ಬರ ನಿರೋಧಕ ತಳಿ ಸಂಶೋಧನೆ

7

ಬರ ನಿರೋಧಕ ತಳಿ ಸಂಶೋಧನೆ

Published:
Updated:
ಬರ ನಿರೋಧಕ ತಳಿ ಸಂಶೋಧನೆ

ಬೆಂಗಳೂರು: ಸತತ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಕಂಗೆಟ್ಟಿರುವ ರೈತ ಸಮುದಾಯಕ್ಕೆ ಬರ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದ ತಳಿಯ ಬಿತ್ತನೆ ಬೀಜ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ.

ಹೈದರಾಬಾದ್‌ನಲ್ಲಿರುವ ಇಂಟರ್ ನ್ಯಾಷನಲ್ ಕ್ರಾಪ್ ರೀಸರ್ಚ್ ಇನ್ ಸ್ಟಿಟ್ಯೂಟ್ ಫಾರ್ ಸೆಮಿ-ಆರಿಡ್ ಟಾಪಿಕ್ಸ್  (ಐಸಿಆರ್ಎಸ್‌ಎಟಿ)ಯು ಈ ಸಂಶೋಧನೆಯಲ್ಲಿ ತೊಡಗಿದೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಈ ಸಂಶೋಧನೆಗೆ  ₹25 ಕೋಟಿ  ನೀಡಿದೆ.

ದೇಶದಲ್ಲಿಯೇ  ಅತಿ ಹೆಚ್ಚು ಒಣಭೂಮಿ ಪ್ರದೇಶವನ್ನು ಹೊಂದಿರುವ ರಾಜ್ಯಗಳ ಪೈಕಿ ಎರಡನೆಯ ರಾಜ್ಯ ಕರ್ನಾಟಕ. ಇಲ್ಲಿ ಶೇ 70ಕ್ಕಿಂತ ಹೆಚ್ಚಿನ ರೈತರು ಬೇಸಾಯಕ್ಕೆ ಮಳೆಯನ್ನೆ ನೆಚ್ಚಿಕೊಂಡಿದ್ದಾರೆ. ಎಷ್ಟೇ ಅತ್ಯುತ್ತಮ ಗುಣಮಟ್ಟದ ಬೀಜ  ಬಿತ್ತಿದರೂ ಅವು ಸಸಿಯಾಗಿ, ಗಿಡವಾಗುವಷ್ಟರಲ್ಲಿ ಮಳೆ ಕಾಣೆಯಾಗುವುದರಿಂದಾಗಿ ರೈತ ಸಮುದಾಯಕ್ಕೆ ನಷ್ಟ ಸ್ಥಿತಿ ತಪ್ಪಿದ್ದಿಲ್ಲ.

ಐಸಿಆರ್ಎಸ್‌ಐಟಿಯ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ. ಸುಹಾಸ್ ಪಿ ವಾನಿ ಅವರ ನೇತೃತ್ವದಲ್ಲಿ ಬರ ನಿಗ್ರಹ, ರೋಗ ನಿರೋಧಕ ಸಂಶೋಧನೆ ಅಂತಿಮ ಹಂತದಲ್ಲಿದೆ. ಈ ವರ್ಷ ಧಾರವಾಡ ಮತ್ತು ಬೆಂಗಳೂರು ಕೃಷಿ ವಿ.ವಿ. ವ್ಯಾಪ್ತಿಯಲ್ಲಿ ಕ್ಷೇತ್ರ ಪ್ರಯೋಗ ಆರಂಭವಾಗಲಿದೆ. ಕರ್ನಾಟಕದ ಒಣಭೂಮಿ ಪ್ರದೇಶದ ರೈತರು ಹೆಚ್ಚಾಗಿ ಬೆಳೆಯುವ ರಾಗಿ, ಸಜ್ಜೆ, ಬಿಳಿಜೋಳ, ತೊಗರಿ, ಶೇಂಗಾ ಹೀಗೆ ಐದು ತಳಿಗಳ ಸಂಶೋಧನೆ ನಡೆಯುತ್ತಿದೆ.

ಏನಿದು ವಿಧಾನ: ಜಿನೋಮ್ ಸೀಕ್ವೆನ್ಸಿಂಗ್(ವಂಶವಾಹಿ ಸರಪಳಿ ಜೋಡಣೆ)ಎಂಬ ವೈಜ್ಞಾನಿಕ ತಂತ್ರಜ್ಞಾನ ಬಳಸಿ ಬರ ಮತ್ತು ರೋಗ ನಿರೋಧಕ ತಳಿ ಸೃಷ್ಟಿಸುವ ಯತ್ನದಲ್ಲಿ ಸಂಶೋಧನಾ ತಂಡ ನಿರತವಾಗಿದೆ.

‘ಕರ್ನಾಟಕದಲ್ಲಿ ಅತ್ಯುತ್ತಮ ಇಳುವರಿ ನೀಡುವ ರಾಗಿ, ತೊಗರಿ ತಳಿಗಳನ್ನು ರೈತರು ಬೆಳೆಯುತ್ತಿದ್ದಾರೆ. ಆದರೆ ಬರ ಮತ್ತು ರೋಗವನ್ನು ನಿಗ್ರಹಿಸಿ, ಮಳೆ ಕೊರತೆಯಾದರೂ ತಾಳಿಕೊಳ್ಳುವ ಶಕ್ತಿ ಈ ತಳಿಗಳಿಗೆ ಇಲ್ಲದೇ ಇರುವುದರಿಂದ ರೈತರು ಪ್ರತಿವರ್ಷ ಬೆಳೆನಷ್ಟ ಅನುಭವಿಸುವಂತಾಗಿದೆ. ಈ ಕಾರಣಕ್ಕೆ ಬರ, ರೋಗ ನಿರೋಧಕ ತಳಿಗಳನ್ನು ಅಭಿವೃದ್ಧಿ ಪಡಿಸಿ, ರೈತರಿಗೆ ವಿತರಿಸಲು ಸರ್ಕಾರ ಮುಂದಾಗಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಡಾ. ಸುಹಾಸ್ ಪಿ ವಾನಿ ಅವರು, ‘ಇಳುವರಿ ಕಡಿಮೆ ಇದ್ದರೂ ಬರ ನಿಗ್ರಹ ಮತ್ತು ರೋಗ ನಿರೋಧಕ ಶಕ್ತಿ ಇರುವ ತಳಿಗಳ ವರ್ಣತಂತು ಮತ್ತು ವಂಶವಾಹಿ ಗಳನ್ನು ತೆಗೆದು, ಇಳುವರಿ ಹೆಚ್ಚಿನ ಪ್ರಮಾಣದಲ್ಲಿರುವ ತಳಿಗಳಿಗೆ ಸೇರಿಸುವ ಮೂಲಕ ಹೊಸ ತಳಿ ಸೃಷ್ಟಿ ಮಾಡ ಲಾಗುವುದು. ಇದನ್ನು ಜಿನೋಮ್ ಸೀಕ್ವೆನ್ಸಿಂಗ್ ಎಂದು ಕರೆಯುತ್ತೇವೆ’ ಎಂದು ತಿಳಿಸಿದರು.

‘ರೋಗ ನಿಗ್ರಹ, ಬರ ನಿರೋಧಕ ಶಕ್ತಿ ಇರುವ ತಳಿಗಳ ಡಿಎನ್ಎ ಮ್ಯಾಪಿಂಗ್ ಮಾಡಲಾಗುತ್ತದೆ. ಸಸ್ಯದ ಯಾವ ವಂಶವಾಹಿಯಲ್ಲಿ ಈ ಶಕ್ತಿ ಇದೆ ಎಂಬುದನ್ನು ಪ್ರಯೋಗಾಲಯದಲ್ಲಿ ಪತ್ತೆ ಹಚ್ಚಿ, ಈ ವಂಶವಾಹಿಯನ್ನು ತೆಗೆದು, ಗರಿಷ್ಠ ಇಳುವರಿ ನೀಡುವ ತಳಿಯ ವಂಶವಾಹಿ ಸರಪಳಿಗೆ ಸೇರ್ಪಡೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ಈ ಕ್ರಮದಲ್ಲಿ ಒಂದೇ ತಳಿ ಅಭಿವೃದ್ಧಿ ಪಡಿಸುವುದಿಲ್ಲ. ಐದು ತಳಿಗಳನ್ನು ಸಂಶೋಧಿಸಿ, ವೈಜ್ಞಾನಿಕ ವಾಗಿ ದೃಢಪಡಿಸಿಕೊಂಡ ಮೇಲೆ, ಅದನ್ನು ಕೃಷಿ ಕ್ಷೇತ್ರದಲ್ಲಿ ಪರೀಕ್ಷಾ ಪ್ರಯೋಗ (ಫೀಲ್ಡ್ ಟ್ರಯಲ್)ಕ್ಕೆ ಗುರಿ ಪಡಿಸಲಾಗುವುದು. ಈ ಐದು ತಳಿಗಳಲ್ಲಿ  ಬರ ಮತ್ತು ರೋಗ ನಿರೋಧಕ ಶಕ್ತಿಯನ್ನು ಯಾವ  ತಳಿ ಸದೃಢವಾಗಿ ಪಡೆದಿರುತ್ತದೋ ಅಂತಹ ತಳಿಯನ್ನು ಬಿತ್ತನೆ ಬೀಜ ಉತ್ಪಾದನೆಗೆ ಯೋಗ್ಯ ತಳಿ ಎಂದು ಶಿಫಾರಸು ಮಾಡಲಾಗುವುದು. ಸಂಕರ ತಳಿ ತಂತ್ರಜ್ಞಾನದಲ್ಲಿ ಆರೇಳು ವರ್ಷಗಳು ಬೇಕಾಗುವ ಹೊಸ ತಳಿಯ ಸೃಷ್ಟಿ ಪ್ರಕ್ರಿಯೆ, ಜಿನೋಮ್‌ ಸೀಕ್ವೆನ್ಸಿಂಗ್‌ ತಂತ್ರಜ್ಞಾನದಲ್ಲಿ  ಮೂರು ವರ್ಷ ತೆಗೆದುಕೊಳ್ಳುತ್ತದೆ. ಹೊಸ ತಳಿ ಬೀಜವನ್ನು ರೈತರಿಗೆ ಬೇಗ ತಲುಪಿಸುವ ಈ ತಂತ್ರಜ್ಞಾನವನ್ನು ಬಳಸಿಕೊಳ್ಳ ಲಾಗಿದೆ ಎಂದರು.

‘ಕುಲಾಂತರಿ ತಳಿ(ಜಿನೆಟಿಕಲಿ ಮಾಡಿ ಫೈಡ್-ಜಿಎಂ)ಹಾಗೂ ಜಿನೋಮ್ ಸೀಕ್ವೆ ನ್ಸಿಂಗ್ ತಂತ್ರಜ್ಞಾನದಲ್ಲಿ ಸಿದ್ಧಪಡಿ ಸಿದ ತಳಿಗೆ ಸಾಕಷ್ಟು ವ್ಯತ್ಯಾಸವಿದೆ. ಈ ತಂತ್ರ ಜ್ಞಾನದಲ್ಲಿ ಒಂದೇ ಪ್ರಬೇಧಕ್ಕೆ ಸೇರಿದ ಅಂದರೆ ರಾಗಿ ತಳಿಗೆ ಮತ್ತೊಂದು ರಾಗಿ ತಳಿಯ ವಂಶವಾಹಿ ಸರಪಳಿಯನ್ನು ಜೋಡಿಸಲಾಗುವುದು, ಇದರಿಂದ ತಳಿ ಸಾಮರ್ಥ್ಯ ಮತ್ತು ನಿಗ್ರಹ ಶಕ್ತಿ ಹೆಚ್ಚುತ್ತದೆ ವಿನಃ ಮನುಷ್ಯನ ಆರೋಗ್ಯಕ್ಕೆ ಹಾನಿ ಕಾರಕವಲ್ಲ’ ಎಂದು ವಾನಿ ತಿಳಿಸಿದರು.

ತಳಿ ಸಂಶೋಧನೆಗೆ ಸರ್ಕಾರ ನೆರವು ನೀಡಿದೆ. ಒಂದೂವರೆ ವರ್ಷದಲ್ಲಿ   ಹೊಸತಳಿ ಬಿತ್ತನೆ ಬೀಜ ರೈತರಿಗೆ ಲಭ್ಯವಾಗಲಿದೆ

ಕೃಷ್ಣ ಬೈರೇಗೌಡ, ಕೃಷಿ ಸಚಿವ

ಕರ್ನಾಟಕದಲ್ಲಿ ಬೆಳೆಗಳ ವಿಸ್ತೀರ್ಣ

ಬೆಳೆ    ವಿಸ್ತೀರ್ಣ(ಲಕ್ಷ ಹೆಕ್ಟೇರ್‌)

ಜೋಳ      10.47

ರಾಗಿ       7.20

ಶೇಂಗಾ    7.21

ತೊಗರಿ     7.13

ಸಜ್ಜೆ      2.46

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry