7

ಧರ್ಮ ಉತ್ತರವಲ್ಲ, ಸಮಸ್ಯೆಯ ಮೂಲ

ರಾಮಚಂದ್ರ ಗುಹಾ
Published:
Updated:
ಧರ್ಮ ಉತ್ತರವಲ್ಲ, ಸಮಸ್ಯೆಯ ಮೂಲ

ಸಾಹಿತ್ಯದ ನೊಬೆಲ್ ಪ್ರಶಸ್ತಿಯ ಪ್ರಮುಖ ಸ್ಪರ್ಧಿ ಎಂದು ಆಗಾಗ ಉಲ್ಲೇಖಗೊಳ್ಳುವ ಸಿರಿಯಾದ ಶ್ರೇಷ್ಠ ಕವಿ ಅಡೋನಿಸ್ ಅವರ ಇತ್ತೀಚಿನ ಸಂದರ್ಶನ ಓದುತ್ತಿದ್ದೆ. ಪಶ್ಚಿಮ ಏಷ್ಯಾದಲ್ಲಿ ಇಸ್ಲಾಂ ಮೂಲಭೂತವಾದದ ವರ್ಧನೆ ಮತ್ತು ಅವರದೇ ದೇಶದಲ್ಲಿನ ಹಿಂಸಾತ್ಮಕ ಸಂಘರ್ಷದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ: ‘ಧರ್ಮ ಮತ್ತು ಸರ್ಕಾರ ಪ್ರತ್ಯೇಕಗೊಳ್ಳದೇ ಹೋದರೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಧರ್ಮವನ್ನು ರಾಜಕೀಯ, ಸಂಸ್ಕೃತಿ, ಸಮಾಜದಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಾಗದೆ ಹೋದರೆ ಯಾವ ಬದಲಾವಣೆಯೂ ಸಾಧ್ಯವಾಗದು ಮತ್ತು ಅರಬ್ಬರ ಅವನತಿ ಇನ್ನಷ್ಟು ತೀವ್ರಗೊಳ್ಳುತ್ತದೆ.ಈಗ ಧರ್ಮ ಸಮಸ್ಯೆಗಳಿಗೆ ಪರಿಹಾರವಾಗಿ ಉಳಿದಿಲ್ಲ. ಬದಲಿಗೆ ಧರ್ಮವೇ ಸಮಸ್ಯೆಯ ಮೂಲವಾಗಿದೆ. ಹಾಗಾಗಿಯೇ ಅದು ಪ್ರತ್ಯೇಕಗೊಳ್ಳಬೇಕಾಗಿದೆ. ಪ್ರತಿ ಸ್ವತಂತ್ರ ವ್ಯಕ್ತಿಯೂ ತಾನೇನು ಬಯಸುತ್ತಾನೋ ಅದನ್ನು ನಂಬುತ್ತಾನೆ. ನಾವು ಅದಕ್ಕೆ ಗೌರವ ಕೊಡಬೇಕು. ಆದರೆ ಧರ್ಮ ಸಮಾಜದ ತಳಹದಿಯಾಗಬೇಕೇ? ಖಂಡಿತ ಇಲ್ಲ’.ಭಾರತದಲ್ಲಿ ಧರ್ಮ ಮತ್ತು ಸರ್ಕಾರವನ್ನು ಸಮ್ಮಿಲನಗೊಳಿಸುತ್ತಿರುವವರಲ್ಲಿ ಮುಖ್ಯರಾದವರು ಸಂಘ ಪರಿವಾರದ ಸಿದ್ಧಾಂತಿಗಳು. ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಬಹಳ ಹಿಂದೆಯೇ ಅವರು ಬಯಸಿದ್ದರು. ಸಂತರು ಮತ್ತು ಶಂಕರಾಚಾರ್ಯರು ಏನು ಯೋಚಿಸುತ್ತಿದ್ದರು ಅಥವಾ ‘ಹಿಂದೂ’ ತತ್ವಗಳೆಂದು ಯಾವುದನ್ನು ಹೇಳಲಾಗುತ್ತಿದೆ ಅದರ ಆಧಾರದಲ್ಲಿ ಸರ್ಕಾರದ ನೀತಿಗಳು ನಿರ್ಧಾರವಾಗಬೇಕು ಎಂದು ಅವರು ಬಯಸುತ್ತಾರೆ.

ಈ ಚಿಂತನೆಯನ್ನು ಭಾರತದ ಸಂವಿಧಾನವು ತಿರಸ್ಕರಿಸಿದೆ. ಆದರೆ ಇದು, ಬಿಜೆಪಿ ಅಧಿಕಾರದಲ್ಲಿದ್ದಾಗ ‘ಹಿಂದೂ’ ಎಂದು ಅವರು ಪರಿಗಣಿಸುವ ರೀತಿಯಲ್ಲಿ ಸಾರ್ವಜನಿಕ ನೀತಿಯನ್ನು ಮರು ರೂಪಿಸುವ ಕೆಲಸದಿಂದ ಅವರನ್ನು ಹಿಮ್ಮೆಟ್ಟುವಂತೆ ಮಾಡಿಲ್ಲ.ಅಡೋನಿಸ್ ಅವರ ಮಾತುಗಳು ಅರಬ್ ಜಗತ್ತಿನಲ್ಲಿ ನೆಲೆಸಿರುವ ಮುಸ್ಲಿಮರನ್ನು ಉದ್ದೇಶಿಸಿ ಹೇಳಿದ್ದಾಗಿದೆ. ‘ಇಸ್ಲಾಂ’ ತತ್ವಗಳು ತಾವು ಹೇಳುವ ರೀತಿಯಲ್ಲಿಯೇ ಸಮಾಜಗಳು, ಸರ್ಕಾರಗಳು ಮರುರೂಪುಗೊಳ್ಳಬೇಕು ಎಂದು ಬಯಸುವ ಸಿದ್ಧಾಂತಿಗಳ ಬಲೆಯೊಳಗೆ ಅರಬ್ ಜಗತ್ತಿನ ಹೆಚ್ಚಿನ ಜನರು ಬಿದ್ದಿದ್ದಾರೆ.ಅಡೋನಿಸ್ ಅವರ ಎಚ್ಚರಿಕೆ ಮಾತುಗಳು ಭಾರತದಲ್ಲಿರುವ ಹಿಂದೂಗಳಿಗೂ ಅನ್ವಯವಾಗುತ್ತವೆ. ಇದೇ ಮಾತುಗಳು ಅದೇ ಪ್ರಮಾಣದಲ್ಲಿ ನಮ್ಮ ದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿರುವ ಕಾಶ್ಮೀರ ಕಣಿವೆಗೂ ಅನ್ವಯವಾಗುತ್ತವೆ. ಕಳೆದ ಕೆಲವು ದಶಕಗಳಲ್ಲಿ ಕಾಶ್ಮೀರಿಗಳನ್ನು ಅಸಹನೀಯವಾಗಿ ನಡೆಸಿಕೊಂಡದ್ದಕ್ಕೆ ಭಾರತ ಸಾಕಷ್ಟು ಪ್ರಮಾಣದಲ್ಲಿ ಕ್ಷಮೆಯಾಚನೆ ನಡೆಸಬೇಕಿದೆ ಮತ್ತು ರಾಜಿ ಸಂಧಾನಕ್ಕೆ ಮುಂದಾಗಬೇಕಿದೆ ಎಂದು ಶುಕ್ರವಾರ  (ಸೆ. 2) ಪ್ರಕಟವಾದ ಅಂಕಣದಲ್ಲಿ ನಾನು ವಾದಿಸಿದ್ದೇನೆ. ಆದರೆ, ವಾಸ್ತವದಲ್ಲಿ, ಕಾಶ್ಮೀರದ ಕೆಲವರು ಕೂಡ ತಮ್ಮ ಕೃತ್ಯಗಳಿಗಾಗಿ ಕ್ಷಮೆ ಯಾಚಿಸಬೇಕಾದ ಅಗತ್ಯ ಇದೆ. ತಮ್ಮದೇ ಭಾಷೆ ಮಾತನಾಡುವ, ತಾವು ತಿನ್ನುವ ಆಹಾರವನ್ನೇ ತಿನ್ನುವ, ತಾವು ಹಾಡುವ ಹಾಡುಗಳನ್ನೇ ಹಾಡುವ ಆದರೆ ತಾವು ಅನುಸರಿಸುವ ಇಸ್ಲಾಂ ಧರ್ಮಕ್ಕೆ ಸೇರಿದವರಲ್ಲ ಎಂಬ ಕಾರಣಕ್ಕೆ ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಹೊರದಬ್ಬಿದ್ದಕ್ಕೆ ಕಾಶ್ಮೀರಿಗಳು ಕ್ಷಮೆ ಕೇಳಬೇಕಿದೆ.ಸೋನಿಯಾ ಜಬ್ಬಾರ್ ಅವರಂಥ ಸ್ವತಂತ್ರ ಚಿಂತನೆಯ ದಿಟ್ಟ ಪತ್ರಕರ್ತರು ಕಾಶ್ಮೀರಿ ಪಂಡಿತರ ದುರಂತದ ಬಗ್ಗೆ ವರದಿ ಮಾಡಿದ್ದಾರೆ. ನಂತರದಲ್ಲಿ ಈ ವಿಷಯವನ್ನೇ ಕೇಂದ್ರವಾಗಿಸಿಕೊಂಡು ಪಂಡಿತ ಸಮುದಾಯಕ್ಕೆ ಸೇರಿದ ಹಲವರು ಮನಮುಟ್ಟುವ ಕಥನಗಳನ್ನು ಬರೆದಿದ್ದಾರೆ (ರಾಹುಲ್ ಪಂಡಿತ ಅವರ ‘ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್’ ಮತ್ತು ಸಿದ್ದಾರ್ಥ ಗಿಗೂ, ವರದ ಶರ್ಮಾ ಅವರ ಸಂಪಾದಕತ್ವದ ‘ಎ ಲಾಂಗ್ ಡ್ರೀಮ್ ಹೋಮ್’ ಕೃತಿಗಳನ್ನು ಇಲ್ಲಿ ವಿಶೇಷವಾಗಿ ಉಲ್ಲೇಖಿಸಬಹುದು). ಕಣಿವೆಯೇ ತಮ್ಮ ತವರು ಎಂದು ಪರಿಗಣಿಸುವ ಪಂಡಿತರು ಅಲ್ಲಿಂದ ಹೊರ ಹೋಗುವುದಕ್ಕೆ ಕಾರಣವಾದ ಬೆದರಿಕೆ, ಕಿರುಕುಳ, ಘೋರ ಹಿಂಸೆಯನ್ನು ಈ ಪುಸ್ತಕಗಳು ದಾಖಲಿಸಿವೆ.ಇಸ್ಲಾಂನ ಹೆಸರಿನಲ್ಲಿ ಕೆಲಸ ಮಾಡುವ ಜನರೇ ಪಂಡಿತರನ್ನು ಕಣಿವೆಯಿಂದ ಓಡಿಸಿದ್ದಾರೆ ಎಂಬ ಸಾಕ್ಷ್ಯಗಳು ವಿಶ್ವಾಸಾರ್ಹವೂ, ಗಣನೀಯವೂ ಆಗಿವೆ. ಆದರೆ ಏನು ನಡೆಯಿತು ಎಂಬುದನ್ನು ಕಾಶ್ಮೀರದಲ್ಲಿ ಉಳಿದಿರುವ ಕಾಶ್ಮೀರಿಗಳು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಿದ್ದಾರೆ. ಆಗ ಕಾಶ್ಮೀರದ ರಾಜ್ಯಪಾಲರಾಗಿದ್ದ ಜಗಮೋಹನ್ ಅವರು, ಪಲಾಯನ ಮಾಡುವಂತೆ ಪಂಡಿತರಿಗೆ ಸೂಚಿಸಿದರು ಅಥವಾ ಆದೇಶಿಸಿದರು ಎಂಬ ಈಗ ಸಂಪೂರ್ಣವಾಗಿ ಸುಳ್ಳು ಎನಿಸಿಕೊಂಡಿರುವ ವಾದವನ್ನು ಕಾಶ್ಮೀರದ ವಿದ್ಯಾವಂತ ಮತ್ತು ಸಾಕಷ್ಟು ‘ಪ್ರಗತಿಪರರು’ ಎಂದು ಹೇಳಿಕೊಳ್ಳುತ್ತಿರುವ ಕಾಶ್ಮೀರಿಗಳೂ ಪ್ರತಿಪಾದಿಸುತ್ತಿದ್ದಾರೆ.ಇನ್ನೂ ಒಂದು ಹೆಜ್ಜೆ ಮುಂದೆ ಹೋಗುವ ಕೆಲವರು, ಪಂಡಿತರು ಐಬಿ ಮತ್ತು ರಾ ಏಜೆಂಟರಾಗಿದ್ದು ಅವರು ಪಲಾಯನ ಮಾಡಬೇಕಾದವರೇ ಎನ್ನುತ್ತಿದ್ದಾರೆ. ಗ್ರೇಟರ್ ಕಾಶ್ಮೀರ್ ಎಂಬ ವೆಬ್‌ಸೈಟ್‌ನಲ್ಲಿರುವ ಒಂದು ಲೇಖನ ಹೀಗೆ ಹೇಳುತ್ತದೆ: ‘ಶತಮಾನಗಳಿಂದ ಅಲ್ಲದಿದ್ದರೂ ಕಳೆದ ಕೆಲವು ದಶಕಗಳಿಂದ ಎಲ್ಲ ತಲೆಮಾರುಗಳ ಕಾಶ್ಮೀರಿ ಮುಸ್ಲಿಮರು ಕಾಶ್ಮೀರಿ ಪಂಡಿತರ ಬಗ್ಗೆ ಬೇಷರತ್ ವಿಶ್ವಾಸ ಇರಿಸಿಕೊಂಡಿದ್ದರೂ ಭಾರತ ಸರ್ಕಾರದ ಜತೆ ಸೇರಿಕೊಂಡಿರುವ ಪಂಡಿತರು ಕಾಶ್ಮೀರದ ಮುಸ್ಲಿಂ ಸಹೋದರರಿಗೆ ಪೀಡಕರಾಗಿ ಪರಿವರ್ತಿತರಾಗಿದ್ದಾರೆ’.ಕಾಶ್ಮೀರದ ಈ ಚಿಂತಕರು ಎರಡು ಅಂಶಗಳನ್ನು ನಿರಾಕರಿಸುತ್ತಿದ್ದಾರೆ. ಮೊದಲನೆಯದು ಪಂಡಿತರು ಕಾಶ್ಮೀರದಿಂದ ಹೇಗೆ ಮತ್ತು ಯಾಕೆ ಪಲಾಯನ ಮಾಡಿದರು ಎಂಬುದು. ಎರಡನೆಯದು, ಕಾಶ್ಮೀರದ ‘ಆಜಾದಿ’ ಚಳವಳಿಯ ಬದಲಾದ ಚಹರೆ. ಒಂದು ಕಾಲದಲ್ಲಿ ಜಾತ್ಯತೀತ ಮತ್ತು ಧರ್ಮಾತೀತವಾಗಿದ್ದ ಚಳವಳಿ ಈಗ ಹೆಚ್ಚು ಹೆಚ್ಚಾಗಿ ಧರ್ಮದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈಗ ಚಳವಳಿ ಕಾಶ್ಮೀರದ ಅಸ್ಮಿತೆಗಿಂತ ಹೆಚ್ಚಾಗಿ ಇಸ್ಲಾಂನ ಹೆಸರಲ್ಲಿ ನಡೆಯುತ್ತಿದೆ.ಇತ್ತೀಚಿನ ವಾರಗಳಲ್ಲಿ ಕಣಿವೆಯಿಂದ ಘೋರವಾದ ಚಿತ್ರಣಗಳು ಹೊರಬರುತ್ತಿವೆ. ಇದರಲ್ಲಿ ಅತಿ ಹೆಚ್ಚು ಘೋರವಾಗಿರುವುದು ಭಾರತದ ಭದ್ರತಾ ಪಡೆಗಳು ಹಾರಿಸಿದ ಪೆಲೆಟ್‌ಗಳಿಂದಾಗಿ ಕಣ್ಣು ಕಳೆದುಕೊಂಡ ಯುವಕ ಯುವತಿಯರದ್ದಾಗಿದೆ.ಕಾಶ್ಮೀರಿ ನಾಗರಿಕರ ಮೇಲೆ ಆಗಿರುವ ಈ ಗಾಯಗಳು, ಸಾವು ಮತ್ತು ಕಣ್ಣು ಕಳೆದುಕೊಳ್ಳುವಿಕೆ ಭಾರತದ ಎಲ್ಲರಿಗೂ ಅವಮಾನ ತರುವಂತಹುದು. ಆದರೆ, ಹೆಚ್ಚು ಜನರು ಗಮನಿಸಿಲ್ಲದ ಇನ್ನೊಂದು ಚಿತ್ರದತ್ತ ಗಮನ ಸೆಳೆಯಲು ಬಯಸುತ್ತೇನೆ.ಇದು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯಲ್ಲಿ ಪ್ರಕಟವಾದ ಎಎಫ್‌ಪಿ  ಸಂಸ್ಥೆ ತೆಗೆದಿರುವ ಚಿತ್ರ. ಬಹುತೇಕ ಹದಿನೆಂಟರೊಳಗಿನ ಹುಡುಗರು ನಡೆಸಿದ ಪ್ರತಿಭಟನಾ ಪ್ರದರ್ಶನದ ಚಿತ್ರ ಇದು- ಇವರಲ್ಲಿ ಕೆಲವರು 12ಕ್ಕೂ ಕಡಿಮೆ ವಯಸ್ಸಿನವರು. ಭಾರತ ಸರ್ಕಾರದ ವಿರುದ್ಧ ಕಾಶ್ಮೀರ ಹೋರಾಟದ ಮುಖ್ಯ ಸಿದ್ಧಾಂತಿಯಾಗಿರುವ ಟೋಪಿ ಧರಿಸಿದ ಗಡ್ಡಧಾರಿ ವೃದ್ಧನ ಚಿತ್ರವನ್ನು ಪ್ರತಿಯೊಬ್ಬರೂ ಹಿಡಿದುಕೊಂಡಿದ್ದಾರೆ.ಇಲ್ಲಿ ಒಂದು ಸಂಕೇತವಾಗಿ ಬಳಕೆಯಾಗಿರುವ ವ್ಯಕ್ತಿ ಸಯ್ಯದ್ ಅಲಿ ಷಾ ಗಿಲಾನಿ. ಧರ್ಮ, ಸರ್ಕಾರ ಮತ್ತು ಸಮಾಜದ ಬಗ್ಗೆ ಗಿಲಾನಿ ನಿಲುವು ಏನು ಎಂಬುದು ಈ ಹುಡುಗರು ಅಥವಾ ಅವರ ಸಹೋದರಿಯರು, ತಾಯಿ ತಂದೆಯರಿಗೆ ಅರಿವಿರಬಹುದು ಎಂಬ ಬಗ್ಗೆ ನನಗೆ ಅನುಮಾನ ಇದೆ. 

ಕಾಶ್ಮೀರದಲ್ಲಿ ಕಳೆದ ಬಾರಿ ನಡೆದ ಗಲಭೆಯ ನಂತರ 2010ರ ಅಕ್ಟೋಬರ್‌ನಲ್ಲಿ ವಿದ್ವಾಂಸ ಯೋಗೀಂದರ್ ಸಿಕಂದ್ ನಡೆಸಿದ ಗಿಲಾನಿ ಅವರ ಸಂದರ್ಶನವನ್ನು ಮತ್ತೆ ಗಮನಿಸಿದೆ. ‘ಮುಸ್ಲಿಮರು ತಮ್ಮ ಪ್ರತಿ ಕೃತ್ಯದಲ್ಲಿಯೂ ಇಸ್ಲಾಂನ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು- ಪ್ರಾರ್ಥನೆಗೆ ಮಾತ್ರವಲ್ಲ ಯುದ್ಧ ಮತ್ತು ಶಾಂತಿ, ವ್ಯಾಪಾರ, ಅಂತರರಾಷ್ಟ್ರೀಯ ಸಂಬಂಧ ಮುಂತಾದ ಎಲ್ಲದಕ್ಕೂ ಇದು ಅನ್ವಯ. ಯಾಕೆಂದರೆ ಇಸ್ಲಾಂ ಎಂಬುದು ಒಂದು ಸಂಪೂರ್ಣ ಜೀವನ ವಿಧಾನ’ ಎಂದು ಅವರು ಹೇಳಿದ್ದಾರೆ.‘ಒಬ್ಬ ನಿಜವಾದ ಮುಸ್ಲಿಂ ಯಾವುದೇ ಹೋರಾಟದಲ್ಲಿ ಭಾಗವಹಿಸುವುದು ಇಸ್ಲಾಂಗಾಗಿಯೇ ಆಗಿರುತ್ತದೆ. ಹಾಗಾಗಿ, ಕಾಶ್ಮೀರ ಸಂಘರ್ಷಕ್ಕೆ ಇಸ್ಲಾಂ ಜತೆ ಸಂಬಂಧ ಇಲ್ಲ ಎಂದು ಹೇಳುವುದು ಹೇಗೆ’ ಎಂದು ಅವರು ಪ್ರಶ್ನಿಸುತ್ತಾರೆ. ಇದಕ್ಕೆ ಗಿಲಾನಿ ಮತ್ತೊಂದು ಮಾತನ್ನೂ ಸೇರಿಸುತ್ತಾರೆ: ‘ಇಂತಹ ಪ್ರಜ್ಞೆ ಇರುವ ಕಾಶ್ಮೀರಿ ಮುಸ್ಲಿಮರಿಗೆ ಇದೊಂದು ಧಾರ್ಮಿಕ ವಿಷಯವೇ ಆಗಿದೆ ಮತ್ತು ಈ ಹೋರಾಟದಲ್ಲಿ ಅವರು ಮಾಡುವ ತ್ಯಾಗ ಧರ್ಮಕ್ಕಾಗಿಯೇ ಆಗಿರುತ್ತದೆ’.ಹಿಂದೂಗಳು ಮತ್ತು ಮುಸ್ಲಿಮರು ‘ಸಂಪೂರ್ಣವಾಗಿ ಎರಡು ಪ್ರತ್ಯೇಕ ದೇಶಗಳು. ಈ ಬಗ್ಗೆ ಯಾವ ಅನುಮಾನವೂ ಇಲ್ಲ’ ಎಂದು ಗಿಲಾನಿ ಪ್ರತಿಪಾದಿಸುತ್ತಾರೆ. ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಮುಸ್ಲಿಮರು ಜೀವಿಸುವುದಕ್ಕೆ ಆಗುವುದಿಲ್ಲ ಎಂಬುದನ್ನು ಅವರು ಹೀಗೆ ವಿವರಿಸುತ್ತಾರೆ: ‘ಇಸ್ಲಾಂ ಆಡಳಿತ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ ಸಂಪೂರ್ಣ ಇಸ್ಲಾಂ ನಿಯಮಗಳಿಗೆ ಅನುಸಾರವಾಗಿ ಮುಸ್ಲಿಮರು ಜೀವನ ನಡೆಸುವುದಕ್ಕೆ ಆಗುವುದಿಲ್ಲ.

ಯಾಕೆಂದರೆ ಈ ನಿಯಮಗಳು ವೈಯಕ್ತಿಕ ವ್ಯವಹಾರಗಳಿಗೆ ಹೇಗೆ ಅನ್ವಯ ಆಗುತ್ತವೆಯೋ ಅದೇ ರೀತಿಯಲ್ಲಿ ಸಾಮಾಜಿಕ ವ್ಯವಹಾರಗಳಿಗೂ ಅನ್ವಯವಾಗುತ್ತವೆ’. ಹಾಗಾಗಿ, ‘ತಾವು ನೆಲೆಸಿರುವ ಪ್ರದೇಶದಲ್ಲಿ ಇಸ್ಲಾಂ ಆಡಳಿತ ವ್ಯವಸ್ಥೆ ಸ್ಥಾಪಿಸಲು ಮತ್ತು ಆ ಮೂಲಕ ಪೂರ್ಣವಾಗಿ ಇಸ್ಲಾಂ ಮತ್ತು ಅದರ ನಿಯಮಗಳಿಗೆ ಅನುಸಾರ ಬದುಕಲು ಪ್ರಯತ್ನಿಸಬೇಕು. ಇಸ್ಲಾಂ ಧರ್ಮ ಪ್ರಚಾರದ ಕೆಲಸ, ಪ್ರಾರ್ಥನೆ ಮತ್ತು ಬಡವರಿಗೆ ದಾನ ನೀಡುವಷ್ಟೇ ಮುಖ್ಯವಾದ ಕೆಲಸಗಳಾಗಿವೆ’.ಈ ಸಂದರ್ಶನವಲ್ಲದೆ, ಸಿಕಂದ್ ಅವರು ‘ಜಿಹಾದ್, ಇಸ್ಲಾಂ ಅಂಡ್ ಕಾಶ್ಮೀರ್: ಸಯ್ಯದ್ ಅಲಿ ಗಿಲಾನೀಸ್ ಪೊಲಿಟಿಕಲ್ ಪ್ರಾಜೆಕ್ಟ್’ ಎಂಬ ಲೇಖನವನ್ನು 2010 ಅಕ್ಟೋಬರ್ 2ರ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ ನಿಯತಕಾಲಿಕದಲ್ಲಿ ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ ಗಿಲಾನಿ ಬರೆದ ಎರಡು ಪ್ರಮುಖ ಪತ್ರಗಳನ್ನು ಸಿಕಂದ್ ಉಲ್ಲೇಖಿಸುತ್ತಾರೆ. ಮೊದಲನೆಯದು 1994ರಲ್ಲಿ ಆಗಿನ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರಿಗೆ ಬರೆದ ಪತ್ರ.ಅದರಲ್ಲಿರುವ ವಾದ ಹೀಗಿದೆ: ‘ತಮ್ಮ ಧರ್ಮ, ಸಂಸ್ಕೃತಿ, ನಾಗರಿಕತೆ, ಪದ್ಧತಿಗಳು ಮತ್ತು ಚಿಂತನೆಯಿಂದಾಗಿ ಮುಸ್ಲಿಮರು ಸಂಪೂರ್ಣವಾಗಿ ಪ್ರತ್ಯೇಕ ರಾಷ್ಟ್ರ. ತಾಯ್ನಾಡು, ಜನಾಂಗೀಯತೆ, ಭಾಷೆ, ಬಣ್ಣ ಅಥವಾ ಆರ್ಥಿಕ ವ್ಯವಸ್ಥೆಯಂತಹ ಅಂಶಗಳು ಅವರ ರಾಷ್ಟ್ರೀಯತೆ ಮತ್ತು ಒಗ್ಗಟ್ಟಿನ ತಳಹದಿಯಾಗಲು ಸಾಧ್ಯವಿಲ್ಲ. ಅವರ ಒಗ್ಗಟ್ಟಿನ ತಳಪಾಯ ಇಸ್ಲಾಂ ಮತ್ತು ಇಸ್ಲಾಂ ಮಾತ್ರ ಮತ್ತು ಅಲ್ಲಾಹ್ ಅಲ್ಲದೆ ಬೇರೆ ದೇವರಿಲ್ಲ ಹಾಗೂ ಮುಹಮ್ಮದ್ ಆತನ ಪ್ರವಾದಿ ಎಂಬುದಾಗಿದೆ’.ಎರಡನೆಯ ಪತ್ರ 1993ರಲ್ಲಿ ಪಾಕಿಸ್ತಾನದ ಆಗಿನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಬರೆದದ್ದಾಗಿದೆ. ಈ ಪತ್ರದಲ್ಲಿ ಪಾಕಿಸ್ತಾನವನ್ನು ‘ಎಲ್ಲ ಕಾಶ್ಮೀರಿಗಳ ಕನಸಿನ ನೆಲ’ ಎಂದು ಬಣ್ಣಿಸಲಾಗಿದೆ. ‘ಇಸ್ಲಾಂನ ಹೆಸರಿನಲ್ಲಿ ಈ ನೆಲವನ್ನು ಗೆದ್ದುಕೊಳ್ಳಲಾಗಿದೆ’ ಎಂದು ಕನಸಿನ ನೆಲ ಎನ್ನುವುದಕ್ಕೆ ಅವರು ಕಾರಣ ಕೊಟ್ಟಿದ್ದಾರೆ.‘ರಾಜ್ಯದಲ್ಲಿರುವ ಮುಸ್ಲಿಮೇತರರ ರಾಜಕೀಯ ಆಕಾಂಕ್ಷೆಗಳ ಬಗ್ಗೆ ಗಿಲಾನಿಗೆ ಸಂಪೂರ್ಣ ಅಸಡ್ಡೆ ಇದ್ದಂತೆ ಕಾಣಿಸುತ್ತಿದೆ. ಗಿಲಾನಿ ಒತ್ತಾಯಿಸುವಂತೆ ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದರೆ ಅಥವಾ ಮೌದೂದಿ ಪಂಥದ ಶೈಲಿಯ ‘ಇಸ್ಲಾಂ ರಾಷ್ಟ್ರ’ವಾದರೆ ಅಲ್ಲಿ ಶೋಷಣೆ ಮತ್ತು ತಾರತಮ್ಯಕ್ಕೆ ಒಳಗಾಗಿ ಬದುಕಬೇಕಾದ ಮುಸ್ಲಿಮೇತರರ ಆತಂಕದ ಬಗ್ಗೆಯೂ ಗಿಲಾನಿಗೆ ತಾತ್ಸಾರ ಇದೆ’ ಎಂದು ಗಿಲಾನಿ ಜತೆಗಿನ ಸಂದರ್ಶನಗಳು ಹಾಗೂ ಆತನ ಬಗೆಗಿನ ಅಧ್ಯಯನದ ಆಧಾರದಲ್ಲಿ ಸಿಕಂದ್ ಹೇಳುತ್ತಾರೆ. ಅದಕ್ಕೆ ಇನ್ನೂ ಒಂದು ಅಂಶವನ್ನು ನಾನು ಸೇರಿಸಲು ಬಯಸುತ್ತೇನೆ. ‘ಇಸ್ಲಾಂ’ ದೇಶದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿ ಕೆಟ್ಟದಾಗಿದ್ದರೆ ಅಲ್ಲಿ ಮಹಿಳೆಯರ (ಮುಸ್ಲಿಂ ಮಹಿಳೆಯರದ್ದು ಕೂಡ) ಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ.2010ರ ನಂತರ ಗಿಲಾನಿಯ ನಿಲುವುಗಳಲ್ಲಿ ಬದಲಾವಣೆ ಆಗಿಲ್ಲ. ಈ ನಡುವೆ ಕಾಶ್ಮೀರಿ ಹೋರಾಟದ ಮೇಲೆ ಆತನ ಪ್ರಭಾವ ಹೆಚ್ಚಾಗಿದೆ. ಇಸ್ಲಾಂನ ಕಡಿಮೆ ತೀವ್ರತೆಯ ಆವೃತ್ತಿಯನ್ನು ಪ್ರತಿಪಾದಿಸುವ ಮೀರ್‌ವೈಜ್ ಒಮರ್ ಫಾರೂಕ್‌ನಂತಹ ಮುಖಂಡರು, ಮಹಾತ್ಮ ಗಾಂಧಿಯಿಂದ ಸ್ಫೂರ್ತಿ ಪಡೆದಿದ್ದೇವೆ ಎಂದು ಹೇಳಿಕೊಳ್ಳುವ ಯಾಸಿನ್ ಮಲಿಕ್‌ನಂಥವರು ಗಿಲಾನಿಯ ಇಚ್ಛೆಗೆ ಅನುಗುಣವಾಗಿ ಬಾಗಿರುವುದೇ ಆತನ ಪ್ರಭಾವ ಹೆಚ್ಚಲು ಕಾರಣ. ಕಾಶ್ಮೀರಿ ಪ್ರತ್ಯೇಕತಾವಾದದಲ್ಲಿ ಕಾಣಿಸಿಕೊಂಡಿರುವ ಹೆಚ್ಚು ಸಾಮಾನ್ಯವಾದ ಪ್ರವೃತ್ತಿಯೊಂದನ್ನು ಇದು ಪ್ರತಿಬಿಂಬಿಸುತ್ತದೆ- ಕಾಶ್ಮೀರ ಹೋರಾಟ ಹೆಚ್ಚು ಹೆಚ್ಚಾಗಿ ಇಸ್ಲಾಂವಾದಿ ಚಹರೆ ಪಡೆದುಕೊಳ್ಳುತ್ತಿದೆ.ಕಾಶ್ಮೀರದಲ್ಲಿ ದೊಡ್ಡ ಖಳರೆಂದರೆ ಭಾರತ ಸರ್ಕಾರದ ಏಜೆಂಟರು ಮತ್ತು ಸರ್ಕಾರ ರೂಪಿಸಿರುವ ವ್ಯವಸ್ಥೆಗಳು. ಕಾಶ್ಮೀರಿಗಳ ಹಿಂದಿನ ಮತ್ತು ಈಗಿನ ನೋವುಗಳ ದೊಡ್ಡ ಜವಾಬ್ದಾರಿಯನ್ನು ಇವೇ ವಹಿಸಿಕೊಳ್ಳಬೇಕಾಗುತ್ತದೆ. ಆದರೆ, ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಿಕೊಳ್ಳುತ್ತಿರುವವರು ಮುಗ್ಧರೇನೂ ಅಲ್ಲ. ಪಂಡಿತರನ್ನು ಓಡಿಸುವ ಮೂಲಕ (ನಂತರ ಅದನ್ನು ನಿರಾಕರಿಸುವ ಮೂಲಕ ಕೂಡ), ನಂತರ ತಮ್ಮ ದುರ್ದೆಸೆಯನ್ನು ಇಸ್ಲಾಂ ದೃಷ್ಟಿಕೋನದಲ್ಲಿ ನೋಡಲು ಯತ್ನಿಸುವ ಮೂಲಕ ಅವರು ವರ್ತಮಾನದ ಮಾತ್ರವಲ್ಲ ಕಾಶ್ಮೀರದ ಭವಿಷ್ಯವನ್ನೂ ನಾಶಪಡಿಸುತ್ತಿದ್ದಾರೆ.ಶ್ರೇಷ್ಠ ಕವಿ ಅಡೋನಿಸ್ ಕಾಶ್ಮೀರದ ಇತ್ತೀಚಿನ ಇತಿಹಾಸವನ್ನು ಅರಿತುಕೊಂಡರೆ, ಕಾಶ್ಮೀರವನ್ನು ಭಾರತ ಸರ್ಕಾರ ನಿಭಾಯಿಸಿದ ರೀತಿಯ ಬಗ್ಗೆ ಕಠಿಣ ಪದಗಳನ್ನಾಡುವುದು ಖಚಿತ. ಈಗ ಹೋರಾಟ ನಡೆಸುತ್ತಿರುವವರ ಬಗ್ಗೆ ಅವರು ಸುಮ್ಮನಿದ್ದಾರು ಎಂದು ನನಗೆ ಅನಿಸುವುದಿಲ್ಲ.ಸಿರಿಯಾದ ತಮ್ಮ ಸಹಜೀವಿಗಳಿಗೆ ಹೇಳಿದಂತೆ ಕಾಶ್ಮೀರಿಗಳಿಗೂ ಅವರು ಹೀಗೆ ಹೇಳಿಯಾರು- ಧರ್ಮವು ವೈಯಕ್ತಿಕ ಆಶಾವಾದ ಅಥವಾ ಸಾಂತ್ವನದ ಮೂಲ. ಆದರೆ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳಿಗೆ ಬಂದರೆ, ‘ಯಾವುದೇ ಸಮಸ್ಯೆಗಳಿಗೆ ಧರ್ಮ ಈಗ ಉತ್ತರ ಅಲ್ಲ. ಬದಲಿಗೆ, ಧರ್ಮವೇ ಸಮಸ್ಯೆಗಳ ಮೂಲ’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry