ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದ ಮೇಲೆ ಇರಲಿ ನನ್ನ ಕೊನೆ ಉಸಿರು

ಕಣ್ಣಾಮುಚ್ಚೇ ಕಾಡೇಗೂಡೇ...
Last Updated 3 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

2001ನೇ ಇಸವಿ ಅಂತ ಕಾಣುತ್ತದೆ, ಡಿಸೆಂಬರ್ ಅಂತ್ಯದಿಂದ ಶುರುವಾಗಿ ಜನವರಿ ಮೊದಲ ವಾರಕ್ಕೆ ಮುಗಿಯುವಂತೆ ಕಾರ್ಯಕ್ರಮಗಳನ್ನು ಒಪ್ಪಿಕೊಂಡಿದ್ದೆ.

ಇಂದಿನ ‘ಕಲರ್ಸ್ ಕನ್ನಡ’ ಚಾನೆಲ್ ಅಂದಿನ ‘ಈ ಟೀವಿ’ ಆಗಿರುವಾಗ ಅಲ್ಲಿ ಬಹಳ ದೊಡ್ಡ ಹುದ್ದೆಯಲ್ಲಿ ಇದ್ದವರು ಎಸ್. ಸುರೇಂದ್ರನಾಥ್– ಎಲ್ಲರಿಗೂ ಸೂರಿ ಎಂದೇ ಚಿರಪರಿಚಿತರು, ಹೈದರಾಬಾದಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಅವರು ಹೊಸ ವರ್ಷದ ಕಾರ್ಯಕ್ರಮಗಳ ಯಾದಿಯಲ್ಲಿ ಒಂದು ಜಾನಪದ ಕಾರ್ಯಕ್ರಮ ಹಾಕಿಕೊಂಡಿದ್ದರು. (ಸೂರಿ, ನನ್ನ ಅತಿ ಹತ್ತಿರದ ಸಂಬಂಧಿ ಸುಂದರಶ್ರೀಯ ಪತಿ ಕೂಡ).

ಅವರು ಹಾಕಿಕೊಂಡಿದ್ದ ಕಾರ್ಯಕ್ರಮಕ್ಕೆ ಜನಪದ ಕಲಾವಿದರ ಹಾಗೂ ಕಲಾ ಪ್ರಾಕಾರಗಳ ಆಯ್ಕೆ ಆಗಬೇಕಿತ್ತು, ನಂತರ ಅವರೆಲ್ಲರ ನೃತ್ಯದ ಕೊರಿಯೋಗ್ರಫಿ ಕೂಡ ಆಗಬೇಕಿತ್ತು. ಅದಕ್ಕಾಗಿ ಡಿಸೆಂಬರ್ 29–30 ಹೀಗೆ ದಿನಗಳನ್ನು ರಿಹರ್ಸಲ್ಲಿಗಾಗಿ ಕೇಳಿದ್ದರು. ನಂತರ ಡಿಸೆಂಬರ್ 31ರ ರಾತ್ರಿಯೆಲ್ಲಾ ಕಾರ್ಯಕ್ರಮ ಪ್ರದರ್ಶನ ಇತ್ತು.

ಇದಕ್ಕೆ ಒಪ್ಪಿಕೊಳ್ಳುವ ಮುಂಚೆ ನಾನು ಆಗಲೇ ದೆಹಲಿಯಲ್ಲಿ ಇನ್ನೊಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡಿದ್ದೆ. ನಾವು ಆಗ ತಾನೇ ‘ಸ್ಪಂದನ’ ತಂಡದಿಂದ ಎಚ್.ಎಸ್. ವೆಂಕಟೇಶಮೂರ್ತಿ ವಿರಚಿತ ‘ಮಂಥರಾ’ ನಾಟಕವನ್ನು ಯಶಸ್ವಿಯಾಗಿ ಬೆಂಗಳೂರಿನಲ್ಲಿ ಪ್ರದರ್ಶಿಸಿದ್ದೆವು. ಅದೇ ನಾಟಕವನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಬೇಕಿತ್ತು.

ದೆಹಲಿಯ ‘ರಾಷ್ಟ್ರೀಯ ನಾಟಕ ಶಾಲೆ’ಯಲ್ಲಿ ಅಂತರರಾಷ್ಟ್ರೀಯ ನಿರ್ದೇಶಕಿಯರ ನಾಟಕೋತ್ಸವ ‘ಪೂರ್ವಿ’ ಏರ್ಪಾಡಾಗಿತ್ತು. ಆಗಿನ ನಾಟಕ ಶಾಲೆಯ ನಿರ್ದೇಶಕರಾದ ಕೀರ್ತಿ ಜೈನ್ ಅವರಿಗೆ ನಾಟಕೋತ್ಸವದ ಉದ್ಘಾಟನೆಯನ್ನು ‘ಮಂಥರಾ’ ನಾಟಕದಿಂದಲೇ ಮಾಡಿಸಬೇಕೆಂಬ ಅಪೇಕ್ಷೆ ಇತ್ತು. ಅದಕ್ಕಾಗಿ ಅವರು ಬಹಳ ಮೊದಲೇ ತಾರೀಕುಗಳನ್ನು ನನ್ನ ಹತ್ತಿರ ಬ್ಲಾಕ್ ಮಾಡಿಸಿಬಿಟ್ಟಿದ್ದರು. ನಾಟಕ ಪ್ರದರ್ಶನ ಜನೆವರಿ 2ನೇ ತಾರೀಕು ಎಂದು ನಿಗದಿಯಾಗಿತ್ತು.

ಹೈದರಾಬಾದಿಗೆ ಡಿಸೆಂಬರ್ 28ರ ರಾತ್ರಿ ತಲುಪಿದೆ. ಮಾರನೇ ದಿನ ಎಲ್ಲ ಕಲಾವಿದರೂ ತಂತಮ್ಮ ಜನಪದ ನೃತ್ಯಗಳನ್ನು ತೋರಿಸಿದರು. ಜನಪದ ಪ್ರಾಕಾರಗಳನ್ನು ನಾನು ಆಯ್ಕೆ ಮಾಡಿಕೊಂಡು ಅದಕ್ಕೆ ಇಂತಿಷ್ಟು ನಿಮಿಷಗಳ ಅವಧಿ ಎಂದೂ ಫಿಕ್ಸ್ ಮಾಡಿ ಆಡಿಟೋರಿಯಮ್ಮಿನಲ್ಲಿ ಯಾವ್ಯಾವ ನೃತ್ಯಗಳನ್ನು ಮಾಡಿಸುವುದು ಮತ್ತು ಬಯಲು ಪ್ರದೇಶದಲ್ಲಿ ಮಾಡಿಸಬಲ್ಲ ನೃತ್ಯಗಳು ಯಾವುವು ಎಂದು ನಿರ್ಧರಿಸಿ ಸಂಜೆಯ ಸಮಯದಲ್ಲಿ ಒಂದು ರಿಹರ್ಸಲ್ ಮಾಡಿಕೊಳ್ಳುವುದು ಎಂದು ಮಾತಾಡಿಕೊಂಡೆವು.

ತಮಟೆ, ಕೀಲು ಕುದುರೆ, ಕಂಸಾಳೆ, ಉತ್ತರ ಭಾರತದ ಕೆಲವು ಫಾರ್ಮುಗಳು ಹೀಗೆ ಎಲ್ಲವನ್ನೂ ಹದವಾಗಿ ಮಿಶ್ರಣ ಮಾಡಿ ಕಣ್ಸೆಳೆಯುವ ಹಾಗೆ ಒಂದು ಸಂಯೋಜನೆ ಮಾಡಿಕೊಂಡೆವು. ಇದೆಲ್ಲಾ ಪ್ಲಾನಿಂಗ್ ಒಂದು ದಿನ ಹಿಡಿಯಿತು. ಮರುದಿನ ಅಂದರೆ ಡಿಸೆಂಬರ್ 30ಕ್ಕೆ ಒಂದು ರಿಹರ್ಸಲ್ ಮಾಡಿಕೊಳ್ಳಬೇಕಿತ್ತು. ಇಡೀ ಅನುಭವ ನಿಜಕ್ಕೂ ರಮಣೀಯವಾಗಿತ್ತು.

ಆವತ್ತು ರಾತ್ರಿ ಹೋಟೆಲಿಗೆ ಹೋಗಿ ಮಲಗಿದೆ. ರಾತ್ರಿ ಸುಮಾರು 2 ಗಂಟೆ ಇರಬಹುದು. ಇದ್ದಕ್ಕಿದ್ದಂತೆ ಎದೆಯ ಎಡಭಾಗದಲ್ಲಿ ಮತ್ತು ಭುಜದಲ್ಲಿ ನೋವು ಶುರುವಾಯ್ತು. ಡಿಸೆಂಬರ್ ತಿಂಗಳ ಚಳಿ ಇದ್ದರೂ ಮೈ ಎಲ್ಲಾ ಬೆವರೋಕೆ ಶುರುವಾಯಿತು. ಒಂಥರಾ ಹೇಳಲಿಕ್ಕಾಗದ ಸಂಕಟ. ಅಷ್ಟು ಹೊತ್ತಿನಲ್ಲಿ ಯಾರನ್ನ ಅಂತ ಫೋನ್ ಮಾಡಿ ಎಬ್ಬಿಸುವುದು? ನೋವು ತಡೆದುಕೊಂಡು ಹೇಗೋ ಬೆಳಗು ಮಾಡಿದೆ.

ಮರುದಿನ ಡಿಸೆಂಬರ್ 30ರ ಮುಂಜಾನೆ ಎಲ್ಲ ಕಲಾವಿದರನ್ನೂ ಮಾತನಾಡಿಸುತ್ತಾ ಪ್ರದರ್ಶನದ ರಿಹರ್ಸಲ್ಲಿನ ವಿವರ ಕೊಡುತ್ತಿದ್ದೆ. ಎಲ್ಲಿ, ಯಾರು, ಯಾವಾಗ ಎಷ್ಟು ಹೊತ್ತು ನೃತ್ಯ ಮಾಡಬೇಕು ಇತ್ಯಾದಿ ರಿಹರ್ಸಲ್ ಆಯಿತು. ಅಷ್ಟು ಹೊತ್ತಿಗೆ ಅಲ್ಲಿಗೆ ಸೂರಿ ಬಂದರು. ನನ್ನನ್ನು ನೋಡಿ “ಏನಕ್ಕಾ? ಹಿಂಗೆ ಕಾಣ್ತಿದೀಯಾ? ಹುಷಾರಿಲ್ವಾ? ನಿದ್ದೆ ಸರಿಯಾಗಿ ಆಗಲಿಲ್ವಾ?” ಎಂದು ಕೇಳಿದರು.

“ಸ್ವಲ್ಪ ಹಂಗೇ ಇದೆ ಸೂರಿ. ಯಾಕೋ ಎಡ ಭುಜ ಸಿಕ್ಕಾಪಟ್ಟೆ ನೋವಾಗ್ತಾ ಇದೆ. ಕೈ ಎತ್ತೋಕೂ ಕಷ್ಟ ಆಗ್ತಿದೆ” ಎಂದೆ.
“ಡಾಕ್ಟ್ರ ಹತ್ರ ಹೋಗಿದ್ದಾ?” ಸೂರಿಯ ಪ್ರಶ್ನೆ.
“ಇಲ್ಲಪ್ಪ. ಇಲ್ಲಿ ಎಲ್ಲಿ ಡಾಕ್ಟ್ರ ಹತ್ರ ಹೋಗೋದು? ನಂಗ್ಯಾರೂ ಪರಿಚಯ ಇಲ್ಲಪ್ಪ” ಎಂದೆ.

ಮೊದಲು ಕೈಲಿದ್ದ ಕೆಲಸ ಮುಗಿಸಿ ಹೊರಡುವುದು ಎಂದುಕೊಳ್ಳುವ ಹೊತ್ತಿಗೆ ಗಂಟೆ ಹನ್ನೆರಡು ದಾಟಿಬಿಟ್ಟಿತ್ತು. ಅಷ್ಟುಹೊತ್ತಿಗೆ ನನಗೆ ನೋವು ಸಹಿಸಲು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಜಾಸ್ತಿಯಾಗಿತ್ತು. ಭುಜ, ಎದೆ ನೋವಿನ ಜೊತೆ ನನಗೆ ಬೆನ್ನುನೋವೂ ಶುರುವಾಯಿತು.

ಮೊದಲೇ ನನಗೆ ಸ್ಪಾಂಡಿಲೋಸಿಸ್ ಇತ್ತು. ಈಗ, ಬೇರೆ ಎಲ್ಲ ನೋವುಗಳ ಜೊತೆ ಈ ನೋವೂ ಕೆರಳಿ ನಿಂತಿತ್ತು. ಬಿಸಿನೀರಿನ ಶಾಖ ಕೊಡಲು ಪ್ರಾರಂಭಿಸಿದೆ. ಸಂಜೆ ಗ್ರಾಂಡ್ ರಿಹರ್ಸಲ್ ಪ್ರಾರಂಭವಾಯಿತು. ಇತ್ತ ನನಗೆ ಸಂಜೆ ಸುಮಾರು 8 ಗಂಟೆಯ ಹೊತ್ತಿಗೆ ನೋವೂ ಹೆಚ್ಚಾಯಿತು.
ಸೂರಿ “ಅಕ್ಕಾ ಡಾಕ್ಟ್ರ ಹತ್ರ ಹೋಗೋದ್ ಒಳ್ಳೇದು” ಎಂದರು.

“ಅಯ್ಯೋ ಇರ್ಲಿ ಬಿಡು ಸೂರಿ, ನೋಡೋಣ ತೀರಾ ಕೈ ಮೀರಿದರೆ ಹೋದರಾಯ್ತು” ಎಂದೆ.
ಆದರೆ ಸೂರಿ ಬಿಡಬೇಕಲ್ಲ? ನೋವು ನನ್ನ ಮುಖದ ಮೇಲೂ ಕಾಣುತ್ತಿತ್ತೇನೋ...
“ಏನ್ ತಮಾಷಿ ಮಾಡ್ತಿದೀಯಾ? ಎಷ್ಟ್ ಥರಾ ಹೇಳೋದು ನಿನಗೆ?! ಅರ್ಥನೇ ಮಾಡ್ಕೊಳಲ್ವಲ್ಲ ನೀನು?” ಎಂದರು ಸೂರಿ.

ಅಲ್ಲೀತನಕ ನನ್ನನ್ನು ಕನ್ವಿನ್ಸ್ ಮಾಡುವ ಧಾಟಿಯಲ್ಲಿ ಮಾತನಾಡುತ್ತಿದ್ದ ಸೂರಿ ನನ್ನ ಧೋರಣೆ ನೋಡಿ ರೇಗಿ ಬಿಟ್ಟು ಯಾರನ್ನೋ ಜೊತೆ ಮಾಡಿ ಡಾಕ್ಟ್ರ ಹತ್ತಿರ ಕಳಿಸಿದರು. ಅಲ್ಲಿನ ಡಾಕ್ಟ್ರು ನೋಡಿದವರೇ ನನಗೆ ಏನೂ ಹೇಳದೆ ಅಡ್ಮಿಟ್ ಮಾಡಿಕೊಂಡುಬಿಟ್ಟರು. ನನಗೋ ಆಗ ಒಪ್ಪಿಕೊಂಡಿದ್ದ ಈ ಎರಡೂ ಕಾರ್ಯಕ್ರಮಗಳು ಅಪರಾತಪರಾ ಆಗಿಬಿಟ್ಟರೆ ಅಂತ ಚಿಂತೆ. ಛಲದಿಂದ ಪ್ರಯತ್ನ ಮಾಡದೆ ಯಾವ ಕೆಲಸವನ್ನೂ ನಾನು ಮಧ್ಯದಲ್ಲಿ ಬಿಡುವುದೇ ಇಲ್ಲ.

ನನ್ನ ಸಾಮರ್ಥ್ಯ ಮೀರಿಯೂ ಆಗದಿದ್ದರೆ ಅದು ಬೇರೆ ಮಾತು. ಅಲ್ಲಿ ಆಸ್ಪತ್ರೆಯಲ್ಲಿ ಇದ್ದರೂ ಆಲೋಚನೆಗಳು ಪ್ರೋಗ್ರಾಮಿನ ಬಗ್ಗೆ. ನಾಡಿದ್ದು ದೆಹಲಿಯಲ್ಲಿ ಮಂಥರಾ ಮಾಡಬೇಕು. ಅದಕ್ಕೆ ಆದಷ್ಟು ಬೇಗ ಇಲ್ಲಿಂದ ಹೊರಡಲೇಬೇಕು, ಹೀಗೆಲ್ಲ ಆಲೋಚನೆಗಳು ನನ್ನ ತಲೆಯಲ್ಲಿ. ನನ್ನ ಎದೆ ನೋವು ಮರೆತೇಹೋದಂತಾಗಿ ಇಲ್ಲಿಂದ ಹೊರಬೀಳುವ ರಣತಂತ್ರ ರೂಪಿಸತೊಡಗಿದೆ. ರಾತ್ರಿ ಸುಮಾರು 11 ಗಂಟೆಗೆ ಸೂರಿ ಕೂಡ ಬಂದರು. ನನ್ನನ್ನು ನೋಡಲು ಬಂದಾಗ ಮುಖವೆಲ್ಲ ಕಪ್ಪಿಟ್ಟಿತ್ತು. ಮ್ಯಾಟರ್ ಈಸ್ ಸೀರಿಯಸ್ ಅಂತಾರಲ್ಲ, ಹಾಗೆ!

“ಅಕ್ಕಾ ಆಂಜಿಯೋಗ್ರಾಫ್ ಮಾಡಬೇಕಂತೆ, ಡಾಕ್ಟ್ರು ಹೇಳಿದ್ರು. ಎಮರ್ಜೆನ್ಸಿ ಅಂತೆ ಅಕ್ಕಾ” ಎಂದು ಭಾವುಕರಾಗಿ ಹೇಳಿದರು.
“ಅಯ್ಯ, ಇಲ್ಲಪ್ಪ ಆಗಲ್ಲ. ಅದೇನಿದೆಯೋ ಬೆಂಗಳೂರಿಗೆ ಹೋಗಿಯೇ ನೋಡುಸ್ಕಂತೀನಿ”.

“ಇಲ್ಲಕ್ಕ, ಅಷ್ಟೆಲ್ಲ ಕಾಯೋಕೆ ಟೈಮಿಲ್ಲ. ನಿನ್ ಇಸಿಜಿ ತೆಗ್ದಿದಾರೆ. ಬಹಳಾ ವೇರಿಯೇಷನ್ ಇದೆ ಅಂದ್ರು ಡಾಕ್ಟ್ರು. ಈಗ್ಲೇ ಮಾಡುಸ್ಕೋ. ನಾನು ಆನಂದಗೆ ಇಲ್ಲೇ ಬರಕ್ಕೆ ಹೇಳ್ತೀನಿ”.

ಒಂದು ಕ್ಷಣ ಯೋಚಿಸಿ ಹೇಳಿದೆ. “ಇದನ್ನೆಲ್ಲಾ ಇಲ್ಲಿ ಮಾಡಿಸಿಕೊಳ್ಳಕ್ಕೆ ಆಗಲ್ಲ ಸೂರಿ. ಅಲ್ಲದೆ ಆನಂದ್ ಡೆಲ್ಲೀಲಿ ಇದಾರೆ. ಎರಡನೇ ತಾರೀಕು ಶೋ ಇದೆ. ನಾನೂ ಅಲ್ಲಿಗೆ ಹೋಗಲೇಬೇಕು. ಅಲ್ಲಿಗೆ ಹೋದಮೇಲೆ ಒಂದು ಪಕ್ಷ ಏನಾದರೂ ಆದರೆ ಅಲ್ಲೇ ನೋಡ್ಕೋತಾರೆ. ಇಲ್ಲಿಂದ ನಾನು ಹೊರಟುಬಿಟ್ರೆ ಸರಿ ಹೋಗುತ್ತೆ”. ಸೂರಿಗೆ ನಿಜವಾಗಿ ನನ್ನ ಬುದ್ಧಿಮತ್ತೆಯ ಬಗ್ಗೆ ಅನುಮಾನ ಬಂದಿರಲಿಕ್ಕೂ ಸಾಕು.

“ಅಕ್ಕಾ, ನೀನು ಇಲ್ಲಿಂದ ಹೊರಡಕ್ಕೆ ಆಗಲ್ಲಕ್ಕ. ಆಂಜಿಯೋಗ್ರಾಫ್ ಆಗಲೇಬೇಕು. ಇಲ್ಲಾಂದರೆ ನಿನ್ನ ಜೀವಕ್ಕೆ ಅಪಾಯ ಇದೆ. ನಿನಗೆ ಶೋ ಮಾಡಕ್ಕೆ ಆಗೋದೆ ಇಲ್ಲ. ಆ ಮಾತಂತೂ ನಿಜ”.

ನಾನೂ ಹಟ ಬಿಡಲಿಲ್ಲ. “ಅದೇನಾಗುತ್ತೋ ಡೆಲ್ಲೀಲೇ ಆಗ್ಲಿ ಸೂರಿ. ನಾನಂತೂ ಶೋ ಮಾಡೇ ತೀರ್ತೀನಿ. ಅದಾದ ಮೇಲೆ ಬೇಕಾದ್ರೆ ಆಂಜಿಯೋಗ್ರಾಫ್ ಆಗಲಿ. ಅಲ್ಲೀತನಕ ನಾನು ಯಾವ ಕಾರಣಕ್ಕೂ ಒಪ್ಪಲ್ಲ” ಎಂದೆ.

ಸೂರಿಗೆ ಸಿಟ್ಟು ಬಂತು ಅಂತ ಕಾಣ್ಸುತ್ತೆ. ಥಟ್ ಅಂತ ಕ್ಷಣಮಾತ್ರದಲ್ಲಿ ಹೊರಟೇ ಹೋದರು. ಮಾರನೇ ದಿನ ಅಂದರೆ ಡಿಸೆಂಬರ್ 31ರ ಸಂಜೆ ಪ್ರೋಗ್ರಾಮ್‌ಗೆ ಹೋಗಲು ನನ್ನನ್ನ ಡಾಕ್ಟರು ಬಿಡಲಿಲ್ಲ. ಮಾರನೇ ದಿನ, ಹೊಸ ವರ್ಷದ ದಿನ ಆಸ್ಪತ್ರೆಯವರು ನನ್ನನ್ನು ಡಿಸ್ಚಾರ್ಜ್ ಮಾಡಿದರು. ಆದರೆ ಒಂದು ಅಂಡರ್ ಟೇಕಿಂಗ್ ಬರೆಸಿಕೊಂಡರು.

‘‘ಇನ್ನು ಈ ಪೇಶೇಂಟಿಗೂ ನಮಗೂ ಸಂಬಂಧವಿಲ್ಲ. ಆಕೆಗೆ ಹೇಳಬೇಕಾದ್ದನ್ನೆಲ್ಲಾ ವಿವರಿಸಿದ ಮೇಲೂ ತಮ್ಮ ಸ್ವಂತ ರಿಸ್ಕಿನ ಮೇಲೆ ಪ್ರಯಾಣ ಬೆಳೆಸುತ್ತಿದ್ದಾರೆ. ಇನ್ನು ಅವರ ಪ್ರಾಣಕ್ಕೆ ಅವರೇ ಜವಾಬ್ದಾರರು. ಆಸ್ಪತ್ರೆ ಯಾವ ರೀತಿಯಿಂದಲೂ ಹೊಣೆಯಾಗುವುದಿಲ್ಲ” ಅಂತ ಇಂಗ್ಲಿಷಿನಲ್ಲಿ ಬರೆದಿದ್ದ ಪತ್ರಕ್ಕೆ ಸಹಿ ಮಾಡಿ ಅಲ್ಲಿಂದ ಹೊರಟೆ.

***
ಚಳಿಗಾಲದ ದೆಹಲಿಯಲ್ಲಿ ಫ್ಲೈಟ್ ಇಳಿದ ತಕ್ಷಣ ಮೊದಲಿಗೆ ಕಳೆದುಹೋಗುವುದು ಸ್ಪರ್ಶಜ್ಞಾನ. ನಾವು ದಕ್ಷಿಣದವರಿಗೆ ಅಷ್ಟು ಸುಲಭವಲ್ಲ ಚಳಿಯನ್ನು ಸೈರಿಸುವುದು.

ಸೂರಿ ಆನಂದ್‌ಗೆ ನನ್ನ ಆರೋಗ್ಯದ ಸುದ್ದಿ ಮುಟ್ಟಿಸಿದ್ದರು. ನಾನು ಇಳಿಯುವ ಹೊತ್ತಿಗೆ ಆಗಲೇ ಆನಂದ್ ನನ್ನ ದಾರಿ ಕಾಯುತ್ತಿದ್ದರು. ನಾನು ಬ್ಯಾಗ್ ಕ್ಲೇಮ್ ಮಾಡಿ ಹೊರಗೆ ಬಂದೆ. ಆನಂದ್ ಮುಖ ಟೆನ್ಷನ್‌ನಿಂದ ತುಂಬಿತ್ತು.

ಅಲ್ಲಿಂದ ಸೀದಾ ನಾವು ಉಳಿದುಕೊಳ್ಳಬೇಕಿದ್ದ ಜಾಗ – ಲೇಡೀಸ್ ಹಾಸ್ಟೆಲಿಗೆ ಹೋದೆವು. ಅಲ್ಲಿ ನನ್ನ ಜೊತೆಗೆ ಮೀತಾ ಮಿಶ್ರಾ ಎಂಬ ಹೆಸರಿನ ಕನ್ನಡ ಬಲ್ಲ ಹುಡುಗಿಯೊಬ್ಬಳು ಇರುವಂತೆ ವ್ಯವಸ್ಥೆ ಮಾಡಿದ್ದರು. ಅಲ್ಲಿಗೆ ಹೋದ ತಕ್ಷಣ ನನ್ನ ಸಹಪಾಠಿ ಬನ್ಸಿ ಕೌಲ್ ಕೂಡ ಬಂದರು. ಅಲ್ಲಿಗೆ ಒಬ್ಬ ಡಾಕ್ಟರನ್ನೂ ಕರೆತಂದಿದ್ದರು.

ನಾನು ಆನಂದ್‌ಗೆ ಹೇಳಿದೆ, “ನನಗೆ ಕುತ್ತಿಗೆಯ ಹಿಂಭಾಗದ ಸ್ವಲ್ಪ ಕೆಳಗೆ ನೋಯುತ್ತಿದೆ. ಭುಜದ ಭಾಗವೇ ಆದರೂ, ಈಗ ಭುಜ ನೋವಿಲ್ಲ. ಬೆನ್ನಿನ ಹುರಿ ನೋವಾಗುತ್ತಿದೆ. ಅದು ಸರಿಯಾದರೆ ನನಗೆ ಇನ್ನೆಲ್ಲಾ ಸರಿಯಾಗುತ್ತದೆ”.

ಡಾಕ್ಟರು ನನ್ನ ಯಾವ ಮಾತನ್ನೂ ಕೇಳಲು ತಯಾರಿರಲಿಲ್ಲ. ಇದು ಮೈಲ್ಡ್ ಹಾರ್ಟ್ ಅಟ್ಯಾಕ್ ಅಂತ ಅವರಾಗಲೇ ನಿರ್ಧರಿಸಿಬಿಟ್ಟಿದ್ದರು. ನಾನು ಇಲ್ಲ ಅನ್ನುವುದಕ್ಕೂ, ಡಾಕ್ಟರು ಹೌದು ಅನ್ನಕ್ಕೂ ಸರೀ ಜಟಾಪಟಿ ನಡೆದಿತ್ತು.

ಬನ್ಸಿ ಕಡೆಗೆ ನನ್ನನ್ನು ಗದರಿಕೊಂಡ. “ನೀನು ಯಾರ ಮಾತನ್ನೂ ಕೇಳಲ್ವಲ್ಲ? ಹಿಂಗಾದ್ರೆ ಏನ್ ಮಾಡೋದು? ಸ್ವಲ್ಪನಾದ್ರೂ ರೆಸ್ಪಾನ್ಸಿಬಿಲಿಟಿ ಬೇಡ್ವಾ ನಿಂಗೆ? ನೀನಾ ಡಾಕ್ಟರು, ಇಲ್ಲಾ ಅವರಾ?”.

“ಅಲ್ಲಾ ಬನ್ಸೀ... ನನಗೆ ನೋವು ಎಲ್ಲಿ ಆಗ್ತಾ ಇದೆ ಅನ್ನೋದನ್ನ ನಾನು ಹೇಳಿದ್ರೆ ತಾನೇ ಡಾಕ್ಟರಿಗೆ ಗೊತ್ತಾಗೋದು? ಎದೆ ನೋವಿಲ್ಲ ನನಗೆ ಈಗ. ಬರೀ ಬೆನ್ನು ನೋವಿದೆ. ಹಿಂದೊಮ್ಮೆ ಸ್ಪಾಂಡಿಲೈಟಿಸ್ ಆಗಿತ್ತು. ಆ ನೋವೇ ಮರುಕಳಿಸಿದೆ” ಎಂದು ನಾನೂ ಜೋರು ಮಾತಾಡಿದೆ.

ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಡಾಕ್ಟರು “ಸ್ಪಾಂಡಿಲೈಟಿಸ್ ಇರೋವ್ರಿಗೂ ಹಾರ್ಟ್ ಅಟ್ಯಾಕ್ ಆಗುತ್ತೆ. ಡು ಯು ನೋ ದಟ್?” ಎಂದು ಏರುದನಿಯಲ್ಲಿ ಮಾತಾಡಿದರು.

ನಾನು ಪಟ್ಟು ಬಿಡಲಿಲ್ಲ. “ನನಗೆ ಆ ಥರಾ ನೋವಾಗ್ತಾ ಇಲ್ಲ ಸರ್. ಇದು ಬರೀ ಬೆನ್ನುಹುರಿಯಲ್ಲಾಗುತ್ತಿರುವ ನೋವು. ಅದು ಕಡಿಮೆಯಾಗಲು ಔಷಧಿ ಕೊಟ್ಟುಬಿಡಿ. ಐ ವಿಲ್ ಬಿ ಫೈನ್” ಎಂದು ಬೇಡಿಕೊಂಡೆ. ಡಾಕ್ಟರಿಗೆ ಸಿಟ್ಟು ಬಂದು ಹೊರಟೇಹೋದರು.

‘ರಾಷ್ಟ್ರೀಯ ನಾಟಕ ಶಾಲೆ’ಯ ಆಗಿನ ನಿರ್ದೇಶಕರಾದ ಕೀರ್ತಿ ಜೈನ್ ಅವರಿಗೆ ಸುದ್ದಿ ತಲುಪಿತ್ತು. ಆದರೆ ತಕ್ಷಣಕ್ಕೆ ಅವರು ನನ್ನನ್ನು ನೋಡಬೇಕೆಂದರೂ ನೋಡುವ ಹಾಗೆ ಇರಲಿಲ್ಲ. ಅವರು ಬಂದು ನನ್ನನ್ನು ನಾಟಕದ ಶೋ ಕ್ಯಾನ್ಸಲ್ ಮಾಡಲು ಅಥವಾ ಮುಂದಕ್ಕೆ ಹಾಕಲು ಒಪ್ಪಿಸಬೇಕು ಅಂತಿದ್ದರಂತೆ. ಆದರೆ ಮೇಲಿಂದ ಮೇಲೆ ನಾಟಕೋತ್ಸವಕ್ಕೆಂದು ಬರುತ್ತಿದ್ದ ಅತಿಥಿಗಳನ್ನು ಸತ್ಕರಿಸಬೇಕಾಗಿತ್ತು. ನನಗಂತೂ ಆ ಸಮಯ ನನ್ನ ನಿರ್ಧಾರ ಗಟ್ಟಿ ಮಾಡಿಕೊಳ್ಳಲು ಸಿಕ್ಕ ಸುವರ್ಣ ಸಂದರ್ಭವೇ ಆಯಿತು.

ಆದದ್ದಾಗಲಿ. ನಾಟಕ ಆಗೇ ತೀರಬೇಕು. ಈ ನಿರ್ಧಾರದಿಂದ ಯಾರೇ ಹೇಳಿದರೂ, ಯಾವ ಕಾರಣಕ್ಕೆ ಒಪ್ಪಿಸಲು ಪ್ರಯತ್ನ ಪಟ್ಟರೂ ನಾನು ಹಿಂದಕ್ಕೆ ಸರಿಯಬಾರದು. ಮನಸ್ಸಿನಲ್ಲಿ ಇದನ್ನೇ ಹೇಳಿಕೊಳ್ಳುತ್ತಾ ಇದ್ದೆ.

ಡಾಕ್ಟರು ಮತ್ತೆ ಬರಲಿಲ್ಲವೆಂದಾಗ ಎಲ್ಲರೂ ನನ್ನನ್ನು ಆಸ್ಪತ್ರೆಗೆ ಸೇರಿಸುವುದೆಂದು ನಿರ್ಧರಿಸಿದರು. ಸ್ವಲ್ಪ ಹೊತ್ತು ಇವರ ಸಮಾಧಾನಕ್ಕೆ ಸುಮ್ಮನಿದ್ದರಾಯಿತು ಅಂತ ನಾನೂ ಹೂಂಗುಟ್ಟಿದೆ. ಅಲ್ಲಿಂದ ನನ್ನನ್ನು ಒಂದು ಆಸ್ಪತ್ರೆಗೆ ಕರೆದೊಯ್ದರು.

ಇಲ್ಲಿನ ಆಸ್ಪತ್ರೆಯ ಪ್ರಾಥಮಿಕ ಪರೀಕ್ಷೆಗಳಲ್ಲಿ ಕೂಡ ಇಸಿಜಿ ಎರ್ರಾಬಿರ್ರಿ ಓಡುತ್ತಿತ್ತು. ಹೈದರಾಬಾದಿನಿಂದ ಇಲ್ಲಿಗೆ ಬಂದು ಎದೆನೋವು ಕಡಿಮೆ ಆಗಿದೆ ಎಂದುಕೊಂಡಾಗಲೂ ಯಾವ ವ್ಯತ್ಯಾಸವೂ ಕಾಣಲಿಲ್ಲ. ಎಲ್ಲಾ ಕೂತು ರೀಡಿಂಗುಗಳನ್ನು ಗಮನಿಸುತ್ತಿದ್ದಾರೆ. ಎಲ್ಲಾ ಶಾರ್ಪ್ ಕರ್ವ್‌ಗಳೇ! ಏರಿದಾಗಲೂ ಅಷ್ಟೇ, ಇಳಿದಾಗಲೂ ಅಷ್ಟೇ!

ಆನಂದ್ ಒಬ್ಬರೇ ಒಳಗೆ ಬಂದರು. ನನ್ನ ಕೈ ಹಿಡಿದುಕೊಂಡು “ಜಯಾ, ಆಂಜಿಯೋಪ್ಲಾಸ್ಟಿ ಮಾಡ್ತಾರೆ, ದಯವಿಟ್ಟು ಮಾಡುಸ್ಕೋ” ಎಂದರು.
“ಹೆಂಗೆ ಮಾಡ್ತಾರೆ? ಏನಾಗುತ್ತೆ ಅದರಿಂದ?”

“ಕೈಯಿಂದ ಅಥವಾ ತೊಡೆಯಿಂದ ಒಂದು ತಂತಿ ಥರದ ವಸ್ತುವನ್ನ ತೂರಿಸ್ತಾರೆ. ಸಮಸ್ಯೆ ಏನು ಅನ್ನುವುದು ತಿಳಿಯುತ್ತೆ. ಅಂದರೆ ಎಲ್ಲಿ ಬ್ಲಾಕ್ ಆಗಿದೆ ರಕ್ತ ಅನ್ನುವುದು ಗೊತ್ತಾಗುತ್ತೆ. ಕೈಗೆ ಮಾಡಿದರೆ ಇಪ್ಪತ್ತನಾಲ್ಕು ಗಂಟೆ ಕೈ ಎತ್ತಕ್ಕಾಗಲ್ಲ. ತೊಡೆಗೆ ಮಾಡಿದ್ರೆ ಡಾಕ್ಟರು ಹೇಳುವ ತನಕ ಹೆಚ್ಚು ಓಡಾಡುವಂತಿಲ್ಲ. ಸ್ವಲ್ಪ ನಿಧಾನವಾಗಿ ಯೋಚನೆ ಮಾಡು. ಮಾಡಿಸಿಕೊಂಡ್ರೆ ಒಳ್ಳೆಯದು. ಏನಾದರೂ ಹೆಚ್ಚು ಕಮ್ಮಿ ಆದರೆ ಆಮೇಲೆ ನಮ್ಮ ಕೈಲಿ ಆಪ್ಷನ್ ಇದ್ದಾಗ ನಮಗೆ ನಾವೇ ಮೋಸ ಮಾಡಿಕೊಂಡ ಹಾಗೆ ಆಗುತ್ತೆ” ಎಂದರು.

“ನನಗೇನೂ ಹೆಚ್ಚು ಕಮ್ಮಿ ಆಗದೇ ಹೋದ್ರೆ?” ಎಂದು ಕೇಳಿದೆ.
ಆನಂದ್ ಹತ್ತಿರ ಇದಕ್ಕೆ ಉತ್ತರವಿರಲಿಲ್ಲ.
“ನನಗೇನೂ ಆಗದೇ ಹೋದ್ರೆ ನನಗೆ ಗಿಲ್ಟ್ ಆಗುತ್ತೆ ಆನಂದ್. ಸುಮ್ಮನೆ ಶೋ ಮಾಡಬೇಕಿತ್ತು ಅಂತ ಜೀವಮಾನವಿಡೀ ಕೊರಗುವ ಹಾಗೆ ಆಗುತ್ತೆ” ಎಂದೆ.
ಕೀರ್ತಿ ಜೈನ್ ನನ್ನನ್ನ ನೋಡಲು ರಾತ್ರಿ ಹನ್ನೆರಡು ಗಂಟೆಗೆ ಬಂದರು. “ಜಯಾ, ಹೌ ಆರ್ ಯೂ” ಎಂದು ವಿಚಾರಿಸಿದರು.

ಮಂಪರಿನಲ್ಲಿದ್ದೆ. ಆದರೂ ಕೀರ್ತಿಯ ದನಿ ಕೇಳಿ ಮನಸ್ಸಿಗೆ ಸ್ಪಷ್ಟತೆ ಬಂತು. “ಐ ಆಮ್ ಆಲ್‌ರೈಟ್ ಕೀರ್ತಿ. ಐ ವಿಲ್ ಡು ದ ಷೋ ಟುಮಾರೋ!” ಎಂದೆ. ಕೀರ್ತಿ, ಪಾಪ– ಉತ್ತರವಾಗಿ ನನ್ನ ಮೊದಲ ವಾಕ್ಯವೇ ಹೀಗೆ ಇರಬಹುದು ಎಂದು ನಿರೀಕ್ಷಿಸಿರಲಿಲ್ಲವೇನೋ.

“ಇಲ್ಲ ಜಯಾ. ಕ್ಯಾನ್ಸಲ್ ಮಾಡಿಬಿಡೋಣ. ಇನ್ನೊಮ್ಮೆ ಬಂದು ಮಾಡುವಿಯಂತೆ” ಎಂದು ಇನ್ನಿಲ್ಲದಂತೆ ನನ್ನನ್ನು ಒಪ್ಪಿಸಲು ಪ್ರಯತ್ನ ಪಟ್ಟರು. ಅವರ ವಿಶ್ವಾಸವನ್ನು ನಾನು ಬಹಳ ಉಂಡಿದ್ದೇನೆ. ಅವರ ಕಳಕಳಿ ಎಂಥದ್ದು ಎನ್ನುವುದು ಖಂಡಿತವಾಗಿ ನನಗೆ ಗೊತ್ತಿತ್ತು.

“ಬೇಡ ಜಯಾ. ಸ್ಟೇಜ್ ಮೇಲೆ ಏನಾದರೂ ಆದರೆ ಏನು ಮಾಡೋದು? ನಾವ್ಯಾರೂ ನಮ್ಮನ್ನ ನಾವು ಕ್ಷಮಿಸಿಕೊಳ್ಳಲಿಕ್ಕೇ ಆಗದ ತಪ್ಪು ಘಟಿಸಿಬಿಡುತ್ತದೆ. ಪ್ಲೀಸ್ ಬೇಡ. ನಮ್ಮ ಮಾತು ಕೇಳು” ಎಂದು ನನಗೆ ಮೆಲು ದನಿಯಲ್ಲಿ ಸಮಾಧಾನವಾಗಿ ಹೇಳುತ್ತಿದ್ದರು. ಆಗ ನಾನು ನಕ್ಕು ಹೇಳಿದ್ದು ನನಗೆ ಸ್ಫುಟವಾಗಿ ನೆನಪಿದೆ.

“ಸ್ಟೇಜ್ ಮೇಲೆ ಏನಾದರೂ ಆದರೆ, ಅದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ. ಕರ್ಮಭೂಮಿಯ ಮೇಲೆ ಉಸಿರು ಚೆಲ್ಲುವ ಸದ್ಗತಿ ಎಷ್ಟು ಜನಕ್ಕೆ ಇರುತ್ತೆ ಹೇಳಿ? ಏನೂ ಆಗಲಿಲ್ಲವೆಂದರೆ, ನನ್ನ ಕರ್ತವ್ಯವನ್ನು ನಾನು ಪೂರೈಸಿದ ಸಮಾಧಾನ ನನ್ನ ಪಾಲಿಗೆ ಇರಲಿ. ನನ್ನ ಪ್ರಾಣ ಹೋಗುವುದಾದರೆ ಸ್ಟೇಜಿಗಿಂತ ಇನ್ನೊಂದು ಜಾಗ ಬೇಕಾ? ಅಕಸ್ಮಾತ್ ನನಗೆ ಈ ಆಸ್ಪತ್ರೆಯಲ್ಲೇ ಏನೋ ಆಯಿತು ಅಂತಿಟ್ಕೋ. ಆಮೇಲೆ ನೀವೆಲ್ಲ ಕೊರಗುತ್ತೀರಿ, ಅವಳು ಹೇಳಿದ ಹಾಗೆ, ಕೇಳಿಕೊಂಡ ಹಾಗೆ ಶೋ ಮಾಡಲು ಬಿಟ್ಟುಬಿಡಬೇಕಿತ್ತು ಅಂತ. ಪ್ಲೀಸ್ ನಾನು ಹೇಳೋದು ಕೇಳಿ. ನನ್ಗೇನೂ ಆಗಲ್ಲ. ಶೋ ಅನಾಯಾಸವಾಗಿ ಮುಗಿಸುತ್ತೇನೆ” ಎಂದೆ.

ಕೀರ್ತಿಗೆ ನಾನು ಬಡಪೆಟ್ಟಿಗೆ ಬಗ್ಗಲ್ಲ ಎನ್ನುವುದು ಅರ್ಥವಾಯಿತು. ಅವರದ್ದೂ ನನ್ನದೂ ಹಳೇ ಪರಿಚಯ. ಆಸ್ಪತ್ರೆಯವರಿಗೆ ಹೇಳಿದರು: “ಅವರು ಆಂಜಿಯೋ ಮಾಡಿಸಿಕೊಳ್ಳಲ್ಲ. ದಯವಿಟ್ಟು ಡಿಸ್ಚಾರ್ಜ್ ಮಾಡಿಬಿಡಿ” ಎಂದು ಹೇಳಿದರು.

ಮಾರನೇ ಬೆಳಿಗ್ಗೆ ಹನ್ನೊಂದು ಗಂಟೆಗೆ ಆಸ್ಪತ್ರೆಯಿಂದ ಹೊರಗೆ ಬಂದೆ. ಹೈದರಾಬಾದ್ ಆಸ್ಪತ್ರೆಯಲ್ಲಿ ನನ್ನ ಆರೋಗ್ಯಕ್ಕೆ ನಾನೇ ಸಂಪೂರ್ಣ ಹೊಣೆ, ಡಾಕ್ಟರುಗಳ ಸಲಹೆಯನ್ನೂ ಮೀರಿ ಹೊರಟಿದ್ದೇನೆ ಹಾಗಾಗಿ ಯಾರ ಮೇಲೂ ನನ್ನ ಜವಾಬ್ದಾರಿ ಇಲ್ಲ ಎನ್ನುವ ಸಾರಂಶವಿದ್ದ ಪತ್ರಕ್ಕೆ ಸಹಿ ಹಾಕಿಸಿಕೊಂಡ ಹಾಗೇ ಇಲ್ಲೂ ಹಾಕಿಸಿಕೊಂಡರು.

***
ಆಸ್ಪತ್ರೆಯಿಂದ ಬಂದೆ. ಸಂಜೆಯ ಶೋಗೆ ತಯಾರಾದೆ. ನಾಟಕದ ಕತೃ ಎಚ್.ಎಸ್. ವೆಂಕಟೇಶಮೂರ್ತಿ ಕೂಡ ನಾಟಕ ನೋಡಲು ಬಂದಿದ್ದರು. ಎಲ್ಲರಿಗೂ ನನ್ನ ಆರೋಗ್ಯದ್ದೇ ಆತಂಕ. ಆನಂದ್ ಅಂತೂ ಆಗಾಗ “ಏನಮ್ಮಾ, ಆರಾಮಾಗಿದ್ದೀಯಾ? ಹೇಗನ್ನಿಸ್ತಾ ಇದೆ?” ಎಂದು ವಿಚಾರಿಸಿಕೊಳ್ಳುತ್ತಲೇ ಇದ್ದರು.

“ಬೆನ್ನು ನೋವು ಒಂದು ಬಹಳ ಕಷ್ಟ ಕೊಡ್ತಿದೆ ಆನಂದ್. ಯಾವುದಾದರೂ ಪೇನ್ ಕಿಲ್ಲರ್ ಇದ್ರೆ ಕೊಡು” ಎಂದು ಕೇಳಿದೆ. ಬ್ರೂಫೆನ್ ಮಾತ್ರೆ ಇತ್ತು ಅವರ ಬಳಿ. “ಮಾತ್ರೆ ಕೊಡ್ಲಾ?” ಎಂದು ಕೇಳಿದರು. “ಹೂಂ ಕೊಡು” ಎಂದು ಎರಡು ಮಾತ್ರೆಗಳನ್ನು ನುಂಗಿದೆ. ನನ್ನ ಎಂಟ್ರಿ ಇನ್ನೊಮ್ಮೆ ಮನಸ್ಸಿನಲ್ಲೇ ಜ್ಞಾಪಿಸಿಕೊಂಡೆ.

ನಾಟಕ ಎಲ್ಲೂ ಹದ ತಪ್ಪದೆ ಚೆನ್ನಾಗಿ ಮೂಡಿ ಬಂತು. ಪ್ರೇಕ್ಷಕರು ಬಹಳ ಪ್ರೋತ್ಸಾಹ ಕೊಟ್ಟು ನಾಟಕ ಅನುಭವಿಸಿದರು. ನಾನಂತೂ ಏನೂ ಆಗಿಲ್ಲವೇನೋ ಎನ್ನುವಂತೆಯೇ ಇದ್ದೆ. ಒಂದು ಪಕ್ಷ ರಂಗದ ಮೇಲೇ ಕೊನೆ ಉಸಿರು ಅಂತಿದ್ದರೆ ನನ್ನಷ್ಟು ಭಾಗ್ಯವನ್ನು ಇನ್ನಾರು ತಂದಿರಲು ಸಾಧ್ಯ ಹೇಳಿ? ಆದರೆ, ನನ್ನ ಅದೃಷ್ಟವೇ ಕಡಿಮೆ ಬಿತ್ತು. ರಂಗದ ಮೇಲೆ ಆವತ್ತು ಉಸಿರು ಕಳೆದುಕೊಳ್ಳಲೇ ಇಲ್ಲ ನಾನು. ಇರಲಿ, ಸಾವಿಗೆ ಇನ್ನೊಂದು ಚಾನ್ಸ್ ಕೊಟ್ಟು ನೋಡೋಣ!

ಬೆಂಗಳೂರಿಗೆ ಬಂದ ಮೇಲೆ ಥರೋ ಚೆಕಪ್ ಮಾಡಿಸಿದೆವು. ಅದು ಹಾರ್ಟ್ ಸಮಸ್ಯೆ ಅಲ್ಲ ಎಂದು ಗೊತ್ತಾಯಿತು. ನಾನು ಹೇಳುತ್ತಿದ್ದ ಹಾಗೆ ಅದು ಕತ್ತಿನ ಸಮಸ್ಯೆ ಮಾತ್ರವೇ ಆಗಿತ್ತು. ಆಂಜಿಯೋಗ್ರಾಫ್ ಮಾಡಿಸಿಕೊಳ್ಳುವ ಪ್ರಮೇಯವೇ ಬರಲಿಲ್ಲ. ಆದರೂ ರಂಗದ ಮೇಲೆ ನನ್ನ ಕೊನೆ ಉಸಿರು ಇರಲಿ ಎಂದು ಈವತ್ತಿಗೂ ಅಂದುಕೊಳ್ಳುತ್ತಾ ಕಾಣದ ಶಕ್ತಿಯನ್ನು ಪ್ರಾರ್ಥಿಸುತ್ತೇನೆ.

ಒಬ್ಬ ಯೋಧನಿಗೆ ರಣಭೂಮಿಯಲ್ಲಿ ಕೊನೆಯುಸಿರೆಳೆಯುವುದು ಹೇಗೆ ವೀರಮರಣದ ಸಂಕೇತವೋ, ಹಾಗೇ ನನಗೆ ರಂಗಭೂಮಿ ವೀರ ಮರಣದ ಸಂಕೇತ. ನಾಟಕ ಮಾಡುತ್ತಿರುವಂತೆಯೇ ಹೋಗಬೇಕು. ಯಾವುದೋ ಆಸ್ಪತ್ರೆಯಲ್ಲಿ ಪೈಪ್ ಚುಚ್ಚಿಸಿಕೊಂಡೋ ಅಥವಾ ಕೃತಕ ಉಸಿರಾಟ ಅನುಭವಿಸುತ್ತಲೋ ನನ್ನ ಕೊನೆ ಬರಬಾರದು. ಇದು ನನ್ನ ಅಪೇಕ್ಷೆ. ಆದರೆ, ಹಣೆಬರಹ ಹೇಗಿದೆಯೋ ಯಾರಿಗೆ ಗೊತ್ತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT