7

ಲಡ್ಡುಗಟ್ಟಿದ ಅಟ್ಟಣಿಗೆಯೊಂದರ ಕತೆ...

ಪ್ರಸನ್ನ
Published:
Updated:
ಲಡ್ಡುಗಟ್ಟಿದ ಅಟ್ಟಣಿಗೆಯೊಂದರ ಕತೆ...

ಇದೊಂದು ಅಟ್ಟಣಿಗೆ. ಅಟ್ಟಣಿಗೆಯ ತುತ್ತತುದಿಯ ಅಟ್ಟದ ಮೇಲೆ ನಾನು ನಿಂತಿದ್ದೇನೆ. ನನಗಿಂತ ಮೇಲೆ ಮತ್ತಾವ ಅಟ್ಟವೂ ಇಲ್ಲ, ಖಾಲಿ ಆಕಾಶವಿದೆ. ಗಟ್ಟಿನೆಲ ಹಲವು ಅಟ್ಟಗಳ ಕೆಳಗೆ ಎಲ್ಲೋ ಆಳದಲ್ಲಿದೆ.ಅಟ್ಟಣಿಗೆ ಲಡ್ಡಾಗಿದೆ, ಅಲುಗಾಡತೊಡಗಿದೆ. ನನಗೆ ಬೇಗ ನೆಲ ತಲುಪಬೇಕೆಂದು ಆಸೆಯಾಗುತ್ತದೆ. ಅಟ್ಟದ ಅಂಚಿಗೆ ಬಂದು ಅಂಗಾತನಾಗಿ ಮಲಗಿ ಆತಂಕದಿಂದ ಕೆಳಗಿಣುಕುತ್ತೇನೆ.ಬೆಲ್ಲಕ್ಕೆ ಇರುವೆ ಮುತ್ತಿದಂತೆ ಅಟ್ಟಣಿಗೆಯ ಸುತ್ತ ಜನ ಮುತ್ತಿದ್ದಾರೆ. ಅವರು ಅಟ್ಟಣಿಗೆಗಡರುತ್ತ ಮೇಲೇರುತ್ತ ಕೆಳಬೀಳುತ್ತ ಮತ್ತೆ ಮತ್ತೆ ಏರುವ ಪ್ರಯತ್ನ ನಡೆಸಿದ್ದಾರೆ. ಬೆರಳೆಣಿಕೆಯ ಕೆಲವರು ಏರುವುದರಲ್ಲಿ ಯಶಸ್ವಿಯಾಗಿದ್ದಾರೆ ಕೂಡ.ನಾನು ಕೂಗಿ ಹೇಳುತ್ತೇನೆ ‘ಏರಬೇಡಿರಿ! ಅಟ್ಟಣಿಗೆ ಲಡ್ಡಾಗಿದೆ, ಅಲುಗಾಡತೊಡಗಿದೆ, ನಾನು ಬಿದ್ದುಬಿಡುತ್ತೇನೆ’. ಕೆಳಗಿನವರು ಸಿಟ್ಟಾಗುತ್ತಾರೆ, ಕಲ್ಲು ತೂರುತ್ತಾರೆ, ಅವಾಚ್ಯ ಶಬ್ದಗಳನ್ನು ಬಳಸಿ ಬೈಯುತ್ತಾರೆ.‘ಏರಲಿಕ್ಕೆ ನಮಗೆ ಕಾನೂನಿನ ಪರವಾನಗಿ ಸಿಕ್ಕಿದೆ’ ಎಂದು ಕೂಗುತ್ತ, ಕೈಯಲ್ಲಿ ಹಿಡಿದಿರುವ ಕೆಂಪುಚೀಟಿ ತೋರಿಸುತ್ತ, ಒಬ್ಬರ ಮೇಲೊಬ್ಬರು ಎಗರುತ್ತ, ನೂಕುನುಗ್ಗಲು ಸೃಷ್ಟಿಸುತ್ತಿದ್ದಾರೆ.ಅಟ್ಟದ ಮೇಲಿರುವ ಇತರರಿಗೆ ಕೆಳಗಿಳಿಯೋಣ ಬನ್ನಿ ಎಂದು ಹೇಳುತ್ತೇನೆ. ಕೆಳಗಿನ ಅಟ್ಟಗಳಲ್ಲಿ ನಿಂತಿರುವವರಿಗೂ ಹೇಳುತ್ತೇನೆ. ಎಲ್ಲರೂ ಚಿಂತಾಕ್ರಾಂತರಾಗಿದ್ದಾರೆ, ಆದರೆ ನಿಂತೇ ಇದ್ದಾರೆ.ಕೆಳಗಿಳಿಯುವುದೆಂದರೆ ದಾರಿದ್ರ್ಯ ದುಃಸ್ಥಿತಿ ಅನಾರೋಗ್ಯ ಅವಿದ್ಯೆಗಳ ಪ್ರಪಾತದೊಳಗೆ ತಲೆಕೆಳಗಾಗಿ ಬೀಳುವುದೆಂದು ಅವರು ತಿಳಿದಿದ್ದಾರೆ. ಹಾಗೆಂದೇ ಹೆದರುತ್ತಿದ್ದಾರೆ. ಇಷ್ಟಕ್ಕೂ ಕೆಳಗಿಣುಕಿದಾಗ ಕಾಣುವ ದೃಶ್ಯ ಅದೇ ತಾನೆ.ಮಧ್ಯಯುಗದ ಸಂತರುಗಳು ಹೇಳಿದ್ದ ಮಾತು ನೆನಪಾಗುತ್ತದೆ: ಜಾತಿ ಪದ್ಧತಿಯೆಂಬ ಈ ಅಟ್ಟದಿಂದ ಶಾಂತವಾಗಿ ಹಾಗೂ ಶಿಸ್ತಿನಿಂದ ಕೆಳಗಿಳಿಯಿರಿ, ಅದರಲ್ಲಿಯೇ ಲೋಕಕಲ್ಯಾಣವಡಗಿದೆ, ನಿಮ್ಮ ಕಲ್ಯಾಣವೂ ಅಡಗಿದೆ ಎಂದು ಅವರು ಹೇಳಿದ್ದರು. ಆಗಲೂ ನಾವಿಳಿದಿರಲಿಲ್ಲ. ಆಗ ಅಟ್ಟವು ಈಗಿನಷ್ಟು ಲಡ್ಡಾಗಿರಲಿಲ್ಲ.ಈಗ ಆಧುನಿಕ ಯುಗ ಬಂದಿದೆ, ಸ್ವಯಂಚಾಲಿತ ಯಂತ್ರಗಳು ಬಂದಿವೆ. ಅಟ್ಟಗಳ ಮೇಲಿನ ಸುಲಭ ಬದುಕು ಮತ್ತಷ್ಟು ಸುಲಭವಾಗಿದೆ. ಅಟ್ಟಗಳ ಮೇಲಿನ ಜನ ದಟ್ಟಣೆಯೂ ಹೆಚ್ಚಾಗಿದೆ. ಕೆಳಗೆ ನೆಲಕ್ಕಂಟಿದ ಬದುಕು ಮೇಲಿನಿಂದ ಮತ್ತಷ್ಟು ಹೀನಾಯವಾಗಿ ಕಾಣತೊಡಗಿದೆ. ಜೊತೆಗೆ ಒಂದಿಷ್ಟು ರಾಜಕೀಯ ಸುಧಾರಣೆಗಳೂ ಬಂದಿವೆ.ಎಲ್ಲೆಲ್ಲೂ ಜಾತಿವಿನಾಶದ ಕೆಂಪುಚೀಟಿ ಹಂಚಲಾಗುತ್ತಿದೆ. ಕಾನೂನು ನೀಡುವ ಇತರೆ ಕೆಂಪುಚೀಟಿಗಳಂತೆ ಈ ಚೀಟಿಯೂ ದ್ವಂದ್ವಾತ್ಮಕ ಭಾಷೆಯಲ್ಲಿ ರಚಿತವಾಗಿದೆ. ಅಂತಹ ಭಾಷೆಯಲ್ಲಿ ಪಳಗಿದ ಅಟ್ಟದ ಮೇಲಿನವರ ಒಕ್ಕಣಿಕೆ ತಾನೆ ಇದು, ಎಷ್ಟೆಂದರೂ. ಮೇಲಿನವರು ಕೆಳಗಿನವರು ಇಬ್ಬರೂ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಹ ಕಾನೂನನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚೀಟಿಯು ತದ್ವಿರುದ್ಧದ ಪರಿಣಾಮ ಬೀರುತ್ತಿದೆ. ಮೇಲಿರುವವರು ಜಾತಿ ವಿನಾಶದ ಪ್ರತಿಜ್ಞೆ ಸ್ವೀಕರಿಸಿ ಮೇಲೆಯೇ ಉಳಿಯುತ್ತಿದ್ದಾರೆ. ಕೆಳಗಿನವರು ಕೆಂಪುಚೀಟಿಯನ್ನು ಅಟ್ಟ ಏರಲಿಕ್ಕೆ ಪರವಾನಗಿ ಎಂದು ಅರ್ಥೈಸಿಕೊಳ್ಳುತ್ತಿದ್ದಾರೆ.ಅವರು ಹೀಗೆ ಅರ್ಥೈಸಲಿಕ್ಕೆ ಕಾರಣವಿದೆ. ಈ ಗೊಂದಲದ ಲಾಭ ಪಡೆದ ಯಂತ್ರನಾಗರಿಕತೆಯು ಯಾಂತ್ರೀಕೃತವಾದ ಜಾತಿವಿನಾಶ ಸ್ಕೀಮ್ ಒಂದನ್ನು ಜಾಹೀರುಪಡಿಸಿದೆ. ‘ಯಂತ್ರಗಳನ್ನು ಬಳಸಿ ಎಲ್ಲರಿಗೂ ಅಟ್ಟದ ಮೇಲೆಯೇ ಸುಭದ್ರ ವ್ಯವಸ್ಥೆ ಮಾಡುತ್ತೇನೆ, ಶ್ರಮದ ಬದುಕನ್ನೇ ನಿವಾರಿಸುತ್ತೇನೆ’ ಎಂದು ಅದು ಸಾರಿದೆ. ಎಲ್ಲರೂ ಯಂತ್ರಗಳನ್ನು ನಂಬಿದ್ದಾರೆ. ಅಟ್ಟ ಏರುವ ಧಾವಂತ ಮತ್ತಷ್ಟು ಹೆಚ್ಚಿದೆ.ಇಷ್ಟಕ್ಕೂ ಜಾತಿ ಪದ್ಧತಿಯೆಂಬ ಅಟ್ಟಣಿಗೆ ಕಳಚುವ ವಿಧಾನದ ಬಗ್ಗೆ ಹಿರಿಯರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಉದಾಹರಣೆಗೆ ಗಾಂಧೀಜಿ ಹಾಗೂ ಅಂಬೇಡ್ಕರ್ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಭಿನ್ನಾಭಿಪ್ರಾಯಕ್ಕೆ ಕಾರಣಗಳೂ ಇದ್ದವು. ಗಾಂಧೀಜಿ ಅಟ್ಟಣಿಗೆಯ ಮೇಲಿದ್ದವರಾದರೆ ಅಂಬೇಡ್ಕರ್ ಕೆಳಗಿದ್ದವರು.ಮೇಲಿದ್ದವರ ಮನವೊಲಿಸಿ ನಿಧಾನವಾಗಿ ಎಲ್ಲರನ್ನೂ ಕೆಳಗಿಳಿಸಬೇಕು ಎಂದು ಗಾಂಧೀಜಿ ಹೇಳಿದರೆ ಅಂಬೇಡ್ಕರ್ ಆಗ ಒಪ್ಪಿರಲಿಲ್ಲ. ಗಾಂಧೀಜಿ ಪ್ರಕಾರ ಜಾತಿ ವಿನಾಶ ಕಾರ್ಯಕ್ರಮವು ಸರಳ ಬದುಕು, ಗ್ರಾಮೀಣಾಭಿವೃದ್ಧಿ, ಹರಿಜನರ ದೇವಸ್ಥಾನ ಪ್ರವೇಶ, ನಯೀ ತಾಲೀಮ್ ಎಂಬ ಹೆಸರಿನ ಪರ್ಯಾಯ ಶಿಕ್ಷಣ ಚಳವಳಿ, ಲಿಂಗ ಸಮಾನತೆಯ ಚಳವಳಿ, ನೈರ್ಮಲ್ಯದ ಚಳವಳಿ, ಅಂತರ್ಜಾತೀಯ ವಿವಾಹ, ಮಾದಕ ವಸ್ತುಗಳ ನಿಗ್ರಹ, ಹಿಂದೂ– ಮುಸ್ಲಿಂ ಏಕತೆ...ಇತ್ಯಾದಿ ರಚನಾತ್ಮಕ ಸಾಮಾಜಿಕ ಚಳವಳಿಗಳ ಭಾಗವಾಗಿರಬೇಕು ಎಂದಿತ್ತು. ಅಂಬೇಡ್ಕರ್ ಅವರಿಗೆ ಮೇಲಿರುವವರ ಮಾತಿನಲ್ಲಿ ನಂಬಿಕೆ ಇರಲಿಲ್ಲ. ಆಗಿನ ಸಂದರ್ಭ ಹಾಗಿತ್ತು. ಮೊದಲು ಮೇಲಿನವರ ಸವಲತ್ತುಗಳು ಕೆಳಗಿನವರಿಗೆ ಸಿಕ್ಕಲಿ ಎಂದು ಅವರು ಹಟ ಹಿಡಿದರು. ಕೆಂಪುಚೀಟಿ ವ್ಯವಸ್ಥೆ ಹೀಗೆ ಜಾರಿಗೆ ಬಂದದ್ದು.ಅಟ್ಟಣಿಗೆಯ ಮೇಲಿದ್ದವರು ಅತಿ ಜಾಣತನ ಮಾಡಿ ಮೇಲೆಯೇ ಉಳಿದಿದ್ದರು, ಸಂತರ ಮಾತುಗಳನ್ನು ಕಡೆಗಣಿಸಿ ಯಂತ್ರಗಳ  ಮಾತನ್ನು ನಂಬಿದ್ದರು. ಈಗ, ಅಟ್ಟ ಅಡರುವವರ ದಟ್ಟಣಿ ಹೆಚ್ಚಾದಂತೆಲ್ಲ ಅವರ ಎದೆಗಳಲ್ಲಿ ನಡುಕ ಶುರುವಾಗಿದೆ.ಅಟ್ಟಣಿಗೆ ವಿಪರೀತ ಅಲುಗಾಡತೊಡಗಿದೆ. ಅಟ್ಟದ ಮೇಲಿರುವವರೆಲ್ಲ ಕೂಡಿ ಅಟ್ಟಣಿಗೆ ಗಟ್ಟಿಮಾಡುವ ಪ್ರಯತ್ನ ನಡೆಸಿದ್ದಾರೆ. ಉದ್ದಿಮೆಪತಿಗಳು, ಮಠಾಧೀಶರು, ರಾಜಕಾರಣಿಗಳು ಆದಿಯಾಗಿ ಪ್ರಮುಖರೆಲ್ಲರೂ ಇವರೆಲ್ಲರೂ ಅಟ್ಟದ ಮೇಲಿರುವವರೇ ತಾನೆ, ತೇಪೆ ಹಚ್ಚುವ ಕೆಲಸಕ್ಕೆ ಕೈಜೋಡಿಸಿದ್ದಾರೆ.ಹೊಸದಾಗಿ ಅಟ್ಟ ಏರಿದವರೂ ಸಹ ಹಳಬರೊಟ್ಟಿಗೆ ಕೈಜೋಡಿಸಿದ್ದಾರೆ. ಹೊಸ ಹೊಸ ಗೂಟಗಳನ್ನು ಸಿಕ್ಕಿಸಿ ಅಟ್ಟಕ್ಕೆ ಬಿಗಿಯಲಾಗುತ್ತಿದೆ. ಬೊಂಬುಗಳ ಜೊತೆಗೆ ಆಧುನಿಕ ಗೂಟಗಳನ್ನು ಬಳಸಲಾಗುತ್ತಿದೆ. ಹೋಮ ಹವನಗಳನ್ನು ನಡೆಸಲಾಗುತ್ತಿದೆ, ಮಂತ್ರ ತಂತ್ರಗಳನ್ನು ನಡೆಸಲಾಗುತ್ತಿದೆ.ಮೊದಲೇ ಅಭದ್ರವಾಗಿರುವ ಅಟ್ಟಣಿಗೆಯ ಮೇಲೆ ಭಾರಿ ಭಾರಿ ಮಂದಿರ ಮಸೀದಿ ಚರ್ಚುಗಳ ನಿರ್ಮಾಣ ಕಾರ್ಯ ನಡೆದಿದೆ. ಅಲುಗಾಟ ಮಾತ್ರ ನಿಲ್ಲುತ್ತಿಲ್ಲ. ಅಟ್ಟದ ಆಕರ್ಷಣೆ ಹೆಚ್ಚಿದಷ್ಟೂ ದಟ್ಟಣೆ ಹೆಚ್ಚುತ್ತಿದೆ. ಅಟ್ಟಣಿಗೆ ತುಂಬಿಬಂದು, ಅಲುಗಾಟ ಹೆಚ್ಚಾಗಿ, ಜನರು ಪುತಪುತನೆ ಕೆಳಗುದುರತೊಡಗಿದ್ದಾರೆ.ಅಟ್ಟದ ಮೇಲೆ ಅಧಿಕಾರ ಹಾಗೂ ಕಾನೂನುಗಳು ವಿಜೃಂಭಿಸತೊಡಗಿವೆ. ಮಂತ್ರಿ ಮಹೋದಯರು ಹಾಗೂ ಅಧಿಕಾರಿಗಳು ಗಡಿಬಿಡಿಯಿಂದ ಓಡಾಡುತ್ತಿದ್ದಾರೆ. ಕಾರುಗಳ ಭರಾಟೆ, ವಿಮಾನಗಳ ಹಾರಾಟ, ಚುನಾವಣೆಗಳ ರಾಜಕೀಯ, ಹಕ್ಕು ಪ್ರತಿಪಾದನೆಯ ಗದ್ದಲ ಅಟ್ಟದ ಮೇಲೆ ಹೆಚ್ಚಾಗಿದೆ. ಅಲುಗಾಟ ಹೆಚ್ಚಿದಂತೆಲ್ಲ ಮೇಲಿನವರ ಗಡಿಬಿಡಿಯೂ ಹೆಚ್ಚತೊಡಗಿದೆ.ಆಧುನಿಕ ಸನ್ಯಾಸಿಗಳು ಹುಟ್ಟಿಕೊಂಡಿದ್ದಾರೆ. ಅವರು ಹೇಳುತ್ತಿದ್ದಾರೆ, ‘ಕಾಣುವುದು ಸತ್ಯವಲ್ಲ, ಕಾಣದಿರುವುದೇ ಸತ್ಯ. ಅಲುಗಾಟ ಸತ್ಯವಲ್ಲ, ಅಲುಗಾಟವೇ ಸ್ಥಿರತೆ... ಎಲ್ಲವನ್ನೂ ತಲೆಕೆಳಗಾಗಿ ಗ್ರಹಿಸುವುದನ್ನು ಕಲಿಯಿರಿ. ನೆದ ಆಸರೆಗೆ ಹಾತೊರೆಯದಿರಿ. ಆಕಾಶವನ್ನಷ್ಟೆ ಗಟ್ಟಿ ಹಿಡಿದುಕೊಳ್ಳಿ... ಅಟ್ಟವು ಎಂದೆಂದಿಗೂ ಕಳಚಿ ಬೀಳುವುದಿಲ್ಲ... ದೇವರು ನಿರ್ಮಿಸಿದ ಅಟ್ಟವಿದು...’ ಇತ್ಯಾದಿ.ಆಧುನಿಕ ಸನ್ಯಾಸಿಗಳ ಮಾತಿನಲ್ಲಿ ನನಗೆ ಅದೇಕೋ ನಂಬಿಕೆ ಬರುತ್ತಿಲ್ಲ. ನಾನು ಎಸೆದ ಕಸವು ಆಕಾಶಕ್ಕೆ ಏರುತ್ತಿಲ್ಲ, ನೆಲಕ್ಕೇ ಬೀಳುತ್ತಿದೆ. ನಾನು ಬಳಸಿ ಬಿಸುಡಿದ ಯಂತ್ರ ತುಂಡುಗಳು ನೆಲಕ್ಕೇ ಬೀಳುತ್ತಿವೆ, ನಾವು ಸೋರಿಸಿದ ಕೀಲೆಣ್ಣೆ, ತಿಂದೆಸೆದ ಹಳಸಲು ಬೆಣ್ಣೆ, ಅಣುಸ್ಥಾವರಗಳ ತ್ಯಾಜ್ಯ, ರಾಸಾಯನಿಕ ತ್ಯಾಜ್ಯ ಎಲ್ಲವೂ ನೆಲಕ್ಕೇ ಬೀಳುತ್ತಿವೆ.ಕೆಳಗಿರುವ ಜನರ ಕಾಲ್ತುಳಿತಕ್ಕೆ ಸಿಲುಕಿ ತ್ಯಾಜ್ಯವೇ ನೆಲವಾಗುತ್ತಿದೆ. ಜನರು ಕರಕಲಾಗುತ್ತಿದ್ದಾರೆ. ಹಸಿರು ಕರಕಲಾಗುತ್ತಿದೆ.  ನೀರು ಹರಿಯಬೇಕಿದ್ದ ಹಳ್ಳಗಳಿಂದ ಹೊಗೆ ಏಳತೊಡಗಿದೆ. ಎದ್ದ ಹೊಗೆಯು ನನ್ನ ಮೂಗಿಗೆ ಅಡರಿ ಉಸಿರಾಟದ ತೊಂದರೆ ಉಂಟಾಗುತ್ತಿದೆ.ನನಗೆ ತಲೆ ಕೆಡುತ್ತಿದೆ. ನಾನು ಹುಚ್ಚುಚ್ಚಾಗಿ ಕಿರುಚಿಕೊಳ್ಳತೊಡಗುತ್ತೇನೆ; ಕೇಳಿರಿ, ಕೇಳಿರಿ! ಅಟ್ಟದ ಮೇಲೆ ಯಂತ್ರಗಳ ನೆರವಿ ಇದೆಯೆಂದೇ, ಬದುಕು ಸುಲಭವಿದೆಯೆಂದೇ ಕೆಳಗಿನವರು ಮೇಲೇರುವ ಸಾಹಸ ಮಾಡುತ್ತಿದ್ದಾರೆ.ಹಾಗೆಂದೇ ಅಟ್ಟ ಕಳಚಿ ಬೀಳುತ್ತಿದೆ... ಎಸೆಯಿರಿ ಎಸೆಯಿರಿ! ಸುಲಭವಾದದ್ದನ್ನೆಲ್ಲ ಕೆಳಗೆಸೆಯಿರಿ, ಸ್ವಯಂಚಾಲಿತವಾದದ್ದನ್ನೆಲ್ಲ ಕೆಳಗೆಸೆಯಿರಿ... ಮಾಲ್‌ಗಳು ಹೋಟೆಲುಗಳು ಜೂಜಿನ ಕಟ್ಟೆಗಳು ಎಲ್ಲವನ್ನೂ ಕೆಳಗೆಸೆಯಿರಿ... ಕೆಳಗಿನವರಿಗೆ ಕೂಗಿ ಹೇಳಿರಿ... ಇಲ್ಲೀಗ ಸುಲಭ ಬದುಕಿನ ಸಾಧನಗಳಾವುವೂ ಉಳಿದಿಲ್ಲ, ಇಲ್ಲೀಗ ಅಪಾಯದ ಅರಿವು ಮಾತ್ರವೇ ಉಳಿದಿದೆ... ಹೌದು, ಅಪಾಯದ ಅರಿವು!ಅರಿವನ್ನು ನಿಮಗೆ ತಲುಪಿಸಲೆಂದು ನಾವೇ ಕೆಳಗಿಳಿದುಬರುತ್ತಿದ್ದೇವೆ. ಸಾವಧಾನ ಸಾವಧಾನ... ಅಟ್ಟ ಏರಬೇಡಿ, ಅದು ಮುರಿದು ಬೀಳಲಿದೆ ಎಂದು ಏನೇನೋ ಬಡಬಡಿಸುತ್ತೇನೆ. ನನ್ನ ಮಾತು ಅವರಿಗೆ ಅರ್ಥವಾಗುತ್ತಿಲ್ಲ. ಭಾಷೆ ಕಗ್ಗಂಟಾಗುತ್ತಿದೆ. ಆದರೂ ಹಟ ಹಿಡಿದು ಕೂಗುತ್ತೇನೆ.‘ನನ್ನ ಬಡ ಸ್ನೇಹಿತರೇ! ವ್ಯರ್ಥವೂ ಭ್ರಷ್ಟವೂ ಆಗಿರುವ ಈ ಅಟ್ಟಣಿಗೆಯನ್ನು ನಾವೆಲ್ಲರೂ ಸೇರಿ ಕಳಚೋಣವಂತೆ... ಕೆಳಗೆ ನೆಲವು ಕಸದಿಂದ ತುಂಬಿದೆ. ನಾವೆಲ್ಲರೂ ಸೇರಿ ನೆಲವನ್ನು ಗುಡಿಸೋಣವಂತೆ.ಶ್ರಮದಾನದ ಮೂಲಕ ಸಹಕಾರದ ಮೂಲಕ ನೆಲದ ಕೊಳೆ ತೊಳೆಯೋಣವಂತೆ! ಕಪ್ಪಾದ ನೆಲವು ಹಸಿರಾಗುವಂತೆ, ಹೊಗೆಯಾಡುವ ಕಣಿವೆ ತಣಿದು ನೀರಾಡುವಂತೆ, ಗಾಳಿ ತಿಳಿಯಾಗುವಂತೆ ಮಾಡೋಣ ಬನ್ನಿ... ನಮ್ಮ ಸಹಾಯಕ್ಕೆಂದು ಎರೆಹುಳುಗಳನ್ನು ಕರೆಯೋಣವಂತೆ...ಅವುಗಳು ಬಂದು ನೆಲವನ್ನು ಉಳುತ್ತವೆ... ಪ್ರಾಣಿಪಕ್ಷಿಗಳ ಸಲಹೆ ಕೇಳೋಣವಂತೆ... ಕಸದಿಂದ ರಸ ಉತ್ಪತ್ತಿ ಮಾಡಿ ಹಂಚಿಕೊಂಡು ಉಣ್ಣೋಣವಂತೆ’. ನನ್ನ ಮಾತು ಯಾರಿಗೂ ಅರ್ಥವಾಗುತ್ತಿಲ್ಲ.ಮೇಲಿನವರು ತಡೆಯುತ್ತಿದ್ದಾರೆ. ನನ್ನ ಬಾಯಿ ಮುಚ್ಚಿ ಮಾತುಗಳು ಹೊರಬರದಂತೆ ಮಾಡುತ್ತಿದ್ದಾರೆ. ನನ್ನಷ್ಟೆ ಉನ್ಮತ್ತರಾಗಿ ಪ್ರತಿವಾದ ನಡೆಸಿದ್ದಾರೆ; ಹುಷಾರ್! ಅಟ್ಟಕಳಚಿದರೆ ಜಿಡಿಪಿ ಬಿದ್ದುಹೋಗುತ್ತದೆ!... ಬೌದ್ಧಿಕ ಸುಖಗಳ ಪ್ರಮಾಣ ಕಡಿಮೆಯಾಗುತ್ತದೆ...ನೀನು ಆರ್ಥಿಕ ತಜ್ಞನಲ್ಲ...  ಉತ್ಪಾದನೆ ಏರುತ್ತಲೇ ಇರಬೇಕು, ಕೊಳ್ಳುವುದು ಏರುತ್ತಲೇ ಇರಬೇಕು, ಸ್ವರ್ಧೆ ಹೆಚ್ಚುತ್ತಲೇ ಇರಬೇಕು... ಅದುವೆ ವಿಜ್ಞಾನ. ಅದುವೆ ಅಭಿವೃದ್ಧಿ!  ಪರಿಸರ ನಾಶ ಪರ್ಯಾವರಣದ ಅಸಮತೋಲನ ಅನಿವಾರ್ಯ ಪ್ರಕ್ರಿಯೆ... ಒಂದೊಮ್ಮೆ ಅಟ್ಟಕಳಚಿ ಬಿದ್ದರೆ ಹೆದರಿಕೆಯೇಕೆ? ಹೇಗೂ ಭೂಮಿಯನ್ನು ತೊರೆದು ಮಂಗಳಗ್ರಹಕ್ಕೆ ಹಾರಲಿಕ್ಕೆ ಆಕಾಶನೌಕೆಗಳು ಸಿದ್ಧವಾಗಿವೆ... ಇತ್ಯಾದಿ.ನಾನೀಗ ನಿಜಕ್ಕೂ ಹುಚ್ಚನೇ ಆಗಿಹೋಗಿದ್ದೇನೆ. ಗಹಗಹಿಸಿ ನಗುತ್ತೇನೆ. ಗಳಗಳನೆ ಅಳುತ್ತೇನೆ.  ನನ್ನ ಮಾತುಗಳು ನಾಟಕದ ಡಯಲಾಗುಗಳಂತೆ ಕೇಳತೊಡಗಿವೆ. ಆದರೂ ಹೇಳುತ್ತ ಹೋಗುತ್ತೇನೆ:‘ಇಲ್ಲ ಇಲ್ಲ! ನಾವೆಲ್ಲರೂ ನವಬ್ರಾಹ್ಮಣರಾಗಿದ್ದೇವೆ... ನಾವೆಲ್ಲರೂ ಶೂದ್ರತ್ವ ಸ್ವೀಕರಿಸೋಣ, ಅರಿವಿನಿಂದ ಕೂಡಿದ ಶೂದ್ರತ್ವ ಸ್ವೀಕರಿಸೋಣ... ಜಾತಿ ವಿನಾಶ ಚಳವಳಿಯ ಪ್ರಾಥಮಿಕ ಅಗತ್ಯವಿದು’. ಅವರು ಅನುಕಂಪ ತೋರಿಸುತ್ತಾರೆ. ಇವನಿಗೆ ತಲೆಕಟ್ಟಿದೆ ಎಂಬಂತೆ ಹಾವಭಾವ ನಟಿಸುತ್ತಾರೆ. ನಾನು ಮಾತನಾಡುತ್ತಲೇ ಹೋಗುತ್ತೇನೆ.‘ಸರಳ ಬದುಕನ್ನು ಸ್ವೀಕರಿಸದೆ ನಡೆಸುವ ಸಾಂಕೇತಿಕ ಕ್ರಿಯೆಗಳಿಗೆ ಅರ್ಥವಿಲ್ಲ, ಅಂತರ್ಜಾತೀಯ ವಿವಾಹಗಳು, ಸಹಪಂಕ್ತಿ ಭೋಜನಗಳು, ಉದ್ಯೋಗ ಮೀಸಲಾತಿ ಕಾರ್ಯಕ್ರಮಗಳು ನಿಶ್ಚಿತ ಪರಿಣಾಮ ಬೀರಬೇಕೆಂದರೆ ನಾವೆಲ್ಲರೂ ಅಟ್ಟದಿಂದ ಕೆಳಗಿಳಿಯಬೇಕು...ಅಂಬೇಡ್ಕರ್ ರಚಿಸಿದ ಕಾನೂನಿಗೆ ಗಾಂಧೀಜಿ ರಚಿಸಿದ ರಚನಾತ್ಮಕ ಚಳವಳಿಯ ಬಲದ ಅಗತ್ಯವಿದೆ. ಕೆಳಜಾತಿಗಳ ಬಿಡುಗಡೆಗೆ ಮೇಲ್ಜಾತಿಗಳ ಕಳಚುವಿಕೆ ಅಗತ್ಯವಿದೆ...’ ಇತ್ಯಾದಿ.ಅವರೇ ಕೆಳಗೆಸೆದರೋ, ನನ್ನ ಉನ್ಮಾದಕ್ಕೆ ಬಲಿಯಾಗಿ ನಾನೇ ಹಾರಿದೆನೋ, ಅಂತೂ ತಲೆಕೆಳಗಾಗಿ ಕೆಳಗೆ ಬೀಳುತ್ತಿದ್ದೇನೆ. ಆದರೆ ಸಾಯಲಿಲ್ಲ. ಕೆಳಗಿರುವವರು ಹಿಡಿದುಕೊಂಡರು. ತಲೆಗೆ ತಣ್ಣೀರು ತಟ್ಟಿದರು. ಕನಸೊಡೆದೆದ್ದೆ. ತಮ್ಮ ಬಡತನದ ನಡುವೆಯೂ ನನಗೆ ಉಪಚಾರ ಮಾಡತೊಡಗಿದರು. ಅಷ್ಟರಲ್ಲಿ ಕೂಗೊಂದು ಎದ್ದಿತು.‘ಅಗೋ! ಮತ್ತೊಬ್ಬ ಇಳಿಯತೊಡಗಿದ್ದಾನೆ, ಅಗೋ ಮಗದೊಬ್ಬ ಇಳಿದ’ ಇತ್ಯಾದಿ. ನಾನೀಗ ಕಣ್ಣು ತೆರೆದಿದ್ದೆ. ನನ್ನ ಉಸಿರಾಟ ಸಹಜವಾಗಿತ್ತು. ಉಪಚರಿಸುತ್ತಿದ್ದವರು ಇಳಿಯುತ್ತಿದ್ದವರ ಸಹಾಯಕ್ಕೆಂದು ಓಡಿದರು. ನಾನು ಹಗುರವಾಗಿ ನಿಂತೆ. ಕಾಲುಗಳು ಅದುರಲಿಲ್ಲ. ಹೊಗೆಯ ದಟ್ಟಣೆ ಕಡಿಮೆ ಇದ್ದದ್ದರಿಂದ ಹಾಯೆನ್ನಿಸಿತು. ಉನ್ಮಾದ ಕಡಿಮೆಯಾಯಿತು.ಭದ್ರವಾಗಿದ್ದ ನೆಲದ ಮೇಲೆ ಓಡಾಡಿದೆ. ಖುಷಿಯಾಯಿತು. ಅಲ್ಲೊಂದು ಪೊರಕೆ ಬಿದ್ದಿತ್ತು. ಹಿಡಿದು ನೆಲಗುಡಿಸಲಿಕ್ಕೆ ತೊಡಗಿದೆ. ಇತರರೂ ಕೈಜೋಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry