4

ಭಿನ್ನವಾಗಿ ಉಳಿಯುವುದು ಬಹಳ ಕಷ್ಟ...

Published:
Updated:
ಭಿನ್ನವಾಗಿ ಉಳಿಯುವುದು ಬಹಳ ಕಷ್ಟ...

ಭಿನ್ನವಾಗಿ ಇರಬೇಕು ಎಂದು ಹೊರಟವರ ಕಷ್ಟಗಳು ಒಂದೆರಡಲ್ಲ. ಭಿನ್ನವಾಗಿ ಇರಬೇಕು ಎಂದು ಎಷ್ಟು ಪ್ರಯತ್ನ ಪಟ್ಟರೂ ಈಗ ಇರುವವರ ಹಾಗೆಯೇ ಅವರು ಕಾಣತೊಡಗುತ್ತಾರೆ.  ಕಾಲಾಂತರದಲ್ಲಿ ಈಗ ಇರುವವರ ಜೊತೆಗೆ ಅವರೂ ಒಬ್ಬರಾಗಿ ಬಿಡುತ್ತಾರೆ. ಇದು ಭಿನ್ನವಾಗಿ ಇರಬೇಕು ಎನ್ನುವವರ ಸಮಸ್ಯೆಯಲ್ಲ. ಭಿನ್ನತೆಯನ್ನು ಬಯಸುವ ಜನರ ಸಮಸ್ಯೆ!

ಆಮ್ ಆದ್ಮಿ ಪಾರ್ಟಿ ಎಲ್ಲರಿಗಿಂತ ಭಿನ್ನವಾಗಿ ಇರುತ್ತೇನೆ ಎಂದು ರಾಜಕೀಯಕ್ಕೆ ಬಂತು. ಜನರು ಅದರ  ಘೋಷಣೆಯನ್ನು ನಂಬಿದರು. ದೇಶದ ರಾಜಧಾನಿಯಲ್ಲಿಯೇ ಅಧಿಕಾರಕ್ಕೆ ತಂದರು. ಅದೂ ಎಂಥ ಜನಾದೇಶ!

ಹಿಂದೆ ಎಂದೂ ಸಿಕ್ಕಿರಲಿಲ್ಲ. ಮುಂದೆ ಸಿಗುತ್ತದೆಯೋ ಇಲ್ಲವೋ ಹೇಳುವುದು ಕಷ್ಟ. ದೆಹಲಿಯಲ್ಲಿ ಎಎಪಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಮಾತ್ರ ಆಯಿತು. ಏನಾದರೂ ವ್ಯತ್ಯಾಸ ಕಾಣಿಸಿತೇ? ದೆಹಲಿಯ ಜನರು ಎಎಪಿ ಮೇಲೆ ತುಂಬ ಭರವಸೆ ಇಟ್ಟುಕೊಂಡಂತೆ ಕಾಣುತ್ತದೆ. ದೂರದಲ್ಲಿ ಇರುವ ನಮ್ಮಂಥವರಿಗೆ ಭ್ರಮನಿರಸನ ಆಗಿದ್ದರೂ ದೆಹಲಿ ಜನರು ಇನ್ನೂ ಭರವಸೆ ಕಳೆದುಕೊಂಡಂತೆ ಇಲ್ಲ.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಮ್ಮ ಪಕ್ಷದ ರೆಕ್ಕೆಗಳನ್ನು ನೆರೆಯ ಪಂಜಾಬ್‌ ರಾಜ್ಯಕ್ಕೆ ವಿಸ್ತರಿಸಲು ಹೊರಟಿದ್ದಾರೆ. ಅಲ್ಲಿನ ಹಾಲಿ  ಅಕಾಲಿದಳ–ಬಿಜೆಪಿ ಸರ್ಕಾರದ ಎರಡು ಅವಧಿಯ ಆಡಳಿತ ಅಥವಾ ದುರಾಡಳಿತದಿಂದ ಬೇಸತ್ತು ಹೋಗಿರುವ ಪಂಜಾಬಿನ ಜನರು ಎಎಪಿ ಕಡೆಗೆ ಆಸೆಗಣ್ಣಿನಿಂದ ನೋಡುತ್ತಿರುವಂತಿದೆ. ಆದರೆ, ಕೇಜ್ರಿವಾಲ್‌ ಅವರು ಪಂಜಾಬ್ ಜೊತೆಗೆ ಗುಜರಾತಿನ ಮೇಲೆಯೂ  ಗಮನ ಹರಿಸಿದಂತಿದೆ. ಅವರಿಗೆ ಅಲ್ಲಿ ಕೆಲವಾದರೂ ಲೆಕ್ಕ ಚುಕ್ತಾ ಮಾಡಬೇಕಿದೆ. ಯಾರ ಜೊತೆಗೆ ಎಂದು ಹೇಳಬೇಕಿಲ್ಲ!

ಆದರೆ, ಕೇಜ್ರಿವಾಲ್‌ ಅವರ ಆಕಾಂಕ್ಷೆಗಳ ಓಟಕ್ಕೆ ವಿರೋಧ ಪಕ್ಷಗಳು ಬಿಡಿ, ಅವರ ಪಕ್ಷದವರೇ ಒಂದಾದ ನಂತರ ಒಂದು ದೊಡ್ಡ ಅಡ್ಡಿಗಳನ್ನು ಒಡ್ಡುತ್ತಿದ್ದಾರೆ. ಕಳೆದ ವರ್ಷದ ಫೆಬ್ರುವರಿಯಲ್ಲಿ ದೆಹಲಿಯಲ್ಲಿ ಅಧಿಕಾರ ಹಿಡಿದ ಕೆಲವೇ ತಿಂಗಳಲ್ಲಿ ಬಯಲಿಗೆ ಬಂದ ಜಿತೇಂದ್ರಸಿಂಗ್‌ ತೋಮರ್‌ ಅವರ ಖೊಟ್ಟಿ ಪದವಿ ಪ್ರಮಾಣಪತ್ರದ ಹಗರಣದ ಹಿಂದೆಯೇ ಆಸಿಫ್‌ ಖಾನ್‌ ಅವರ ಭ್ರಷ್ಟಾಚಾರದ ಹಗರಣವೂ ಬಯಲಿಗೆ ಬಂತು. ತೋಮರ್‌, ಕಾನೂನು ಸಚಿವರಾಗಿದ್ದರು. ಅವರ ಕಾನೂನು ಪದವಿ ಪ್ರಮಾಣ ಪತ್ರ ಸಾಚಾ ಇತ್ತು. ಆದರೆ, ಕಾನೂನು ಓದಲು ಅರ್ಹತೆ ಕೊಡುವ ಮೂಲ ಪದವಿ ಪ್ರಮಾಣ ಪತ್ರ ನಕಲಿಯಾಗಿತ್ತು! ಅದು ಕೇಜ್ರಿವಾಲ್‌ ಅವರಿಗೆ ಗೊತ್ತೇ ಇರಲಿಲ್ಲ. ಕೇಳಿದಾಗಲೆಲ್ಲ ತೋಮರ್‌ ಅಸಲಿ ಕಾನೂನು ಪದವಿ ತೋರಿಸುತ್ತಿದ್ದರು!

ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಆಸೀಫ್‌ ಅಹ್ಮದ್‌ ಖಾನ್‌ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದರು. ತೋಮರ್‌ ಮತ್ತು ಆಸೀಫ್ ವಿರೋಧಿಗಳ ಒತ್ತಡಕ್ಕೆ ಮಣಿದು ರಾಜೀನಾಮೆ ಕೊಟ್ಟರು. ಇದಕ್ಕಿಂತ ದೊಡ್ಡ ಮುಜುಗರ ಮಾಡಿದವರು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವ ಸಂದೀಪ್‌ ಕುಮಾರ್‌. ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡ ಸಂದೀಪ್‌ ಅವರನ್ನು ಮುಖ್ಯಮಂತ್ರಿ ಕೇಜ್ರಿವಾಲ್‌ ಅವರೇ ವಜಾ ಮಾಡಿದ್ದಾರೆ.

ಸಂದೀಪ್‌ ಕುಮಾರ್‌ ತಾವು ಅಮಾಯಕರು ಎಂದು ಹೇಳಿಕೊಂಡಿದ್ದಾರೆ ಮತ್ತು ಅದಕ್ಕೆ ಜಾತಿಯ ರಕ್ಷಣೆ ಪಡೆಯಲೂ ಪ್ರಯತ್ನ ಮಾಡಿದ್ದಾರೆ. ಒಂದು ವರದಿಯ ಪ್ರಕಾರ ಸಂದೀಪ್‌  ಕುಮಾರ್‌ ಇಬ್ಬರು ಮಹಿಳೆಯರ ಜೊತೆಗೆ ಇದ್ದರು ಮತ್ತು ಅವರು ‘ಆಕ್ಷೇಪಾರ್ಹ ಭಂಗಿಯಲ್ಲಿ’ ಸಿಕ್ಕು ಬಿದ್ದಿದ್ದಾರೆ ಎನ್ನಲಾಗಿದೆ. ಇನ್ನೊಂದು ವರದಿ ಪ್ರಕಾರ ಅವರು ಆರು ಜನ ಮಹಿಳೆಯರ ಜೊತೆಗೆ ಇದ್ದರು!

ಈ ಸಿ.ಡಿ ಅವರ ಸಚಿವ ಅವಧಿಯದೇ ಅಥವಾ ಅದಕ್ಕಿಂತ ಮುಂಚಿನದೇ ಎಂದು ಇನ್ನೂ ಖಚಿತವಾಗಿಲ್ಲ. ಕೆಲವರ ಪ್ರಕಾರ ಅದು ಅವರು ಸಚಿವರಾಗುವುದಕ್ಕಿಂತ ಮುಂಚಿನದು. ಹೋರಿ ಹರಯದ ವಯಸ್ಸಿನಲಿ ಯಾರು ಯಾರು ಏನೇನು ಮಾಡಿರುತ್ತಾರೋ ಯಾರಿಗೆ ಗೊತ್ತು? ಆದರೆ, ‘ಸೀಜರ್‌ನ ಹೆಂಡತಿ ನಿಷ್ಕಳಂಕಳಾಗಿರಬೇಕು’ ಎಂದು ಎಲ್ಲರೂ ಬಯಸುತ್ತಾರೆ. ಅಮೆರಿಕದಂಥ ಮುಕ್ತ ಸಮಾಜದಲ್ಲಿ ಕೂಡ ತಮ್ಮ ಅಧ್ಯಕ್ಷರು ‘ಶೀಲವಂತ’ರಾಗಿಯೇ ಇರಬೇಕು ಎಂದು ಅಲ್ಲಿನ ಜನರು ಬಯಸುತ್ತಾರೆ.

ಸಂದೀಪ್‌ ಕುಮಾರ್‌ ವರ್ತನೆ ಸಾರ್ವಜನಿಕ ಜೀವನಕ್ಕೆ ಸಲ್ಲುವಂಥದು ಅಲ್ಲ ಎಂದೇ ಅವರನ್ನು ಕೇಜ್ರಿವಾಲ್‌ ಸಂಪುಟದಿಂದ ವಜಾ ಮಾಡಲಾಗಿದೆ. ಆದರೆ, ಸಚಿವ ಪದವಿ ಕಳೆದುಕೊಂಡ ಈ ಮೂವರೂ ಇನ್ನೂ ಪಕ್ಷದ ಸದಸ್ಯರಾಗಿಯೇ ಇದ್ದಾರೆ. ಅಂದರೆ ಈ ಮೂವರೂ ಸಚಿವರಾಗಿ ಇರಬಾರದು ಆದರೆ, ಪಕ್ಷದ ಸದಸ್ಯರಾಗಿ ಇರಬಹುದು ಎಂದು ಕೇಜ್ರಿವಾಲ್‌ ಹೇಳುತ್ತ ಇರುವಂತಿದೆ. ಅಂದರೆ ಭಿನ್ನವಾಗಿ ಇರುವುದರಲ್ಲಿ ರಾಜಿ ಮಾಡಿಕೊಂಡಂತೆ ಆಗಲಿಲ್ಲವೇ? ‘ನಾವು ಬೇರೆಯವರಿಗಿಂತ ಎಲ್ಲ ರೀತಿಯಲ್ಲಿಯೂ ಭಿನ್ನ’ ಎಂದು ಹೇಳುವ ಒಂದು ಪಕ್ಷದಲ್ಲಿ ಎಂಥೆಂಥ ಜನರು ಇದ್ದಾರೆ ಎಂದರೆ ಇತರ ಪಕ್ಷಗಳಲ್ಲಿ ಇರುವಂಥ ಜನರೇ ಅಥವಾ ಅದಕ್ಕಿಂತ ಕೆಟ್ಟ ಜನರೇ ಇದ್ದಾರೆ ಎಂದು ಅರ್ಥವಾಗುವುದಿಲ್ಲವೇ?

ಕೇಜ್ರಿವಾಲ್‌ ಅವರಿಗೆ ಜನರು ಎಂಥ ಬೆಂಬಲ ಕೊಟ್ಟಿದ್ದಾರೆ ಎಂದರೆ ದೆಹಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷವೇ ಇಲ್ಲ. ಎಪ್ಪತ್ತು ಸದಸ್ಯ ಬಲದ ಸಭೆಯಲ್ಲಿ 67 ಮಂದಿ ಆಡಳಿತ ಪಕ್ಷದವರೇ ಇದ್ದಾರೆ. ಯಾರೆಲ್ಲ ಕಳಂಕಿತರಾಗಿದ್ದಾರೋ ಅವರನ್ನು ಕೇವಲ ಅಮಾನತು ಮಾಡುವ ಬದಲು ಪಕ್ಷದಿಂದಲೇ ಉಚ್ಚಾಟಿಸಬಹುದಿತ್ತಲ್ಲ? ಅವರ ಬೆಂಬಲ ಅಥವಾ ಬಲ ಕೇಜ್ರಿವಾಲ್‌ ಅವರಿಗೆ ಏಕೆ ಬೇಕು? ಪಕ್ಷದಿಂದ ಉಚ್ಚಾಟಿಸಿದರೆ ಅವರು ವಿರೋಧ ಪಕ್ಷಕ್ಕೆ ಹೋಗಿ ಸೇರಿಕೊಳ್ಳಬಹುದು ಎಂಬ ಅಳುಕು ಇದ್ದರೆ ಸೇರಿಕೊಳ್ಳಲಿ ಬಿಡಿ.

ತಮ್ಮ ಪಕ್ಷದ ಕಳಂಕ ಹೋಗಿ ಬೇರೆ ಪಕ್ಷಕ್ಕೆ ತಟ್ಟಿಕೊಂಡರೆ ಇನ್ನೂ ಒಳ್ಳೆಯದೇ ಅಲ್ಲವೇ? ಜಿತೇಂದ್ರಸಿಂಗ್ ತೋಮರ್‌ ಇನ್ನೂ ಕೇಜ್ರಿವಾಲ್‌ ಅವರ ಆಪ್ತವಲಯದಲ್ಲಿಯೇ ಇದ್ದಾರೆ ಎಂಬ ಗುಲ್ಲೂ ಇದೆ! ಒಂದು ಸಾರಿ ರಾಜಿ ಮಾಡಿಕೊಳ್ಳಲು ಆರಂಭಿಸಿದರೆ ಅದರಲ್ಲಿ ಕೊನೆ ಎಂಬುದು ಇರುವುದೇ ಇಲ್ಲ. ಈಗಾಗಲೇ ಈ ಮೂವರು ಮಾಜಿ ಸಚಿವರು ಅಲ್ಲದೇ ಕನಿಷ್ಠ 11 ಜನ ಶಾಸಕರ ವಿರುದ್ಧ ಬೇರೆ ಬೇರೆ ಆರೋಪಗಳು ಇವೆ ಮತ್ತು ಅವರು ಜೈಲು ಸೇರಿ ಹೊರಗೆ ಬಂದಿದ್ದಾರೆ. ಅದರಲ್ಲಿ ಸೋಮನಾಥ್‌ ಭಾರ್ತಿಯವರಂಥ ಹಿರಿಯರ

ವಿರುದ್ಧ ಹೆಂಡತಿಗೆ ಕಿರುಕುಳ ಕೊಟ್ಟ ಗಂಭೀರ ಆರೋಪವೂ ಸೇರಿಕೊಂಡಿದೆ.

ಕೇಜ್ರಿವಾಲ್‌ ಅವರ ಮೇಲೆ ಜನರು ಇಟ್ಟುಕೊಂಡಿರುವ ನಿರೀಕ್ಷೆಯ ಭಾರ ದೊಡ್ಡದು. ಜನರಲ್ಲಿ ಬತ್ತಿ ಹೋಗಿದ್ದ ಆಸೆಯ ಗರಿಕೆಗೆ ಕೇಜ್ರಿವಾಲ್‌ ಅವರು ಇಬ್ಬನಿ ಸಿಂಪಡಿಸಿ ಅದು ಮತ್ತೆ ಚಿಗುರುವಂತೆ ಮಾಡಿದ್ದಾರೆ. ಹಾಗಿರುವಾಗ ಅವರ ಸುತ್ತ ಇರುವವರು ಮಾಡುವ ತಪ್ಪುಗಳನ್ನು ಜನರು ಹೇಗೋ ಕ್ಷಮಿಸಬಹುದು. ಆದರೆ, ಸ್ವತಃ ಕೇಜ್ರಿವಾಲ್‌ ಎಡವಬಾರದು ಎಂದು ಅವರು ನಿರೀಕ್ಷಿಸುತ್ತಾರೆ. ಆದರೆ, ಕೇಜ್ರಿವಾಲ್‌ ಎಡವುತ್ತಿದ್ದಾರೆ.

ಸರ್ಕಾರಕ್ಕೆ ಕಳೆದ ಫೆಬ್ರುವರಿಯಲ್ಲಿ ಒಂದು ವರ್ಷ ತುಂಬಿದಾಗ ಇಡೀ ದೇಶದಲ್ಲಿ ತಮ್ಮ ಸಾಧನೆ ಕೊಚ್ಚಿಕೊಳ್ಳಲು ಮಾಡಿದ ತೆರಿಗೆ ಹಣದ ಪೋಲು ಅಕ್ಷಮ್ಯವಾದುದು. ಅವರು ಕಳೆದ ಒಂದು ವರ್ಷದಲ್ಲಿ ₹114 ಕೋಟಿ ಹಣವನ್ನು ತಮ್ಮ ಸರ್ಕಾರದ ಸಾಧನೆ ಹೇಳಲು ಬಳಸಿದ್ದಾರೆ. 2013–14ರಲ್ಲಿ ಆಗಿನ ಸರ್ಕಾರ ಇದೇ ಕಾರಣಕ್ಕಾಗಿ ಮಾಡಿದ ಖರ್ಚು ಕೇವಲ ₹25 ಕೋಟಿ. ಬೆಲೆ ಏರಿಕೆ ಆಗಿದೆ ಎಂದರೂ ಕೇವಲ ಮೂರು ವರ್ಷಗಳಲ್ಲಿ ನಾಲ್ಕು ಪಟ್ಟು ಆಗಿರಲಾರದು!

ಜಾಹೀರಾತಿಗಾಗಿ ಕೇಜ್ರಿವಾಲ್‌ ಸರ್ಕಾರ ವಿನಿಯೋಗಿಸಿದ ಒಟ್ಟು ಮೊತ್ತದಲ್ಲಿ ₹33.4 ಕೋಟಿಗಳಷ್ಟು ದೊಡ್ಡ ಮೊತ್ತ ದೆಹಲಿ ಬಿಟ್ಟು ಹೊರ ರಾಜ್ಯಗಳಲ್ಲಿ ಕೊಟ್ಟ ಜಾಹೀರಾತಿಗಾಗಿ ಖರ್ಚಾಗಿದೆ. ಪೊರಕೆಯ ಒಂದು ಕಡ್ಡಿಯಷ್ಟೂ ಪಕ್ಷದ ಕುರುಹು ಇಲ್ಲದ ತಮಿಳುನಾಡು ಮತ್ತು ಪುದುಚೇರಿಯಂಥ ಕಡೆಗಳಲ್ಲಿಯೂ ಜಾಹೀರಾತಿಗಾಗಿ ಹಣ ವ್ಯಯ ಮಾಡಲಾಗಿದೆ. ಸಹಜವಾಗಿಯೇ ಮಹಾಲೇಖಪಾಲರು ಈ ವೆಚ್ಚದ ವಿರುದ್ಧ ಕೆಂಡ ಕಾರಿದ್ದಾರೆ. ಸುಪ್ರೀಂ ಕೋರ್ಟಿನ ತೀರ್ಪಿನ ಅನುಸಾರ ಸರ್ಕಾರದ ಜಾಹೀರಾತುಗಳಲ್ಲಿ ಮುಖ್ಯಮಂತ್ರಿಯ ಚಿತ್ರ ಇರಬಹುದು. ಆದರೆ, ಅವರ ಪಕ್ಷದ ಚಿಹ್ನೆ ಇರಬಾರದು. ಕೇಜ್ರಿವಾಲ್‌ ಅವರು ಆ ನಿಬಂಧನೆಯನ್ನೂ ಮುರಿದರು!

ಉಳಿದ ಎಲ್ಲ ಮುಖ್ಯಮಂತ್ರಿಗಳಂತೆ ಕೇಜ್ರಿವಾಲ್‌ ಅವರೂ ಯೋಚನೆ ಮಾಡಬಾರದಿತ್ತು. ಅವರಿಗೂ ತಮ್ಮ ಸರ್ಕಾರದ ಸಾಧನೆಗಳನ್ನು ಹೀಗೆಲ್ಲ ಹೇಳಿಕೊಳ್ಳಬೇಕು ಎಂದು ಅನಿಸಬಾರದಿತ್ತು. ಅವರು ಆಡಳಿತ ಮಾಡುತ್ತಿರುವುದು ಒಂದು ಸ್ವತಂತ್ರ ರಾಜ್ಯವೂ ಅಲ್ಲ. ಜಾಹೀರಾತಿಗಾಗಿ ಹಣ ಖರ್ಚು ಮಾಡುವುದೇ ಇದ್ದರೆ ನೆರೆಯ ಪಂಜಾಬ್‌, ಹರಿಯಾಣಗಳಲ್ಲಿ ಮಾಡಿದ್ದರೆ ಅರ್ಥ ಮಾಡಿಕೊಳ್ಳಬಹುದಿತ್ತು. ಸೋಜಿಗ ಎಂದರೆ ಕೇಜ್ರಿವಾಲ್‌ ಅವರ ಒಂದು ಸಂದರ್ಶನವೂ ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ; ಯಾವುದೇ ವಾಹಿನಿಯಲ್ಲಿ ಪ್ರಸಾರವಾಗಿಲ್ಲ. ಅವರಿಗೆ ಮಾಧ್ಯಮಗಳನ್ನು ಕಂಡರೆ ಅಷ್ಟು ದ್ವೇಷವೇ ಅಥವಾ ಅಲರ್ಜಿಯೇ?

ಕೇಜ್ರಿವಾಲ್‌ ಯಾರಿಗೂ ಅಂಜಬೇಕಿಲ್ಲ. ಅಳುಕಬೇಕಿಲ್ಲ. ಅವರಿಗೆ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಇದೆ. ಅವರು ಸರ್ಕಾರದ ಮುಖ್ಯಮಂತ್ರಿ ಮಾತ್ರವಲ್ಲ ತಮ್ಮ ಪಕ್ಷದ ಮುಖವೂ ಅವರೇ ಆಗಿದ್ದಾರೆ. ಆದರೆ, ಅವರು 21 ಮಂದಿ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಿ ತಮ್ಮ ಅಧಿಕಾರವನ್ನು ಭದ್ರ ಮಾಡಿಕೊಳ್ಳಲು ಕಾನೂನಿನ ಜೊತೆಗೆ ರಾಜಿ ಮಾಡಿಕೊಂಡರು. ಶಾಸಕರು ಮತ್ತು ಸಂಸದರು ಯಾವುದೇ ಲಾಭದಾಯಕ ಹುದ್ದೆ ಹೊಂದುವಂತಿಲ್ಲ ಎಂಬ ಸಂವಿಧಾನದ 102 (1) (ಎ) ಮತ್ತು 191 (ಇ) ಪರಿಚ್ಛೇದಗಳಿಗೆ ಈ ನೇಮಕ ವಿರೋಧವಾಗಿತ್ತು. ಅದರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾದ ನಂತರ ಕೇಜ್ರಿವಾಲ್‌ ಎಚ್ಚೆತ್ತುಕೊಂಡು ವಿಧಾನಸಭೆಯಲ್ಲಿ ಆ ನೇಮಕಗಳನ್ನು ಸಕ್ರಮಗೊಳಿಸುವ ಮಸೂದೆ ಪಾಸು ಮಾಡಿಕೊಂಡರು. ರಾಷ್ಟ್ರಪತಿಗಳು ಈಗ ಆ ಮಸೂದೆಯನ್ನು ತಿರಸ್ಕರಿಸಿದ್ದಾರೆ.

ಈಗ ಚುನಾವಣೆ ಆಯೋಗದ ಅಂಗಳದಲ್ಲಿ ಈ  21 ಶಾಸಕರ ಭವಿಷ್ಯ ತೀರ್ಮಾನ ಆಗಬೇಕಿದೆ. ಅವರೆಲ್ಲ ಅನರ್ಹಗೊಂಡರೆ ಆಮ್‌ ಆದ್ಮಿ ಪಾರ್ಟಿಯ ವರ್ಚಸ್ಸಿಗೆ ದೊಡ್ಡ ಪೆಟ್ಟು. ಸುಮ್ಮನೆ ಹೋಲಿಕೆ ಮಾಡಬೇಕು ಎನ್ನುವುದಾದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 11 ಜನ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಿಕೊಂಡಿದ್ದಾರೆ. ಅವರ ಪಕ್ಷದ ಶಾಸಕರ ಸಂಖ್ಯೆ 123. ಸಿದ್ದರಾಮಯ್ಯನವರು ಕೇಜ್ರಿವಾಲ್‌ರಷ್ಟು ಪ್ರಶ್ನಾತೀತ ನಾಯಕರೇನೂ ಅಲ್ಲ. ಅವರಿಗೆ ಪ್ರಶ್ನೆ ಕೇಳಲು ಒಂದು ಹೈಕಮಾಂಡ್ ಎಂದು ಇದೆ.  ಹೈಕಮಾಂಡ್‌ ಅನುಮತಿ ಪಡೆದೇ ಅವರು ಏನನ್ನಾದರೂ ಮಾಡಬೇಕು. ಆ ಸಮಸ್ಯೆ ಕೇಜ್ರಿವಾಲ್‌ ಅವರಿಗೆ ಇಲ್ಲ. ಯಾವ ಶಾಸಕರೂ ಅವರ ವಿರುದ್ಧ ಬಂಡೆದ್ದಿಲ್ಲ. ಆದರೂ ಅವರು ತಮ್ಮ ಪಕ್ಷದ ಶಾಸಕರನ್ನು ಸಂತೃಪ್ತವಾಗಿ ಇಡಲು ಕಾಂಗ್ರೆಸ್ಸು ಏನು ಮಾಡುತ್ತಿದೆಯೋ ಅದನ್ನೇ ಮಾಡುತ್ತಿದ್ದಾರೆ.

ಕಳೆದ ವರ್ಷದ ಫೆಬ್ರುವರಿ ಮಧ್ಯಭಾಗದಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆದು ಎಎಪಿ ಭಾರಿ ಬಹುಮತದಿಂದ ಆಯ್ಕೆಯಾದ ಕೂಡಲೇ ಆಗಿನ್ನೂ ಎಎಪಿಯಲ್ಲಿ ಇದ್ದ ಯೋಗೇಂದ್ರ ಯಾದವ್‌ ರಾಷ್ಟ್ರೀಯ ಆಂಗ್ಲ ಪತ್ರಿಕೆಗೆ ಒಂದು ಸುದೀರ್ಘ ಸಂದರ್ಶನ ಕೊಟ್ಟಿದ್ದರು. ಅವರು ಎಎಪಿ ಮುಂದಿನ ದಾರಿಯನ್ನು ವಿವರಿಸುತ್ತ ನಾಲ್ಕು ಅಂಶಗಳ ಕಾರ್ಯಕ್ರಮವನ್ನು ಕೊಟ್ಟಿದ್ದರು:

1. ಸಂಘಟನೆಯನ್ನು ಇನ್ನಷ್ಟು ಆಳಕ್ಕೆ ತೆಗೆದುಕೊಂಡು ಹೋಗುವುದು.

2. ಜನರಿಗೆ ಸಂಬಂಧಪಟ್ಟ ವಿಷಯಗಳನ್ನು ಎತ್ತಿಕೊಳ್ಳುವುದು.

3. ದೊಡ್ಡ  ಪ್ರಶ್ನೆಗಳನ್ನು ಆಯ್ದುಕೊಂಡು ವಿರೋಧವನ್ನು ಹುಟ್ಟು ಹಾಕುವುದು ಮತ್ತು

4. ಹೊಸ ನೀತಿ ನಿರೂಪಣೆಗೆ ಅವಕಾಶ ಕಲ್ಪಿಸುವುದು. ನಿಜವಾಗಿಯೂ ಇದು ಪರ್ಯಾಯ ಮತ್ತು ಜನಪರ ರಾಜಕಾರಣ ಕ್ರಮಿಸಬೇಕಾದ ದಾರಿಯಾಗಿತ್ತು. ಆದರೆ, ಆದುದು ಏನು? ಯೋಗೇಂದ್ರ ಯಾದವ್‌ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಲಾಯಿತು. ಯಾದವ್‌ ಜೊತೆಗೆ ಪ್ರಶಾಂತ್‌ ಭೂಷಣ್ ಅವರೂ ಉಚ್ಚಾಟಿತರಾದರು. ಭೂಷಣ್‌ ಅವರು ಇನ್ನೂ ಮೂಲಕ್ಕೆ ಹೋಗಿದ್ದರು.

ಚುನಾವಣೆಗೆ ಪಕ್ಷದ ಟಿಕೆಟ್‌ ವಿತರಣೆ ಬಗೆಗೇ ಅವರು ಆಕ್ಷೇಪ ಎತ್ತಿದ್ದರು. ಕನಿಷ್ಠ 12 ಜನ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಬಾರದಿತ್ತು ಎಂದು ಅವರು ಹೇಳಿದ್ದರು. ಆದರೆ, ಕೇಜ್ರಿವಾಲ್‌ ಅವರಿಗೆ ಅದೆಲ್ಲ ರುಚಿಸಲಿಲ್ಲ. ಅವರು ಸೈದ್ಧಾಂತಿಕ ರಾಜಕಾರಣದ ಮಾತು ಆಡುತ್ತ ರಾಜಕೀಯಕ್ಕೆ ಬಂದರೂ ಬಹುಬೇಗ ವ್ಯಾವಹಾರಿಕ ರಾಜಕೀಯದ ಮಹತ್ವವನ್ನು ಅರಿತುಕೊಂಡಿದ್ದರು. ಈಗ ಅವರ ಪಕ್ಷ, ಹಿಂದೆ ಎದುರಿಸಿದ ಮತ್ತು ಮುಂದೆಯೂ ಎದುರಿಸಬೇಕಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ಭಿನ್ನ ಎಂದು ಜನರಿಗೆ ಅನಿಸುತ್ತಿಲ್ಲ.

ಎಎಪಿ ಬರೀ ಬಿಜೆಪಿ ಅಥವಾ ಕಾಂಗ್ರೆಸ್‌ ವಿರೋಧಿ ರಾಜಕಾರಣ ಮಾಡಬೇಕು ಎಂದ ಯೋಗೇಂದ್ರ ಯಾದವ್‌ ಅವರಂಥವರು  ಚಿಂತಿಸಿರಲಿಲ್ಲ. ಅದು ಹಾಲಿ ‘ವ್ಯವಸ್ಥೆ’ಯ ವಿರೋಧಿ ರಾಜಕಾರಣ ಮಾಡಬೇಕು ಎಂದು ಆಶಿಸಿದ್ದರು. ಚುನಾವಣೆಯಲ್ಲಿ ಸಿಗುವ ಯಶಸ್ಸಿಗಿಂತ ಆಡಳಿತದ ವಿಧಾನದಲ್ಲಿ ಸಿಗುವ ಯಶಸ್ಸು ಮತ್ತು ಆ ಮೂಲಕ ಜನರ ಜೀವನ ಮಟ್ಟದಲ್ಲಿ ಆಗುವ ಬದಲಾವಣೆ ಮುಖ್ಯ ಎಂದೂ ಅವರು ಭಾವಿಸಿದ್ದರು. ಏಕೆಂದರೆ ಎಎಪಿಗೆ ಇರುವುದು ಬಹಳ ಸೀಮಿತವಾದ ಶಕ್ತಿ. ಅದನ್ನು ವ್ಯರ್ಥ ವಿಚಾರಗಳಲ್ಲಿ ಪೋಲು ಮಾಡದೆ ದೇಶಕ್ಕೆ ಒಂದು ಮಾದರಿಯನ್ನು ಕೊಡಬೇಕಿತ್ತು. ಕೇಜ್ರಿವಾಲ್‌ ಅವರೇ ಈ ಹೊಸ ದೃಷ್ಟಿಯನ್ನು ಕಳೆದುಕೊಂಡಿದ್ದಾರೋ ಅಥವಾ ಅವರ ಪಕ್ಷದಲ್ಲಿ ಇದ್ದವರು ಅವರ ಕಾಲಿಗೆ ಕಟ್ಟಿದ ಹೆಣಭಾರವಾಗಿದ್ದಾರೋ? ಅಥವಾ ಎರಡೂ ಸೇರಿಕೊಂಡಿದೆಯೋ? ಉತ್ತರ ಬಹಳ ಕಷ್ಟಕರವಾಗಿಯೇನೂ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry