ಸೋಮವಾರ, ಮಾರ್ಚ್ 27, 2023
22 °C
ಸ್ವಂತ ಸೂರಿಗೆ ದಶಕದ ಹೋರಾಟ, ಶಾಸಕರು, ಅಧಿಕಾರಿಗಳಿಂದ ಅವಗಣನೆ

ಶೆಡ್‌ನಲಿŃ ಸರ್ಕಾರಿ ಐಟಿಐ...!

ಸಿ. ಕೆ. ಮಹೇಂದ್ರ Updated:

ಅಕ್ಷರ ಗಾತ್ರ : | |

ಶೆಡ್‌ನಲಿŃ ಸರ್ಕಾರಿ ಐಟಿಐ...!

ತುಮಕೂರು: ಭವಿಷ್ಯದ ಕೈಗಾರಿಕಾ ನಗರಿ, ಸ್ಮಾರ್ಟ್‌ ಸಿಟಿ, ಶೈಕ್ಷಣಿಕ ನಗರಿ ಎಂದೆಲ್ಲ ಬಿರುದಾಂಕಿತ ನಗರದಲ್ಲಿ ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರಕ್ಕೆ ಸ್ವಂತ ಸೂರು ಒದಗಿಸಲು ಈವರೆಗೂ ಸಾಧ್ಯವಾಗಿಲ್ಲ.ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರವನ್ನು (ಐಟಿಐ) ಶೆಡ್‌ನಲ್ಲಿ ನಡೆಸಲಾಗುತ್ತಿದೆ. ಮಳೆ ಬಂದರೆ ಸೋರುವ, ಕುಡಿಯಲು ನೀರಿಲ್ಲದ, ಸರಿಯಾದ ಶೌಚಾಲಯಗಳಿಲ್ಲದ ಈ ತಗಡು ಹೊದ್ದ ಶೆಡ್‌ಗೆ ತಿಂಗಳಿಗೆ 1.2500 ಲಕ್ಷ ಬಾಡಿಗೆ ನೀಡಲಾಗುತ್ತಿದೆ!. ಶೆಡ್‌ ಒಳ ಹೊಕ್ಕರೆ ಇದು ಹಂದಿಗೂಡಿಗಿಂತಲೂ ಕಡೆಯಾಗಿದೆ. ಉಪನ್ಯಾಸಕರು, ಗುಮಾಸ್ತರ ಕೊಠಡಿ  ಹೂವಿನ ಮಾರ್ಕೆಟ್‌ನ  ಒಂದು ಮಳಿಗೆಯಂತೆ ಕಾಣುತ್ತದೆ. ಸುತ್ತಲೂ ನಾಲ್ಕಾರು ಕುರ್ಚಿಗಳನ್ನು ಹಾಕಿ ಅಲ್ಲಲ್ಲಿ ಸಿಬ್ಬಂದಿ ಕೂರಿಸಲಾಗಿದೆ.ನಗರದ ಸದಾಶಿವರ ನಗರದ ಶೆಡ್‌ನಲ್ಲಿ ನಡೆಯುತ್ತಿರುವ ಈ ಕಾಲೇಜಿಗೆ 42 ವರ್ಷಗಳಿಂದ ಸ್ವಂತ ಸೂರಿಲ್ಲ. ಅಲ್ಲಿಂದ ಈವರೆಗೂ ಕಾಲೇಜಿಗೆ ಭೂಮಿ ಕೊಡಲು ಆಡಳಿತಕ್ಕೆ ಸಾಧ್ಯವಾಗಿಲ್ಲ!1975ರಲ್ಲಿ ಕಾಲೇಜು ಆರಂಭಿಸಲಾಗಿದೆ. ನಗರದ ತುಮಕೂರು ವಿ.ವಿ ಪಕ್ಕದಲ್ಲಿರುವ ಡಿಪ್ಲೊಮಾ ಪಾಲಿಟೆಕ್ನಿಕ್‌ ಕಾಲೇಜಿನ ಕ್ಯಾಂಪಸ್‌ನಲ್ಲಿ ಜಾಗ ಕೊಡಲು ಆರಂಭಿಕ ಯತ್ನಗಳು ಕೈ ಗೂಡಲಿಲ್ಲ. ಕಾಲೇನಲ್ಲಿ ಐದು ವಿಭಾಗಗಳಿಗೆ. 145 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಪ್ರತಿ ವರ್ಷ 500ಕ್ಕೂ ಹೆಚ್ಚು ಅರ್ಜಿಗಳು ಬರುತ್ತವೆ. ಆದರೆ ಕೂರಲು ಜಾಗ ಇಲ್ಲದ ಕಾರಣ ಕೇವಲ 140–150 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲರೂ ಬಡ ಹುಡುಗರು. ಹುಡುಗರನ್ನು ನೋಡಿದರೆ ಕರುಳು ಚುರಕ್ ಎನ್ನುತ್ತದೆ ಎಂದು ಇಲ್ಲಿನ ಸಿಬ್ಬಂದಿಯೊಬ್ಬರು ಹೇಳಿದರು.‘ಶಾಸಕರು, ಜಿಲ್ಲಾಧಿಕಾರಿ ಎಲ್ಲರಿಗೂ ಮನವಿ ಮಾಡಲಾಗಿದೆ. ಒಮ್ಮೆ ಗೂಳೂರು ಬಳಿ ಭೂಮಿ ಕೊಡುತ್ತೇವೆ ಎಂದು ಕೊಡಲಿಲ್ಲ. ಈಗ ವಕ್ಕೋಡಿ ಬಳಿ, ಕೇಂದ್ರೀಯ ವಿದ್ಯಾಲಯದ ಬಳಿ ಗುರುತಿಸಲಾಗಿದ್ದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಜಾಗ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಈವರೆಗೂ ಪ್ರಯೋಜವಾಗಿಲ್ಲ’ ಎಂದು ಅವರು ತಿಳಿಸಿದರು.ಉದ್ದಕ್ಕೂ ಕಟ್ಟಿ ನಿಲ್ಲಿಸಿರುವ ತಗಡು ಶೀಟ್‌ನಲ್ಲೇ ಪ್ರಯೋಗಾಲಯವು ಇದೆ. ಜಾಗ ಇಲ್ಲದ ಕಾರಣ ಪ್ರಯೋಗಾಲಯದಲ್ಲೇ ಪಾಠ, ಪರೀಕ್ಷೆ ನಡೆಸಲಾಗುತ್ತಿದೆ. ‘ಈ ಕಾಲೇಜು ನೋಡಿದರೆ ದನದ ದೊಡ್ಡಿಗಿಂತ ಕಡೆಯಾಗಿದೆ. ಇಂಥ ಕಾಲೇಜು ನಾನು ನೋಡಿಯೇ ಇರಲಿಲ್ಲ. ಇಲ್ಲಿ ಕಾಲಿಡುವುದಕ್ಕೆ ಜುಗುಪ್ಸೆ ಎನ್ನಿಸುತ್ತದೆ. ಪರೀಕ್ಷಾ ಕೇಂದ್ರವಾಗಿರುವುದರಿಂದ ಪರೀಕ್ಷೆ ಬರೆಯುತ್ತಿದ್ದೇನೆ. ಇಂಥ ಕಾಲೇಜು ಇರುವುದಕ್ಕಿಂತ, ಮುಚ್ಚುವುದು ವಾಸಿ’ ಎಂದು ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದಿದ್ದ ಕುಣಿಗಲ್ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.‘ಸಚಿವರು, ಶಾಸಕರಿಗೆ ನಾಚಿಕೆಯಾಗಬೇಕು. ಜಿಲ್ಲಾ ಕೇಂದ್ರದ ಕಾಲೇಜು ಈ ರೀತಿ ಇದ್ದರೆ ಇನ್ನೂ ಹಳ್ಳಿಗಳ ಕತೆ ಏನು?’ ಎಂದು ಐಟಿಐ – ಸಿಐಒಟಿ (ಕಂಪ್ಯೂಟರ್‌ ಅಸಿಸ್ಟೆಂಟ್‌ ಅಪರೇಟಿಂಗ್‌ ಟ್ರೈನಿಂಗ್‌) ಪರೀಕ್ಷೆ ಬರೆಯಲು ಬಂದಿದ್ದ ತುಮಕೂರು ವಿ.ವಿ ಪದವಿ ವಿದ್ಯಾರ್ಥಿ ಚೇತನ್‌ ಪ್ರತಿಕ್ರಿಯಿಸಿದರು. ‘ಇದನ್ನು ಕಾಲೇಜು ಎಂದು ಹೇಳಲೇ ಬೇಸರವಾಗುತ್ತದೆ. ಇದೊಂದು  ಗುಡಿಸಲು ರೀತಿ ಇದೆ’ ಎಂದು ಅಸ್ಮಿಯಾ ತಿಳಿಸಿದರು.‘ವಸಂತ ನರಸಾಪುರದಲ್ಲಿ 13 ಸಾವಿರ ಎಕರೆಯಲ್ಲಿ ರಾಷ್ಟ್ರೀಯ ಉತ್ಪಾದನಾ ಹೂಡಿಕೆ ವಲಯ (ನಿಮ್ಜ್‌) ಬರುತ್ತಿದೆ. ನಿಟ್ಟೂರು ಬಳಿ ಎಚ್‌ಎಎಲ್‌ ಘಟಕ ಆರಂಭವಾಗುತ್ತಿದೆ.ಐಟಿಐ ತರಬೇತಿ ಪಡೆದವರಿಗೆ ಒಳ್ಳೆಯ ಅವಕಾಶ ಇದೆ. ಸರ್ಕಾರ ಕಾಲೇಜಿಗೆ ಮೂಲಭೂತ ಸೌಲಭ್ಯ ಹೆಚ್ಚಿಸಬೇಕು. ಗುಣಾತ್ಮಕ ಶಿಕ್ಷಣ ನೀಡದಿದ್ದರೆ ಈ ವಿದ್ಯಾರ್ಥಿಗಳಿಗೆ ಕೆಲಸ ಸಿಗದು. ಇಂಥ ಕಾಲೇಜಿನಲ್ಲಿ ಕ್ಯಾಂಪಸ್‌ ಸಂದರ್ಶನ ಹೇಗೆ ಸಾಧ್ಯ’ ಎಂದು ಅಭಿವೃದ್ಧಿ ರೆವುಲ್ಯೂಷನ್‌ ಫೋರಂನ ಕುಂದರನಹಳ್ಳಿ ರಮೇಶ್‌ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.