7

ಹೀಗೇ ಮಾಡುತ್ತ ಇದ್ದರೆ ಬಿಜೆಪಿ ಅಧಿಕಾರಕ್ಕೆ ಬಂದಂತೆಯೇ!

Published:
Updated:
ಹೀಗೇ ಮಾಡುತ್ತ ಇದ್ದರೆ ಬಿಜೆಪಿ ಅಧಿಕಾರಕ್ಕೆ ಬಂದಂತೆಯೇ!

ನಾಯಿಯ ಬಾಲ ಡೊಂಕು. ಅದು ಅದರ ಸ್ವಭಾವ. ಅದಕ್ಕೆ ಒಂದು ಕೊಳವೆ ಹಾಕಿ ನೇರ ಮಾಡಲು ಪ್ರಯತ್ನ ಮಾಡಿದರೂ ಕೊಳವೆ ತೆಗೆದ ಮೇಲೆ ಸ್ವಲ್ಪ ಹೊತ್ತು ನೇರವಾಗಿ ಇರುವ ಬಾಲ ಮತ್ತೆ ಡೊಂಕಾಗಿ ಬಿಡುತ್ತದೆ.ರಾಜ್ಯದಲ್ಲಿ ಬಿಜೆಪಿಯವರು ಹೇಗೆ ಅಧಿಕಾರ ಕಳೆದುಕೊಂಡರು ಎಂಬುದು ನೂರಾರು ವರ್ಷಗಳ ಹಳೆಯ ಇತಿಹಾಸವೇನೂ ಅಲ್ಲ. ಕೇವಲ ಮೂರು ವರ್ಷ ಮೂರು ತಿಂಗಳ ಹಿಂದಿನ ಕಥೆಯದು. ಇನ್ನು ಎರಡು ವರ್ಷಗಳಲ್ಲಿ ಮತ್ತೆ ವಿಧಾನಸಭೆಗೆ ಚುನಾವಣೆ ನಡೆಯಬೇಕು. ಬಿಜೆಪಿ ಮತ್ತು ಆಡಳಿತ ಕಾಂಗ್ರೆಸ್‌ ಪಕ್ಷದ ನಡುವೆಯೇ ಮುಖ್ಯವಾಗಿ ಹೋರಾಟ ನಡೆಯಬೇಕು.ರಾಜ್ಯದಲ್ಲಿ ಬಿಜೆಪಿ ಆಡಳಿತ ಇದ್ದಾಗ ಜನರು ಏನೆಲ್ಲ ಕಂಡರು ಎಂಬುದೂ ಈಚಿನ ಇತಿಹಾಸವೇ. ಒಳಜಗಳ, ಒಬ್ಬರ ಕಾಲು ಮತ್ತೊಬ್ಬರು ಎಳೆಯುವುದು, ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯಿಸಿ ಶಾಸಕರ ಹೈದರಾಬಾದ್‌ ಪ್ರಯಾಣ... ಒಂದೇ ಎರಡೇ? ಮೊದಲ ಮೂರು ವರ್ಷ ಮುಗಿಸುತ್ತಿದ್ದಂತೆಯೇ ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ಅವರು ಅಧಿಕಾರ ಕಳೆದುಕೊಂಡ ಕಾರಣಗಳು ಈಗಲೂ ಅವರ ಬೆನ್ನು ಬಿಟ್ಟಿಲ್ಲ.

ಬೆಂಬಿಡದ ಭೂತದ ಹಾಗೆ ಕಾಡುತ್ತಿವೆ. ಉಳಿದ ಎರಡು ವರ್ಷಗಳಲ್ಲಿ ಮತ್ತೆ ಇಬ್ಬರು ಮುಖ್ಯಮಂತ್ರಿಗಳು ಬಂದರು. ಒಟ್ಟು ಆ ಪಕ್ಷದ ಐದು ವರ್ಷಗಳ ಆಡಳಿತದಿಂದ ನಾಡಿಗೆ ಒಳ್ಳೆಯದೇನೂ ಆದಂತೆ ಕಾಣಲಿಲ್ಲ. ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಖ್ಯಾತಿಗೆ ಅಳಿಸಲಾಗದ ಕಳಂಕವೂ ಅಂಟಿಕೊಂಡಿತು.

ಆ ಅವಧಿಯಲ್ಲಿ ರಾಜ್ಯದಲ್ಲಿ ಒಂದು ರೀತಿಯ ಅರಾಜಕತೆ ಇತ್ತು. ಅಲ್ಲಿ ಧ್ಯಾನಸ್ಥವಾಗಿ ಆಡಳಿತ ಮಾಡಲು ಅವಕಾಶ ಇರಲಿಲ್ಲ. ವೇಳೆಯೂ ಇರಲಿಲ್ಲ. ಅರಾಜಕತೆಗೆ ಮತ್ತು ಧ್ಯಾನಸ್ಥವಾಗಿ ಆಡಳಿತ ಮಾಡಲು ಅವಕಾಶ ಇಲ್ಲದೇ ಇದ್ದುದಕ್ಕೆ ಬಳ್ಳಾರಿಯ ಗಣಿ ಮಾಫಿಯಾ ಕಾರಣವಾಗಿತ್ತು.

ಅವರನ್ನು ಗಣಿಧಣಿಗಳು ಎಂದು ಕರೆಯುವುದು ಭಾಷಿಕ ಅಪಚಾರ. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ವರದಿ ಬಂದುದು, ಅದರ ಆಧಾರದ ಮೇಲೆ ಅವರ ವಿರುದ್ಧ ದೂರು ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದ್ದು, ಅದರ ಫಲವಾಗಿ ಯಡಿಯೂರಪ್ಪನವರು ಜೈಲಿಗೆ  ಹೋಗಿದ್ದು ಎಲ್ಲವೂ ಗಣಿಗಾರಿಕೆಗೆ ಮತ್ತು ಅದಿರಿಗೆ ಸಂಬಂಧಿಸಿದ್ದು ಎಂಬುದು ಕಾಕತಾಳೀಯ ಇರಲಾರದು.

ರಾಜ್ಯಪಾಲರು ಹಾಗೆ ಅನುಮತಿ ಕೊಟ್ಟುದು ತಪ್ಪು ಎಂದು ಈಚೆಗೆ ಹೈಕೋರ್ಟ್‌ ಹೇಳಿರಬಹುದು. ಆದರೆ, ಬಿಜೆಪಿಗೆ ಆಗುವ ಮುಖಭಂಗ ಆಗಿ ಹೋಗಿದೆ. ಆ ‘ಭೂತ’ ಮತ್ತೆ ಮತ್ತೆ ಯಡಿಯೂರಪ್ಪನವರನ್ನು ಹಾಗೂ ಬಿಜೆಪಿಯನ್ನು ಕಾಡುತ್ತದೆ ಮತ್ತು ಕಾಡಲಿದೆ.ಈಗ ಯಡಿಯೂರಪ್ಪ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಅವರ ನಾಯಕತ್ವದಲ್ಲಿ ಕೇಂದ್ರ ಬಿಜೆಪಿ ನಾಯಕತ್ವಕ್ಕೆ ಎಷ್ಟು ನಂಬಿಕೆ ಎಂದರೆ ಅವರನ್ನೇ ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಬಿಂಬಿಸಿದೆ. ಸೋಜಿಗ ಎಂದರೆ ಇದೇ ಯಡಿಯೂರಪ್ಪ ಕಳೆದ ವಿಧಾನಸಭೆ ಚುನಾವಣೆ ವೇಳೆಗಾಗಲೇ ಬಿಜೆಪಿ ಬಿಟ್ಟಿದ್ದರು. ಕೆ.ಜೆ.ಪಿ ಕಟ್ಟಿದ್ದರು. ಮಾತೃಪಕ್ಷದ ವಿರುದ್ಧ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು.

ಒಂದು ಮನೆ ಎರಡಾದರೆ ಏನಾಗಬೇಕೋ ಫಲಿತಾಂಶವೂ ಅದೇ ಆಗಿತ್ತು. ಯಡಿಯೂರಪ್ಪ ತಾವು ಗೆಲ್ಲಲಿಲ್ಲ ಮಾತ್ರವಲ್ಲ ಬಿಜೆಪಿಯನ್ನು ಸೋಲಿಸಿದರು ಕೂಡ. ಅದು ಅವರ ಉದ್ದೇಶವೂ ಆಗಿತ್ತು. ಯಡಿಯೂರಪ್ಪ ಮತ್ತೆ ಮಾತೃಪಕ್ಷಕ್ಕೆ ಬಂದರು. ಲೋಕಸಭೆಗೆ ಹೋದರು. ರಾಷ್ಟ್ರೀಯ ಬಿಜೆಪಿ ಉಪಾಧ್ಯಕ್ಷರೂ ಆದರು. ಈಗ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ. ಕಾಲ ಒಂದು ಪೂರ್ಣ ಸುತ್ತು ಬಂದಂತಾಗಿದೆ.ಕಳೆದ ಯುಗಾದಿ ಸಮಯದಲ್ಲಿ ಯಡಿಯೂರಪ್ಪ ಅವರನ್ನು ಪಕ್ಷದ ಅಧ್ಯಕ್ಷರು ಎಂದು ಘೋಷಿಸುವಾಗ ಇದ್ದ ನಂಬಿಕೆ ಈಗ ಕೇಂದ್ರ ಬಿಜೆಪಿಗೆ ಇದೆಯೇ ಎಂದರೆ ಅನೇಕರ ಹುಬ್ಬುಗಳು ಪ್ರಶ್ನಾರ್ಥಕವಾಗಿ ಮೇಲೆ ಏರುತ್ತವೆ. ಯಡಿಯೂರಪ್ಪನವರದು ಯಾವಾಗಲೂ ಸಮರ ಕಾಲದ ಮನಃಸ್ಥಿತಿ.

ಸದಾ ಅವಸರದ ಮನುಷ್ಯ. ಎಷ್ಟು ಅವಸರ ಎಂದರೆ ರಾಜ್ಯ ಅಧ್ಯಕ್ಷರಾದ  ಕೂಡಲೇ ಬಡಬಡನೆ ಪಕ್ಷದ ಪದಾಧಿಕಾರಿಗಳ, ವಕ್ತಾರರ ಹೆಸರು ಪ್ರಕಟ ಮಾಡಿದರು. ಹಾಗೆ ಮಾಡುವಾಗ ಅವರು ಪಕ್ಷದ ಅನೇಕ ಹಿರಿಯರ ಜೊತೆಗೆ ಚರ್ಚೆ ಮಾಡಬೇಕಿತ್ತು. ಯಡಿಯೂರಪ್ಪ ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿರಬಹುದು. ಹಾಗೆಂದು ಅವರೇ ತಿಳಿದುಕೊಳ್ಳಬಾರದು. ಪಕ್ಷದ ಅವರಿಗಿಂತ ಕೆಳಹಂತದ ನಾಯಕರು ಅದನ್ನು ಹೇಳಬೇಕು.ಇದು ಸಾಮೂಹಿಕ ನಾಯಕತ್ವದ ಕಾಲ. ಒಂದು ಪಕ್ಷದಲ್ಲಿ ಅನೇಕ ಸಮುದಾಯಗಳ ನಾಯಕರು ಇರುತ್ತಾರೆ. ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ತೆಗೆದುಕೊಂಡರೂ ತಪ್ಪುಗಳು ಆಗಬಹುದು. ಆದರೆ, ಅದರ ಹೊಣೆ ಅಧ್ಯಕ್ಷರ ಮೇಲೆ ಮಾತ್ರ ಬರುವುದಿಲ್ಲ. ಎಲ್ಲರೂ ಸೇರಿ ಮಾಡಿದ ತಪ್ಪು ಎಂದಾದರೂ ಅನಿಸುತ್ತದೆ.ಈಗ ಪಕ್ಷದಲ್ಲಿ ನಡೆದಿರುವ ವಿದ್ಯಮಾನ ನೋಡಿದರೆ, ‘ಯಡಿಯೂರಪ್ಪ ಸರ್ವಾಧಿಕಾರಿ’ ಎಂಬ ಅಭಿಪ್ರಾಯ ಜನಜನಿತವಾಗಿರುವಂತೆ ಕಾಣುತ್ತಿದೆ. ಅವರು ಹಳೆಯ ಲೆಕ್ಕಗಳನ್ನು ಈಗ ಚುಕ್ತಾ ಮಾಡುತ್ತಲೂ ಇರುವಂತಿದೆ! ಶಿವಮೊಗ್ಗ ಜಿಲ್ಲೆ ಬಿಜೆಪಿ ಅಧ್ಯಕ್ಷರಾಗಿ ಪಕ್ಷದ ಎರಡನೇ ಹಂತದ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಅವರ ವಿರುದ್ಧ ಕಳೆದ ವಿಧಾನಸಭೆಯಲ್ಲಿ ಸ್ಪರ್ಧಿಸಿದ್ದ ಮತ್ತು ಅವರ ಸೋಲಿಗೆ ಪರೋಕ್ಷವಾಗಿ ಕಾರಣವಾಗಿದ್ದ ವ್ಯಕ್ತಿಯನ್ನು ನೇಮಿಸಿದರೆ ಯಾರಿಗೇ ಆಗಲಿ ಕಣ್ಣು ಕೆಂಪಗಾಗುತ್ತವೆ.

ಅವರನ್ನು ಜಿಲ್ಲಾ ಅಧ್ಯಕ್ಷರಾಗಿ ನೇಮಿಸುವುದು ಮಾತ್ರವಲ್ಲ ಅವರಿಗೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಕೊಡುತ್ತೇವೆ ಹಾಗೂ ಈಶ್ವರಪ್ಪ ಅವರಿಗೆ ಟಿಕೆಟ್‌ ಇಲ್ಲ ಎಂಬ ಪರೋಕ್ಷ ಸಂದೇಶವನ್ನೂ ಕಳಿಸಿ ಬಿಟ್ಟರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಈಗ ಅದೇ ಆಗಿದೆ. ಇದು ಒಂದು ಉದಾಹರಣೆ ಮಾತ್ರ.

ಪದಾಧಿಕಾರಿಗಳ ನೇಮಕದಲ್ಲಿ ಇಂಥ ಅನೇಕ ಅನಾಹುತಗಳು ಆದಂತೆ ಕಾಣುತ್ತದೆ. ಅದಕ್ಕೆ ಕಾರಣ ಯಡಿಯೂರಪ್ಪನವರು ಹಳೆಯ ಗಾಯಗಳನ್ನು ಮರೆಯದೇ ಇರುವುದು ಮತ್ತು ತಮ್ಮ ಸುತ್ತಮುತ್ತ ಇರುವ ‘ಸಲಹೆಗಾರರ’ ತಾಳಕ್ಕೆ ಹೆಜ್ಜೆ ಹಾಕಿದ್ದು ಎಂಬುದೂ ಈಗ  ರಹಸ್ಯವಾಗಿ ಉಳಿದಿಲ್ಲ.ಈಗಿನ ರಾಜಕೀಯ ಹೇಗೆ ಎಂದರೆ ತಮ್ಮ ಹಿತಾಸಕ್ತಿಗೆ ಧಕ್ಕೆಯಾದರೆ, ಎಷ್ಟೇ ಆಗಲಿ ತಮಗಿಂತ ಪಕ್ಷ ದೊಡ್ಡದು, ನಾಯಕರು ದೊಡ್ಡವರು ಎಂದು ಯಾರೂ ಸುಮ್ಮನೆ ಇರುವುದಿಲ್ಲ. ಬಂಡು ಎದ್ದೇ ಬಿಡುತ್ತಾರೆ. ಅದು ನೇರ ಬಂಡಾಯವಾದರೂ ಆಗಬಹುದು. ಪರೋಕ್ಷ ಬಂಡಾಯವಾದರೂ ಆಗಬಹುದು. ಈಗ ಸಿ.ಟಿ.ರವಿ ಪರೋಕ್ಷ ಬಂಡಾಯದ ಧ್ವನಿ ಎತ್ತಿದ್ದರೆ ಈಶ್ವರಪ್ಪ ನೇರವಾಗಿ ಅಖಾಡಕ್ಕೇ ಇಳಿದು ಬಿಟ್ಟಿದ್ದಾರೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕಟ್ಟಿರುವ ಈಶ್ವರಪ್ಪ ತಾವು ಹಿಂದುಳಿದ ಮತ್ತು ದಲಿತ ವರ್ಗದ ನಾಯಕ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದಾರೆ. ಅಂದರೆ  ಯಡಿಯೂರಪ್ಪ ಬರೀ ಲಿಂಗಾಯತರ ನಾಯಕ ಎಂಬ ಅರ್ಥ ಹೊರಡುತ್ತದೆ! ಯಡಿಯೂರಪ್ಪನವರಿಗೆ ಇದು ಅರ್ಥವಾಗುವುದಿಲ್ಲವೇ?

ಅದಕ್ಕೇ ಅವರು ಪಕ್ಷದ ಘಟಕಗಳ ಮೂಲಕವೇ ಇಂಥ ಸಂಘಟನೆ ಮಾಡಬೇಕು ಎಂದು ಒತ್ತಾಯಿಸುತ್ತಿರುವುದು. ಒಟ್ಟು ವಿದ್ಯಮಾನ ಹೇಳುತ್ತಿರುವುದು ಏನು ಎಂದರೆ ಯಡಿಯೂರಪ್ಪ ಪ್ರಶ್ನಾತೀತ ನಾಯಕನಾಗಿ ಉಳಿದಿಲ್ಲ ಎಂಬುದು.

ಈಶ್ವರಪ್ಪ ಅವರಿಗೆ ರಾಯಣ್ಣ ಬ್ರಿಗೇಡ್‌ ಮೂಲಕ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯಬೇಕಾಗಿದೆ. ರಾಜ್ಯದಲ್ಲಿ ಕುರುಬ ಸಮುದಾಯದ ಏಕಮೇವ ನಾಯಕ ಎನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಡ್ಡು ಹೊಡೆಯುವುದರ ಜೊತೆಗೆ ಶಿವಮೊಗ್ಗದಲ್ಲಿ ತಮಗೆ ವಿಧಾನಸಭೆ ಟಿಕೆಟ್‌ಅನ್ನೂ ಖಚಿತ ಮಾಡಿಕೊಳ್ಳಬೇಕಾಗಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ತಾವು ಎರಡನೇ ಹಂತದ ಮೊದಲ ನಾಯಕ ಆಗಿರಬೇಕು ಎಂದೂ ಅವರು ಎಣಿಕೆ ಹಾಕುತ್ತಿದ್ದಾರೆ. ಅದಕ್ಕೆ ಅನುಗುಣವಾಗಿ ರಾಯಣ್ಣ ಬ್ರಿಗೇಡ್ ಕಟ್ಟಿ ಎಷ್ಟು ಸೀಟುಗಳನ್ನು ತಾವು ಗೆಲ್ಲಿಸಬಹುದು ಎಂದು ಅವರು ಲೆಕ್ಕವನ್ನೂ ಕೊಡುತ್ತಿರುವುದು!ರಾಯಣ್ಣ ಬ್ರಿಗೇಡ್‌ನ ಪದಾಧಿಕಾರಿಗಳ ಹೆಸರು ಈಗ ಪ್ರಕಟವಾಗಿವೆ. ಅವರೆಲ್ಲ ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ  ಜೊತೆಗೆ ಇದ್ದವರು. ಅಲ್ಲಿ ಅವರಿಗೆ ಈಗ ಆಶ್ರಯ ಇಲ್ಲ. ನೈಜ ಭಿನ್ನಾಭಿಪ್ರಾಯಗಳೂ ಇರಬಹುದು.

ಸಿದ್ದರಾಮಯ್ಯ ಬಿಟ್ಟರೆ ಆ ಸಮುದಾಯದಲ್ಲಿ ಈಶ್ವರಪ್ಪ ಹೆಚ್ಚು ಪ್ರಭಾವಿ ನಾಯಕ. ಆದರೆ, ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಸಕ್ರಿಯ ಆಗಿರುವವರೆಗೆ ಕುರುಬ ಸಮುದಾಯದವರು ಈಶ್ವರಪ್ಪ ಅವರ ಬೆಂಬಲಕ್ಕೆ ನಿಲ್ಲುತ್ತಾರೆಯೇ? ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದರೂ ಈಶ್ವರಪ್ಪ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಆ ಸಮುದಾಯಕ್ಕೆ ಗೊತ್ತಿರುತ್ತದೆಯಲ್ಲ?ಮೂಲ ಪ್ರಶ್ನೆ ಏನು ಎಂದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರುತ್ತದೆಯೇ? ಅಥವಾ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ, ಹಪಾಹಪಿಯಲ್ಲಿ ಈಗಲೇ ಕಚ್ಚಾಡಿ ರಾಜಕೀಯ ಪರ್ಯಾಯ ಒದಗಿಸುವ ಅವಕಾಶದಿಂದ ಅದು ವಂಚಿತ ಆಗುತ್ತದೆಯೇ? ವಂಚಿತವಾಗಬಾರದು ಎಂದರೆ  ನಾಯಕನ ಕಾರ್ಯವೈಖರಿ ಬದಲಾಗಬೇಕು. ನಾಯಕರಾದವರಿಗೆ ಮುಖ್ಯವಾಗಿ ಔದಾರ್ಯ ಇರಬೇಕು.

ಹಳೆಯ ವೈರಗಳನ್ನು ಮರೆಯುವ ದೊಡ್ಡ ಮನಸ್ಸು ಇರಬೇಕು. ತಾನು ಉದಾರಿ ಆಗಿರುವುದು ಮಾತ್ರವಲ್ಲ ತಾನು ನಿಜವಾಗಿಯೂ ಉದಾರಿ ಎಂದು ಆತ ತೋರಿಸಿಕೊಡಬೇಕು. ಇಲ್ಲವಾದರೆ ಕಾಲ ಕಳೆದಂತೆ ಆತ ಒಂಟಿಯಾಗುತ್ತಾನೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆಯೂ ಬಿಜೆಪಿಯಲ್ಲಿ ಆಗಬಹುದು.ಚುನಾವಣೆ  ಇನ್ನೂ ಎರಡು ವರ್ಷ ಇದೆ. ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಕಾಂಗ್ರೆಸ್‌ ಸರ್ಕಾರದ ಕಾರ್ಯವೈಖರಿ ಬಗೆಗೆ ಅನೇಕ ಭಿನ್ನಾಭಿಪ್ರಾಯಗಳು, ಅತೃಪ್ತಿಗಳು ಇರಲು ಸಾಧ್ಯ. ಈ ಸರ್ಕಾರದ ವಿರುದ್ಧ ಹೇಳಿಕೊಳ್ಳುವಂಥ ಭ್ರಷ್ಟಾಚಾರದ ಆರೋಪಗಳು ಇಲ್ಲ ಎಂಬುದೇನೋ ನಿಜ. ಆದರೆ, ಇದು ತೀರಾ ನಿಧಾನಗತಿಯ ಸರ್ಕಾರ ಎಂಬುದರಲ್ಲಿ ಯಾರಿಗೂ ಅನುಮಾನ ಇಲ್ಲ.

ಅದಕ್ಕಿಂತ ಹೆಚ್ಚು ಆತಂಕ ಹುಟ್ಟಿಸುವ ವಿಚಾರ ಎಂದರೆ ಲೋಕಾಯುಕ್ತ ಮತ್ತು ಕರ್ನಾಟಕ ಲೋಕಸೇವಾ ಆಯೋಗದಂಥ ಸಾಂವಿಧಾನಿಕ ಸಂಸ್ಥೆಗಳನ್ನು ಈ ಸರ್ಕಾರ ನಿರ್ವಹಿಸಿದ ರೀತಿ. ಅದು ಯಾರಿಗೇ ಆಗಲಿ ದಿಗಿಲು ಹುಟ್ಟಿಸುವಂಥದು. ಬಿಜೆಪಿಯವರು ಲೋಕಾಯುಕ್ತದ ವಿರುದ್ಧ ಇದ್ದರೆ ಅದನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.

ಪರೋಕ್ಷವಾಗಿ, ಸಕ್ರಿಯ ಲೋಕಾಯುಕ್ತದಿಂದಲೇ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್‌ ಸರ್ಕಾರ ಏಕೆ ಹೀಗೆ ನಡೆದುಕೊಳ್ಳುತ್ತಿದೆ ಎಂದು ಯಾರಿಗೂ ಅರ್ಥವಾಗುತ್ತಿಲ್ಲ. ಇವೆಲ್ಲ ಮುಂದಿನ ಚುನಾವಣೆಯಲ್ಲಿ ಫಲಿತಾಂಶವನ್ನು ನಿರ್ಧರಿಸುವಂಥ ವಿಷಯಗಳು ಆಗುತ್ತವೆಯೇ ಹೇಗೆ ಎಂದು ಈಗಲೇ ಹೇಳುವುದು ಕಷ್ಟ.ಆದರೆ, ಸಿದ್ದರಾಮಯ್ಯ ಅವರೂ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದಾರೆ. ಅದಕ್ಕೆ ಹೈಕಮಾಂಡ್‌ ದುರ್ಬಲವಾಗಿದ್ದೂ ಕಾರಣವಾಗಿರಬಹುದು. ಆ ದೃಷ್ಟಿಯಿಂದ ಇನ್ನೂ ಎರಡು ವರ್ಷ ಅವರ ಕುರ್ಚಿಗೆ ಯಾವ ಅಪಾಯವೂ ಇರುವಂತೆ ಕಾಣುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಅದೃಷ್ಟ ಇದೆ. ಆದರೆ, ದೈವ ಅವರ ಜೊತೆಗೆ ಇಲ್ಲ. ಬೆಳೆದು ನಿಂತ ಅವರ  ಮಗ ಅಕಾಲಿಕವಾಗಿ ನಿಧನರಾಗಿದ್ದಾರೆ.

ಸಿದ್ದರಾಮಯ್ಯ ಅವರ ಜಂಘಾಬಲ ಉಡುಗಿ ಹೋಗಿದ್ದರೆ ಅದು ಸಹಜ. ಅವರು ಮೊದಲಿನ ಮನುಷ್ಯ ಆಗಿರಲು ಸಾಧ್ಯವಿಲ್ಲ. ಸರ್ಕಾರದಲ್ಲಿ ಯಾವ ಭಿನ್ನಮತವೂ ಇಲ್ಲದೇ ಇರುವುದರಿಂದ ಸುಂದಾಗಿರುವ ಆಡಳಿತಕ್ಕೆ ಮುಂದಿನ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿಗಳು ಚುರುಕು ತರಬಹುದು ಎಂದು ಅನಿಸಿತ್ತು.

ತಮ್ಮ ಕ್ಷೇತ್ರದ, ಮನೆತನದ ರಾಜಕೀಯ ಉತ್ತರಾಧಿಕಾರಿಯನ್ನು ಕಳೆದುಕೊಂಡ ಸಿದ್ದರಾಮಯ್ಯ ಅವರಿಗೆ ಆಡಳಿತದಲ್ಲಿ ಅದೇ ಮುಂಚಿನ ಆಸಕ್ತಿ ಇರುತ್ತದೆಯೇ? ಮರಣ ಅನೇಕ ಸಂಗತಿಗಳನ್ನು ಹೇಳುತ್ತದೆ.

ಸಿದ್ದರಾಮಯ್ಯ ಅವರ ಅಗಾಧ ಎನ್ನುವಂಥ ಜನಪ್ರಿಯತೆಯನ್ನು ಅವರ ಮಗನ ಸಾವಿನಲ್ಲಿ ಜನರು ಕಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ಸಹಾನುಭೂತಿ ಈ ಸರ್ಕಾರದ ವೈಫಲ್ಯಗಳನ್ನು ಮೀರಿ ನಿಲ್ಲುವಷ್ಟು ದೊಡ್ಡದಾಗಿರುತ್ತದೆಯೇ?ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆಯೇ ನೇರ ಹಣಾಹಣಿ ಇರುತ್ತದೆ ಎಂಬುದರಲ್ಲಿ ಅನುಮಾನ ಬೇಡ. ಹಾಗೆಂದು ಜನತಾದಳ (ಎಸ್‌) ಸುಮ್ಮನೆ ಇರುತ್ತದೆಯೇ?

ಮುಂಬರುವ ಚುನಾವಣೆಯಲ್ಲಿ ತಮಗೆ ರಾಜ್ಯವಾಳುವ  ಅಧಿಕಾರ ಸಿಗದೇ ಇದ್ದರೆ ರಾಜಕೀಯದಿಂದಲೇ ನಿವೃತ್ತಿ ಆಗುವುದಾಗಿ ಈಗಾಗಲೇ ಪ್ರಕಟಿಸಿರುವ ಎಚ್‌.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡುತ್ತಾರೆ ಎಂದು ಸುದ್ದಿಯಾಗಿದೆ. ಉತ್ತರ ಕರ್ನಾಟಕದಲ್ಲಿಯೇ ಬಿಜೆಪಿಗೆ ಗೆಲುವಿನ ಮುನ್ನಡೆ ಸಿಗಬೇಕು. ಕುಮಾರಸ್ವಾಮಿಗಳೂ ಅಲ್ಲಿಯೇ ತಮ್ಮ ಗಮನ ಕೇಂದ್ರೀಕರಿಸುವುದು ಏನನ್ನು ಹೇಳುತ್ತಿರಬಹುದು?

ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಮಾನ ಅಂತರ ಕಾಯ್ದುಕೊಳ್ಳುವುದಾಗಿ ಹೇಳುವ ಜನತಾದಳ (ಎಸ್‌) ಅವಕಾಶ ಬಂದಾಗ ಎರಡೂ ಪಕ್ಷಗಳ ಜೊತೆಗೆ ಸೇರಿಕೊಂಡು ಅಧಿಕಾರ ಮಾಡಿದೆ. ವಿಧಾನಸೌಧದಲ್ಲಿ ಹಾಗೆ ಅಧಿಕಾರ ಮಾಡಿದ್ದು ಹಳೆಯ ಮಾತು ಆಯಿತು. 

199 ಸದಸ್ಯ ಬಲದ ಬೆಂಗಳೂರು ಪಾಲಿಕೆಯಲ್ಲಿ ಕೇವಲ 14 ಸೀಟು ಗೆದ್ದು ಅಧಿಕಾರ ಹಂಚಿಕೊಂಡಿರುವ ಜನತಾದಳ (ಎಸ್‌) ರಾಜನಾಗದಿದ್ದರೂ ರಾಜನನ್ನು ಮಾಡುವ ಸ್ಥಾನದಲ್ಲಿ ಇದೆ. ಎಲ್ಲರಿಗಿಂತ ಹೆಚ್ಚು ಸೀಟು ಗೆದ್ದ ಬಿಜೆಪಿ ಇಂಗು ತಿಂದ ಮಂಗನಂತಾಗಿದೆ. ಮುಂದಿನ ವಿಧಾನಸಭೆಯಲ್ಲಿಯೂ ಹೀಗೆಲ್ಲ ಆಗುವುದಿಲ್ಲ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆಯೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry