7
ಆರ್ಥಿಕ ಸುಧಾರಣೆಗೆ 25

ಏರ್ ಡೆಕ್ಕನ್: ಸಕಲ ಸಾಧ್ಯತೆಗಳ ನವಭಾರತದ ಕಥನ

Published:
Updated:
ಏರ್ ಡೆಕ್ಕನ್: ಸಕಲ ಸಾಧ್ಯತೆಗಳ ನವಭಾರತದ ಕಥನ

ಉದ್ಯಮಶೀಲತೆ  ಎಂದರೆ ಪರಿಮಿತ ಸಂಪನ್ಮೂಲಗಳನ್ನು ಅಪರಿಮಿತ ಕನಸುಗಳ ಸಾಕಾರಕ್ಕಾಗಿ ಬಳಸಿಕೊಳ್ಳುವ ಕಲೆ. ಒಳ್ಳೆಯ ಕೃಷಿಗೆ ಬೇಕಿರುವ ಫಲವತ್ತಾದ ಮತ್ತು ಉತ್ತಮ ವಾತಾವರಣದಂತೆಯೇ ಉದ್ಯಮಶೀಲತೆ ಬೆಳೆಯುವುದಕ್ಕೂ ಕನಸುಗಳನ್ನು ಪೋಷಿಸಬಹುದಾದ ಮಣ್ಣು ಮತ್ತು ವಾತಾವರಣ ಇರಬೇಕಾಗುತ್ತದೆ.ಕಾಲು ಶತಮಾನದ ಹಿಂದೆ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಮುಂಗಾಣ್ಕೆಯಿದ್ದವರು. ಅವರು ಚಾಲನೆ ನೀಡಿದ ಆರ್ಥಿಕ ಸುಧಾರಣೆಯ ಕ್ರಮಗಳು ಭಾರತದ ಉದ್ಯಮಶೀಲತಾ ಶಕ್ತಿಯನ್ನು ಉದ್ದೀಪಿಸಿ ಆರ್ಥಿಕತೆಯನ್ನು ಉನ್ನತ ಪ್ರಗತಿಯ ಹಾದಿಗೆ ತಂದವು.ಸ್ವಜನ ಪಕ್ಷಪಾತದ ಬಂಡವಾಳ ಶಾಹಿ ಮತ್ತು ಸಮಾಜವಾದಗಳೆರಡನ್ನೂ ದೂರವಿಟ್ಟು ಸ್ಪಂದನಶೀಲ ಖಾಸಗಿ ಉದ್ಯಮ ಕ್ಷೇತ್ರವನ್ನು ಕಟ್ಟಲು ಸಾಧ್ಯವಾದರೆ ಅದು ನಮ್ಮ ಯುವಕರಲ್ಲಿ ಇರುವ ಉದ್ಯಮಶೀಲತಾ ಪ್ರಜ್ಞೆಯನ್ನು ಉದ್ದೇಪಿಸಿ ಬಡತನ ಮತ್ತು ನಿರುದ್ಯೋಗವನ್ನು ಇಲ್ಲವಾಗಿಸಬಲ್ಲವು.ಇಂಥದ್ದೊಂದು ಸುಧಾರಣೆಯ ಜೊತೆ ಜೊತೆಗೇ ಉದ್ಯೋಗ ಸೃಷ್ಟಿಯ ಮೂಲಕ ತಳಮಟ್ಟಕ್ಕೂ ಸುಧಾರಣೆಯ ಫಲಿತಾಂಶ ತಲುಪುವಂಥ ಮೂಲ ಸೌಕರ್ಯ ನಿರ್ಮಾಣವಾಗದೇ ಇದ್ದರೆ ಅದು ಮತ್ತೊಂದು ಬಗೆಯ ಸಮಸ್ಯೆಗೆ ಕಾರಣವಾಗುವ ಪರಿಸ್ಥಿತಿಯೂ ಇದೆ. ಏಕೆಂದರೆ ನಮ್ಮಲ್ಲಿರುವ ಬಡತನ ಮತ್ತು ನಿರುದ್ಯೋಗದ ತೀವ್ರತೆ ಎಷ್ಟಿದೆಯೆಂದರೆ ಇಂಥ ಸುಧಾರಣೆಗಳ ಫಲ ಕೊನೆಯ ವ್ಯಕ್ತಿಗೆ ತಲುಪದೇ ಹೋದರೆ ಅಭಿವೃದ್ಧಿಯಿಂದ ಹೊರಗುಳಿದಿರುವ ಅವರ ಹತಾಶೆಯೇ ಹಿಂಸಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗಿಬಿಡಬಹುದು.ನಕ್ಸಲ್‌ವಾದ ಮತ್ತು ಮಾವೋವಾದಗಳು ದೇಶದ ಮೂರನೇ ಒಂದರಷ್ಟು ಬರುವ 220 ಜಿಲ್ಲೆಗಳಲ್ಲಿ ಬೆಳೆಯುತ್ತಿರುವುದು ಇದಕ್ಕೊಂದು ನಿದರ್ಶನ. ಈ ಜನಗಳು ಹೀಗೆ ರೊಚ್ಚಿಗೆದ್ದಿರುವುದರ ಹಿಂದೆ ಅವರಲ್ಲಿರುವ ವಂಚನೆಗೊಳಗಾದ ಭಾವವಿದೆ. ನರಸಿಂಹರಾವ್ ಅವರು ಸುಧಾರಣೆಯ ಕ್ರಿಯೆಗೆ ಚಾಲನೆ ನೀಡುವ ಕಾಲಘಟ್ಟವನ್ನು ನೋಡಬೇಕಿರುವುದು ಅದಕ್ಕೂ ಸ್ವಲ್ಪ ಹಿಂದಕ್ಕೆ ಹೋಗಿ ನೋಡಬೇಕಾಗುತ್ತದೆ.ತಪ್ಪು ಕಲ್ಪನೆಗಳನ್ನು ಆಧಾರವಾಗಿಟ್ಟುಕೊಂಡು ರೂಪಿಸಿದ ಆಡಳಿತ ನೀತಿಗಳು ಮತ್ತು ಆಡಳಿತಾತ್ಮಕ ವೈಫಲ್ಯಗಳೆರಡರ ಪರಿಣಾಮವಾಗಿ ಸಂಪತ್ತಿನ ಸೃಷ್ಟಿಯಲ್ಲಿ ಒಂದು ಬಗೆಯ ಅಸಮಾನತೆ ಸೃಷ್ಟಿಯಾಗಿದ್ದ ಕಾಲಘಟ್ಟವದು.ಅಮೆರಿಕ ಮತ್ತು ಯೂರೋಪಿನ ಅನೇಕ ದೇಶಗಳಲ್ಲಿ ಊಳಿಗಮಾನ್ಯ ವ್ಯವಸ್ಥೆ ದುರ್ಬಲಗೊಂಡು ಇಲ್ಲವಾದದ್ದು ಆರ್ಥಿಕತೆಯನ್ನು ಉದ್ಯಮಶೀಲತೆಯ ಆಧಾರದ ಮೇಲೆ ನಿರ್ಮಿಸಿದ್ದರಿಂದ. ನರಸಿಂಹರಾವ್ ಅವರು ಚಾಲನೆ ನೀಡಿದ ಆರ್ಥಿಕ ಸುಧಾರಣೆಗಳು ಇದೇ ಹಾದಿಯಲ್ಲಿದ್ದವು. ಭಾರತದಲ್ಲಿ ಹೊಸ ತಲೆಮಾರಿನ ಉದ್ಯಮಿಗಳು ಹುಟ್ಟಿಕೊಂಡರು. ತಮ್ಮ ಹಿಂದಿನವರ ಪ್ರತಿಷ್ಠೆಗಳನ್ನು ಮುರಿದು ಅದರ ಪಳೆಯುಳಿಕೆಗಳ ಮೇಲೆ ಹೊಸ ಆರ್ಥಿಕತೆಯನ್ನು ಕಟ್ಟಲಾರಂಭಿಸಿದರು.ಈ ಪ್ರಕ್ರಿಯೆಯಲ್ಲಿ ಹಳೆಯ ಸಾಮ್ರಾಟರ ಬದಲಿಗೆ ಹೊಸ ಕಾಲದ ಸಾಮ್ರಾಟರು ಬಂದದ್ದು ನಿಜ. ಆದರೂ ಉದ್ಯಮಶೀಲತೆ ಮತ್ತು ಹೊಸತನ್ನು ಆವಿಷ್ಕರಿಸುವ ಉತ್ಸಾಹಗಳೆರಡೂ ಭಾರತವನ್ನು ಒಂದು ದೊಡ್ಡ ಆರ್ಥಿಕ ಶಕ್ತಿಯಾಗುವ ಹಾದಿಯಲ್ಲಿ ಕೊಂಡೊಯ್ದವು. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಔಷಧೋದ್ಯಮ, ಎಂಜಿನಿಯರಿಂಗ್, ವಿನ್ಯಾಸ, ಮೊಬೈಲ್ ಫೋನ್, ಆರ್ಥಿಕ ಸೇವೆಗಳು, ಬ್ಯಾಂಕಿಂಗ್, ವಾಹನೋದ್ಯಮ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೊಸ ಶಕ್ತಿಯ ಸಂಚಾರವಾಯಿತು. ಹೊಸ ಉದ್ಯಮಿಗಳೂ ಹುಟ್ಟಿಕೊಂಡರು.ವ್ಯಾಪಾರದಲ್ಲಿ ಒಬ್ಬರ ಪ್ರಾಬಲ್ಯ ಯಾವತ್ತೂ ಶಾಶ್ವತವಲ್ಲ. ಇದು ಸಮುದ್ರದ ಅಲೆಗಳಂತೆ ಹೊಸ ಅಲೆಗೆ ಹಳೆಯದು ಅವಕಾಶ ಕಲ್ಪಿಸಲೇ ಬೇಕು. ಹೊಸ ತಲೆಮಾರಿನ ಉದ್ಯಮಿಗಳು ತಮ್ಮ ಕ್ಷೇತ್ರದಲ್ಲಿದ್ದ ಸ್ಥಾಪಿತ ಮೌಲ್ಯಗಳನ್ನು ಪ್ರಶ್ನಿಸಿದ್ದಷ್ಟೇ ಅಲ್ಲದೆ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸಿದರು.ಹಿಂದೆ ಅಸ್ತಿತ್ವದಲ್ಲಿ ಇಲ್ಲದೇ ಇದ್ದ ಕ್ಷೇತ್ರಗಳನ್ನು ಶೋಧಿಸಿದರು. ಮೊದಲು ಯಾರೂ ಹೇಳದೇ ಇದ್ದ ಗ್ರಾಹಕ ಸಂತೃಪ್ತಿಯನ್ನು ಆಧಾರವಾಗಿಟ್ಟುಕೊಂಡು ವ್ಯಾಪಾರಗಳನ್ನು ಕಟ್ಟಿದರು. ವಿಶಿಷ್ಟವಾದುದನ್ನು ಸಾಧಿಸಿದರು. ಸ್ಥಾಪಿತ ಮೌಲ್ಯಗಳನ್ನು ಬದಲಾಯಿಸಿದರು.ಆರ್ಥಿಕ ಸುಧಾರಣೆಗಳ ಹೊಸ್ತಿಲಲ್ಲಿ ಸರಳವಾದ ಹೊಸ ಪರಿಕಲ್ಪನೆಗಳು ನಮ್ಮಂಥವರನ್ನು ಉದ್ಯಮಿಗಳನ್ನಾಗಿಸಿತು. ರಕ್ಷಣಾ ಕ್ಷೇತ್ರದಿಂದ ನಿವೃತ್ತರಾಗಿದ್ದ ನಿರುದ್ಯೋಗಿ ಪೈಲಟ್‌ಗಳು ಸೇರಿ ಕಂಡ ಕನಸು 1995ರಲ್ಲಿ ಡೆಕ್ಕನ್ ಏವಿಯೇಷನ್ ಎಂಬ ಉದ್ಯಮಕ್ಕೆ ಕಾರಣವಾಯಿತು.ಇಂಥದ್ದೇ ಒಂದು ಹೊಸ ಆಲೋಚನೆ ಮತ್ತು ಪ್ರತಿಯೊಬ್ಬ ಭಾರತೀಯನೂ ವಿಮಾನ ಯಾನ ಮಾಡುವಂತಾಗಬೇಕು ಎಂಬ ಹುಚ್ಚು ಕನಸು ನನ್ನೊಳಗೆ ಮೂಡಿದ್ದರ ಪರಿಣಾಮವಾಗಿ 2003ರಲ್ಲಿ ಏರ್‌ಡೆಕ್ಕನ್ ಆರಂಭವಾಯಿತು.ಈಗ ಹಿಂದಿರುಗಿ ನೋಡಿದಾಗ ಏರ್‌ಡೆಕ್ಕನ್ ಹುಟ್ಟುವುದಕ್ಕೆ ಮೊದಲಿದ್ದ ಸ್ಥಿತಿ ಹೇಗೆ ಬದಲಾಯಿತೆಂಬ ಚಿತ್ರ ಕಣ್ಣ ಮುಂದೆ ಬರುತ್ತದೆ. ಆಗ ಇದ್ದದ್ದು ಸಬ್ಸಿಡಿಯ ಮೂಲಕ ಉಣಿಸಬೇಕಾದ ಹಸಿವಿನಿಂದ ಬಳಲುತ್ತಿದ್ದ ಶತಕೋಟಿ ಬಾಯಿಗಳು. ಅವೇ ಈಗ ಶತಕೋಟಿ ಅತೃಪ್ತ ಗ್ರಾಹಕರದ್ದಾಗಿಬಿಟ್ಟಿವೆ. ಎರಡೇ ಸರ್ಕಾರಿ ಟಿ.ವಿ. ಚಾನೆಲ್‌ಗಳಿದ್ದ ದೇಶದಲ್ಲೀಗ ಮನೆ ಮನೆಯ ಮೇಲೂ ಮಿನುಗುವ ಡಿಶ್ ಆಂಟೆನಾಗಳಿವೆ. ಖಾಸಗಿ ಹೆಲಕಾಪ್ಟರ್‌ನ ಪೈಲಟ್ ಆಗಿದ್ದ ನನ್ನಲ್ಲಿ ಈ ಬದಲಾವಣೆಯ ವಿಹಂಗಮ ನೋಟದ ಚಿತ್ರಗಳಿವೆ.ಅದೇನೇ ಇದ್ದರೂ ಜನಸಾಮಾನ್ಯರಿಗಾಗಿ ವಿಮಾನಯಾನ ಸೇವೆಯೊಂದನ್ನು ಆರಂಭಿಸಬೇಕೆಂಬ ಆಲೋಚನೆ ನನ್ನೊಳಗೆ ಹುಟ್ಟಿಕೊಂಡದ್ದು ಮಾತೃಭೂಮಿಯಿಂದ ಸಾವಿರಾರು ಮೈಲಿ ದೂರದಲ್ಲಿ. ನಾನು ಅಮೆರಿಕದ ಸೌತ್‌ ವೆಸ್ಟ್ ಏರ್‌ಲೈನ್ಸ್ ಎಂಬ ಅಗ್ಗದ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವ ವಿಮಾನದಲ್ಲಿ ಕುಳಿತಿದ್ದೆ. ನನ್ನ ಪಕ್ಕದಲ್ಲಿ ಬರ್ಗರ್ ಜಗಿಯುತ್ತಿದ್ದ ದಾಂಡಿಗನೊಬ್ಬನಿದ್ದ. ಆತ ಬಡಗಿ ಎಂದು ತಿಳಿದದ್ದೇ ನನ್ನ ಜ್ಞಾನೋದಯದ ಕ್ಷಣ.ಆಗ ನನ್ನಲ್ಲಿ ಹಣವಿರಲಿಲ್ಲ. ಆದರೆ ಆ ಕ್ಷಣ ಹುಟ್ಟಿದ ಶ್ರೀಸಾಮಾನ್ಯರಿಗೊಂದು ವಿಮಾನಯಾನ ಸೇವೆ ಎಂಬ ಕನಸು ಮಾತ್ರ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತು.ಮುಂದಿನ ಒಂದು ವರ್ಷದಲ್ಲಿ ಏರ್‌ಡೆಕ್ಕನ್ ವಿಮಾನಗಳು ಹಾರಾಟವನ್ನೂ ಆರಂಭಿಸಿದವು. ಅಷ್ಟು ಮಾತ್ರವಲ್ಲ ನಾಲ್ಕೇ ವರ್ಷಗಳಲ್ಲಿ ಬಹಳ ಹಿಂದಿನಿಂದಲೇ  ಮಾರುಕಟ್ಟೆಯನ್ನು ಆಳುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ಮತ್ತು ಜೆಟ್ ಏರ್‌ವೇಸ್‌ಗಳನ್ನು ಹಿಂದಕ್ಕೆ ತಳ್ಳಿ ಏರ್ ಡೆಕ್ಕನ್ ದೇಶದ ಅತಿದೊಡ್ಡ ವಿಮಾನಯಾನ ಸೇವಾ ಸಂಸ್ಥೆಯಾಗಿ ಬೆಳೆಯಿತು.ಭಾರತದ ಆರ್ಥಿಕತೆಯ ಚಾಲಕ ಶಕ್ತಿಯಾಗಿದ್ದದ್ದು ದೊಡ್ಡ ದೊಡ್ಡ ಉದ್ಯಮ ಸಮೂಹಗಳು ಮತ್ತು ಹೈಟೆಕ್ ತಂತ್ರಜ್ಞಾನ ದೈತ್ಯರೆಂದು ಭಾವಿಸಿದ್ದೀರಾ? ವಾಸ್ತವ ಬೇರೆಯೇ ಇದೆ. ದೇಶದ ಆರ್ಥಿಕತೆಯನ್ನು ಚುರುಕುಗೊಳಿಸಿದ್ದು ಸಣ್ಣ ಸಣ್ಣ ಲಕ್ಷಾಂತರ ಉದ್ಯಮಿಗಳು. ಇವರಲ್ಲಿ ಅನೇಕರ ಹೆಸರನ್ನು ಸಾರ್ವಜನಿಕರು ಕೇಳಿರುವುದೂ ಇಲ್ಲ. ಇದರ ಅರ್ಥ ದೊಡ್ಡ ಸಂಸ್ಥೆಗಳ ಮೂಲಕ ಸೃಷ್ಟಿಯಾದ ವಾಣಿಜ್ಯ ಭಾರತವನ್ನು ಅಲ್ಲಗಳೆಯಬೇಕೆಂದೇನೂ ಅಲ್ಲ.ಆದರೆ ಭಾರೀ ಪ್ರಮಾಣದಲ್ಲಿ ಉದ್ಯೋಗವನ್ನು ಒದಗಿಸಿದ್ದು ಅಷ್ಟೇನೂ ಆಕರ್ಷಕವಾಗಿ ಕಾಣಿಸದ ಬೀದಿಯ ಮೂಲೆಯಲ್ಲಿರುವ ದಿನಸಿ ಅಂಗಡಿಗಳು, ಉಡುಪಿ ಹೊಟೇಲುಗಳು, ಡಾಬಾಗಳು, ತರಕಾರಿ ಮಾರಾಟ ಮಾಡುವವರು, ಬಾರ್‌ಗಳು, ಬೇಕರಿಗಳು ಮತ್ತು ತಳ್ಳುಗಾಡಿಯಲ್ಲಿ ಆಹಾರದಿಂದ ತೊಡಗಿ ಜೀವನಾವಶ್ಯಕ ವಸ್ತುಗಳನ್ನು ಮಾರಾಟ ಮಾಡುವ ಅವಕಾಶ. ಸಾವಿರಾರು ಬಗೆಯ ಈ ಚಿಲ್ಲರೆ ವ್ಯಾಪಾರ ನಗರಗಳ ಜನನಿಭಿಡ ಬೀದಿಗಳಿಂದ ಹಳ್ಳಿಯ ಅರಳೀಕಟ್ಟೆಗಳ ತನಕ ಹರಡಿಕೊಂಡಿವೆ.ದೆಹಲಿಯ ಸರೋಜಿನಿ ನಗರ, ಖಾನ್ ಮಾರ್ಕೆಟ್, ಚಾಂದಿನಿ ಚೌಕ್ ಅಥವಾ ಬೆಂಗಳೂರಿನ ಅವೆನ್ಯೂ ರಸ್ತೆ, ಚಿಕ್ಕಪೇಟೆ, ರಸೆಲ್ ಮಾರ್ಕೆಟ್, ಶಿವಾಜಿ ನಗರ, ಅಥವಾ ಹಾಸನದ ಗಾಂಧಿ ಬಜಾರ್‌ನಲ್ಲಿ ಒಂದು ಸುತ್ತು ಹಾಕಿದರೆ ನಿಮಗೆ ಅಲ್ಲಿ ನಡೆಯುವ ಆರ್ಥಿಕ ಚಟುವಟಿಕೆಗಳ ವೈವಿಧ್ಯ ಮತ್ತು ಬದುಕನ್ನು ಕಟ್ಟಿಕೊಳ್ಳಲು ದುಡಿಯುವ ಭಾರೀ ಪ್ರಮಾಣದ ಜನರು ಕಾಣಿಸುತ್ತಾರೆ. ಇಲ್ಲಿರುವುದು ಕೇವಲ ಸ್ವಉದ್ಯೋಗಿಗಳಷ್ಟೇ ಅಲ್ಲ. ಲಕ್ಷಾಂತರ ಮಂದಿಗೆ ಉದ್ಯೋಗಗಳನ್ನು ನೀಡುತ್ತಿರುವ ಉದ್ಯಮಿಗಳೂ ಹೌದು.ಇದು ಕೇವಲ ಊಹಾತ್ಮಕವಾದ ಚಿತ್ರಣವೇನೂ ಅಲ್ಲ. ಅಂಕಿ-ಅಂಶಗಳೂ ಇದನ್ನೇ ಹೇಳುತ್ತವೆ. ಎಲ್ಲಾ ಸರ್ಕಾರಿ ಇಲಾಖೆಗಳ ನೌಕರರು ಮತ್ತು ಸಂಘಟಿತ ಉದ್ಯಮ ಕ್ಷೇತ್ರದ ಉದ್ಯೋಗಿಗಳನ್ನೆಲ್ಲಾ ಸೇರಿಸಿದರೆ ಒಟ್ಟು ಸಂಖ್ಯೆ ಸುಮಾರು 5 ಕೋಟಿಯಷ್ಟಾಗುತ್ತದೆ.ಇನ್ನು ಸಾರ್ವಜನಿಕ ಕ್ಷೇತ್ರದ ಉದ್ಯಮಗಳು, ರೈಲ್ವೇ ಮತ್ತು ಭದ್ರತಾ ಪಡೆಗಳಲ್ಲಿ ದುಡಿಯುವವರ ಸಂಖ್ಯೆ 50 ಲಕ್ಷ ಜನರಷ್ಟಿದೆ. ನಮ್ಮ 125 ಕೋಟಿ ಜನಸಂಖ್ಯೆಯಲ್ಲಿ ದುಡಿಯಬಲ್ಲವರ ಸಂಖ್ಯೆ 75 ಕೋಟಿಯಷ್ಟಿದೆ. ಇದರಲ್ಲಿ ಕೇವಲ 5.5 ಕೋಟಿ ಜನರಿಗಷ್ಟೇ ಸಂಘಟಿತ ಕ್ಷೇತ್ರ ಉದ್ಯೋಗ ಒದಗಿಸಿದೆ. 35 ಕೋಟಿ ಮಂದಿ ಹಳ್ಳಿಗಳ ಕೃಷಿ ಕಾರ್ಮಿಕರು ಇಲ್ಲವೇ ಸಣ್ಣ ಹಿಡುವಳಿಯಿರುವ ರೈತರು.ಇನ್ನುಳಿದ 35 ಕೋಟಿ ಮಂದಿಯೂ ಒಂದಲ್ಲಾ ಒಂದು ರೀತಿಯಲ್ಲಿ ಸ್ವಂತ ಉದ್ಯೋಗಗಳನ್ನು ಕಂಡುಕೊಂಡವರು. ಇವರಲ್ಲಿ ಒಂದಷ್ಟು ಜನರು ಹಳ್ಳಿಯಲ್ಲಿಯೇ ರೈತರಿಗೆ ಅಗತ್ಯವಿರುವ ಸೇವೆಗಳನ್ನು ನೀಡುವ ಉದ್ಯಮಗಳನ್ನು ನಡೆಸುತ್ತಿರುವವರು. ಉಳಿದವರು ಹಳ್ಳಿಯಿಂದ ತೊಡಗಿ ದಿಲ್ಲಿಯ ತನಕವೂ ತಮ್ಮದೇ ಆದ ರೀತಿಯ ಸೇವೆ ಮತ್ತು ಉತ್ಪಾದನೆಗಳಲ್ಲಿ ತೊಡಗಿರುವವರು. ಇವರು ಆರ್ಥಿಕತೆಯ ನಿಜವಾದ ಬೆನ್ನೆಲುಬು.ಇವರೆಲ್ಲರೂ ತಮ್ಮ ಉದ್ಯಮವನ್ನು ಆರಂಭಿಸುವುದು ಬಂಡವಾಳ ರಹಿತವಾಗಿ ಇಲ್ಲವಾದರೆ ಸಾಲ ಪಡೆದು. ಸಮಸ್ಯೆ ಅಷ್ಟಕ್ಕೇ ಮುಗಿಯುವುದಿಲ್ಲ ಪ್ರತೀ ಹಂತದಲ್ಲೂ ಇವರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳ ಆರಂಭಿಸಿ ಪೊಲೀಸರ ತನಕದ ಅಧಿಕಾರಶಾಹಿಗೆ ಲಂಚಕೊಟ್ಟೇ ತಮ್ಮ ಉದ್ಯಮಕ್ಕೆ ಅಗತ್ಯವಿರುವ ಎಲ್ಲವನ್ನೂ ಪಡೆಯಬೇಕಾಗುತ್ತದೆ.ಇದರ ಹೊರತಾಗಿ ಸರ್ಕಾರದ ಇಲಾಖೆಗಳ ನೂರಾರು ಇನ್ಸ್‌ಪೆಕ್ಟರ್‌ಗಳನ್ನು ಇವರು ನಿರ್ವಹಿಸಬೇಕು. ಇಷ್ಟೆಲ್ಲಾ ಆದರೂ ಅವರು ಉತ್ಸಾಹ ಕಳೆದುಕೊಳ್ಳದೆಯೇ ಮುಂದುವರಿಯುತ್ತಾರೆ. ಏಕೆಂದರೆ ಅವರಿಗೆ ಅಸಹನೀಯವಾದ ತಮ್ಮ ಜೀವನಮಟ್ಟವನ್ನೇ ಸುಧಾರಿಸಿಕೊಳ್ಳುವ ಅನಿವಾರ್ಯತೆ ಇದೆ.ಸುಧಾರಣಾ ಪ್ರಕ್ರಿಯೆಗೆ ವೇಗ ದೊರೆತು ಉತ್ತಮ ಆಡಳಿತ ಮತ್ತು ಒಳ್ಳೆಯ ಮೂಲಸೌಕರ್ಯ ಸೃಷ್ಟಿಯಾದರೆ ಆರ್ಥಿಕ ಪ್ರಗತಿಗೆ ಅದಕ್ಕಿಂತ ದೊಡ್ಡ ಚಾಲಕ ಶಕ್ತಿ ಬೇಡ. ಇದು ಮೇಲೆ ಹೇಳಿದ ಕೋಟ್ಯಂತರ ಮಂದಿಯ ಬದುಕನ್ನು ಸುಧಾರಿಸುತ್ತದೆ.ಅವರಲ್ಲಿ ಖರೀದಿಯ ಶಕ್ತಿ ಹೆಚ್ಚಾದರೆ ಅದು ಬೃಹತ್ ಉದ್ಯಮಗಳಿಗೆ ಅನುವು ಮಾಡಿಕೊಡುತ್ತದೆ. ವಾಹನ, ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್ ಇತ್ಯಾದಿಗಳೆಲ್ಲವೂ ಬೆಳೆಯುತ್ತವೆ. ಇದು ಸಮಗ್ರ ಅಭಿವೃದ್ಧಿಗೆ ಹೇತುವಾಗ ಸಮಾನದ ಪ್ರಗತಿಗೆ ಅಗತ್ಯವಿರುವ ವಾತಾವರಣ ಸೃಷ್ಟಿಯಾಗುತ್ತದೆ.ಭಾರತಕ್ಕೆ ಇರುವ ಅತ್ಯಂತ ದೊಡ್ಡ ಸವಾಲು ಉದ್ಯೋಗ ಸೃಷ್ಟಿಯದ್ದು. ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಕ್ಷೇತ್ರ ಹಿಂದುಳಿದು, ವ್ಯವಸ್ಥೆಯನ್ನು ತಮಗೆ ಬೇಕಾದಂತೆ ಬಾಗಿಸಿ ಬಳುಕಿಸುವವರಿಗೆ ಅನುಕೂಲಕರವಾಗಿ ಪರಿಣಮಿಸಿದರೆ ಎರಡು ಬಗೆಯ ಆರ್ಥಿಕತೆಗಳು ಸೃಷ್ಟಿಯಾಗುತ್ತವೆ. ಅದರಿಂದ ಬಡತನ, ಅನಕ್ಷರತೆ, ಅಪೌಷ್ಟಿಕತೆಯ ಸಾಗರದಲ್ಲಿ ಸಕಲೈಶ್ವರ್ಯದ ದ್ವೀಪಗಳು ಸೃಷ್ಟಿಯಾಗುತ್ತವೆ.ಹೀಗಾದಾಗ ಸಾಮಾಜಿಕವಾಗಿ ಸುಭಿಕ್ಷವಾಗಿರುವ ಸಮಾಜವೊಂದು ಕನಸಾಗಿಯೇ ಉಳಿದುಬಿಡುತ್ತದೆ. ಆದ್ದರಿಂದ ಈಗಿನ ಸರ್ಕಾರ ತನ್ನ ಜಡತ್ವವನ್ನು ಕಳಚಿಕೊಂಡು ನರಸಿಂಹರಾವ್ ಅವರಂತೆಯೇ ಸುಧಾರಣೆಯ ಹಾದಿಯಲ್ಲಿ ಧೈರ್ಯದ ಹೆಜ್ಜೆಗಳನ್ನಿಡಬೇಕು.

(ಲೇಖಕರು ಏರ್ ಡೆಕ್ಕನ್ ಸ್ಥಾಪಕರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry