ಬುಧವಾರ, ಏಪ್ರಿಲ್ 21, 2021
24 °C
ರಷ್ಯಾದ ಪೈಲ್ವಾನ್‌ ಕುದುಕೊವ್ ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತು

ಯೋಗೇಶ್ವರ್‌ಗೆ ‘ಬೆಳ್ಳಿ’ಯ ಅದೃಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಗೇಶ್ವರ್‌ಗೆ ‘ಬೆಳ್ಳಿ’ಯ ಅದೃಷ್ಟ

ನವದೆಹಲಿ (ಪಿಟಿಐ): ಭಾರತದ ಪೈಲ್ವಾನ್‌ ಯೋಗೇಶ್ವರ್‌ ದತ್ ಅವರು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪಡೆದ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಕೂಟದ ಪುರುಷರ 60 ಕೆ.ಜಿ. ಫ್ರೀಸ್ಟೈಲ್‌ನಲ್ಲಿ ಯೋಗೇಶ್ವರ್‌ ದತ್‌ ಕಂಚು ಗೆದ್ದಿದ್ದರು. ಆದರೆ  ಎರಡನೇ ಸ್ಥಾನಗಳಿಸಿದ್ದ  ರಷ್ಯಾದ ಪೈಲ್ವಾನ್‌ ಬೆಸಿಕ್‌  ಕುದುಕೊವ್‌ ಅವರು ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿರುವ ಕಾರಣ ಭಾರತದ ಕುಸ್ತಿಪಟುವಿಗೆ ಎರಡನೇ ಸ್ಥಾನಕ್ಕೆ ಬಡ್ತಿ ನೀಡಲು ಪರಿಗಣಿಸಲಾಗಿದೆ.

ಇದರೊಂದಿಗೆ ಯೋಗೇಶ್ವರ್‌ ಅವರು ಸುಶೀಲ್‌ ಕುಮಾರ್‌ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಇದೇ ಕೂಟದಲ್ಲಿ ಸುಶೀಲ್‌ ಕೂಡ ಬೆಳ್ಳಿ ಜಯಿಸಿದ್ದರು. ಲಂಡನ್‌ ಒಲಿಂಪಿಕ್ಸ್‌ನ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಯೋಗೇಶ್ವರ್‌ ಅವರು ಕುದುಕೊವ್‌ ವಿರುದ್ಧ ಸೋಲು ಕಂಡಿದ್ದರು.

ಆದರೆ ರಷ್ಯಾದ ಪೈಲ್ವಾನ್‌ ಫೈನಲ್‌ ಪ್ರವೇಶಿಸಿದ್ದರಿಂದ ಭಾರತದ ಕುಸ್ತಿಪಟುಗೆ ‘ರೆಪೆಚೇಜ್‌’ ಸುತ್ತಿನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಇದನ್ನು ಸದು ಪಯೋಗಪಡಿಸಿಕೊಂಡಿದ್ದ  ಯೋಗೇಶ್ವರ್ ಕಂಚಿಗೆ ಮುತ್ತಿಕ್ಕಿದ್ದರು. ನಾಲ್ಕು ಬಾರಿಯ ವಿಶ್ವ ಚಾಂಪಿಯನ್‌ ಮತ್ತು ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಕುದುಕೊವ್‌ ಅವರು 2013ರಲ್ಲಿ ನಡೆದ ಕಾರು ಅಪ ಘಾತದಲ್ಲಿ ನಿಧನ ರಾಗಿದ್ದರು.

ಒಲಿಂಪಿಕ್ಸ್‌ ಬಳಿಕ ಅವರ ಮೂತ್ರದ ಮಾದರಿಯನ್ನು ಸಂಗ್ರಹಿಸಿದ್ದ ವಿಶ್ವ ಉದ್ದೀಪನಾ ಮದ್ದು ತಡೆ ಘಟಕ  (ವಾಡಾ) ಅದನ್ನು ಪರೀಕ್ಷೆಗೆ ಒಳಪಡಿಸಿತ್ತು. ಪರೀಕ್ಷೆಯ ವೇಳೆ ರಷ್ಯಾದ ಕುಸ್ತಿಪಟುವಿನ ಮೂತ್ರದ ಮಾದರಿಯಲ್ಲಿ ನಿಷೇಧಿತ ಉದ್ದೀಪನಾ ಮದ್ದಿನ ಅಂಶ ಪತ್ತೆಯಾಗಿತ್ತು. ಹೀಗಾಗಿ ಅವರು ಗೆದ್ದ ಪದಕವನ್ನು ಹಿಂದಕ್ಕೆ ಪಡೆಯಲಾಗಿದೆ.

ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯಿಂದ ಈ ಕುರಿತು ಅಂತಿಮ ಪ್ರಕಟಣೆ ಹೊರಬೀಳಬೇಕಿದೆ. ಈ ಸಂಬಂಧ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌  (ಯುಡಬ್ಲ್ಯುಡಬ್ಲ್ಯು) ಭಾರತ ಕುಸ್ತಿ ಫೆಡರೇಷನ್‌ಗೆ (ಡಬ್ಲ್ಯುಎಫ್‌ಐ) ಲಿಖಿತ ಪತ್ರ ಬರೆದು ತಿಳಿಸಿದ ಮೇಲೆ ಯೋಗೇಶ್ವರ್‌್ ಬೆಳ್ಳಿ ಪಡೆಯುವುದು ಖಚಿತವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.