7

ಹುಸಿ ಧಾರ್ಮಿಕತೆಗೆ ರಕ್ತಮಾಂಸ ತುಂಬಿದ ಗೋವು

ಆರ್‌. ಪೂರ್ಣಿಮಾ
Published:
Updated:
ಹುಸಿ ಧಾರ್ಮಿಕತೆಗೆ ರಕ್ತಮಾಂಸ ತುಂಬಿದ ಗೋವು

‘ಗೋವು ನಿಮಗೆ ಪವಿತ್ರ ಮತ್ತು ಅವಳು ನಿಮ್ಮ ಮಾತೆ ಅಲ್ಲವೇ? ಒಳ್ಳೆಯದು, ಅವಳ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೀವೇ ಮಾಡಿಕೊಳ್ಳಿ’ ಎಂಬರ್ಥದಲ್ಲಿ ಗುಜರಾತ್‌ನ ದಲಿತರು ಹೇಳಿದ ಮಾತು, ನಮ್ಮ ದೇಶದ ಮನಸ್ಸಾಕ್ಷಿಯನ್ನು ಹೆಂಗೆ ಇರಿಯುತ್ತಿದೆ! ‘ಹಿಂದೆ ಬಂದರೆ ಹಾಯಬೇಡಿ, ಮುಂದೆ ಬಂದರೆ ಒದೆಯಬೇಡಿ’, ನಮ್ಮನ್ನೂ ನಿಮ್ಮಂತೆಯೇ ಮನುಷ್ಯರಂತೆ ಕಾಣಿರಿ ಎಂದು ಸಾಮಾಜಿಕವಾಗಿ ತಬ್ಬಲಿ ಕರುಗಳಂತಿರುವ ದಲಿತರು ಶತಮಾನಗಳಿಂದ ಗೋಗರೆಯುತ್ತಿದ್ದದ್ದು ಯಾರ ಕಿವಿಗೂ ಬೀಳುತ್ತಿರಲಿಲ್ಲ.ನಮ್ಮ ಗೋರಕ್ಷಕ ದೇಶದ ಇತಿಹಾಸದ ಕೊಟ್ಟಕೊನೆಯ ಕೊಟ್ಟಿಗೆಯಲ್ಲೂ ಅವರಿಗೆ ಜಾಗವಿಲ್ಲ, ದನಕರುಗಳ ಸಗಣಿ, ಗಂಜಲಕ್ಕಿರುವ ಬೆಲೆಯೂ ಮನುಷ್ಯರಾದ ಅವರಿಗಿಲ್ಲ.ಆದರೆ ಈಗ ಗುಜರಾತಿನ ಕೆಲವು ದಲಿತರು ಸತ್ತ ಪ್ರಾಣಿಗಳನ್ನು ತಂದು ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಬಿಸಾಕಿ ‘ಇನ್ನು ಮುಂದೆ ನಾವು ಸತ್ತ ದನ ಕರು ಎಮ್ಮೆ ಕೋಣಗಳ ಚರ್ಮವನ್ನು ಸುಲಿದು ನಿಮಗೆ ಚಪ್ಪಲಿ, ಚೀಲ ತಯಾರಿಸುವುದಿಲ್ಲ. ನೀವೇ ಏನು ಬೇಕೋ ಮಾಡಿಕೊಳ್ಳಿ’ ಎಂದು ಗುಟುರು ಹಾಕಿರುವುದು, ನಮ್ಮ ಸಂಸ್ಕೃತಿಗೆ ಹೆಂಗೆ ಗುಮ್ಮುತ್ತಿದೆ!ಗುಜರಾತ್ ರಾಜ್ಯದ ಊನಾದಲ್ಲಿ ಇತ್ತೀಚೆಗೆ ನಡೆದ ಘಟನೆ, ನಮ್ಮ ಸಾಮಾಜಿಕ ವ್ಯವಸ್ಥೆಯ ಊನವನ್ನು ಜಗತ್ತಿಗೆ ಎತ್ತಿ ತೋರಿಸಿತು. ಅಂದು ಆ ಊರಿನ ನಾಲ್ವರು ಯುವಕರು ಸತ್ತ ದನಗಳ ಚರ್ಮ ಸುಲಿಯುವ ಕೆಲಸ ಮಾಡುತ್ತಿದ್ದರು- ದನಗಳ ಸುಲಿದ ಚರ್ಮವೇ ದಲಿತರಾದ ಅವರ ಕುಟುಂಬದ ಅನ್ನ ತಾನೆ? ಆದರೆ ಅವರು ಮಾಂಸಕ್ಕಾಗಿ ದನ ಕೊಂದಿದ್ದಾರೆ ಎಂದು ಕೋಪಗೊಂಡ ಆ ಊರಿನ ‘ಗೋರಕ್ಷಕ ಪಡೆ’ ಎಂಬ ರೌಡಿಪಡೆಯ ಮಂದಿ, ಆ ಯುವಕರ ಕೈಗಳನ್ನು ಕಟ್ಟಿಹಾಕಿ ಬಾರುಕೋಲು, ಚಾಟಿಗಳಿಂದ ಒಂದೇ ಸಮನೆ ಬಾರಿಸಿ ಅವರ ‘ಚಮಡಾ’ ಸುಲಿದರು.ಆಮೇಲೆ ಈ ಹಲ್ಲೆಯ ದೃಶ್ಯಗಳನ್ನು ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಜನರೆಲ್ಲಾ ನೋಡಲಿ ಎಂದು ವಾಟ್ಸ್‌ಆ್ಯಪ್‌ಗೆ, ಫೇಸ್‌ಬುಕ್‌ಗೆ ಪೇರಿಸಿದರು. ಗೋವಿನ ಚರ್ಮ ಸುಲಿಯುತ್ತಿದ್ದ ಆ ವೃತ್ತಿನಿರತರ ಮೇಲೆ ಈ ಚಂಡವ್ಯಾಘ್ರರು ನಡೆಸಿದ ಹಲ್ಲೆಯನ್ನು ಟಿವಿ ಚಾನೆಲ್‌ಗಳಲ್ಲಿ ನೋಡಿದ ದೇಶದ ಜನರಿಗೆ, ನಾಗರಿಕತೆಗೆ ಬಡಿದ ಈ ‘ಕಾಲುಬಾಯಿ ದೊಡ್ಡರೋಗ’ ಕಂಡು ಬಾಯಿ ಬಡಿದುಕೊಳ್ಳುವಷ್ಟು ದುಃಖವಾಯಿತು. 

 

ಆದರೆ ಕೆಲವು ಜನರಿಗಾದರೂ ದನದ ಚರ್ಮ ಸುಲಿತಕ್ಕೆ ನಡೆದ ಆ ಹಲ್ಲೆಯ ದೃಶ್ಯ ನೋಡಿ ಹಾಲು ಕುಡಿದಷ್ಟು ಸಂತೋಷ ಆಗಿರಬಹುದು- ಉದಾಹರಣೆಗೆ ನಮ್ಮ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಮಂತ್ರಿ ತಾವರ್ ಚಂದ್ ಗೆಹ್ಲೋಟ್. ‘ಛೇ, ಗೋರಕ್ಷಕ ಪಡೆಗಳೆಂದರೆ ನಮ್ಮ ಸಾಮಾಜಿಕ ಸಂಘಟನೆಗಳು.ಅವತ್ತು ಏನಾಗಿಬಿಟ್ಟಿತೆಂದರೆ, ಗೋಹತ್ಯೆ ಆಗಿದೆ ಎಂಬ ವದಂತಿ ಕೇಳಿ ಅವರು ಆತುರಪಟ್ಟು ಹಲ್ಲೆ ನಡೆಸಿಬಿಟ್ಟರಷ್ಟೆ. ಅವರು ಸರಿಯಾಗಿ ವಿಚಾರಿಸಿದ್ದಿದ್ದರೆ, ಅಲ್ಲಿ ನಡೆದದ್ದು ಸತ್ತ ದನದ ಚರ್ಮ ಸುಲಿಯುವ ಕೆಲಸ ಎಂಬುದು ತಿಳಿಯುತ್ತಿತ್ತು’ ಎಂದೆಲ್ಲ ಈ ಮಂತ್ರಿ ತಮ್ಮ ಇಲಾಖೆಯ ‘ಸಾಮಾಜಿಕ ನ್ಯಾಯ’ ಸಾರಿದರು.ಒಂದೊಮ್ಮೆ ಆ ದಲಿತ ಯುವಕರಿಂದ ಮಾಂಸಕ್ಕಾಗಿ ಗೋಹತ್ಯೆಯೇ ನಡೆದಿದ್ದರೂ, ಈ ಗೋರಕ್ಷಕ ರೌಡಿಗಳು ಅವರ ಮೇಲೆ ದಾಳಿ ಮಾಡಬೇಕಿರಲಿಲ್ಲ. ಗೋಹತ್ಯೆ ನಮ್ಮ ದೇಶದ ಬಹುಪಾಲು ರಾಜ್ಯಗಳಲ್ಲಿ ಕಾನೂನು ಪ್ರಕಾರ ಅಪರಾಧವೇ ಆಗಿರುವುದರಿಂದ, ಅದರಂತೆ ಕ್ರಮ ಜರುಗಿಸಲು ಪೊಲೀಸರು ಇದ್ದೇ ಇರುತ್ತಿದ್ದರು- ಏಕೆಂದರೆ ಪೊಲೀಸರು ಇರುವುದೇ ಅದಕ್ಕೆ.ಆದರೆ ಅವರು ಸುಮ್ಮನೆ ದನ ಕಾಯುವುದಕ್ಕೆ ಇದ್ದಾರೆ ಎಂದು ಆ ಕೌಬಾಯ್‌ಗಳಂತೆ ಈ ಮಂತ್ರಿಯೂ ಭಾವಿಸಿರಬಹುದು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ನಡೆಸುವ ಈ ದಪ್ಪ ಚರ್ಮದ ಮಂತ್ರಿಯ ಮಾತು ಗೋ ರಕ್ಷಕರ ಕೈಗೆ ಇನ್ನಷ್ಟು ಬಾರುಕೋಲು ಕೊಟ್ಟು ಅವರ ಸಬಲೀಕರಣ ಮಾಡಿತೇ ಹೊರತು, ದಲಿತರ ಬದುಕನ್ನಲ್ಲ.ಹಾಗೆ ನೋಡಿದರೆ ಆ ದಲಿತ ಯುವಕರು ಅವರ ವೃತ್ತಿಯ ಕೆಲಸವನ್ನು ಅವರು ಮಾಡಿದ್ದಕ್ಕೆ ಅಷ್ಟೊಂದು ಒದೆ ತಿಂದರು. ಏಕೆಂದರೆ ಆ ಕೆಲಸವನ್ನು ಬೇರೆ ಯಾರೂ ಮಾಡುವುದಿಲ್ಲವಲ್ಲ. ಅವರು ತಮ್ಮ ವೃತ್ತಿಯ ಇತರ ‘ಕರ್ತವ್ಯ’ಗಳಾದ ಊರ ಕಸ ಗುಡಿಸುವುದು, ಚರಂಡಿಗಳ ಕೊಳೆ ಎತ್ತುವುದು, ಪಾಯಿಖಾನೆಯ ಮಲ ಬಾಚುವುದು, ಈಗ ನಿಷೇಧವಾಗಿದ್ದರೂ ತಲೆಯ ಮೇಲೆ ಮಲ ಹೊರುವುದು ಇತ್ಯಾದಿಗಳನ್ನು ಮಾಡಿದರೆ ಯಾರೂ ಹೊಡೆಯುವುದಿಲ್ಲ; ಮಾಡದಿದ್ದರೆ ಹೊಡೆಯಬಹುದಷ್ಟೆ. ಆ ಕೆಲಸಗಳೆಂದರೆ ಬರೀ ಕೆಲಸಗಳಲ್ಲ, ಅವು ನಮ್ಮ ಸಾಮಾಜಿಕ ಪರಂಪರೆ ಅವರಿಗೆ ಕೊಟ್ಟಿರುವ ‘ಮೀಸಲಾತಿ’ ಕೆಲಸಗಳು.ಸಮಾಜ ತಮಗೆ ಕೊಟ್ಟಿರುವ ಆ ಮೀಸಲು ಕೆಲಸಗಳನ್ನು ಅವರು ಇನ್ನೂ, ಸ್ವಾತಂತ್ರ್ಯ ಬಂದ ಮೇಲೆ ಭಾರತ ಸರ್ಕಾರ ಅರವತ್ತು ವರ್ಷಗಳ ಹಿಂದೆ ಹೊಸ ರೂಪದ ‘ಮೀಸಲಾತಿ’ ಕೊಟ್ಟ ನಂತರವೂ, ಮಾಡಬೇಕಾದುದು ಅನಿವಾರ್ಯ. ಒಂದೊಂದೇ ಗ್ರಾಮ ಪಂಚಾಯ್ತಿ ಅಥವಾ ಮಂಡಲ ಪಂಚಾಯ್ತಿಯ ಸಮೀಕ್ಷೆ ನಡೆಸಿದರೆ, ಯಾವ ಕೆಲಸ ಯಾರು ಮಾಡುತ್ತಿದ್ದಾರೆ ಅನ್ನುವುದು ಗೊತ್ತಾಗುತ್ತದೆ. ಹಾಗೆಯೇ ನಮ್ಮ ದೇಶದ ಹಳ್ಳಿಗಳಲ್ಲಿ ಯಾರ ಮನೆಯ ಕೊಟ್ಟಿಗೆಯಲ್ಲಿ ಸಾಕಿದ ಹಸು ಅಥವಾ ಎಮ್ಮೆ ಹಾಲು ಕೊಡುವುದನ್ನು ನಿಲ್ಲಿಸಿದರೆ ಅಥವಾ ದುಡಿವ ಎತ್ತು ಮುದಿಯಾದರೆ ಅದನ್ನು ಮುಸ್ಲಿಮರಿಗೆ ಕೊಟ್ಟು ಸಾಗಹಾಕುವುದು ತಲೆತಲಾಂತರದಿಂದ ನಡೆದಿರುವ ರೂಢಿ. ಅಷ್ಟೇಕೆ, ನಮ್ಮ ಸಮಾಜದಲ್ಲಿ ಮನೆಯೊಳಗೆ ಮಾತ್ರ ಗಂಡು ಹುಟ್ಟುವುದು ಸ್ವಾಗತಾರ್ಹವೇ ಹೊರತು, ಕೊಟ್ಟಿಗೆಯಲ್ಲಿ ಅಲ್ಲವೇ ಅಲ್ಲ.ಕೊಟ್ಟಿಗೆಯಲ್ಲಿ ಗಂಡುಕರು ಹುಟ್ಟಿದರೆ ಅದು ಮುದಿಯಾಗಿ ಸಾಯುವವರೆಗೂ ಯಾರೂ ಮುದ್ದಿನಿಂದ ಸಾಕುವುದಿಲ್ಲ. ಗಂಡುಕರು ಅಟ್ಟಿಕೊಂಡು ಹೋಗಲು ಹಳ್ಳಿಗಳನ್ನು ಸುತ್ತುವ ಜನ ಇರುತ್ತಾರೆ, ಅದನ್ನು ಅವರೇನು ಮಾಡುತ್ತಾರೆ ಅನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಹಳ್ಳಿಯ ಒಬ್ಬ ರೈತ ಐದಾರು ಪೀಳಿಗೆಯ ದನ ಸಾಕುವುದು ಅವನ ಕೆಲಸಕ್ಕೆ ಅನುಕೂಲವಾಗಲೆಂದೇ. ರೈತ ಕುಟುಂಬದ ಬದುಕು- ಬೇಸಾಯಕ್ಕೆ ಜೀವನಾಡಿಯಾಗುವ ದನಗಳು, ಎತ್ತುಗಳ ಮೇಲಿನ ಪ್ರೀತಿ ಕಾವ್ಯಕ್ಕೂ ವಸ್ತುವಾಗುವಂಥದು.ಆದರೆ ಗೋಮಾಳಗಳೆಲ್ಲ ಮಾಯವಾಗಿರುವ ಕಾಲದಲ್ಲಿ ಕಾಸುಕೊಟ್ಟು ಮೇವು ತಂದು ದನಕರುಗಳನ್ನು ಸಾಕುವ ವಿಚಾರದಲ್ಲಿ ‘ವ್ಯಾವಹಾರಿಕ’ ದೃಷ್ಟಿ ಇಲ್ಲದಿದ್ದರೆ ಅವರಿಗೇ ಕಷ್ಟ. ಇದರಂತೆಯೇ ಹಳ್ಳಿಯ ರೈತನ ಕೊಟ್ಟಿಗೆಯಲ್ಲಿ ದನ ಸತ್ತರೆ ಅದನ್ನು ಎತ್ತಲು ಯಾರನ್ನು ಕರೆಯುತ್ತಾರೆ ಎನ್ನುವುದೂ ಬಹಿರಂಗ ಸತ್ಯ.ಊರಿನಲ್ಲಿ ಎಮ್ಮೆ ಎತ್ತು ಸತ್ತರೆ, ಇವುಗಳ ಹೆಣ ಹೊತ್ತೊಯ್ದು ಚರ್ಮ ಸುಲಿದು, ಅದರಿಂದ ಏನಾದರೂ ವಸ್ತು ತಯಾರಿಸುವುದು ಅಥವಾ ಅವುಗಳ ತಯಾರಕರಿಗೆ ಅವುಗಳನ್ನು ಒದಗಿಸುವುದು ಅನೇಕ ಹಳ್ಳಿಗಳಲ್ಲಿ ದಲಿತರ ವೃತ್ತಿ. ಆ ಸತ್ತ ಪ್ರಾಣಿಯ ಮಾಂಸ ತಿನ್ನುವುದು, ಕೇರಿಯ ಜನರಿಗೆ ಹಂಚುವುದು ಅವರಿಗೆ ಬಿಟ್ಟ ವಿಚಾರ. ಗ್ರಾಮೀಣ ಆಹಾರದಲ್ಲಿ ಮತ್ತು ಆರ್ಥಿಕತೆಯಲ್ಲಿ ಗೋವಿನ ಪಾಲು, ಗೊತ್ತಿರುವವರಿಗೆ ಮಾತ್ರ ಗೊತ್ತು. ಗೋವಿನ ಚರ್ಮಕ್ಕೂ ಆರ್ಥಿಕತೆಯಲ್ಲಿ ಪಾತ್ರವುಂಟು.ಹಳ್ಳಿಯಲ್ಲಿ ರೈತರ ಕೊಟ್ಟಿಗೆಗಳಲ್ಲಿ ಸತ್ತ ಮೂಕ ದನಗಳ ಸುಲಿದ ಚರ್ಮವೇ ಹದಗೊಂಡು ನಗಾರಿ, ತಮಟೆ, ಮದ್ದಳೆಗಳಾಗಿ ಊರ ದೇವತೆಗಳ ಹಬ್ಬಗಳಲ್ಲಿ ಜೋರು ಬಡಿತದ ಸೇವೆ ಸಲ್ಲಿಸುತ್ತವೆ. ಶಿಷ್ಟ ಸಂಗೀತ, ನಾಟ್ಯ, ಬಯಲಾಟ, ಯಕ್ಷಗಾನಗಳಲ್ಲಿ ವಾದ್ಯವೈವಿಧ್ಯ ಒದಗಿಸುತ್ತವೆ. ಸಾಕ್ಷಾತ್ ಶಿವನೇ ಆನೆಯ ಚರ್ಮ ಸುಲಿದು ಉಟ್ಟುಕೊಂಡು ಗಜಚರ್ಮಾಂಬರಧಾರಿಯಾಗಿದ್ದರೂ, ಆ ದೇವರಿಗಿಲ್ಲದ ಚರ್ಮದ ಮಡಿ ಹುಲುಮಾನವರಿಗುಂಟು.ಬೇಟೆಯಾಡಿದ ಪ್ರಾಣಿಗಳ ಚರ್ಮ ಸುಲಿದು ಗೋಡೆ ಮೇಲೆ ತೂಗುಹಾಕಿ ಶೌರ್ಯ ಮೆರೆದ ರಾಜರಂತೂ ಇದ್ದೇ ಇದ್ದರು. ಅವರು ಬಿಡಿ, ಹದ ಮಾಡಿದ ಸತ್ತ ಹುಲಿಯ ಚರ್ಮ ಅಥವಾ ಜಿಂಕೆಯ ಚರ್ಮದ ಮೇಲೇ ಕುಳಿತು ಮಠಾಧೀಶರು ಧರ್ಮ ಬೋಧನೆ ಮಾಡಿದ್ದನ್ನೂ ನಮ್ಮ ಧಾರ್ಮಿಕ ಪರಂಪರೆ ನೋಡಿದೆಯಲ್ಲ?ದನದ ಮಾಂಸ ತಿನ್ನುವುದು ಮತ್ತು ದನದ ಚರ್ಮ ಬಳಸುವುದು ನಮ್ಮ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಬಗೆಯನ್ನು ಮತ್ತೆ ಮತ್ತೆ ವಿವರಿಸಬೇಕಿಲ್ಲ. ದಲಿತರ ಬದುಕಿನಲ್ಲಿ ಅವುಗಳ ಪ್ರಾಮುಖ್ಯವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ಸಂಘರ್ಷ ಇಂದು ನಿನ್ನೆಯದಲ್ಲ. ಸುಮ್ಮನೆ ಜ್ಞಾಪಿಸಿಕೊಳ್ಳುವುದಾದರೆ, ಕಾಯಕಜೀವಿಗಳಾದ ವಚನಕಾರರೇ ಈ ಪ್ರಶ್ನೆಯನ್ನು ಎತ್ತಿಕೊಂಡು ಸರಿಯಾಗಿ ಉತ್ತರಿಸಿದ್ದಾರೆ. ಮೇಲ್ಜಾತಿಯ ಜನರ ಟೊಳ್ಳು ಧಾರ್ಮಿಕತೆಯನ್ನು ಗೇಲಿ ಮಾಡಿದ್ದಾರೆ.ದಲಿತರು ಸುಲಿದ ಪ್ರಾಣಿಗಳ ಚರ್ಮದಿಂದ ತಯಾರಿಸಿದ ‘ಚೀಲ ಅಥವಾ ಕಂಟೈನರ್’ ಗಳಲ್ಲಿ ನೀರು, ತುಪ್ಪ ಮುಂತಾದುವನ್ನು ಶೇಖರಿಸಿ ಅಡುಗೆಮನೆಯಲ್ಲಿ ಇಡುವ ಪದ್ಧತಿ ಆಗಿನ ಕಾಲದಲ್ಲಿತ್ತು. ‘ಹೊಲೆಯ’ ರನ್ನು ದೂರ ಇಟ್ಟು, ಅವರು ಸುಲಿದು ಮಾಡಿದ ಚರ್ಮದ ಚೀಲ ಒಳಗಿಟ್ಟುಕೊಳ್ಳುವುದನ್ನು ಅವರು ಟೀಕಿಸಿದ್ದಾರೆ.‘ಕುರಿಕೋಳಿ ಕಿರುಮೀನು ತಿಂಬವರ ಊರೊಳಗೆ ಇರು ಎಂಬರು, ಅಮೃತಾನ್ನವ ಕರೆವ ಗೋವ ತಿಂಬವರ ಊರಿಂದ ಹೊರಗಿರು ಎಂಬರು. ಆ ತನು ಹರಿಗೋಲಾಯಿತ್ತು, ಬೊಕ್ಕಣ ಸಿದಿಕೆ ಬಾರುಕೋಲು ಪಾದರಕ್ಷೆ ದೇವರ ಮುಂದೆ ಬಾರಿಸಲಿಕ್ಕೆ ಮದ್ದಳೆಯಾಯಿತ್ತು. ಈ ಬುದ್ಧಲಿಕೆಯೊಳಗಣ ತುಪ್ಪವ ಶುದ್ಧ ಮಾಡಿ ತಿಂಬ ಗುಜ್ಜ ಹೊಲೆಯರ ಕಂಡಡೆ ಉದ್ದನೆಯ ಚಮ್ಮಾಳಿಗೆಯ ತೆಕ್ಕೊಂಡು ಬಾಯ ಕೊಯ್ಯುವೆನು’ ಎಂದು ಅಂಬಿಗರ ಚೌಡಯ್ಯ ಗರ್ಜಿಸುತ್ತಾನೆ.ಚರ್ಮದಿಂದ ಮಾಡಿದ ಚೀಲದಲ್ಲಿ (ಅದಕ್ಕೆ ಬುದ್ಧಲಿಕೆ, ಸುದ್ಧಲಿಕೆ, ಶುದ್ಧಲಿಕೆ ಎಂಬ ಹೆಸರುಗಳುಂಟು) ತುಪ್ಪ ತುಂಬಿಟ್ಟುಕೊಂಡು ತಿನ್ನುವ ಮತ್ತು ಚರ್ಮದಿಂದ ಮಾಡಿದ ಚೀಲದಲ್ಲಿ (ಅದಕ್ಕೆ ಸಗ್ಗಳೆ ಇತ್ಯಾದಿ ಹೆಸರುಗಳು) ಶುದ್ಧ ನೀರು ತುಂಬಿಟ್ಟುಕೊಳ್ಳುವ ಮೇಲ್ಜಾತಿಯ ಜನರ ಮಡಿಯನ್ನು ‘ಶೂದ್ರರೆಂಜಲು ಹಾಲು ಮೊಸರು ತುಪ್ಪ’ ಎಂದು ಹಂಗಿಸುವ ಮಡಿವಾಳ ಮಾಚಿದೇವ, ‘ಆ ಹೊಲೆಯರ ಎಂಜಲ ತೊಗಲ ಸಗ್ಗಳೆಯಲ್ಲಿ ಉದಕವ ಕೊಂಬಿರಿ ಹದಿನೆಂಟು ಜಾತಿಗೆ ಅಧಿಕರೆನಿಸಿಕೊಂಬಿರಿ ದ್ವಿಜರೆಲ್ಲರಿಗೆ ಲೆಕ್ಕವಿಲ್ಲದ ನರಕ’ ಎಂದು ಚುಚ್ಚುತ್ತಾನೆ. ‘ಸಿದ್ಧಲಿಕೆಯ ತುಪ್ಪವನು ಸಗ್ಗಳೆಯ ನೀರನು ಶುದ್ಧವೆಂದು ಕುಡಿದ ವಿಪ್ರರಿಗೆ ನಾಯಕನರಕ ತಪ್ಪದು’ ಎಂದು ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಹೇಳುತ್ತಾಳೆ.ಆದರೆ ಈ ಹೊತ್ತಿನಲ್ಲಿ ಗೋವಿನ ಹಾಡು ದಲಿತರ ನೋವಿನ ಹಾಡು ಆಗಿಬಿಟ್ಟಿದೆ. ಗೋವಿನ ಹೆಸರಿನಲ್ಲಿ ಅವರನ್ನು ಹೊಡೆಯುವ ಬಡಿಯುವ ಕ್ರೌರ್ಯ ಹೆಚ್ಚುತ್ತಿದೆ. ದಲಿತರ ಜೊತೆ ಮುಸ್ಲಿಮರ ಮೇಲೂ ದಾಳಿ ಇನ್ನಿಲ್ಲದಂತೆ ನಡೆಯುತ್ತಿದೆ.ನಮ್ಮ ದೇಶದ ಚರಿತ್ರೆಯಲ್ಲಿ ಉದ್ದಕ್ಕೂ ಗೋಹತ್ಯೆ ಎನ್ನುವುದು ಧರ್ಮಕ್ಕೆ ಮಾತ್ರವಲ್ಲ, ರಾಜಕಾರಣಕ್ಕೂ ಬಳಕೆಯಾಗಿದೆ. ಆದರೆ ರೈತರ ಹಿತ, ಹಳ್ಳಿಯ ಆರ್ಥಿಕತೆ ಇವುಗಳ ದೃಷ್ಟಿಯಿಂದಲೂ ಅದರ ನಿಷೇಧ ಆಗಿದೆ. ಸುಮಾರು ಸಾವಿರ ವರ್ಷಗಳ ಮುಸ್ಲಿಮರ ಆಡಳಿತದಲ್ಲಿ ಅದಕ್ಕೆ ಸಿಕ್ಕ ಆಯಾಮಗಳೇ ಬೇರೆ. ಆಮೇಲೆ ಬ್ರಿಟಿಷರು ನಮ್ಮ ಹಿಂದುಮುಸ್ಲಿಮ್ ಸೈನಿಕರು ಹಿಡಿವ ಶಸ್ತ್ರಾಸ್ತ್ರಗಳಿಗೆ ದನದ, ಹಂದಿಯ ಮೇಣ ಹಚ್ಚಿದ್ದು ಏಕೆ ಎನ್ನುವುದು ಎಲ್ಲರಿಗೂ ಗೊತ್ತು.ಸಿಖ್ ಧರ್ಮದ ಮೇಲೆ ಯುದ್ಧ ಸಾರಿದಾಗ, ಅವರ ಪೂಜಾ ಕ್ಷೇತ್ರದ ಕೊಳಕ್ಕೆ ದನಗಳ ರಕ್ತ ಸುರಿದ ಕೊಳಕರೂ ಇದ್ದರು. ಆದರೆ ದಲಿತರು ಮತ್ತು ಗೋವಿನ ನಡುವೆ ಇರುವ ನಂಟು ಮತ್ತು ಸಂಕಟ ಬೇರೆ ಬಗೆಯದು. ಈಗ ಹುಸಿ ಧಾರ್ಮಿಕತೆಯ ಅಟ್ಟಹಾಸಕ್ಕೆ ಗೋರಕ್ಷಣೆಯ ನೆಪ ಸಿಕ್ಕಿದೆ. ಆದರೆ ಅದರ ದಾಳಿ  ‘ಹಿಂದು’ ಗಳಾದ ದಲಿತರ ಮೇಲೂ ಉಗ್ರವಾಗಿ ನಡೆಯುತ್ತಿದೆ. ನಮ್ಮ ಚಿಕ್ಕಮಗಳೂರಿನಿಂದ ಹಿಡಿದು ದೇಶದ ಎಲ್ಲ ಚಿಕ್ಕ ದೊಡ್ಡ ಊರುಗಳಲ್ಲಿ ಊರಿನ ಪುಂಡ ಪೋಕರಿಗಳೂ ಸೇರಿಕೊಂಡು ‘ಗೋರಕ್ಷಕ ಪಡೆ’ಗಳನ್ನು ಕಟ್ಟುತ್ತಿದ್ದಾರೆ.ವಿಚಿತ್ರವೆಂದರೆ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರ ಈಗ ಏನೆಲ್ಲ ಕಾರಣಗಳಿಗಾಗಿ ಶೇ 16.5 ರಷ್ಟು ಮತಗಳ ಬಲ ಹೊಂದಿರುವ ದಲಿತರನ್ನು ರಾಜಕೀಯವಾಗಿ ಒಳಗೊಳ್ಳಲು ಬೇಷರತ್ ಕಸರತ್ತುಗಳನ್ನು ಮಾಡುತ್ತಿದೆ. ಆದರೆ ದಲಿತರ ಮೇಲಿನ ದೌರ್ಜನ್ಯಕ್ಕೆ ಅದರ ಧಾರ್ಮಿಕ ದೃಷ್ಟಿಕೋನವೇ ಹೊಸ ನೆಪಗಳನ್ನು ಒದಗಿಸುತ್ತಿದೆ.ಜಾಗತೀಕರಣ, ಉದಾರೀಕರಣ ಮತ್ತು ಧಾರ್ಮಿಕರಾಜಕಾರಣ ಈ ಮೂರೂ ಒಟ್ಟಿಗೆ ಬದುಕುವುದು ಭಾರತದಂಥ ದೇಶದಲ್ಲಿ ಅಸಾಧ್ಯವಲ್ಲ. ಮನುವಾದವನ್ನು ವಿರೋಧಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಅಂತರರಾಷ್ಟ್ರೀಯ ಮಹತ್ವದ ಅದ್ಭುತ ಸಭಾಂಗಣವನ್ನು ಕಟ್ಟಲು ಕೇಂದ್ರ ಸರ್ಕಾರ ಉದ್ಯುಕ್ತವಾಗಿದೆ.ಆದರೆ ನಮ್ಮ ಸಾಮಾಜಿಕ ಸಂರಚನೆಯ ಅಡಿಪಾಯದಲ್ಲಿದ್ದ ಅಷ್ಟಿಷ್ಟು ಸೌಹಾರ್ದವನ್ನೂ ಹುಸಿ ಧಾರ್ಮಿಕತೆಯ ಗೂಳಿ ತಿಂದುಹಾಕುತ್ತಿದೆ. ಗುಜರಾತ್ ಪ್ರಕರಣ ದಲಿತರಲ್ಲಿ ಮೂಡಿಸಿರುವ ಆಕ್ರೋಶ, ಹೊಸದೇನನ್ನೋ ಹೇಳುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry