5

ಶ್ರೀಮಂತಿಕೆಯ ಹಳತು ಹೊಸತಿನ ನಡುವೆ...

ಪ್ರಸನ್ನ
Published:
Updated:
ಶ್ರೀಮಂತಿಕೆಯ ಹಳತು ಹೊಸತಿನ ನಡುವೆ...

ಈ ಬಾರಿ ಹಳೆಯ ಶ್ರೀಮಂತರ ಬಗ್ಗೆ ಬರೆಯುವುದೆಂದು ನಿರ್ಧರಿಸಿದ್ದೇನೆ. ಇದಕ್ಕೆ ಕಾರಣಗಳಿವೆ. ಹೊಸ ಶ್ರೀಮಂತಿಕೆ ಅರ್ಥವಾಗಬೇಕೆಂದಿದ್ದರೆ ಹಳತಿನೊಟ್ಟಿಗೆ ಅದರ ಹೋಲಿಕೆ ಅತ್ಯಗತ್ಯ. ಹಳತು ಹೊಸತಿನ ವ್ಯತ್ಯಾಸ ಅಗಾಧವಾದದ್ದು ಮಾತ್ರವಲ್ಲ ಸಾಂಸ್ಕೃತಿಕವಾದದ್ದು. ವ್ಯತ್ಯಾಸ ಕೇವಲ ಗಾತ್ರದ್ದಲ್ಲ ಅಥವಾ ಶ್ರೀಮಂತಿಕೆಯ ಹರವಿನಲ್ಲಿಲ್ಲ.ಹಾಗೆ ತಿಳಿಯುವುದು ಸರಳೀಕರಣವಲ್ಲದೆ ಮತ್ತೇನೂ ಅಲ್ಲ. ಹಳ್ಳಿಯ ಸಂತೆಯೂ ಮಾರುಕಟ್ಟೆಯೇ, ಪೇಟೆಯ ಮಾಲ್‌ಗಳೂ ಮಾರುಕಟ್ಟೆಯೇ, ಅಫೀಮು ಗಾಂಜಾ ಮಾರುವವನೂ ವ್ಯಾಪಾರಿಯೇ, ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯವಾಗಿ ಮಾರುವ ದಲ್ಲಾಳಿಯೂ ವ್ಯಾಪಾರಿಯೇ, ಸಿಟಿ ಮಾರ್ಕೆಟ್ಟಿನ ಪಕ್ಕದ ಚರಂಡಿಯ ಬದಿಗೆ ಕುಳಿತು ಪುಟ್ಟ ಪುಟ್ಟ ಕುಪ್ಪೆಗಳಲ್ಲಿ ಅರೆಕೊಳೆತ ಹಣ್ಣು ತರಕಾರಿ ಮಾರುವ ಶೂದ್ರ ಮುದುಕಿಯೂ ವ್ಯಾಪಾರಿಯೇ.ಇವುಗಳ ನಡುವಿನ ವ್ಯತ್ಯಾಸ ಸಾಮಾಜಿಕವಾದದ್ದು ಹಾಗೂ ಸಾಂಸ್ಕೃತಿಕವಾದದ್ದು. ವ್ಯತ್ಯಾಸ ಕೇವಲ ವ್ಯಕ್ತಿಗತವಾದದ್ದಲ್ಲ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವಂತಹದ್ದು.ಶ್ರೀಮಂತಿಕೆಯ ಹಳತು ಹೊಸತಿನ ನಡುವೆ ಬಹುಮುಖ್ಯ ವ್ಯತ್ಯಾಸವಿರುವುದು ಸ್ಥಳೀಯತೆಯಲ್ಲಿ. ಹಳೆಯ ಶ್ರೀಮಂತರು ಸ್ಥಳೀಕರಾಗಿರುತ್ತಿದ್ದರು. ಹೊಸ ಶ್ರೀಮಂತಿಕೆ ಅಂತರರಾಷ್ಟ್ರೀಯವಾದದ್ದು.ಸ್ಥಳೀಕರಾಗುವುದು, ಸ್ಥಳೀಕರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಹಳೆಯ ಶ್ರೀಮಂತರಿಗೆ ಅನಿವಾರ್ಯವಿತ್ತು. ಸರಳವಾಗಿ ಹೇಳುವುದಾದರೆ, ಸಾಮಾಜಿಕ ಸಾಂಸ್ಕೃತಿಕ ಹೊಂದಾಣಿಕೆಯೆಂಬುದು ಹಳೆಯ ಆರ್ಥಿಕತೆಗೆ ಅತ್ಯಗತ್ಯವಾದ ಸಂಗತಿಯಾಗಿತ್ತು. ಹಾಗಾಗಿ ಶ್ರೀಮಂತಿಕೆಯ ಕೆಡುಕು ಒಳಿತು ಎರಡೂ ಜನರಿಗೆ ತಿಳಿಯುತ್ತಿತ್ತು.ಒಬ್ಬ ಕೆಡುಕ ಜಮೀನುದಾರ ಅಥವಾ ದುಷ್ಟ ಪಾಳೆಯಗಾರ ಕೇವಲ ದುಷ್ಟನಾಗಿ ಅಥವಾ ಶುದ್ಧ ಅಯೋಗ್ಯನಾಗಿ ಅವಿರತವಾಗಿ ಮುಂದುವರೆಯುವುದು ಆಗ ಕಷ್ಟವಿತ್ತು.ಕೊಂಚ ತಡವಾಗಿಯಾದರೂ ಸರಿ ಅಂತಹ ದುಷ್ಟರನ್ನು ಯಾರೋ ಒಬ್ಬ ಸ್ಥಳೀಕ ಸದೆಬಡೆದು ಜನರ ಕಷ್ಟ ಕಾರ್ಪಣ್ಯಗಳನ್ನು ಕೊನೆಗಾಣಿಸುತ್ತಿದ್ದ ಅಥವಾ ಅಂತಹ ಸಂಘರ್ಷಗಳಲ್ಲಿ ತಾನೂ ಬಲಿಯಾಗಿ, ಹುತಾತ್ಮನಾಗಿ ದೈವವೋ ಭೂತವೋ ಆಗಿ ಚಿರಾಯುವಾಗುತ್ತಿದ್ದ. ನಮ್ಮ ಜಾನಪದವು ಅಂತಹ ವೀರಗಾಥೆಗಳಿಂದ ತುಂಬಿಹೋಗಿದೆ. ಹೊಸ ಆರ್ಥಿಕತೆಗೆ ಈ ಯಾವ ಅನಿವಾರ್ಯತೆಯೂ ಇಲ್ಲ.ಹೊಸ ಶ್ರೀಮಂತಿಕೆ ವ್ಯಕ್ತಿತ್ವ ರಹಿತವಾದದ್ದು. ಅದೊಂದು ವ್ಯಕ್ತಿ ರಹಿತವಾದ ಬೃಹತ್ ವ್ಯವಸ್ಥೆ, ಯಾರೂ ಅರಿಯಲಾಗದ ಸಂಕೀರ್ಣ ವ್ಯವಸ್ಥೆ. ಆ ವ್ಯವಸ್ಥೆಯ ಒಳಗೆ ಶ್ರೀಮಂತರು ಎಲ್ಲಿಯವರೂ ಆಗಬಹುದು, ಭಾಷೆ ಬಾರದಲೆ ನಡವಳಿಕೆ ತಿಳಿಯದಲೆ ಎಲ್ಲಿಯೂ ಹೋಗಿ ಜೀವಿಸಬಲ್ಲರು ಅವರು. ಯಾವ ಬಂಗಲೆಯಲ್ಲಿ ಯಾರಿದ್ದಾರೆ, ಯಾವ ದಂಧೆ ಯಾರು ನಡೆಸುತ್ತಿದ್ದಾರೆ, ಯಾರ ದುಡ್ಡು ಯಾರ ಜೇಬಿನಲ್ಲಿ ಕುಳಿತಿದೆ, ಯಾರ ಕೈಗಳಲ್ಲಿ ಯಾರ ಅಸ್ತ್ರವು ಜಳುಕಿಸಲ್ಪಡುತ್ತಿದೆ ಎಂಬುದು ತಿಳಿಯಲಾಗದ ವ್ಯವಸ್ಥೆಯದು.ನಮ್ಮ ಉದ್ಯಮಿ ವಿಜಯ ಮಲ್ಯರನ್ನೇ ತೆಗೆದುಕೊಳ್ಳಿ; ಅವರು ನಮ್ಮವರೇ? ದಕ್ಷಿಣ ಕನ್ನಡದವರೆ, ಬೆಂಗಳೂರಿನವರೆ, ಭಾರತೀಯರೆ, ಇಂಗ್ಲೆಂಡಿನವರೆ, ಜೂಜು ಕಟ್ಟೆಯ ಕುದುರೆಯ ಮಾಲಿಕರೆ, ಕ್ರಿಕೆಟ್ಟಿನ ಆಟದ ಒಡೆಯರೆ, ಹೆಂಡದ ದೊರೆಗಳೆ ಅಥವಾ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಮೋಚ್ಚ ಸಂಸತ್ತಿನ ಗೌರವಾನ್ವಿತ

ಮಾಜಿ ಸದಸ್ಯರೇ, ಒಂದೂ ತಿಳಿಯುವುದಿಲ್ಲ. ಸಮಯ ಬಂದಂತೆ ಅವರು ಇದೆಲ್ಲವೂ ಆಗುತ್ತಾರೆ ಅಥವಾ ಇದಾವುದೂ ಆಗದೆ ಉಳಿಯುತ್ತಾರೆ. ಈಗ ಈ ದೀರ್ಘ ಪೀಠಿಕೆಯ ನಂತರ ಒಬ್ಬ ಹಳೆಯ ಶ್ರೀಮಂತರ ಬಗ್ಗೆ ಬರೆಯುತ್ತೇನೆ.ಅವರ ಹೆಸರು ಪಾಂಗಾಳ ನಾಯಕರೆಂದು. ಅವರಿಗೀಗ 84 ವರ್ಷ ವಯಸ್ಸು. ಪಾಂಗಾಳ ನಾಯಕರು ಒಂದು ಆಗರ್ಭ ಶ್ರೀಮಂತ ಕೊಂಕಣಸ್ಥ ವ್ಯಾಪಾರಿ ಮನೆತನದಿಂದ ಬಂದವರು. ನಾಯಕರು ವಾಸವಾಗಿರುವ ಮನೆಯ ಅಗಾಧತೆ, ಪ್ರಾಚೀನತೆ, ಮನೆಯ ಸುತ್ತ ಹರಡಿರುವ ತೋಟ ಗದ್ದೆಗಳ ವಿಸ್ತಾರ, ಅದರಾಚೆಗೆ ದಿಗಂತದವರೆಗೂ ಚಾಚಿರುವ ಕಡಲ ತಡಿಯ ಉದ್ಯಾವರ ಹೊಳೆಯ ಹಿನ್ನೀರಿನ ಭವ್ಯತೆ, ಇವುಗಳನ್ನೆಲ್ಲ ಸಮರ್ಥವಾಗಿ ಚಿತ್ರಿಸಬೇಕೆಂದರೆ ಈ ಪುಟ್ಟ ಲೇಖನ ಯಾತಕ್ಕೂ ಸಾಲದು. ಹಾಗಾಗಿ, ಸರಳವಾಗಿ, ಕುಪ್ಪಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಮನೆ ಕವಿಶೈಲದ ಹೋಲಿಕೆಯಲ್ಲಿದೆ ಇದೂ ಕೂಡಾ ಎಂದು ಹೇಳಿ ಮುಗಿಸಿಬಿಡುತ್ತೇನೆ.ಪಾಂಗಾಳ ನಾಯಕರು ಆರಡಿ ಮೂರಿಂಚು ಎತ್ತರದ ವ್ಯಕ್ತಿ. ಒಂದು ಕಾಲದಲ್ಲಿ ಆಜಾನುಬಾಹುವೂ ಸ್ಫುರದ್ರೂಪಿಯೂ ಆಗಿದ್ದ ಜೀವ ಅದು ಎಂದು ಅವರನ್ನು ಕಂಡಾಗ ಅನ್ನಿಸುತ್ತದೆ. ಈಗ, ಅವರ ದೇಹವು ವಯಸ್ಸಿನ ಭಾರಕ್ಕೆ ಕುಸಿದಿದೆ, ತೆಳ್ಳಗಾಗಿದೆ. ಮೈಯ ನರಗಳು ಮೇಲುಬ್ಬಿ ಬಂದು ವಯೋಮಾನದ ಆಳಗೆರೆಗಳ ಜೊತೆ ಸೆಣಸುತ್ತ, ಮುಖ ಕತ್ತು ಕಯ್ಯಿ ಮಯ್ಯಿಗಳನ್ನೆಲ್ಲಾ ಆವರಿಸಿಕೊಂಡು, ಬಿಳಲುಗಳು ಸುತ್ತರೆದ ಹಳೆಯ ಕಾಂಡದಂತೆ ಗೋಚರಿಸುತ್ತಾರೆ ನಾಯಕರು.ಕಿವಿ ಕೊಂಚ ಮಂದವಾಗಿದೆ. ನಾಯಕರು ಆಜನ್ಮ ಬ್ರಹ್ಮಚಾರಿ ಹಾಗೂ ಖಾದಿಧಾರಿ. ಬೆಳಕು ಹರಿಯುವ ಮುಂಚೆ ಏಳುತ್ತಾರೆ, ತಮ್ಮ ಕೋಣೆ ತಾವೇ ಗುಡಿಸಿಕೊಳ್ಳುತ್ತಾರೆ, ತನ್ನ ಬಟ್ಟೆ ತಾನೇ ಒಗೆದುಕೊಳ್ಳುತ್ತಾರೆ, ಸ್ನಾನ ಸಂಧ್ಯಾವಂದನೆ ಮಾಡುತ್ತಾರೆ, ಸ್ತ್ರೋತ್ರ ಹೇಳಿಕೊಳ್ಳುತ್ತಾರೆ. ಬೆಳಗಿನ ಉಪಾಹಾರಕ್ಕೆಂದು ದಪ್ಪರವೆಯ ಸಜ್ಜಿಗೆ ಮಾಡಿಕೊಳ್ಳುತ್ತಾರೆ, ದಿನವೂ ಅದೇ ಸಜ್ಜಿಗೆ. ನಾಯಕರ ಊಟ ದಿನದ ಒಂದೇ ಹೊತ್ತು. ಊಟಕ್ಕೆಂದು ಒಂದು ತೊವ್ವೆಯನ್ನೋ ತಂಬುಳಿಯನ್ನೋ ಬೇಯಿಸಿಕೊಳ್ಳುತ್ತಾರೆ.ದಿನಕ್ಕೆರಡು ಬಾರಿ ಗದ್ದೆಯಲ್ಲೆಲ್ಲ ಓಡಾಡಿ ಗಿಡ ಮರಗಳನ್ನು ಮಾತನಾಡಿಸಿಕೊಂಡು, ಹೊಳೆಯ ಬದುವಿನ ಮೇಲೆ ಅಡ್ಡಾಡಿ ಬರುತ್ತಾರೆ. ಮಿಕ್ಕಂತೆ, ಮನೆಯ ದಿಡ್ಡಿಬಾಗಿಲಿನ ಹಿಂದೆ ಒಳಾಂಗಣದಲ್ಲಿ ಕುರ್ಚಿ ಹಾಕಿಕೊಂಡು, ಕಾಲು ನೊಂದಾಗ ಚಾಚಿಕೊಳ್ಳಲೆಂದು ಸ್ಟೂಲೊಂದನ್ನು ಎದುರಿಗಿಟ್ಟುಕೊಂಡು, ಕೈಯಲ್ಲಿ ದಿನಪತ್ರಿಕೆಯೊಂದನ್ನು ಹಿಡಿದು, ಬಾಗಿಲಾಚೆ ಕಾಣುವ ಹಸಿರಿನ ಅನಂತತೆಯನ್ನು ದಿಟ್ಟಿಸುತ್ತಾ ಕಾಲ ಕಳೆಯುತ್ತಾರೆ.‘ನಾನು ಈ ಮನೆಯ ದ್ವಾರಪಾಲಕ’ ಎಂದು ನಗೆಯಾಡಿದರು ನಾಯಕರು. ಎಪ್ಪತ್ತು ಜನರ ಕುಟುಂಬವಿರಬೇಕಿದ್ದ ಮನೆಯಲ್ಲೀಗ, ಅವರೂ ಸೇರಿದಂತೆ ಇರುವವರ ಸಂಖ್ಯೆ ಏಳಕ್ಕಿಂತ ಕಡಿಮೆ. ಮಿಕ್ಕವರು ಯಥಾಪ್ರಕಾರ ಅಮೆರಿಕ, ಇಂಗ್ಲೆಂಡ್, ಮುಂಬೈ, ಚೆನ್ನೈಗಳಲ್ಲಿ ಚದುರಿ ಹೋಗಿದ್ದಾರೆ.ಪಾಂಗಾಳ ನಾಯಕರ ದೊಡ್ಡತಂದೆಯವರು ಸ್ವಾತಂತ್ರ್ಯ ಸಂಗ್ರಾಮದೊಳಗೆ ಧುಮುಕಿದ ಮನೆಯ ಮೊದಲಿಗರು, ಅವರನ್ನು ಮನೆಮಂದಿ ಎಲ್ಲರೂ ಹಿಂಬಾಲಿಸಿದರು.ಗಾಂಧೀಜಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಾಗ ಊರ ಹತ್ತಿರದ ಪೇಟೆಯಲ್ಲಿ ಅವರ ದರ್ಶನ ಮಾಡಿದ ಮನೆಯ ಹೆಣ್ಣುಮಕ್ಕಳು ತಮ್ಮ ಅಷ್ಟೂ ಬಂಗಾರವನ್ನು ಕಳಚಿ ಗಾಂಧಿ ಅವರಿಗೊಪ್ಪಿಸಿ ಬಂದಿದ್ದರಂತೆ. ಆಗ ನಾಯಕರಿನ್ನೂ ಪುಟ್ಟ ಬಾಲಕ.ನಿಜಲಿಂಗಪ್ಪನವರು ಶ್ರೀಯುತ ಮಾಗಡಿಯವರು ಕಮಲಾದೇವಿ ಚಟ್ಟೋಪಾಧ್ಯಾಯ ಆದಿಯಾಗಿ ಅನೇಕ ಚಳವಳಿಗಾರರು ನಾಯಕರ ಮನೆಗೆ ಬಂದು ಹೋಗಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಸರ್ವೋದಯ ಶಿಬಿರವೊಂದರ ಸಲುವಾಗಿ ಮೂಲ್ಕಿಗೆ ಬಂದಿದ್ದ ಜಯಪ್ರಕಾಶ ನಾರಾಯಣರು ತಮ್ಮ ಮನೆಗೆ ಬಂದು ಉಂಡು ಹೋದದ್ದನ್ನು ನಾಯಕರು ನೆನಪಿಸಿಕೊಳ್ಳುತ್ತಾರೆ. ಆಗ ಅವರಿಗೆ ಯೌವನದ ಕಾಲ.ನಾಯಕರು ಕುಳಿತಿದ್ದ ಪಡಸಾಲೆ ವಿಶಾಲವಾಗಿತ್ತು, ಖಾಲಿಖಾಲಿಯಾಗಿತ್ತು. ಮಧ್ಯೆ ಬಿಸಿಲು ಮಚ್ಚು, ಸುತ್ತಲೂ ಕಟ್ಟೆಯ ಮೇಲೆ ಕಂಬಗಳನ್ನು ನಿಲ್ಲಿಸಿ ನಿರ್ಮಿಸಿದ ಚೌಕಾಕಾರದ ಕಡಿಮಾಡು. ಪಡಸಾಲೆಯ ಗೋಡೆಗಳಿಗೆ ನಾಲ್ಕು ದಿಕ್ಕಿಗೆ ನಾಲ್ಕು ಬಾಗಿಲು ಹಾಗೂ ಮರದ ಸರಳಿನ ಕಿಟಕಿಗಳು. ಈ ಅಂಗಳಕ್ಕೆ ಬಂದು ಹಾಡಿ ಹೋದ ಕಡೆಯ ಸಂಗೀತಗಾರ ಕುಮಾರ ಗಂಧರ್ವರಂತೆ.ಅದಕ್ಕೂ ಮೊದಲು ಪನ್ನಾಲಾಲ ಘೋಷರು ಕಿರಾಣ ಘರಾಣದ ರೆಹಮತ್ ಖಾನರು, ಹೀಗೆ ಅಂಗಳದಲ್ಲಿ ಕುಳಿತು ಹಾಡಿಹೋದ ಮಹಾನ್ ಗಾಯಕರ ಯಾದಿಯನ್ನೇ ಬಿಚ್ಚಿಟ್ಟರು ನಾಯಕರು. ಬೈಠಕ್ಕುಗಳು ನಡೆದಾಗ ಮನೆಯ ಹೆಂಗಸರು ಒಳಬಾಗಿಲಿನಾಚೆ ಕೂರುತ್ತಿದ್ದರಂತೆ. ಮನೆಯ ಗಂಡಸರು ಹಾಗೂ ಊರವರು ಪಡಸಾಲೆಯಲ್ಲಿ ಕೂರುತ್ತಿದ್ದರಂತೆ.ನಾಯಕರಿಗೆ ಕುಮಾರ ಗಂಧರ್ವರ ಪರಿಚಯವಾದದ್ದು ಅವರ ಯೌವನದ ದಿನಗಳಲ್ಲಿ, ಮುಂಬಯಿಯಲ್ಲಂತೆ. ಒಮ್ಮೆ ಗಂಧರ್ವರು ಉಡುಪಿಗೆ ಬಂದಿದ್ದಾಗ, ‘ನಾಳೆ ನಿಮ್ಮ ಮನೆಗೆ ಬರುತ್ತೇನೆ, ಹೊಳೆಯ ದಂಡೆಯ ಮೇಲೆ ಕುಳಿತು ಹರಟೆ ಹೊಡೆಯೋಣ’ ಎಂದು ಸುದ್ದಿ ಕಳುಹಿಸಿದರಂತೆ. ಆಗ ನಾಯಕರಿಗೆ ಸರ್ಪಸುತ್ತಿನ ವ್ಯಾಧಿ ಸುತ್ತಿಕೊಂಡಿತ್ತಂತೆ.ಕುಮಾರ ಗಂಧರ್ವರು, ಮನೆಗೆ ಬಂದವರು ನಾಯಕರ ಹಾಸಿಗೆಯ ಬದಿಗೇ ಕುಳಿತು ಹರಟಿ ಆನಂತರ ಒಂಟಿಯಾಗಿ ಉದ್ಯಾವರದ ಹೊಳೆಯ ಹಿನ್ನೀರಿನ ಸ್ಥಿತಪ್ರಜ್ಞ ಹರವನ್ನು ವೀಕ್ಷಿಸಿ ಸಂತೋಷದಿಂದ ಹಿಂದಿರುಗಿದ್ದರಂತೆ.ಮುನ್ನೂರಾಐವತ್ತು ವರ್ಷಗಳ ಹಿಂದೆ, ಪೋರ್ಚುಗೀಸರ ಮತಾಂತರದ ಬೆದರಿಕೆಗೆ ಪಕ್ಕಾಗಿ ಗೋವೆಯಿಂದ ಓಡಿಬಂದವರು ಈ ಜನ. ಸಮುದ್ರ ಕಿನಾರೆಯಿಂದಲೇ ಓಡಿ ಬಂದಿದ್ದ ತಮ್ಮ ಪೂರ್ವಜರಿಗೆ ಸಮುದ್ರ ಕಿನಾರೆಗಳು ಸಹಜವಿತ್ತು ಸುಲಭವಿತ್ತು, ಆಗೆಲ್ಲ ವ್ಯಾಪಾರ ವ್ಯವಹಾರಗಳು ನಡೆಯುತ್ತಿದ್ದದ್ದೇ ಸಮುದ್ರ ಕಿನಾರೆಗಳಲ್ಲಿ ಹಾಗೂ ದೋಣಿಗಳ ಮೂಲಕ ಎಂದು ಮಾತು ಮುಗಿಸಿದರು ನಾಯಕರು. ಘಟ್ಟದ ಒಳನಾಡಿಗೆ ತೆರಳಿ ಪಾಳೆಯಗಾರಿಕೆ ಮಾಡುವಷ್ಟು ಬಲಿಷ್ಠರಿದ್ದಿಲ್ಲ ತಾವು ಎಂಬ ಮಾತು ಸೇರಿಸಿದರು.ಮಾತನಾಡುತ್ತ ಆಡುತ್ತ ನಾವು ತೋಟ ಗದ್ದೆಗಳ ವಿಶಾಲ ಬಯಲಿನಲ್ಲಿ ಬಂದು ನಿಂತಿದ್ದೆವು. ನಾಯಕರು ಮಾತು ಮುಂದುವರೆಸಿದರು. ಕಳೆದ ಶತಮಾನದ ಆರಂಭದಲ್ಲೊಂದು ಬರಗಾಲ ಬಂದಿತ್ತಂತೆ, ಘಟ್ಟದ ಮೇಲಿನ ನಿರಾಶ್ರಿತ ಜನರನ್ನು ಆಗ ಇಲ್ಲಿಗೆ ಕಳುಹಿಸಲಾಗಿತ್ತಂತೆ.  ಬಂದವರಿಗೆ ಆಶ್ರಯ ನೀಡಿ, ಕೆಲಸ ನೀಡಿ, ಹೊಳೆಯ ಹಿನ್ನೀರಿಗೆ ಕಟ್ಟೆ ಕಟ್ಟಿಸಿ, ಮನೆಯ ಹಿಂದಲ ಗುಡ್ಡೆ ಕಡಿದು ತಗ್ಗು ಪ್ರದೇಶದಲ್ಲಿ ಮಣ್ಣು ತುಂಬಿಸಿ ಗದ್ದೆಗಳನ್ನು ಸೃಷ್ಟಿಸಿದರಂತೆ ನಾಯಕರ ಪೂರ್ವಜರು.ನಾಯಕರ ಕೈಗಳು, ತೆಂಗು ಮಾವು ಗೇರು ಸಪೋಟ ಗಿಡಗಳತ್ತ ಕೈಮಾಡಿ ತೋರಿಸುತ್ತಿತ್ತು. ಇವು ಉಪ್ಪು ನೀರಿನ ಗಿಡಗಳು ಇವು ಸಿಹಿನೀರಿನ ಗಿಡಗಳು ಎಂದು ಪಟ್ಟಿ ಮಾಡಿದರು ನಾಯಕರು. ಬಿ.ಜಿ.ಎಲ್.ಸ್ವಾಮಿಯವರ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ’ ಪುಸ್ತಕ ನೆನೆದರು. ಯಾವ ಗಿಡಗಳು ಸ್ಥಳಿಯವಾದವು ಯಾವುದು ದಕ್ಷಿಣ ಅಮೆರಿಕೆಯ ಮೂಲದಿಂದ ಬಂದದ್ದು ಎಂದು ಕೈಮಾಡಿ ತೋರಿದರು.ಬರಗಾಲ ನಿರ್ವಹಿಸುವಲ್ಲಿ ಇವರು ಮಾಡಿದ ಸಹಾಯವನ್ನು ನೆನೆದ ಬ್ರಿಟಿಷರು ಇವರ ದೋಣಿಗಳಿಗೆ ಮಹಾರಾಣಿಯವರ ಸರ್ಕಾರದ ರಕ್ಷಣೆ ನೀಡಿ ಫರಮಾನು ಹೊರಡಿಸಿದ್ದರಂತೆ. ನಾಯಕರ ಮನೆತನ ಆಗರ್ಭ ಶ್ರೀಮಂತವಾಯಿತಂತೆ. ಶ್ರೀಮಂತಿಕೆಯ ಈ ಎಲ್ಲ ಸಂಕೀರ್ಣ ಒಳಸುಳಿಗಳ ನಡುವೆಯೂ ತಮ್ಮ ದೊಡ್ಡ ತಂದೆಯವರು ಸ್ವಾತಂತ್ರ್ಯ ಚಳವಳಿಗೆ ಬೆಂಬಲ ಘೋಷಿಸಿದರು ಎಂದು ಮಾತು ಮುಗಿಸಿದರು ನಾಯಕರು.ನಾಯಕರು ಮನೆಯ ಅಂಗಳ ದಾಟಿ ಮೂವತ್ತು ವರ್ಷ ಸಂದಿದೆ. ತಾಯಿಗೆ ವಯಸ್ಸಾಯಿತೆಂದು ಬಂದವರು ಹಿಂದಿರುಗಿ ಹೋದದ್ದಿಲ್ಲವಂತೆ. ನಾಲ್ಕು ವರ್ಷಗಳ ಹಿಂದೆ ತಾಯಿ ತೀರಿಕೊಂಡರಂತೆ. ನಾಯಕರಿಗೆ ವಂದಿಸಿ ಬೀಳ್ಕೊಂಡು ಹಿಂದಿರುಗುವಾಗ ಯೋಚಿಸುತ್ತಿದ್ದೆ; ಹಳೆಯ ಶ್ರೀಮಂತರೆಲ್ಲ ಒಳ್ಳೆಯವರೇನಲ್ಲ.

ಪಾಂಗಾಳ ನಾಯಕರ ದೊಡ್ಡತಂದೆ ಅಪರೂಪದ ವ್ಯಕ್ತಿ. ಆದರೆ ಅವರಿಗೆ, ಅವರ ಅಪರೂಪದ ನಡತೆಗಾಗಿ, ಸಮಾಜವು ಮಾನ್ಯತೆ ನೀಡಿತ್ತು. ಈಗ ಪಾಂಗಾಳ ನಾಯಕರು ಒಂಟಿ ಜೀವ, ಸೋತ ಜೀವ. ಅವರ ಶ್ರದ್ಧೆ ಜೀವನಶೈಲಿ ಅನುಭವ ಯಾವುದಕ್ಕೂ ಕವಡೆ ಕಾಸಿನ ಬೆಲೆ ಕೊಡದೆ ಇರುವ ಸಮಾಜವಿದು. ಒಳ್ಳೆಯತನಕ್ಕಿಂತ ಮಿಗಿಲಾಗಿ ಆರ್ಥಿಕ ಯಶಸ್ಸಿಗೆ ಮಹತ್ವ ನೀಡುತ್ತಿರುವ ಸಮಾಜವಿದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry