ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಾಸೆ ಬದಿಗಿಟ್ಟು ನಡೆದೆಡೆ...

Last Updated 9 ಸೆಪ್ಟೆಂಬರ್ 2016, 13:39 IST
ಅಕ್ಷರ ಗಾತ್ರ

ದಿವ್ಯಾ  ಖಂದಾಲ್
ಮುಂಬೈ ಮೂಲದ ಯುವತಿ ದಿವ್ಯಾ ಖಂದಾಲ್, ಗ್ರಾಮೀಣ ಜನರಲ್ಲಿರುವ ಕರಕುಶಲ ಪ್ರತಿಭೆಯನ್ನು ಬೆಳಕಿಗೆ ತಂದು ಅವರಿಗೆ ಆರ್ಥಿಕವಾಗಿ ಸಹಾಯ ಮಾಡುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜಸ್ತಾನದ ರಣತಂಬೂರ್ ಅರಣ್ಯ ಪ್ರದೇಶ ವ್ಯಾಪ್ತಿಯ ಕುಗ್ರಾಮಗಳಲ್ಲಿ ‘ಧೋಂಕ್’ ಎಂಬ ಕರಕುಶಲ ವಸ್ತುಗಳ ತಯಾರಿಕಾ ಸಂಸ್ಥೆಯನ್ನು ಸ್ಥಾಪನೆ ಮಾಡಿ ಆ ಭಾಗದ ಕಲಾವಿದರಿಗೆ ಆಸರೆಯಾಗಿದ್ದಾರೆ.

ದಿವ್ಯಾ ಮುಂಬೈನಿಂದ ರಾಜಸ್ತಾನಕ್ಕೆ ವಲಸೆ ಬಂದಿರುವುದರ ಹಿಂದೆ ಒಂದು ಪ್ರೇಮ ಕಥೆ ಇದೆ. ಹುಲಿಗಳ ತವರು ಎಂದೇ ಖ್ಯಾತಿಯಾಗಿರುವ ರಣತಂಬೂರ್‌ನಲ್ಲಿ ಹುಲಿಗಳನ್ನು ವೀಕ್ಷಿಸುವ ಸಲುವಾಗಿ ಒಮ್ಮೆ ಪ್ರವಾಸ ಕೈಗೊಂಡಿದ್ದರು. ದಿವ್ಯಾಗೆ ಈ ಅಭಯಾರಣ್ಯದಲ್ಲಿ ಜೀವವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ಧರ್ಮೇಂದ್ರ ಖಂದಾಲ್ ಅವರ ಪರಿಚಯವಾಯಿತು.
ಸಫಾರಿಯಲ್ಲಿ ಹುಲಿಗಳನ್ನು ತೋರಿಸುವಂತೆ ದಿವ್ಯಾ ಧರ್ಮೇಂದ್ರ ಅವರಲ್ಲಿ ಕೇಳಿಕೊಂಡರು. ಹುಲಿಗಳನ್ನು ತೋರಿಸುವುದಾಗಿ ದಿವ್ಯಾಳನ್ನು ಅಭಯಾರಣ್ಯಕ್ಕೆ ಕರೆದುಕೊಂಡು ಹೋಗಿದ್ದ ಧರ್ಮೇಂದ್ರ, ಅವರ ಮನಸ್ಸನ್ನೇ ಕದ್ದಿದ್ದರು! ನಂತರದ ದಿನಗಳಲ್ಲಿ ಧರ್ಮೇಂದ್ರ ಜೊತೆ ಮದುವೆಯಾಗಿ ರಣತಂಬೂರಿನಲ್ಲಿ ನೆಲೆಸಿದರು.

ಇದೇ ವೇಳೆ, ಅರಣ್ಯ ಪ್ರದೇಶದ ಸುತ್ತಮುತ್ತಲಿನ ಕುಗ್ರಾಮಗಳ ಜನರು ತಯಾರಿಸುತ್ತಿದ್ದ ಕರಕುಶಲ ವಸ್ತುಗಳನ್ನು ಕಂಡು ಬೆರಗಾಗಿದ್ದರು ದಿವ್ಯಾ. ಅವರು ತಯಾರಿಸುತ್ತಿದ್ದ ಆಟಿಕೆಗಳು, ಎಂಬ್ರಾಯಿಡರಿ, ಕಸೂತಿ ಸೇರಿದಂತೆ ಇತರೆ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಮುಂದಾದರು.

ಈ ಹಂತದಲ್ಲಿ ಧೋಂಕ್ ಎಂಬ ಆನ್‌ಲೈನ್ ಪೋರ್ಟಲ್ ಆರಂಭಿಸಿ ಆ ಮೂಲಕ ಸ್ಥಳೀಯರ ಕಲಾ ಪ್ರತಿಭೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು. ಜತೆಗೆ ಅವರ ಶ್ರಮಕ್ಕೆ ತಕ್ಕ ಸಂಭಾವನೆ ನೀಡುವ ವ್ಯವಸ್ಥೆ ಮಾಡಿದರು. ಇಂದು ರಣತಂಬೂರ್ ಅಭಯಾರಣ್ಯ ವ್ಯಾಪ್ತಿಯ ವಿವಿಧ ಗ್ರಾಮಗಳ 500ಕ್ಕೂ ಹೆಚ್ಚು ಕುಟುಂಬಗಳಿಗೆ ಧೋಂಕ್ ಸಂಸ್ಥೆ ಮೂಲಕ ದಿವ್ಯಾ ಆಸರೆಯಾಗಿದ್ದಾರೆ.  www.dkhandals.com

***
ಪರ್ನೋತಾ ದತ್ತ  ಬಾಲ್

ಮುಂಬೈ ಮೂಲದ ಯುವತಿ ಪರ್ನೋತಾ ದತ್ತ ಬಾಲ್ ದೇಶದಾದ್ಯಂತ ಸುಮಾರು 18 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಆಯ್ದ  ಒಂಬತ್ತು ಮೆಟ್ರೊ ನಗರಗಳ ಪ್ರಮುಖ ಆಸ್ಪತ್ರೆಗಳಲ್ಲಿ ಉಚಿತವಾಗಿ ಪೌಷ್ಟಿಕ ಆಹಾರ ನೀಡುವ ಸೇವೆ ಇವರಿಂದ ನಡೆಯುತ್ತಿದೆ.

36ರ ಹರೆಯದ ಪರ್ನೋತಾ, ಎಂಬಿಎ ಪದವೀಧರೆ. ಖಾಸಗಿ ಕಂಪೆನಿಯೊಂದರಲ್ಲಿ ಫಂಡ್‌ರೈಸಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತ ಕೈತುಂಬಾ ಸಂಬಳ ಪಡೆಯುತ್ತಿದ್ದರು.ಒಮ್ಮೆ ಪರ್ನೋತಾ ತನ್ನ ನಾಲ್ಕು ವರ್ಷದ ಮಗಳೊಂದಿಗೆ ಮುಂಬೈನಲ್ಲಿರುವ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ತನ್ನ ಮಗಳಷ್ಟೇ ವಯಸ್ಸಿನ ಬಾಲಕಿ ಕ್ಯಾನ್ಸರ್‌ನಿಂದ ನರಳುತ್ತಿರುವುದನ್ನು ಕಂಡರು. ಹಾಗೇ ಆ ಬಾಲಕಿ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಅವರ ಗಮನಕ್ಕೆ ಬಂತು. ಆ ಕ್ಷಣದಲ್ಲಿ ತನ್ನ ಕೈಯಲ್ಲಿದ್ದ ಹಣವನ್ನು ಆ ಬಾಲಕಿಗೆ  ಕೊಟ್ಟು ಭಾರವಾದ ಮನಸ್ಸಿನಿಂದ ಮನೆಗೆ ಹೆಜ್ಜೆ ಹಾಕಿದ್ದರು.

ಇಂತಹ ಮಕ್ಕಳಿಗೆ ತನ್ನ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಪರ್ನೋತಾ ನಿಶ್ಚಯಿಸಿದರು. ಅದಕ್ಕಾಗಿ ಟ್ರಸ್ಟ್ ತೆರೆಯುವ ಆಲೋಚನೆ ಮಾಡಿದರು. ಸಮಾನ ಮನಸ್ಕರ ಜತೆಯಲ್ಲಿ ಚರ್ಚಿಸಿ ‘ಕಡಲ್’ ಎಂಬ ಟ್ರಸ್ಟ್ ಆರಂಭಿಸಿದರು. ಫಂಡ್‌ರೈಸಿಂಗ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇದ್ದುದರಿಂದ ಸಾಕಷ್ಟು ದೇಣಿಗೆಯನ್ನು ಸಂಗ್ರಹಿಸಿದರು. ಸರ್ಕಾರದಿಂದಲೂ ಧನ ಸಹಾಯ ಪಡೆದುಕೊಂಡು ಉಚಿತವಾಗಿ ಪೌಷ್ಟಿಕ ಆಹಾರ ವಿತರಣೆ ಮಾಡುವುದಕ್ಕೆ 2014ರಲ್ಲಿ ಚಾಲನೆ ನೀಡಿದರು.

ಕಡಲ್ ಟ್ರಸ್ಟ್‌ನ ಸದಸ್ಯರು ಕ್ಯಾನ್ಸರ್ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಹೋಗಿ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಪ್ರತಿ ದಿನ ಪೌಷ್ಟಿಕ ಆಹಾರವನ್ನು ನೀಡುತ್ತಾರೆ. ಇದರಲ್ಲಿ ಬೇಯಿಸಿದ ಆಹಾರ ಸೇರಿದಂತೆ ಹಣ್ಣು, ಶಕ್ತಿವರ್ಧಕ ಪೇಯವನ್ನು ನೀಡಲಾಗುವುದು. ನುರಿತ ಆಹಾರ ತಜ್ಞರ ಮಾರ್ಗದರ್ಶನದಲ್ಲಿ ಆಹಾರವನ್ನು ತಯಾರಿಸಲಾಗುತ್ತದೆ ಎನ್ನುತ್ತಾರೆ ಪರ್ನೋತಾ. ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಈ ಸೇವೆಯನ್ನು ಒದಗಿಸಬೇಕು ಎಂಬುದು ಇವರ ಕನಸು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲೂ ಈ ಸೇವೆ ಲಭ್ಯವಿದೆ.

***
ಜೋಯ್ ಪನ್ಸಾರಿ

ಸ್ವಚ್ಛ ಭಾರತ ಅಭಿಯಾನದ ಮೂಲಕವೂ ಆದಾಯ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟ ಪಶ್ಚಿಮ ಬಂಗಾಳದ ಯುವಕ ಜೋಯ್ ಪನ್ಸಾರಿ ಅವರ ಕಥೆ ಇದು. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿ ಕೋಲ್ಕತ್ತಾಗೆ ಮರಳಿದ ಪನ್ಸಾರಿ, ಏನಾದರೂ ಮಾಡಬೇಕು, ಏನಾದರೂ ಸಾಧಿಸಬೇಕು ಎಂಬ ಹಪಹಪಿಯಲ್ಲೇ ಕಾಲ ಕಳೆಯುತ್ತಿದ್ದರು.

2014ರ ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ಕೊಟ್ಟಾಗ ಪನ್ಸಾರಿಗೆ ಹೊಳೆದದ್ದು ‘ಆಡ್‌ಬಿನ್’ ಎಂಬ ಸ್ಟಾರ್ಟ್‌ಅಪ್ ಯೋಜನೆ. ಗೆಳೆಯ ಅಂಕಿತ್ ಜತೆ ಸೇರಿ ಕೇವಲ ಎರಡು ಲಕ್ಷ ರೂಪಾಯಿ ಬಂಡವಾಳದಲ್ಲಿ ಕಂಪೆನಿ ಆರಂಭಿಸಿದರು. ಇಂದು ಮಾಸಿಕ ಒಂದು ಲಕ್ಷ ರೂಪಾಯಿಗೂ ಹೆಚ್ಚು ಆದಾಯವನ್ನು ಪಡೆಯುತ್ತಿದ್ದಾರೆ.

ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆ ಪಡೆದ ಈ ಯುವಕರು ಆಡ್‌ಬಿನ್‌ ಸ್ಟಾರ್ಟ್‌ಅಪ್‌ಗೆ ಚಾಲನೆ ನೀಡಿದರು. ಕೋಲ್ಕತ್ತಾ ನಗರದ ಪ್ರಮುಖ ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳಲ್ಲಿ ಪರಿಸರಸ್ನೇಹಿ ಮತ್ತು ಸುಲಭ ನಿರ್ವಹಣೆಯ ಡಸ್ಟ್‌ಬಿನ್‌ಗಳನ್ನು ಇಟ್ಟು ಅವುಗಳಿಗೆ ಜಾಹೀರಾತು ಫಲಕಗಳನ್ನು ಅಳವಡಿಸಿ ವರಮಾನ ಗಳಿಸುವುದು ಈ ಸ್ಟಾರ್ಟ್‌ಅಪ್‌ನ ಪ್ರಮುಖ ಉದ್ದೇಶ.

ಕೋಲ್ಕತ್ತಾದ 2500ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು, ರಸ್ತೆಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಮಾಲ್‌ಗಳು ಸೇರಿದಂತೆ ಒಟ್ಟು 25 ಸಾವಿರಕ್ಕೂ ಹೆಚ್ಚು ಡಸ್ಟ್‌ಬಿನ್‌ಗಳನ್ನು ಇಡಲಾಗಿದೆ. ವಾರಕ್ಕೊಮ್ಮೆ ಈ ಡಸ್ಟ್‌ಬಿನ್‌ಗಳನ್ನು ತಮ್ಮ ಕಂಪೆನಿಯ ಕಾರ್ಮಿಕರು ಸ್ವಚ್ಛಗೊಳಿಸುತ್ತಾರೆ ಎಂದು ಪನ್ಸಾರಿ ಹೇಳುತ್ತಾರೆ.

ಬಹುರಾಷ್ಟ್ರೀಯ ಕಂಪೆನಿಗಳು, ಐಟಿ ಕಂಪೆನಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಜಾಹೀರಾತು ನೀಡುತ್ತಿವೆ. ಕೆಲವು ಡಸ್ಟ್‌ಬಿನ್‌ಗಳಿಗೆ ಎಲ್‌ಇಡಿ ಫಲಕದ ಜಾಹೀರಾತನ್ನು ಹಾಕಿರುವುದಾಗಿ ಅಂಕಿತ್ ಹೇಳುತ್ತಾರೆ. ಈ ಯುವಕರ ಸಾಧನೆಯ ನಡೆ ಸ್ಟಾರ್ಟ್‌ಅಪ್ ಆರಂಭಿಸುವ ಯುವಕರಿಗೆ ಸ್ಫೂರ್ತಿ ನೀಡುವಂತಹದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT