ಬುಧವಾರ, ಜನವರಿ 20, 2021
15 °C

ರೇಷ್ಮೆ ಸರಳ ಉತ್ಪಾದನೆಗೆ ಹೊಸದೊಂದು ಹಾದಿ

ಸಿ ಮಂಜುನಾಥ Updated:

ಅಕ್ಷರ ಗಾತ್ರ : | |

ರೇಷ್ಮೆ ಸರಳ ಉತ್ಪಾದನೆಗೆ ಹೊಸದೊಂದು ಹಾದಿ

ನಾವು ಧರಿಸುವ ಬಣ್ಣ ಬಣ್ಣದ ರೇಷ್ಮೆ ಬಟ್ಟೆಗಳ ಹಿಂದೆ ಅದೆಷ್ಟು ಕಷ್ಟದ ಕೆಲಸವಿರುತ್ತದೆ ಎಂಬುದನ್ನು ಸಾಮಾನ್ಯರಿಗೆ ಊಹಿಸುವುದೂ ಕಷ್ಟ. ರೇಷ್ಮೆ ಗೂಡನ್ನು ಬಿಸಿ ಬಿಸಿ ಕುದಿಯುವ ನೀರಿಗೆ ಹಾಕಿ ಬೇಯಿಸಿ ಬರಿಗೈಯಿಂದಲೇ ಅದರ ನೂಲು ತೆಗೆಯಬೇಕು. ನಂತರ ಅದನ್ನು ತಿರುಗಣೆಗೆ ಸಿಕ್ಕಿಸಬೇಕು. ತೆಗೆದ ನೂಲನ್ನು ಬಿಸಿ ಬಿಸಿ ಕೆಂಡದ ಮೇಲೆ ಸಮ ಅಂತರದಲ್ಲಿ ತಿರುಗುವಂತೆ ಮಾಡಿ ಒಣಗಿಸಬೇಕು. ಒಣಗಿದ ನೂಲನ್ನು ಮತ್ತೆ ಎಳೆ ಎಳೆಯಾಗಿ ವಿಂಗಡಿಸಿ ನುಣುಪುಗೊಳಿಸಬೇಕು... ಹೀಗೆ ರೇಷ್ಮೆ ಒಂದು ಹಂತಕ್ಕೆ ಬರಲು ಕಾರ್ಮಿಕರು ಬಹಳಷ್ಟು ಕಷ್ಟ ಪಡಬೇಕು.ಇದರ ಜೊತೆಗೆ, ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರದ ಬಿಸಿ ಹಬೆಯಲ್ಲಿ, ಸತ್ತ ರೇಷ್ಮೆ ಹುಳಗಳ ಅಸಹನೀಯ ವಾಸನೆ, ರಾಟೆಗಳ ಕಿವಿಗಡಚಿಕ್ಕುವ ಶಬ್ದ, ಅಸುರಕ್ಷಿತ ಕಾರ್ಯ ಸ್ಥಳದ ನಡುವೆಯೇ ಕೆಲಸ ಮಾಡುವ ಸ್ಥಿತಿ ಇಂದಿನ ಬಹುತೇಕ ಕಾರ್ಮಿಕರದ್ದು. ರೇಷ್ಮೆ ನೂಲು ತೆಗೆಯುವ ಅಸುರಕ್ಷಿತ ವಿಧಾನದಿಂದ ಕಾರ್ಮಿಕರು ಹಲವಾರು ರೀತಿಯ ಕಾಯಿಲೆಗಳಿಗೂ ಒಳಗಾಗುತ್ತಿದ್ದಾರೆ.ಇಂಥ ಕಾರ್ಮಿಕರ ಕಷ್ಟ ಕಂಡು ಅವರಿಗೆ ನೆರವಾಗುವಂಥ ನೂತನ ಯಂತ್ರ ಕಂಡುಹಿಡಿದಿದ್ದಾರೆ  ಬೆಂಗಳೂರು ಗ್ರಾಮಾಂತರ ಜಿಲ್ಲೆ, ವಿಜಯಪುರದ ಸಜಾದ್ ಅಹಮದ್. ಕಡಿಮೆ ಉಷ್ಣತೆಯಲ್ಲಿಯೇ ರೇಷ್ಮೆ ಗೂಡು ಬೇಯಿಸುವ ಹಾಗೂ ಒಣಗಿಸುವ ಸರಳ ಯಂತ್ರ ಇದಾಗಿದೆ.ಸರಳ ವಿಜ್ಞಾನದ ವಿಧಾನಗಳನ್ನು ಬಳಸಿ ಯಂತ್ರ ಅಭಿವೃದ್ಧಿಪಡಿಸಿರುವ ಸಜಾದ್, ಈ ಯಂತ್ರದ ಬಳಕೆಯಿಂದ ನೂಲು ಬಿಚ್ಚಣಿಕೆ ಕೇಂದ್ರದ ಉಷ್ಣತೆ ಕಡಿಮೆ ಮಾಡಿದ್ದಾರೆ. ಕಾರ್ಮಿಕರ ಶ್ರಮ ತಗ್ಗಿಸಿದ್ದಾರೆ. ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರಗಳಲ್ಲಿ ಸ್ವಚ್ಛತೆ ತಂದಿದ್ದಾರೆ. ವಿಜಯಪುರದ ಕೆಲವು ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರಗಳಿಗೆ ಈ ಯಂತ್ರವನ್ನು ಪ್ರಾಯೋಗಿಕವಾಗಿ ಅಳವಡಿಸಿರುವ ಇವರು ಯಶಸ್ಸನ್ನೂ ಕಂಡಿದ್ದಾರೆ.ಅವರು ಕಂಡುಕೊಂಡಿರುವ ಹೊಸ ವಿಧಾನ ಎಂದರೆ: ರೇಷ್ಮೆ ಗೂಡು ಬೇಯಿಸುವ ಒಲೆಗೆ ಅಲ್ಯುಮಿನಿಯಂ ಪೈಪ್ ಜೋಡಿಸಿ ಒಲೆಯ ಶಾಖವನ್ನು ಪೈಪ್ ಮೂಲಕ ಹಾಯಿಸಿ ರೇಷ್ಮೆ ನೂಲು ಒಣಗಿಸುವ ತಿರುಗಣೆಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ, ಈ ವಿಧಾನದಿಂದ ಸಮ ಉಷ್ಣತೆ ಪಡೆವ ರೇಷ್ಮೆ ನೂಲು ಒಣಗಿ ನಯವಾಗುತ್ತದೆ.ಈ ಮುಂಚೆ ಕೆಂಡಗಳನ್ನು ಹಾಕಿ ಅದರ ಮೇಲೆ ರೇಷ್ಮೆ ನೂಲನ್ನು ತಿರುಗಣೆಗೆ ಸುತ್ತಿ ತಿರುಗಿಸಿ ಒಣಗಿಸಲಾಗುತ್ತಿತ್ತು. ಸಜಾದ್ ಅವರ ಪ್ರಯತ್ನದಿಂದಾಗಿ ಉರುವಲು ಬಳಕೆ ಕಡಿಮೆಯಾಗಿರುವುದರ ಜೊತೆಗೆ ರೇಷ್ಮೆ ಬಿಚ್ಚಣಿಕೆ ಕೇಂದ್ರದಲ್ಲಿ ಉಷ್ಣತೆ ಶೇ 50ರಷ್ಟು ಕಡಿಮೆಯಾಗಿದೆ.‘ರೇಷ್ಮೆ ಬಿಚ್ಚಣಿಕೆ ಕೇಂದ್ರದಲ್ಲಿ ಸದಾ ಒಲೆಗಳು ಉರಿಯುತ್ತಲೇ ಇರುತ್ತಿವೆ, ಸರಿಯಾದ ಚಿಮಣಿ ವ್ಯವಸ್ಥೆಯೂ ಇರುವುದಿಲ್ಲ. ಉರುವಲು ಬಳಸಿ ಕೆಂಡ ಮಾಡಿ ರೇಷ್ಮೆ ಒಣಗಿಸಲಾಗುತ್ತದೆ. ಈ ವಿಧಾನದಿಂದ ರೇಷ್ಮೆ ಸರಿಯಾಗಿ ಒಣಗುತ್ತಿರಲಿಲ್ಲ. ಕೆಂಡದ ಶಾಖಕ್ಕೆ ರೇಷ್ಮೆ ಸುಡುವ ಭೀತಿ ಇತ್ತು. ಆದರೆ ಹೊಸ ವಿಧಾನದಲ್ಲಿ ಈ ರೀತಿಯ ಯಾವುದೇ ಸಮಸ್ಯೆ ಇಲ್ಲ, ಸಮ ಉಷ್ಣತೆಯಿಂದಾಗಿ ರೇಷ್ಮೆ ಸುಲಭವಾಗಿ ಒಣಗುತ್ತದೆ, ಉಷ್ಣತೆಯನ್ನು ನಿಯಂತ್ರಿಸುವ ಸಾಧನವನ್ನೂ ಯಂತ್ರಕ್ಕೆ ಅಳವಡಿಸಲಾಗಿದೆ, ರೇಷ್ಮೆ ಸುಡುವ ಭಯವಿಲ್ಲ, ಮುಖ್ಯವಾಗಿ ರೇಷ್ಮೆ ಕೇಂದ್ರದ ಉಷ್ಣತೆ ಕಡಿಮೆಯಾಗಿದೆ, ಹೊಗೆ ನಿವಾರಣೆಯಾಗಿದೆ, ಇದ್ದಿಲಿನ ದೂಳು ನಿವಾರಣೆಯಾಗಿದೆ’ ಎಂದು ಸಜಾದ್ ಅವರು ವಿವರಿಸುತ್ತಾರೆ.

₹50ಸಾವಿರ ಖರ್ಚಿನಲ್ಲಿ ಯಂತ್ರವನ್ನು ತಯಾರಿಸಲಾಗಿದೆ. ದ್ವಿತೀಯ ಪಿಯುಸಿವರೆಗೆ ಮಾತ್ರ ಓದಿದ್ದರೂ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಸಜಾದ್ ಸದಾ ಮುಂದು. ಈಗಾಗಲೇ ಸೋಲಾರ್ ತಂತ್ರಜ್ಞಾನ ಬಳಸಿ ಕಾರೊಂದನ್ನು ಅಭಿವೃದ್ಧಿಪಡಿಸಿ ಅದರಲ್ಲಿಯೇ ದೇಶ ಪರ್ಯಟನೆ ಮಾಡಿದ್ದಾರೆ.

ರೇಷ್ಮೆ ಬಿಚ್ಚಣಿಕೆ ಕೇಂದ್ರದಲ್ಲಿಯೂ ಸೋಲಾರ್ ತಂತ್ರಜ್ಞಾನ ಬಳಸಿ ವಿದ್ಯುತ್ ಬಳಕೆ ಪ್ರಮಾಣ ತಗ್ಗಿಸಿದ್ದಾರೆ. ರೇಷ್ಮೆ ಬಿಚ್ಚಣಿಕೆ ಕೇಂದ್ರದಲ್ಲಿ ವಿದ್ಯುತ್‌ನಿಂದ ಕಾರ್ಯ ನಿರ್ವಹಿಸುವ ರೇಷ್ಮೆ ತಿರುಗಣೆ ಯಂತ್ರ, ವಿದ್ಯುತ್ ದೀಪಗಳಿಗೆ ಸೋಲಾರ್ ಅಳವಡಿಸಿದ್ದಾರೆ.‘ರೇಷ್ಮೆ ಬೇಯಿಸಲು ಬಳಸುವ ಒಲೆಗಳಿಂದ ಅತಿಯಾದ ಉಷ್ಣತೆ ಉತ್ಪತ್ತಿಯಾಗುತ್ತದೆ, ಹಾಗೆ ಉತ್ಪತ್ತಿಯಾಗುವ ಅತಿಯಾದ ಶಾಖವನ್ನು ಒಲೆಗಳಿಗೆ ಜೋಡಿಸಿದ ಅಲ್ಯುಮಿನಿಯಂ ಪೈಪ್‌ ಮೂಲಕ ಹರಿಸುವುದರಿಂದ ಶಾಖ ವ್ಯಯವಾಗದಂತೆ ತಡೆಯುವುದಲ್ಲದೇ ಒಲೆಗಳಿಂದ ಬರುವ ಹೆಚ್ಚುವರಿ ಶಾಖವು ಕಾರ್ಮಿಕರು ಕಾರ್ಯ ನಿರ್ವಹಿಸುವ ಕೊಠಡಿಗೆ ಸೇರಿ ಉಷ್ಣತೆ ಹೆಚ್ಚಾಗುವುದನ್ನು ತಡೆಯುತ್ತದೆ.ಈ ಅಲ್ಯುಮಿನಿಯಂ ಪೈಪ್‌ಗೆ ಉಷ್ಣತೆ ನಿಯಂತ್ರಿಸುವ ನಿಯಂತ್ರಕವನ್ನೂ ಅಳವಡಿಸಿರುವದರಿಂದ ನಮಗೆ ಬೇಕಾದಷ್ಟೇ ಉಷ್ಣತೆಯನ್ನು ರೇಷ್ಮೆ ಒಣಗಿಸಲು ಬಳಸಬಹುದಾಗಿದೆ’ ಎನ್ನುತ್ತಾರೆ ಅವರು.ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಅತಿ ಹೆಚ್ಚು ರೇಷ್ಮೆ ಬಿಚ್ಚಣಿಕೆ ಕೇಂದ್ರಗಳಿವೆ. ಇವುಗಳಲ್ಲಿ ಶೇ95ಕ್ಕೂ ಹೆಚ್ಚು ರೇಷ್ಮೆ ಬಿಚ್ಚಣಿಕೆ ಕೇಂದ್ರಗಳಲ್ಲಿ ಹಳೆಯ ವಿಧಾನದಲ್ಲಿಯೇ ರೇಷ್ಮೆ ಬಿಚ್ಚಣಿಕೆ ಮಾಡಲಾಗುತ್ತಿದೆ. ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರದಲ್ಲಿ ಕೆಲಸ ಮಾಡುವವರು ಬಡವರು, ಅನಕ್ಷರಸ್ಥರಿದ್ದಾರೆ. ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರುವ ಇವರಿಗೆ ಯಾವುದೇ ದಿನ ಭತ್ಯೆ, ಆರೋಗ್ಯ ವಿಮೆ ಇಲ್ಲ. ಹಲವಾರು ಮೂಲ ಸೌಕರ್ಯಗಳಿಂದ ಇವರು ವಂಚಿತರಾಗಿದ್ದಾರೆ.

ಪ್ರತಿ ನಿತ್ಯ ಬಿಸಿ ನೀರಲ್ಲಿ ಕೈಯಿಟ್ಟು, ಅತಿಯಾದ ಉಷ್ಣತೆಯ ನಡುವೆ, ಕೊಳಕು ವಾತಾವರಣದ ಮಧ್ಯೆಯೇ ಕೆಲಸ ಮಾಡುವ ಪರಿಸ್ಥಿತಿ ಇದೆ. ಈ ಕಾರ್ಮಿಕರ ಕಡೆ ರೇಷ್ಮೆ ಇಲಾಖೆ ಗಮನವಹಿಸಬೇಕು ಎಂದು ಆಗ್ರಹಿಸುವ ಸಜಾದ್‌, ರೇಷ್ಮೆ ಬಿಚ್ಚಣಿಕೆ ಕೇಂದ್ರದ ಮಾಲೀಕರು ಇಚ್ಛಿಸಿದಲ್ಲಿ ಕಡಿಮೆ ದರದಲ್ಲಿ ಯಂತ್ರವನ್ನು ಅಳವಡಿಸಿಕೊಡುವುದಾಗಿ ಹೇಳುತ್ತಾರೆ.ರೇಷ್ಮೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತನದ ಬಗ್ಗೆ ಭಾರಿ ಅಸಮಾಧಾನ ವ್ಯಕ್ತಪಡಿಸುವ ಸಜಾದ್, ‘ಅಧಿಕಾರಿಗಳಿಗೆ ರೇಷ್ಮೆ ಕಾರ್ಮಿಕರ ಬದುಕಿನ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎನ್ನುತ್ತಾರೆ, ‘ಬೆಂಗಳೂರಿನ ರೇಷ್ಮೆ ಅಧ್ಯಯನ ಇಲಾಖೆಯಿಂದ ಬಂದಿದ್ದ ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಯಂತ್ರದ ವೀಕ್ಷಣೆ ಮಾಡಿ, ಹೊರಟು ಹೋದರು. ಯಂತ್ರ ಅವರ ನಿರೀಕ್ಷೆಗೆ ತಕ್ಕಂತೆ ಇಲ್ಲದುದೇ ಆದಲ್ಲಿ ನ್ಯೂನತೆಯನ್ನು ತಿಳಿಸಿ ಮಾರ್ಪಾಡಾದರೂ ಸೂಚಿಸಬಹುದಲ್ಲವೆ?’ ಎಂದು ಪ್ರಶ್ನಿಸುತ್ತಾರೆ ಸಜಾದ್. ಅವರ ಸಂಪರ್ಕಕ್ಕೆ 9845229757.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.