7

ಉದಾರೀಕರಣೋತ್ತರದ ಬಡತನ ಉಪಾಖ್ಯಾನ

ನಾರಾಯಣ ಎ
Published:
Updated:
ಉದಾರೀಕರಣೋತ್ತರದ ಬಡತನ ಉಪಾಖ್ಯಾನ

ಇಪ್ಪತ್ತೈದು ವರ್ಷ ತುಂಬಿದ ಭಾರತದ ಉದಾರ ಅರ್ಥನೀತಿಯ ಕತೆಯನ್ನು ಒಂದು ತಿಂಗಳಿಂದೀಚೆಗೆ ಬಗೆ ಬಗೆಯಾಗಿ ಹೇಳಲಾಗುತ್ತಿದೆ. ಈ ಕತೆಯನ್ನು ಈಗ ನಾವು ಉದಾರೀಕರಣೋತ್ತರ ಭಾರತದ ಶ್ರೀಮಂತಿಕೆಯ ಕತೆ ಮತ್ತು ಉದಾರೀಕರಣೋತ್ತರ ಭಾರತದ ಬಡತನದ ಕತೆ ಏನು ಎಂದು ಪ್ರತ್ಯೇಕವಾಗಿ ಗುರುತಿಸಿ ಹೇಳುವ ಅಗತ್ಯವಿದೆ.ಅದು ಯಾಕೆ?. ಅದರಲ್ಲೇನು ವಿಶೇಷ? ಎಲ್ಲಾ ಅಭಿವೃದ್ಧಿಶೀಲ ಸಮಾಜದ ಕತೆಗಳಲ್ಲೂ ಬಡತನ ಮತ್ತು ಸಿರಿವಂತಿಕೆಯ ಕವಲುಗಳನ್ನು ಗುರುತಿಸಬಹುದು ಎಂದು ಯಾರಾದರೂ ಹೇಳಬಹುದು. ಉದಾರೀಕರಣೋತ್ತರ ಎಂದೇನು? ಸ್ವಾತಂತ್ರ್ಯೋತ್ತರ ಭಾರತದ ಕತೆಯೂ ಹೀಗೆಯೇ ಅಲ್ಲವೇ? ಎಂದು ಕೇಳಬಹುದು.ಪ್ರಪಂಚದ ಚರಿತ್ರೆಯೇ ಈ ಎರಡು ವಿದ್ಯಮಾನಗಳ ನಡುವಣ ಸಂಘರ್ಷ ಎಂದು ನೂರಾರು ವರ್ಷಗಳಿಗೆ ಹಿಂದೆಯೇ ಕಾರ್ಲ್ ಮಾರ್ಕ್ಸ್ ಹೇಳಿದ್ದರಲ್ಲ, ಎನ್ನುವ ಜಿಜ್ಞಾಸೆಯೂ ಹುಟ್ಟಬಹುದು. ಹೌದು. ಎಲ್ಲವೂ ಸರಿ. ಆದರೂ ಭಾರತ ಹೊಸ ಅರ್ಥ ನೀತಿಯನ್ನು, ಅರ್ಥಾತ್ ಹೆಚ್ಚು ಸರ್ಕಾರಿ ದಿಗ್ಬಂಧನಗಳಿಲ್ಲದ ಉದಾರೀಕೃತ ಆರ್ಥಿಕ ನೀತಿಯನ್ನು, ಒಪ್ಪಿ ಅಪ್ಪಿಕೊಂಡ ನಂತರ ಅನುಭವಿಸಿದ ಬಡತನ ಮತ್ತು ಶ್ರೀಮಂತಿಕೆಯ ಕಥನಗಳನ್ನು ಪ್ರತ್ಯೇಕವಾಗಿಯೇ ದಾಖಲಿಸಿ ಪರಿಶೀಲಿಸುವ ಅಗತ್ಯವಿದೆ.ಈ ಪ್ರತ್ಯೇಕ ಕಥನಗಳನ್ನು ಹೇಳುವುದಕ್ಕೆ ಪೂರ್ವಭಾವಿಯಾಗಿ ಹೋದ ಇಪ್ಪತ್ತೈದು ವರ್ಷಗಳ ಆರ್ಥಿಕ ಸುಧಾರಣೆ ದೇಶಕ್ಕೆ ಏನೇನು ಮಾಡಿದೆ, ಏನೇನು ನೀಡಿದೆ ಎನ್ನುವ ಪ್ರಶ್ನೆಗೆ ಸ್ಥೂಲವಾಗಿ ಉತ್ತರ ಕಂಡುಕೊಳ್ಳಬೇಕು.ಈ ಪ್ರಶ್ನೆಗೆ ಉತ್ತರವಾಗಿ ಈಗಾಗಲೇ ಮಾಧ್ಯಮಗಳಲ್ಲಿ ಬಂದಿರುವ ಭರಪೂರ ವರದಿ, ವಿವರಣೆ ಮತ್ತು ವಿಶ್ಲೇಷಣೆಗಳನ್ನು ನೋಡಿದರೆ ಉಳಿದ ಎಲ್ಲಾ ಕತೆಗಳಂತೆ ಈ ಕತೆಯನ್ನೂ ಭಾರತ ಅತಿರೇಕದಲ್ಲೇ ಅರ್ಥ ಮಾಡಿಕೊಳ್ಳಲು ಹೊರಟದ್ದನ್ನು ನೋಡಬಹುದು.ಎಲ್ಲವೂ ಕೆಟ್ಟಿದೆ, ಭಾರತ ತನ್ನನ್ನು ತಾನು ಅಂತರರಾಷ್ಟ್ರೀಯ ಹಣಕಾಸು/ವಾಣಿಜ್ಯ ಸಂಸ್ಥೆಗಳಿಗೆ ಅಡವಿಟ್ಟುಕೊಂಡಿದೆ ಮತ್ತು ತತ್ಪರಿಣಾಮವಾಗಿ ದೇಶ ಜಾಗತೀಕರಣದ ಅಲೆಯಲ್ಲಿ ಸಿಲುಕಿ  ಹೈರಾಣಾಗಿದೆ;  ದೇಶಿ ಸಂಸ್ಕೃತಿ ನಾಶವಾಗಿ, ಗ್ರಾಮೀಣ ಬದುಕು ದುರ್ಬರವೂ, ಬರ್ಬರವೂ ಆಗಿದೆ ಎನ್ನುವುದು ಒಂದು ಅಭಿಪ್ರಾಯ.ಇನ್ನೊಂದು ರೀತಿಯ ಅಭಿಪ್ರಾಯದ ಪ್ರಕಾರ ಆರ್ಥಿಕ ಉದಾರೀಕರಣದ ಹಾದಿ ಹಿಡಿದದ್ದು  ದೇಶ ಕಂಡ ಎರಡನೆಯ ಸ್ವಾತಂತ್ರ್ಯ. 1947ರಲ್ಲಿ ರಾಜಕೀಯ ಸ್ವಾತಂತ್ರ್ಯ ಬಂದಹಾಗೆ 1991ರಲ್ಲಿ ಅರ್ಥಿಕ ಸ್ವಾತಂತ್ರ್ಯ ಬಂತು. ಮಾತ್ರವಲ್ಲ, ಭಾರತ ಅರ್ಥಿಕ ಸೂಪರ್ ಪವರ್ ಆಗುವುದಕ್ಕೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ ಎನ್ನುವಷ್ಟರ ಮಟ್ಟಿನ ಆಶಾವಾದ ಈ ಎರಡನೆಯ ರೀತಿಯ ಅಭಿಪ್ರಾಯದಲ್ಲಿ ಆಗಾಗ ಕಂಡುಬರುವುದುಂಟು.ಇವೆರಡಲ್ಲಿ ಸತ್ಯ ಎಷ್ಟು, ಉತ್ಪ್ರೇಕ್ಷೆ ಎಷ್ಟು ಎಂದು ಹುಡುಕುವುದು ಅತ್ಯಂತ ಕ್ಲಿಷ್ಟಕರ. ಅಂತಹ ಪ್ರಯತ್ನ ವ್ಯರ್ಥ. ಆದುದರಿಂದ  ನಂಬಬಾರದು ಎಂದುಕೊಳ್ಳುವ ಅಧಿಕೃತ ಅಂಕಿ ಅಂಶಗಳನ್ನೇ ನಂಬಿಕೊಂಡು ನಾವು ಮುಂದುವರಿಯಬೇಕಾಗುತ್ತದೆ.ಅಧಿಕೃತ ಅಂಕಿ ಅಂಶಗಳ ಪ್ರಕಾರ ಇಪ್ಪತ್ತೈದು ವರ್ಷಗಳಲ್ಲಿ ಭಾರತದ ಸಂಪತ್ತು ಹೆಚ್ಚಿದೆ. ಇತ್ತೀಚೆಗಿನ ವರದಿ ಪ್ರಕಾರ ಭಾರತ ವಿಶ್ವದ ಏಳನೆಯ ಅತೀ ದೊಡ್ಡ ಅರ್ಥ ವ್ಯವಸ್ಥೆ. ಇನ್ನೊಂದು ರೀತಿಯಲ್ಲಿ ಲೆಕ್ಕಹಾಕಿದರೆ ಮೂರನೆಯ ಅತೀ ದೊಡ್ಡ ಅರ್ಥ ವ್ಯವಸ್ಥೆ.ಭಾರತ ಪ್ರಪಂಚದಲ್ಲಿ ಅತೀ ಹೆಚ್ಚು ಬೆಳವಣಿಗೆಯ ದರ ದಾಖಲಿಸುತ್ತಿರುವ ದೇಶ. ಕೆಲವೇ ವರ್ಷಗಳಲ್ಲಿ ಈ ದರ ಚೀನಾದ ದರವನ್ನು ಮೀರಿಸಲಿದೆ. ಚೀನಾದ ಅರ್ಥವ್ಯವಸ್ಥೆ ನಿಶ್ಚಲತೆಯ (stagnation) ಹಂತಕ್ಕೆ ಬಂದು ನಿಂತಿದೆ.ಇದೇ ಅಧಿಕೃತ ಅಂಕಿ ಅಂಶಗಳ ಪ್ರಕಾರ   ಭಾರತದಲ್ಲಿ ಬಡತನ ಪ್ರಮಾಣ ಇಳಿದಿದೆ. ಎಷ್ಟು ಇಳಿದಿದೆ ಎನ್ನುವುದರ ಬಗ್ಗೆ ವಿವಾದ ಇರಬಹುದು, ಆದರೆ ಇಳಿಯುತ್ತಿದೆ ಎನ್ನುವ ವಿಚಾರದಲ್ಲಿ ಲೆಕ್ಕಹಾಕುತ್ತಿರುವ ಯಾರಿಗೂ ತಕರಾರಿಲ್ಲ.ಈಗ ನಾವು ಈ ಸಂಪತ್ತು ಎಲ್ಲಿ ಸೃಷ್ಟಿಯಾಯಿತು, ಯಾರಿಗೆ ಸೃಷ್ಟಿ ಆಯಿತು ಮುಂತಾದ ಸಮಾನತೆಯ ಕುರಿತಾದ ಪ್ರಶ್ನೆಗಳನ್ನು ಕೇಳಬಹುದು. ಹಾಗೆಯೇ ಬಡತನ ಎಲ್ಲಿ ಇಳಿಯಿತು, ಹೇಗೆ ಇಳಿಯಿತು ಎಂಬಿತ್ಯಾದಿ ವಿಮರ್ಶಾತ್ಮಕ ಪ್ರಶ್ನೆಗಳನ್ನು ಎತ್ತಬಹುದು.ದೇಶದಲ್ಲಿ  ಶೇಕಡ 20ರಷ್ಟು ಜನ ಮಾತ್ರ ಬಡವರಾಗಿ  ಉಳಿದಿದ್ದಾರೆ ಎನ್ನುವ ಅಧಿಕೃತ ಹೇಳಿಕೆಗಳನ್ನು ಒಪ್ಪಿಕೊಂಡರೂ  ಈಗ ಸುಮಾರು  21 ಕೋಟಿ ಬಡವರಿದ್ದಾರೆ ಎಂದಾಯಿತು ಮತ್ತು  ಅದು 1950 ರಲ್ಲಿ ಇದ್ದ ಬಡವರ ಸಂಖ್ಯೆಗೆ ಸಮಾನವಾಯಿತು ಎಂದು ವಾದಿಸಬಹುದು. ಬಡತನ ಇಳಿಯುತ್ತಿದ್ದರೆ ಬಡತನದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಯಾಕೆ ಹೆಚ್ಚುತ್ತಿದೆ ಎಂದೂ ಕೇಳಬಹುದು.ಈ ಎಲ್ಲಾ ವಾದಗಳಿಗೆ ಅವಕಾಶ ಇದೆ ಎನ್ನುವುದನ್ನು ಒಪ್ಪಿಕೊಂಡ ನಂತರವೂ ಉದಾರೀಕರಣೋತ್ತರ ಭಾರತದಲ್ಲಿ ಒಂದು ಹೊಸ ಶ್ರೀಮಂತಿಕೆ ಹುಟ್ಟಿಕೊಂಡು ಬೆಳೆದು ನಿಂತಿದೆ ಎಂದೂ, ಹಳೆಯ ಬಡತನ ಇನ್ನೂ ಉಳಿದು ಕೊಂಡಿದೆ ಎಂದೂ ಒಪ್ಪಿಕೊಳ್ಳಬೇಕಾಗುತ್ತದೆ. ಆದುದರಿಂದ ಈ  ಹಳೆಯ ಬಡತನದ ನೆರಳಲ್ಲಿ ಹೊಸ ಶ್ರೀಮಂತಿಕೆಯನ್ನು ನೋಡಬೇಕಿದೆ. ಹಾಗೆಯೇ, ಹೊಸ ಶ್ರೀಮಂತಿಕೆಯ ಹಿನ್ನೆಲೆಯಲ್ಲಿ ಹಳೆಯ ಬಡತನವನ್ನು ಕಂಡರಿಯಬೇಕಿದೆ.1991ರ ವರೆಗೆ ದೇಶ ಅನುಭವಿಸಿದ್ದು ಬಡತನದ ನಡುವೆ ಬದುಕಬೇಕಾದ ಸವಾಲನ್ನು. ಈಗ ಅದು ಎದುರಿಸುತ್ತಿರುವುದು ಶ್ರೀಮಂತಿಕೆಗೆ ಹೊಂದಿಕೊಳ್ಳಬೇಕಾದ ಸವಾಲನ್ನು. ಬಡತನದಲ್ಲಿ ಬದುಕಲು ಒಂದು ಮಟ್ಟದ ಪ್ರಬುದ್ಧತೆ ಒಂದು ಸಮತೋಲಿತ ಮನಸ್ಥಿತಿ ಇತ್ಯಾದಿಗಳೆಲ್ಲಾ ಬೇಕಾಗಿರುವಂತೆ ಶ್ರೀಮಂತಿಕೆಯ ಜತೆ ಬದುಕಲೂ ಇವೆಲ್ಲಾ ಬೇಕಾಗುತ್ತವೆ.ಬಡತನವನ್ನು ಭಾರತೀಯರಷ್ಟು ಪ್ರಬುದ್ಧವಾಗಿ ಭಾರತೀಯರಷ್ಟು ಸಹನಶೀಲರಾಗಿ ನಿಭಾಯಿಸಿದ ಇನ್ನೊಂದು ಸಮಾಜ ಬಹುಶಃ ಇರಲಾರದು. ಭಾರತದಷ್ಟು ಬಡತನ ಭಾರತದಷ್ಟು ಅಸಮಾನತೆ ಇನ್ನೊಂದು ಸಮಾಜದಲ್ಲಿ ಇದ್ದಿದ್ದರೆ ಈ ಹೊತ್ತಿಗೆ ಆ ದೇಶ ಹೋಳಾಗಿ ಹೇಳ ಹೆಸರಿಲ್ಲದೆ ನಾಶವಾಗಿ ಹೋಗುತ್ತಿತ್ತು. ಬಡತನದ ಮಧ್ಯೆ ಸಮಚಿತ್ತದಿಂದ ಇರುವುದಕ್ಕೆ ಭಾರತೀಯ ಮನಸ್ಸುಗಳು ಶತಶತಮಾನಗಳಿಂದ ತಯಾರಾಗಿವೆ.ಆದರೆ ಹೊಸ ಶ್ರೀಮಂತಿಕೆಯ ವಿಷಯದಲ್ಲಿ ಹೀಗೆಲ್ಲಾ ಹೇಳಲು ಸಾಧ್ಯವಿಲ್ಲ. ಅದು ದಿಢೀರ್ ಆಗಿ ಬಂದದ್ದು. ಅದಕ್ಕೆ ಭಾರತದ ಮಣ್ಣು ಮತ್ತು ಭಾರತದ ಮನಸ್ಸು ಇನ್ನೂ ಹದವಾದಂತೆ ಕಾಣುವುದಿಲ್ಲ.  ಹೊಸ ಅರ್ಥ ನೀತಿ ಒಂದಷ್ಟು ಮಂದಿಗೆ ನ್ಯಾಯಯುತವಾದ ರೀತಿಯಲ್ಲಿ ಸ೦ಪತ್ತು ಗಳಿಸಲು ಅನುವು ಮಾಡಿಕೊಟ್ಟಿತು. ಅಷ್ಟೇ ಮಂದಿಗೆ ವಾಮಮಾರ್ಗದಲ್ಲಿ ಅದನ್ನು ಸಂಪಾದಿಸುವುದಕ್ಕೂ ದಾರಿ ಮಾಡಿಕೊಟ್ಟಿತು.

ಹೊಸ ಸಂಪತ್ತು ತರಹೇವಾರಿ ಕಾರುಗಳ ರೂಪದಲ್ಲಿ ರಸ್ತೆಗಿಳಿದಾಗ ಅಲ್ಲಿದ್ದದ್ದು  18ನೇ ಶತಮಾನದ ಮಟ್ಟದ ರಸ್ತೆಗಳು. ಹೊಸ ತೆಲೆಮಾರಿನ ಕಾರುಗಳು ಹಳೆತಲೆಮಾರಿನ ರಸ್ತೆಗಳೊಂದಿಗೆ  ನಡೆಸುತ್ತಿರುವ ಸರಸ-ವಿರಸದಾಟದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಇದ್ದ ಸ್ಥಳವೂ ಇಲ್ಲದಾಯಿತು.ಹೊಸ ಸಂಪತ್ತಿನಿಂದಾಗಿ  ಭಾರತೀಯರೇ ಭಾರತೀಯ ಭೂಮಿಯ ಮೇಲೆ ಹೊಸ ಸಾಮ್ರಾಜ್ಯಶಾಹಿಗಳಾದರು. ಭೂಮಿಯ ಬೆಲೆ ಹೆಚ್ಚಿತು. ಭೂಮಿ ಬಡವರಿಂದ, ಕೃಷಿಯಿಂದ, ಹಸಿರಿನಿ೦ದ ದೂರಾಗತೊಡಗಿತು. ಭೂಮಿಯ ಒಡೆತನಕ್ಕೆ ಬಡವರಿಗೆ ಭದ್ರತೆ ಎಂಬುದೇ ಇಲ್ಲದ ಸ್ಥಿತಿ ಬಂತು.ಹೊಸ ಸಂಪತ್ತು ಸೃಷ್ಟಿಸಲು ಮತ್ತು ಹೊಸ ಸಂಪತ್ತನ್ನು ವೆಚ್ಚ ಮಾಡಲು ಹೆಚ್ಚು ಹೆಚ್ಚು ವಿದ್ಯುತ್ ಬೇಕಾಯಿತು. ಆದರೆ ಅದನ್ನು ಪೂರೈಸಲು ಈಗಲೂ ಇರುವುದು ಒಂದು ಹಗುರ ಮಳೆ ಬಂದರೆ ಸಂಪರ್ಕ ಕಡಿದು ಹೋಗುವ ವಿತರಣಾ ವ್ಯವಸ್ಥೆ.ಇವುಗಳೆಲ್ಲಾ ಹೊಸ ಅರ್ಥ ನೀತಿ ಮತ್ತು ಅದು ಹುಟ್ಟುಹಾಕಿದ ಹೊಸ ಚಟುವಟಿಕೆಗಳಿಗೆ ವ್ಯವಸ್ಥೆ ಹೇಗೆ ಸನ್ನದ್ಧವಾಗಿರಲಿಲ್ಲ ಎನ್ನುವ ಕುರುಹುಗಳಾದವು. ಇವೆಲ್ಲದಕ್ಕಿಂತ ಮುಖ್ಯವಾದದ್ದು ಹೊಸ ನೀತಿಗಳನ್ನು ಮತ್ತು ಅದು ಸೃಷ್ಟಿಸಿದ ಸಂಪತ್ತನ್ನು ನಿಭಾಯಿಸುವುದಕ್ಕೆ ಭಾರತೀಯ ಮನಸ್ಸುಗಳು ಹದವಾಗಿಲ್ಲ ಎನ್ನುವ ಅಂಶ.ಇನ್ನೂ ಬಡವರಾಗಿಯೇ ಉಳಿದವರ ಕಣ್ಣು ಕುಕ್ಕದಂತೆ, ಪ್ರಕೃತಿಯೊಡಲಿಗೆ ಮಾರಕವಾಗದಂತೆ, ಕಾನೂನಿನ  ಮೇರೆ ಮೀರದಂತೆ ಹೊಸ ಸಂಪತ್ತನ್ನು ವೆಚ್ಚ ಮಾಡಲು ಒಂದು ಸಾಮಾಜಿಕ ಪ್ರಬುದ್ಧತೆ ಬೇಕಾಗುತ್ತದೆ.ಅದು 25 ವರ್ಷಗಳ ನಂತರವೂ ಸೃಷ್ಟಿಯಾದ ಹಾಗೆ ತೋರುವುದಿಲ್ಲ. ಬದಲಿಗೆ ಹೊಸ ಸಂಪತ್ತು ರಾಜಕೀಯ ಪ್ರವೇಶಿಸಿತು, ಹೊಸ ಸಂಪತ್ತು ನ್ಯಾಯಾಲಯಗಳನ್ನು ಪ್ರವೇಶಿಸಿತು,  ಹೊಸ ಸಂಪತ್ತು ಮಠ, ಮಂದಿರ, ಚರ್ಚು, ಮಸೀದಿ, ಬಸದಿ, ಪಗೋಡ ಹೀಗೆ ಯಾವೊಂದನ್ನೂ ಬಿಡದೆ ಪ್ರವೇಶಿಸಿತು.ಯಾರ್‌್ಯಾರು ಹೊಸ ಸಂಪತ್ತಿನ ಅಟಾಟೋಪಗಳನ್ನು ತಮ್ಮ ಸಾಂವಿಧಾನಿಕ ಅಧಿಕಾರ ಹಾಗೂ ನೈತಿಕ ಶಕ್ತಿಯಿಂದ ನಿಭಾಯಿಸಬೇಕಿತ್ತೋ ಅವರೆಲ್ಲ ಅದರ ದಾಸರಾಗಿಬಿಟ್ಟರು. ಉದಾರೀಕರಣೋತ್ತರದ ಹೊಸ ಶ್ರೀಮಂತಿಕೆಯ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ನಾವಿನ್ನೂ ಸರಿಯಾಗಿ ತಿಳಿದುಕೊಂಡಿದ್ದೇವೆ ಎಂದು ಅನ್ನಿಸುವುದಿಲ್ಲ.ಇದು ಶ್ರೀಮಂತಿಕೆಯ ಕತೆಯಾದರೆ, ಹಳೆಯ ಬಡತನ ಹೊಸ ಸಿರಿವಂತಿಕೆಯ ಹಿನ್ನೆಲೆಯಲ್ಲಿ ಬೇರೆಯೇ ಸ್ವರೂಪ ಪಡೆದುಕೊಳ್ಳುತ್ತದೆ. ಬಡವರ ಮಧ್ಯೆ ಬಡವರಾಗಿರುವುದು ಶ್ರೀಮಂತರ ನಡುವೆ ಬಡವರಾಗಿ ಬದುಕಬೇಕಾಗಿರುವ ಸ್ಥಿತಿಯಷ್ಟು ಅಸಹನೀಯವಾಗುವುದಿಲ್ಲ. ಬಡತನದ ಬಗ್ಗೆ ಭಾರತೀಯ ಮನಸ್ಸುಗಳು ಶತಶತಮಾನಗಳಿಂದ ಬೆಳೆಸಿಕೊಂಡು ಬಂದಿರುವ ಒಂದು ಸಹನೀಯ ಸಂಬಂಧ ಉದಾರೀಕರಣೋತ್ತರ ಭಾರತದಲ್ಲಿ ಶಿಥಿಲವಾಗುತ್ತಾ ಇದೆ.ಬಹುಶಃ ಬಡವರ ಬದುಕಿನ ಸುತ್ತಮುತ್ತ ಆವರಿಸಿರುವ ಹೊಸ ಸಿರಿವಂತಿಕೆ, ಅದು ಸೃಷ್ಟಿಸಿದ  ಜೀವನಶೈಲಿ,  ಶ್ರಮ ಮತ್ತು ವಿರಾಮದ ಬಗ್ಗೆ ಅದು ಹುಟ್ಟುಹಾಕಿರುವ ಹೊಸ ದೃಷ್ಟಿಕೋನ ಇತ್ಯಾದಿಗಳೆಲ್ಲವೂ ಇನ್ನೂ ಬಡವರಾಗಿಯೇ ಉಳಿದುಕೊಂಡವರ ಬದುಕನ್ನು ಹೆಚ್ಚು ದುರ್ಬರಗೊಳಿಸುತ್ತಿದೆ.ಹಲವಾರು ರೈತರ ಆತ್ಮಹತ್ಯೆಯ ಪ್ರಕರಣದ ಆಳಕ್ಕಿಳಿದು ನಡೆಸಿದ ಅಧ್ಯಯನಗಳ ಪ್ರಕಾರ ರೈತರಿಗೆ ಬದುಕಿನಲ್ಲಿ  ಬೇಸರ ಮೂಡಿಸುತ್ತಿರುವುದು ಒಕ್ಕಲುತನ ಹೇರುವ ಬಡತನಕ್ಕಿಂತ ಹೆಚ್ಚಾಗಿ ಸುತ್ತಲ ಪರಿಸರದಲ್ಲಿ ಹೆಚ್ಚುತ್ತಿರುವ ಹೊಸ ಸಿರಿತನ. ಅದನ್ನು ಆಶಿಸಿ ಅಥವಾ ಅನುಕರಿಸಿ ಸೋತ ಕಾರಣಕ್ಕೆ ಸಾವಿಗೆ ಶರಣಾದ ರೈತರ ಕತೆ ಅಧಿಕೃತ ಕಡತಗಳಲ್ಲಿ ದುಂದುವೆಚ್ಚದ, ಕುಡಿತದ ಪ್ರಕರಣಗಳಾಗಿ  ದಾಖಲಾಗಿಬಿಡುತ್ತವೆ.ದುತ್ತೆಂದು ತೀರ್ಮಾನಕ್ಕೆ ಬಂದು ಬಿಡುವ ಹೋರಾಟಗಾರರು ಜಾಗತೀಕರಣ ಮತ್ತು ಉದಾರೀಕರಣದ ದೆಸೆಯಿಂದ ಸರ್ಕಾರ ಸಾಮಾಜಿಕ ಸ್ವಾಸ್ತ್ಯದ ಮೇಲೆ ಮಾಡುವ ವೆಚ್ಚ ಕಡಿತಗೊಳಿಸಿರುವುದು ಇದಕ್ಕೆಲ್ಲಾ ಕಾರಣ ಎಂದುಬಿಡುತ್ತಾರೆ. ಹಾಗೆ ನೋಡಿದರೆ ಸಾಮಾಜಿಕ ನ್ಯಾಯದ ಹೆಸರಲ್ಲಿ ಸರ್ಕಾರ ಖರ್ಚು ಮಾಡುತ್ತಿರುವ ಪ್ರಮಾಣ ಉದಾರೀಕರಣೋತ್ತರ  ಭಾರತದಲ್ಲಿ ಎಷ್ಟು ಕಡಿಮೆಯಾಗಿದೆ, ಹೇಗೆ ಕಡಿಮೆಯಾಗಿದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ.ಬದಲಿಗೆ ಉದಾರೀಕರಣದ ಜತೆ ಜತೆಗೆ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಮಾಡುತ್ತಿರುವ ವೆಚ್ಚ ಹೆಚ್ಚಿದೆ. ನರೇಗಾದಂತಹ ಪ್ರಪಂಚದಲ್ಲೇ ಅತ್ಯಂತ ಬೃಹತ್ತಾದ ಉದ್ಯೋಗ ಖಾತರಿ ಯೋಜನೆ, ಆಹಾರ ಖಾತರಿ ಯೋಜನೆ, ಕಡ್ಡಾಯ ಉಚಿತ ಶಿಕ್ಷಣ ಇತ್ಯಾದಿ ದೊಡ್ಡ ದೊಡ್ಡ ಕಲ್ಯಾಣ ಕಾರ್ಯಕ್ರಮಗಳೆಲ್ಲಾ ಪ್ರಾರಂಭವಾಗಿದ್ದು ಉದಾರೀಕರಣೋತ್ತರ ಭಾರತದಲ್ಲೇ.ಕಲ್ಯಾಣ ಕಾರ್ಯಕ್ರಮಗಳಲ್ಲಿ ಜನ ಪಡೆಯುವ ಸೌಲಭ್ಯಗಳು ಭಿಕ್ಷೆಯಲ್ಲ, ಬದಲಾಗಿ ಅವರ  ಹಕ್ಕುಗಳು ಎನ್ನುವ ಅಭಿವೃದ್ಧಿಯ ಹೊಸ ನುಡಿಗಟ್ಟು ಕೂಡಾ ಹುಟ್ಟಿಕೊಂಡದ್ದು ಉದಾರೀಕರಣೋತ್ತರ ಭಾರತದಲ್ಲಿ- ಸೋಷಿಯಲಿಸ್ಟ್ ಭಾರತದಲ್ಲಲ್ಲ.ಸಾಮಾಜಿಕ ನ್ಯಾಯ ನೆಹರೂ ಕಾಲದಲ್ಲಿ ಉತ್ತುಂಗದಲ್ಲಿರಲಿಲ್ಲ. ಸರ್ಕಾರಿ ಸ್ವಾಮ್ಯದಲ್ಲಿ ಬೃಹತ್ ಉದ್ಯಮಗಳನ್ನು ಸ್ಥಾಪಿಸಿದ್ದು ಮತ್ತು ಅರ್ಥವ್ಯವಸ್ಥೆಯನ್ನು ಬಿಗಿ ಸರ್ಕಾರಿ ಹಿಡಿತದಲ್ಲಿ ಮುನ್ನಡೆಸಿದ್ದು ನೆಹರೂ ಯುಗದ ಹೆಚ್ಚುಗಾರಿಕೆ. ಸಾಮಾಜಿಕ ನ್ಯಾಯಕ್ಕೆ ಸಾಕಷ್ಟು ಇಂಬು ಕೊಡಲಿಲ್ಲ ಎನ್ನುವುದು ನೆಹರೂ ಮಾದರಿಯ ಮೇಲೆ ಇರುವ ಟೀಕೆಗಳಲ್ಲಿ ಒಂದು.ಇಂದಿರಾ ಗಾಂಧಿಯವರ ಕಾಲದಲ್ಲಿ ಅರ್ಥಿಕ ನೀತಿಗಳು ಸಾಮಾಜಿಕ ನ್ಯಾಯದತ್ತ ವಾಲಿದ್ದು ನಿಜ. ಆದರೆ ಆರ್ಥಿಕ ಬೆಳವಣಿಗೆಯ ದರ ಅವರ ಆಡಳಿತದ ಉದ್ದಕ್ಕೂ ತೀರಾ ಕಡಿಮೆ ಪ್ರಮಾಣದಲ್ಲಿದ್ದ ಕಾರಣ ‘ಬಡತನವನ್ನು ಹಂಚುವ’ ಕಾರ್ಯವಷ್ಟೇ ಅವರ ಕಾಲದಲ್ಲಿ ಸಾಧ್ಯವಾಯಿತು ಎನ್ನುವುದನ್ನು ಭಾರತದ ಆರ್ಥಿಕ ಚರಿತ್ರೆ ದಾಖಲಿಸುತ್ತದೆ.ಆದಕಾರಣ ಉದಾರೀಕರಣ ಪೂರ್ವದಲ್ಲಿ ಸರ್ಕಾರ ಬಡವರ ಹಿತ ಕಾಯುತ್ತಿತ್ತು ಎನ್ನುವ ವಾದವಾಗಲೀ, ಉದಾರೀಕರಣೋತ್ತರದಲ್ಲಿ ಸಾಮಾಜಿಕ ನ್ಯಾಯದ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುತ್ತಿದೆ ಎನ್ನುವ ವಾದವಾಗಲೀ ಸರಿಕಾಣುತ್ತಿಲ್ಲ.ನಮ್ಮ ನಡುವಣ ಸಮಸ್ಯೆಗಳನ್ನು ವಿವರಿಸಲು ನಮಗೆ ದೊಡ್ಡ ಕಾರಣಗಳು ಬೇಕು. ಉದಾರೀಕರಣ ಮತ್ತು ಜಾಗತೀಕರಣ ಆ ಕಾರಣಗಳಾಗಿ ಕಾಣಿಸುತ್ತವೆ. ಆದರೆ ಅವು ಭಾರತದಲ್ಲಿ ಸವೆಸುತ್ತಿರುವ ಹಾದಿ ಮತ್ತು ಉಂಟುಮಾಡಿದ ಪರಿಣಾಮಗಳ ಬಗ್ಗೆ ಒಂದು ಸ್ಪಷ್ಟತೆ ಇದೆ ಎಂದು ಅನ್ನಿಸುವುದಿಲ್ಲ.ಯಾವ ತಲೆಮಾರಿಗೂ ಅದು ಬದುಕುವ ಕಾಲ ಸರಿಯಾಗಿ ಅರ್ಥವಾಗುವುದಿಲ್ಲ. ಅರ್ಥವಾಗುವ ಹೊತ್ತಿಗೆ ಸಮಯ ಮೀರಿರುತ್ತದೆ. ಇನ್ನೊಂದು ರೀತಿಯ ಪರಿವರ್ತನೆಗೆ ರಂಗ ಸಜ್ಜಾಗಿರುತ್ತದೆ. ಉದಾರೀಕರಣೋತ್ತರ ಭಾರತವನ್ನು ನಾವು ಅರ್ಥಮಾಡಿಕೊಳ್ಳುತ್ತಿರುವ ರೀತಿ ಕೂಡ ಇದೇ ಹಾದಿಯಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry