7

ಸುದ್ದಿ ಬೆನ್ನುಬಿದ್ದವರ ಸಂಕಟ, ಅಕಟಕಟಾ!

ಸುಧೀಂದ್ರ ಬುಧ್ಯ
Published:
Updated:
ಸುದ್ದಿ ಬೆನ್ನುಬಿದ್ದವರ ಸಂಕಟ, ಅಕಟಕಟಾ!

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಮಾಧ್ಯಮಗಳಿಗಂತೂ ಅಭ್ಯರ್ಥಿಗಳು ಮುಂದಿಡುತ್ತಿರುವ ವಾದ, ಪ್ರತಿವಾದ, ಮೂದಲಿಕೆ, ಚುಚ್ಚುಮಾತಿನ ಪುಷ್ಕಳ ಹೂರಣ. ಹಾಗಾಗಿ ವಾರದ ದಿನವಿರಲಿ, ವಾರಾಂತ್ಯವಿರಲಿ ಸುದ್ದಿವಾಹಿನಿಗಳು ಚುನಾವಣಾ ಪ್ರಚಾರ ಭಾಷಣ, ಚರ್ಚೆ, ತಜ್ಞರ ಅಭಿಪ್ರಾಯಗಳನ್ನು ಬಿತ್ತರಿಸುತ್ತಲೇ ಇರುತ್ತವೆ.ಇತ್ತೀಚೆಗೆ ಚರ್ಚೆಯೊಂದರಲ್ಲಿ ಹಿರಿಯ ಪತ್ರಕರ್ತ ಬಾಬ್ ಶೀಫರ್ ‘ಚುನಾವಣಾ ಸಮಯದಲ್ಲಿ ಸಂದರ್ಶನಗಳಿಗೆ ಹಾತೊರೆಯುವ ರಾಜಕಾರಣಿಗಳು, ಗೆದ್ದು ಗದ್ದುಗೆಯಲ್ಲಿ ಕೂತ ಬಳಿಕ ಪತ್ರಕರ್ತರನ್ನು ಅನುಮಾನದಿಂದ ನೋಡುತ್ತಾರೆ. ಸಂದರ್ಶನಕ್ಕೆ ಹಿಂಜರಿಯುತ್ತಾರೆ.ಆಗ ರಾಜಕಾರಣಿಗಳ ಮನೆ ಬಾಗಿಲು ಬಡಿಯುವ ಸರದಿ ಮಾಧ್ಯಮಗಳದ್ದು’ ಎಂದು ಅಭಿಪ್ರಾಯಪಟ್ಟರು. ಮಾತು ಮುಂದುವರೆದು, ಚುನಾವಣೆ ವರದಿ ಮಾಡುವ ಪತ್ರಕರ್ತರ ಸಂಕಟಗಳು, ದೊಡ್ಡವರನ್ನು ಸಂದರ್ಶಿಸುವಾಗ ಎದುರಾಗುವ ಸಂದಿಗ್ಧಗಳು, ಸಮಸ್ಯೆಗಳು ಚರ್ಚೆಗೆ ಬಂದವು. ಇತರ ಪತ್ರಕರ್ತರು ದನಿಗೂಡಿಸಿದರು. ಬಾಬ್ ಶೀಫರ್ ಬಗ್ಗೆ ನೀವು ಕೇಳಿರಬಹುದು. ಅಮೆರಿಕ ಮಾಧ್ಯಮ ಲೋಕದಲ್ಲಿ ಶೀಫರ್ ಅವರದ್ದು ಪ್ರಮುಖ ಹೆಸರು. ಶೀಫರ್ ಹಿರಿಯಣ್ಣನ ಆಡಳಿತದ ತ್ರಿವಳಿ ಕೇಂದ್ರಗಳಾದ ವೈಟ್ ಹೌಸ್, ಪೆಂಟಗನ್ ಮತ್ತು ಅಮೆರಿಕ ಕಾಂಗ್ರೆಸ್ಸಿನ ಆಗುಹೋಗುಗಳನ್ನು ವರದಿ ಮಾಡಿದವರು. ಸಿಬಿಎಸ್ ಸುದ್ದಿ ಸಂಸ್ಥೆಯಲ್ಲಿ 35 ವರ್ಷಗಳಿಗೂ ಹೆಚ್ಚು ಕಾಲ ದುಡಿದವರು. ನಿಕ್ಸನ್ ನಂತರ ಬಂದ ಅಮೆರಿಕದ ಎಲ್ಲ ಅಧ್ಯಕ್ಷರನ್ನೂ ಸಂದರ್ಶಿಸಿದವರು.ಸಿಬಿಎಸ್ ವಾಹಿನಿಯ ‘ಫೇಸ್ ದಿ ನೇಷನ್’ ಕಾರ್ಯಕ್ರಮ ಶೀಫರ್ ಜನಪ್ರಿಯತೆ ಹೆಚ್ಚಿಸಿತು. ‘ಫೇಸ್ ದಿ ನೇಷನ್’ 50ರ ದಶಕದಲ್ಲಿ ಅಮೆರಿಕದ ಎನ್‌ಬಿಸಿ ಮತ್ತು ಸಿಬಿಎಸ್ ಮಾಧ್ಯಮ ಸಂಸ್ಥೆಗಳ ನಡುವಿನ ತೀವ್ರ ಪೈಪೋಟಿಯಿಂದ ಜನ್ಮತಳೆದ ಕಾರ್ಯಕ್ರಮ. ಎನ್‌ಬಿಸಿ ಅದಾಗಲೇ ರಾಜಕೀಯ, ಅರ್ಥಶಾಸ್ತ್ರ, ವಿದೇಶಾಂಗ ವ್ಯವಹಾರ ವಿಷಯಗಳನ್ನು ಚರ್ಚಿಸುವ ‘ಮೀಟ್ ದಿ ಪ್ರೆಸ್’ ಎನ್ನುವ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿತ್ತು.ಸಿಬಿಎಸ್ ಹೊಣೆ ಹೆಗಲೇರಿಸಿಕೊಂಡಿದ್ದ ಫ್ರಾಂಕ್ ಸ್ಟಾಂಟನ್, ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮಕ್ಕೆ ಪ್ರತಿಯಾಗಿ, ನೇರ ಪ್ರಸಾರದಲ್ಲಿ ಗಣ್ಯರನ್ನು ಸಂದರ್ಶಿಸುವ ‘ಫೇಸ್ ದಿ ನೇಷನ್’ ಕಾರ್ಯಕ್ರಮ ರೂಪಿಸಿದರು.1954ರಲ್ಲಿ ಆರಂಭವಾದ ಈ ಕಾರ್ಯಕ್ರಮ ಎಷ್ಟು ಯಶಸ್ವಿಯಾಯಿತೆಂದರೆ ಈ ನೇರ ಸಂದರ್ಶನದಲ್ಲಿ ಅನಾವರಣಗೊಂಡ ವಿಷಯಗಳು ವಾರಗಟ್ಟಲೆ ಇತರ ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗುತ್ತಿದ್ದವು. ಭಾನುವಾರದ ಬೆಳಗಿನ ಈ ಸಂದರ್ಶನ, ಹಲವು ಪತ್ರಿಕೆಗಳಿಗೆ ಸೋಮವಾರದ ಸಂಚಿಕೆಗೆ ಗ್ರಾಸ ಒದಗಿಸುತ್ತಿತ್ತು.ಕೇವಲ ನೇರ ಪ್ರಸಾರ, ಮರು ಪ್ರಸಾರವಷ್ಟೇ ಅಲ್ಲ. ನಂತರ ಈ ಸಂಚಿಕೆಗಳನ್ನು ಡಿ.ವಿ.ಡಿ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದಾಗಲೂ ಜನ ಖರೀದಿಸಿ ತಮ್ಮ ಸಂಗ್ರಹದಲ್ಲಿ ಇಟ್ಟುಕೊಂಡರು. ಕೇವಲ ‘ಫೇಸ್ ದಿ ನೇಷನ್’ ಹಳೆಯ ಸಂಚಿಕೆಗಳಷ್ಟೇ ಅಲ್ಲ, ಅದರ ಹಿಂದಿನ ಕತೆಗಳೂ ರೋಚಕವಾಗಿವೆ.ಆಗಿನ್ನೂ ಲಿಂಡನ್ ಜಾನ್ಸನ್ ಸೆನೆಟರ್ ಆಗಿದ್ದರು. ಅವರ ಸಂದರ್ಶನ ಸಿಬಿಎಸ್ ವಾಹಿನಿಯಲ್ಲಿ ನಿಗದಿಯಾಗಿತ್ತು. ವಾಷಿಂಗ್ಟನ್ ಸ್ಟುಡಿಯೊಕ್ಕೆ ಬಂದ ಜಾನ್ಸನ್ ತಮ್ಮ ಜೇಬಿನಿಂದ ಪ್ರಶ್ನೆಗಳಿರುವ ಚೀಟಿ ತೆಗೆದು ಸಂದರ್ಶಕನ ಮುಂದೆ ಹಿಡಿದರು.ಸಂದರ್ಶಕ ‘ಇಲ್ಲಿ ನಮ್ಮ ಪ್ರಶ್ನೆಗಳಿಗೆ ನೀವು ಉತ್ತರಿಸಬೇಕು’ ಎಂದಾಗ ಲಿಂಡನ್ ಜಾನ್ಸನ್ ಒಪ್ಪಲಿಲ್ಲ. ಸ್ಟುಡಿಯೊ ಬಿಟ್ಟು ಹೊರನಡೆದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ಸಂದರ್ಶನ ಆರಂಭವಾಗಬೇಕಿದೆ, ಮಾಡುವುದೇನು? ಲಿಂಡನ್ ಜಾನ್ಸನ್ ಮನವೊಲಿಸಿ ಕರೆತಂದು ಕೂರಿಸಲಾಯಿತು. ಆ ಚೀಟಿಯಲ್ಲಿಲ್ಲದ ಪ್ರಶ್ನೆಗಳಿಗೆ ‘ಹೌದು’ ಅಥವಾ ‘ಇಲ್ಲ’ ಎಂಬುದನ್ನು ಬಿಟ್ಟು ಹೆಚ್ಚಿನದನ್ನು ಬಾಯಿಬಿಡಿಸಲು ಸಂದರ್ಶಕನಿಗೆ ಆಗಲಿಲ್ಲ.ಕಮ್ಯುನಿಸ್ಟ್‌ ನಾಯಕರ ಪೈಕಿ ಮೊದಲ ಬಾರಿಗೆ ಅಮೆರಿಕದ ಟಿ.ವಿ ಕ್ಯಾಮೆರಾಕ್ಕೆ ಮುಖ ಒಡ್ಡಿದ್ದು ನಿಖಿತ ಕ್ರುಶ್ಚೇವ್. ಆ ಸಂದರ್ಶನ 1957ರ ಜೂನ್ 5ರಂದು ಪ್ರಸಾರವಾಯಿತು. ಅದಾಗಲೇ ಅಮೆರಿಕ ಮತ್ತು ಸೋವಿಯತ್ ರಷ್ಯಾ ನಡುವೆ ಶೀತಲ ಸಮರ ಚಾಲ್ತಿಯಲ್ಲಿತ್ತು.ಸಿಬಿಎಸ್ ಮುಖ್ಯಸ್ಥ ಫ್ರಾಂಕ್ ಸ್ಟಾಂಟನ್ ಶತಾಯಗತಾಯ ಕ್ರುಶ್ಚೇವ್ ಸಂದರ್ಶನ ಪಡೆಯಲು ಬೆನ್ನುಬಿದ್ದರು. ಎರಡು ವರ್ಷಗಳ ಪ್ರಯತ್ನದಿಂದಾಗಿ ಆ ಮಹಾನುಭಾವ ಕ್ಯಾಮೆರಾ ಎದುರು ಬಂದರು. ಆದರೆ ಸಂದರ್ಶನ ಸುಲಭದ್ದೇನೂ ಆಗಿರಲಿಲ್ಲ. ಸಂದರ್ಶನ ನಡೆಯುವ ಕೊಠಡಿಯಲ್ಲಿದ್ದ ಮೇಜನ್ನು ಜರುಗಿಸಲೂ ಕ್ರುಶ್ಚೇವ್ ಸಿಬ್ಬಂದಿ ಬಿಡಲಿಲ್ಲ.ಸಿಬಿಎಸ್ ಕ್ಯಾಮೆರಾ ಹಿಂದೆ ತಮ್ಮ ಕ್ಯಾಮೆರಾ ನೆಟ್ಟು ರಷ್ಯನ್ನರು ಕಾದರು. ಸಂದರ್ಶನಕ್ಕೆಂದು ಬಂದಾಗ ಕ್ರುಶ್ಚೇವ್ ಬಕ್ಕ ತಲೆಯಲ್ಲಿ ಬೆವರ ಹನಿಗಳಿದ್ದವು, ಆದರೆ ಕ್ರುಶ್ಚೇವ್ ‘ಮೇಕಪ್’ ನಿರಾಕರಿಸಿದರು. ‘ಮೇಕಪ್ ಮಾಡಿಕೊಳ್ಳಲು ನಾನೇನು ಸಿನಿಮಾ ನಟನೇ?’ ಎಂದು ಗದರಿದರು. ನಂತರ ಸುಮಾರು ಒಂದು ಗಂಟೆ ಕ್ರುಶ್ಚೇವ್  ಮಾತನಾಡಿದರು. ‘ಒಂದೊಮ್ಮೆ ಅಮೆರಿಕ, ಫ್ರಾನ್ಸ್ ಮತ್ತು ಪಶ್ಚಿಮ ಜರ್ಮನಿಯಿಂದ ಸೇನೆ ಹಿಂದೆಗೆದುಕೊಂಡರೆ, ನಾವು ಪೂರ್ವ ಜರ್ಮನಿ, ಪೋಲೆಂಡ್, ಹಂಗೆರಿಯಿಂದ ಹಿಂದೆ ಸರಿಯುತ್ತೇವೆ’ ಎಂದರು.ಬಹುಸಂಖ್ಯೆಯಲ್ಲಿ ಅಮೆರಿಕನ್ನರು ಆ ಕಾರ್ಯಕ್ರಮ ವೀಕ್ಷಿಸಿದ್ದರು. ‘The Cold war moved into American living room Sunday’ ಎಂದು ಮರುದಿನ ಪತ್ರಿಕೆಗಳು ಬರೆದವು. ಅದೇ ಸಂದರ್ಶನವನ್ನು ರಷ್ಯಾದಲ್ಲೂ ಪ್ರಸಾರ ಮಾಡಲಾಯಿತು. ರಷ್ಯಾದ ಜನ ತಮ್ಮ ನಾಯಕ ಮೊದಲ ಬಾರಿಗೆ ಟಿ.ವಿ.ಯಲ್ಲಿ ಮನಬಿಚ್ಚಿ ನೇರಾನೇರ ಮಾತನಾಡುವುದನ್ನು ಕಂಡರು.1958ರ ಡಿಸೆಂಬರ್ 31ರಂದು ‘ಕ್ಯೂಬಾ ಕ್ರಾಂತಿ’ಯಿಂದಾಗಿ, ಅಲ್ಲಿನ ಸರ್ವಾಧಿಕಾರಿ ಫುಲ್ಗೆನ್ಸಿಯೋ ಬಚಿಸ್ತಾ ದೇಶ ಬಿಟ್ಟು ಪಲಾಯನ ಮಾಡಿದರು. ಫಿಡಲ್ ಕ್ಯಾಸ್ಟ್ರೊ ಅಧಿಕಾರ ಹಿಡಿದರು. ಅಮೆರಿಕದ ಸುದ್ದಿ ಸಂಸ್ಥೆಗಳು ಕ್ಯಾಸ್ಟ್ರೊ ಸಂದರ್ಶನಕ್ಕಾಗಿ ಸ್ಪರ್ಧೆಗೆ ಬಿದ್ದವು.ಆದರೆ ಕ್ಯಾಸ್ಟ್ರೊ ಎದುರು ನಿಂತು ಪ್ರಶ್ನಿಸುವುದೆಂದರೆ ಅಪಾಯಕ್ಕೆ ಕೊರಳೊಡ್ಡುವುದು ಎಂಬುದು ಎಲ್ಲ ಪತ್ರಕರ್ತರಿಗೂ ತಿಳಿದಿತ್ತು. ಬಚಿಸ್ತಾ ದೇಶ ತೊರೆಯಲು ಅಮೆರಿಕದ ಐಸೆನ್ ಹಾವರ್ ಆಡಳಿತ ಸಹಾಯ ಮಾಡಿದೆ ಎಂಬುದು ಜಗಜ್ಜಾಹೀರಾಗಿತ್ತು.

ಅಮೆರಿಕದ ಜೂಜು ಮತ್ತು ವೇಶ್ಯಾವಾಟಿಕೆಯ ಲಾಬಿ ಕ್ಯೂಬಾವನ್ನು ನಿಯಂತ್ರಿಸುತ್ತಿದೆ ಎಂಬ ಸಿಟ್ಟು ಕ್ಯೂಬಾದ ಕ್ರಾಂತಿಕಾರಿಗಳಿಗಿತ್ತು. ಇಷ್ಟರ ನಡುವೆ ಅಮೆರಿಕದ ಪತ್ರಕರ್ತನೊಬ್ಬ ಅಧಿಕಾರದಲ್ಲಿರುವ ಕ್ಯಾಸ್ಟ್ರೊ ಎದುರು ನಿಂತು ಪ್ರಶ್ನಿಸುವುದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ಸುದ್ದಿ ಸಂಸ್ಥೆಗಳ ನಡುವಿನ ಪೈಪೋಟಿ, ಎಲ್ಲ ಅಪಾಯಗಳನ್ನೂ ದಾಟುವಂತೆ ಮಾಡಿತು.ಫಿಡಲ್ ಕ್ಯಾಸ್ಟ್ರೊ ಅವರನ್ನು ‘ಫೇಸ್ ದಿ ನೇಷನ್’ ಕಾರ್ಯಕ್ರಮಕ್ಕೆ ತರುವಲ್ಲಿ ಪತ್ರಕರ್ತ ಎಡ್ ಸಲ್ಲಿವನ್ ಯಶಸ್ವಿಯಾದರು. ಅಸಲಿಗೆ ಸುದ್ದಿ ವಾಹಿನಿಯವರು ಸಂದರ್ಶನಕ್ಕೆ ಆಹ್ವಾನಿಸಿದ್ದು ಕ್ಯಾಸ್ಟ್ರೊ ಅವರನ್ನು ಮಾತ್ರ.ಆದರೆ ಅವರ ಹಿಂದೆ ಸುಮಾರು 200 ಮಂದಿ ಬಂದೂಕಿನೊಂದಿಗೆ ಸ್ಟುಡಿಯೊಕ್ಕೆ ಬಂದರು! ಬಂದೂಕು ನೆತ್ತಿಯ ಮೇಲಿರುವಾಗ ಸಂದರ್ಶಕ ಬಾಯಿಬಿಡುವುದಾದರೂ ಹೇಗೆ? ಕ್ಯಾಸ್ಟ್ರೊ ಜೊತೆ ಬಂದವರು ಕ್ಯಾಮೆರಾ ಹಿಂದೆ ನಿಂತು ಕಾದರು.ತಮ್ಮ ನಾಯಕನ ಒಂದೊಂದು ಉತ್ತರಕ್ಕೂ ಶಿಳ್ಳೆ, ಚಪ್ಪಾಳೆ ಹೊಡೆದರು. ಸಂದರ್ಶನದ ಉದ್ದೇಶವೇ ಮಕಾಡೆ ಮಲಗಿತ್ತು. ಕೊನೆಗೂ ಗದ್ದಲದ ನಡುವೆಯೇ ಸಂದರ್ಶನ ಮುಗಿಯಿತು. ಅಂದು ಕ್ಯಾಸ್ಟ್ರೊ ‘ನಾವು ಸರ್ವಾಧಿಕಾರ ವಿರೋಧಿಸುತ್ತೇವೆ’ ಎಂಬ ಮಾತನ್ನು ಅಮೆರಿಕ ಜನತೆಯ ಮುಂದೆ ಆಡಿದ್ದರು. ಆದರೆ ಕೆಲ ದಿನಗಳಲ್ಲೇ ಮತ್ತೊಬ್ಬ ಸರ್ವಾಧಿಕಾರಿಯಾಗಿ ಬದಲಾದರು!80ರ ದಶಕದಿಂದಾಚೆಗೆ ರಾಜಕೀಯ ವರದಿಗಾರರಾಗುವ, ಸಂದರ್ಶಕರಾಗಿ ಕಾರ್ಯ ನಿರ್ವಹಿಸುವ ಅವಕಾಶ ಮಹಿಳೆಯರಿಗೆ ಹೆಚ್ಚು ದೊರೆಯಿತು. ಬಾರ್ಬರಾ ವಾಲ್ಟರ್, ಹೆಲೆನ್ ಥಾಮಸ್ ತರಹದ ಪತ್ರಕರ್ತೆಯರು ತಾವು ಪುರುಷರಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸಬಲ್ಲೆವು ಎಂದು ತೋರಿಸಿಕೊಟ್ಟರು.

ಸಂದರ್ಶನದಲ್ಲಿ ಬಾರ್ಬರಾ ಎಸೆಯುವ ಪ್ರಶ್ನೆಗಳಿಗೆ ಹಲವರು ತಬ್ಬಿಬ್ಬಾದ ಪ್ರಸಂಗಗಳೂ ಇದ್ದವು. ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭಾರತಕ್ಕೆ ಭೇಟಿ ಇತ್ತಾಗ, ಬಾರ್ಬರಾ ಅಧ್ಯಕ್ಷರೊಂದಿಗೆ ಆಗಮಿಸಿದ್ದರು. ಆಗ ಭಾರತದ ಪ್ರಧಾನಿಯಾಗಿದ್ದವರು ಮೊರಾರ್ಜಿ ದೇಸಾಯಿ.ಮೊರಾರ್ಜಿ ಅವರ ‘ಸ್ವಮೂತ್ರ ಪಾನ’ದ ವಿಷಯ ಗುಟ್ಟಾಗಿಯೇನೂ ಇರಲಿಲ್ಲ. ಆದರೆ ನೇರವಾಗಿ ಅವರನ್ನು ಆ ಬಗ್ಗೆ ಪ್ರಶ್ನಿಸುವುದು ಹೇಗೆ ಎಂದು ಕಾರ್ಟರ್ ಜೊತೆಗಿದ್ದ ಅಮೆರಿಕದ ಪತ್ರಕರ್ತರು ಸುಮ್ಮನಿದ್ದರು. ಆದರೆ ಬಾರ್ಬರಾ ಯಾವ ಸಂಕೋಚವೂ ಇಲ್ಲದೆ ಆ ಬಗ್ಗೆ ಮೊರಾರ್ಜಿ ಅವರನ್ನು ಪ್ರಶ್ನಿಸಿದ್ದರು.ಬಾರ್ಬರಾರಂತೆಯೇ ಲೆಸ್ಲಿ ಸ್ಟಾಲ್ ಪತ್ರಕರ್ತೆಯಾಗಿ ಹೆಸರು ಮಾಡಿದವರು. 1986ರ ಹೊತ್ತಿಗೆ ‘ಫೇಸ್ ದಿ ನೇಷನ್’ ಕಾರ್ಯಕ್ರಮದ ಉಸ್ತುವಾರಿ ಸ್ಟಾಲ್ ಹೆಗಲಿಗೆ ಬಿತ್ತು. ಯಾಸಿರ್ ಅರಾಫತ್ ಅವರನ್ನು ಸ್ಟಾಲ್ ಸಂದರ್ಶನಕ್ಕೆ ಕರೆತಂದರು. ಸ್ಟಾಲ್ ಕೇಳುವ ಪ್ರಶ್ನೆಗೆ ಯಾಸಿರ್ ಜಪ್ಪಯ್ಯಾ ಎಂದರೂ ನೇರವಾದ ಉತ್ತರ ಕೊಡುತ್ತಿರಲಿಲ್ಲ. ಸುತ್ತಿ ಬಳಸಿ, ಎಳೆದು ಜಗ್ಗಿ ಮಾತನಾಡುತ್ತಿದ್ದರು.

ಲೆಸ್ಲಿ ಸ್ಟಾಲ್ ತಾಳ್ಮೆ ಕಳೆದುಕೊಂಡರು ‘ಇಲ್ಲಿ ನಿಮ್ಮನ್ನು ಉದ್ದುದ್ದ ಭಾಷಣ ಮಾಡಲು ಕರೆದಿಲ್ಲ. ನನ್ನ ಪ್ರಶ್ನೆಗೆ ನೇರವಾಗಿ ಉತ್ತರಿಸಿ’ ಎಂದರು. ಪುರುಷ ಪತ್ರಕರ್ತ ಹೀಗೆ ಹೇಳಿದ್ದರೆ ಅರಾಫತ್ ಪ್ರತಿಕ್ರಿಯೆ ಹೇಗಿರುತ್ತಿತ್ತೋ, ಆದರೆ ‘Oh Pardon, Lady’ ಎಂದು ಅರಾಫತ್ ಸಾಧ್ಯವಾದಷ್ಟು ನೇರವಾಗಿ ಉತ್ತರಿಸಿದರು. ಬಹುಶಃ ಅರಾಫತ್ ಅವರಿಂದ ಅಷ್ಟು ನೇರ ಉತ್ತರಗಳನ್ನು ಪಡೆದ ಬೇರಾವ ಪತ್ರಕರ್ತರೂ ಇರಲಿಕ್ಕಿಲ್ಲ.

ಆದರೆ ಲೆಸ್ಲಿ ಮಾತಿಗೆ ‘ಐರನ್ ಲೇಡಿ’ ಬಗ್ಗಲಿಲ್ಲ. 1987ರಲ್ಲಿ ಮಾರ್ಗರೇಟ್ ಥ್ಯಾಚರ್ ಅವರನ್ನು ಲೆಸ್ಲಿ ಸ್ಟಾಲ್ ಸಂದರ್ಶಿಸಿದ್ದರು. ಆದರೆ ಥ್ಯಾಚರ್ ಬಾಯಿಬಿಡಿಸುವುದೇ ಕಷ್ಟವಾಯಿತು. ಒಂದೇ ಪ್ರಶ್ನೆಯನ್ನು ಮೇಲೆ ಕೆಳಗೆ ಮಾಡಿ, ಬೇರೆ ಪದಗಳನ್ನು ಜೋಡಿಸಿ ಕೇಳುವ ಕಸರತ್ತನ್ನು ಸ್ಟಾಲ್ ಮಾಡಿದರು.

ಊಹ್ಞೂಂ ‘ಐರನ್ ಲೇಡಿ’ ಜಗ್ಗಲಿಲ್ಲ, ‘You may go on asking the same question 100 different ways and you will still get the same answer’ ಎಂದು ಎದ್ದು ಹೊರಟರು.ಅದಾಗ ಲೆಬನಾನ್ ಮತ್ತು ಇಸ್ರೇಲ್ ಕಾದಾಡುತ್ತಿದ್ದವು. ಲೆಬನಾನ್ ವಿಮಾನವನ್ನು ಇಸ್ರೇಲ್ ಪುಡಿ ಮಾಡಿತ್ತು. ಆ ಸಂದರ್ಭದಲ್ಲಿ ಜಾರ್ಜ್ ಹರ್ಮನ್, ಇಸ್ರೇಲ್ ಪ್ರಧಾನಿ ಗೋಲ್ಡಾ ಮೆಯಿರ್ ಅವರನ್ನು ಪ್ರಯಾಸಪಟ್ಟು ಸಂದರ್ಶನಕ್ಕೆ ಕರೆತಂದರು.ಸಹಜವಾಗಿಯೇ ಇಸ್ರೇಲ್ ವಿಮಾನ ಹೊಡೆದುರುಳಿಸಿದ ಬಗ್ಗೆ ಪ್ರಶ್ನೆಗಳು ಬಂದವು. ಮೆಯಿರ್ ಜಾರಿಕೆಯ ಉತ್ತರ ಕೊಟ್ಟರು. ಸಂದರ್ಶನ ಮುಗಿದು, ಕ್ಯಾಮೆರಾ ಆಫ್ ಆಗುತ್ತಿದ್ದಂತೆ ‘Too many questions about that damn airliner’ ಎಂದು ಸೋಟೆ ಮುರಿದರು.ಮೆಯಿರ್ ಸಂದರ್ಶಕನ ಬಗ್ಗೆ ಎಷ್ಟು ಕುಪಿತರಾಗಿದ್ದರೆಂದರೆ, ಸ್ಟುಡಿಯೊ ಬಾಗಿಲು ದಾಟುವವರೆಗೆ ನಾಲ್ಕಾರು ಬಾರಿ ಅದೇ ವಾಕ್ಯ ಪುನರುಚ್ಚರಿಸಿದ್ದರು. ಇನ್ನೇನು ಕಾರು ಹತ್ತಿ ಹೊರಡುವಾಗಲೂ, ಒಮ್ಮೆ ಹರ್ಮನ್ ಕಡೆ ತಿರುಗಿ, ಅದೇ ವಾಕ್ಯ ಹೇಳಿ ಮುಖಮುರಿದು ಕಾರು ಏರಿದ್ದರು.ಇವು ಬಾಬ್ ಫಿಶರ್ ತೆರೆದಿಟ್ಟ ನಾಲ್ಕಾರು ಪ್ರಸಂಗಗಳಷ್ಟೆ. ಸಾಮಾನ್ಯವಾಗಿ ಯಾವುದೇ ಪತ್ರಕರ್ತನಿಗೆ ತನ್ನ ಕಾಲದ ಪ್ರಸಿದ್ಧ ವ್ಯಕ್ತಿಗಳು, ಉನ್ನತ ಹುದ್ದೆಯಲ್ಲಿರುವವರನ್ನು ಸಂದರ್ಶಿಸಬೇಕೆಂಬ ಬಯಕೆ ಇರುತ್ತದೆ.

ಮಾಧ್ಯಮ ಸಂಸ್ಥೆಗಳಂತೂ ಪೈಪೋಟಿಯಿಂದಲೇ ಸುದ್ದಿಯಲ್ಲಿರುವವರನ್ನು, ಸುದ್ದಿಯಾಗಬಲ್ಲವರನ್ನು ಮಾತನಾಡಿಸುತ್ತವೆ. ಆದರೆ ಸಂದರ್ಶನಕ್ಕೆ ಅವಕಾಶ ಗಿಟ್ಟಿಸುವುದು, ಕರೆದು ಕೂರಿಸಿ ಪ್ರಶ್ನೆಯ ಕೂರಂಬು ಎಸೆಯುವುದು ಸುಲಭವಲ್ಲ.

ಅತಿಥಿಗಳ ಬೆವರಿಳಿಸಬೇಕು ಎಂದುಕೊಂಡ ಪತ್ರಕರ್ತರೇ ಬೆಪ್ಪಾಗುವ ಪ್ರಸಂಗಗಳೂ ಇರುತ್ತವೆ. ದೇಶದ ಅಧ್ಯಕ್ಷರನ್ನೋ ಪ್ರಧಾನಿಯನ್ನೋ ಇತರ ದೇಶದ ನಾಯಕರನ್ನೋ ಒಂದು ಗಂಟೆ ಸ್ಟುಡಿಯೊದಲ್ಲಿ ಕಟ್ಟಿ ಹಾಕಲು ತಿಂಗಳುಗಟ್ಟಲೆ ಹರಸಾಹಸ ಪಡಬೇಕಾಗುತ್ತದೆ.ಅವರ ನಿಬಂಧನೆಗಳಿಗೆಲ್ಲ ‘ಜೀ ಹುಜೂರ್’ ಎನ್ನಬೇಕಾಗುತ್ತದೆ. ‘Tonight, Nation wants to know’ ಎಂದು ಬೊಬ್ಬಿರಿಯುವ ಅರ್ನಬ್ ಗೋಸ್ವಾಮಿಯಂತಹ ದೊಡ್ಡ ದನಿಯ ಪತ್ರಕರ್ತರೂ ಧ್ವನಿ ತಗ್ಗಿಸಬೇಕಾಗುತ್ತದೆ. ಖಾರದ ಪ್ರಶ್ನೆಯನ್ನು ಬದಿಗಿಡಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry