ತಮಿಳುನಾಡಿಗೆ ನೀರು: ಸಂಕಷ್ಟದಲ್ಲಿ ಬೆಳೆ, ಬೆಳೆಗಾರ

7
ಕಾವೇರಿ ಕೊಳ್ಳದಲ್ಲಿ ಮಳೆ ಕೊರತೆ: ಜಲಾಶಯಗಳಲ್ಲಿ ಕಡಿಮೆಯಾದ ಜಲ ಸಂಗ್ರಹ

ತಮಿಳುನಾಡಿಗೆ ನೀರು: ಸಂಕಷ್ಟದಲ್ಲಿ ಬೆಳೆ, ಬೆಳೆಗಾರ

Published:
Updated:
ತಮಿಳುನಾಡಿಗೆ ನೀರು: ಸಂಕಷ್ಟದಲ್ಲಿ ಬೆಳೆ, ಬೆಳೆಗಾರ

ಮೈಸೂರು: ಕಾವೇರಿ ಕೊಳ್ಳದಲ್ಲಿ ಮಳೆ ಕೊರತೆಯಿಂದಾಗಿ ಮೈಸೂರು ಭಾಗದ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕಡಿಮೆಯಾಗಿದ್ದು, ಬೆಳೆಗಳಿಗೆ ನೀರಿನ ಕೊರತೆ ಉಂಟಾಗುವ ಮತ್ತು ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ.ತಮಿಳುನಾಡಿಗೆ ನೀರು ಹರಿಸಬೇಕು ಎಂದು ಸುಪ್ರೀಂಕೋರ್ಟ್‌ ನೀಡಿರುವ ಆದೇಶದಿಂದ ರೈತರು ಕಂಗಾಲಾಗಿದ್ದಾರೆ. ಕಾವೇರಿ ನೀರಾವರಿ ನಿಗಮವು ನಾಲೆಗಳಿಗೆ ಈಗ ನೀರು ಹರಿಸುವುದನ್ನು ನಿಲ್ಲಿಸಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.ಅಚ್ಚುಕಟ್ಟು ವ್ಯಾಪ್ತಿಗೊಳಪಡುವ ಜಿಲ್ಲೆಯ ಮೈಸೂರು, ಎಚ್‌.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ, ಕೆ.ಆರ್‌.ನಗರ ತಾಲ್ಲೂಕುಗಳ ರೈತರು ಅರೆ ನೀರಾವರಿ ಬೆಳೆಗಳಾದ ರಾಗಿ, ಜೋಳ, ಮುಸುಕಿನ ಜೋಳ ಮೊದಲಾದ ಪರ್ಯಾಯ ಬೆಳೆ ಅವಲಂಬಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ.ಸೆಪ್ಟೆಂಬರ್‌ 1ರಿಂದಲೇ ನಾಲೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವುದರಿಂದ ನಾಟಿಯಾಗಿರುವ ಬೆಳೆಗಳನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. 20–30 ದಿನಗಳ ಹಿಂದೆಯಷ್ಟೇ ಭತ್ತ ನಾಟಿ ಮಾಡಲಾಗಿದ್ದು, ಇನ್ನು 3–4 ತಿಂಗಳು ಬೆಳೆ ಕಾಪಾಡಬೇಕಿದೆ. ಕಬ್ಬು ಬೆಳೆ ಒಣಗುವ ಭೀತಿ ಎದುರಾಗಿದೆ.‘ತಮಿಳುನಾಡಿಗೆ ನೀರು ಹರಿಸಿದರೆ ಈ ಭಾಗದ ಅಚ್ಚುಕಟ್ಟು ವ್ಯಾಪ್ತಿಯ ಫಸಲು ಕೈಗೆ ಸಿಗುವುದಿಲ್ಲ. ಕುಡಿಯುವ ನೀರಿಗೆ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಪಟ್ಟಣಗಳಿಗೆ ಸುಮಾರು 40 ಟಿಎಂಸಿ ಅಡಿ ನೀರು ಬೇಕಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ’ ಎಂಬುದು ಜಲ ತಜ್ಞರ ವಿಶ್ಲೇಷಣೆ.ರೈತರ ಸಂಕಷ್ಟ:  ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿದು ಬರಲಿದೆ ಎಂಬ ಆಶಾಭಾವದಲ್ಲಿ ಭತ್ತ, ಕಬ್ಬು ಬೆಳೆದಿರುವ ಮಂಡ್ಯ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಜುಲೈ ತಿಂಗಳಿನಲ್ಲಿ ಸಭೆ ಸೇರಿದ್ದ ಕಾವೇರಿ ನೀರಾವರಿ ಸಲಹಾ ಸಮಿತಿಯು ಕಟ್ಟು ಪದ್ಧತಿಯಲ್ಲಿ (ಒಂದು ತಿಂಗಳಲ್ಲಿ 20 ದಿನ ನೀರು ಬಿಡುವುದು, 10 ದಿನ ಬಂದ್ ಮಾಡುವುದು) ನಾಲೆಗಳಿಗೆ ಡಿಸೆಂಬರ್ ಅಂತ್ಯದವರೆಗೆ ನೀರು ಹರಿಸುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಸಲಹಾ ಸಮಿತಿ ಘೋಷಣೆಯಿಂದ ಕೃಷಿ ಇಲಾಖೆಯು ಮುಂಗಾರು ಭತ್ತದ ನಾಟಿಗೆಂದು ರೈತರಿಗೆ ಭತ್ತದ ಬೀಜ ವಿತರಿಸಿತು. ಈಗಾಗಲೇ ಅರ್ಧದಷ್ಟು ರೈತರು ಒಟ್ಟಲು ಹಾಕಿಕೊಂಡು ನಾಟಿ ಮಾಡಿದ್ದಾರೆ. ಇನ್ನು ಕೆಲವರು ಒಟ್ಟಲು ಹಾಕಿದ್ದಾರೆ.ಆಗಸ್ಟ್‌ನಲ್ಲಿ ಸಭೆ ಸೇರಿದ್ದ ಕಾವೇರಿ ನೀರಾವರಿ ಸಲಹಾ ಸಮಿತಿಯು ನಾಲೆಗಳಿಗೆ ನೀರು ಹರಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಅಲ್ಲದೆ, ಅರೆ ನೀರಾವರಿ, ಅಲ್ಪಾವಧಿಯ ಬೆಳೆಗಳನ್ನು ಬೆಳೆಯುವಂತೆ ಸಲಹೆ ಮಾಡಿತ್ತು. ತಿಂಗಳಾಂತ್ಯದವರೆಗೆ ನೀರು ಬಿಡಲಾಗುವುದು. ನಂತರ, ಸೆ. 10ರಂದು ಸಭೆ ಸೇರಿ ತೀರ್ಮಾನಿಸಲಾಗುವುದು ಎಂದು ಹೇಳಿತ್ತು. ಆಗಲೇ ರೈತರು ಆತಂಕಕ್ಕೆ ಒಳಗಾಗಿದ್ದರು.ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಕಳೆದ ವರ್ಷ ಈ ವೇಳೆಗೆ 25.68 ಟಿಎಂಸಿ ಅಡಿಯಷ್ಟು ನೀರಿತ್ತು. ಈಗ ಡೆಡ್‌ ಸ್ಟೋರೇಜ್‌ ಹಾಗೂ ಕುಡಿಯುವ ನೀರಿಗೆಂದು 10 ಟಿಎಂಸಿ ಅಡಿಯಷ್ಟು ಹೊರತುಪಡಿಸಿದರೆ ಅಣೆಕಟ್ಟೆಯಲ್ಲಿ 8.27 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಹಾಸನ ಜಿಲ್ಲೆಯಲ್ಲೂ ಹೇಮಾವತಿ, ವಾಟೆ ಹೊಳೆ, ಯಗಚಿ ಜಲಾಶಯ ಭರ್ತಿಯಾಗದ ಕಾರಣ ಬೆಳೆಗಳು ಬಾಡುತ್ತಿವೆ. ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಗೆ 18 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಸದ್ಯ ಜಲಾಶಯದ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ.ಹಾಸನ ಜಿಲ್ಲೆಯಲ್ಲಿ ಈ ಬಾರಿ 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆಯಾಗಿದ್ದು, ನೀರಿಲ್ಲದೆ ಇಳುವರಿ ಕುಂಠಿತಗೊಂಡಿದೆ. ಶುಂಠಿ ಬೆಳೆಗೆ ಕೊಳೆ ರೋಗ ತಗುಲಿದೆ. ಹೊಳೆನರಸೀಪುರ ಭಾಗದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಮಳೆ ಇಲ್ಲದೆ ಒಣಗುತ್ತಿದೆ.‘92 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಗಳು ಒಣಗಿರುವುದನ್ನು ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ನಷ್ಟದ ಪ್ರಮಾಣದ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎನ್ನುತ್ತಾರೆ ಕೃಷಿ ಅಧಿಕಾರಿಗಳು.14 ವರ್ಷಗಳಲ್ಲಿ ನಾಲ್ಕು ಬಾರಿ ಮಾತ್ರ ಹೇಮಾವತಿ ಜಲಾಶಯ ಬರಿದಾಗಿದೆ. ಮುಂಗಾರು ಕೈಕೊಟ್ಟಿದ್ದರಿಂದ ಈ ಬಾರಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಹಾಸನ ನಗರಕ್ಕೆ ಹೇಮಾವತಿ ಜಲಾಶಯದಿಂದಲೇ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು, ಪ್ರಸ್ತುತ 2–3 ದಿನಕ್ಕೊಮ್ಮೆ  ನೀರು ಸರಬರಾಜು ಮಾಡಲಾಗುತ್ತಿದೆ. ನೀರನ್ನು ತಮಿಳುನಾಡಿಗೆ ಬಿಡದಿದ್ದರೆ ಮಾರ್ಚ್‌ ವರೆಗೆ ನಗರಕ್ಕೆ ಕುಡಿಯುವ ನೀರು ನಿರ್ವಹಣೆ ಮಾಡಬಹುದು ಎನ್ನುತ್ತಾರೆ ಅಧಿಕಾರಿಗಳು.ನೆರೆಯ ರಾಜ್ಯಕ್ಕೆ ನೀರು ಬಿಟ್ಟರೆ ಚಾಮರಾಜನಗರ ಜಿಲ್ಲೆಯ ಕಬಿನಿ ಬಲದಂಡೆ ನಾಲೆ ವ್ಯಾಪ್ತಿಯ ಜನ– ಜಾನುವಾರು ಸಂಕಷ್ಟದ ಸುಳಿಗೆ ಸಿಲುಕಲಿದ್ದಾರೆ.ಸಮರ್ಪಕವಾಗಿ ಮಳೆ ಬಂದರೆ ನಿರಂತರವಾಗಿ ನಾಲೆಗೆ ನೀರು ಹರಿಸುವುದಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂಗಾರು ಹಂಗಾಮಿನಲ್ಲಿ ತಿಳಿಸಿದ್ದರು. ಮುಂಗಾರು ಹಂಗಾಮಿನಡಿ ಕಬಿನಿ ಜಲಾಶಯವು ಭರ್ತಿಯಾಗುವ ಲಕ್ಷಣ ಕಂಡುಬಂದಿದ್ದರಿಂದ ಬಲದಂಡೆ ನಾಲೆಗೆ ಮೂರು ವಾರ ಕಾಲ ನೀರು ಹರಿಸಲಾಗಿತ್ತು.ಅಧಿಕಾರಿಗಳ ಮಾತು ನಂಬಿ ರೈತರು ಬತ್ತದ ಪೈರು ನಾಟಿ ಮಾಡಿದ್ದರು. ನಾಲೆಗೆ ನೀರು ಹರಿದ ವೇಳೆ ಮೊದಲೇ ಸಿದ್ಧತೆ ನಡೆಸಿದ್ದ ಕೆಲವು ರೈತರು ನಾಟಿ ಕಾರ್ಯ ಪೂರ್ಣಗೊಳಿಸಿದ್ದಾರೆ. ಮಳೆ ಇಲ್ಲದ ಪರಿಣಾಮ ಭತ್ತ ನಾಟಿ ಮಾಡಿರುವ ರೈತರು ದಿಕ್ಕೆಟ್ಟಿದ್ದಾರೆ. ಕಾವೇರಿ ನೀರಾವರಿ ನಿಗಮದ ಸೂಚನೆ ಅನ್ವಯ ಅನ್ನದಾತರು ಅರೆ ನೀರಾವರಿ ಬೆಳೆ ಬೆಳೆಯಬೇಕಿದೆ. ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ಬೆಳೆಯುತ್ತಾರೆ.ಕಬಿನಿ ಬಲದಂಡೆ ನಾಲೆ ಮೂಲಕವೇ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ತಾಲ್ಲೂಕಿನ 17 ಕೆರೆಗಳಿಗೆ ನೀರು ತುಂಬಿಸಬೇಕಿದೆ. ಮಳೆ ಇಲ್ಲದೆ ಈ ಕೆರೆಗಳು ಒಣಗಿವೆ. ನಾಲೆಯಲ್ಲಿ ನೀರು ಹರಿದ ವೇಳೆ ಈ ಕೆರೆಗಳಲ್ಲಿ ಶೇ 10ರಷ್ಟು ನೀರು ತುಂಬಿತ್ತು. ಈಗ ಕೆರೆಗಳಲ್ಲಿ ನೀರು ಖಾಲಿಯಾಗಿದೆ.* ಬೆಳೆದು ನಿಂತಿರುವ ಭತ್ತ ರಕ್ಷಣೆ ಹೊಣೆ ಸರ್ಕಾರ ಹೊರಬೇಕು. ಇಲ್ಲದಿದ್ದರೆ, ಮಾಡಿರುವ ಖರ್ಚಿನ ಸಮೇತ ಹೆಚ್ಚಿನ ಪರಿಹಾರ ನೀಡಬೇಕು.

–ಹನಿಂಬಾಡಿ ನಾಗರಾಜು

ರೈತ ಮುಖಂಡ, ಮಂಡ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry