7

ಮಕ್ಕಳ ನೆತ್ತರಿನಲ್ಲಿ ಭೂಮಿತಾಯಿ ಜಳಕ

ಲಕ್ಷ್ಮೀಶ ತೋಳ್ಪಾಡಿ
Published:
Updated:
ಮಕ್ಕಳ ನೆತ್ತರಿನಲ್ಲಿ ಭೂಮಿತಾಯಿ ಜಳಕ

ಮಹಾಭಾರತವು ಯುಗಾಂತ್ಯದ ಇತಿಹಾಸವಾಗಿದೆ. ಒಂದು ಯುಗವೇ ಕೊನೆಗೊಳ್ಳುತ್ತಿರುವ ಹೊತ್ತಿನಲ್ಲಿ ಆ ಅವಸಾನ ಕ್ಷಣಗಳ ಮಹಾಕ್ಷೋಭೆ ಮಹಾಭಾರತದಲ್ಲಿ ಮಡುಗಟ್ಟಿದೆ. ಯುಗಾಂತ್ಯವೂ ಹೌದು, ಯುಗಸಂಧಿಯೂ ಹೌದು. ಅಂದರೆ ‘ದ್ವಾಪರ’ ಮುಗಿದು ‘ಕಲಿ’ ಹೆಜ್ಜೆ ಇಡುತ್ತಿರುವ ಹೊತ್ತು.ಪ್ರತಿಯುಗಸಂಧಿಯೂ ಇಂಥದೊಂದು ರಕ್ತಕ್ಷೋಭೆಗೆ ಸಾಕ್ಷಿಯಾಗಲೇಬೇಕೇನೋ, ತ್ರೇತಾ–ದ್ವಾಪರಗಳ ಸಂಧಿಯಲ್ಲಿ ಹಿಂದೊಮ್ಮೆ ಹೀಗೇ ಆಗಿತ್ತಂತೆ. ಪರಶುರಾಮನಿಂದ ನಡೆದ ಕ್ಷತ್ರಿಯ ಸಂಹಾರದಲ್ಲಿ ರಕ್ತಕೋಡಿ ಹರಿದು ಐದು ಕೊಳಗಳಲ್ಲಿ ನೆತ್ತರು ಮಡುಗಟ್ಟಿತ್ತಂತೆ. ಆ ಕೊಳಗಳನ್ನು ‘ಸಮಂತ–ಪಂಚಕ’ ಎನ್ನುತ್ತಾರೆ. ಆ ಜಾಗವೊಂದು ಕ್ಷೇತ್ರವಾಗಿಬಿಟ್ಟಿತು. ಅವುಗಳ ಸುತ್ತ ಒಂದು ಆವಾಸವೇ ಬೆಳೆದಿರಬಹುದು.ಹದಿನೆಂಟು ಅಕ್ಷೌಹಿಣೀಸೇನೆ ಹೋರಲು ಸೇರಿದ್ದ ಕುರುಕ್ಷೇತ್ರವನ್ನೂ ಧರ್ಮಕ್ಷೇತ್ರ ಎಂದೇ ಕರೆಯುತ್ತಾರೆ. ‘ಧರ್ಮಕ್ಷೇತ್ರೇ–ಕುರುಕ್ಷೇತ್ರೇ’. ಈ ಕುರುಕ್ಷೇತ್ರದ ಒಂದು ಪಕ್ಷದಲ್ಲಿಯೇ ಇದೆ ಸಮಂತ–ಪಂಚಕ. ಅಂದರೆ ಇನ್ನೊಮ್ಮೆ ಆ ಐದು ಕೊಳಗಳು ಕ್ಷತ್ರಿಯರ ರಕ್ತದಿಂದ ತುಂಬಿಕೊಳ್ಳುವ ಸಂದರ್ಭ ಒದಗಿ ಬಂದಿದೆ.ಭೂಮಿತಾಯಿಯ ನೆತ್ತರ ಜಳಕ ಇನ್ನೂ ಮುಗಿದಿಲ್ಲ. ‘‘ಪರಶುರಾಮನು ಎರೆದ ಕೆನ್ನೀರ ಜಳಕಕ್ಕೆ ಕೂದಲು ನೆನೆಯಲಿಲ್ಲೆನ್ನುತ್ತಿಹೆ’’. ಅವಳ ಮಕ್ಕಳ ನೆತ್ತರಿನಲ್ಲಿಯೇ ಭೂಮಿತಾಯಿ ಜಳಕವಾಡುವಳು.ಯುಗಸಂಧಿ ಎಂದರೆ ನೆತ್ತರ ಜಳಕದ ಹೊತ್ತು! ಕುರುಕ್ಷೇತ್ರದಲ್ಲಿ ನಡೆದ ಹದಿನೆಂಟು ದಿನಗಳ ಯುದ್ಧದ ಕೊನೆಯ ದಿನ, ದುರ್ಯೋಧನ ತನ್ನ ತೊಡೆ ಮುರಿಯಲ್ಪಟ್ಟು ಕೆಡೆದು ಬಿದ್ದನಲ್ಲ – ದುರ್ಯೋಧನನ ಸಾವಿನ ದಿನವೇ ಕಲಿಯುಗದ ಮೊದಲ ದಿನವಂತೆ.ದ್ವಾಪರ ಕೊನೆಗೊಂಡಿತಂತೆ. ಕೊನೆಗೊಂಡರೂ ಆಗ ಕೃಷ್ಣನಿದ್ದನಲ್ಲ. ಕೃಷ್ಣ ದ್ವಾಪರದ ದೈವವಲ್ಲವೆ? ಯುಗದ ಪ್ರಭಾವಕ್ಕೆ ಎಲ್ಲರಂತೆ ತಾನೂ ಒಳಗಾದವನಲ್ಲವೆ? ಆದುದರಿಂದಲೇ ಕುಮಾರವ್ಯಾಸ ಹೇಳುವಂತೆ ‘ಸೆಣಸು ಸೇರದ ದೇವ’ನಲ್ಲವೆ? ಪಂಪನ ಭಾಷೆಯಲ್ಲಿ ಕೃಷ್ಣ – ‘ಕಾಲಕುಶಲ’ನಲ್ಲವೆ? ಆದುದರಿಂದ ಭೂಮಿಯ ಮೇಲೆ ಕೃಷ್ಣನಿರುವಷ್ಟು ಕಾಲ – ಅಂದರೆ ಮುಂದಿನ ಮೂವತ್ತಾರು ವರ್ಷಗಳ ಕಾಲ, ಕಲಿ, ತಾನು ಕಾಲಿಡದೆ, ತನ್ನ ಆಳ್ವಿಕೆಯ ಕಾಲವನ್ನು ಕೃಷ್ಣನಿಗೆ ಒಪ್ಪಿಸಿದನೆಂಬಂತೆ ತಾನು ಮರೆಯಲ್ಲಿಯೇ ಕಾಯುತ್ತಿದ್ದನಂತೆ. ಇದು ಯುಗ–ಸಂಧಿಯ ಇನ್ನೊಂದು ಮುಖ.ದುರ್ಯೋಧನ ತಾನು ಕೊನೆಯುಸಿರೆಳೆವ ಮುನ್ನ ತನ್ನನ್ನು ಕಾಣಲು ಬಂದ ಕೃಪ, ಕೃತವರ್ಮ, ಅಶ್ವತ್ಥಾಮರಿಗೆ – ಯುದ್ಧದಲ್ಲಿ ಕೌರವರ ಕಡೆಯಲ್ಲಿ ಕೊನೆಗೆ ಉಳಿದವರು ಈ ಮೂರು ಜನ ಮಾತ್ರ – ಹೀಗೆ ಹೇಳಿದನಂತೆ: ‘‘ನಿಮಗೆ ನನ್ನ ಮೇಲೆ ಸ್ನೇಹವಿದೆ ನಿಜ. ನಿಮಗೆ ದುಃಖವಾಗುವುದೂ ನಿಜ. ಆದರೆ ನನಗಾಗಿ ನೀವು ಪರಿತಪಿಸಬೇಕಾದುದಿಲ್ಲ.‘ನಾಸ್ಮಿಶೋಚ್ಯಃ ಕಥಂಚನ’. ನಾನು ಶೋಕಾರ್ಹನಲ್ಲವೇ ಅಲ್ಲ. ಏಕೆಂದರೆ ಕ್ಷತ್ರಿಯರ ಧರ್ಮವನ್ನೇ ನಾನು ಪಾಲಿಸಿದೆ. ಈ ಲೋಕದಲ್ಲಿ ನಾನು ಸೋತಿರಬಹುದು. ಆದರೆ ಅಕ್ಷಯವಾದ ಪರಲೋಕಗಳನ್ನು ನಾನು ಪಡೆಯಲಿರುವೆ. ವೇದಗಳು ಹಾಗೆಂದು ಹೇಳಿಲ್ಲವೆ? ‘ಯದಿ ವೇದಾಃ ಪ್ರಮಾಣಂ ಜಿತಾಃ ಲೋಕಾಃ ಮಯಾಕ್ಷಯಾಃ’. ಕೃಷ್ಣನಂಥವನ ಪ್ರಭಾವಕ್ಕೆ ಒಳಗಾಗಿ  ಪಾಂಡವರೊಡನೆ ನಾನು ಸಂಧಾನಕ್ಕೆ ಒಪ್ಪುತ್ತಿದ್ದರೆ ನಾನು ಕ್ಷತ್ರಿಯಧರ್ಮಕ್ಕೆ ಸಲ್ಲದವನಾಗಿ ಬಿಡುತ್ತಿದ್ದೆ. ಹಾಗಾಗಬೇಕೆಂದೇ ಕೃಷ್ಣನ ಪ್ರಯತ್ನವಿತ್ತು.ಆದರೆ ನಾನೋ – ಕೃಷ್ಣನನ್ನು ಮೀರಿಸಿದೆ. ಕ್ಷತ್ರಿಯ ಧರ್ಮವನ್ನು ಪಾಲಿಸಿದೆ – ಬಲ್ಲಿರಾ’.ಇದು ಛಲ. ಪಂಪ, ‘ಛಲದೊಳ್‌ ದುರ್ಯೋಧನಂ’ ಎನ್ನುತ್ತಾನೆ. ‘ಏನಭಿಮಾನಧನಂ ಸುಯೋಧನಂ’ ಎನ್ನುತ್ತಾನೆ. ಇದು ಒಂದು ಅರ್ಥದಲ್ಲಿ ಯುಗಾಂತ್ಯದ ಛಲವೇ ನಿಜ.ಅಂದರೆ ಸರ್ವನಾಶ ಎನ್ನುವ ಅರ್ಥದಲ್ಲಿ. ಆದರೆ ಕ್ಷತ್ರಿಯರಿಗೆ ಪಶ್ಚಾತ್ತಾಪ ಪಡುವ ಆಂತಃಕರಣದ ಅರ್ಹತೆ ಇಲ್ಲವೆನಿಸುತ್ತದೆ. ಪಶ್ಚಾತ್ತಾಪ ಪಟ್ಟರೆ ಯುಗವೇ ಬದಲಾಗುತ್ತದೆ. ಆದರೆ ಸಾವಿನಲ್ಲಿಯೂ ತಮ್ಮ ಯುಗಾಂತ್ಯವಾಗುವುದು ಕ್ಷತ್ರಿಯರಿಗೆ ಬೇಕಿಲ್ಲ.ತಮ್ಮ ನೆಲದ ಮೇಲೆ ದೈವ ಕಾಲಿಡುವುದು ಬೇಕಿಲ್ಲ ಕುಮಾರವ್ಯಾಸದಲ್ಲಿ ಈ ಸಂದರ್ಭ ಬೇರೆಯಾಗಿದೆ. ತಾನು ತೊಡೆಮುರಿದು ಬಿದ್ದಮೇಲೆ ದುರ್ಯೋಧನನಿಗೆ ತನ್ನ ಬದುಕಿನಲ್ಲಿ ದೈವದ ಹೆಜ್ಜೆಗುರುತುಗಳು ಕಾಣಿಸುತ್ತಿವೆ. ‘ದೈವದ ಕದಡು ಮನಗಾಣಿಸಿತು’ ಎನ್ನುತ್ತಾನೆ. ಆ ದೈವ – ಕೃಷ್ಣ! ಈ ಸ್ಥಿತಿಯಲ್ಲಿ ಕೌರವನನ್ನು ಕಂಡು ತಾನು ಪಾಂಡವರ ತಲೆ ತರಿದು ತಂದು ತೋರಿಸುವೆನೆಂದು ಅಶ್ವತ್ಥಾಮ ಉದ್ರಿಕ್ತನಾಗಿ ಸಿಡಿದು ನುಡಿದಾಗ ‘ನಿನ್ನ ಭುಜಬಲ ವಾಗುರಿಯ ವೇಢೆಯಲಿ ಬೀಳದು ಕೃಷ್ಣಬುದ್ಧಿಮೃಗ’ ಎನ್ನುತ್ತಾನೆ ದುರ್ಯೋಧನ. ಎಂಥ ರೂಪಕ! ನಿನ್ನ ಪರಾಕ್ರಮದ ಬಲೆಯಲ್ಲಿ ಕೃಷ್ಣನೆಂಬ ಪರಮ ಬುದ್ಧಿಶಾಲಿ ಮೃಗ ಸಿಕ್ಕಿ ಬೀಳುವುದುಂಟೆ? ‘ಪಾಂಡವರ ವಧೆ ನಿನಗಾಗಲರಿಯದು’ – ಎನ್ನುತ್ತಾನೆ.ಇದು ಮಹಾಭಾರತದ ಯುಗಾಂತ್ಯವನ್ನು ದೈವದ ‘ಆಟ’ವೆಂದು ನೋಡುವ ದರ್ಶನ. ‘ಛಲ’ವೆಂದಾಗ – ಈ ಎಲ್ಲ ದಾರುಣತೆಗೂ ಅದೇ ಕಾರಣವಾದರೂ – ಉಂಟಾಗುವ ಗಂಭೀರತೆ ‘ಆಟ’ವೆಂದಾಗ ಅದೇಕೋ ಉಂಟಾಗುವುದಿಲ್ಲ. ‘ಛಲ’ಕ್ಕೆ ‘ಆಟ’ದ ಕುರಿತು ವಿರೋಧವಿದೆ. ಆದರೆ ‘ಆಟ’ಕ್ಕೆ ‘ಛಲ’ದ ಕುರಿತು ವಿರೋಧವಿಲ್ಲ. ನಿಜಕ್ಕಾದರೆ ಕೃಷ್ಣ ಬಳಸಿದ ಪದ –‘ನಿಮಿತ್ತ’ ಎಂದು.ನನಗೊಂದು ನಿಮಿತ್ತ ಬೇಕಾಗಿದೆ. ಇದು ನಾನೇ ಆಡುವ ಆಟ. ಆದರೆ ಇಬ್ಬರಿಲ್ಲದೆ ಆಟವಾಗುವುದಿಲ್ಲವಲ್ಲ. ಆದುದರಿಂದ ಅಂಥದೊಂದು ‘ನಿಮಿತ್ತ’ ನೀನಾಗು ಎನ್ನುತ್ತಾನೆ ಅರ್ಜುನನಿಗೆ. ‘ಛಲ’ವೂ ಬೆಳೆಯುವುದು ಒಂದು ‘ನಿಮಿತ್ತ’ ಇದ್ದಾಗಲೇ. ದುರ್ಯೋಧನನಿಗೆ ಅವನ ‘ಛಲ’ ಹುಟ್ಟಲು, ಬೆಳೆಯಲು ಪಾಂಡವ ದ್ವೇಷವು ನಿಮಿತ್ತವಾಯಿತು.ಕೃಷ್ಣನಿಗೂ ಪಾಂಡವರೇ ನಿಮಿತ್ತ. ಆದರೆ ಛಲಕ್ಕೆ ತನ್ನ ಅರಿವಿಲ್ಲ. ಆಟಕ್ಕೆ ತನ್ನರಿವಿದೆ. ತನ್ನರಿವಿದ್ದು ಮಾಡುವ ಎಲ್ಲದರಲ್ಲೂ ಆಟದ ಒಂದು ಗುಣ ಕಾಣಿಸುತ್ತದೆ. ಅದರಲ್ಲೂ ತಾನು ನಿಮಿತ್ತ ಮಾತ್ರ ಎನ್ನುವ ಅರಿವಿನಲ್ಲಿ ಆಟದ ಹಗುರಾದ ಗುಣ ಧಾರಾಳವಾಗಿದೆ.ಯುಗಾಂತ್ಯದ ಸಂದರ್ಭದಲ್ಲಿ ಎಲ್ಲರೂ ಯುದ್ಧಕ್ಕೆ ಹಾತೊರೆಯುವರು. ಯುದ್ಧವೊಂದೇ ಬಿಡುಗಡೆಯ ದಾರಿ ಎಂದು ಎಲ್ಲರಿಗೂ ಅನ್ನಿಸುವುದು. ಅರಗಿನ ಮನೆಯ ಬೆಂಕಿಯ ಸಂಚು, ಕಪಟದ್ಯೂತ, ದ್ರೌಪದಿಯ ಸೀರೆಯನ್ನು ಸೆಳೆವ ಉದ್ಧಟ ಕ್ರೌರ್ಯ, ಇವೆಲ್ಲ ದೊಡ್ಡ ಯುದ್ಧವೊಂದನ್ನು ಅನಿವಾರ್ಯವಾಗಿಸುವುದು. ಇಷ್ಟೇ ಅಲ್ಲ, ಇನ್ನೊಂದು ಮುಖವಿದೆ. ತಾಯಿಯಿಂದ ತ್ಯಜಿಸಲ್ಪಟ್ಟ ಮಗನನ್ನು ಯುದ್ಧರಂಗದಲ್ಲಿ ಕೈಬೀಸಿ ಕರೆಯುವುದು.ಕುರುಕ್ಷೇತ್ರ ಯಾರನ್ನು ಬೇಡವೆನ್ನುವುದಿಲ್ಲ. ಕುಂತಿಯ ಮಕ್ಕಳ ರಕ್ತ ಚೆಲ್ಲಿದ ಭೂಮಿಯಲ್ಲಿ ಒಂದು ದಿನವಾದರೂ ಆಳಬೇಕು ಎಂದು ದುರ್ಯೋಧನ ಹಂಬಲಿಸಿದ್ದ. ಈ ಹಂಬಲವನ್ನು ಈಡೇರಿಸುವುದು ಅವನ ಜೀವದ ಗೆಳೆಯ ಕರ್ಣನ ಪಾಲಿಗೆ ಬಂದಿತು! ಯುದ್ಧ ಕರ್ಣನಿಗೆ ಬಿಡುಗಡೆಯ ದಾರಿಯಲ್ಲವೆ? ಕ್ಷತ್ರಿಯರಂತೆ ಬಿಲ್ಗಾರನಾಗಬೇಕೆಂಬ ಆಸೆ, ಮುಗ್ಧ; ಅನನ್ಯ ಗುರುಭಕ್ತ; ಬೇಡರ ಹುಡುಗ ಏಕಲವ್ಯನಿಗೆ ಅದೇಕೆ ಆ ಆಸೆ ಹುಟ್ಟಿತೋ.ಕ್ಷತ್ರಿಯರಿಗಾಗಿಯೇ ತನ್ನ ಹೆಬ್ಬೆರಳನ್ನು ಕಳೆದುಕೊಂಡರೂ, ಕುರುಕ್ಷೇತ್ರ, ಏಕಲವ್ಯನನ್ನೂ ಅವನಂಥವರನ್ನೂ ಬಾ – ಎನ್ನುತ್ತಿದೆ. ಸಮಂತಪಂಚಕದ ಆ ಐದು ಕೊಳಗಳಲ್ಲಿ ಮತ್ತೆ ನೆತ್ತರು ತುಂಬಿದಾಗ ಅದರಲ್ಲಿ ಏಕಲವ್ಯನ ನೆತ್ತರೂ ಕ್ಷತ್ರಿಯರೊಡನೆ ಬೆರೆತಿರುತ್ತದೆ. ಯುದ್ಧ ಎಲ್ಲರ ಬಿಡುಗಡೆಯ ದಾರಿಯಲ್ಲವೆ?ಇತಿಹಾಸದ ಇಂಥ ರುದ್ರಚಿತ್ರಣದ ನಡುವೆ ದೇವರ ಪಾತ್ರವೊಂದು ಬಂದು ನಿಂತರೆ, ಅದು ಮನುಷ್ಯರ ಒಳಗನ್ನು ನೋಡಿರುವುದರಿಂದ, ತಾನು ಮುರಿಯುವವನೆನ್ನುತ್ತದೆ, ಕಟ್ಟುವವನೆನ್ನುವುದಿಲ್ಲ. ನಮ್ಮೊಳಗಿನ ಮಾತನ್ನೇ ಅದು ಆಡುತ್ತದೆ. ತನ್ನ ಮಾತಾಗಿ ಆಡುತ್ತದೆ. ಹಾಗೆ ಆಡಿ, ನಮ್ಮಲ್ಲಿರುವ ಮುರಿಯುವ ಗುಣವನ್ನು ತಾನು ವಹಿಸಿಕೊಂಡು ತಾನು ಅಧಿಕೃತವಾಗಿ ಬಿಡುತ್ತದೆ! ನಾವು ನಿಮಿತ್ತವಾಗಿ ಬಿಡುವೆವು.ಮುರಿಯುವವನೆನ್ನುವಾಗ, ಕಟ್ಟುವವನೂ ತಾನೇ ಎಂದು ಅದು ಪರೋಕ್ಷವಾಗಿ ಸೂಚಿಸಿದಂತೆಯೇ ಆಗಿ, ಕಟ್ಟುವವರು ನಾವು ಎಂಬ ನಮ್ಮೊಳಗಿನ ಭಾವವನ್ನು ಮುರಿದಂತೆಯೇ ಮಾಡಿಬಿಡುತ್ತದೆ. ಅಲ್ಲಿಗೆ ಮುರಿಯುವಿಕೆ ಪೂರ್ಣವಾದಂತೆ. ಹೀಗೆ ದೇವರನ್ನು ಒಪ್ಪಿದರೆ ನಾವು ಒಂದು ರೀತಿಯಲ್ಲಿ ಅನಧಿಕೃತವಾಗಿ ಬಿಡುವೆವು. ಇದೇ ನಿಜವಿರಬಹುದು. ನಾವು ಅಧಿಕೃತರೆಂದು ತಿಳಿಯುವುದೇ ಹುಸಿ ಇರಬಹುದು. ಹೇಳುವಂತಿಲ್ಲ. ಅಲ್ಲದೆ ಅನಧಿಕೃತೆಯ ಅನುಭವದಲ್ಲಿಯೇ ಅಧಿಕೃತತೆಯ ಹೊಳಹು ಹೊಳೆಯುವುದಿರಬಹುದು!ಹೀಗೆ ಸಮಾಜ–ಸಮಷ್ಟಿಯಲ್ಲಿರುವ ಭಾವವನ್ನು ತನ್ನ ವಿಶ್ವರೂಪದಲ್ಲಿ ಆವಾಹಿಸಿಕೊಂಡು – ವಿಶ್ವರೂಪವೆಂದರೆ ಸಮಷ್ಟಿಯೇ ಅಲ್ಲವೆ – ಕೃಷ್ಣ ತಾನು ಲೋಕಕ್ಷಯಕಾರಿಯಾದ ಎಲ್ಲವನ್ನೂ ಕಬಳಿಸುತ್ತ ಹೋಗುವ ‘ಕಾಲ’ ಎಂದು ಹೇಳಿದ್ದುಂಟು. ಕಾಲವೆಂದರೆ ಇತಿಹಾಸದ ಆಧ್ಯಾತ್ಮಿಕ ಮುಖ. ಇತಿಹಾಸವೆಂದರೆ ಕಾಲದ ಲೌಕಿಕ ಮುಖ.ದುರ್ಯೋಧನನ ಕಾಲ ಸಂದುಹೋಗಿ, ಯುಧಿಷ್ಠಿರ ಚಕ್ರವರ್ತಿಯಾದ ಮೇಲಿನ ಮೂವತ್ತಾರು ವರ್ಷ ನೆಮ್ಮದಿಯ ಆಳ್ವಿಕೆ ಇತ್ತು. ಯುಧಿಷ್ಠಿರ ಶಕೆಯೇ ಪ್ರಾರಂಭವಾಗಿತ್ತು.ನಿಜಕ್ಕಾದರೆ ಕಲಿಯುಗದ ಮೊದಲ ರಾಜ ಯುಧಿಷ್ಠಿರನೇ ಎನ್ನಬಹುದು. ಆದರೆ ಕಲಿ; ಮರೆಯಲ್ಲಿದ್ದ, ಇನ್ನೂ ಕಾಲಿಟ್ಟಿರಲಿಲ್ಲ. ಯುಧಿಷ್ಠಿರನ ಆಳ್ವಿಕೆಯ ಮೂವತ್ತಾರನೆಯ ವರ್ಷ, ಕಲಿ, ಪ್ರಕಟವಾದ; ಪೂರ್ಣ ಆವೇಶದಿಂದಲೇ ಪ್ರಕಟಗೊಂಡ.ಯಾದವರ ಸಮೂಹನಾಶದ ದಾರುಣ ಘಟನೆ ಆಗ ಸಂಭವಿಸಿಬಿಟ್ಟಿತು. ಕೃಷ್ಣನ ಕಣ್ಣ ಮುಂದೆಯೇ ಕೃಷ್ಣನ ಯಾದವ ಕುಲ ತಮ್ಮೊಳಗೇ ಹೊಯ್ದಾಡುತ್ತ ನಾಶವಾಗಿ ಹೋದರು.ಮದ್ಯಪಾನದಿಂದ ಉನ್ಮತ್ತರಾಗಿ ಹೊಯ್ದಾಡುವುದಕ್ಕೆ ಜೊಂಡು ಹುಲ್ಲು ಸಾಕೆಂಬಂತೆ, ಹುಲ್ಲೊಂದು ನೆವವೆಂಬಂತೆ, ಗೊಲ್ಲರ ಕುಲ ಹುಲ್ಲಿನಲ್ಲಿ ಹೊಯ್ದಾಡಿ ಅಸುನೀಗಿತು.ಕೃಷ್ಣನ ಕುಲ ‘ಯಾದವೀ–ಕಲಹ’ ಎಂಬ ನುಡಿಗಟ್ಟನ್ನೇ ರೂಪಿಸಿಬಿಟ್ಟಿತು! ಎಲ್ಲರೂ ಒಟ್ಟಿಗೇ ಸಾಯುವುದಾದರೆ ಅದಕ್ಕೆ ಸಾಮೂಹಿಕ ಒಪ್ಪಿಗೆ ಎನ್ನುವಂತೆ, ಎಲ್ಲರೂ ಒಟ್ಟಿಗೇ ಬದುಕುವುದಕ್ಕೆ ಮಾತ್ರ ಕಡುಕಷ್ಟ ಎನ್ನುವಂತೆ ಯಾದವರು ನಡೆದುಕೊಂಡರು. ವಿವರಗಳನ್ನು ಮುಂದೆ ನೋಡೋಣ. ಇದು ಮುಂದಿನ ಕಲಿಯುಗಕ್ಕೆ ದ್ವಾಪರದ ದಾಯವಾಗಿಬಿಟ್ಟಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry