7

ಭಾರತೀಯ ಮಾರ್ಕ್ಸ್‌ವಾದಿಗಳ ದ್ವಂದ್ವ

ರಾಮಚಂದ್ರ ಗುಹಾ
Published:
Updated:
ಭಾರತೀಯ ಮಾರ್ಕ್ಸ್‌ವಾದಿಗಳ ದ್ವಂದ್ವ

ಟೈಮ್ಸ್ ಲಿಟರರಿ ಸಪ್ಲಿಮೆಂಟ್ ನಿಯತಕಾಲಿಕದಲ್ಲಿ ಈಜಿಪ್ಟ್‌ನ ಬರಹಗಾರ ಅಹ್ದಾಫ್ ಸೋಯಿಫ್  ಇತ್ತೀಚೆಗೆ ಬರೆದ ಲೇಖನದಲ್ಲಿ, ಪ್ಯಾಲೆಸ್ಟೀನಿಯರ ಬಗ್ಗೆ ಬರುತ್ತಿರುವ ಪುಸ್ತಕಗಳು ಮತ್ತು ಪ್ರಬಂಧಗಳ ನಿರಂತರ ಪ್ರವಾಹದ ಬಗ್ಗೆ ವಿಸ್ಮಯ ವ್ಯಕ್ತಪಡಿಸುತ್ತಾರೆ. ಇದರಲ್ಲಿ ಪ್ಯಾಲೆಸ್ಟೀನಿಯರೇ ಬರೆದ ಕೃತಿಗಳಿವೆ, ಅಷ್ಟೇ ಅಲ್ಲ ಇಸ್ರೇಲಿಗಳು, ಅಮೆರಿಕನ್ನರು, ದಕ್ಷಿಣ ಆಫ್ರಿಕನ್ನರು, ಬ್ರಿಟಿಷರು, ಡೆನ್ಮಾರ್ಕ್‌ನವರು ಮತ್ತು ಭಾರತೀಯರು ಬರೆದ ಕೃತಿಗಳೂ ಇವೆ.ಈ ಬಗ್ಗೆ ಸೋಯಿಫ್ ಹೀಗೆ ಪ್ರತಿಕ್ರಿಯೆ ನೀಡುತ್ತಾರೆ: ‘ಹೀಗೆ ಆಗಲು ಐದು ದಶಕ ಬೇಕಾಯಿತು. ಈಗ ನಿರ್ಮಾಣವಾಗಿರುವ ಸ್ಥಿತಿ ಬೆಳೆಯುತ್ತಲೇ ಹೋಗುತ್ತದೆ. ಎಲ್ಲೆಂದರಲ್ಲಿ ಪುಸ್ತಕಗಳು ತುಂಬಿ ತುಳುಕುತ್ತಿವೆ. ಹೀಗೆ ಪ್ಯಾಲೆಸ್ಟೀನ್‌ನ ಕತೆ ಇಡೀ ಜಗತ್ತಿಗೆ ವಿಸ್ತರಿಸಿಕೊಂಡಿದೆ. ನಿಜವಾಗಿಯೂ ಇದು ಪ್ಯಾಲೆಸ್ಟೀನಿಯನ್ನರ ಅತ್ಯಂತ ದೊಡ್ಡ ಸಾಧನೆ. ತಮ್ಮ ತಾಯ್ನೆಲ ಸೂರೆ ಹೋಗಿದ್ದರೂ ಅತ್ಯಂತ ನಯ ನಾಜೂಕಿನ ರಾಜಕೀಯ, ಕಾನೂನು ಮತ್ತು ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಮತ್ತು ಜಗತ್ತಿನ ಅತ್ಯಂತ ಶಕ್ತಿಶಾಲಿ ಗೆಳೆಯರನ್ನು ಹೊಂದಿರುವ ದೇಶವೊಂದರ ಮುಂದೆ ಅವರು (ಪ್ಯಾಲೆಸ್ಟೀನಿಯರು) ಒಂದು ಸಮುದಾಯ ಮತ್ತು ಸಂಸ್ಕೃತಿಯಾಗಿ ವಿನಾಶಗೊಳ್ಳುವುದಿಲ್ಲ ಎಂಬ ದೃಢ ನಿರ್ಧಾರ ಕೈಗೊಂಡು ನಿಂತಿದ್ದಾರೆ’.ಸೋಯಿಫ್‌ ಅವರ ಮನಕಲಕುವ ಈ ಮಾತುಗಳು ಭಾಗಶಃ ಸಮರ್ಥನೀಯವೂ ಹೌದು. ಸ್ವತಃ ಸಾಕಷ್ಟು ಸಂಕಷ್ಟ ಅನುಭವಿಸಿರುವ ಸಮುದಾಯವೊಂದು ಪ್ಯಾಲೆಸ್ಟೀನಿಯನ್ನರ ನೆಲವನ್ನು ಕಿತ್ತುಕೊಂಡಿರುವುದು ಮತ್ತು ಅವರನ್ನು ನಿರಂತರವಾಗಿ ದಮನ ಮಾಡುತ್ತಲೇ ಸಾಗಿರುವುದು ಆಧುನಿಕ ಇತಿಹಾಸದ ಅತ್ಯಂತ ದುಃಖದ ಪ್ರಕರಣಗಳಲ್ಲಿ ಒಂದು ಎಂದು ಪರಿಗಣಿಸಲೇಬೇಕು. ಶತಮಾನಗಳ ಕಾಲ ಯಹೂದಿಗಳಿಗೆ ಕೊಟ್ಟ ಅನಾಗರಿಕ ಕಿರುಕುಳದ ಪಾಪವನ್ನು ತೊಳೆದುಕೊಳ್ಳುವುದಕ್ಕಾಗಿ ಪಶ್ಚಿಮದ ಶಕ್ತಿಗಳು ಅವರಿಗಾಗಿ ತಾಯ್ನಾಡೊಂದನ್ನು ಸೃಷ್ಟಿಸಿಕೊಟ್ಟವು. ಆದರೆ ಹಾಗೆ ಮಾಡುವಾಗ ಪ್ಯಾಲೆಸ್ಟೀನ್‌ನಲ್ಲಿ ನೆಲೆಸಿದ್ದ ಜನರ ಇತಿಹಾಸ, ಸಂಸ್ಕೃತಿ ಮತ್ತು ಅತ್ಯಂತ ಸ್ಪಷ್ಟವಾದ ಭೌತಿಕ ಹಿತಾಸಕ್ತಿಗಳನ್ನು ಕಡೆಗಣಿಸಲಾಯಿತು. ಇಸ್ರೇಲ್ ಸ್ಥಾಪನೆಗೊಂಡ ನಂತರ ಈ ದೇಶಕ್ಕೆ ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ಶಕ್ತಿಯುತ ದೇಶವಾದ ಅಮೆರಿಕದ ಗಟ್ಟಿ ಮತ್ತು ವಿಮರ್ಶಾತೀತ ಬೆಂಬಲ ದೊರೆಯಲಾರಂಭಿಸಿತು. ವಿಶ್ವಸಂಸ್ಥೆಯ ನಿರ್ಣಯಗಳ ನಿರಂತರ ಉಲ್ಲಂಘನೆ, ಪ್ಯಾಲೆಸ್ಟೀನ್ ದೇಶ ಸ್ಥಾಪನೆಯ ಭರವಸೆಯಿಂದ ಹಿಂದೆ ಸರಿತ, ಆಕ್ರಮಿತ ಪ್ರದೇಶಗಳಲ್ಲಿ ತನ್ನ ಜನರನ್ನು ನೆಲೆಯೂರಿಸುವ ಭಾರಿ ಅಭಿಯಾನಗಳಿಗೆಲ್ಲ ಅಮೆರಿಕದ ಎಲ್ಲ ಅಧ್ಯಕ್ಷರು ಪ್ರೋತ್ಸಾಹ ಮತ್ತು ಅನುಮೋದನೆ ನೀಡಿದ್ದಾರೆ. ಇದರಲ್ಲಿ ಡೆಮಾಕ್ರಾಟ್ ಪಕ್ಷದವರು ಮತ್ತು ರಿಪಬ್ಲಿಕನ್ ಪಕ್ಷದವರು ಸೇರಿದ್ದಾರೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ಎಡಪಂಥೀಯರು ಪ್ಯಾಲೆಸ್ಟೀನಿಯನ್ನರ ಪರವಾಗಿದ್ದಾರೆ. ನಮ್ಮ ದೇಶದ ಎಡಪಂಥೀಯರೂ ಇದಕ್ಕೆ ಹೊರತಲ್ಲ. ಭಾರತೀಯ ಮಾರ್ಕ್ಸ್‌ವಾದಿಗಳು ಅದರಲ್ಲೂ ವಿಶೇಷವಾಗಿ ಸಿಪಿಎಂ ಪರವಾಗಿರುವವರು ಸಮಾವೇಶಗಳು ಮತ್ತು ವಿಚಾರ ಸಂಕಿರಣಗಳನ್ನು ನಡೆಸಿದ್ದಾರೆ. ಲೇಖನಗಳು, ಪುಸ್ತಕಗಳು ಮತ್ತು ಕವಿತೆಗಳನ್ನು ಬರೆದಿದ್ದಾರೆ. ಇಸ್ರೇಲ್‌ನ ಗಟ್ಟಿ ಮಿತ್ರ ಪಕ್ಷವಾದ ಅಮೆರಿಕದ ಬಗ್ಗೆ ಇರುವ ತೀವ್ರವಾದ ಅಪಥ್ಯದ (ದ್ವೇಷ ಎಂದು ಹೇಳಲಾಗದು) ಕಾರಣದಿಂದ ಪ್ಯಾಲೆಸ್ಟೀನಿಯರಿಗೆ ಮಾರ್ಕ್ಸ್‌ವಾದಿಗಳ ಬೆಂಬಲ ಇನ್ನಷ್ಟು ತೀವ್ರಗೊಂಡಿತು. ಶೀತಲ ಸಮರದ ಆರಂಭದ ದಿನಗಳಿಂದಲೂ ಜಾಗತಿಕ ಮಟ್ಟದಲ್ಲಿ ಮಾರ್ಕ್ಸ್‌ವಾದಿಗಳು ಅಮೆರಿಕವನ್ನು ದೆವ್ವ ಎಂಬಂತೆ ಬಿಂಬಿಸುತ್ತಲೇ ಬಂದಿದ್ದಾರೆ.ಪ್ಯಾಲೆಸ್ಟೀನಿಯನ್ನರನ್ನು ಘೋರವಾಗಿ ನಡೆಸಿಕೊಳ್ಳಲಾಗಿದೆ ಎಂಬುದರಲ್ಲಿ ಸ್ವಲ್ಪವೂ ಅನುಮಾನ ಇಲ್ಲ. ಭಾರತದಲ್ಲಿ ನಮಗೆ ಹತ್ತಿರವಾಗಿ ಬದುಕುತ್ತಿರುವ ಟಿಬೆಟಿಯನ್ನರನ್ನೂ ಇಷ್ಟೇ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಚೀನೀಯರ ಕೈಯಿಂದ ಅಪಾರ ಪ್ರಮಾಣದಲ್ಲಿ ಶೋಷಣೆಗೆ ಒಳಗಾದರೂ ಟಿಬೆಟಿಯನ್ನರು ತಮ್ಮ ಸ್ಥೈರ್ಯ ಕಳೆದುಕೊಂಡಿಲ್ಲ. ಸೋಯಿಫ್ ಅವರ ಪದಗಳನ್ನೇ ಬಳಸುವುದಾದರೆ ‘ಒಂದು ಸಮುದಾಯ ಮತ್ತು ಸಂಸ್ಕೃತಿಯಾಗಿ ವಿನಾಶಗೊಳ್ಳದಿರಲು ಟಿಬೆಟಿಯನ್ನರು ಕೂಡ ದೃಢ ನಿರ್ಧಾರ ಕೈಗೊಂಡಿದ್ದಾರೆ’. ವಿಷಾದವೆಂದರೆ, ಪ್ಯಾಲೆಸ್ಟೀನಿಯನ್ನರ ರಕ್ಷಣೆಗೆ ಧಾವಿಸಲು ಹಾತೊರೆಯುವ ಜಾಗತಿಕ ಮಟ್ಟದ ಎಡಪಂಥೀಯ ಚಿಂತಕರು ಟಿಬೆಟಿಯನ್ನರ ದುರಂತವನ್ನು ನಿರ್ಲಕ್ಷಿಸಿದ್ದಾರೆ ಮತ್ತು ಕಡೆಗಣಿಸಿದ್ದಾರೆ.‌

ಭಾರತದ ಮಾರ್ಕ್ಸ್‌ವಾದಿಗಳ ಬಗ್ಗೆ ಹೇಳುವುದಾದರೆ ಅವರು ಈ ವಿಚಾರದಲ್ಲಿ ಸುಮ್ಮನೆ ಕುಳಿತಿರುವುದಷ್ಟೇ ಅಲ್ಲ; ಟಿಬೆಟಿಯನ್ನರನ್ನು ಸುಮ್ಮನಾಗಿಸುವ ಚೀನಾದ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಟಿಬೆಟನ್ನು ಆಕ್ರಮಿಸಿ, ಟಿಬೆಟಿಯನ್ನರ ಸಂಸ್ಕೃತಿಯನ್ನು ನಾಶಪಡಿಸುವ ಮೂಲಕ ಅಲ್ಲಿ ಕಮ್ಯುನಿಸ್ಟರು ‘ಅಭಿವೃದ್ಧಿ’ಗೆ ಕಾರಣರಾಗಿದ್ದಾರೆ ಎಂಬ ಚೀನಾದ ಕಮ್ಯುನಿಸ್ಟ್ ಪಕ್ಷದ ನಿಲುವನ್ನು ಭಾರತೀಯ ಮಾರ್ಕ್ಸ್‌ವಾದಿಗಳು ಅತ್ಯುತ್ಸಾಹದಿಂದ ಅನುಮೋದಿಸುತ್ತಾರೆ. ಭಾರತದ ಮಾರ್ಕ್ಸ್‌ವಾದಿಗಳು ‘ಬಂಡವಾಳಶಾಹಿ’ ಅಮೆರಿಕದ ಬಗ್ಗೆ ಹೊಂದಿರುವ ತರ್ಕರಹಿತ ದ್ವೇಷದ ರೀತಿಯಲ್ಲಿಯೇ ‘ಕಮ್ಯುನಿಸ್ಟ್’ ಚೀನಾದ ಬಗ್ಗೆ ಅಂಧವಾದ ನಿಷ್ಠೆ ಹೊಂದಿದ್ದಾರೆ. ಹಾಗಾಗಿಯೇ ಒಂದೆಡೆ ಅವರು ಪ್ಯಾಲೆಸ್ಟೀನಿಯನ್ನರ ನೋವಿಗೆ ಸಹಾನುಭೂತಿಯನ್ನು ತೋರುತ್ತಾರೆ  ಮತ್ತು ಅವರ ನೋವು ನಿವಾರಣೆಯಲ್ಲಿ ಆಸಕ್ತಿಯನ್ನೂ ಹೊಂದಿದ್ದಾರೆ. ಆದರೆ ಇನ್ನೊಂದೆಡೆ, ಟಿಬೆಟಿಯನ್ನರ ನೋವಿಗೆ ನಿರ್ಲಕ್ಷ್ಯ ಮತ್ತು ತಾತ್ಸಾರವನ್ನು ಹೊಂದಿದ್ದಾರೆ.ಪ್ಯಾಲೆಸ್ಟೀನಿಯನ್ನರ ಬಗ್ಗೆ ಇಸ್ರೇಲಿಗಳು ನಡೆದುಕೊಳ್ಳುತ್ತಿರುವ ರೀತಿ ನಾಗರಿಕವಲ್ಲ ಎಂಬುದು ನಿಜ; ಹಾಗೆಯೇ ಟಿಬೆಟ್ ಬಗ್ಗೆ ಚೀನೀಯರು ನಡೆದುಕೊಳ್ಳುತ್ತಿರುವ ರೀತಿ ಅದಕ್ಕಿಂತಲೂ ಬಹಳ ಕೆಟ್ಟದಾಗಿದೆ. ವೆಸ್ಟ್ ಬ್ಯಾಂಕ್‌ನಲ್ಲಿ ಇಸ್ರೇಲಿಗಳು ನಿರ್ಮಿಸಿರುವ ಕಾಲೊನಿಗಳ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ; ಆದರೆ ಹನ್ ಚೀನೀಯರು ಟಿಬೆಟ್ ಮೇಲೆ ನಡೆಸಿರುವ ಭೌಗೋಳಿಕ ಆಕ್ರಮಣಕ್ಕೆ ಹೋಲಿಸಿದರೆ ಅದು ನಗಣ್ಯ ಅನಿಸಿಬಿಡುತ್ತದೆ. ಇಸ್ರೇಲ್ ಜೈಲುಗಳಲ್ಲಿರುವ ಪ್ಯಾಲೆಸ್ಟೀನ್ ಭಿನ್ನಮತೀಯರಿಗಿಂತ ಚೀನಾದ ಸೆರೆಮನೆಗಳಲ್ಲಿರುವ ಟಿಬೆಟ್ ಭಿನ್ನಮತೀಯರನ್ನು ಹೆಚ್ಚು ಅನಾಗರಿಕವಾಗಿ ನೋಡಿಕೊಳ್ಳಲಾಗುತ್ತಿದೆ. ಚೀನೀಯರು ಟಿಬೆಟ್‌ನಲ್ಲಿ ನಡೆಸುತ್ತಿರುವ ನೀರಿನ ಸಂಪನ್ಮೂಲಗಳ ದಿಕ್ಕು ತಿರುಗಿಸುವಿಕೆ, ಮಿತಿ ಮೀರಿದ ಗಣಿಗಾರಿಕೆ ಮುಂತಾದ ಪಾರಿಸರಿಕ ಸಾಮ್ರಾಜ್ಯಶಾಹಿತ್ವ ಪ್ಯಾಲೆಸ್ಟೀನ್‌ನಲ್ಲಿ ಇಸ್ರೇಲಿಗಳು ನಡೆಸುತ್ತಿರುವುದಕ್ಕಿಂತ ಹೆಚ್ಚು ವಿನಾಶಕಾರಿಯಾದುದು ಮತ್ತು ದೂರಗಾಮಿ ಪ್ರತಿಕೂಲ ಪರಿಣಾಮ ಉಳ್ಳದ್ದಾಗಿದೆ. ಹಾಗೆಯೇ, ಪ್ಯಾಲೆಸ್ಟೀನಿಯನ್ನರ ಪ್ರಾರ್ಥನಾ ಸ್ಥಳಗಳನ್ನು ಇಸ್ರೇಲಿಗಳು ಮುಟ್ಟಿಲ್ಲ. ಆದರೆ ಟಿಬೆಟಿಯನ್ನರ ಹಲವು ಧಾರ್ಮಿಕ ವಿಹಾರಗಳನ್ನು ಚೀನೀಯರು ಧ್ವಂಸ ಮಾಡಿದ್ದಾರೆ, ಹಲವನ್ನು ಲೂಟಿ ಮಾಡಿದ್ದಾರೆ.ಎರಡನೇ ವ್ಯತ್ಯಾಸ ಇರುವುದು ಇವರು ಅಳವಡಿಸಿಕೊಂಡ ಪ್ರತಿಭಟನೆಯ ವಿಧಾನಕ್ಕೆ ಸಂಬಂಧಿಸಿದ್ದಾಗಿದೆ. 1959ರಲ್ಲಿ ವಿಫಲವಾದ ದಂಗೆಯನ್ನು ಹೊರತುಪಡಿಸಿದರೆ ಟಿಬೆಟಿಯನ್ನರು ಬಹುತೇಕ ಅಹಿಂಸಾ ವಿಧಾನಗಳನ್ನೇ ಅಳವಡಿಸಿಕೊಂಡಿದ್ದಾರೆ. ಅವರು ಅನುಸರಿಸಿದ ಯಾವುದೇ ಹಿಂಸೆ ತಮ್ಮನ್ನು ತಾವೇ ಹಿಂಸಿಸಿಕೊಳ್ಳುವ ಪ್ರತಿಭಟನೆಯಾಗಿದೆ. ಚೀನಾದ ದೌರ್ಜನ್ಯವನ್ನು ಪ್ರತಿಭಟಿಸಿ ಹಲವು ಭಿಕ್ಕುಗಳು ಆತ್ಮಾಹುತಿ ಮಾಡಿಕೊಂಡಿದ್ದಾರೆ. ಆದರೆ ಪ್ಯಾಲೆಸ್ಟೀನ್ ಹೋರಾಟಗಾರರು ಹಿಂಸೆಯನ್ನೇ ಮಂತ್ರವಾಗಿ ಹೊಂದಿದ್ದಾರೆ. ಆಗಾಗ ಆತ್ಮಹತ್ಯಾ ಬಾಂಬರುಗಳನ್ನು ಕಳುಹಿಸಿ ಇಸ್ರೇಲಿನಲ್ಲಿರುವ ಮುಗ್ಧ ನಾಗರಿಕರ ಹತ್ಯೆ ಮಾಡುತ್ತಿದ್ದಾರೆ. ಪ್ರತಿಭಟನೆಯಲ್ಲಿನ ಈ ಭಿನ್ನತೆಗೆ ಸ್ವಲ್ಪಮಟ್ಟಿಗೆ ಅಥವಾ ಬಹುಮಟ್ಟಿಗೆ ಈ ಚಳವಳಿಗಳ ನಾಯಕತ್ವದಲ್ಲಿ ಇರುವ ವ್ಯತ್ಯಾಸವೂ ಕಾರಣ. ಹೆಚ್ಚು ಸೌಮ್ಯವಾಗಿ ಹೇಳುವುದಾದರೆ ಯಾಸರ್ ಅರಾಫತ್, ದಲೈಲಾಮ ಅಲ್ಲ.ಮೂರನೇ ವ್ಯತ್ಯಾಸ ಹೆಚ್ಚು ಮುಖ್ಯವಾದುದು. ಇಸ್ರೇಲ್‌ನಲ್ಲಿಯೇ ದಿಟ್ಟ ಮತ್ತು ಗೌರವಾನ್ವಿತ ಇಸ್ರೇಲಿಗಳನ್ನು ಒಳಗೊಂಡ ಒಂದು ‘ಶಾಂತಿ ಸಮಿತಿ’ ಇದೆ. ಇವರು ತಮ್ಮ ಸರ್ಕಾರ ನಡೆಸುತ್ತಿರುವ ವಿಸ್ತರಣಾವಾದಿ ನೀತಿಗಳನ್ನು ನಿರಂತರವಾಗಿ ವಿರೋಧಿಸುತ್ತಲೇ ಇದ್ದಾರೆ. ಈ ‘ಶಾಂತಿದೂತ’ರಲ್ಲಿ ಇಸ್ರೇಲ್‌ನ ಪ್ರಮುಖ ಭಾರತೀಯ ಅಧ್ಯಯನದ ವಿದ್ವಾಂಸ ಡೇವಿಡ್ ಶುಲ್ಮನ್ ಕೂಡ ಇದ್ದಾರೆ. ಅವರ ಬೌದ್ಧಿಕ ಕೃತಿಗಳಲ್ಲಿ ತಮಿಳು ಮತ್ತು ತೆಲುಗು ಕಾವ್ಯದ ಅಧ್ಯಯನದ ಪುಸ್ತಕಗಳೂ ಸೇರಿವೆ. ಪ್ಯಾಲೆಸ್ಟೀನ್ ನೆಲದ ಮೇಲೆ ಇಸ್ರೇಲ್‌ನ ಆಕ್ರಮಣವನ್ನು ಅಹಿಂಸಾತ್ಮಕವಾಗಿ ಪ್ರತಿರೋಧಿಸುವ ತಮ್ಮ ಮತ್ತು ಇತರ ಸಮಾನ ಮನಸ್ಕರ ಪ್ರಯತ್ನಗಳ ಬಗ್ಗೆಯೂ ಅವರು ಪುಸ್ತಕವನ್ನು ಬರೆದಿದ್ದಾರೆ.ಇಸ್ರೇಲ್‌  ತನ್ನ ಗಡಿಗಳೊಳಗೆ ಸ್ವತಂತ್ರ ಮಾಧ್ಯಮ ಮತ್ತು ಸ್ವಾಯತ್ತ ನ್ಯಾಯಾಂಗವನ್ನು ಹೊಂದಿರುವ ಪ್ರಜಾಪ್ರಭುತ್ವ ವ್ಯವಸ್ಥೆ. ಪ್ಯಾಲೆಸ್ಟೀನಿಯನ್ನರ ಹಕ್ಕುಗಳ ಪರವಾಗಿ ಈಜಿಪ್ಟ್ ಅಥವಾ ಭಾರತೀಯ ಚಿಂತಕರು ನಡೆಸಿದ ಪ್ರತಿಪಾದನೆಯಷ್ಟೇ ಪ್ರಬಲವಾಗಿ ಇಸ್ರೇಲ್‌ನ ಚಿಂತಕರು ಮತ್ತು ಹೋರಾಟಗಾರರು ಮಾತನಾಡಿದ್ದಾರೆ. ಆಕ್ರಮಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಅಥವಾ ಇಸ್ರೇಲ್‌ ಸರ್ಕಾರ ನಡೆಸುತ್ತಿರುವ ಅಕ್ರಮಗಳ ಬಗ್ಗೆ ಇಸ್ರೇಲ್‌ನ ಮಾಧ್ಯಮಗಳು ನಡೆಸುತ್ತಿರುವ ವರದಿಗಾರಿಕೆಯಲ್ಲಿನ ಸ್ವಾತಂತ್ರ್ಯ ಕಣ್ಣಿಗೆ ಕಟ್ಟುವಂತಿದೆ. ಅಮೆರಿಕದ ಮಾಧ್ಯಮ ಈ ಬಗ್ಗೆ ಮಾಡುವ ವರದಿಗಳನ್ನು ನೋಡಿದರೆ ಇಸ್ರೇಲ್ ಮಾಧ್ಯಮಕ್ಕೆ ಇರುವ ಸ್ವಾತಂತ್ರ್ಯ ಅರ್ಥವಾಗುತ್ತದೆ. ಯಾಕೆಂದರೆ ಅಮೆರಿಕದ ಮಾಧ್ಯಮ ಪ್ಯಾಲೆಸ್ಟೀನ್ ಮತ್ತು ಇಸ್ರೇಲ್‌ ನಡುವಣ ಸಂಘರ್ಷದಲ್ಲಿ ಸಾಮಾನ್ಯವಾಗಿ ಇಸ್ರೇಲ್ ಪರವಾಗಿರುತ್ತದೆ ಅಥವಾ ಅನುಮಾನದ ಲಾಭವನ್ನು ಇಸ್ರೇಲ್‌ಗೆ ಕೊಡಲು ಬಯಸುತ್ತದೆ.ಆದರೆ, ಚೀನಾದೊಳಗೆ ಟಿಬೆಟಿಯನ್ನರ ಪರವಾಗಿ ಮಾತನಾಡುವ ಧ್ವನಿಗಳಾಗಲಿ, ಗುಂಪುಗಳಾಗಲಿ ಇಲ್ಲವೇ ಇಲ್ಲ. ಇದಕ್ಕೆ ಒಂದು ಕಾರಣ ಚೀನಾ  ನಿರಂಕುಶ ಆಡಳಿತದ ರಾಷ್ಟ್ರ.  ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಅಲ್ಲಿ ಸರ್ಕಾರದ ನೀತಿಯನ್ನು ಟೀಕಿಸಿ ಲೇಖನ ಬರೆದ ನೊಬೆಲ್ ಪ್ರಶಸ್ತಿ ಪುರಸ್ಕೃತ ಲಿಯು ಕ್ಸಿಯಾಬಿಯೊರಂತಹ ಬರಹಗಾರನನ್ನೂ ಹತ್ತು ವರ್ಷ ಸೆರೆಮನೆಗೆ ತಳ್ಳಲಾಗುತ್ತದೆ. ಇನ್ನೊಂದು ಹೆಚ್ಚು ಬಲವಾದ ಕಾರಣ ಚೀನಾದಲ್ಲಿ ವ್ಯಾಪಕವಾಗಿರುವ ಹನ್ ಅಂಧಾಭಿಮಾನ ಮತ್ತು ಚೀನಾದ ಎಲ್ಲರೂ ಅಲ್ಲದಿದ್ದರೂ ಹೆಚ್ಚಿನ ಚಿಂತಕರು ಇದರ ಭಾಗವೇ ಆಗಿರುವುದು. ಚೀನಾ ಒಂದು ಹನ್ ದೇಶ. ಹಾಗಾಗಿ  ಟಿಬೆಟಿಯನ್ನರು, ಉಯ್ಗುರ್‌ ಜನಾಂಗದವರು ಮತ್ತು ಇತರ ಎಲ್ಲ ಅಲ್ಪಸಂಖ್ಯಾತ ಜನಾಂಗಗಳು ಮತ್ತು ಧರ್ಮಗಳು ಎಲ್ಲ ರೀತಿಯಲ್ಲಿಯೂ ತಾವು ಹೇಳಿದ್ದೇ ಸರಿ ಎಂಬುದನ್ನು  ಒಪ್ಪಿಕೊಳ್ಳಬೇಕು ಎಂದು  ಹನ್‌ ಸಮುದಾಯಕ್ಕೆ ಸೇರಿದವರು ಬಯಸುತ್ತಾರೆ.ತಾವು ಅಂತರರಾಷ್ಟ್ರೀಯವಾದಿಗಳು ಮತ್ತು ಸಾಮ್ರಾಜ್ಯಶಾಹಿಯ ವಿರೋಧಿಗಳು ಎಂದು ಸಮಾಜವಾದಿಗಳು ಹೇಳಿಕೊಳ್ಳುತ್ತಾರೆ. ಆದರೆ ಭಾರತದ ಮಾರ್ಕ್ಸ್‌ವಾದಿಗಳು ಈ ತತ್ವವನ್ನು ಅತ್ಯಂತ ಅನುಕೂಲಸಿಂಧು ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಯಾವುದೇ ವಸ್ತುನಿಷ್ಠ ಮಾನದಂಡದಲ್ಲಿ ನೋಡಿದರೂ ಪ್ಯಾಲೆಸ್ಟೀನ್‌ಗೆ ಸಂಬಂಧಿಸಿ ಇಸ್ರೇಲಿಗಳು ವಸಾಹತುಶಾಹಿಗಳಾಗಿದ್ದರೆ, ಟಿಬೆಟ್‌ಗೆ ಸಂಬಂಧಿಸಿ ಚೀನೀಯರು ಇನ್ನೂ ಹೆಚ್ಚು ವಸಾಹತುಶಾಹಿಗಳು. ಎರಡೂ ಪ್ರಕರಣಗಳಲ್ಲಿಯೂ ದುರ್ಬಲ ರಾಷ್ಟ್ರವನ್ನು ದಮನಿಸಲು ಮತ್ತು ಶೋಷಿಸಲು ಸೇನಾ ಬಲ ಮತ್ತು ಸರ್ಕಾರದ ಅಧಿಕಾರವನ್ನು ಬಳಸಿಕೊಳ್ಳಲಾಗಿದೆ.1942ರ ಕ್ವಿಟ್ ಇಂಡಿಯಾ ಚಳವಳಿಗೆ ತೋರಿದ ವಿರೋಧಕ್ಕಾಗಿ ಭಾರತದ ಕಮ್ಯುನಿಸ್ಟರನ್ನು ಟೀಕಿಸಲಾಗುತ್ತಿದೆ. ಆದರೆ ಟಿಬೆಟ್‌ ಮೇಲೆ ಚೀನೀಯರು ನಡೆಸುವ ಕ್ರೌರ್ಯದ ನಾಚಿಕೆಗೇಡಿನ ಸಮರ್ಥನೆಯೇ ಅವರ ಇತಿಹಾಸದಲ್ಲಿರುವ ಅತ್ಯಂತ ಅಪಮಾನಕರ ಕಪ್ಪುಚುಕ್ಕೆ. 1942ರಲ್ಲಿ ಜಾಗತಿಕ ಯುದ್ಧ ನಡೆಯುತ್ತಿತ್ತು. ಅಂತಹ ಸಂದರ್ಭದಲ್ಲಿ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಪಡೆಯುವುದಕ್ಕಿಂತ ಹಿಟ್ಲರ್ ಮತ್ತು ನಾಜಿಗಳನ್ನು ಸೋಲಿಸುವುದು ಹೆಚ್ಚಿನ ಆದ್ಯತೆಯ (ತಾತ್ಕಾಲಿಕವಾಗಿ) ವಿಚಾರ ಎಂದು ಸಭ್ಯ ಮತ್ತು ನಾಗರಿಕ ಜನರು ವಾದಿಸಿದರೆ ಅದು ನ್ಯಾಯಯುತವೆಂದೇ ಹೇಳಬೇಕಾಗುತ್ತದೆ. ಆದರೆ ಚೀನಾ ಮತ್ತು ಟಿಬೆಟ್ ವಿಚಾರದಲ್ಲಿ ಅಂತಹ ದ್ವಂದ್ವವಾಗಲಿ ಅಥವಾ ಸೂಕ್ಷ್ಮತೆಯಾಗಲಿ ಇಲ್ಲ. ಚೀನಾ ಸಾಮ್ರಾಜ್ಯಶಾಹಿ ಮತ್ತು ಆಕ್ರಮಣ ನಡೆಸಿರುವ ಶಕ್ತಿ. ಟಿಬೆಟಿಯನ್ನರು ಬಹುಪಾಲು ಯಾವುದೇ ರಕ್ಷಣೆ ಇಲ್ಲದ ಸಂತ್ರಸ್ತರು. ಹೀಗಿದ್ದರೂ, ಭಾರತದ ಮಾರ್ಕ್ಸ್‌ವಾದಿಗಳು ದಲೈಲಾಮ ಅವರನ್ನು ಇಷ್ಟಬಂದಂತೆ ತೆಗಳಿದ್ದಾರೆ. ಆದರೆ ಟಿಬೆಟ್ ಜನರು ಮತ್ತು ಅವರ ಸಂಸ್ಕೃತಿ ಮೇಲೆ ನಡೆಯುತ್ತಿರುವ ಆಕ್ರಮಣದ ಬಗ್ಗೆ ಮೌನವಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry