ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದತೆಕ್ಕೆಯೊಳಗೆ ಜಪಾನಿ ಹಿಂದೂಸ್ತಾನಿ

ನಾದಲೋಕ
Last Updated 2 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮಾಣಿಕ್ಯವೇಲು ಮ್ಯಾನ್‌ಷಿನ್‌ನ ಚೊಕ್ಕಾದ ದಾರಿಯೂ, ನೂರಾರು ವರ್ಷಗಳಿಂದ ಆಕಾಶಕ್ಕೆ ಎದೆಕೊಟ್ಟು ನಿಂತ ಬೃಹತ್ ಮರಗಳೂ, ಅವುಗಳ ಸಹಪಾಠಿಗಳಂತಿರುವ ಹಳೇ ಕಟ್ಟಡಗಳೂ...

ಇವನ್ನೆಲ್ಲ ದಾಟಿಕೊಂಡು ಹೋಗುತ್ತಿದ್ದಂತೆ ಎಡಬದಿಗೆ ಸಿಗುವ ಹಳೆಯ ಮತ್ತು ಕಲಾತ್ಮಕ ಕಟ್ಟಡವೇ ರಾಷ್ಟ್ರೀಯ ಕಲಾ ಗ್ಯಾಲರಿ. ಆ ಆವರಣದೊಳಗೊಂದು ಕಟ್ಟೆ, ಆ ಕಟ್ಟೆಯ ಮಧ್ಯಕ್ಕೊಂದು ದೊಡ್ಡ ಮರ. ಇಂಗ್ಲಿಷಿನ ವಿ ಆಕಾರದಲ್ಲಿ ಟಿಸಿಲೊಡೆದ ದೊಡ್ಡಬೊಡ್ಡೆಯನ್ನು ನೋಡುತ್ತಾ ಕಣ್ಣನ್ನು ಆ ಟೊಂಗೆಯ ತುದಿಗುಂಟ ಚಾಚಲೆತ್ನಿಸುತ್ತೀರಿ.

ಆದರೆ ಬಲಬೊಡ್ಡೆಯ ಟೊಂಗೆಗೆ ಚಿಗುರಿದ ಎಲೆಗಳಾಕಾರವೇ ಬೇರೆ, ಎಡಬೊಡ್ಡೆಯ ಟೊಂಗೆಯಲ್ಲಿರುವ ಎಲೆಗಳಾಕಾರವೇ ಬೇರೆ. ಮತ್ತೆ ನಿಮ್ಮ ಕಣ್ಣು ಬೊಡ್ಡೆಯಡಿಗೆ ಅಂಟುತ್ತವೆ. ಅರೇ ಒಡಲೊಂದೇ ಮರ ಬೇರೆ!.

ಹಾಗೇ ತುಸು ವಿಶ್ರಮಿಸುತ್ತೀರಿ, ಅವೆರಡೂ ನೀಡುವ ನೆರಳೊಂದೇ, ಗಾಳಿಯೊಂದೇ ಹಾಗೇ ತೊಟ್ಟಿಕ್ಕಿಸುವ ಮಳೆಹನಿಯೂ ಒಂದೇ. ಹಾಗಾದರೆ? ನಮ್ಮ ಆಲೋಚನೆಗಳ್ಯಾಕೆ ‘ಭಿನ್ನ’ವಾಗಿ ಕವಲೊಡೆಯುತ್ತವೆ? ಹಾಗೆ ಕವಲೊಡೆದ ಮನಸ್ಸುಗಳನ್ನು ಮತ್ತೆ ಒಗ್ಗೂಡಿಸುವ ಹಾದಿ ಯಾವುದು? ಎಂದು ಯೋಚಿಸುತ್ತಿರುವಾಗ, ಸಭಾಂಗಣದೊಳಗಿನಿಂದ ರಾಗವೊಂದು ಅನುರಣಿಸುತ್ತಿರುವುದರ ಸುಳಿವು ಸಿಕ್ಕುತ್ತದೆ. ನಿಮಗರಿವಿಲ್ಲದೇ ಹಿಂಬಾಲಿಸಿರುತ್ತೀರಿ.

ಹೀಗೆ ಬೆಂಗಳೂರಿಗರನ್ನು ಈ ವಾರಾಂತ್ಯದ ‘ರಸದಾಳಿ’ಯಲ್ಲಿ ಕೆಡವಿದ್ದು ಭಾರತೀಯ ಮತ್ತು ಜಪಾನಿನ ಕಲೆ-ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ‘ಲೋಟಸ್ ಮತ್ತು ಕ್ರೈಸಂತೇಮಮ್ ಟ್ರಸ್ಟ್’. ಜಪಾನೀ ಸಂಗೀತವನ್ನು ರಾಯಲ್ ಎಕೋ ತಂಡವು, ಹಿಂದೂಸ್ತಾನಿ ಶಾಸ್ತ್ರೀಯ ಮತ್ತು ಸುಗಮ ಸಂಗೀತವನ್ನು ಮುದ್ದುಮೋಹನ್ ಅವರ ತಂಡವು ಪ್ರಸ್ತುತಪಡಿಸಿತು.

ಮೇಘರಾಜನೇ...
ದಟ್ಟೈಸಿದ ಕಪ್ಪುಮೋಡಗಳು, ಸುಂಯ್ಗುಡುವ ಗಾಳಿ, ಮಿಂಚಿ ಮಾಯವಾಗುವ ಗೆರೆಗಳು, ಆ ಮಳೆಸೆಳಕು, ಇಡೀ ಭೂಪಲ್ಲಂಗವೇ ಆನಂದದಲ್ಲಿ ತೇಲುತ್ತಿದೆ. ಜೀವಜೀವಗಳೂ ಹನಿಸುಖದಿಂದ ಪುಳಕಗೊಂಡಿವೆ.

ಆದರೆ ತಡರಾತ್ರಿಯಾದರೂ ಮನೆಗೆ ಮರಳದ ತನ್ನ ಸಖನ ನಿರೀಕ್ಷೆಯಲ್ಲಿರುವ ಸಖಿಯನ್ನು ಇದ್ಯಾವುದೂ ಮೃದುಗೊಳಿಸುತ್ತಿಲ್ಲ... ಪ್ರೀತಿ-ನಿರೀಕ್ಷೆ-ವಿರಹದಿಂದ ಕಪ್ಪಾದ ಮನಸ್ಸಿಗೆ, ಹೊನ್ನ ಕೊಪ್ಪರಿಗೆಯೂ ಹೇಗೆ ಹೊಳಪ ತರಲಾರದೋ ಹಾಗೇ ಇನಿಯನೇ ಸನಿಹವಿಲ್ಲವೆಂದಾಗ ಇನಿಯಳ ಮನಸ್ಸು ಸದಾ ಕುದಿಬಿಂದು. ಇಂಥ ಈ ಬಿಂದುವಿನೊಳಗೆ ತಳೆದ ರಾಗಗಳ ಪೈಕಿ ‘ಮೇಘ’ವೂ ಒಂದು.

ಈ ರಾಗದ ಮುಖ್ಯಸ್ವರಗಳಾದ ಷಡ್ಜ ಮತ್ತು ಪಂಚಮದ ಸುತ್ತ ನಾದದ ಅಲೆಗಳು ಚಲಿಸುವ ರೀತಿಯೇ ಮೋಹಕ. ರಿಷಭ ಮತ್ತು ಮಂದ್ರದ ಪಂಚಮಕ್ಕೆ ವಿಶ್ರಾಂತಿಗಾಗಿ ತೆರಳುವ ರೀತಿ ಆ ರಾಗದ ಭಾವವನ್ನು ಉದ್ದೀಪಿಸುತ್ತದೆ. ಆಗ ರಿಷಭಕ್ಕಾಗಿ ಮಧ್ಯಮವನ್ನು ಸ್ಪರ್ಶಿಸುವ ನಡೆಯಲ್ಲಿ ವಿಶಿಷ್ಟ ಸೌಂದರ್ಯ ಸೃಷ್ಟಿಯಾಗುತ್ತದೆ. ಮೇಘದ ಆಲಾಪದ ಕ್ರಮವನ್ನು ಭಾವಪೂರ್ಣವಾಗಿ ಕಟ್ಟಿಕೊಟ್ಟರು ಮುದ್ದುಮೋಹನ್. ನಂತರ ಝಪ್‌ತಾಳದ ಮಧ್ಯಲಯದೊಳಗೆ ‘ಗರಜೆ ಘಟಾ ಘನ/ಕಾರೆ ರೀ ಕಾರೆ’ ಬಂದಿಶ್ ಪ್ರಸ್ತುತಪಡಿಸಿದರು.

ಲಯಕಾರಿಯಲ್ಲೂ ಮಾಧುರ್ಯ ಕಾಯ್ದುಕೊಳ್ಳುವ ವಿಶಿಷ್ಟ ಧ್ವನಿ ಇವರದು. ಕೇಳುಗನ ಮುಂದೆ ಕಲಾವಿದ ಮಾಂತ್ರಿಕನಿದ್ದಂತೆ. ಬತ್ತಳಿಕೆಯಲ್ಲಿ ಹೊಸ ಬಾಣಗಳನ್ನಿಟ್ಟಿರಲೇಬೇಕು; ತಾನ್‌ಗಳ ಪ್ರಸ್ತುತಿಯಲ್ಲಿ ಸರಕು ಇನ್ನಷ್ಟು ಇದ್ದಿದ್ದರೆ ಚೆಂದವೆನ್ನಿಸುತ್ತಿತ್ತು. ಮುಂದೆ ಧೃತ್ ಏಕತಾಲದಲ್ಲಿ ‘ಘನನನನನ ಘೋರ ಘೋರ’ ಛೋಟಾ ಖಯಾಲ್ ಹಾಡಿದಾಗಲೂ ಹಾಗೆಯೇ ಅನ್ನಿಸಿತು.

ಇದಕ್ಕಿಂತ ಮೊದಲು ಅವರು ಹಾಡಿದ್ದು ಭಾರತೀಯ ಸಂಗೀತದ ಎಲ್ಲ ಪ್ರಕಾರಗಳಿಗೆ ಮಾಧುರ್ಯ ಮುಕುಟವೆನಿಸಿದ ಸಂಜೆಯ ರಾಗ ಪೂರಿಯಾ ಧನಾಶ್ರೀ. ಅನುಕಂಪ ಸೂಸುತ್ತಾ ಮಧುರತೆಯ ತೆಕ್ಕೆಯೊಳಗೆ ಎಳೆದುಕೊಳ್ಳುವ ಈ ರಾಗದ ಆರ್ದ್ರತೆ ಎಂಥವರನ್ನೂ ಸಮ್ಮೋಹನಗೊಳಿಸುತ್ತದೆ.

ಈ ದಿಸೆಯಲ್ಲಿ ರಸ ಪೋಷಿಸುವಲ್ಲಿ ಸೈ ಎನ್ನಿಸಿಕೊಂಡರು ಮುದ್ದುಮೋಹನ್. ನಂತರ ಬಸವಣ್ಣನವರ ವಚನ ‘ನೂರನೋದಿ ನೂರ ಕೇಳಿದರೇನು’, ಕನಕದಾಸರ ಕೀರ್ತನೆ ‘ಜಪವ ಮಾಡಿದರೇನು’ ಮತ್ತು ಗುರು ನಾನಕರ ದೋಹಾ ‘ಸುಮಿರನ ಕರಲೇ ಮೇರೆ ಮನಾ’ ಮೂಡಿ ಬಂದವು.

ಪ್ರಸ್ತುತಿಯಲ್ಲಿ ಅಲ್ಲಲ್ಲಿ ಅಪಸ್ವರಗಳು ಉಂಟಾಗದಿದ್ದಲ್ಲಿ ಮುದ್ದುಮೋಹನ್ ಅವರು ಇನ್ನಷ್ಟು ರಸಿಕರನ್ನು ಹಿಡಿದಿಡಬಹುದಾಗಿತ್ತು. ಆಡಳಿತಾಧಿಕಾರಿಯಾಗಿದ್ದ ಮುದ್ದುಮೋಹನ್ ಗಾಯಕರಾಗಿಯೂ ಗುರುತಿಸಿಕೊಂಡಿದ್ದು ಗಮನಾರ್ಹ. ಆದರೆ ಎರಡೆರಡು ದೋಣಿ ಪಯಣದಲ್ಲಿ ಪ್ರತಿಭೆ ಹಂಚಿ ಹೋಗುತ್ತದೆ. ಇಂಥ ಸಂದರ್ಭದಲ್ಲಿ, ಕಲಾವಿದರ ಉತ್ಸಾಹ ಮತ್ತು ಸಂಗೀತ ಪ್ರೇಮವನ್ನಷ್ಟೇ ಪರಿಗಣಿಸಬೇಕಾಗುತ್ತದೆ.

ಡಾ. ರವೀಂದ್ರ ಕಾಟೋಟಿ ಅವರ ಹಾರ್ಮೋನಿಯಂ ಮತ್ತು ಉದಯರಾಜ್ ಕರ್ಪೂರ್ ಅವರು ತಬಲಾ ಕೈಚಳಕಕ್ಕೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರು. 

ಅಲೆಅಲೆಅಲೆಯೋ...
ತೇಲಿಬಂದ ಅಲೆಯೊಂದು ಕರಗುತ್ತಿದ್ದಂತೆ ಇನ್ನೊಂದು ಅಲೆ ಅಪ್ಪಳಿಸುತ್ತದೆ. ಹೀಗೆ ಅಪ್ಪಳಿಸುವಾಗ ಸೃಷ್ಟಿಯಾಗುವ ಸಣ್ಣ ಅಲೆಗಳು ಆ ಲಯದ ನಿರಂತರತೆಯನ್ನೂ ಮತ್ತು ದಡದ ಆರ್ದ್ರತೆಯನ್ನೂ ಕಾಯುತ್ತಾ ಸಮುದ್ರರಾಜನ ಅಸ್ತಿತ್ವವನ್ನು ಕಾಯುವಲ್ಲಿ ಶ್ರಮಿಸುತ್ತಿರುತ್ತವೆ.

ಹೀಗೊಂದು ಚಿತ್ರಣವನ್ನು ಕಾರ್ಯಕ್ರಮದ ಆರಂಭದಲ್ಲೇ ಕಟ್ಟಿಕೊಟ್ಟಿತು ಕುಬೋಕಿ ನೇತೃತ್ವದ ‘ರಾಯಲ್ ಎಕೊ’ ತಂಡ. ಜಪಾನಿ ಶಾಸ್ತ್ರೀಯ, ಜನಪ್ರಿಯ ಮತ್ತು ಹಿಂದಿ–ಕನ್ನಡ ಚಿತ್ರಗೀತೆಗಳನ್ನು ಅವರು ಪ್ರಸ್ತುತಪಡಿಸಿದರು.

ವೃಂದಗಾನದಲ್ಲಿ ಏಕಕಾಲಕ್ಕೆ ಮೂರು ಸ್ಥಾಯಿಗಳಲ್ಲಿ ಹಾಡಿದ ರೀತಿಯೇ ರೋಮಾಂಚಕಾರಿ. ಟೆನೋರ್ (ತಾರಕಸ್ಥಾಯಿಯಲ್ಲಿ ಹಾಡುವ ಕಲಾವಿದರು), ಬಾಸ್‌ (ಮಂದ್ರಸ್ಥಾಯಿಯಲ್ಲಿ ಹಾಡುವ ಕಲಾವಿದರು), ಸುಪ್ರಾನೋದಲ್ಲಿ (ತಾರಕಸ್ಥಾಯಿಯಯಲ್ಲಿ ಹಾಡುವ ಕಲಾವಿದರು) ಸ್ವರಗಳ ಒಗ್ಗೂಡಿಕೆ, ಆಂದೋಲನ, ಸುಶ್ರಾವ್ಯ ಕಂಪನ ಮನೋಲ್ಲಾಸಕ್ಕೆ ಎಡೆ ಮಾಡಿಕೊಟ್ಟಿತ್ತು.

ಟಟ್ಸುಜಿ ಟಕಡಾ, ಟಟ್ಸುಯೇ ಮಿನಗವಾ ಗಾನವೃಂದದ ಸಂಯೋಜಕರಾಗಿದ್ದರೆ, ನವೋ ಫುಜಿಸಾಕಿ ಚೆಂದದಿಂದ ಪಿಯಾನೋ  ನುಡಿಸಿದರು.
ಕಛೇರಿ ಕೇಳಿದ ನೀವು ಹೊರಬಂದು ಒಮ್ಮೆ ಆ ಜೋಡುಮರವನ್ನೊಮ್ಮೆ ನೋಡುತ್ತೀರಿ, ಕತ್ತಲೊಳಗೆ ಆಕೃತಿ ಮಾತ್ರ ಕಾಣುತ್ತದೆ, ಸಮರಸದ ಗಂಧಗಾಳಿ ನಿಮ್ಮ ಮೈಮನಸ್ಸನ್ನು ಹೊಕ್ಕಾಡುತ್ತದೆ. ನೀವೀಗ ಉಲ್ಲಾಸದ ಉತ್ತುಂಗದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT