7

ಕೋಣೆಗೆ ಬಂದಿರುವ ಆನೆ ಕಾಣದೇಕೆ?

ನಾಗೇಶ್ ಹೆಗಡೆ
Published:
Updated:
ಕೋಣೆಗೆ ಬಂದಿರುವ ಆನೆ ಕಾಣದೇಕೆ?

ನಮ್ಮ ದೇಶದ ಯಾವುದಾದರೂ ಒಬ್ಬ ಪ್ರಖ್ಯಾತ ರಾಕೆಟ್ ವಿಜ್ಞಾನಿಯ ಹೆಸರನ್ನು ಹೇಳಬಲ್ಲಿರಾ? ಮಕ್ಕಳಿಗೆ ಈ ಪ್ರಶ್ನೆಯನ್ನು ಕೇಳಿದರೆ ಪಟಪಟನೆ ಹತ್ತಾರು ಸರಿ ಉತ್ತರಗಳು ಬರುತ್ತವೆ. ನಮ್ಮ ದೇಶದ ಪ್ರಸಿದ್ಧ ಪರಮಾಣು ವಿಜ್ಞಾನಿಯ ಹೆಸರು ಗೊತ್ತಿದೆಯೆ? ಅದಕ್ಕೂ ಪಟಪಟನೆ ನಾಲ್ಕಾರು ಸರಿ ಉತ್ತರಗಳು ಬರುತ್ತವೆ.ಬಹಳಷ್ಟು ಬಾರಿ ಆ ಪ್ರಶ್ನೆಯ ಉತ್ತರವೇ ಈ ಪ್ರಶ್ನೆಯ ಉತ್ತರವೂ ಆಗಿರುತ್ತದೆ. ಹಾಗಿದ್ದರೆ, ನಮ್ಮ ದೇಶದ ಪ್ರಸಿದ್ಧ ಹವಾಮಾನ ವಿಜ್ಞಾನಿಯ ಹೆಸರನ್ನು ಹೇಳಬಲ್ಲಿರಾ?.... ಈಗ ಎಲ್ಲೆಡೆ ಮೌನ ಆವರಿಸುತ್ತದೆ. ತಪ್ಪು ಉತ್ತರ ಕೊಡಲಿಕ್ಕೂ ಮಕ್ಕಳಿಗೆ ಒಂದು ಹೆಸರು ಹೊಳೆಯುವುದಿಲ್ಲ.ನಮ್ಮ ದೇಶದ ಕ್ರೀಡಾರಂಗಕ್ಕೂ ವಿಜ್ಞಾನರಂಗಕ್ಕೂ ತುಂಬ ಹೋಲಿಕೆಗಳಿವೆ. ಒಲಿಂಪಿಕ್ಸ್ ಪದಕ ಪಡೆಯುವಲ್ಲಿ ನಮ್ಮ ಸ್ಥಾನಮಾನ ಎಷ್ಟಿದೆಯೊ ಅಷ್ಟೇ ಕಳಪೆಯ ಸ್ಥಾನಮಾನ ವಿಜ್ಞಾನದ ನೊಬೆಲ್ ಪದಕ ಪಡೆಯುವಲ್ಲಿಯೂ ಇದೆ.ಕ್ರೀಡಾರಂಗದಲ್ಲಿ ಕ್ರಿಕೆಟ್, ಟೆನ್ನಿಸ್‌ಗಳಿಗೆ ಇನ್ನಿಲ್ಲದ ಮಾನ್ಯತೆ, ಪ್ರಭಾವಳಿ ಇದೆ. ಆದರೆ ತೀರ ಸಾಮಾನ್ಯ ಶಾಲಾ ಮಕ್ಕಳ ಕೈಗೆಟುಕಬಹುದಾದ ಓಟ, ಜಿಗಿದಾಟ (ಜಿಮ್ನಾಸ್ಟಿಕ್)ಗಳಿಗೆ ಮಾನ್ಯತೆ ಇಲ್ಲ. ವಿಜ್ಞಾನದಲ್ಲೂ ಅಷ್ಟೆ: ಪರಮಾಣು ವಿಜ್ಞಾನಕ್ಕೆ, ಕ್ಷಿಪಣಿ ತಂತ್ರಜ್ಞಾನಕ್ಕೆ ಸಿಗುವ ಮಾನ್ಯತೆ ಹವಾಮಾನ ವಿಜ್ಞಾನಕ್ಕೆ ಇಲ್ಲ. ಹವಾಮಾನ ಅಧ್ಯಯನಕ್ಕೆ ಬೇಕಾದ ಸಲಕರಣೆಗಳನ್ನು ಶಾಲಾ ಮಕ್ಕಳೇ ಹೊಂದಿಸಿಕೊಳ್ಳಬಹುದು, ಅಥವಾ ಅಲ್ಪವೆಚ್ಚದಲ್ಲಿ ಖರೀದಿಸಿ ತರಬಹುದು. ಆದರೆ ಅದರ ಮಹತ್ವವನ್ನು ಗ್ರಹಿಸಲು ಬೇಕಾದ ಅಆಇಈ ತರಬೇತಿ ಕೂಡ ನಮ್ಮ ಶಿಕ್ಷಕರಿಗೆ ಇಲ್ಲ.ಹವಾಮಾನ ದಿನದಿನಕ್ಕೆ ಕ್ರೂರವಾಗುತ್ತಿದೆ. ಬರ- ನೆರೆ ಎಂಬಂಥ ಕನಿಷ್ಠ ಗರಿಷ್ಠಗಳ ಅಂಚಿನ ಹೊಯ್ದಾಟವೇ ನಿತ್ಯದ ಸುದ್ದಿಯಾಗುತ್ತಿದೆ. ದಾಖಲೆಗಳ ಪ್ರಕಾರ ಕಳೆದ ಜುಲೈ ತಿಂಗಳಲ್ಲಿ ಜಾಗತಿಕ ಸರಾಸರಿ ಉಷ್ಣತೆ ಹಿಂದಿನ ಎಲ್ಲ ಜುಲೈ ತಿಂಗಳ ದಾಖಲೆಗಳನ್ನೂ ಮೆಟ್ಟಿ ನಿಂತಿದೆ. ಎಲ್ಲ ಜುಲೈಗಳಷ್ಟೇ ಅಲ್ಲ, ನಾಸಾ ವರದಿಯ ಪ್ರಕಾರ, 1880ರಿಂದ ಭೂಮಿಯ ತಾಪಮಾನದ ದಾಖಲೆ ಇಡುವ ಪ್ರಕ್ರಿಯೆ ಆರಂಭವಾದಾಗಿನಿಂದ ಭೂತಾಪ ಇಷ್ಟು ಏರಿಕೆ ಆಗಿದ್ದು ಇದೇ ಮೊದಲು. ಈ ಏರಿಕೆ ಹಠಾತ್ತಾಗಿ ಆಗಿದ್ದೇನೂ ಇಲ್ಲ.ಕಳೆದ ಒಂದು ತಲೆಮಾರಿನಿಂದ ಆಗುತ್ತಲೇ ಇದೆ. ಹಿಂದಿನ 14 ವರ್ಷಗಳಲ್ಲಿ ಒಟ್ಟೂ 12 ವರ್ಷ ಅತ್ಯಧಿಕ ಉಷ್ಣತೆಯ ವರ್ಷಗಳೇ ಆಗಿದ್ದವು. ಬುಂದೇಲಖಂಡದಲ್ಲಿ ಸತತ ಮೂರು ಬರವರ್ಷಗಳಿಂದಾಗಿ ಶ್ರಮಜೀವಿಗಳು ನಿರಾಶ್ರಿತರಾಗಿ ದಿಲ್ಲಿಯ ಮೇಲುಸೇತುವೆಗಳ ಕೆಳಗೆ, ಕೊಳಕು ಕೊಳ್ಳಗಳ ಅಂಚಿಗೆ ಸಂತೆ ನೆರೆದಿದ್ದಾರೆ.ನೀರಿನ ರೈಲಿಗಾಗಿ ಕಾದುನಿಂತ ಮರಾಠಾವಾಡಾದ ಜನರ ಸ್ಥಿತಿಯಂತೂ ಗೊತ್ತೇ ಇದೆ. ಛತ್ತೀಸಗಢದಲ್ಲಿ ಅರಣ್ಯಗಳ ಮಧ್ಯೆ ಬರಗಾಲ ಬಂದಿದೆ. ಅಲ್ಲಿ ಜೇನು ಮತ್ತು ಮಹುವಾ ಇಳುವರಿ ಕುಸಿದಿದ್ದರಿಂದ ಕೋಟಿಗಟ್ಟಲೆ ಆದಿವಾಸಿಗಳು ತತ್ತರಿಸಿದ್ದಾರೆ. ಇದೀಗ ಉತ್ತರ ಭಾರತದಲ್ಲಿ ಗಂಗೆ, ಯಮುನೆ, ಸೋನ್ ನದಿಗಳು ಧ್ವಂಸಧಾರೆಯನ್ನೇ ಹರಿಸುತ್ತಿವೆ.ಬಿಹಾರದಲ್ಲಿ ಎಂದಿಗಿಂತ ಕಡಿಮೆ ಮಳೆಯಾದರೂ ಏಳು ನದಿಗಳ ನೆರೆ ಹಾವಳಿಯಿಂದ ಜನಸ್ತೋಮ ನಲುಗುತ್ತಿದೆ. ಕರ್ನಾಟಕದಲ್ಲಿ 74 ತಾಲ್ಲೂಕುಗಳಲ್ಲಿ ಬರ ಸಿಡಿಲಿನಂತೆ ಎರಗಿದೆ. ಆಲಮಟ್ಟಿ ತುಂಬಿದ್ದರೂ 50 ಕಿ.ಮೀ ಆಚೆ ರೈತರ ಸೇಂಗಾ ಬೆಳೆ ಒಣಗುತ್ತಿದೆ. ಚೆನ್ನೈಯಲ್ಲಿ ನೆರೆ ಹಾವಳಿಯ ಮಧ್ಯೆ ನಿಂತ ಜಯಲಲಿತಾ ಕಾವೇರಿಯ ನೀರು ಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಇಡುತ್ತಿದ್ದಾರೆ.ನಮ್ಮೆಲ್ಲರ ನೆಮ್ಮದಿಯನ್ನು ಹಿಂಡಿ ಹಿಪ್ಪೆ ಮಾಡಿ ಎಸೆಯಬಲ್ಲ ಈ ಹವಾಮಾನ ವಿದ್ಯಮಾನ ನಮ್ಮ ಸಾಹಿತಿಗಳಿಗೆ, ಕಲಾವಿದರಿಗೆ, ಸಿನೆಮಾ ಮಂದಿಗೆ, ಚಿಂತಕರಿಗೆ, ಧಾರ್ಮಿಕ ಮುಖಂಡರಿಗೆ, ಶಿಕ್ಷಣತಜ್ಞರಿಗೆ, ಯೋಜನಾ ಧುರಂಧರರಿಗೆ ಕಾಣುತ್ತಿಲ್ಲ ಏಕೆ? ವಿಶೇಷವಾಗಿ ನಿನ್ನೆ ಮತ್ತು ನಾಳೆಗಳನ್ನು ಗ್ರಹಿಸಿ, ಮಥಿಸಿ ಸಮಾಜಕ್ಕೆ ದಾರಿದೀಪವಾಗಬಲ್ಲ (ರವಿ ಕಾಣದ್ದನ್ನೂ ಕಾಣುವ) ಕವಿಗಳು, ಸಾಹಿತಿಗಳು ಯಾಕೆ ಇದನ್ನು ಗ್ರಹಿಸುತ್ತಿಲ್ಲ?ಈ ಪ್ರಶ್ನೆಯನ್ನು ಕೇಳಿದವರು ಭಾರತದ ಪ್ರಖ್ಯಾತ ಇಂಗ್ಲಿಷ್ ಕಾದಂಬರಿಕಾರ ಅಮಿತಾವ್ ಘೋಷ್. ಅವರು ಈಚೆಗಷ್ಟೆ ಬರೆದ ‘ದಿ ಗ್ರೇಟ್ ಡಿರೇಂಜ್‌ಮೆಂಟ್- ಕ್ಲೈಮೇಟ್ ಚೇಂಜ್ ಅಂಡ್ ದಿ ಅನ್‌ಥಿಂಕಬಲ್’ ಹೆಸರಿನ ಗ್ರಂಥ ಈಗ ಸಾಕಷ್ಟು ಶ್ಲಾಘನೆಗೆ, ಚರ್ಚೆಗೆ ಗ್ರಾಸವಾಗುತ್ತಿದೆ (ಡಿರೇಂಜ್‌ಮೆಂಟ್ ಅಂದರೆ ಅಸ್ತವ್ಯಸ್ತ, ಕ್ರಮಭಂಗ, ಅಲ್ಲೋಲಕಲ್ಲೋಲ).ಈಗ ಕಾಣುತ್ತಿರುವ ವ್ಯಾಪಕ ಹವಾಗುಣ ಬದಲಾವಣೆ ನಮ್ಮ ಭೂಗೋಲ, ಸಂಸ್ಕೃತಿ, ವಾಣಿಜ್ಯಗಳಿಗಷ್ಟೇ ಅಲ್ಲ, ಸ್ವಾತಂತ್ರ್ಯದ ಪರಿಕಲ್ಪನೆಗೇ ಸವಾಲು ಹಾಕುತ್ತಿದೆ; ಇಡೀ ಮನುಕುಲವೇ ಹೇಗೆ ಹೊಸದೊಂದು ಪ್ರಪಾತದ ಅಂಚಿನಲ್ಲಿ ತೊನೆದಾಡುತ್ತಿದೆ ಎಂಬುದರ ಒಳನೋಟ ಈ ಕೃತಿಯಲ್ಲಿದೆ. ಆಕ್ಸ್‌ಫರ್ಡ್, ಅಲೆಕ್ಸಾಂಡ್ರಿಯಾಗಳಲ್ಲಿ ಓದಿದ ಅಮಿತಾವ್ ಘೋಷ್ ತಮ್ಮ ‘ದ ಹಂಗ್ರಿ ಟೈಡ್’, ‘ಫ್ಲಡ್ ಆಫ್ ಫಾಯರ್’, ‘ರಿವರ್ ಆಫ್ ಸ್ಮೋಕ್’, ‘ದ ಗ್ಲಾಸ್ ಪ್ಯಾಲೇಸ್’ ಮುಂತಾದ ಕಾದಂಬರಿಗಳಿಗೆ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದವರು.ವಿಜ್ಞಾನದ ಸಾಮಾಜಿಕ ಮುಖಗಳನ್ನು ತಮ್ಮ ಕಾದಂಬರಿಗಳಲ್ಲಿ ಸಾಕಷ್ಟು ಅನಾವರಣ ಮಾಡಿದ ಇವರು (ತಮ್ಮ ‘ಕಲ್ಕತ್ತಾ ಕ್ರೊಮೊಸೋಮ್’ ವೈಜ್ಞಾನಿಕ ಕಾದಂಬರಿಗೆ ಆರ್ಥರ್ ಸಿ.ಕ್ಲಾರ್ಕ್ ಪ್ರಶಸ್ತಿಯನ್ನು ಪಡೆದಿದ್ದಾರೆ) ಈಗಿನ ಬಿಸಿಪ್ರಳಯ, ಅದರಿಂದಾಗುತ್ತಿರುವ ಅಂತರರಾಷ್ಟ್ರೀಯ ಬಿಕ್ಕಟ್ಟು, ಪ್ಯಾರಿಸ್ ಒಪ್ಪಂದ ಮುಂತಾದ ವಿಷಯಗಳ ಮೇಲೆ ಪ್ರಬುದ್ಧ ಚಿಂತನೆ ಮಾಡುತ್ತಾರೆ.ಅವರ ‘ಡಿರೇಂಜ್‌ಮೆಂಟ್’ ಕೃತಿ ಹೊರಬಂದ ನಂತರ ಅನೇಕ ಇಂಗ್ಲಿಷ್ ಪತ್ರಿಕೆಗಳಲ್ಲಿ, ಚಾನೆಲ್‌ಗಳಲ್ಲಿ ಅವರ ಸಂದರ್ಶನ ನಡೆಯುತ್ತಿದೆ. ಕೆಲವನ್ನು ಯೂಟ್ಯೂಬ್‌ನಲ್ಲ್ಲೂ ನೋಡಬಹುದು. ವಿಜ್ಞಾನ ಮತ್ತು ಪರಿಸರ ಕುರಿತ ‘ಡೌನ್ ಟು ಅರ್ಥ್’ ಪಾಕ್ಷಿಕ ಈಚಿನ ಸಂಚಿಕೆಯಲ್ಲಿ ಅವರ ಕೃತಿಯ ಸಾರಾಂಶ ಮತ್ತು ಸಂದರ್ಶನವನ್ನು ಆದ್ಯತೆಯ ವಿಷಯವಾಗಿ ಪ್ರಕಟಿಸಿದೆ. ಮುಂದಿನ ಕೆಲವು ಪರಿಚ್ಛೇದಗಳು ಅವರ ದೃಷ್ಟಿಕೋನವನ್ನು ಧ್ವನಿಸುತ್ತವೆ:ಈಗಿನ ಈ ಸಂಕಷ್ಟಗಳಿಗೆ ಮೂಲ ಕಾರಣ ಎನಿಸಿದ ಕಾರ್ಬನ್ ಹಿಂದೆಲ್ಲ ಅಸಲೀ ಸಂಪತ್ತೆನಿಸಿತ್ತು. ಯಾರು ಜಾಸ್ತಿ ಕಾರ್ಬನ್ನಿನ (ಅಂದರೆ ಕಲ್ಲಿದ್ದಲು, ಪೆಟ್ರೋಲು) ಯಜಮಾನಿಕೆ ಪಡೆಯುತ್ತಾರೊ ಅವರೇ ಶ್ರೀಮಂತರೆನ್ನಿಸಿದರು. ಅಂಥ ದೇಶವೇ ಧನಿಕ ದೇಶವೆನ್ನಿಸಿತ್ತು. ಹಾಗಾಗಿ ಈಗಿನ ಎಲ್ಲ ಸುಧಾರಿತ ದೇಶಗಳ ಆರ್ಥಿಕತೆಯೂ ಕಾರ್ಬನ್ನನ್ನೇ ಅವಲಂಬಿಸಿದೆ. ಭೂಮಿ ಬಿಸಿಯಾಗುತ್ತಿದೆ ಎಂಬ ಕಾರಣಕ್ಕೆ ಕಾರ್ಬನ್ ಆರ್ಥಿಕತೆಯನ್ನು ಕೊಡವಿ ಹಾಕುವುದು ಸುಲಭವಲ್ಲ.ಎರಡನೆಯದಾಗಿ, ಆ ಕಾರ್ಬನ್ ಶ್ರೀಮಂತಿಕೆಯನ್ನು ಉಳಿಸಿಕೊಳ್ಳಬೇಕೆಂದರೆ ಹೆಚ್ಚು ಹೆಚ್ಚು ಜನರನ್ನು ಭೋಗದಾಸರನ್ನಾಗಿ ಮಾಡಬೇಕು. ‘ಕಡಿಮೆ ಶ್ರಮ, ಹೆಚ್ಚು ಸುಖ’ದ ಆಮಿಷವನ್ನು ಒಡ್ಡುತ್ತ, ಅದಕ್ಕಾಗಿ ಅವರೆಲ್ಲ ಕಾರ್ಬನ್ನನ್ನೇ ಅವಲಂಬಿಸುವಂತೆ ಮಾಡಬೇಕು- ಇದು ಹುನ್ನಾರ. ಅದಕ್ಕೆ ಬೇಕಾದ ಸ್ವಾತಂತ್ರ್ಯ ಮತ್ತು ಸ್ವಚ್ಛಂದತೆಗೆ ಯಾವ ದೇಶವೂ ಕಡಿವಾಣ ಹಾಕದಂತೆ ನೋಡಿಕೊಳ್ಳಬೇಕು.ಇಷ್ಟಕ್ಕೂ ಪಾಶ್ಚಿಮಾತ್ಯರ ಸ್ವಾತಂತ್ರ್ಯದ ಪರಿಕಲ್ಪನೆಯೇ ನಮ್ಮದಕ್ಕಿಂತ ಭಿನ್ನವಾಗಿದೆ. ಅವರಿಗೆ ಮೂಲತಃ ಪ್ರಕೃತಿಯ ದೌರ್ಜನ್ಯದಿಂದ ಪಾರಾಗುವುದು ಬೇಕಿತ್ತು. ಹಾಗಾಗಿ ನಿಸರ್ಗ ಒಡ್ಡುತ್ತಿರುವ ಸಂಕಷ್ಟಗಳಿಂದ ಪಾರಾಗಿ, ಸುಖ ಮತ್ತು ಸ್ವಾತಂತ್ರ್ಯವನ್ನು ಅನುಭವಿಸಲೆಂದೇ ತಂತ್ರಜ್ಞಾನದ ಹತಾರಗಳು ಪಾಶ್ಚಾತ್ಯ ದೇಶಗಳಲ್ಲಿ ಮೊದಲು ರೂಪುಗೊಂಡವು.ದಟ್ಟ ಅರಣ್ಯದ ಡೊಂಕು ರಸ್ತೆಯಲ್ಲಿ ತಂಗಾಳಿಯನ್ನು ಸೀಳುತ್ತ ಕಾರಿನಲ್ಲಿ ಜೋರಾಗಿ ಸಾಗುವುದೇ ಸುಖದ ಪರಮೋಚ್ಚ ಹಂತ ಎಂಬಂಥ ಜಾಹೀರಾತುಗಳು 50 ವರ್ಷಗಳ ಹಿಂದೆ ಪಶ್ಚಿಮದ ದೇಶಗಳಲ್ಲಿ ಬರುತ್ತಿದ್ದವು. ಈಗ ನಮ್ಮ ಟಿವಿಗಳಲ್ಲೂ ಅಂಥದ್ದೇ ಜಾಹೀರಾತು ಬರುತ್ತಿವೆ. ನಿಸರ್ಗವನ್ನು ಮಣಿಸಬೇಕು, ಭೋಗಿಸಬೇಕೆಂಬ ಸಿದ್ಧಸೂತ್ರವೇ ಎಲ್ಲ ಕಡೆ ರಾರಾಜಿಸುತ್ತವೆ.ನಮ್ಮ ಮೇಲೆ ಹೇರಲಾದ ತಂತ್ರಜ್ಞಾನದ ಈ ಅಹಮಿಕೆಯನ್ನು, ನಾವು ಒಪ್ಪಿಕೊಂಡ ಈ ದಾಸ್ಯತ್ವವನ್ನು ಪ್ರಶ್ನಿಸುವ ಚಿಂತನಶೀಲ ಸಾಹಿತ್ಯ ಕೃತಿಗಳು ಏಕೆ ಬರುತ್ತಿಲ್ಲ? ಭೋಗಸ್ವಾತಂತ್ರ್ಯದ ಕುರಿತು, ಹವಾಮಾನದ ತೀವ್ರತೆಯ ಕುರಿತು ಚರ್ಚಿಸುವುದೆಂದರೆ ಬುದ್ಧಿಜೀವಿಗಳಿಗೆ ಏಕೆ  ಪರಿಧಿಯಂಚಿನ ಚಟುವಟಿಕೆಯಾಗಿ ಕಾಣುತ್ತಿದೆ? ಹಿಂದಿನ ಕಾಲದ ನಮ್ಮ ಮೌಲಿಕ ಸಾಹಿತ್ಯಗಳೆಲ್ಲ ಸ್ವಾತಂತ್ರ್ಯದ ವಿವಿಧ ಪರಿಕಲ್ಪನೆಗಳ ಸುತ್ತವೇ ಇದ್ದವು.ಶೋಷಣೆ, ಲೈಂಗಿಕ ದೌರ್ಜನ್ಯ, ಶೂದ್ರ ಸಂಸ್ಕೃತಿ, ರಾಜಕೀಯ ಮೇಲಾಟಗಳೇ ಮುಂತಾದ ಸಾಮಾಜಿಕ ಸ್ಥಿತ್ಯಂತರಗಳನ್ನು ದಾಖಲಿಸುವ ಸಾಹಿತ್ಯಗಳೂ  ಮೂಲತಃ ಸ್ವಾತಂತ್ರ್ಯದ ವಿಶ್ಲೇಷಣೆಯೇ ಆಗಿದ್ದವು. ಈಗ ಎಲ್ಲರ ಬದುಕಿನ ಎಲ್ಲ ಆಯಾಮಗಳನ್ನೂ ಅಸ್ಥಿರಗೊಳಿಸಬಲ್ಲ ಸಂಕಷ್ಟಗಳು ಎದುರಾಗುತ್ತಿವೆ. ಸ್ವಾತಂತ್ರ್ಯಹರಣವಾಗುತ್ತಿದೆ.ಆದರೂ ಅದು ನಮ್ಮ ಗಮನಕ್ಕೆ ಬರುತ್ತಿಲ್ಲ. ಹವಾಮಾನದ ಉತ್ಪಾತಗಳು ಮುಂಬೈ, ಚೆನ್ನೈ, ದಿಲ್ಲಿಯನ್ನೂ ತಟ್ಟುತ್ತಿದ್ದರೂ ತಟ್ಟಿಸಿಕೊಳ್ಳದಂತೆ ತಮ್ಮದೇ ಗೋಪುರದಲ್ಲಿ ಬುದ್ಧಿಜೀವಿಗಳು ನಿಂತಿರುತ್ತಾರೆ. ಹವಾಮಾನದ ವೈಪರೀತ್ಯದಿಂದಾಗಿ ಪ್ರವಾಹವಿರಲಿ, ಬರಗಾಲವಿರಲಿ, ಪರಿಸರ ನಿರಾಶ್ರಿತರು ಪ್ರವಾಹದಂತೆ ತಮ್ಮ ಮೂಲ ನೆಲೆಗಳನ್ನು ಬಿಟ್ಟು ನಗರಗಳತ್ತ ಬರುತ್ತಿದ್ದಾರೆ.ಬಂಗಾಳದ ಜನರು ದಿಲ್ಲಿಯ ಕಡೆ, ಬಾಂಗ್ಲಾ ದೇಶದ ಜನರು ನಮ್ಮ ದೇಶದ ಕಡೆ ಬರುತ್ತಿದ್ದರೆ ಸುಡಾನ್, ಸಿರಿಯಾ, ಆಫ್ರಿಕದ ಸಹೇಲ್ ಪ್ರಾಂತಗಳಿಂದ ನಿರಾಶ್ರಿತರು ಯುರೋಪ್ ಕಡೆ ಸಾಗುತ್ತಿದ್ದಾರೆ.ಶಾಂತಸಾಗರದಲ್ಲಿನ ಟುವಾಲು ದ್ವೀಪದೇಶ ಮುಳುಗಲಿದೆ, ಹತ್ತು ಸಾವಿರ ಜನರು ರಾಷ್ಟ್ರವನ್ನೇ ಕಳೆದುಕೊಳ್ಳಲಿದ್ದಾರೆ ಎಂಬ ಆತಂಕದ ಮಾತು ಅಲ್ಲಲ್ಲಿ ಕೇಳಬರುತ್ತಿದೆ ನಿಜ.ಆದರೆ ಏಷ್ಯದ ಸಮಸ್ಯೆಗಳ ಭೀಕರತೆಯನ್ನು ಯಾರೂ ಗ್ರಹಿಸಿದಂತಿಲ್ಲ. ಬಾಂಗ್ಲಾದೇಶದ ಒಂದು ದ್ವೀಪ (ಭೋಲಾ ದ್ವೀಪ) ಈಗಾಗಲೇ ಭಾಗಶಃ ಮುಳುಗಿರುವುದರಿಂದ ಐದು ಲಕ್ಷ ಜನರು ಆಗಲೇ ನಿರಾಶ್ರಿತರಾಗಿ ವಲಸೆ ಹೋಗಿದ್ದಾರೆ.ಪಾಕಿಸ್ತಾನದಲ್ಲಿ ಸಿಂಧೂ ನದಿಯ ಮುಖದಲ್ಲಿ ಉಪ್ಪುನೀರು ನುಗ್ಗಿದ್ದರಿಂದ ಹತ್ತು ಲಕ್ಷಕ್ಕೂ ಹೆಚ್ಚು ಎಕರೆ ಭೂಮಿ ನಿರುಪಯುಕ್ತವಾಗಿದೆ. ಹವಾಮಾನ ಬದಲಾವಣೆ ಉಗ್ರವಾಗುತ್ತ ಹೋದಂತೆ ಅರಬ್ಬೀ ಸಮುದ್ರದಲ್ಲೂ ಚಂಡಮಾರುತಗಳು, ವರ್ಷಾಘಾತಗಳು ಹೆಚ್ಚುತ್ತವೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಅದರ ಪರಿವೆ ಇಲ್ಲದಂತೆ ಇಡೀ ಪಶ್ಚಿಮ ಕರಾವಳಿಗುಂಟ ಅಭಿವೃದ್ಧಿಯ ದುಂದು-ಭಿ ಮೊಳಗುತ್ತಿದೆ.ಮುಂಬೈ ಶೇರುಪೇಟೆ, ರಿಸರ್ವ್ ಬ್ಯಾಂಕ್, ಪರಮಾಣುಸ್ಥಾವರ, ನೌಕಾನೆಲೆ, ಪೆಟ್ರೊಖಜಾನೆಗಳನ್ನು ಬಚಾವು ಮಾಡುವ ನೀಲನಕ್ಷೆಯೇ ನಮ್ಮಲ್ಲಿಲ್ಲ. ಆದರೆ ಬಡವರನ್ನೂ ಜಿಡಿಪಿಯನ್ನೂ ಒಟ್ಟೊಟ್ಟಿಗೆ ಮೇಲಕ್ಕೆತ್ತುವ ಹೆಸರಿನಲ್ಲಿ ಕೆಲವರನ್ನಷ್ಟೇ ಮೇಲಕ್ಕೆತ್ತಬಲ್ಲ ಯೋಜನೆಗಳು ರೂಪಿತವಾಗುತ್ತವೆ. ರಾಜಕಾರಣಿಗಳು, ರಾಜತಾಂತ್ರಿಕ ತಜ್ಞರು, ಯೋಜನಾಪಟುಗಳು ಸೇರಿ ವಿಜ್ಞಾನ ತಂತ್ರಜ್ಞಾನವನ್ನು ಬಳಸಿಕೊಂಡು ಏನೋ ಮಾಡುತ್ತಾರೆ, ಎಲ್ಲವನ್ನೂ ಸರಿಪಡಿಸುತ್ತಾರೆ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಆದರೆ ಸಂಕಷ್ಟ ಆರಂಭವಾಗಿದ್ದೇ ವಿಜ್ಞಾನ ತಂತ್ರಜ್ಞಾನಗಳ ಅತಿ ಬಳಕೆಯಿಂದ ತಾನೆ? ತಂತ್ರಜ್ಞಾನದ ಭಜನೆಯನ್ನು ಬಿಟ್ಟು, ನಮ್ಮ ಆರ್ಥಿಕ ನೀತಿ, ಬದುಕಿನ ಶೈಲಿ ಮತ್ತು ನಮ್ಮ ಆಶೋತ್ತರಗಳನ್ನು ಪೂರೈಸುವ ವಿಧಾನಗಳನ್ನು ಬದಲಿಸಬೇಕೆಂದು ಯಾರಿಗೂ ಅನ್ನಿಸುತ್ತಿಲ್ಲ ಏಕೆ?ಪೋಪ್ ಮತ್ತು ದಲಾಯಿ ಲಾಮಾರನ್ನು ಬಿಟ್ಟರೆ ಇತರ ಯಾವ ಧರ್ಮಗುರುಗಳೂ ಈ ಬೃಹತ್ ಸ್ಥಿತ್ಯಂತರಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಳೆದ ವರ್ಷ ಪ್ಯಾರಿಸ್ ಸಮ್ಮೇಳನಕ್ಕೆ ಮುನ್ನ ಪೋಪ್ ಹೊರಡಿಸಿದ ಧರ್ಮಾದೇಶ (ಎನ್‌ಸೈಕ್ಲಿಕಲ್) ಮಾತ್ರವೇ ಮನುಕುಲಕ್ಕೆ ಮುಂದಿನ ದಾರಿಯನ್ನು ತೋರಬಲ್ಲ ಸಮರ್ಥ ಸಾಹಿತ್ಯವಾಗಿದೆ (184 ಪುಟಗಳ ಈ ಜಾಗತಿಕ ಸುತ್ತೋಲೆ ಕುರಿತು 1 ಜುಲೈ 2015ರ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು).ಜಗತ್ತನ್ನು ಹಿಂಡುತ್ತಿರುವ ಲಾಭಬಡುಕ ಶಕ್ತಿಗಳನ್ನು ಹಾಗೂ ಸಾರ್ವತ್ರಿಕ ಹಿತಚಿಂತನೆಯಿಲ್ಲದ ನಾಯಕತ್ವವನ್ನು ಎದುರಿಸಿ ಅರ್ಥಪೂರ್ಣ ಬದುಕನ್ನು ಹೇಗೆ ಸಾಧಿಸಬೇಕು. ಭೋಗಸಂಸ್ಕೃತಿಯನ್ನು ಎಲ್ಲಿಯವರೆಗೆ ಅನುಸರಿಸಬೇಕು ಎಂಬುದರ ಬಗ್ಗೆ ಅದರಲ್ಲಿ ಮಾರ್ಗದರ್ಶಿ ಸೂತ್ರಗಳಿವೆ.-ಹೀಗೆಂದು ಹೇಳುವ ಅಮಿತಾವ್ ಘೋಷ್ ಗಾಂಧೀಜಿಯನ್ನು ಅಲ್ಲಲ್ಲಿ ನೆನಪಿಸಿಕೊಳ್ಳುತ್ತಾರೆ. ಗಾಂಧಿ ತೋರಿದ ಮಾರ್ಗವನ್ನು ಮರೆತು ನಾವೆಲ್ಲ ಭೋಗಮಾರ್ಗದಲ್ಲಿ ಬಹುದೂರ ಬಂದಿದ್ದೇವೆ. ಹಿಂದಿರುಗಲು ದಾರಿಯೇ ಕಾಣದಷ್ಟು ತಿಪ್ಪೆರಾಶಿಗಳನ್ನು ಆಕಾಶದೆತ್ತರಕ್ಕೆ ಚೆಲ್ಲಾಡುತ್ತ ಬಂದಿದ್ದೇವೆ. ಬದಲೀ ಮಾರ್ಗದ ಬಗ್ಗೆ ಚಿಂತಿಸುವ ಯಾರಾದರೂ ಇದ್ದಾರೆಯೇ ಎಂದು ಘೋಷ್ ಕೇಳುತ್ತಾರೆ.ಈ ಸಂಕಷ್ಟದಲ್ಲಿ, ‘ಅಮೆರಿಕ ಯಾಕೆ ನಮಗೆ ದಾರಿ ತೋರಿಸುತ್ತಿಲ್ಲವೆಂದು ನಮ್ಮಲ್ಲಿ ಕೆಲವರು ಅಲವತ್ತುಕೊಳ್ಳುತ್ತಿದ್ದಾರೆ- ಅದು ಬೇರೆ ಕೇಡು’ ಎಂದು ಅವರ ಜತೆ ಸಂವಾದ ನಡೆಸಿದ ಡೌನ್ ಟು ಅರ್ಥ್ ಸಂಪಾದಕಿ ಸುನಿತಾ ನಾರಾಯಣ್ ವ್ಯಂಗ್ಯವಾಡುತ್ತಾರೆ.ಅಮೆರಿಕ ಏನು ದಾರಿ ತೋರಿಸೀತು? ಮೊನ್ನೆ ಆಗಸ್ಟ್ 11ರಂದು ಅಲ್ಲಿನ ಲೂಸಿಯಾನಾ ರಾಜ್ಯದಲ್ಲಿ ಅದೆಂಥ ವಿಕೋಪ ಸಂಭವಿಸಿತೆಂದರೆ ಕೋಲಾರದಲ್ಲಿ ಇಡೀ ವರ್ಷ ಸುರಿಯುವಷ್ಟು ಮಳೆ ಒಮ್ಮೆಲೇ ಅಲ್ಲಿ ಸುರಿಯಿತು. 1.1 ಲಕ್ಷಕ್ಕೂ ಹೆಚ್ಚು ಮನೆಗಳು ಧ್ವಂಸವಾದವು. 11 ಸಾವಿರ ಆಶ್ರಯತಾಣಗಳನ್ನು ನಿರ್ಮಿಸಬೇಕಾಯಿತು. ‘ಸಾವಿರ ವರ್ಷಕ್ಕೊಮ್ಮೆಯೂ ಬರದಿದ್ದ’ ಪ್ರಳಯ ಅದಾಗಿತ್ತು. ದಾರಿ ತೋರುವ ಸ್ಥಿತಿಯಲ್ಲಿ ಯಾರಿದ್ದಾರೆ?ಈಗಿನ ಪೀಳಿಗೆಗಂತೂ ದಾರಿ ಕಾಣಲಿಕ್ಕಿಲ್ಲ. ಮುಂದಿನ ಪೀಳಿಗೆಗಾದರೂ ಸೂಕ್ತ ಶಿಕ್ಷಣವನ್ನು ಕೊಡೋಣವೆಂದರೆ ಹೈಟೆಕ್ ರಾಕೆಟ್‌ಗಳೇ ನಮಗೆ ಕಾಣುತ್ತವೆ ವಿನಾ, ಹವಾಮಾನ ವಿಜ್ಞಾನದ ಕಡೆ ಗಮನ ಹರಿಯುವುದು ಕಡಿಮೆ. ಬರ ನೀಗಿಸುವ, ನೀರಿಂಗಿಸುವ, ಬದುಕಿನ ಸುಸ್ಥಿರ ಮಾರ್ಗವನ್ನು ಸೂಚಿಸುವ ಕೈಮರಗಳೇ ನಮಗೆ ಕಾಣುತ್ತಿಲ್ಲ. ಅಮೆರಿಕದಲ್ಲಿ ಸಿಗುವ ಬರ್ಗರ್‌ನದೇ ಡಿಟ್ಟೋ ರುಚಿ, ಆಕಾರ, ಗಾತ್ರದ ಬರ್ಗರ್‌ಗಳು ಚೆನ್ನೈಯಲ್ಲೂ ಶಾಂಘೈಯಲ್ಲೂ ಸಿಗುತ್ತಿವೆ ಎಂದು ಜಾಗತೀಕರಣದ ಭಜಕರು ಖುಷಿಯಿಂದ ಹೇಳುತ್ತಾರೆ. ಅಮೆರಿಕದ ಲೂಸಿಯಾನಾದಲ್ಲಿ ಬಂದಷ್ಟೇ ಗಾತ್ರದ ಜಡಿಮಳೆ ಚೆನ್ನೈಯಲ್ಲೂ ರಾಜಸ್ತಾನದ ಭೀಲ್ವಾಡಾದಲ್ಲೂ ಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry