7

ಅನಿಸಿದ್ದನ್ನು ಹೇಳುವುದು ಬೇಡ ಎಂದರೆ ಹೇಗೆ?...

Published:
Updated:
ಅನಿಸಿದ್ದನ್ನು ಹೇಳುವುದು ಬೇಡ ಎಂದರೆ ಹೇಗೆ?...

ಒಂದು ದೊಡ್ಡ ಗುಂಪು. ಕೆಲವರ ಕೈಯಲ್ಲಿ ಲಾಠಿ, ದೊಣ್ಣೆ, ಬಡಿಗೆ. ಇನ್ನು ಕೆಲವರ ಕೈಯಲ್ಲಿ ಕಲ್ಲು. ಮತ್ತೆ ಕೆಲವರು ದೊಡ್ಡ  ಬೀಗವನ್ನು ಹೊತ್ತುಕೊಂಡು ಹೊರಟಿದ್ದಾರೆ. ಇನ್ನೊಬ್ಬರು ಬೀಗದ ಕೈ ಹಿಡಿದುಕೊಂಡಿದ್ದಾರೆ. ಅವರದು ಹೇಳಿಕೇಳಿ ದೊಡ್ಡ ಗುಂಪು. ಅವರು ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲ ಹೀಗೆಯೇ ಮಾತನಾಡಬೇಕು, ಬೇರೆ ರೀತಿಯಲ್ಲಿ ಮಾತನಾಡಬಾರದು ಎಂದು ತಾಕೀತು ಮಾಡುತ್ತಿದ್ದಾರೆ.ಬೇರೆ  ರೀತಿ ಮಾತನಾಡುವವರಿಗೆ ಲಾಠಿಯಿಂದ ಹೊಡೆಯುವ ಬೆದರಿಕೆ ಹಾಕುತ್ತಿದ್ದಾರೆ. ಜನರಲ್ಲಿ ಹೆದರಿಕೆ ಹುಟ್ಟಿಸಲು ಎತ್ತ ಬೇಕಾದತ್ತ ಕಲ್ಲು ತೂರುತ್ತಿದ್ದಾರೆ. ಯಾರೋ ಭಿನ್ನಧ್ವನಿಯಲ್ಲಿ ಮಾತನಾಡಿದ್ದು ಕೇಳಿದ ಗುಂಪು ಅವರ ಚಿತ್ರಕ್ಕೆ ಮಸಿ ಬಳಿಯುತ್ತಿದೆ. ಚಪ್ಪಲಿಯಿಂದ ಹೊಡೆಯುತ್ತಿದೆ. ‘ಇದು ದೇಶದ್ರೋಹ’ ಎಂಬ ಕೂಗು ಗುಂಪಿನಿಂದ ಮೊಳಗುತ್ತಿದೆ. ಅದು  ಬಾಯಿಗೆ ಬೀಗ ಹಾಕುವ ಕೂಗು. ಊರಿನಲ್ಲಿ ಇರುವ ಬಹುತೇಕ ಜನರೆಲ್ಲ ಇದು ತಮಗೇನೂ ಸಂಬಂಧಿಸಿದ್ದಲ್ಲ ಎನ್ನುವಂತೆ ತೆಪ್ಪಗಿದ್ದಾರೆ. ಪಕ್ಷದವರು ಯಾರೋ ಒಬ್ಬಿಬ್ಬರು, ‘ಭಿನ್ನಧ್ವನಿಯಲ್ಲಿ ಮಾತನಾಡುವುದು ತಪ್ಪೇನೂ ಅಲ್ಲ’ ಎನ್ನುತ್ತಿದ್ದಾರೆ. ಗುಂಪಿನ ಪೈಕಿಯೇ ಒಬ್ಬರು ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೂ ಹೂಡುತ್ತಾರೆ. ಅವರೂ ದೇಶಪ್ರೇಮದ ಮಾತನ್ನೇ ಆಡುತ್ತಾರೆ.ಇದೆಲ್ಲ ವಿಚಿತ್ರವಾಗಿದೆ. ಒಂದು ರೀತಿ ನಿಗೂಢವಾಗಿದೆ. ಮತ್ತೆ  ಮತ್ತೆ ಅನಿಸುತ್ತಿದೆ, ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆಯೇ ಅಥವಾ ಇಲ್ಲವೇ ಎಂದು. ನಾವು ಏನನ್ನು ಮಾತನಾಡಬೇಕು, ಹೇಗೆ  ಮಾತನಾಡಬೇಕು ಎಂದು ಯಾರೋ ಬೇರೆಯವರು ತೀರ್ಮಾನಿಸುತ್ತ ಇರುವಂತೆ  ಕಾಣುತ್ತದೆ. ಅವರು ಬಯಸುವ ರೀತಿಯಲ್ಲಿಯೇ ಮಾತನಾಡದೇ ಇದ್ದರೆ ದೇಶದ್ರೋಹದ ಪಟ್ಟ ಕಟ್ಟಿ ಶಿಲುಬೆಗೆ ಏರಿಸುವ ತಯಾರಿ ನಡೆಯತ್ತಿದೆ.ಪ್ರಜಾಪ್ರಭುತ್ವದ ಮುಖ್ಯ ಲಕ್ಷಣ ಏನು ಎಂಬುದನ್ನು ನಾವು ಎಷ್ಟು ಬೇಗ ಮರೆತು ಬಿಟ್ಟೆವಲ್ಲ? ಇಂಥ ಅಸಹನೆ ಈಗೀಗ ಹೆಚ್ಚಿಗೆ ಆಗುತ್ತಿದೆಯೇ ಅಥವಾ ಮೊದಲೂ ನಾವು ಹೀಗೆಯೇ ಇದ್ದೆವೆ? ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನ್ನದ ಹಕ್ಕಿಗಿಂತ ಒಂದು ತೂಕ ಹೆಚ್ಚಿನ ಮಹತ್ವ ಇದೆಯಲ್ಲವೇ? ನನಗೆ ಅನಿಸಿದ್ದನ್ನು ನಿರ್ಭಯವಾಗಿ ಹೇಳಲು ನನಗೆ ಅವಕಾಶ ಇರಬೇಕು. ಬೇರೆಯವರಿಗೆ ಅವಮಾನ ಆಗುವ ಹಾಗೆ ನಾನು ಮಾತನಾಡಿದರೆ ನನ್ನ ವಿರುದ್ಧ ಕಾನೂನು ಕ್ರಮ ಜರುಗಿಸಲೂ ಅವಕಾಶ ಇದೆ. ಪ್ರಜಾಪ್ರಭುತ್ವದಲ್ಲಿ ನನಗೆ ಅನಿಸಿದ್ದನ್ನು ಹೇಳುವುದು ಅಂದರೆ ಅದು ಟೀಕಿಸುವ ಹಕ್ಕು, ವಿಮರ್ಶಿಸುವ ಹಕ್ಕು. ನಾನು ಹೇಳಿದ್ದನ್ನು ಎಲ್ಲರೂ ಒಪ್ಪಬೇಕು ಎಂದು ಅಲ್ಲ. ಅದು ನನಗೆ ಅನಿಸಿದ್ದು, ಮತ್ತು ಅದನ್ನು ನಾನು ಹೇಳುತ್ತೇನೆ.ನಿಮಗೆ ಒಪ್ಪಿಗೆ ಆಗಲಿಲ್ಲವೇ, ‘ನನಗೆ ನಿಮ್ಮ ಅಭಿಪ್ರಾಯ ಒಪ್ಪಿಗೆ ಇಲ್ಲ’ ಎಂದು ನೀವು ಹೇಳಿದರೆ ಆಯಿತು. ಚರ್ಚೆ ಮಾಡಬೇಕೇ ಮಾಡೋಣ. ವಾಗ್ವಾದ ಮಾಡಬೇಕೇ ಮಾಡೋಣ. ಕೈ ಕೈ ಮಿಲಾಯಿಸಿ ಹೊಡೆದಾಡುವುದು ಒಂದನ್ನು ಬಿಟ್ಟು ನಮ್ಮ ನಮ್ಮ ಅಭಿಪ್ರಾಯಗಳನ್ನು ಹೇಗೆ ಬೇಕಾದರೂ ವಿನಿಮಯ ಮಾಡಿಕೊಳ್ಳಬಹುದು. ಪರಸ್ಪರರ ಅಭಿಪ್ರಾಯಗಳನ್ನು ಒಪ್ಪದೇ ಇರುವಾಗ ಇಬ್ಬರೂ ಕೈ ಕುಲುಕಿ ಹೋಗಲೂ ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಈಗ ನಾವು ಅಂಥ ವಾತಾವರಣದಲ್ಲಿ ಬದುಕುತ್ತಿದ್ದೇವೆಯೇ? ಕೇವಲ 13 ದಿನಗಳ ಹಿಂದೆ ನಾವು ದೇಶದ ಎಪ್ಪತ್ತನೆಯ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದೇವೆ. ಎಪ್ಪತ್ತನೇ ವರ್ಷ ಎಂದರೆ ಸಾಕಷ್ಟು ಪ್ರಬುದ್ಧತೆಯದು. ಆದರೆ, ನಾವು ನಡೆದುಕೊಳ್ಳುತ್ತಿರುವ ರೀತಿ ಅಂಥ ಪ್ರಬುದ್ಧತೆಗೆ ಪೂರಕವಾಗಿ ಇದೆಯೇ?ಮಾಜಿ ಸಂಸದೆ ರಮ್ಯಾ ಏನು ಅಪರಾಧ ಮಾಡಿದ್ದಾರೆ ಎಂದು ಎಲ್ಲರೂ ಅವರ ಬೆನ್ನು ಬಿದ್ದಿದ್ದಾರೆ? ಅವರಿಗೆ ಕ್ಷಮೆ ಕೇಳಬೇಕು ಎಂದು ಏಕೆ ಒತ್ತಾಯಿಸುತ್ತಿದ್ದಾರೆ? ಬುದ್ಧಿವಂತರ ಜಿಲ್ಲೆಯಲ್ಲಿಯೂ ಅವರ ಕಾರಿಗೆ ಮೊಟ್ಟೆ ಎಸೆದು ಏಕೆ ಅವಮಾನ ಮಾಡಿದ್ದಾರೆ? ರಕ್ಷಣಾ ಸಚಿವ ಮನೋಹರ ಪರಿಕ್ಕರ್‌ ಅವರು, ‘ಪಾಕಿಸ್ತಾನಕ್ಕೆ ಹೋಗುವುದು ಎಂದರೆ ನರಕಕ್ಕೆ ಹೋದಂತೆ’ ಎಂದರು. ಹಾಗೆ ಹೇಳಲು ಅವರಿಗೆ ಏನೋ ಕಾರಣ ಇರಬಹುದು. ಅದನ್ನು ಒಪ್ಪುವುದು ಬಿಡುವುದು ನಮಗೆ ಬಿಟ್ಟ ವಿಚಾರ. ರಮ್ಯಾ ಅವರಿಗೆ ಅದನ್ನು ಒಪ್ಪಬಾರದು ಎಂದು ಅನಿಸಿತು.‘ಪಾಕಿಸ್ತಾನ ನರಕ ಅಲ್ಲ. ಅಲ್ಲಿಯೂ ನಮ್ಮ ಹಾಗೆಯೇ ಒಳ್ಳೆಯ ಜನರು ಇದ್ದಾರೆ’ ಎಂದು ಪ್ರತಿಕ್ರಿಯಿಸಿದರು. ‘ಪಾಕಿಸ್ತಾನ ನರಕ ಅಲ್ಲ’ ಎಂದು ಹೇಳಲು ರಮ್ಯಾ ಅವರಿಗೂ ಏನೋ ಸಕಾರಣ ಇತ್ತು. ಅವರ ಅಭಿಪ್ರಾಯವನ್ನೂ ಒಪ್ಪಬಹುದು, ಬಿಡಬಹುದು. ವಿವಾದ ಹುಟ್ಟಿಸಬೇಕು ಎನ್ನುವವರು ಒಂದು ಸೂಕ್ಷ್ಮ ಸಂಗತಿಯನ್ನು ಬೇಕಂತಲೇ ಮರೆ ಮಾಚುತ್ತಿದ್ದಾರೆ ಅಥವಾ ತಿರುಚುತ್ತಿದ್ದಾರೆ : ರಮ್ಯಾ ಅವರು ಪಾಕಿಸ್ತಾನ ನರಕ ಅಲ್ಲ ಎಂದಿದ್ದರೇ ಹೊರತು ಅದು ಸ್ವರ್ಗ ಎಂದಿರಲಿಲ್ಲ. ಆದರೆ, ಈಗ ಎದ್ದಿರುವ ಹುಯಿಲು ನೋಡಿದರೆ ರಮ್ಯಾ ಅವರು ಪಾಕಿಸ್ತಾನವನ್ನು ಸ್ವರ್ಗ ಎಂದರು ಎನ್ನುವಂತೆ ಇದೆ.ಸಾರ್ಕ್‌ ಸಭೆಗೆ ಹೋಗಿದ್ದ ಗೃಹಸಚಿವ ರಾಜ್‌ನಾಥ್‌ ಸಿಂಗ್‌ ಮತ್ತು ಅವರ ಜೊತೆಗೆ ಹೋಗಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಆಗಿದ್ದ ಅವಮಾನ ಪರಿಕ್ಕರ್‌ ಅವರಿಗೆ ಕಾಡುತ್ತಿರಬಹುದು. ಅಥವಾ  ಗಡಿಯಲ್ಲಿ ಪಾಕಿಸ್ತಾನದ ಸೇನೆ ಮಾಡುತ್ತಿರುವ ಹುನ್ನಾರಗಳು ಅವರ ಕಟು ಅನಿಸಿಕೆಯ ಹಿಂದೆ ಇರಬಹುದು. ಅವರ ದೃಷ್ಟಿಯಲ್ಲಿ ಅವರ ಮಾತು ಸರಿ.ಪರಿಕ್ಕರ್‌ ಮಾತಿಗೆ ಪ್ರತಿಯಾಗಿ ಟ್ವೀಟ್‌ ಮಾಡಿದ ರಮ್ಯಾ ಹೇಳಿಕೆಗೂ ಒಂದು ಹಿನ್ನೆಲೆ ಇದೆ. ಅವರು ಈಚೆಗಷ್ಟೇ ಪಾಕಿಸ್ತಾನಕ್ಕೆ ಹೋಗಿದ್ದರು. ಅಲ್ಲಿನ ಜನರು ಅವರಿಗೆ ತೋರಿಸಿದ ಆದರಾತಿಥ್ಯ ಅವರನ್ನು ಕರಗಿಸಿರಬಹುದು. ‘ಅರೇ, ಪಾಕಿಸ್ತಾನಿಯರೂ ನಮ್ಮ ಹಾಗೆಯೇ ಮನುಷ್ಯರೇ ಆಗಿದ್ದಾರೆ. ಅವರೂ ಪ್ರೀತಿ ತೋರಿಸುತ್ತಾರೆ. ಅವರಿಗೂ ನಗಲು ಬರುತ್ತದೆ, ಅಳಲು ಬರುತ್ತದೆ’ ಎಂದು ಅನಿಸಿರಬಹುದು! ಅದಕ್ಕೇ ಅವರು, ‘ಪಾಕಿಸ್ತಾನ ನರಕ ಅಲ್ಲ’ ಎಂದರು. ಅಲ್ಲಿಗೆ ಮುಗಿಯಿತು. ಪರಿಕ್ಕರ್‌ ಅವರ ಅಭಿಪ್ರಾಯವನ್ನು ಒಪ್ಪದವರು ಅನೇಕ ಜನ ಇದ್ದರು. ಹಾಗೆಯೇ ರಮ್ಯಾ ಅವರ ಅಭಿಪ್ರಾಯವನ್ನು ಒಪ್ಪದೇ ಇರುವವರೂ ಇದ್ದಾರು. ಆದರೆ, ಪ್ರಜಾಪ್ರಭುತ್ವದಲ್ಲಿ ಪರಿಕ್ಕರ್‌ ಅವರಿಗೆ ತಮಗೆ ಅನಿಸಿದ್ದನ್ನು ಹೇಳಲು ಹೇಗೆ ಅಧಿಕಾರ ಇದೆಯೋ ಹಾಗೆಯೇ ರಮ್ಯಾ ಅವರಿಗೂ ಇದೆ. ಈಗ ನೋಡಿದರೆ ಪರಿಕ್ಕರ್‌ ಅವರಿಗೆ ಮಾತ್ರ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರ್ಯ ಇದೆ. ಅದಕ್ಕೆ ವಿರುದ್ಧವಾಗಿ ಮಾತನಾಡುವವರಿಗೆ ಇಲ್ಲ ಎನ್ನುವಂತೆ ಇದೆ. ಹೌದೇ?ಕಳೆದ ವರ್ಷ ನಾನು ಲಂಡನ್ನಿಗೆ  ಅಲ್ಲಿನ ಸರ್ಕಾರದ ಆಹ್ವಾನದ ಮೇರೆಗೆ ಹೋಗಿದ್ದೆ. ನನ್ನ ಹಾಗೆಯೇ ಭಾರತದ ಇತರ ರಾಜ್ಯಗಳಿಂದಲೂ ಬಂದಿದ್ದ ಮಾಧ್ಯಮದವರ ಜೊತೆಗೆ ಸಂಪರ್ಕಾಧಿಕಾರಿಯಾಗಿ ಒಬ್ಬರು ನಿಯೋಜನೆಗೊಂಡಿದ್ದರು. ಅವರೂ ನಮ್ಮ ಹಾಗೆಯೇ ಕಾಣುತ್ತಿದ್ದರು! ನಮ್ಮ ಹಾಗೆಯೇ ಕಾಣುತ್ತಿದ್ದರು ಎಂತಲೇ ಅವರಿಗೆ, ‘ನೀವು ಭಾರತೀಯರೇ’ ಎಂದು ಕೇಳಿದೆ. ‘ಅಲ್ಲ ಪಾಕಿಸ್ತಾನಿ’ ಎಂದರು. ಒಂದು ವಾರ ನಮ್ಮ ಜೊತೆಗೆ ಇದ್ದ ಆ ಅಧಿಕಾರಿ ಹೆಸರು ದಾವೂದ್‌ ಮೇಯ್ಟ್‌. ಲಂಡನ್ನಿನಿಂದ ಬೀಳ್ಕೊಡುವಾಗ ನಾನು ಅವರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಹೇಳಿದೆ, ‘ನಿಮ್ಮಂಥ ಶುದ್ಧಾಂತಃಕರಣದ ವ್ಯಕ್ತಿಯನ್ನು ನಾನು ಇದುವರೆಗೆ ನೋಡಿಲ್ಲ’ ಎಂದು.ಲಂಡನ್ನಿನ ಬೀದಿಗಳಲ್ಲಿ ಸಂಚರಿಸುವಾಗ ಭಾರತೀಯರದು ಎನ್ನುವ ಹಾಗೆಯೇ ಕಾಣುವ ಅಂಗಡಿಗಳ ಸಾಲಿನಲ್ಲಿ ಒಂದು ಅಂಗಡಿಗೆ ನುಗ್ಗಿದೆ. ಅನ್ನ ಸಾರು ಸಿಗಬಹುದೇ ಎಂದು ಹುಡುಕುತ್ತಿದ್ದೆ! ‘ಬನ್ನಿ’, ‘ಬನ್ನಿ’ ಎಂದು ಅಂಗಡಿಯ ಮಾಲೀಕ ಕರೆದ. ಆತನೂ ನನ್ನ ಹಾಗೆಯೇ ಇದ್ದ. ‘ಸಾಹೇಬರಿಗೆ ಅವರ ಬಿಲ್ಲಿನಲ್ಲಿ ಹತ್ತು ಪರ್ಸೆಂಟ್‌ ಕಡಿಮೆ ಮಾಡಬೇಕು’ ಎಂದು ನನಗೆ ಊಟ ಕೊಡುವುದಕ್ಕಿಂತ ಮುಂಚೆಯೇ ಕೆಲಸಗಾರರಿಗೆ ಆದೇಶಿಸಿದ. ಬಿಲ್ಲು ಕೊಟ್ಟ ನಂತರ ಕೇಳಿದೆ. ‘ನೀವು ಭಾರತೀಯರೇ’ ಎಂದು. ನನಗೆ  ಮುಖಕ್ಕೆ ಹೊಡೆದಂತೆ ಆತ ಹೇಳಿದ. ‘ಅಲ್ಲ ನಾನು ಪಾಕಿಸ್ತಾನಿ’ ಎಂದು. ಹಾಗೆ ಹೇಳುವಾಗ ಆತನ ಮನಸ್ಸಿನಲ್ಲಿ ನನ್ನ ಬಗೆಗೆ ಯಾವ ಪೂರ್ವಗ್ರಹವೂ ಇದ್ದಂತೆ ಅನಿಸಲಿಲ್ಲ.  ಲಂಡನ್ನಿನಿಂದ ವಾಪಸು ಬರುವಾಗ ನನ್ನನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬಂದ  ಪಾಕಿಸ್ತಾನಿ ಮೂಲದ ಕಾರು ಚಾಲಕ ಎರಡೂ ದೇಶಗಳ ನಡುವೆ ಸಂಬಂಧ ಹೇಗೆ ಸುಧಾರಿಸಬಹುದು ಎಂದು ಹೇಳಿದ್ದನ್ನು ಹಿಂದೆಯೇ ಬರೆದಿದ್ದೆ.ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಇದು ಗೊತ್ತಿತ್ತು. ಅವರು ಪ್ರಧಾನಿಯಾಗಿದ್ದು 90ರ ದಶಕದಲ್ಲಿ. ಆದರೆ, ಪಾಕಿಸ್ತಾನದ ಜೊತೆಗೆ ಸಂಬಂಧ ಸುಧಾರಿಸಲು ಅವರು ಪ್ರಯತ್ನ ಮಾಡಿದ್ದು 1977ರಷ್ಟು ಹಿಂದೆಯೇ. ಆಗಲೇ ಅವರು ದೇಶದ ವಿದೇಶಾಂಗ ಸಚಿವರಾಗಿದ್ದರು. ವಾಜಪೇಯಿ ಅವರು ರಾಜಕಾರಣಿ ಮಾತ್ರ  ಆಗಿರಲಿಲ್ಲ. ಒಬ್ಬ ಮನುಷ್ಯ ಆಗಿದ್ದರು; ಒಬ್ಬ ಕವಿಯಾಗಿದ್ದರು. ಅವರಿಗೆ ಅಧಿಕಾರ ಸಿಕ್ಕಾಗಲೆಲ್ಲ ಅವರು ಪಾಕಿಸ್ತಾನದ ಜೊತೆಗೆ ಸಂಬಂಧ ಸುಧಾರಿಸಲು ಮಾಡಿದ ಪ್ರಾಮಾಣಿಕ ಪ್ರಯತ್ನಗಳು ಒಂದು ಎರಡಲ್ಲ. ಅಮೃತಸರ–ಲಾಹೋರ್‌ ನಡುವೆ ಬಸ್‌ ಸಂಚಾರ ಆರಂಭಿಸಿದರು.ಆ ಬಸ್ಸಿನಲ್ಲಿ ತಾವೇ ಕುಳಿತು ಅರ್ಧ ದಾರಿ ಹೋಗಿ ಬಿಟ್ಟರು. ಲಾಹೋರಿಗೆ ಹೋಗಿ ಅವರು ಮಾಡಿದ ಭಾಷಣ ಎಷ್ಟು ಜನಪ್ರಿಯವಾಯಿತು ಎಂದರೆ ಅಲ್ಲಿನ ಜನರು, ‘ಇಂಥ ಪ್ರಧಾನಿ ನಮಗೆ  ಇಲ್ಲವಲ್ಲ’ ಎಂದು ಮರುಗಿದರು. ಸಂಬಂಧ ಸುಧಾರಣೆಗೆ ವಾಜಪೇಯಿ ಬರೀ ರಾಜತಾಂತ್ರಿಕ ಮಾರ್ಗಗಳನ್ನು ಮಾತ್ರ ಹುಡುಕುತ್ತಿದ್ದಿಲ್ಲ. ಭಾರತದ ಕ್ರಿಕೆಟ್‌ ತಂಡವನ್ನೂ ಅಲ್ಲಿಗೆ ಕಳುಹಿಸಿಕೊಟ್ಟರು. ‘ಬರೀ ಆಟವನ್ನು ಮಾತ್ರವಲ್ಲ ಅಲ್ಲಿನ ಜನರ ಹೃದಯಗಳನ್ನೂ ಗೆದ್ದುಬನ್ನಿ’ ಎಂದು ಭಾರತದ ಕ್ರಿಕೆಟ್‌ ತಂಡಕ್ಕೆ ಹಾರೈಸಿ ಕಳಿಸಿದರು. ಭಾರತದ ಕ್ರಿಕೆಟಿಗರು ಪಾಕಿಸ್ತಾನ ತಂಡವನ್ನು ಸೋಲಿಸಿದರೂ ಅಲ್ಲಿನ ಜನರು ಸಿಟ್ಟು ಮಾಡಿಕೊಳ್ಳಲಿಲ್ಲ;  ಪ್ರೀತಿಯ ಮಳೆ ಸುರಿಸಿ ಕಳಿಸಿಕೊಟ್ಟರು. ಪಾಕಿಸ್ತಾನದಲ್ಲಿ ನಾರಕಿಗಳು ಮಾತ್ರ ಇದ್ದರೆ ಅವರ ಹೃದಯಗಳನ್ನು ಗೆದ್ದು ಬನ್ನಿ ಎಂದು ವಾಜಪೇಯಿ ಹೇಳುತ್ತಿದ್ದರೇ?ವಾಜಪೇಯಿ ಹಾಗೆ ಸಂಬಂಧ ಸುಧಾರಿಸಲು ಪ್ರಯತ್ನ ಮಾಡುತ್ತಿದ್ದಾಗಲೇ ಅದರಲ್ಲಿ ಹುಳಿ ಹಿಂಡಲು ಪಾಕಿಸ್ತಾನದಲ್ಲಿ ನಿರಂತರವಾಗಿ ಪ್ರಯತ್ನ ನಡೆದಿತ್ತು. ಕಾರ್ಗಿಲ್‌ ಸಂಘರ್ಷ ಅದರ ಫಲ. ಪಾಕಿಸ್ತಾನ ಮತ್ತು ಭಾರತದ ನಡುವಣ ಸಂಬಂಧ ಸುಧಾರಣೆಯ ಕ್ರಮಗಳು ಯಾವಾಗಲೂ ಮೂರು ಹೆಜ್ಜೆ ಮುಂದೆ ಮತ್ತು  ತಕ್ಷಣ ಆರು ಹೆಜ್ಜೆ ಹಿಂದೆ ಎನ್ನುವಂತೆ! ಈಗಿನ ಪ್ರಧಾನಿ ನರೇಂದ್ರ ಮೋದಿ ಅನಿರೀಕ್ಷಿತವಾಗಿಯೋ ಅಥವಾ ಪೂರ್ವಯೋಜಿತವಾಗಿಯೋ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಪ್ರಧಾನಿ ನವಾಜ್‌ ಷರೀಫ್‌ ಮೊಮ್ಮಗಳ ಮದುವೆಯಲ್ಲಿ ಭಾಗವಹಿಸಿದ್ದು ಎಲ್ಲ ಭಿನ್ನಾಭಿಪ್ರಾಯಗಳನ್ನು ಮೀರಿದ ಮಾನವ ಸಂಬಂಧಗಳು ಇವೆ ಎಂದು ತೋರಿಸಲು ಅಲ್ಲವೇ? ಇಲ್ಲಿಗೆ ಬಂದ ಮೇಲೂ ನವಾಜ್‌ ತಾಯಿಗೆ ಮೋದಿಯವರು ಉಡುಗೊರೆ ಕಳಿಸಿದ್ದು ಏಕೆ?ರಾಜತಾಂತ್ರಿಕ ಸಂಬಂಧಗಳು ಬೇರೆ. ಮನುಷ್ಯ ಸಂಬಂಧಗಳು ಬೇರೆ. ಈಗ ಕಾಶ್ಮೀರದಲ್ಲಿ ನಡೆದಿರುವ ಅಹಿತಕರ ಘಟನೆಗಳ ಹಿಂದೆ ಪಾಕಿಸ್ತಾನ ಇದೆ ಎಂದು ಅಲ್ಲಿನ ಮುಖ್ಯಮಂತ್ರಿ ನಿನ್ನೆ ನೇರವಾಗಿಯೇ ಆರೋಪ ಮಾಡಿದ್ದಾರೆ. ಅದು ನಿಜ ಇರಬಹುದು. ಹಾಗಿದ್ದರೂ ಎರಡೂ ದೇಶಗಳ ನಡುವೆ ಸಂಬಂಧ ಸುಧಾರಣೆಗೆ ಇರುವ ಏಕೈಕ ದಾರಿ ಮಾತುಕತೆ; ಯುದ್ಧ ಅಲ್ಲ. ಏಕೆಂದರೆ ಈಗಿನ ಕಾಲದಲ್ಲಿ ಯಾರೂ ಯಾರಿಗೂ ಶತ್ರು ರಾಷ್ಟ್ರವಲ್ಲ.ರಮ್ಯಾ ಅವರು ಹೇಳಿದ್ದು ಪಾಕಿಸ್ತಾನದ ಜನರು ನಮ್ಮ ಹಾಗೆಯೇ ಒಳ್ಳೆಯವರು ಎಂದೇ ಹೊರತು ಅಲ್ಲಿನ ಸೇನೆ ಒಳ್ಳೆಯದು ಎಂದು ಅಲ್ಲ. ಆದರೆ, ಅವರು ಹೇಳಿದ ಮಾತನ್ನು ಅರ್ಥ ಮಾಡಿಕೊಳ್ಳಲು ಮತ್ತು ಸರಿಯಾದ ಸಂದರ್ಭದಲ್ಲಿ ಅದನ್ನು ಜನರ ಮುಂದೆ ಇಡಲು ನಮ್ಮ ಮಾಧ್ಯಮಗಳಿಗೆ ವ್ಯವಧಾನ ಎಲ್ಲಿ ಇತ್ತು? ‘ಪಾಕಿಸ್ತಾನದ ಪರ ರಮ್ಯಾ ಬ್ಯಾಟಿಂಗ್‌’ ಎಂದು ಒಂದು ಕೆಟ್ಟ ಹೆಡಿಂಗ್‌ ಕೊಟ್ಟು ದಿನವಿಡೀ ಹೇಳಿದನ್ನೇ ಹೇಳಿದೆವು, ತೋರಿಸಿದ್ದನ್ನೇ ತೋರಿಸಿದೆವು. ನಮ್ಮನ್ನು ನಂಬುವವರು ಬಹಳ ಕಡಿಮೆ ಎಂದರೂ ಕೆಲವರು ನಂಬುತ್ತಾರೆ. ಏಕೆಂದರೆ ಅವರಿಗೆ ಅದರಿಂದ ಲಾಭ ಆಗುತ್ತ ಇರುತ್ತದೆ. ಇದೆಲ್ಲ ಕಿಡಿಯಾಗಿ ಹಬ್ಬಲು ಒಂದು ಕಾರಣವೂ ಇತ್ತು ಎಂದು ಅನಿಸುತ್ತದೆ.ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ‘ಬ್ರೋಕನ್‌ ಫ್ಯಾಮಿಲೀಸ್‌’ ಕಾರ್ಯಕ್ರಮ ಕೂಡ ವಿವಾದದ ತಿರುವು ತೆಗೆದುಕೊಂಡಿತು. ಅಲ್ಲಿ ಬಂದು ತಮ್ಮ ಸಂಕಷ್ಟ  ಹೇಳಿಕೊಳ್ಳುವ ಬದಲು ಕಾಶ್ಮೀರಿ ಹುಡುಗರು ಸೇನೆಯ ವಿರುದ್ಧ ಘೊಷಣೆ ಕೂಗಿದರು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನವರು ಗಲಾಟೆ ಮಾಡಿದರು. ಆಮ್ನೆಸ್ಟಿಯವರಿಗೆ ಇಷ್ಟು ತಡವಾಗಿ ಕಾಶ್ಮೀರದ ಒಡೆದು ಹೋದ ಕುಟುಂಬಗಳ ಬಗೆಗೆ ನೆನಪು ಆದುದು ಕೂಡ ಆಶ್ಚರ್ಯಕರವೇ! ಕಾಶ್ಮೀರದಿಂದ ಮೂರು ಲಕ್ಷಕ್ಕೂ ಹೆಚ್ಚು ಪಂಡಿತರ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಎಷ್ಟೋ ವರ್ಷಗಳು ಆದುವು. ಆಗಲೂ ಅವರಿಗೆ ಇಂಥ ಒಂದು ವೇದಿಕೆಯನ್ನು ಅದು ಕಲ್ಪಿಸಬೇಕಿತ್ತು. ಈಗ ಪಂಡಿತರನ್ನೂ ನೆನಪಿಸಿಕೊಂಡು ಯಾರೋ ಒಬ್ಬರನ್ನು ಅವರ ಪರವಾಗಿ ಮಾತನಾಡಲು ಕರೆದರೆ ಆಮ್ನೆಸ್ಟಿ ಸಂಸ್ಥೆ ‘ರಾಜಕೀಯವಾಗಿ ಸರಿ (politically correct) ಇರಲು’ ಪ್ರಯತ್ನ ಮಾಡುತ್ತಿದೆ ಎಂದು ಅನಿಸಬಹುದು. ಆದರೆ, ‘ಒಡೆದು ಹೋದ ಕುಟುಂಬ’ಗಳ ಪರವಾಗಿ ಪ್ರಾಮಾಣಿಕವಾಗಿ  ಇದೆ ಎಂದು ಅನಿಸುವುದಿಲ್ಲ.ಎಡ ಚಿಂತನೆಯಲ್ಲಿ ಇರುವ ‘ಏಕಮುಖತೆ’ಯ ಸಮಸ್ಯೆ ಇದು. ರಮ್ಯಾ ಅವರ ಹೇಳಿಕೆ ವಿವಾದಕ್ಕೆ ಎಡೆ ಮಾಡಿದ್ದಕ್ಕೆ ಇದೂ ಕಾರಣವಾಗಿರಬಹುದು. ನಾವು ಎಲ್ಲ ವಾಗ್ವಾದಗಳನ್ನು, ಸಂವಾದಗಳನ್ನು ಮರೆತು ಏಕಮುಖಿಗಳು ಆಗುತ್ತಿದ್ದೇವೆಯೇ? ಭಾರತದ ವೈಶಿಷ್ಟ್ಯವೇ ವಿವಿಧತೆಯಲ್ಲಿ ಏಕತೆಯದು. ಅದು ಬಹುತ್ವದ ದೃಷ್ಟಿ. ಎಲ್ಲವನ್ನೂ ಒಳಗೊಳ್ಳುವಂಥ ವಿಶಾಲ ಮನಸ್ಸಿನ ನೋಟ ನಮ್ಮದು. ಕಾಶ್ಮೀರದ ಈಗಿನ ಸಮಸ್ಯೆಗೂ ಅಲ್ಲಿ ಬಹುತ್ವ ಕಳೆದು ಹೋಗಿ ಏಕಮುಖತ್ವವಾಗಿರುವುದೇ ಕಾರಣ ಆಗಿರಬಹುದೇ? ಅಲ್ಲಿನ ಮೂಲನಿವಾಸಿಗಳಾದ ಪಂಡಿತರು ಅಲ್ಲಿಯೇ ಇದ್ದರೆ ಅಲ್ಲಿ ಇನ್ನೂ ಹೆಚ್ಚು ಸಹನಶೀಲತೆ ಇರಬಹುದಿತ್ತೇ? ಇರಬಹುದಿತ್ತು. ಭಿನ್ನ ಜೀವನಶೈಲಿಗಳು, ಭಿನ್ನ ಆಹಾರ ಪದ್ಧತಿಗಳು, ಭಿನ್ನ ವಸ್ತ್ರಗಳು, ಭಿನ್ನ ಒಡವೆಗಳು, ಭಿನ್ನ ನೋಟಗಳು ಒಂದೆಡೆ ಇರುವುದೇ ಸಹಬಾಳ್ವೆಯ ಸಾಧ್ಯತೆಯನ್ನು ಇನ್ನಷ್ಟು, ಮತ್ತಷ್ಟು ಹೆಚ್ಚಿಸುತ್ತವೆ. ಹಾಗೆ ಇಲ್ಲ ಎಂದೇ ಕಾಶ್ಮೀರಿಗಳು ಈಗ ಪ್ರಪಾತದ ಅಂಚಿಗೆ ಬಂದು ನಿಂತಿದ್ದಾರೆ.ಕನ್ನಡದ ಜನರು ಸಹನಶೀಲತೆಗೆ ಹೆಸರಾದವರು. ಆದರೆ, ನಮಗೆ ಏನಾಗಿದೆ? ಮಂಗಳೂರು ನಿಜವಾಗಿಯೂ ಸ್ವರ್ಗದ ಹಾಗೆ ಇದೆಯೇ? ಇದ್ದರೆ ಭಿನ್ನ ಕೋಮಿನ ಹುಡುಗ–ಹುಡುಗಿ ಒಂದು ಕಡೆ ನಿಂತುಕೊಂಡು ಮಾತನಾಡದ ಸ್ಥಿತಿ ಅಲ್ಲಿ ಏಕೆ ನಿರ್ಮಾಣವಾಗಿದೆ? ಇದಕ್ಕೆ ಎರಡೂ ಕಡೆಯವರು ಹೊಣೆಯಲ್ಲವೇ? ರಮ್ಯಾ ಕಾರಿಗೆ ಮೊಟ್ಟೆ  ಹೊಡೆಯುವುದು ಸುಲಭ. ಆದರೆ, ನಮ್ಮ ಮುಖಕ್ಕೆ ಅಂಟಿರುವ ಮಸಿಯನ್ನು ಯಾರು ಒರೆಸುತ್ತಾರೆ?

ಕೈಯಲ್ಲಿ ಬಡಿಗೆ ಹಿಡಿದುಕೊಂಡು, ಕಲ್ಲು ಹಿಡಿದುಕೊಂಡು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಪ್ಪಲಿ ಹಿಡಿದುಕೊಂಡು ಬರುವವರು ಬರಲಿ. ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವವರು, ನಮಗೆ  ಅನಿಸಿದ್ದನ್ನು ನಾವು ಹೇಳುತ್ತೇವೆ ಎನ್ನೋಣ. ಹೆದರುವುದು ಬೇಡ.ತನಗೆ ಸರಿ ಅನಿಸಿದ್ದನ್ನು ಹೇಳುವ ಹಕ್ಕು ತನಗೆ ಇಲ್ಲವೇ ಎಂದು ಕೇಳುತ್ತಿರುವ ರಮ್ಯಾ ಅವರನ್ನು ಬರೀ ಕಾಂಗ್ರೆಸ್ಸಿಗರು ಎಂದು ನಾವು ನೋಡುತ್ತಿದ್ದೇವೆಯೇ? ಇದು ಕಾಂಗ್ರೆಸ್ಸಿಗರು ಮತ್ತು ಬಿಜೆಪಿಯವರ ನಡುವಿನ ವಿವಾದವೇ? ಅದನ್ನು ಮೀರಿ, ನಮ್ಮ ದೇಶದ ಸಂವಿಧಾನದ ಮೂಲತತ್ವಗಳಿಗೆ ಸಂಬಂಧಿಸಿದ್ದು ಅಲ್ಲವೇ? ನಮ್ಮ ಬುದ್ಧಿಜೀವಿಗಳು ಏಕೆ ಮೌನವಾಗಿದ್ದಾರೆ? ಅರ್ಥವೇ ಆಗುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry