನಾನು. ಅವರು ಒಬ್ಬ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ. ಮೈಸೂರಿನಲ್ಲಿ ಯಾವನೋ ಒಬ್ಬ ಪುಂಡ ಅವರ ಕೆಲಸಕ್ಕೆ ಅಡ್ಡಿ ಮಾಡಿದ್ದು ಮಾತ್ರವಲ್ಲ, ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ. ಶಿಖಾ ಅಳುತ್ತ ಕೂಡಲಿಲ್ಲ.ನೇರವಾಗಿ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಆತನ ವಿರುದ್ಧ, ಕರ್ತವ್ಯಕ್ಕೆ ಅಡ್ಡಿ ಮಾಡಿದ ಮತ್ತು ಅವಾಚ್ಯ ಪದ ಬಳಸಿ ನಿಂದಿಸಿದ ಮೊಕದ್ದಮೆ ದಾಖಲು ಮಾಡಿದರು. ಈಗ ಆತ ಹೇಡಿಯಂತೆ ತಲೆ ಮರೆಸಿಕೊಂಡು ಓಡಾಡುತ್ತಿದ್ದಾನೆ. ಎಲ್ಲರಿಗೂ ಗೊತ್ತಿರುವಂತೆ ಆತ ಮುಖ್ಯಮಂತ್ರಿಗಳ ಆಪ್ತ. ಹಾಗೆಂದು ಮೈಸೂರು ಜಿಲ್ಲಾಧಿಕಾರಿ ಅಂಜಲಿಲ್ಲ, ಅಳುಕಲಿಲ್ಲ. ಈಗ ಮುಖ್ಯಮಂತ್ರಿಗಳ ಆಪ್ತನ ಪರವಾಗಿ ಶಿಖಾ ಜೊತೆಗೆ ಸಂಧಾನಕ್ಕೆ ಬಂದವರು ಎಷ್ಟು ಮಂದಿ! ಹಾಗೆಂದು ಅವರು ಮಣಿದಿಲ್ಲ. ಸರ್ಕಾರಿ ನೌಕರಿಯನ್ನು ಹೀಗೂ ನಿರ್ಭಯವಾಗಿ ಮಾಡಬಹುದು ಅಲ್ಲವೇ? ಇದಕ್ಕಿಂತ ಒಂದು ಒಳ್ಳೆಯ ಮಾದರಿ ಎಲ್ಲಿ ಇರಲು ಸಾಧ್ಯ?ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಡಾ.ಆಶಾ ಬೆನಕಪ್ಪ ಅವರ ಕಥೆ ಯಾರಿಗಾದರೂ ಗೊತ್ತಿದೆಯೇ? ಅವರಿಗೆ  ಒಂದಲ್ಲ ಎರಡಲ್ಲ, ಒಂಬತ್ತು ಪದವಿಗಳಿವೆ. ಆ ಹುದ್ದೆಗೆ ಅವರಿಗಿಂತ ಅರ್ಹರು ಇನ್ನೊಬ್ಬರು ಇರಲು ಸಾಧ್ಯವಿಲ್ಲ. ಹೊರಗೆ ಖಾಸಗಿಯಾಗಿ ವೃತ್ತಿ ಮಾಡಲು ಹೊರಟರೆ ಅವರಿಗೆ ತಿಂಗಳಿಗೆ ಸಿಗುವ ಸಂಬಳ ಕೇಳಿದರೆ ಬೆರಗಾಗುತ್ತದೆ. ಅನೇಕ ಹಿರಿಯ ಅಧಿಕಾರಿಗಳಿಗೆ ಇಡೀ ವರ್ಷಕ್ಕೂ ಅಷ್ಟು ವೇತನ ಸಿಗುವುದಿಲ್ಲ. ಆದರೆ, ಡಾ.ಆಶಾ, ನಿರ್ದೇಶಕಿ ಹುದ್ದೆಯಲ್ಲಿ ಕೂರಲು ಹೈಕೋರ್ಟಿಗೆ ಅಲೆದಾಡಿದ್ದಕ್ಕೆ ಲೆಕ್ಕವಿಲ್ಲ. ಅತ್ಯಂತ ಪ್ರಸಿದ್ಧ ವಕೀಲರನ್ನು ತಮ್ಮ ಪರವಾಗಿ ವಾದ ಮಂಡಿಸಲು ನಿಯೋಜಿಸಿದ್ದರೂ 160ಕ್ಕೂ ಹೆಚ್ಚು ಸಾರಿ ಅದು ಮುಂದಕ್ಕೆ ಹೋಗಿತ್ತು. ಕೊನೆಗೂ ನ್ಯಾಯ ಸಿಕ್ಕಿತು. ಡಾ.ಆಶಾ ಅವರಿಗೆ, ತಾವು ಹುದ್ದೆಗೆ ಅರ್ಹರು ಮತ್ತು ತಮಗೆ ಅನ್ಯಾಯವಾಗಿದೆ ಎಂಬುದನ್ನು ಸಾಬೀತು ಮಾಡಬೇಕಿತ್ತು. ಈಗ ನಿರ್ದೇಶಕಿಯ ಹುದ್ದೆ ಎಂಥ ಮುಳ್ಳಿನ ಹಾಸಿಗೆ ಎಂದು ಅವರಿಗೆ ಗೊತ್ತಾಗುತ್ತಿದೆ. ಹಾಗೆಂದು ಅವರು ಅಲ್ಲಿಂದ ಹೊರಡಲು ಆಗುತ್ತದೆಯೇ?ಈಗ ಮುಖ್ಯಮಂತ್ರಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ ಎಂ.ರಾಮಯ್ಯ ನನಗೆ ಇಪ್ಪತ್ತೈದು ವರ್ಷಗಳ ಪರಿಚಯ. ಅತ್ಯಂತ ದಕ್ಷ ಅಧಿಕಾರಿ. ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗಾಗಿ ಅವರು ಮಾಡಿದ ಕೆಲಸ ತಲೆಮಾರುಗಳ ಕಾಲ ನೆನಪು ಇಡುವಂಥದು. ಕೆಎಎಸ್‌ಯೇತರ ಅಧಿಕಾರಿಗಳಿಗೆ ಐ.ಎ.ಎಸ್‌ಗೆ ಬಡ್ತಿ ಕೊಡುವ ಅರ್ಹತೆ ಪಟ್ಟಿಯಲ್ಲಿ ಅವರದು ಐದನೇ ಹೆಸರಾಗಿತ್ತು. ಎರಡು ಸಾರಿ ಅವರ ಹೆಸರು ಶಿಫಾರಸು ಆದರೂ ಅವರಿಗಿಂತ ಕಡಿಮೆ ಅರ್ಹತೆ ಇರುವವರಿಗೆ ಐ.ಎ.ಎಸ್‌ಗೆ ಬಡ್ತಿ ಸಿಕ್ಕಿತು. ಇದಕ್ಕಿಂತ ದೊಡ್ಡ ಅನ್ಯಾಯ ಇನ್ನೇನು ಇರಲು ಸಾಧ್ಯ?ಸಮ್ಮಿಶ್ರ ಸರ್ಕಾರದ ಕಾಲದಲ್ಲಿ ಅವರಿಗೆ ಆರು ತಿಂಗಳಿಗಿಂತ ಹೆಚ್ಚು ಕಾಲ ಯಾವುದೇ ಹುದ್ದೆ ಕೊಡಲಿಲ್ಲ. ಮತ್ತೆ ಎಷ್ಟೋ ದಿನಗಳ ನಂತರ ಬೆಂಗಳೂರಿನ ಸುಂಕದಕಟ್ಟೆ ಬಳಿಯ ಭಿಕ್ಷುಕರ ಕಾಲೊನಿಗೆ ಕಾರ್ಯದರ್ಶಿ ಎಂದು ನೇಮಕ ಮಾಡಲಾಯಿತು. ಈ ಕಾಲೊನಿಗೆ ನಿರಾಶ್ರಿತರ ಪುನರ್ ವಸತಿ ಕೇಂದ್ರ ಎಂಬ ಸುಂದರ ಹೆಸರೂ ಇದೆ. ಒಬ್ಬ ದಕ್ಷ ಕೆಲಸಗಾರನಿಗೆ ಯಾವ ಕೆಲಸವೂ ಕಡಿಮೆಯಲ್ಲ. ಅಂಥ ನಿರ್ಗತಿಕರು ಇರುವ ಭಿಕ್ಷುಕರ ಕಾಲೊನಿಯಲ್ಲಿ ರಾಮಯ್ಯ ನಂದನವನ ಸೃಷ್ಟಿ ಮಾಡಿದರು. ನಾನು ಅದನ್ನು ಕಣ್ಣಾರೆ ಕಂಡವನು.ಸರ್ಕಾರಕ್ಕೆ ಅವರ ಮೇಲೆ ದಯೆ ಬಂತು. ಹಿಂದುಳಿದ ವರ್ಗಗಳ ಜಂಟಿ ನಿರ್ದೇಶಕರಾಗಿ ವರ್ಗ ಮಾಡಿತು. ಏನಾಯಿತೋ ಗೊತ್ತಿಲ್ಲ. ಇತ್ತ ಭಿಕ್ಷುಕರ ಕಾಲೊನಿಯಲ್ಲಿ ಒಂದೇ ಸಮ ಹೆಣಗಳು ಬೀಳತೊಡಗಿದುವು. ಒಂದೇ ದಿನ 106 ಜನ ಭಿಕ್ಷುಕರು ಹುಳುಗಳ ಹಾಗೆ ಸತ್ತು ಹೋದರು. ಸರ್ಕಾರ ರಾತ್ರೋರಾತ್ರಿ ರಾಮಯ್ಯ ಅವರನ್ನು ಮತ್ತೆ ಕಾಲೊನಿ ಕಾರ್ಯದರ್ಶಿಯಾಗಿ ನಿಯೋಜಿಸಿತು. ಸಾವು ನಿಂತು ಹೋಯಿತು. ಆರು ತಿಂಗಳ ಕಾಲ ಈ ಅಧಿಕಾರಿಗೆ ಯಾವ ಹುದ್ದೆಯನ್ನೂ ಕೊಡದೇ ಅದೇ ಸರ್ಕಾರ ಕಾಯಿಸಿತ್ತು ಎಂಬುದು ಅಚ್ಚರಿಯಲ್ಲವೇ? ಹಾಗೆಂದು ರಾಮಯ್ಯ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತೇ? ಹುದ್ದೆಯೇ ಇಲ್ಲದೇ ಇರುವುದಕ್ಕಿಂತ ಒಬ್ಬ ಸರ್ಕಾರಿ ನೌಕರನಿಗೆ ಇನ್ನೆಂಥ ಶಿಕ್ಷೆ ಇರಲು ಸಾಧ್ಯ?ಈ ಮೂವರಲ್ಲಿ ಶಿಖಾ ನನಗೆ ಪರಿಚಯವಿಲ್ಲ. ಹೀಗೆಲ್ಲ ಹೆಸರು ಹಾಕಿ ಬರೆಯುವುದು ಮೂವರಿಗೂ ಮುಜುಗರ ಎಂದು ನನಗೆ ಗೊತ್ತು. ನನಗೆ ಅನೇಕ ದಿನಗಳಿಂದ ಪರಿಚಯ ಇರುವ ಹಿರಿಯ ಐ.ಎ.ಎಸ್‌ ಅಧಿಕಾರಿ ಹರ್ಷ ಗುಪ್ತ ಅವರಿಗೆ ವಿನಾಕಾರಣವಾಗಿ ಎಷ್ಟು ಸಾರಿ ಅವಮಾನ ಆಗಿಲ್ಲ? ವರ್ಗ ಆಗಿಲ್ಲ? ಹಾಗೆಂದು ಅವರೇನು ಧೃತಿಗೆಡಲಿಲ್ಲ. ಅದೇ ಏಕನಿಷ್ಠೆಯಿಂದ ಹೋದಲ್ಲೆಲ್ಲ ಕೆಲಸ ಮಾಡಿದರಲ್ಲ? ಇವು ಕೆಲವು ಉದಾಹರಣೆಗಳು ಮಾತ್ರ. ಇಂಥ ಅನೇಕ ನಿಷ್ಠಾವಂತ ಅಧಿಕಾರಿಗಳು ರಾಜ್ಯದ ಎಲ್ಲೆಡೆಯಲ್ಲೂ ಇದ್ದಾರೆ ಎಂದು ನನಗೆ ಗೊತ್ತು.ಸರ್ಕಾರಿ ನೌಕರರಿಗೆ ಇರುವ ರಕ್ಷಣೆಗಳು ಒಂದು ಎರಡಲ್ಲ. ಅವರು ಎಷ್ಟೇ ಅಪ್ರಾಮಾಣಿಕರು, ಆಲಸಿಗಳು ಮತ್ತು ನಕಾರಾತ್ಮಕ ಮನೋಭಾವದವರು ಆಗಿದ್ದರೂ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಂಡುದು ಕಡಿಮೆ. ಕ್ರಮ ತೆಗೆದುಕೊಂಡರೂ ಯಾರಾದರೂ ಜನಪ್ರತಿನಿಧಿಗಳ ನೆರವಿನಿಂದ ಮತ್ತು ಜಾತಿಯ ಬಲದಿಂದ ಅದೇ ಜಾಗದಲ್ಲಿ ಬಂದು ಅವರು ಒಕ್ಕರಿಸಿದರೆ ಅಚ್ಚರಿಯೇನೂ ಇಲ್ಲ. ಈಗ ಆಗುತ್ತಿರುವುದೂ ಅದೇ. ಸರ್ಕಾರಿ ನೌಕರರು ಒಂದು ಮಾತನ್ನು ತಿಳಿದುಕೊಳ್ಳಬೇಕು: ಅವರು ಸಾರ್ವಜನಿಕರ ತೆರಿಗೆ ಹಣದಲ್ಲಿ ನೌಕರಿ ಮಾಡುತ್ತಿದ್ದಾರೆ. ಅವರ ಮೊದಲ ಕರ್ತವ್ಯ ಸಾರ್ವಜನಿಕರ ಸೇವೆ ಮಾಡುವುದು. ಸೇವೆ ಮಾಡದಿದ್ದರೂ ಹಾಳಾಗಿ ಹೋಗಲಿ ಅವರ ಕೆಲಸವನ್ನು ಯಾವ ತಂಟೆ ತಕರಾರೂ ಇಲ್ಲದೇ ಮಾಡಿಕೊಡುವುದು. ಅವರು ಹಾಗೆ ಮಾಡಿಕೊಡುವುದಿಲ್ಲ ಎಂತಲೇ ಅವರಿಗೆ ಜನರ ನಡುವೆ ಗೌರವವಿಲ್ಲ.ಇಷ್ಟೆಲ್ಲ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರು ಎಂದೋ ಅಥವಾ ಮಾಡಿಕೊಳ್ಳಲು ಪ್ರಯತ್ನ ಪಟ್ಟರು ಎಂದೋ ಸಾರ್ವಜನಿಕರು ಬೀದಿಗೆ ಬಂದು ಅವರ ಬೆಂಬಲಕ್ಕೆ ಏಕೆ ನಿಲ್ಲಲಿಲ್ಲ? ಸಾಮಾಜಿಕ ಮಾಧ್ಯಮಗಳಲ್ಲಿ ಇವರ ಪರವಾಗಿ ಒಂದೇ ಒಂದು ಮಾತು ಏಕೆ ಇಲ್ಲ? ಏಕೆಂದರೆ ಅವರು ಜನಪರವಾಗಿಲ್ಲ, ಜನರ ಪರವಾಗಿ ಅವರು ಎಂದೂ ಧ್ವನಿ ಎತ್ತಿಲ್ಲ. ಒಳ್ಳೆಯ ಕೆಲಸ ಮಾಡಿದ ಅಧಿಕಾರಿಗಳಿಗೆ ವರ್ಗವಾದರೆ ಜನರು ಬೀದಿಗೆ ಬಂದು ಪ್ರತಿಭಟಿಸಿದ್ದಾರೆ. ಇದನ್ನು ಸರ್ಕಾರಿ ನೌಕರಿಯಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಳ್ಳದೇ, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಯಾರಾದರೂ ಹೆದರಿಸಿದರೆ ಅವರಿಗೆ ಆಳವಾದ ನೀರು ಇರುವ ಕೆರೆ ಅಥವಾ ಬಾವಿ ಎಲ್ಲಿ ಇದೆ ಎಂದು ಸರ್ಕಾರದಲ್ಲಿಯೇ ಇರುವ ಯಾರಾದರೂ ಅದರ ದಾರಿ ತೋರಿಸಬೇಕು! ಅಥವಾ ಎಲ್ಲ ಕಚೇರಿಗಳಲ್ಲಿ ಸರ್ಕಾರದ ಖರ್ಚಿನಲ್ಲಿಯೇ ಉದ್ದವಾದ ಒಂದೋ ಎರಡೋ ಹಗ್ಗಗಳನ್ನು ಇಡಬೇಕು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry