ಭೂಮಿಗೆ ಮರಳಿದ ಗಗನಯಾತ್ರಿಗಳು

7

ಭೂಮಿಗೆ ಮರಳಿದ ಗಗನಯಾತ್ರಿಗಳು

Published:
Updated:
ಭೂಮಿಗೆ ಮರಳಿದ ಗಗನಯಾತ್ರಿಗಳು

ವಾಷಿಂಗ್ಟನ್‌ (ಎಎಫ್‌ಪಿ): ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಆರು ತಿಂಗಳು ಕಳೆದ ಗಗನಯಾತ್ರಿಗಳಾದ ಅಮೆರಿಕದ ಜೆಫ್‌ ವಿಲಿಯಮ್ಸ್‌ (58), ರಷ್ಯಾದ ಅಲೆಕ್ಸೆ ಒವ್‌ಚಿನಿನ್‌ ಮತ್ತು ಒಲೆಗ್‌ ಸ್ಕ್ರಿಪೋಛ್ಕಾ ಅವರು ಬುಧವಾರ ಸುರಕ್ಷಿತವಾಗಿ ಭೂಮಿಗೆ ಮರಳಿದರು.ವಿಲಿಯಮ್‌್ಸಗೆ ಇದು ನಾಲ್ಕನೇ ಗಗನಯಾತ್ರೆ. ಈ ಮೂಲಕ ಅವರು ಒಟ್ಟು 534 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಅಮೆರಿಕದ ಮಟ್ಟಿಗೆ ದಾಖಲೆ ನಿರ್ಮಿಸಿದ್ದಾರೆ. ಅಮೆರಿಕದ ಸ್ಕಾಟ್‌ ಕೆಲ್ಲಿ 520 ದಿನಗಳವರೆಗೆ ಬಾಹ್ಯಾಕಾಶದಲ್ಲಿ ಕಳೆದದ್ದು ಆ ದೇಶದ ಪಾಲಿಗೆ ಇಲ್ಲಿಯವರೆಗಿನ ಸಾಧನೆಯಾಗಿತ್ತು. ಮೂವರು ಗಗನಯಾತ್ರಿಗಳನ್ನು ಹೊತ್ತು ರಷ್ಯಾ ನಿರ್ಮಿತ ‘ಸೊಯುಜ್‌  ಕೋಶ’, ಕಜಕಸ್ತಾನದ ಪೂರ್ವ ನಿರ್ಧರಿತ ಸ್ಥಳದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 7.13 ಗಂಟೆಗೆ ಇಳಿಯಿತು.ಸ್ವಾಗತಿಸಿದ ನಾಸಾ: ‘ಭೂಮಿಗಿಳಿದ ಜೆಫ್‌ ಅವರಿಗೆ ಸ್ವಾಗತ. ಅವರು ಈ ಸಲ ಐಎಸ್‌ಎಸ್‌ನಲ್ಲಿ 172 ದಿನಗಳನ್ನು ಕಳೆದಿದ್ದಾರೆ’ ಎಂದು ನಾಸಾ ಟ್ವೀಟ್‌ ಮಾಡಿದೆ. ಈ ಮೂರೂ ಗಗನಯಾನಿಗಳು ಐಎಸ್‌ಎಸ್‌ನಲ್ಲಿ ಅನೇಕ ವೈಜ್ಞಾನಿಕ ಪ್ರಯೋಗಗಳಿಗೆ ಕೈ ಜೋಡಿಸಿದ್ದರು.ವಿಲಿಯಮ್ಸ್‌ ಐದು ಬಾರಿ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದರು. ನಾಸಾದ ಮತ್ತೊಬ್ಬ ಗಗನಯಾನಿ ಕಾಟೆ ರುಬಿನ್ಸ್‌ ಅವರೊಂದಿಗೂ ಒಮ್ಮೆ ಅಂತರಿಕ್ಷದಲ್ಲಿ ಹೆಜ್ಜೆ ಹಾಕಿದ್ದರು.‘ಅಮೆರಿಕವು ಭವಿಷ್ಯದಲ್ಲಿ ಕಳುಹಿಸಲಿರುವ ವಾಣಿಜ್ಯ ಉದ್ದೇಶದ ಬಾಹ್ಯಾಕಾಶ ನೌಕೆಗೆ ನಿಲ್ದಾಣವನ್ನು ಸಿದ್ಧಪಡಿಸುವ ಯೋಜನೆಯಲ್ಲಿ ವಿಲಿಯಮ್ಸ್‌ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ನಾಸಾ ತಿಳಿಸಿದೆ.ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಅಮೆರಿಕನ್ನರ ಪೈಕಿ ವಯಸ್ಸಿನಲ್ಲಿ ವಿಲಿಯಮ್ಸ್‌ ಹಿರಿಯರು. ಅವರು 2000ನೇ ಇಸವಿಯಲ್ಲಿ ಮೊದಲಿಗೆ ‘ಷಟಲ್‌ ಅಟ್ಲಾಂಟಿಸ್‌ ನೌಕೆ’ ಮೂಲಕ ಗಗನಯಾತ್ರೆ ಕೈಗೊಂಡಿದ್ದರು.ಪುನಃ 2006ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು. ಆಗ ಅದು ಅತ್ಯಂತ ಚಿಕ್ಕ ನಿಲ್ದಾಣವಾಗಿತ್ತು. ಮತ್ತೆ 2009ರಲ್ಲಿ ಅಲ್ಲಿಗೆ ಹೋಗಿದ್ದರು. ಪ್ರಸ್ತುತ ಐಎಸ್‌ಎಸ್‌, ಫುಟ್‌ಬಾಲ್‌ ಮೈದಾನದಷ್ಟು ವಿಶಾಲವಾಗಿದ್ದು, ಅದರಲ್ಲಿ ಇನ್ನೂ ಆರು ಗಗನಯಾತ್ರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಾಹ್ಯಾಕಾಶ ವಾಸ

ರಷ್ಯಾದ ಗೆನಾಡಿ ಪಡಲ್ಕಾ ಅವರು ಅತಿ ಹೆಚ್ಚು ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿದ್ದ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರು ಒಟ್ಟಾರೆ 879 ದಿನ ಅಲ್ಲಿ ಕಳೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry