7
ಆರ್ಥಿಕ ಸುಧಾರಣೆಗೆ 25

ರಾಜಕಾರಣ ಮತ್ತು ಆರ್ಥಿಕ ಶಿಸ್ತುಗಳೆರಡನ್ನೂ ಗೆಲ್ಲಿಸಿದ ಬಜೆಟ್

Published:
Updated:
ರಾಜಕಾರಣ ಮತ್ತು ಆರ್ಥಿಕ ಶಿಸ್ತುಗಳೆರಡನ್ನೂ ಗೆಲ್ಲಿಸಿದ ಬಜೆಟ್

ಆರ್ಥಿಕ ಸುಧಾರಣೆಗೆ ಚಾಲನೆ ನೀಡಿದ ಮನಮೋಹನ್ ಸಿಂಗ್ ಅವರ 1991ರ ಬಜೆಟ್ ರಾಜಕೀಯ ಮತ್ತು ಆರ್ಥಿಕ ಶಿಸ್ತುಗಳೆರಡನ್ನೂ ಒಟ್ಟೊಟ್ಟಿಗೆ ಸಾಧಿಸಿದ ಬಜೆಟ್ ಕೂಡಾ ಹೌದು. ಹಾಗೆಯೇ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಗಳಿಗೆ ಬಹುಕಾಲದ ನಂತರ ಜೀವ ಕೊಟ್ಟ ಬಜೆಟ್ ಕೂಡ. ಇದೆಲ್ಲಾ ಹೇಗೆ ಸಂಭವಿಸಿತು ಎನ್ನುವುದರ ಜೊತೆಗೆ ತೆರೆಮರೆಯಲ್ಲಿ ನಡೆದ ರಾಜಕೀಯ ನಡೆಗಳನ್ನು ಲೇಖಕರಿಲ್ಲಿ ನೆನಪಿಸಿಕೊಂಡಿದ್ದಾರೆ.

ಸಂಸತ್ತಿನ ಎರಡೂ ಸದನಗಳಲ್ಲಿ ಬಜೆಟ್ ಚರ್ಚೆ ಆರಂಭವಾದುದರ ಹಿಂದೆಯೇ ಕಾಂಗ್ರೆಸ್‌ನೊಳಗೂ ಬಜೆಟ್ ಬಗೆಗಿನ ಟೀಕೆಗಳ ಪ್ರಮಾಣ ಹೆಚ್ಚಿತು. ನಾವು ರಕ್ಷಣಾತ್ಮಕ ಆಟ ಆಡುವ ಸ್ಥಿತಿಯಲ್ಲಿದ್ದೆವು. ಸುಲಭದಲ್ಲಿ ವಿಚಲಿತರಾಗದ ಎ.ಎನ್.ವರ್ಮಾ ಕೂಡಾ ತಳಮಳದಲ್ಲಿದ್ದರು, ಒಂದು ಹಂತದಲ್ಲಂತೂ ನಿಮ್ಮ ಉತ್ಸಾಹ ಹೆಚ್ಚಾಯಿತು ಎಂದು ನನ್ನನ್ನು ಬೈದೂ ಬಿಟ್ಟರು. ಅವರು ಪ್ರಧಾನಿಯವರ ಇಂಗಿತವನ್ನು ಹೇಳುತ್ತಿದ್ದರೇ ಅಥವಾ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರೇ ಎಂಬುದು ನನಗೆ ಅರ್ಥವಾಗಲಿಲ್ಲ. ಅದರ ಬಗ್ಗೆ ನಾನು ಹೆಚ್ಚು ಕೆದಕಲಿಲ್ಲ. ತಮ್ಮ ಬಜೆಟ್ ಪ್ರಸ್ತಾಪಗಳಿಗೆ ಕಾಂಗ್ರೆಸ್‌ನ ಒಳಗಿನಿಂದ ಬಂದ ಪ್ರತಿಕ್ರಿಯೆಗಳಿಂದ ಹಣಕಾಸು ಸಚಿವರೂ ಸ್ವಲ್ಪ ದುಗುಡಕ್ಕೆ ಒಳಗಾದಂತೆ ಕಾಣಿಸುತ್ತಿದ್ದರು.ಈ ಹಂತದಲ್ಲಿ ಕಾಂಗ್ರೆಸ್ ಸಂಸದರು ತಮ್ಮ ಕೋಪವನ್ನು ಕಾರಿಕೊಳ್ಳುವುದಕ್ಕೊಂದು ಅವಕಾಶ ಕಲ್ಪಿಸಲು ಪ್ರಧಾನಿ ನಿರ್ಧರಿಸಿದರು. 1991ರ ಆಗಸ್ಟ್ 1ರಂದು ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ಕರೆಯಲಾಯಿತು. ಅಲ್ಲಿ ಹಣಕಾಸು ಸಚಿವರು ತಮ್ಮ ಬಜೆಟ್ ಪ್ರಸ್ತಾಪಗಳನ್ನು ಸಮರ್ಥಿಸಿಕೊಂಡರು. ಈ ಸಭೆಯಿಂದ ದೂರ ಉಳಿದಿದ್ದ ಪ್ರಧಾನಿ ನರಸಿಂಹರಾವ್ ಸಂಸದರ ಆಕ್ರೋಶವನ್ನು ಮನಮೋಹನ್ ಸಿಂಗ್ ನೇರವಾಗಿ ಎದುರಿಸುವಂತೆ ನೋಡಿಕೊಂಡರು. ಇದರ ಹಿಂದೆಯೇ ಆಗಸ್ಟ್ 2 ಮತ್ತು 3ರಂದು ಮತ್ತೊಂದು ಸಭೆಯನ್ನು ನಡೆಸಲಾಯಿತು. ಇದರಲ್ಲಿ ಪ್ರಧಾನಿ ಮೊದಲಿನಿಂದ ಕೊನೆಯವರೆಗೂ ಉಪಸ್ಥಿತರಿದ್ದರು. ಮತ್ತೆ ಆಗಸ್ಟ್ 27,28 ಮತ್ತು 29ರಂದು ಮತ್ತೊಂದು ಸುತ್ತಿನ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ನಡೆಯಿತು. ಕಾಂಗ್ರೆಸ್ ಸಂಸದರ ಬಹುಮುಖ್ಯ ಕಾಳಜಿಯಾಗಿದ್ದ  ಕೃಷಿ ಕ್ಷೇತ್ರವನ್ನು ಕೇಂದ್ರೀಕರಿಸಿದ ಚರ್ಚೆಗಳು ಈ ಸಭೆಯಲ್ಲಿ ನಡೆದವು. ಕೈಗಾರಿಕಾ ನೀತಿಗೆ ಸಂಬಂಧಿಸಿದಂತೆ ಸಂಸದೀಯ ಪಕ್ಷದ ಸಭೆಯಲ್ಲಿ ಚರ್ಚೆಗಳು ನಡೆದದ್ದು ಡಿಸೆಂಬರ್ 16ರಂದು. ಈ ಹೊತ್ತಿಗಾಗಲೇ ಎಲ್ಲರೂ ಹೊಸ ಕೈಗಾರಿಕಾ ನೀತಿಯನ್ನು ಅರಗಿಸಿಕೊಂಡಿದ್ದರಷ್ಟೇ ಅಲ್ಲದೆ ಅರ್ಥ ಮಾಡಿಕೊಂಡಿದ್ದರು.ಜವಹರಲಾಲ್ ನೆಹರು ಅವರು ಪ್ರಧಾನಿಯಾಗಿದ್ದ ಅವಧಿಯನ್ನು ಹೊರತು ಪಡಿಸಿದರೆ ಮತ್ತೆಂದೂ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಬಿಸಿಯೇರಿದ ಚರ್ಚೆಗಳು ನಡೆದದ್ದೇ ಇಲ್ಲ. ಮನಮೋಹನ್ ಸಿಂಗ್ ಅವರ ಬಜೆಟ್ ಸಂಸದೀಯ ಪಕ್ಷದ ಸಭೆಗಳನ್ನು ಚುರುಕುಗೊಳಿಸಿತು ಎನ್ನಬಹುದು. ಪ್ರಧಾನಿ ನರಸಿಂಹರಾವ್ ಸಂಸದರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದಕ್ಕೆ ಮುಕ್ತ ಅವಕಾಶವನ್ನು ಒದಗಿಸಿದ್ದರು. ಆದರೆ ಆಡಳಿತ ನೀತಿ ಹೇಗಿರಬೇಕು ಎಂಬುದನ್ನು ಅಂತಿಮವಾಗಿ ಅವರೇ ನಿರ್ಧರಿಸುತ್ತಿದ್ದರು. ಇದನ್ನವರು ನೇರವಾಗಿ ಹೇಳುತ್ತಿರಲಿಲ್ಲ. ಇದೊಂದು ಚತುರ ರಾಜಕೀಯ ನಡೆಯಾಗಿತ್ತು. ಇದು ನನಗಾಗಲೀ ಹಣಕಾಸು ಸಚಿವರಿಗಾಗಲೀ ಆ ದಿನಗಳಲ್ಲಿ ಇಷ್ಟವಾಗಿರಲಿಲ್ಲ. ನಿಧಾನವಾಗಿ ಅವರ ನಡೆಗಳು ಏಕೆ ಹಾಗಿದ್ದವೆಂದು ನಮಗೆ ಅರ್ಥವಾಯಿತು. ಆ ಹೊತ್ತಿಗೆ ಅಂದಿನ ಹಣಕಾಸು ಸಚಿವರು ಪ್ರಧಾನಿಯಾಗಿದ್ದರು ನಾನು ಸಂಸದ ಮತ್ತು ಸಂಪುಟ ದರ್ಜೆ ಸಚಿವನಾಗಿದ್ದೆ.ಸಂಸದೀಯ ಪಕ್ಷದ ಸಭೆಗಳಲ್ಲಿ ಹಣಕಾಸು ಸಚಿವರು ಏಕಾಂಗಿಯಾಗಿಬಿಟ್ಟಿದ್ದರು. ಅವರ ದುಗುಡವನ್ನು ಪರಿಹರಿಸುವುದಕ್ಕೆ ಪ್ರಧಾನಿಯೂ ಇರುತ್ತಿರಲಿಲ್ಲ. ಸಬ್ಸಿಡಿಗಳನ್ನು ಕಡಿಮೆ ಮಾಡುವ ಪ್ರಸ್ತಾಪಕ್ಕಂತೂ ಬೆಂಬಲದ ಸುಳಿವೇ ಇರಲಿಲ್ಲ. ಇಂಥದ್ದೊಂದು ನಿರಾಶಾದಾಯಕ ವಾತಾವರಣದಲ್ಲಿ ಬಜೆಟ್ ಅನ್ನು ಸಂಪೂರ್ಣವಾಗಿ ಬೆಂಬಲಿಸಿದವರು ಇಬ್ಬರು ಸಂಸದರು. ಒಬ್ಬರು ತಮಿಳುನಾಡಿನಿಂದ ಆಯ್ಕೆಯಾಗಿದ್ದ ಮಣಿಶಂಕರ ಅಯ್ಯರ್. ಇವರು ರಾಜೀವ್ ಗಾಂಧಿ ಅವರ ಆಪ್ತರೂ ಹೌದು. ಮತ್ತೊಬ್ಬರು ರಾಜಸ್ಥಾನದ ರೈತನಾಯಕ ನಾಥುರಾಮ್ ಮಿರ್ಧಾ. ಮಣಿಶಂಕರ್ ಅಯ್ಯರ್ ಅವರ ಅಂದಿನ ಬೆಂಬಲ ಆಶ್ಚರ್ಯಕರ ಸಂಗತಿಯೂ ಹೌದು. ಏಕೆಂದರೆ ಮುಂದೆ ಅವರು ಮನಮೋಹನ್ ಸಿಂಗ್ ಅವರ ಅನೇಕ ನಿಲುವುಗಳ ವಿರುದ್ಧವಿದ್ದರು. ಅಂದು ಸಂಸದೀಯ ಪಕ್ಷದ ಸಭೆಯಲ್ಲಿ ಅಯ್ಯರ್ ಬಜೆಟ್ ಅನ್ನು ಸಮರ್ಥಿಸಿದರು. ಅಷ್ಟೇ ಅಲ್ಲ ರಾಜೀವ್ ಗಾಂಧಿ ಇದ್ದಿದ್ದರೆ ಈ ಅಸಾಮಾನ್ಯ ಸಂದರ್ಭದಲ್ಲಿ ಮಂಡಿಸಲಾಗಿರುವ ಬಜೆಟ್ ಅನ್ನು ಒಪ್ಪಿಕೊಳ್ಳುತ್ತಿದ್ದರು ಎಂದು ವಾದಿಸಿದರು.ಆಗಸ್ಟ್ 2ರಂದು ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ 1991, ಜುಲೈ 24ರ ಬಜೆಟ್ ಹೇಗೆ ರಾಜೀವ್ ಗಾಂಧಿಯವರ ನಂಬಿಕೆಗಳನ್ನು ಬಲಪಡಿಸುತ್ತಿವೆ ಮತ್ತು ಆರ್ಥಿಕ ಕುಸಿತವೊಂದನ್ನು ನಿವಾರಿಸುವುದಕ್ಕೆ ಇದೇಕೆ ಅಗತ್ಯವಿದೆ ಎಂದು ಅಯ್ಯರ್ ವಿವರಿಸಿದರು. ಒಂದರ್ಥದಲ್ಲಿ ಇದು ಇಂದಿರಾ ಮತ್ತು ರಾಜೀವ್ ಇಬ್ಬರಿಗೂ ಆಪ್ತರಾಗಿದ್ದ ಆರ್.ಕೆ. ಧವನ್ ಅವರ ನಿಲುವುಗಳಿಗೆ ಸವಾಲು ಹಾಕುವಂತಿತ್ತು. ಇಷ್ಟರಲ್ಲಾಗಲೇ ಕೃಷಿ ಸಚಿವ ಬಲರಾಮ್ ಜಾಖಡ್ ಮತ್ತು ಸಂಪರ್ಕ ಖಾತೆ ಸಚಿವ ರಾಜೇಶ್ ಪೈಲೆಟ್ ತಮ್ಮದೇ ಸಂಪುಟ ಸಹೋದ್ಯೋಗಿಯ ಪ್ರಸ್ತಾಪಗಳ ವಿರುದ್ಧ ಸಾರ್ವಜನಿಕ ಹೇಳಿಕೆಗಳನ್ನು ನೀಡಿದ್ದರು. ಇನ್ನೂ ದೊಡ್ಡ ವಿಪರ್ಯಾಸವೆಂದರೆ ರಸಗೊಬ್ಬರ ಮತ್ತು ರಾಸಾಯನಿಕಗಳ ಖಾತೆಯ ರಾಜ್ಯ ಸಚಿವ ಚಿಂತಾ ಮೋಹನ್ ಅವರು ಸಬ್ಸಿಡಿ ಕಡಿತದ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ಸಬ್ಸಿಡಿ ಕಡಿತದ ವಿರುದ್ಧ ಹಲವು ರೈತ ಸಂಘಟನೆಗಳನ್ನು ಎತ್ತಿ ಕಟ್ಟಿ ಪ್ರತಿಭಟನೆಗಳಿಗೂ ಕಾರಣರಾದರು.

ಇದೇ ವೇಳೆ ‘ಕೃಷಿಕರ ಸಂಸದೀಯ ವೇದಿಕೆ’ ಹೆಸರಿನಲ್ಲಿ 50 ಮಂದಿ ಕಾಂಗ್ರೆಸ್ ಸಂಸದರ ಬಳಗವೊಂದು ಹಣಕಾಸು ಸಚಿವರಿಗೆ ಬಜೆಟ್ ಪ್ರಸ್ತಾಪಗಳನ್ನು ಕಟುವಾಗಿ ಟೀಕಿಸುವ ಪತ್ರವೊಂದನ್ನು ಬರೆಯಿತು. ಈ ಸಂಸದರ ವೇದಿಕೆಯ ಸ್ವರೂಪವೇ ವಿಲಕ್ಷಣ ಎನಿಸುವಂತಿತ್ತು. ಇದರ ಅಧ್ಯಕ್ಷರಾಗಿದ್ದ ಮಹಾರಾಷ್ಟ್ರದ ಹಿರಿಯ ಸಂಸದ ಪ್ರತಾಪ್ ರಾವ್ ಭೋಸ್ಲೆ ಪ್ರಧಾನ ಮಂತ್ರಿಯ ಆಪ್ತರಾಗಿದ್ದರು. ಈ ಪತ್ರಕ್ಕೆ ಸಹಿ ಹಾಕಿದ್ದ ಮುಂಬೈ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮುರಳಿ ದೇವ್ರಾ ಅವರು ಔದ್ಯಮಿಕ ಕ್ಷೇತ್ರದೊಂದಿಗೆ ಹೊಂದಿದ್ದ ಸಂಬಂಧ ಗುಟ್ಟಾಗಿಯೇನೂ ಇರಲಿಲ್ಲ. ಈ ಎಲ್ಲಾ ಸಮಸ್ಯೆಗಳಾಚೆಗೆ ವಿರೋಧ ಪಕ್ಷಗಳು ರಸಗೊಬ್ಬರ ಸಬ್ಸಿಡಿ ಕಡಿತದ ವಿರುದ್ಧ ಖಂಡನಾ ನಿರ್ಣಯದ ಬೆದರಿಕೆಯನ್ನೊಡ್ಡುತ್ತಿದ್ದವು. ರಾಜಕೀಯ ಪಕ್ಷಗಳ ಮನಃಸ್ಥಿತಿಯನ್ನು ನೋಡಿದಾಗ ಖಂಡನಾ ನಿರ್ಣಯ ಅಂಗೀಕಾರ ಪಡೆಯುವ ಸಾಧ್ಯತೆಯೇ ಹೆಚ್ಚಿತ್ತು. ಅದು ಸಂಭವಿಸಿದರೆ ಸರ್ಕಾರಕ್ಕೆ ಅದಕ್ಕಿಂತ ವಿನಾಶಕಾರಿಯಾದ ಮತ್ತೇನೂ ಬೇಕಾಗುತ್ತಿರಲಿಲ್ಲ!ಈ ಮಧ್ಯೆ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ 100 ಕೋಟಿ ರೂಪಾಯಿಗಳ ಅನುದಾನ ಕೊಡುವ ಬಜೆಟ್ ಪ್ರಸ್ತಾಪದ ವಿರುದ್ಧವೂ ಖಂಡನಾ ನಿರ್ಣಯ ಮಂಡಿಸುವ ಮಾತು ಕೇಳಿಬರುತ್ತಿತ್ತು. ಈ ಪ್ರತಿಷ್ಠಾನಕ್ಕೆ 100 ಕೋಟಿ ರೂಪಾಯಿಗಳನ್ನು ಕೊಡುವುದರಿಂದ ಪಕ್ಷದ ಸಂಸದರನ್ನು ಒಲಿಸಿಕೊಳ್ಳಬಹುದು ಎಂದು ಪ್ರಧಾನಿ ಹಾಗೂ ಹಣಕಾಸು ಸಚಿವರು ಭಾವಿಸಿದ್ದರು. ಆದರೆ ಅದು ತಿರುಗುಬಾಣವಾಗಿ ಪರಿಣಮಿಸಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಈ ಪ್ರತಿಷ್ಠಾನದ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಇಂಥದ್ದೊಂದು ಅನುದಾನವನ್ನು ನಿರೀಕ್ಷಿಸಿಯೇ ಇರಲಿಲ್ಲ.ಅಷ್ಟು ಮಾತ್ರವಲ್ಲ ಅನುದಾನವನ್ನು ಹಿಂತೆಗೆದುಕೊಳ್ಳುವುದೇ ಸರಿ ಎಂಬ ನಿಲುವಿನಲ್ಲಿದ್ದರು. ಇವೆಲ್ಲವನ್ನೂ ಪರಿಗಣಿಸಿ ಹಣಕಾಸು ಸಚಿವರು ಬುದ್ಧಿವಂತಿಕೆ ಪ್ರದರ್ಶಿಸಿ ಜುಲೈ 6ರಂದು ಈ ಪ್ರಸ್ತಾಪವನ್ನೇ ಕೈಬಿಟ್ಟಿರುವುದಾಗಿ ಲೋಕಸಭೆಯಲ್ಲೇ ಘೋಷಿಸಿದರು.

***

ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ರಸಗೊಬ್ಬರ ಸಬ್ಸಿಡಿಯನ್ನು ಶೇಕಡಾ 40ರಷ್ಟು ಕಡಿಮೆ ಮಾಡುವುದಾಗಿ ಘೋಷಿಸಿದ್ದರು. ಸ್ವಪಕ್ಷೀಯರಿಂದ ಆರಂಭಿಸಿ ಎಲ್ಲಾ ರಾಜಕೀಯ ಪಕ್ಷಗಳೂ ಈ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ ಪರಿಣಾಮವಾಗಿ ಆಗಸ್ಟ್ 6ರಂದು ಈ ಕಡಿತವನ್ನು ಶೇಕಡಾ 30ಕ್ಕೆ ಇಳಿಸುವುದಾಗಿ ಹಣಕಾಸು ಸಚಿವರು  ಲೋಕಸಭೆಗೆ ತಿಳಿಸಿದರು. ಆದರೆ ಇದು ಸಂಸದರಿಗೆ ಸಮಾಧಾನ ತರಲಿಲ್ಲ. ಪ್ರತಿಭಟನೆಗಳು ಮುಂದುವರಿದವು. ಮನಮೋಹನ್ ಸಿಂಗ್ ಮತ್ತೊಂದು ಪ್ರಸ್ತಾಪವನ್ನು ಮುಂದಿಟ್ಟರು. ದೇಶದ ಕೃಷಿಯಲ್ಲಿ 76ರಷ್ಟು ಪಾಲು ಹೊಂದಿರುವ, ಕೃಷಿ ಭೂಮಿಯ ಶೇಕಡಾ 29ರಷನ್ನು ನಿರ್ವಹಿಸುತ್ತಿರುವ ಮತ್ತು ಒಟ್ಟು ರಸಗೊಬ್ಬರ ಬಳಕೆಯ ಶೇಕಡಾ 30ರಷ್ಟನ್ನು ಬಳಸುವ ಸಣ್ಣ ಮತ್ತು ಅತಿ ಸಣ್ಣ ರೈತರು ಖರೀದಿಸುವ ರಸಗೊಬ್ಬರವನ್ನು ಸಬ್ಸಿಡಿ ಕಡಿತದಿಂದ ಹೊರಗೆ ಇಡಲಾಗುವುದು ಎಂದು ಹೇಳಿದರು. ಆದರೆ ಪೆಟ್ರೋಲ್ ಮತ್ತು ಎಲ್‌ಪಿಜಿ ಬೆಲೆ ಹೆಚ್ಚಿಸುವ ಪ್ರಸ್ತಾಪವನ್ನು ಹಿಂದಕ್ಕೆ ಪಡೆಯಲಿಲ್ಲ. ರಸಗೊಬ್ಬರ ಬೆಲೆಗೆ ಸಂಬಂಧಿಸಿದ ಅವರ ಹೊಸ ಘೋಷಣೆ ಪಕ್ಷದ ಒಳಗಿನ ಟೀಕಾಕಾರರ ಬಾಯಿ ಮುಚ್ಚಿಸಿತು. ಈ ಎರಡು ಬಗೆಯ ಬೆಲೆಯ ಉಪಾಯ ಹೇಗೆ ಸರಿಯಾಗಿ ಕೆಲಸ ಮಾಡಲು ಸಾಧ್ಯ ಎಂಬ ಪ್ರಶ್ನೆ ನನ್ನಲ್ಲಿ ಉಳಿದಿತ್ತು. ಇದನ್ನು ನಾನು ಹೊರಗೆಲ್ಲೂ ಹೇಳದೆ ನನ್ನೊಳಗೇ ಇಟ್ಟುಕೊಂಡೆ. ಏಕೆಂದರೆ ಸದ್ಯದ ಮಟ್ಟಿಗೆ ಹಣಕಾಸು ಸಚಿವರು ಮತ್ತು ಪ್ರಧಾನ ಮಂತ್ರಿಗೆ ಒಂದು ದೊಡ್ಡ ರಾಜಕೀಯ ಜಯ ದೊರೆತಿದೆ ಎಂಬುದು ನನ್ನ ಭಾವನೆಯಾಗಿತ್ತು. ಕೆಲವು ತಿಂಗಳುಗಳಲ್ಲಿ ಎರಡು ಬಗೆಯ ಬೆಲೆಯ ಪದ್ಧತಿ ಪ್ರಾಯೋಗಿಕವಲ್ಲ ಎಂಬುದು ಸಾಬೀತಾಯಿತು.ಈ ಎಲ್ಲವೂ ಬಹಿರಂಗವಾಗಿ ಕಾಣಿಸಿದ ಬೆಳವಣಿಗೆಗಳು. ತೆರೆಯ ಹಿಂದೆ ನಡೆದದ್ದು ಬೇರೆಯೇ. ಅದು ಹೀಗಿದೆ: ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಆಗಸ್ಟ್ 4 ಮತ್ತು 5ರಂದು ಎರಡು ಬಾರಿ ಅನೌಪಚಾರಿಕವಾಗಿ ಸೇರಿ ಚರ್ಚೆ ನಡೆಸಿತು. ಎಲ್ಲಾ ರಾಜ್ಯಗಳ ಕಾಂಗ್ರೆಸ್ ಸಂಸದರ ಅದರಲ್ಲೂ ಮುಖ್ಯವಾಗಿ ಪ್ರಧಾನ ಮಂತ್ರಿಯವರ ರಾಜ್ಯದ ಸಂಸದರ ಒತ್ತಡವನ್ನು ಪರಿಗಣಿಸಿ ರಸಗೊಬ್ಬರ ಸಬ್ಸಿಡಿಗೆ ಸಂಬಂಧಿಸಿದಂತೆ ಆಗಸ್ಟ್ 6ರಂದು ಮನಮೋಹನ್ ಸಿಂಗ್ ಲೋಕಸಭೆಯಲ್ಲೊಂದು ಹೇಳಿಕೆ ನೀಡಬೇಕೆಂಬ ತೀರ್ಮಾನಕ್ಕೆ ಸಮಿತಿ ಬಂತು.ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯ ನಂತರ ಯಾವುದೇ ಪತ್ರಿಕಾ ಹೇಳಿಕೆಯನ್ನು ನೀಡುವ ಸಂಪ್ರದಾಯವಿರಲಿಲ್ಲ. ಆದರೆ ಆಗಸ್ಟ್ 3ರಂದು ನಡೆದ ಸಭೆಯ ನಂತರ ಪಕ್ಷದ ವಕ್ತಾರ ಮತ್ತು ಸಂಸದ ಪ್ರೊ. ಸಿ.ಪಿ ಠಾಕೂರ್ ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಸಂಸದೀಯ ಪಕ್ಷದ ಸಭೆಯಲ್ಲಿ ನಡೆದ ಚರ್ಚೆಯ ವಿಚಾರಗಳನ್ನೇ ಆಗಸ್ಟ್ 4 ಮತ್ತು 5ರಂದು ನಡೆದ ಸಂಪುಟ ಸಮಿತಿಯ ಸಭೆಯೂ ಚರ್ಚಿಸಿತ್ತು. ಸಂಸದೀಯ ಸಭೆಯ ನಂತರದ ಪತ್ರಿಕಾ ಹೇಳಿಕೆ ಸಬ್ಸಿಡಿಗಳನ್ನು ಹಿಂತೆಗೆದುಕೊಳ್ಳುವ ವಿಚಾರದಲ್ಲಿ ಮೌನವಾಗಿತ್ತು. ಆದರೆ ಸಣ್ಣ ಮತ್ತು ಅತಿ ಸಣ್ಣ ರೈತರ ಹಿತ ಕಾಪಾಡುವ ಕ್ರಮಗಳ ಬಗ್ಗೆ ಹೇಳುತ್ತಿತ್ತು. ಇದು ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರ ಭಾಷೆಯಲ್ಲಿ ಇದ್ದದ್ದು ಹೀಗೆ: ‘ದೇಶ ಎದುರಿಸುತ್ತಿರುವ ದುರದೃಷ್ಟಕರ ಆರ್ಥಿಕ ಪರಿಸ್ಥಿತಿ ಮತ್ತು ಸದಸ್ಯರ ರಾಜಕೀಯ ಕಾಳಜಿಗಳ ನಡುವೆ ಒಂದು ಹೊಂದಾಣಿಕೆ ಬೇಕು ಎಂಬುದನ್ನು ಚರ್ಚೆಗಳು ಸ್ಪಷ್ಟಪಡಿಸಿದವು’.ಈ ವಿಚಾರದಲ್ಲಿ ಎರಡೂ ಕಡೆಯವರು ಗೆದ್ದರು. ಪಕ್ಷದ ಸದಸ್ಯರು ಸರ್ಕಾರ ಮರು ಚಿಂತನೆ ನಡೆಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಹಾಗೆಯೇ ರಸಗೊಬ್ಬರದ ಬೆಲೆಯನ್ನು ನಿಯಂತ್ರಣದಿಂದ ಹೊರಗಿಡುವ ಮತ್ತು ಸಬ್ಸಿಡಿಯನ್ನು ಕಡಿತ ಮಾಡುವ ಸರ್ಕಾರದ ಉದ್ದೇಶವೂ ಈಡೇರಿತು. ಇದು ರಚನಾತ್ಮಕ ರಾಜಕೀಯ ಆರ್ಥಿಕತೆಯ ಅತ್ಯುತ್ತಮ ಉದಾಹರಣೆಯಾಗಿರುವಂತೆಯೇ ಪಕ್ಷ ಮತ್ತು ಸರ್ಕಾರಗಳೆರಡೂ ಗೆಲ್ಲುವ ಸಾಧ್ಯತೆಯೊಂದರ ಪ್ರತೀಕವೂ ಹೌದು.ಇಷ್ಟೆಲ್ಲಾ ಆದ ಮೇಲೂ ರಸಗೊಬ್ಬರ ಸಬ್ಸಿಡಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರಸಿಂಹರಾವ್ ಅವರು ತಳಮಳಗೊಳ್ಳಬೇಕಾದ ಒಂದು ಘಟನೆ ಸಂಭವಿಸಿತು. ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರು ಆಗಸ್ಟ್ 5ರ ‘ದಿ ಹಿಂದೂ’ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟಿಸಿ ಸರ್ಕಾರ ಹೂಡಿಕೆಯಲ್ಲಿ ಮಾಡಿದ ತಪ್ಪಿಗೆ ರೈತರಿಗೆ ದಂಡ ವಿಧಿಸಲಾಗುತ್ತಿದೆ ಎಂಬ ಅಭಿಪ್ರಾಯ ಮಂಡಿಸಿದರು. ಅವರ ಲೇಖನ ಹೊಸ ರಸಗೊಬ್ಬರ ಕಾರ್ಖಾನೆಗಳಿಗೆ ಬಳಸಿದ ತಂತ್ರಜ್ಞಾನ ಕಳಪೆ ಗುಣಮಟ್ಟದ್ದು. ಆದ್ದರಿಂದಲೇ ಸಬ್ಸಿಡಿ ಕಡಿತದ ಅನಿವಾರ್ಯತೆ ಉದ್ಭವಿಸಿದೆ ಎಂದು ವಾದಿಸಿತ್ತು.ಇದನ್ನು ಓದಿದ ನರಸಿಂಹರಾವ್ ನನ್ನ ಅಭಿಪ್ರಾಯ ಕೇಳಿದರು. ಈ ಕುರಿತಂತೆ ಸ್ಪಷ್ಟ ಅರಿವಿದ್ದ ನಾನು ಹಾಝಿರಾ–ಬಿಜೈಪುರ–ಜಗದೀಶಪುರ ಪೈಪ್ ಲೈನ್‌ಗೆ ಹೊಂದಿಕೊಂಡಂತೆ ಇದ್ದ ಕಾರ್ಖಾನೆಗಳು ಅಂತರ ರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನವನ್ನು ಬಳಸುತ್ತಿರುವ ಭರವಸೆ ನೀಡಿದೆ. ಎಂಟರಿಂದ ಹತ್ತು ಯೂರಿಯಾ ಸ್ಥಾವರಗಳಲ್ಲಿ ಸ್ಪರ್ಧಾತ್ಮಕ ಹರಾಜಿನ ಮಾದರಿಯನ್ನೇ ಬಳಸಲಾಗಿಲ್ಲ. ಆದ್ದರಿಂದ ಯೂರಿಯಾ ಬೆಲೆಯನ್ನು ನಿಗದಿ ಪಡಿಸುವ ಪ್ರಕ್ರಿಯೆಯನ್ನು ಸುಧಾರಣೆಗೆ ಒಳಪಡಿಸುವ ಅಗತ್ಯವಿದೆ. ಒಟ್ಟಾರೆ ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರ ಆರೋಪಗಳು ನಿಜವಲ್ಲ. ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರವಂತೂ ವಾಸ್ತವದಿಂದ ಬಹುದೂರವಿದೆ ಎಂದು ಪ್ರಧಾನ ಮಂತ್ರಿಯವರಿಗೆ ವಿವರಿಸಿದೆ. ನರಸಿಂಹರಾವ್ ಅವರು ಸಮಾಧಾನಚಿತ್ತರಾದರು. ಒಂದು ವೇಳೆ ವಿ.ಪಿ.ಸಿಂಗ್ ಅವರ ಲೇಖನ ಸಂಸತ್ತಿನಲ್ಲಿ ಚರ್ಚೆಗೆ ಬಂದರೆ ಅದಕ್ಕೆ ಉತ್ತರ ನೀಡಬಹುದು ಎಂಬ ಧೈರ್ಯ ಅವರಿಗೆ ಬಂತು. ಆದರೆ ಈ ವಿಚಾರ ಸಂಸತ್ತಿನಲ್ಲಿ ಚರ್ಚೆಗೇ ಬರಲಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry